ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮೊಲನ ಕಂಡರೆ ಶ್ವಾನಂಗಳು ತುಡುಕುವಂತೆ. ಹೊನ್ನು ಹೆಣ್ಣು ಮಣ್ಣು ಮೂರೆಂಬ ಮೊಲಕ್ಕೆ ಪಂಚೇಂದ್ರಿಯಂಗಳೆಂಬ ಬೇಟೆಯ ನಾಯಿಗಳು ತೊಡರುತ ಎನ್ನಬಿಡು ತನ್ನ ಬಿಡು ಎನ್ನುತ್ತಲಿವೆ. ನೊಂದೆನಿವರ ದಾಳಿಯಲ್ಲಿ, ಬೆಂದೆನಿವರ ದಾಳಿಯಲ್ಲಿ. ನೊಂದು ಬೆಂದು ಕುಂದಿ ಕುಸಿವನ `ಕಂದ ಬಾ' ಎಂದು ಎನ್ನ ತಲೆದಡಹೊ ಭವವಿರಹಿತ ತಂದೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮಾಯಾತಮಂಧವೆಂಬ ಸಹಗತ್ತಲೆ ಇರುತಿರೆ, ಮರಹು ಮೋಹ ನಿದ್ರಾಂಗನೆಯೆಂಬ ಮೋಡವ ಕವಿಸಿ, ಜಾಗ್ರ ಸ್ವಪ್ನ ಸುಷುಪ್ತಿಯೆಂಬ ಕಾಳಾಂಧಕಾರದೊಳು ಮರದೊರಗಿ ಮೈಮರಸಿ ಎಚ್ಚರಗೊಡದೆ ಎನ್ನ ಕಾಡುತಿರ್ದೆಯಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮನೆ ಮಡದಿ ಮಕ್ಕಳು ದ್ರವ್ಯ ಬಂಧುಬಳಗವೆಂಬುದು ಸಂಸಾರವಲ್ಲ ಕಾಣಿರೋ. ಸಂಸಾರವಾವುದೆಂದರೆ ಹೇಳುವೆ ಕೇಳಿರಣ್ಣ. ತನುವೆಂಬುದೆ ಮನೆ, ಪ್ರಾಣನಾಯಕನೆಂಬುವನೆನ್ನೊಡೆಯ, ಶರೀರಮಾಯೆಯೆಂಬುವಳೆ ಹೆಣ್ಣು, ಪಂಚಭೂತವೆ ಮಕ್ಕಳು ಕಾಣಿರಣ್ಣ. ಪಂಚೇಂದ್ರಿಯಮುಖದಲ್ಲಿ ಬಳಸುತಿಪ್ಪ ವಿಷಯವೆ ದ್ರವ್ಯಕಾಣಿರೊ. ಅರುವತ್ತಾರುಕೋಟಿ ಕರಣದೊಳಿಂಬುಗೊಂಡಿಪ್ಪುದೆ ಬಂಧುಬಳಗ. ಇಂತಪ್ಪ ಸಂಸಾರವನರಿಯದೆ, ತಮ್ಮ ತಿಂದು ತೇಗುವುದನರಿಯದೆ, ಹೋರಾಟದ ಸಂಸಾರವ ಕಂಡರೆ ಸಂಸಾರವೆಂದು ನುಡಿಯುತಿಪ್ಪರಯ್ಯ. ಈ ಸಂಸಾರಮಾಯೆಯ ಕಳೆದಿಪ್ಪವರೆನ್ನ ಪ್ರಾಣಲಿಂಗ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮುಂಡದ ಮೇಲಣ ತಲೆಯ ಮೂರ್ತವ ಅಂಗೈ ಮೇಲೆಗೂಡಿ, ಅಂಗೈ ಮೇಲೆಯ ಮೂರ್ತವ ಮುಂಡದ ತಲೆಗೂಡಿ, ಕಂಡು ಸುಖಿಯಲ್ಲದೆ ಲಿಂಗಾಂಗಸಂಬಂದ್ಥಿಯಲ್ಲಾ, ಅಂಗಲಿಂಗಸಂಬಂದ್ಥಿಯಲ್ಲಾ. ಬರಿಯ ಮಾತಿನ ಬಣಗರ ಮೆಚ್ಚುವನೆ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮಾಯಾಪಾಶವದಾರನೂ ಬಿಟ್ಟುದಿಲ್ಲ. ವೀರರು ಧೀರರು ಯತಿಗಳು ಜತಿಗಳು ಸಿದ್ಧರು ಸಾಧ್ಯರು ಮನುಗಳು ಮುನಿಗಳು ದನುಜರು ಮನುಜರು ಇಂತಿವರು ಸಮೂಹವಾದ ಮೂರು ಲೋಕವನೆಲ್ಲ ತಿಂದು ತೇಗುತಿರ್ದುದಯ್ಯ ನಿನ್ನ ಮಾಯೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮಣಿಮಾಡದೊಳಡಗಿಹ ಮಾಣಿಕಕ್ಕೆ ಮಣಿ ಇಡಲಳವಲ್ಲ. ಮಾಣಿಕದ ಪ್ರಭೆಯಲ್ಲಿ ಕಾಣಬಹುದಾಕಾರಮೂರ್ತಿಯ. ಅಂತರಂಗದ ಜ್ಞಾನ ಬಹಿರಂಗದ ಕ್ರಿಯೆಯೊಳೊಮ್ಮೆ ಸರ್ವಾಂಗದೊಳು ಲಿಂಗವ ಸಂತೈಸಿಪ್ಪ ಸದ್ಭಕ್ತರ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮೇಷನ ದನಿಗೇಳಿ ಹುಲಿ ಬಲಿಯ ಬೀಳ್ವಂತೆ, ಕರ್ಣ ಹರನಿಂದ್ಯ ಗುರುನಿಂದ್ಯವ ಕೇಳುವುದು. ಶಿವಮಂತ್ರ ಶಿವಸ್ತೋತ್ರ ಶಿವಾಗಮ ಶಿವಸೂತ್ರವ ಕೇಳದೆ ಕರ್ಮಗುರಿಯಾಗುವದು ಈ ಶ್ರೋತ್ರೇಂದ್ರಿಯ. ಕರಿಯು ಸ್ಪರುಶನೇಂದ್ರಿಯದಲ್ಲಿ ಮಡಿದಂತೆ, ಪರಧನ ಪರಸ್ತ್ರೀ ಪರರನ್ನವ ಮುಟ್ಟೇನೆಂಬುದೀ ಹಸ್ತ. ಶಿವಪೂಜೆ ಶಿವಲಿಂಗವ ಮುಟ್ಟಿ ಶಿವಜಪವನೆಣಿಸದೆ ಅನ್ಯಕ್ಕೆ ಗುರಿಯಾಯಿತ್ತು ತ್ವಗಿಂದ್ರಿಯ. ದೀಪವ ಕಂಡು ಮುಟ್ಟುವ ಪತಂಗನಂತೆ ನಯನೇಂದ್ರಿಯ. ಪರಧನ ಪರಸ್ತ್ರೀಯ ಆಟ ನೋಟ ಪರಾನ್ನವ ನೋಡಿ ಮರುಳಾಗಿ ಶಿವಲಿಂಗ ಶಿವಪೂಜೆಗೆ ಅನುಮಿಷದೃಷ್ಟಿಯಿಡದೆ ಕೆಡುವುದೀ ನಯನೇಂದ್ರಿಯ. ಕೀಳುಮಾಂಸದ ಸವಿಗೆ ಗಂಟಲಗಾಣವ ಬೀಳುವ ಮೀನಿನಂತೆ ಜಿಹ್ವೇಂದ್ರಿಯ. ಹರನಿಂದೆ ಗುರುನಿಂದೆ ಪರನಿಂದ್ಯವ ಮಾಡಿ, ಕಾಳಗವಾರ್ತೆಯನಾಡಿ, ಪುರಾತರ ವಚನ ಶಿವಸ್ತುತ್ಯ ಶಿವಮಂತ್ರ ಶಿವಾಗಮವನೋದದೆ ಕರ್ಮಕ್ಕೆ ಗುರಿಯಾಗುವದೀ ಜಿಹ್ವೇಂದ್ರಿಯ. ಕಂದ :ಶ್ರೀಕಂಠ ಶಿವನ ನೆನೆಯದೆ ಲೌಕಿಕ ವಾರ್ತೆಯನೆ ಪೊರಹುತ್ತಿರ್ದಪುದೆನ್ನೀ ಬಾಕುಳಿಕ ಜಿಹ್ವೆಯಿದರಿಂ ನಾ ಕರನೊಂದೆ ಪ್ರಸನ್ನಶಂಕರಲಿಂಗ | 1 | ಎನ್ನಯ ನಾಲಿಗೆಯ ನಿಮ್ಮಯ ಮನ್ನಣೆಯ ಮಹಾನುಭಾವಿಗಳ ಚರಣಕ್ಕಂ ಹೊನ್ನಹಾವುಗೆಯ ಮಾಡೆಲೆ ಪನ್ನಗಕಟಕಾ ಪ್ರಸನ್ನಶಂಕರಲಿಂಗ | 2 | ಕಾಳಗದ ವಾರ್ತೆಯಂ ಸ್ಮರ ಲೀಲೆಯ ಪದಗಳ ಗಳಹುತಿರ್ದಪುದೆನ್ನೀ. ನಾಲಗೆಯಂ ಬೇರುಸಹಿತಂ ಕೀಳುವರಿಲ್ಲಾ ಪ್ರಸನ್ನಶಂಕರಲಿಂಗ | 3 | ಈ ತೆರದಿ ಸಂಪಿಗೆಯ ಕುಸುಮದ ಪರಿಮಳಕೆರ[ಗಿ]ದಳಿ ಮೃತವಾದಂತೆ ನಾಸಿಕೇಂದ್ರಿಯ ಮಾಯಾದುರ್ಗಂಧಚಂದನವಾಸನೆಗೆಳಸಿ ಸ್ವಾನುಭಾವಸದ್ವಾಸನೆಯ ಮರೆದು ಕರ್ಮಕ್ಕೆ ಗುರಿಯಾಯಿತ್ತೀ ಘ್ರಾಣೇಂದ್ರಿಯ. ಇಂತೀ ಪಂಚೇಂದ್ರಿಯಂಗಳೆಂಬ ಶುನಿ ಕಂಡಕಡೆಗೆ ಹರಿದು ಭಂಗಬಡಿಸಿ ಕಾಡುತಿದೆ, ಇವಕಿನ್ನೆಂತೊ ಶಿವಶಿವ, ಇವಕ್ಕಿನ್ನೆಂತೊ ಹರಹರ. ಇವ ನಿರಸನವ ಮಾಡೇನೆಂದರೆನ್ನಳವಲ್ಲ , ನಿಮ್ಮ ಧರ್ಮ ಕಾಯೋ ಕಾಯೋ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮಾಯದ ಸಂಸಾರಬಲೆಯೊಳು ಸಿಲ್ಕಿ ಆಯಾಸಗೊಳುತ ಒರಲೊರಲಿ ಕರೆದರೆ `ಓ ' ಎನ್ನಲೊಲ್ಲೆಯೇಕೋ ಅಯ್ಯಾ ? ಒಂದರ ಮುಂದೆ ಹುಲ್ಲು, ಒಂದರ ಮುಂದೆ ಕಲ್ಲು ಹಾಕಿದಂತೆ ಮಾಡಬೇಡಯ್ಯಾ. ಒಬ್ಬರಿಗೊಲಿದು ಒಬ್ಬರ ಕಾಡಬೇಡಯ್ಯಾ. ನಿನಗೇಕೆ ಪ್ರಪಂಚದ ಗುಣ ? ನಿಃಪ್ರಪಂಚ ನಿರ್ಲೇಪ ನಿಜಗುಣ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮಾಯದ ಮರಣದೊಳು ಛಾಯದ ಗಿಡ ಹುಟ್ಟಿ, ಒಂಬತ್ತು ಗಳಿಗೆಗೆ ಹೂವು ಕಾಯಿ ಹಣ್ಣು ಫಲವಾಗಿ, ಮರ ಬೇರುವರಿದು ಪ್ರಜ್ವಲಿಸಿದುದ ಕಂಡೆನಯ್ಯಾ ! ಇದೇನು ಚೋದ್ಯ ಹೇಳಾ ! ಮಾರುದ್ದ ಮರನಡಗಿ ಛಾಯದ ಗಿಡವಾಗಿ, ಪಿರಿದಪ್ಪ ವೃಕ್ಷವಾಗಿ, ಜಗಕೆ ತೋರಿದ ಭೇದವ ವೃಕ್ಷಕೆ ನೀರೆರೆದು ಸಲಹಿದಾತ ಬಲ್ಲ ; ಉಳಿದವರಿಗಸಾಧ್ಯ. ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮನವಿಕಾರ ಸುಟ್ಟದನು ಮನವಿಕಾರದ ಭ್ರಮೆಯ ಹೋರಟೆಯಾಗದೆಂ ಬನುವಿನಿಂ ತ್ರಿಲೋಕಯೆಲ್ಲ ಭಂಗಿತರಾಗಿ ಜನನ ಮರಣಕೆ ಬರುವ ಮನವು ನಿರ್ಮನವಾಗಲವ ಸತ್ಯ ನಿತ್ಯ ಶರಣ. ಪದ :ಹರಿದು ಮರ್ಕಟನ ವಿಕಾರಕಿಂದಲಿ ಮೇಣು ಸುರೆ ಸವಿದವನ ವಿಕಾರವದರಿಂದ ಧ ತ್ತುರಿಯ ಸೇವಿಸಿದವನ ವಿಕಾರಯಿವು ತ್ರಿವಿಧಕೆ ಗೌರವಂ ಮನವಿಕಾರ ಚರಿಯ ಮದದ ಅಮಲು ತಲೆಗೇರಿ ತಾಮಸದಲಿಂ ಗಿರಿಯಂಧಕನವೋಲಿನಂತೆ ದೇವತಾ ಸತ್ಯ ಪುರುಷರುಂ ಶಿವಜ್ಞಾನ ಹೊಲಬನರಿಯದೆ ಕೆಟ್ಟುದನೇನ ಹೊಗಳ್ವೆ ನಾನು | 1 | ಹರಿಯ ಮುಂದುಗೆಡಿಸಿ ಅಜನ ಶಿರವ ಕಳೆಸಿ ಸುರನ ಮೈಯೋನಿಯಂ ಮಾಡಿ ದೇವರ್ಕಳಂ ನೆರೆ ಕೆಡಿಸಿ ಯತಿ ಸಿದ್ಧಸಾಧ್ಯರೆಲ್ಲರ ಸೆರೆಯ ಹಿಡಿದು ಭಂಗಿತರ ಮಾಡಿ ಧರೆಯ ಮನುಜರ ತಿಂದು ತೇಗಿ ಕಾಡುವ ಮನವ ನಿರಸನಮಾಡಿ ನಿರ್ಮೋಹಿಯಾಗಿಹ ಸತ್ಯ ಶರಣರಡಿಧೂಳಿಯ ಚಮ್ಮಾವುಗೆಯ ಪೊರೆವೆನೆನಗಿದೆ ಸತ್ಯ ಮುಕ್ತಿ ಕಂಡಾ |2| ಇಳೆಪತಿಗೆ ಮಂತ್ರಿ ತಾ ಮುಖ್ಯವಾದಂತೆ ಕಾಯ ದೊಳು ಚರಿಸುವ ಜೀವ ಪ್ರಾಣದ್ವಯ ದಶವಾಯು ಗಳು ಅಷ್ಟಮದ ಸಪ್ತವ್ಯಸನ ಅರಿವರ್ಗ ಚತುರಂತಃಕರಣವಿಷ್ಟೆಲ್ಲಕೆ ಸಲೆ ಮನಂ ಮುಖ್ಯವಾಗಿಯೂ ಪಾಪ ಅನ್ಯಾಯವ ಗಳಿಸಿ ಯಮನಿಂಗೆ ಗುರಿಮಾಡಿ ಬಂಧಿಸಿ ಜನರ ಕೊಲ್ಲಿಸುತಿಹ ವಿಧಿಗಂಜಿ ನಿಮ್ಮ ಮೊರೆಹೊಕ್ಕೆನೆಲೆ ಕಾಯೋ ಶಂಭುವೆ. | 3 | ಚಣಚಣಕ್ಕೆ ಪಾತಾಳಲೋಕಕೈದುವ ಮನಂ ಚಣಚಣಕ್ಕೆ ಆಕಾಶದತ್ತ ಹಾರುವ ಮನಂ ಚಣಚಣಕ್ಕೆ ಸಪ್ತಸಮುದ್ರವ ಚರಿಸಿಬರುವುದೀ ಮನಮರುತ ಸರ್ವಾಂಗದಿ ಚಣಕೊಂದು ಬುದ್ಧಿಯ ನೆನದು ಕಾಡುವ ಮನದ ಗುಣದಿಂದ ನಾ ಕರ್ಮಶರಧಿಯೊಳು ಮುಣಗಿದೆನು ತ್ರಿಣಯ ನೀ ಕೈವಿಡಿದು ತೆಗೆದು ರಕ್ಷಿಸು ಎನ್ನ ಕರುಣಾಳು ದುರಿತಹರನೆ |4 | ಮನದಿಂದೆ ನೊಂದೆ ನಾ ಮನದಿಂದೆ ಬೆಂದೆ ನಾ ಮನದಿಂದ ಕಂದಿ ಕುಂದಿಯೆ ಕುಸಿದು ಭವಗಿರಿಯ ನನುದಿನಂ ಸುತ್ತುತಿರ್ದೆನು ಅಂಧಕನ ತೆರದಿ ಮನದ ನಸು ಗುನ್ನಿ ಚುರಿಚಿತನವು ಸರ್ವಾಂಗವೆಲ್ಲವ ಕೊಂಡು ತಿನಿಸೆದ್ದು ಮನದ ಗಂಧೆಯ ತುರಿಸಿ ತುರಿಸನೇ ಹಂಬಲಿಸಿ ಕನಲುತಿರ್ದೆನು ಎನ್ನ ಗುಣವ ನೋಡದೆ ಕಾಯೋ ಕಾಯೋ ಕರುಣಾಳುವೆ |5| ಪಾಪಿಮನ ಠಕ್ಕಮನ ಸರ್ವರೊಳು ಕೋಪಿಮನ ಕುಕ್ಕಮನ ಕಾಕುಮನ ಜಾಪಿಮನ ಹೇವಮನ ಹೆಬಗಮನ ಗುಣಧರ್ಮಕರ್ಮದಿಂದ ತಾಪಸಬಡುತಿರ್ದೆ ಗಾಯವಡೆದ ಉರಗ ನಾಪರಿಯಲೆನ್ನ ನೆರಳಿಸಿ ಒರಲಿಸುವ ಮನದ ರೂಪನಳಿದು ಜ್ಞಾನವಿತ್ತು ಸಲವಯ್ಯಾ ಚಿದ್ರೂಪ ಚಿನ್ಮಯ ಶಂಭುವೆ. | 6 | ಕೂಳಮನ ಕುರಿಮನ ಸರ್ವಚಾಂ ಡಾಲಿಮನ ಪರಧನ ಪರಸ್ತ್ರೀಯರನ್ಯಕ್ಕೆ ಕೋಳುಗೊಂಬುವ ಹೆಡ್ಡಮನ ಜಿಡ್ಡುಮನ ಜಾಳುಮನ ಹಾಳುಮನದ ಪಾಳೆಯವು ಹಲವು ಪರಿಯ ಮನದ ಗಾಡಿಗೆ ಸಿಲ್ಕಿ ಕಾಲಕರ್ಮಕ್ಕೆ ಗುರಿಯಾದೆನಿದ ಪರಿಹರಿಸಿ ಶೂಲಿ ಸರಸಿಜನ ಕಪಾಲಿ ಶಿರಮಾಲಿ ರಕ್ಷಿಸು ಕರುಣಾಂಬುನಿಧಿ ಗಿರಿಜೇಶನೆ |7| ಅಂಗಗೂಡಿನೊಳು ಮನಪಕ್ಷಿ ಹೊರಗಿರುವ ಪ ಕ್ಕಂಗಳೆರಡರೊಳು ಉಡುಪತಿ ಭಾನುವಂ ಪಿಡಿದು ಜಂಗಿಟ್ಟು ಭೂಯ್ಯೋಮ ಮಧ್ಯದೊಳು ಚರಿಸುತಿರಲೆತಿ ಸಿದ್ಧ ಸಾಧ್ಯರೆಲ್ಲ ಭಂಗಬಡುವರು ಮನವೆಂಬ ಪಕ್ಷಿಯ ಮುರಿದು ನುಂಗಬಲ್ಲಡೆ ಸತ್ಯಶಿವಯೋಗಿ ಶರಣ ನಿ ರ್ಭಂಗ ನಿರ್ಲೇಪ ನಿರ್ಮನ ನಿರಾಭಾರಿಯಾಗಿಹರೆನ್ನ ಪ್ರಾಣಲಿಂಗ. | 8 | ಹರನ ಶ್ರೀಪಾದದೊಳು ಮನವನಿಟ್ಟಿಹ ಸತ್ಯ ಶರಣಬಸವೇಶ ಪ್ರಭುರಾಯ ಮೋಳಿಗೆ ಮಾರ ಗುರುಭಕ್ತ ನೆಂಬಣ್ಣ ದಾಸಿ ಕೇಶಯ್ಯನೋಹಿಲದೇವನುದುಟಯ್ಯ ಮರುಳಶಂಕರ ಮುಖ್ಯವಾದ ಪ್ರಮಥರ ದಿವ್ಯ ಚರಣದಲಿ ಮನವ ಮಗ್ನಿಸಿದ ದಾಸೋಹಿಗಳ ವರಪ್ರಸಾದಕ್ಕೆ ಯೋಗ್ಯನ ಮಾಡು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. | 9 |
--------------
