ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಖಂಡಿತವೆನ್ನದೆ, ಸಹಜವೆನ್ನದೆ, ನಿಜವೆನ್ನದೆ ಪರಿಪೂರ್ಣವೆನ್ನದೆ, ಏನೂ ಎನ್ನದೆ ಕೂಡಲಚೆನ್ನಸಂಗಯ್ಯನನೇನೆನ್ನದಿಪ್ಪುದು ನಿಜೈಕ್ಯವು.
--------------
ಚನ್ನಬಸವಣ್ಣ
ಖ್ಯಾತಿಲಾಭಕ್ಕೆ ಮಾಡುವಾತನೆಂಬುದನರಿದು, ಭೂತಹಿತ ದಯಾ ದಾಕ್ಷಿಣ್ಯಕ್ಕೆ ಇಕ್ಕುವಾತನೆಂಬುದನರಿದು, ಮಹಿಮಾಸ್ಪದದಿಂದ ವೀರವೈರಾಗ್ಯಗಳಿಂದ ಇಕ್ಕುವಾತನೆಂಬುದನರಿದು, ಮಾಡಿಕೊಂಡ ಕೃತ್ಯಕ್ಕೆ ಬಿಟ್ಟಡೆ ನುಡಿದಿಹರೆಂದು ಗುತ್ತಿಗೆಯಲ್ಲಿ ಇಕ್ಕುವಾತನೆಂಬುದನರಿದು, ಅರ್ತಿ ತಪ್ಪದೆ, ಬಾಹ್ಯದ ಭಕ್ತಿ ತಪ್ಪದೆ, ಅರ್ಚನೆ ಪೂಜನೆಗಳಲ್ಲಿ ನಿತ್ಯನೇಮ ತಪ್ಪದೆ, ಸುಚಿತ್ತ ಧರ್ಮದಲ್ಲಿ ಮಾಡುವಾತನನರಿದು, ಇಂತೀ ವರ್ಮಧರ್ಮಂಗಳಲ್ಲಿ ಅರಿದು, ಸುಮ್ಮಾನದ ಸುಖತರದಲ್ಲಿ ಮಾಡುವ ಧರ್ಮಿಗನನರಿದು, ಆರಾರ ಭಾವದ ಕಲೆಯನರಿದು, ಗುಣವೆಂದು ಸಂಪಾದಿಸದೆ, ಅವಗುಣವೆಂದು ಭಾವದಲ್ಲಿ ಕಲೆಗೆ ನೋವ ತಾರದೆ, ಇಂತೀ ಸರ್ವಗುಣಸಂಪನ್ನನಾಗಿ ಪೂಜಿಸಿಕೊಂಬ ಗುರುವಿಂಗೆ, ಚರಿಸುವ ಜಂಗಮಕ್ಕೆ, ಉಪಾಧಿ ನಷ್ಟವಾದ ವಿರಕ್ತಂಗೆ, ಕೂಗಿಂದ ನಮೋ ನಮೋ ಎಂದು ಬದುಕಿದೆ, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಖ್ಯಾತಿಯ ಲಾಭಕ್ಕೆ ವ್ರತವ ಮಾಡಿಕೊಂಡವನ ನೇಮವ ನೋಡಾ ! ಊರಿಗೆ ಬಲುಗಯ್ಯ ಬಂದುಣ್ಣಬೇಕೆಂದು ದಾರಿದಾರಿಯ ಕಾಯ್ದು ಮತ್ತಾರನು ಏನೆಂದರಿಯದೆ. ಮತ್ತಾರು ಆರೈಕೆಗೊಂಡಡೆ ದೇವರೆಂದು, ಬಂದವರ ದಾರಿಗರೆಂದು ಕಾಣುತ್ತ ಇಂತೀ ಗಾರಾದ ಮನಕ್ಕೆ ಇನ್ನಾರು ಹೇಳುವರಯ್ಯಾ ! ಮುಂದೆ ಬಸುರಾಗಿ ಹೆರುವಾಗ ಊರೆಲ್ಲರು ಅವಳಂಗವ ಕಂಡಂತೆ ಜಗಭಂಡ ಶೀಲವಂತನಾಗಿ, ತನ್ನ ಕೊಂಡಾಡುವ ಸತ್ತ ಮತ್ತೆ ಮೂರು ಹೆಂಡಗುಡಿ ಹೇಯಶೀಲ ಕಂಡವರಿಗೆ ನಗೆಯಾಯಿತ್ತು ಇದರಂದಕಂಜಿ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಕಂಡೂ ಕಾಣದಂತಿದ್ದ.
