ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬೆಳಗಿನೊಳು ಮಹಾಬೆಳಗಿನ ಜ್ಯೋತಿಯ ಕಂಡೆನು, ಶತಕೋಟಿ ಮಿಂಚಿನ ಪ್ರಭೆಯ ಕಂಡೆನು, ಅನಿಲನ ಸಂಗದಲುರಿವ ಕರ್ಪುರದ ಗಿರಿಯ ಕಂಡೆನು. ಕಂಡ ಕಾರಣ, ಎನ್ನ ಪಿಂಡದೊಳಗಿಹ ಸ್ವಯಜ್ಞಾನವೆ ಪರಬ್ರಹ್ಮವೆಂದು ತಿಳಿದು ಸಂತೈಸುತಿದ್ದೆ. ಭೇದದಿಂದೆ ಪರಮಾತ್ಮ ಎನ್ನ ಮತ್ರ್ಯಕ್ಕೆ ಆಜ್ಞೆಯಿಸಿ ಕಳುಹಿ ಅಂಜದಿರೆಂದು ಅಭಯಕೊಟ್ಟು, ತಲೆದಡಹಿ, ನೀನಿದ್ದಲ್ಲಿ ನಾನಿಹೆನೆಂದು ನಿರೂಪಿಸಿ, ಆದಿಪಿಂಡವ ಮಾಡಿ, ಜಗಕ್ಕೆ ನಿರ್ಮಿಸೆ, ಹೇಮಗಲ್ಲ ಹಂಪನೆಂಬ ನಾಮವಿಡಿದು ಬಂದೆ. ಆ ಭೇದವ ಪಿಂಡಜ್ಞಾನದಿಂದಲರಿದು ಆಚರಿಸುತ್ತಿದ್ದೆನು ಎನ್ನಾಳ್ದ Wಪರಮಘೆಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಬಸುರಿಲ್ಲದ ಬಯಕೆ ಇದೆತ್ತಣದೊ ! ಶಿಶುವಿಲ್ಲದ ಜೋಗುಳ ತೊಟ್ಟಿಲು ತೂಗುವುದಿದೇನೊ ! ಆಸವಲ್ಲದ ಹೊಳೆಯ ಅಂಬಿಗನ ಹುಟ್ಟುನುಂಗಿ, ಶಶಿಯಿದ್ದ ಗಗನ ಬಿಸಿಯಾಗಿಪ್ಪುದಿದೇನೊ ! ಮಸಣವ ನುಂಗಿದ ಹೆಣ, ವಿಷವ ನುಂಗಿದ ಸರ್ಪನೊ ! ಕೃಷಿ ಹೊಲನ ನುಂಗಿ, ಬೀಜಕೆ ನೆಲೆಯಿಲ್ಲ . ಆಸವಲ್ಲದ ಕೊಟ್ಟವ ಬೇಡನ ಬಲೆ ನುಂಗಿ ಎಸೆವುದಿದೇನು ಚೋದ್ಯ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭವೆ.
--------------
ಹೇಮಗಲ್ಲ ಹಂಪ
ಬ್ರಹ್ಮ ವಿಷ್ಮು ರುದ್ರ ಈಶ್ವರ ಸದಾಶಿವ ಇದ್ದಂದು ನೀನೆ, ಅವರಿಲ್ಲದಂದು ನೀನೆ ; ಪಿಂಡದ ಬೀಜವ ನವಬ್ರಹ್ಮರು ತಂದಂದು ನೀನೆ, ಅವ ತಾರದಂದು ನೀನೆ. ಆದಿ ಮಧ್ಯಾಂತವಿದ್ದಂದು ನೀನೆ,ಅವು ಇಲ್ಲದಂದು ನೀನೆ ; ಪಿಂಡನಿರ್ಮಿತವಾದಂದು ನೀನೆ ; ಪಿಂಡಜ್ಞಾನವಾದಂದು ನೀನೆ, ಪಿಂಡಜ್ಞಾನವಿಲ್ಲದಂದು ನೀನೆ ; ಸರ್ವರಾತ್ಮಜ್ಞಾನವಾಗಿ ತೋರುತ್ತಿದ್ದೆಯಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಬಸವಣ್ಣ ಶ್ರುತಿಸಿದ ವಾಕ್ಯದಿಂದ ಗುರುವೆಂಬ ಮಹಿಮೆಯ ಕಂಡೆನಯ್ಯಾ ! ಬಸವಣ್ಣ ಶ್ರುತಿಸಿದ ವಾಕ್ಯದಿಂದ ಲಿಂಗಸಾವಧಾನದ ಗೊತ್ತಿನ ಪರಿಣಾಮದ ಸುಖದ ಸುಗ್ಗಿಯ ಕಂಡೆನಯ್ಯಾ ! ಬಸವಣ್ಣ ಶ್ರುತಿಸಿದ ವಾಕ್ಯದಿಂದ ಪಾದೋದಕ ಪ್ರಸಾದವ ನಿತ್ಯ ನಾ ಸೇವಿಸಿ ಭವದಗ್ಧನಾದೆನಯ್ಯಾ ! ಬಸವಣ್ಣ ಶ್ರುತಿಸಿದ ವಾಕ್ಯದಿಂದ ಭಕ್ತಿ ಉನ್ನತವೆಂದು ನಂಬಿದೆನಯ್ಯಾ ! ಅದೇನು ಕಾರಣವೆಂದರೆ : ಸಿರಿಗಂಧದೊತ್ತಿಲಿದ್ದ ಜಾಲಿಗೆ ಪರಿಮಳ ಬಾರದಿಹುದೇನಯ್ಯಾ ? ಮರುಗದಗಿಡದೊತ್ತಿಲಿದ್ದ ಗರಗಕ್ಕೆ ಪರಿಮಳ ಬಾರದಿಹುದೇನಯ್ಯಾ ? ಬಸವಣ್ಣನ ಸೆರಗ ಸೋಂಕಿದ ಮನುಜರೆಲ್ಲ ಶಿವಗಣಂಗಳಾಗದಿಹರೇನಯ್ಯಾ ? ಇದು ಕಾರಣ, ಬಸವಣ್ಣನ ವಚನಾಮೃತವ ದಣಿಯಲುಂಡು ತೇಗಿದರೆ ಪಾತಕಕೋಟಿ ಪರಿಹಾರವಾಗದಿಹದೇನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ ?
--------------
ಹೇಮಗಲ್ಲ ಹಂಪ
ಬಲೆಯೊಳಗಣ ಅನು[ಮಿಷ]ನಂತೆ, ಕೂಪವ ಬಿದ್ದ ಸರ್ಪನಂತೆ, ಮಧುರದೊಳು ಬಿದ್ದ ಮಕ್ಷಕನಂತೆ, ಮಾಯಪಾಶವೆಂಬ ಬಲೆಯೊಳೆನ್ನನಿಕ್ಕಿ ಕಾಡುತ್ತಿದ್ದೆಯಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಬರುತ ಬರುತ ಅರಣ್ಯದೊಳಗೊಂದು ಬಟ್ಟೆಯ ಕಂಡೆನು. ಆ ಬಟ್ಟೆಯಗೊಂಡು ಬರುತಲೊಂದು ಸಾಗರವ ಕಂಡೆನು. ಸಾಗರದ ನಡುವೊಂದೂರ ಕಂಡೆನು. ಊರಮುಂದೊಂದು ಭವಹರವೆಂಬ ವೈಕ್ಷವ ಕಂಡೆನು. ಆ ವೈಕ್ಷವನಾರಾಧಿಸಿದರೆ ಪರಮಾರ್ಥವೆಂಬ ಹಣ್ಣ ಕರದೊಳಗೆ ಧರಿಸಿತ್ತು ನೋಡಾ. ಕರದ ಹಣ್ಣು ಉರವ ತಾಗಿ, ಉರದ ಹಣ್ಣು ಶಿರವ ತಾಗಿ, ಶಿರದ ಹಣ್ಣು ಮವನ ತಾಗಿ, ಮನದ ಹಣ್ಣು ಭಾವವ ತಾಗಿ, ಭಾವದ ಹಣ್ಣು ಸರ್ವಕರಣಂಗಳನೆಲ್ಲವ ತಾಗಿ, ಸರ್ವಾಂಗದೊಳು ಪರಿಪೂರ್ಣವಾದುದಿದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ !
--------------
ಹೇಮಗಲ್ಲ ಹಂಪ
ಬೀರ ಜಟ್ಟಿ ಮೈಲಾರ ಮಾರಿ ಮಸಣೆಯೆಂಬ ಅನ್ಯದೈವವು ಮನೆಯೊಳಿರುತಿರೆ, ಅದ ವಿಚಾರಿಸದೆ, ನಿನ್ನ ಚಿತ್ಕಳೆ ಪರಬ್ರಹ್ಮಲಿಂಗವನವರಿಗೆ ಕೊಟ್ಟು, ಹೊನ್ನು ಹಣವ ಬೇಡಿ ಕೊಂಡು ಒಡಲ ಹೊರೆದು ಗುರುವೆಂದುಕೊಂಬ ಗುರುವೆ ನೀ ಕೇಳಾ. ವಿಚಾರಹೀನರಿಗೆ ಉಪದೇಶವ ಕೊಟ್ಟರೆ ಅವಿಚಾರಿ ನೀನಹುದನರಿಯಾ ? ಸಾಕ್ಷಿ :``ಅನ್ಯದೈವಪೂಜಕಸ್ಯ ಗುರೋರುಪದೇಶಃ ನಾಸ್ತಿ ನಾಸ್ತಿ | ಅವಿಚಾರಂ ತದೀಕ್ಷಣಾತ್ ರೌರವಂ ನರಕಂ ವ್ರಜೇತ್ ||'' ಎಂದುದಾಗಿ, ಮುನ್ನ ಯಮಪಾತಕಕೆ ಗುರಿಯಾಗುವ ಸಂದೇಹಿಗಳ ಗುರು ಶಿಷ್ಯ ಸಂಬಂಧವ ಕಂಡು ನಸುನಗುತ್ತಿದ್ದನಯ್ಯಾ ನಮ್ಮ ಪರುಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಬಡವನೆಡವಿ ಧನಕಂಡಂತೆ, ಭವಪಡುವನ ಕರದೊಳು ಮೃಡಮೂರ್ತಿಲಿಂಗವ ಕಂಡೆನಲ್ಲ | ಬಿಡದೆ ಅರಸುವ ಬಳ್ಳಿ ಕಾಲತೊಡರಿ ಬಂದಂತೆ ಭವಭವಾಂತರದಲರಸಿದರೂ ಕಾಣದ ಕಾಲಸಂಹರದೊಡೆಯನ ಕಂಡೆನಲ್ಲ ಎನ್ನ ಕರದೊಳು ! ವೇದಾತೀತ ನಿರಂಜನನೆಂಬ ಲಿಂಗವ ಕಂಡೆನಲ್ಲ ಎನ್ನ ಕರದೊಳು ! ಹರಿಯಜರ ಮಧ್ಯದಲ್ಲಿ ಉರಿವುತಿಹ ಪರಂಜ್ಯೋತಿಲಿಂಗನ ಕಂಡೆನಲ್ಲ ಎನ್ನ ಕರದೊಳು ! ಕಂಡು ಕಂಡು ಬಿಡಲಾರದ ಸುವಸ್ತುವ ಕಂಡೆನಲ್ಲ ಎನ್ನ ಕರದೊಳು. ಆಹಾ ಎನ್ನ ಪುಣ್ಯವೆ ! ಆಹಾ ಎನ್ನ ಭಾಗ್ಯವೆ ! ಆಹಾ ಎನ್ನ ಪ್ರಾಣದ ನಲ್ಲನೆಂಬ ಪರಮಾತ್ಮಲಿಂಗವನಪ್ಪಿ ಅಗಲದಂತೆ ಮಾಡು ಕಂಡ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಬಲ್ಲೆನೆಂಬುವರ ಭ್ರಾಂತಿಗೊಳಗುಮಾಡಿತ್ತು ಮಾಯೆ, ಅರಿಯೆನೆಂಬುವರ ಅನಂತಭವವ ಸುತ್ತಿಸಿತ್ತು ಸಂಸಾರಮಾಯೆ, ವೀರರೆಂಬುವರ ಗಾರುಮಾಡಿತ್ತು ಮಾಯೆ, ಧೀರನೆಂಬುವರ ಎದೆಯ ನಡುಗಿಸಿತ್ತು ಸಂಸಾರಮಾಯೆ, ಯತಿಗಳೆಂಬುವರ ಏಡಿಶಾಡಿಕಾಡಿತ್ತು ಸಂಸಾರಮಾಯೆ, ಜತಿಗಳೆಂಬುವರ ಜನ್ಮವ ಮೃತ್ಯುವಿಗೆ ಈಡುಮಾಡಿತ್ತು ಮಾಯೆ ಸಿದ್ಧರೆಂಬುವರ ಬುದ್ಧಿಗೆಡಿಸಿತ್ತು ಸಂಸಾರಮಾಯೆ ಸಾಧ್ಯರೆಂಬುವರ ಬೋಧೆಗೊಳಗುಮಾಡಿತ್ತು ಮಾಯೆ. ಯತಿ ಸಿದ್ಧ ಸಾಧ್ಯರೆಂಬುವರ ಮತಿಭ್ರಷ್ಟರ ಮಾಡಿ ಕಾಡೂದದು. ನೀನಿಕ್ಕಿದ ಸಂಸಾರಮಾಯದ ವಿಗಡ ಸರ್ವರ ಬಾಯಂ ಟೊಣೆದೆ ಹೋಯಿತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಬೆಟ್ಟದಷ್ಟು ಕರ್ಮವುಳ್ಳರೆ ಬೊಟ್ಟಿನಷ್ಟು ಶ್ರೀವಿಭೂತಿಯ ಧರಿಸಲು ಬಟ್ಟಬಯಲಾಗಿ ದುರಿತನ್ಯಾಯ ದೆಸೆಗೆಟ್ಟು ಓಡುವವು. ನೈಷೆ*ಯುಳ್ಳ ಶ್ರೀವಿಭೂತಿ ಧರಿಸಿಪ್ಪ ಸದ್ಭಕ್ತಂಗೆ ಕಾಲಮೃತ್ಯು, ಅಪಮೃತ್ಯು, ಮಾರಿಗಳೆಂಬವು ಮುಟ್ಟಲಮ್ಮವು. ಬ್ರಹ್ಮರಾಕ್ಷಸ ಪ್ರೇತ ಪಿಶಾಚಿಗಳು ಬಿಟ್ಟೋಡುವವು ಶ್ರೀವಿಭೂತಿಯ ಕಾಣುತ್ತಲೆ. ಮಂತ್ರ ಸರ್ವಕೆಲ್ಲ ಶ್ರೀವಿಭೂತಿಯಧಿಕ ನೋಡಾ. ಯಂತ್ರ ಸರ್ವಕೆಲ್ಲ ಶ್ರೀವಿಭೂತಿ ಅಧಿಕ ನೋಡಾ. ಸರ್ವ ಜಪತಪನೇಮ ನಿತ್ಯ ಹೋಮ ಗಂಗಾಸ್ನಾನ ಅನುಷಾ*ನವೆಲ್ಲಕೆಯಾ ಶ್ರೀವಿಭೂತಿ ಅಧಿಕ ನೋಡಾ. ಸರ್ವಕ್ರಿಯೆಗೆ ಶ್ರೀ ವಿಭೂತಿಯಧಿಕ ನೋಡಾ. ಸರ್ವವಶ್ಯಕೆ ಶ್ರೀವಿಭೂತಿಯಧಿಕ ನೋಡಾ. ಶ್ರೀ ವಿಭೂತಿಯಿಲ್ಲದಲಾವ ಕಾರ್ಯವೂ ಸಾಧ್ಯವಾಗದು. ಶ್ರೀವಿಭೂತಿ ವೃಷಭಾಕಾರ, ಶ್ರೀವಿಭೂತಿ ಚಿದಂಗ. ಸಾಕ್ಷಿ :``ಅನಾದಿ ಶಾಶ್ವತಂ ನಿತ್ಯಂ ಚೈತನ್ಯಂ ಚಿತ್ಸ್ವರೂಪಕಂ | ಚಿದಂಗಂ ಋಷಭಾಕಾರಂ ಚಿದ್ಭಸ್ಮ ಲಿಂಗಧಾರಣಂ ||'' ಎಂದೆಂಬ ಶ್ರೀವಿಭೂತಿಯ ಸಂದುಸಂದು ಅವಯವಂಗಳು ರೋಮ ರೋಮ ಅಪಾದಮಸ್ತಕ ಪರಿಯಂತರದಲ್ಲು ಧರಿಸಿ ಶಿವದೇಹಿಯಾದೆನು ನೋಡಾ. ಅದು ಎಂತೆಂದರೆ : ಸಾಕ್ಷಿ :``ಅಪಾದಮಸ್ತಕಾಂತಂ ಚ ರೋಮಾದೌ ಭವತೇ ಶಿವಃ | ಸ್ವಕಾಯಮುಚ್ಯತೇ ಲಿಂಗಂ ವಿಭೂತ್ಯೂದ್ಧೂಳನಾದ್ ಭವೇತ್ ||'' ಹೀಗೆಂಬ ವಿಭೂತಿಯ ಧರಿಸಿ, ಭವಸಾಗರವ ದಾಟಿ ನಿತ್ಯನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