ಹೇಮಗಲ್ಲ ಹಂಪ
ಮುಂಡವ ಹೊಂದದ ರಣಭೂತ ಸಂಖ್ಯೆಯ ಮೀರಿದ ತಲೆಯ ಕಂಡವರುಂಟೆ ? ಹೇಳಿರಣ್ಣಾ. ತಲೆಯ ಕಂಡೆನೆಂದರೆ, ಕಾಣಗುಡದೆ ಮುಂಡವೆದ್ದು ಭೂಮಂಡಲವ ನುಂಗುವುದ ಕಂಡೆ. ಹರಿ ಸುರರು, ದನುಜ ಮನುಜರು ಮುಂಡದ ಭೀತಿ ಸೋಂಕಿ ಭಯಕೊಳಗಾದುದ ಕಂಡೆ. ಇದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮಾಯಾತಮಂಧವೆಂಬ ಕತ್ತಲೆಯು ಮುಸುಕಿ ಮುಂದುಗಾಣದೆ ಅರುಹಿರಿಯರೆಲ್ಲರು, ಸಿದ್ಧಸಾಧ್ಯರೆಲ್ಲರು ಕಣ್ಗಾಣದೆ ಮರೆದೊರಗಿದರು. ಅದು ಎಂತೆಂದೊಡೆ :ವಸಂತತಿಲಕವೃತ್ತ - ``ಮಾಯಾತಮಂಧ ಮಹಾಘೋರ ಕಾಲವಿಷಂ ಜ್ಞಾನಸ್ಯ ಸೂರ್ಯ ನಚ ಸಿದ್ಧ ಸಾಧ್ಯಂ ಭೂಲೋಕ ತ್ರಿಗುಣಾಕಾರ ಮಧ್ಯ ಶಯನೇಶದೇಹಿ ಶಿವಮುಕ್ತಿರಹಿತ ಭವಯಂತ್ರ ಕ್ರೀಡಾದಿಜನಿತಂ'' (?) ಎಂದುದಾಗಿ, ಇದು ಕಾರಣ, ತನುವೆಂಬ ಉರುರಾಜ್ಯಕ್ಕೆ ಜ್ಞಾನಸೂರ್ಯನ ಮುಳುಗಿಸಿ ಅನುದಿನ ಎನ್ನ ಕಣ್ಗೆಡಿಸಿ, ಮಾಯಾತಮಂಧವೆಂಬ ಕತ್ತಲೆಗೆ ನಡೆಸಿ, ಅಜ್ಞಾನವೆಂಬ ಕೊರಡನೆಡವಿಸಿ, ತಾಪತ್ರಯವೆಂಬ ಅಗ್ನಿಗಿರಿಯನಡರಿಸಿ, ಮನವಿಕಾರಗಳೆಂಬ ಭೂತಗಳ ಹರಿಯಬಿಟ್ಟು, ಅರಿಷಡ್ವರ್ಗವೆಂಬ ಕೂರಸಿಯ ಸಿಗಿಸಿ, ಷಡ್ಭಾವವೈಕರಣಗಳೆಂಬ ಹಳ್ಳಕೊಳ್ಳ ನಡುವಿಕ್ಕಿ ಎನ್ನ ಕಾಡುತಿರ್ದೆಯಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮುಂದೆ ಮಾಡಿದ ಕರ್ಮ ಬೆನ್ನಟ್ಟಿ ಬರುವಾಗ, ಅದಕಿನ್ನು ದೇವರ ಹರಕೆಯೆಂದು ನುಡಿಯಲೇಕೆ ? ಭ್ರಷ್ಟರಿರಾ ಕೇಳಿರೌ. ಮಾನವನಾಗಿ ಹುಟ್ಟಿ, ಕೊರಳಲ್ಲಿ ಕವಡಿಯ ಕಟ್ಟಿ, ಶ್ವಾನನಾಗಿ ಬೊಗಳುವುದು ಮುನ್ನಿನ ಕರ್ಮದ ದೆಸೆಯಲ್ಲದೆ, ವಗ್ಗನ ಕರೆತಂದು, ಮೈಲಾರನ ಹರಕೆ ಮುಟ್ಟಿತೆಂದು ನೀಡುವವನೊಬ್ಬ ಹಳೆನಾಯಿ. ಮೈಲಾರನ ಪೂಜಿಸುವರೆಲ್ಲ ನಾಯಾಗಿ ಹುಟ್ಟುವುದು ತಪ್ಪದು. ಉಟ್ಟುದ ಬಿಟ್ಟು ಅರಣ್ಯವಾಸಿಯ ಕಂಡರೆ ಬತ್ತಲೆ ಐದನೆ ಲಜ್ಜೆಭಂಡನೆಂದು ನುಡಿವರು. ಯೋನಿಯ ತೆರೆದು, ಬತ್ತಲೆಯಾಗಿ, ಚಿಕ್ಕದು ದೊಡ್ಡದು, ಹೆಣ್ಣು ಗಂಡು ಊರು ರಾಜ್ಯವೆಲ್ಲ ನೋಡುವಂದದಿ ನಡೆವರು. ನಡೆದು ನಮ್ಮ ಮಲ್ಲಾರಿಯ ಹರಕೆ ಮುಟ್ಟಿತೆಂದು ನುಡಿವ ಖೊಟ್ಟಿಗಳು ಇದು ತಮ್ಮ ಪೂರ್ವದ ಕರ್ಮವೆಂದರಿಯರು ನೋಡಾ. ಕಬ್ಬಿಣವಂಕಿಯ ತಮ್ಮ ತನುವಿಗೆ ಸಿಕ್ಕಿಸಿಕೊಂಡು ಪಾಶದಲ್ಲಿ ಹಳಿಗೆ ಕಟ್ಟಿ, ಅಂತರದಲ್ಲಿ ತಿರುವಿ, ಸಿಡಿಯೆಂದಾಡಿ, ಉಡುಚು ಮಾರಿ ಮಸಣಿಯೆಂಬ ಕೇತು ಭೂತ ದೈವವ ಪೂಜೆಮಾಡುವವರೆಲ್ಲ ಪ್ರೇತ ಭೂತಗಳಾಗಿ ಹುಟ್ಟುವದು ತಪ್ಪದು ನೋಡಾ. ಗುರುಲಿಂಗಜಂಗಮ ನಿಂದಿಸುವ ನಾಲಗೆ[ಗೆ] ಶಸ್ತ್ರವನೂರಿಸುವ, ಗುರುಲಿಂಗಜಂಗಮಕೆರಗದೆ ಪರದೈವಕೆರಗುವನ ತಲೆಯೊಳು ಬೆಂಕಿಯ ಹೊರಿಸುವ, ಶಿವನರಿಯಬಾರದೆ ? ಗುರುಲಿಂಗಜಂಗಮಕಡಿಯಿಡದೆ, ಪರದೈವಕಡಿಯಿಡುವನ ಕಾಲಿಂಗೆ ಕೆಂಡವನಿಕ್ಕುವ ಶಿವನರಿಯಬಾರದೆ ? ಇದು ನಮ್ಮ ದೇವರ ಹರಕೆ, ಅಗ್ನಿಗೊಂಡ ಗುಗ್ಗುಳ ಶಸ್ತ್ರವೆಂದು ನುಡಿವರು. ಚಿಮಿಕಿ ಡೆಂಕಣಿ ಕಿಚ್ಚಿನಕೊಂಡ ಇರಿವ ಶಸ್ತ್ರಕದ ಮಿಟ್ಟಿಗೆ ಇಂತಿವು ಮುಖ್ಯವಾದ ನಾನಾ ಬಾಧನೆಗಳೆಲ್ಲ ಯಮನಲ್ಲುಂಟು. ಯಮನಲ್ಲುಂಟಾದ ದೃಷ್ಟಾಂತವ ಮತ್ರ್ಯದಲ್ಲುಂಟು ಮಾಡಿಕೊಂಡು ಬಾಧನೆಗೆ ಸಿಲ್ಕಿ, ದೇವರ ಹರಕೆಯು ಮುಟ್ಟಿತೆಂದು ನುಡಿವ ಅಜ್ಞಾನಿ ಹೊಲೆಯರ ಕಂಡು ನನ್ನೊಳು ನಾ ಬೆರಗಾಗುತ್ತಿದ್ದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮದ ಎಂಟರೊಳು ಸಿಲ್ಕಿ ಮೈಮರೆದು ಅಲ್ಲಮನ ಪಾದಯುಗಳನು ಮರೆಯದಿರು ಮರೆದರೆ ಆತ್ಮ ಸುಧೆಯ ಹೊರಚೆಲ್ಲಿ ಸುರೆಗಾಟಿಯ ಸವಿವವನ ವಿಧಿ ಕಂಡಾ ಶಿವನ ಮರೆಯದೆ ನೆನೆ ಆತ್ಮ . ಪದ : ಕುಲ ಛಲ ರೂಪ ಯವ್ವನ ಧನ ವಿದ್ಯೆ ರಾಜ್ಯ ಸಲೆ ತಪಮದವೆಂಬ ಎಂಟಾನೆಯವೆ ಆತ್ಮ. ನಿಲಿಸುವನು ದೃಢವೆಂಬ ಕಂಬದೊಳು ಕಟ್ಟಿಯೆ ಹಲವು ದೆಸೆಗವ ಹರಿಯಗೊಡದೆ ಎಲೆ ಆತ್ಮ. ತಲೆಯೊಳಗೆ ವಿೂಟು ಶಿವಜ್ಞಾನಾಂಕುಶವ ಹಿಡಿದು ಕೊಲ್ಲುತಲಿರು ಕಂಡ್ಯಾ ಮಲಹರನ ಮರೆಯದೆ ಆತ್ಮ | 1 | ಮರವುಮೋಡವು ಕವಿದು ಕರಣೇಂದ್ರಿಯೆಂದೆಂಬ ಬಿರುಮಳೆಯು ಕರೆವುತೆ ಭೀತಿಯಾಗದೆ ಆತ್ಮ. ಬರಸಿಡಿಲು ಕಾಲನೆಂಬುವುದು ಚಿಟಿಚಿಟಿಲೆನುತ ಬರುತಲದೆ ಮುಂದೆ ರಕ್ಷಿಯಾಗಿರ್ದ ನೀ ಆತ್ಮ. ಅರಿಗಳಲ್ಲದೆ ಹಿತವರಾರಿಲ್ಲ ಕೇಳು ನೀ ಪರಮಾತ್ಮನನು ಮರೆಯದಿರು ಕಂಡ್ಯಾ ಆತ್ಮ. | 2 | ಕಾಳಗದಿ ಕೈಮರದ ಪಟ ಬರೆಸಿ ಮರಣಾರ್ಥಿ ಯೊಳಗಲಿದನುಮಿಷಗೆ ಮೃತ್ಯು ಕೇಳಲೆ ಆತ್ಮ. ನಾಲಗುಳ್ಳನಕ ಶಿವಸ್ಮøತಿಯ ಮರೆದರೆ ನಿನಗೆ ಕಾಲಮೃತ್ಯು ಮಾರಿಗಳು ಉಂಟೇ ಆತ್ಮ. ಹೋರಾಡಿ ಲಿಂಗಾಂಗಸಂಗ ಖಡ್ಗದಲ್ಲಿ ನೀ ಮೇಲಿಪ್ಪ ಗುರುಸಿದ್ಧ ಮಲ್ಲಿನಾಥನ ನಂಬು ಆತ್ಮ. | 3 |
--------------
ಹೇಮಗಲ್ಲ ಹಂಪ