--------------
ಅಕ್ಕಮ್ಮ
ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ನಾಸಿಕವಾಯಿತ್ತು. ತಾನಲ್ಲದೆ ಅನ್ಯ ವಾಸನೆ ಇಲ್ಲವಾಗಿ, ಅಲ್ಲಿಯೆ ಮಹತ್ತಪ್ಪ ಪೃಥ್ವಿಯಡಗಿತು. ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ಜಿಹ್ವೆಯಾಯಿತ್ತು. ತಾನಲ್ಲದೆ ಅನ್ಯ ರುಚಿ ಇಲ್ಲವಾಗಿ, ಅಲ್ಲಿಯೆ ಮಹತ್ತಪ್ಪ ಅಪ್ಪು ಅಡಗಿತ್ತು. ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ನೇತ್ರವಾಯಿತ್ತು. ತಾನಲ್ಲದೆ ಅನ್ಯ ರೂಪಿಲ್ಲವಾಗಿ, ಅಲ್ಲಿಯೆ ಮಹತ್ತಪ್ಪ ಅಗ್ನಿ ಅಡಗಿತ್ತು. ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ತ್ವಕ್ಕಾಯಿತ್ತು. ತಾನಲ್ಲದೆ ಅನ್ಯ ಸೋಂಕಿಲ್ಲವಾಗಿ, ಅಲ್ಲಿಯೆ ಮಹತ್ತಪ್ಪ ವಾಯು ಅಡಗಿತ್ತು. ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ಶ್ರೋತ್ರವಾಯಿತ್ತು. ತಾನಲ್ಲದೆ ಅನ್ಯ ಶಬ್ದವಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಆಕಾಶವಡಗಿತ್ತು. ಇಂತು ಪಂಚಭೂತಂಗಳಡಗಿದಡೆ, ಪಂಚಬ್ರಹ್ಮಮಯವಾಯಿತ್ತು. ಅದರೊಳಗೆ ಜಗತ್ತಡಗಿದ ಭೇದವದೆ. ಪಂಚವರ್ಣಾತೀತವಾಗಿ ಮಹತ್ತನೊಳಕೊಂಡ ಶರಣನ ಭೇದವನು ಏನೆಂದುಪಮಿಸುವೆನಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಖದ್ಯೋತ ಕೀಟಕವ ಮುಚ್ಚಿರಿಸಿದಲ್ಲಿ ಮತ್ತೆ ಉಂಟೆ ಆ ಕಳೆ ದಿನಪನ ಬೆಳಗಿನಲ್ಲಿ ? ಮತ್ತರಪ್ಪ ದುರ್ವಾಚಕರ ಮಾತಿನಮಾಲೆ ಸ್ವಯ ಸ್ವಾನುಭಾವಿಕರಲ್ಲಿ ಉಂಟೆ ? ಆತ್ಮವಾದಿಯ ಮಾತು, ವೈದಿಕ ಕರ್ಮದ ಕ್ರೀ ಸಾಧಕನ ಶರೀರಧರ್ಮ ಈ ಗುಣ ಸದ್ಭಾವಿಯ ಸ್ವಯವ ಮುಟ್ಟದಾಗಿ. ಇಂತೀ ಅಭೇದ್ಯವಸ್ತುವನರಿಯಬೇಕು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಖ್ಯಾತಿಲಾಭಕ್ಕೆ ಮಾಡುವಾತ ಭಕ್ತನಲ್ಲ. ಡಂಬಕಕ್ಕೆ ಡೊಂಬರಂತೆ ತಿರುಗುವವ ಜಂಗಮವಲ್ಲ. ತನು ತಲೆ ಬತ್ತಲೆಯಾಗಿ, ಮನ ತ್ರಿವಿಧ ಆಸೆ ಉಳ್ಳನ್ನಕ್ಕ ವಿರಕ್ತನಲ್ಲ. ಇಂತೀ ಗುಣವ ಸಂಪಾದಿಸುವನ್ನಕ್ಕ, ಎನಗೆ ಮುಕ್ತಿಯೆಂಬ ಬಟ್ಟೆಯಿಲ್ಲ. ನೀ ಸತ್ತೆ, ನಾ ಕೆಟ್ಟೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಖರಕರ ಕೋಟಿ ಪ್ರಭೆ ಪ್ರಭೆಯಂ ಮೀರಿಪ್ಪ ತೆರಹುಗೆಟ್ಟ ಸೀಮೆಯಲ್ಲಿ ಬಿಂದು ಭೇದವಾದ ಅಯ್ಯದಂದವನಾರು ಬಲ್ಲರು? ಆನಂದ ಸಚ್ಚಿದಾನಂದ ಸ್ಥಾನದಲ್ಲಿ ಶೂನ್ಯ ಕಾನನದೊಳಪ್ಪಿರವ್ವಾ ಅರಿವ ನಿನ್ನುವನು ಎಲೆ ಕುರುಹಿಲ್ಲದ ಸೀಮನೆ, ಕಪಿಲಸಿದ್ಧಮಲ್ಲಿಕಾರ್ಜುನನ ನೆನಹಿನ ಬ್ರಹ್ಮಾಂಡವಡಗುವವೆ ಅಯ್ಯಾ.
--------------
ಸಿದ್ಧರಾಮೇಶ್ವರ
ಖಂಡಿತ ಖಾಂಡದಲ್ಲಿ ಮೂರು ಮುಖದ ಹಾರುವ ಮಂಡಲ ಹುಟ್ಟಿತ್ತು. ಅದು ಗಾರುಡಕ್ಕಸಾಧ್ಯ ಮಂತ್ರದ ಮನವ ಕೇಳುವುದಕ್ಕೆ ಕರ್ಣದ್ವಾರವಿಲ್ಲ. ಅದಕ್ಕೆ ಮಂತ್ರಮನೋನಾದಮಂಡಲವೆಂದಡೆ, ಇಳಿಯಿತ್ತು, ವಿಷ ಹಾರಿತ್ತು. ಮಂಡಲವ ಮಂತ್ರಿಸುವಣ್ಣ ಹಿಂಡಿ ಬಿಂಡಿ ಬಿರಿದ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗದ ಸಂಗದಲ್ಲಿ.
--------------
ಸಗರದ ಬೊಮ್ಮಣ್ಣ
ಖಂಡಿತ ವ್ರತ ಅಖಂಡಿತ ವ್ರತ, ಸಂದ ವ್ರತ, ಸಲ್ಲದ ವ್ರತವೆಂದು ನೇಮವ ಮಾಡಿಕೊಂಡು ಊರೂರ ತಪ್ಪದೆ ಸಾರಿ ದೂರಿಕೊಂಡು ತಿರುಗಲೇತಕ್ಕೆ? ತಾ ಮಾಡಿಕೊಂಡ ವ್ರತ ನೇಮ ಊರೆಲ್ಲಕ್ಕೊ ತನಗೊ ಎಂಬುದ ತಾನರಿಯದೆ ನಿಕ್ಷೇಪವ ಕಂಡೆನೆಂದು ಸಾರಿದರುಂಟೆ? ಆ ಮನಜ್ಞಾನವ್ರತ ಕಳ್ಳನ ಚೇಳೂರಿದಂತೆ ಅಲ್ಲಿಯೆ ಅಡಗಬೇಕು. ಹೀಗಲ್ಲದೆ ಕಲಕೇತರಂತೆ ಊರಮಗನೆಂದು ಬಾಗಿಲಲ್ಲಿ ಇರಿದುಕೊಂಬನಂತೆ ಅವ ಮಾಡಿಕೊಂಡ ವ್ರತ ಅದಾರಿಗೆ ಯೋಗ್ಯ? ಅದು ಸಾಗದ ನೇಮ, ಶೀಲವಾಗದ ಅಕೃತ್ಯ. ಇಂತೀ ವ್ರತದ ಭೇದವನರಿಯಬೇಕು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ.
--------------
ಅಕ್ಕಮ್ಮ
ಖಂಡಿತಜ್ಞಾನವಳಿದು, ಅಖಂಡಿತಜ್ಞಾನಸ್ವರೂಪವಾದುದೇ ತೃಪ್ತಿ. ಅಂಥ ತೃಪ್ತಿಯ ಅಮೃತಸೇವೆನೆಯಿಂದ ತೃಪ್ತನಾದ ಪ್ರಸಾದಿ. ಶರಣಂಗೆ ಅಂತರಂಗ ಬಹಿರಂಗವೆಂಬುಭಯಾಂಗವಿಲ್ಲದ ಮಹಾನಂದರೂಪಪ್ರಸಾದಿ ದಶದಿಗ್ಭರಿತನಾಗಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ, ಬೆಳಗುತ್ತಿಹನು.
