ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಮತ್ತಂ, ಪ್ರಥಮಮದಗ್ನಿಮಂಡಲದಷ್ಟದಳಂಗಳಲ್ಲಿ ಪೂರ್ವಾದಿಯೊಳ್ ಪರಿವಿಡಿದು ನ್ಯಾಸಮಾದ ವಾಮೇ ಜೇಷ್ಠೇ ರೌದ್ರೀ ಕಾಳೀ ಬಲೇ ಬಲೇಪ್ರಥನೀ ಸರ್ವಭೂತದಮನಿ ಮನೋನ್ಮನಿಯರೆಂಬಷ್ಟಶಕ್ತಿಯರಂ ಆರ್ಚಿಪುದೆಂದೆಯಯ್ಯಾ, ಪರಮಗುರು ಪರಾತ್ಪರ ಪರಮ ಶಿವಲಿಂಗೇಶ್ವರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ
ಮೆಲ್ಲಮೆಲ್ಲನೆ ಭಕ್ತ, ಮೆಲ್ಲಮೆಲ್ಲನೆ ಮಾಹೇಶ್ವರ, ಮೆಲ್ಲಮೆಲ್ಲನೆ ಪ್ರಸಾದಿ, ಮೆಲ್ಲಮೆಲ್ಲನೆ ಪ್ರಾಣಲಿಂಗಿ, ಮೆಲ್ಲಮೆಲ್ಲನೆ ಶರಣ, ಮೆಲ್ಲಮೆಲ್ಲನೆ ಐಕ್ಯರಾದೆವೆಂಬರು_ ನಿಮ್ಮ ಶರಣರು ತಾವೇನು ಮರುಜವಣಿಯ ಕೊಂಡರೆ ? ಅಮೃತಸೇವನೆಯ ಮಾಡಿದರೆ ? ಆವ ಸ್ಥಲದಲ್ಲಿ ನಿಂದರೂ ಆ ಸ್ಥಲದಲ್ಲಿ ಷಡುಸ್ಥಲ ಅಳವಡದಿದ್ದರೆ, ಆ ಭಕ್ತಿಯ ಬಾಯಲ್ಲಿ ಹುಡಿಯ ಹೊಯ್ದು ಹೋಗುವೆನೆಂದ ಕೂಡಲಚೆನ್ನಸಂಗಮದೇವರ
--------------
ಚನ್ನಬಸವಣ್ಣ
ಮುನ್ನ ಮಾಡಿದ ದೇಹ ನಿರ್ವಯಲಾದಡೆ, ಧರಿಸುವುದೇಕೋ ಕಲ್ಲು ಲಿಂಗವ, ಎಲೆ ಅಯ್ಯಾ? ಅಂಗಗುಣ ಲಿಂಗಕ್ಕಾಯಿತ್ತು ; ಲಿಂಗಗುಣ ಅಂಗಕ್ಕಾಯಿತ್ತು. ಇವೆಲ್ಲ ಭಾವಸಂಕಲ್ಪವಿಕಲ್ಪವು. ಅಂಗ ಲಿಂಗವೆಂಬುದು ಪಳಮಾತು. `ಲಿಂಗಮಧ್ಯೇ ಜಗತ್ಸರ್ವಂ' ಎಂಬುದು ಅಖಂಡಲಿಂಗ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಮತ್ತೆಯುಂ ಸಮಸ್ತ ಕಾರ್ಯ ವಿಸ್ತಾರಮಯ ತ್ರಿಪುಟಿರೂಪ ವಿಶ್ವವೆಲ್ಲಂ ಮಂತ್ರಾಧಾರದೊಳಿರ್ದ ಕಾರಣಮಿದೆಲ್ಲಂ ಮಂತ್ರಾತ್ಮಕಮಾಗಿಯೆ ತಿಳಿವುದಾ ಮಂತ್ರ ಸ್ವರೂಪಮಾದೊಡೆ ಪರಾರ್ಧಕೋಟಿ ಸಂಖ್ಯೆಯಿಂದ ಕೂಡಿ ನಾದಬ್ರಹ್ಮಸ್ವರೂಪ ಪರಮಶಿವ ವದನಾರವಿಂದದತ್ತಣಿಂ ನಿರ್ಗತಮಾದುದರಿಂವಿನಾಯಾವ ಕ್ರಿಯೆಯುಮಿಲ್ಲಂ. ಸರ್ವವುಂ ವಂತ್ರಮಯವೆಂದೆ ನಿರವಿಸಿದೆಯಯ್ಯಾ, ಶರಣಾಂತರಂಗ ಶಯ್ಯ ಪರಮ ಶಿವಲಿಂಗಯ್ಯಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮರನನೇರಿ ಹಣ್ಣನರಸಹೋದಡೆ ಮರ ಮುರಿದುಬಿದ್ದ ಮರುಳುಮಾನವನಂತೆ, ಕೆಸರಿನೊಳಗಣ ಹುಲ್ಲ ಮೇಯಹೋದ ಪಶುವಿನಂತೆ, ಕೊಂಬೆ ಕೊಂಬೆಗೆ ಹಾರುವ ಕೋಡಗನಂತೆ, ಉಂಡ ಮನೆಯ ದೂರುವ ಒಡೆಕಾರನಂತೆ, ಹಳ್ಳ ಹಳ್ಳ ತಿಬ್ಬಳಿ ತಿರುಗುವ ಬಳ್ಳುವಿನಂತೆ, ಮಾತಿನಲ್ಲಿ ಬ್ರಹ್ಮವ ನುಡಿವ ವೇಷಧಾರಿಗಳ ಲಿಂಗಾಂಗಿಗಳೆಂದಡೆ ಮಾರಿಗೆತಂದ ಹಂದಿಯ ನಾಯಿ ನರಿ ತಿಂಬಂತೆ ಕಾಣಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಮತ್ತೆಯುಮೀಯೈದು ಹೃದಯಮಂತ್ರಕ್ಕೆಯುಂ ತರದಿಂ ನಮೋಂತವಾಗುಚ್ಚರಿಸಲ್ ``ಓಂ ಹ್ರಾಂ ಕೇವಲ ಹೃದಯಾಯ ನಮಃ' ಎಂದೀತೆರದೈದಕ್ಕೆಯುಚ್ಚರಿಪುದೆಂದು ಬೋದ್ಥಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮನಕ್ಕೆ ನಾಚದ ವಚನ, ವಚನಕ್ಕೆ ನಾಚದ ಮನ ! ಕುಂದು-ಹೆಚ್ಚ ನುಡಿವೆ. ಒಂದು ಮಾತಿನ ಗೆಲ್ಲಕ್ಕೆ ಹಿಡಿದು ಹೋರುವೆ, ಕೂಡಲಸಂಗನ ಶರಣರ ಎನ್ನಾಳ್ದರೆಂಬೆ. 256
--------------
ಬಸವಣ್ಣ
ಮಹದಲ್ಲಿ ಮನಮುಳುಗಿಸಿದ ಮಹಾಂತನ ಬಗೆಗೊಳ್ಳದೆ ಬೊಗಳಲಾಗದು. ಅದೇನು ಕಾರಣವೆಂದೊಡೆ, ಲಿಂಗದೊಳಗಿರ್ದು ಬಲ್ಲಂತೆ ನಡೆವನು ಬಲ್ಲಂತೆ ನುಡಿವನು. ಬಲ್ಲಂತೆ ಸಕಲ ವ್ಯವಹಾರದೊಳಗಿರ್ದರು ಎಂತಿರ್ದಂತೆ ನಿಜವು ತಾನೆ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮನವೆಂಬ ಮಂಟಪದ ನೆಳಲಲ್ಲಿ ನೆನೆಹೆಂಬ ಜಾÕನಜ್ಯೋತಿಯ ಬೆಳಗನಿಟ್ಟು ಘನಪುರುಷ ಪವಡಿಸೈದಾನೆ, ಎಲೆ ಅವ್ವಾ. ಅದನೊಂದೆರಡೆನ್ನದೆ ಮೂರು ಬಾಗಿಲ ಮುಚ್ಚಿ ನಾಲ್ಕ ಮುಟ್ಟದೆ ಐದ ತಟ್ಟದೆ ಇರು ಕಂಡಾ, ಎಲೆ ಅವ್ವಾ. ಆರೇಳೆಂಟೆಂಬ ವಿಹಂಗಸಂಕುಳದ ಉಲುಹು ಪ್ರಬಲವಾದಡೆ, ಕಪಿಲಸಿದ್ಧಮಲ್ಲಿಕಾರ್ಜುನನು ನಿದ್ರೆಗೆಟ್ಟಲ್ಲಿರನು.
--------------
ಸಿದ್ಧರಾಮೇಶ್ವರ
ಮೃತವಳಿದು ಕಾಯವುಳ್ಳವಳಾದೆ. ಅಮೃತವಿಲ್ಲದ ರಸವನುಂಡು ಅಮೃತಕಾಯಳಾದೆ. ವಿಭ್ರಮದ ಸೂಚನೆಯ ಹಂಗಿಲ್ಲದೆ ಪ್ರಣವಕಾಯಿಯಾನಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಮನವಿದ್ದಲ್ಲಿಯೇ ನಿಮ್ಮ ನೆನೆಯಬೇಕು. ಬುದ್ಧಿಯಿದ್ದಲ್ಲಿಯೇ ನಿಮ್ಮ ವಿಚಾರಿಸಬೇಕಯ್ಯ. ಚಿತ್ತವಿದ್ದಲ್ಲಿಯೇ ನಿಮ್ಮ ನಿಶ್ಚಯಿಸಬೇಕು. ಅಹಂಕಾರವಿದ್ದಲ್ಲಿಯೇ ನಿಮ್ಮ ಮಮಕರಿಸಬೇಕಯ್ಯ. ಕಾಯವಿದ್ದಲ್ಲಿಯೇ ಸಾಯದ ಸಂಚವನರಿದು ಎಚ್ಚತ್ತಿರಬೇಕಯ್ಯ. ಜೀವಹಾರಿಯ ಕೆಡೆದು ಭೂಗತವಾಗಿ, ವಾಯುಪ್ರಾಣಿಯಾಗಿ ಹೋಹಾಗ, ಆಗ ಮುಕ್ತಿಯ ಬಯಸಿದರುಂಟೇ? ಚಿತ್ತ ಬುದ್ಧಿ ಅಹಂಕಾರ ಮನ ಜಾÕನ ಭಾವಂಗಳ ಮೀರಿದ, ನಿರ್ಭಾವ ಲಿಂಗೈಕ್ಯನಾದ ನಿರಾಶ್ರಯನಯ್ಯ ಮಾಹೇಶ್ವರನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಾರ್ಜಾಲನ ಹೃದಯದಲ್ಲಿ ಮೂಷಕ ಮನೆಯ ಮಾಡಿ ಇದ್ದಿತ್ತು. ಅದಕ್ಕೆ ಮಣಿಮಾಡಂಗಳಿಂದ ಆಶ್ರಯವೊಂದು ಬಾಗಿಲು ಬೇರೆ. ಅದಕ್ಕೆ ಹೋಗಿ ಆಡುವ ನಾಟಕಸಾಲೆ. ಪವನನೆಂಬ ಸೂಳೆ ಅಘಟದಿಂದ ಆಡುತ್ತಿರಲಾಗಿ, ಕಾಲುಜಾರಿ ನೆಲಕ್ಕೆ ಬಿದ್ದಳು. ಬಿದ್ದ ಘಾತಕ್ಕೆ ಯೋನಿ ಒಡೆಯಿತ್ತು, ಮೊಲೆ ಹರಿದು, ಕಿವಿ ಕಿತ್ತು, ಕಣ್ಣು ಹಿಂಚುಮುಂಚಾಯಿತ್ತು. ನೋಡುವ ಅಣ್ಣಗಳ ಬಯಕೆ ಹರಿಯಿತ್ತು. ಯೋನಿ ಕಿತ್ತಲ್ಲಿ ಕೂಟಕ್ಕೆ ಸುಖವಿಲ್ಲ, ನೋಟಕ್ಕೆ ಬೆಂಬಳಿಯಿಲ್ಲ. ಪವನನ ಅಘಟ ಹೋಯಿತ್ತು, ಕಾಲನ ಕಮಟಕ್ಕೆ. ನೀ ಅಲೇಖನಾದ ಶೂನ್ಯ, ಇವರಾಟದ ಬೆಂಬಳಿಯ ಬಿಡಿಸು, ಕಲ್ಲಿನೊಳಗಿಂದ ಇತ್ತ ಬಾರಯ್ಯಾ.
--------------
ವಚನಭಂಡಾರಿ ಶಾಂತರಸ
ಮಣ್ಣು ದೇಹ, ಹೊನ್ನು ಪ್ರಾಣ, ಹೆಣ್ಣು ಸಕಲಪ್ರಪಂಚು. ಈ ಮೂರರೊಳಗೆ ಒಂದ ಬಿಟ್ಟೊಂದ ಹಿಡಿದೆಹೆನೆಂದಡೆ, ಹಿಂಗಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮನದ ಕತ್ತಲೆಯೊಳಗಣ ಜ್ಯೋತಿಯ ಕೊನೆಯ[ಮೊನೆಯ]ಮೇಲೆ ಘನವನರಿದೆವೆಂಬರ ಅನುಮಾನಕ್ಕೆ ದೂರ. ತಮತಮಗೆ ಅರಿದೆವೆಂಬರು,_ಕನಸಿನಲಿಂಗ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಮನದಲ್ಲಿ ಉಕಾರಸ್ವರೂಪವಾದ ಇಷ್ಟಲಿಂಗವನರಿದರ್ಚಿಸಬಲ್ಲಾತನೆ ಭಕ್ತ. ಮನದಲ್ಲಿ ಸಕಾರಸ್ವರೂಪವಾದ ಪ್ರಾಣಲಿಂಗವನರಿದರ್ಚಿಸಬಲ್ಲಾತನೆ ಭಕ್ತ. ಮನನೀಯದಲ್ಲಿ ಕ್ಷಕಾರಸ್ವರೂಪವಾದ ಭಾವಲಿಂಗವನರಿದರ್ಚಿಸಬಲ್ಲಾತನೆ ಭಕ್ತ. ತ್ರಿವಿಧಲಿಂಗವನರಿದರ್ಚಿಸಬಲ್ಲಾತಂಗಲ್ಲದೆ ಭಕ್ತಿಸ್ಥಲವಿಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ

ಇನ್ನಷ್ಟು ...
-->