ಮನವು ಮಹಾದೇವನಲ್ಲಿ ವೇದ್ಯವಾದರೆ, ವೇದಶಾಸ್ತ್ರನಾಮದ ಶಿವನ ಅಂಗ ಲಿಂಗವ ಮಾಡಿ ಹಿಂಗದೆ ಸದಾ ಪೂಜೆಮಾಡಬಲ್ಲರೆ ಶಾಸ್ತ್ರ. ಪೂರ್ವವನಳಿದು ಪುನರ್ಜಾತನಾಗಿ ಮಾಯಾಮದ ಹಿಂಗಿಸಿ ಆ ಜ್ಞಾನ ಅಂಗದೊಳು ಪೂರಿತವಾಗಿರಬಲ್ಲರೆ ಪುರಾಣ. ಅಂತರಂಗದ ಅಷ್ಟಮದ ಹಿಂಗಿ, ನಿರಂತರನಾಗಿರಬಲ್ಲುದೆ ಆಗಮ. ಇಂತಪ್ಪ ವೇದಶಾಸ್ತ್ರಪುರಾಣಾಗಮವ ಬಲ್ಲ ನಿಜದೇಹಿಗಳ ಪಾದಕ್ಕೆ ನಮೋ ನಮೋಯೆಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮಾರಮಥನ ಮಸಣಾಲಯ ಮನಾತೀತ ಮಾ[ನಿ] ದ್ಯುಮಣಿಧರ ಮತ್ಸರವಿರಹಿತ ಮದ್ಗುರು ಮಹಾಶಂಭು ಮಹಾದೇವ ಮಹಾಜ್ಞಾನ ಮಹಾತ್ಮನೆ ಮಹಾದೇವದೇವ ಮರಣವಿರಹಿತ ಮರಹುದೂರ ಅರುಹಾನಂದ ಮನುಮುನಿವಂದ್ಯ ಮೂಲಾಧಾರ ಮಹಾಗಣಪ್ರೇಮ ಮಾಯಾಕೋಳಾಹಳ ಮಾಯ ನಿರ್ಮಮಗುಣಮಗೋಚರ ಮಹಾಜ್ಯೋತಿ ಪರಶಿವ ಮೂರುಲೋಕಪ್ರಕಾಶ ಸರ್ವಕಾವದೇವನೆಂದು ಮೊರೆಹೊಕ್ಕೆ, ಎನ್ನ ಕಾಯ್ದು ರಕ್ಷಿಸು ಜಯಜಯ ಹರಹರ ಶಿವಶಿವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮಂತ್ರವ ಬಲ್ಲೆವೆಂದು ಪರಮನುಜರಿಗೆ ಭೂತ ಪ್ರೇತ ಪಿಶಾಚಿಗಳು ಹೊಡೆದರೆ ಬಿಡಿಸುವ ಸಂತೆಸೂಳೆಯ ಮಕ್ಕಳು ನೀವು ಕೇಳಿರೋ. ನಿಮ್ಮ ತನುವಿನೊಳಿಹ ಪಂಚಭೂತಂಗಳು ನಿಮ್ಮ ತಿಂದು ತೇಗುತಿಹವು. ಅವನೇಕೆ ನೀವು ಬಿಡಿಸಿಕೊಳಲಾರದಾದಿರೊ ? ಆಳುವ ಪಂಚಭೂತಶರೀರದ ಹೊಲೆಯ ಕಳೆದು ಶಿವದೇಹಿಯಮಾಡುವುದೆ ಶಿವಪಂಚಾಕ್ಷರಿ. ಜನನ ಮರಣಗಳ ನಿಟ್ಟೊರಸುವುದೆ ಶ್ರೀಪಂಚಾಕ್ಷರಿ. ಕಾಲಮೃತ್ಯು ಅಪಮೃತ್ಯು ಮಾರಿಗಳನೋಡಿಸುವುದೆ ಶ್ರೀಪಂಚಾಕ್ಷರಿ. ನಿತ್ಯ ಮುಕ್ತಿಯ ತೋರುವುದೆ ಶ್ರೀಪಂಚಾಕ್ಷರಿ. ಸತ್ಯ ಜಗದೊಳಿರಿಸುವ ಶ್ರೀಪಂಚಾಕ್ಷರಿ. ಏಳುಕೋಟಿ ಮಹಾಮಂತ್ರಕೆ ತಾಯಿ ಶ್ರೀಪಂಚಾಕ್ಷರಿ ಎಂಬುದನರಿಯದೆ, ಕಳ್ಳಮಂತ್ರವ ಕಲಿತು, ಕಾಳುಭವಕೀಡಾಗಿ ಕಾಳೊಡಲ ಹೊರೆವ ಮಾನವರು ನೀವು ಕೇಳಿರೊ. ಸಾಕ್ಷಿ : ``ಸಪ್ತಕೋಟಿ ಮಹಾಮಂತ್ರಾ ಉಪಮಂತ್ರಾಸ್ತ್ವನೇಕಶಃ | ಪಂಚಾಕ್ಷರ್ಯಾಂ ಪ್ರಲೀಯಂತೇ ಪುನಸ್ತಥೈವ ನಿರ್ಗತಾಃ ||'' ಎಂದೆಂಬ ಮಂತ್ರವನರಿಯದೆ, ಅಂಧಕರಂತೆ ಕಾಣದೆ ಹುಡುಕುವ ಸಂದೇಹಿಗಳಿಗಹುದೇನಯ್ಯಾ `ನಮಃ ಶಿವಾಯ' `ನಮಃ ಶಿವಾಯ' ಎಂಬ ಮಂತ್ರ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ ?