--------------
ಸ್ವತಂತ್ರ ಸಿದ್ಧಲಿಂಗ
ಖಂಡಿತರಿಗೆ ಖಂಡಿತನಾಗಿ, ಅಖಂಡಿತರಿಗೆ ಪರಿಪೂರ್ಣನಾಗಿ, ಕರಿ ಮುಕುರದೊಳಗಡಗಿ ತೋರುವಂತೆ, ಚಿತ್ತಶುದ್ಧವುಳ್ಳವರಲ್ಲಿ ಅಚ್ಚೊತ್ತಿದಂತೆ ಅಡಗಿದೆಯಲ್ಲಾ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಖಂಡವ ಮೆದ್ದು ಅರಗಿಸಿ ಹೆಂಡವ ಕುಡಿದು ಉನ್ಮತ್ತವಿಲ್ಲದೆ ಮಿಕ್ಕಾದ ಕಿರುಹಕ್ಕಿಯ ಕೊಂದು ಕುಕ್ಕೆಯೊಳಗಿಟ್ಟು ಹೆಬ್ಬದ್ದ ಹಿಡಿದು ಕಬ್ಬದ್ದ ಬಾಣಸವ ಮಾಡಿ ಹುಲಿಯ ಹಲ್ಲ ಕಿತ್ತು, ಎರಳೆಯ ಕಾಲ ಮುರಿದು ಲಂಘಿಸುವ ಸಿಂಹದ ಅಂಗವ ಸೀಳಿ ಉನ್ಮತ್ತದಿಂದ ಬಂದಪ್ಪ ಗಜವ ಕಂಗಳು ನುಂಗಿ ಮೊಲ ನಾಯ ಕಚ್ಚಿ ನರಿ ಬಲೆಯ ನುಂಗಿ ಸರ್ಪನ ಗಾಳಿ ತಾಗಿ ಗರುಡ ಸತ್ತು ಇಂತಿವು ಹಗೆ ಕೆಳೆಯಾಗಿರಬಲ್ಲಡೆ ಭಕ್ತ. ಇಂತಹ ಭಕ್ತ ಕೆಳೆಯಾಗಿರಬಲ್ಲಡೆ ಮಾಹೇಶ್ವರ. ಇಂತಹ ಮಾಹೇಶ್ವರ ಕೆಳೆಯಾಗಿರಬಲ್ಲಡೆ ಪ್ರಸಾದಿ. ಇಂತಹ ಪ್ರಸಾದಿ ಕೆಳೆಯಾಗಿರಬಲ್ಲಡೆ ಪ್ರಾಣಲಿಂಗಿ. ಇಂತಹ ಪ್ರಾಣಲಿಂಗಿ ಕೆಳೆಯಾಗಿರಬಲ್ಲಡೆ ಶರಣ. ಇಂತಹ ಶರಣ ಕೆಳೆಯಾಗಿರಬಲ್ಲಡೆ ಐಕ್ಯ. ಇಂತಹ ಐಕ್ಯಾನುಭಾವ ಕೆಳೆಯಾಗಿರ್ದಲ್ಲಿ ಮಹದೊಳಗಾಯಿತ್ತು. ಆ ಮಹದೊಳಗು ಸಯವಾದಲ್ಲಿ ಸರ್ವಮಯವೆಂಬುದು ಇಹಪರ ನಾಸ್ತಿ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಕ್ಕೆ ಇದಿರೆಡೆಯಿಲ್ಲ.
--------------
ಪ್ರಸಾದಿ ಭೋಗಣ್ಣ
ಖ್ಯಾತಿಗೆ ಜೋತು, ಲಾಭಕ್ಕೆ ಲೋಭಿಸಿ, ಪೂಜೆಯ ಮಾಡದೆ ರಾಜದ್ವಾರದಲ್ಲಿ ಸುಳಿದು ಬಳಲುವ ಹಿರಿಯರೆಲ್ಲರೂ ಇತ್ತಿತ್ತಲಲ್ಲದೆ ಅತ್ತತ್ತಲೆಲ್ಲಿಯದೋ? ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ತಲ್ಲೀಯವಾದ ಶರಣರತ್ತತ್ತಲಲ್ಲದೆ ಇತ್ತಿತ್ತಲೆಂತಿಹರೋ.
--------------
ಆದಯ್ಯ
ಖಂಡಿತವಿಲ್ಲದ ಅಖಂಡಿತರೂಪ ನೀನು ಕಂಡಾ ಎಲೆ ಅಯ್ಯಾ. ಮಂಡಲತ್ರಯದ ಮಧ್ಯದಲ್ಲಿ ನಿಂದು ಖಂಡಿತನೆಂಬ ಹಾಂಗೆ ತೋರುತ್ತಿದ್ದೆಯಯ್ಯಾ. ನಿನ್ನ ಬೆಡಗ ನಾ ಬಲ್ಲೆ. ಖಂಡಪತ್ರದಲ್ಲಿ ತೋರುವ ಚಂಡಕಿರಣದಂತೆ ತೋರಿದೆಯಾಗಿ, ಎನ್ನ ಕಂಗಳ ಕೊನೆಯಲ್ಲಿ ನಿಂದು ನೋಡುವಾತ ನೀನೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ

-->