--------------
ಹೇಮಗಲ್ಲ ಹಂಪ
ಮರ್ಕಟ ಮದ್ಯಪಾನವ ಸವಿದು ಕುಡಿದು ಹೇರಾರಣ್ಯದೊಳು ಹೋಗುತಿರೆ, ವಿಜಿಯ ಪತ್ರಿಯ ಸವಿದು, ದತ್ತೂರಕಾಯ ಸವಿದು ತಿಂದು ನೆತ್ತಿಗೇರಿ, ಅಡಿಯಿಡುತಿರೆ, ಮೇಣ್ ವೃಶ್ಚಿಕ ಕಚ್ಚಿ ಬೇನೆಯಲ್ಲಿ ನರಳುತಿರೆ, ಹಿರಿದಪ್ಪ ಭೂತ ಸೋಂಕಿ ಅಂಗಲಾಚುವ ಸಮಯಕ್ಕೆ, ಪಗಲೊಡೆಯ ಮುಣುಗೆ, ಅಂಧಕಾರ ಕತ್ತಲೆಯೊಳಗೆ ಸಿಲ್ಕಿ, ಕಪಿ, ವಿಕಾರ ಹಿಡಿದು ಕಲ್ಲನೆಲನಂ ಹಾಯ್ದು ಸಾವಂತೆ ಎನ್ನ ಬಾಳುವೆ. ಅದು ಎಂತೆಂದೊಡೆ : ಭವಾರಣ್ಯದೊಳು ಬರುತಿರೆ ತನುವಿಕಾರವೆಂಬ ಸೋರೆಯ ಗಡಿಗೆ ಮನವಿಕಾರವೆಂಬ ಭಂಗಿಯ ಸೊಪ್ಪು ಮೆದ್ದು, ಹೊನ್ನು ಹೆಣ್ಣು ಮಣ್ಣು ಮೂರೆಂಬ ತೊರೆ ತಲೆಗೇರಿ, ಮನವೆಂಬ ಚೇಳೂರಿ, ಕರಣಗುಣವೆಂಬ ಭೂತಸೋಂಕಿ, ಅಜ್ಞಾನಕೆ ಗುರಿಮಾಡಿ, ಸುಜ್ಞಾನವೆಂಬ ಸೂರ್ಯನನಡಗಿಸಿ, ಮಾಯಾತಮಂಧವೆಂಬ ಕತ್ತಲೆಯೊಳಗೆನ್ನನಿಕ್ಕಿ, ಮುಕ್ತಿಯಹಾದಿಯ ಕಾಣಲೀಸದೆ ಎನ್ನ ಕಾಡುತಿರ್ದೆಯಲ್ಲಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮುಂಡೆಗೆ ಮುತ್ತೈದೆತನ ಬಂದಂದಿಗೆ, ಗಂಡ ಬಂದು ಹೆಂಡತಿಯನಪ್ಪಿದಂದಿಗೆ, ಸಾಯದ ಮಗ ಹುಟ್ಟಿದಂದಿಗೆ, ಅಂಗೈಯೊಳಗಣ ಮೊಲೆ ಅಮೃತವ ಕರೆದಂದಿಗೆ, ಮಾಯದ ಬಲೆಯ ಸಂಸಾರಬಂಧನ ಹಿಂಗಿದಾಗಳೆ ನಿರ್ಮಾಯಕ ನಿರಾಭಾರಿ ನಿಶ್ಚಲಶರಣ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮೂರುಮುಖದ ಪಕ್ಷಿಯ ಹೆಸರಕ್ಷರವೆಂಟು. ಎರಡಕ್ಷರದಂಗನೆಯ ಸಂಗವ ಮಾಡುತ್ತಿರೆ ಸಂಗದಿಂದ ಹುಟ್ಚಿತೊಂದು ಹೆಬ್ಬುಲಿ. ಹೆಬ್ಬುಲಿಯ ಗಡಣದಿಂದ ಭೂಮಂಡಲವೆಲ್ಲ ನಡಗುವುದ ಕಂಡೆನು. ಮೂರುಮುಖದ ಪಕ್ಷಿಯ ಮುಖ ಒಂದಾಗಿ, ಕೆಳದಿಯರೈವರ ಕಡೆಗೆ ತಲೆದಿರುವಿ, ಎಂಟಕ್ಷರವ ಕೆಡಿಸಿ, ಎರಡಕ್ಷರದಂಗನೆಯ ಶಿರವನರಿದು, ಹುಟ್ಟಿದ ಹುಲಿಯ ಕೊಂದು, ಗಡಣೆಯ ತೂಲಗಿಸಿದಾತನಲ್ಲದೆ ನಿರಾಸಕ್ತನಲ್ಲ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮಾನಸ ವಾಚಿಕ ಕಾಯಿಕದಲ್ಲಿ ಆಸೆಯನೆ ಮುಂದುಗೊಳಿಸಿದೆಯಯ್ಯಾ. ಅದು ಎಂತೆಂದರೆ : ಮನಸ್ಸು ನಿಮ್ಮ ನೆನೆಯದೆ ಅನ್ಯಕ್ಕೆ ಹರಿದು ಪರಧನ ಪರಸ್ತ್ರೀಯರಾಸೆಯನೆ ನೆನವುದು. ವಾಚಿಕ ನಿಮ್ಮ ಸ್ತೋತ್ರಿಸದೆ ಒಡಲಾಸೆಯನೆ ನುಡಿವುದು. ಕಾಯಿಕ ನಿಮ್ಮ ಮುಟ್ಟಿ ಪೂಜಿಸದೆ ಅನ್ಯವನಾಸೆಗೈದು ಮುಟ್ಟುತ್ತಿಪ್ಪುದು. ಇಂತೀ ಮಾನಸ ವಾಚಿಕ ಕಾಯಿಕವೆಂಬ ತ್ರಿಕರಣದಲ್ಲಿ ಆಸೆಯನೆ ಮುಂದುಗೊಂಡುಯಿಪ್ಪ ಮಾನವರು ನಿರಾಸಕ್ತನನೆತ್ತ ಬಲ್ಲರಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