ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಷ್ಟಲಿಂಗದ ವೀರಶೈವ, ಪ್ರಾಣಲಿಂಗದ ವೀರಶೈವ, ಭಾವಲಿಂಗದ ವೀರಶೈವ. ತ್ರಿವಿಧ ಲಿಂಗದಲ್ಲಿ ನೈಷ್ಠೆವರಿಯಾದ ಶರಣನ ನೀವು ನೋಡಣ್ಣ. ಇಷ್ಟಲಿಂಗವ ಕಾಯಕರದಲ್ಲಿ ಹಿಡಿದ ಮೇಲೆ ಅನ್ಯದೈವಕೆ ತಲೆವಾಗದ ವೀರಶೈವಬೇಕು ಭಕ್ತಂಗೆ, ಮನದ ಕೈಯಲ್ಲಿ ಪ್ರಾಣಲಿಂಗವ ಹಿಡಿದ ಮೇಲೆ ಮಾಯಾ [ಮೋಹನಿರಸನೆಯಾಗಿ]ರುವ ವೀರಶೈವಬೇಕು ಭಕ್ತಂಗೆ. ಭಾವದ ಕೈಯಲ್ಲಿ ಭಾವಲಿಂಗವ ಹಿಡಿದ ಮೇಲೆ ಪರಧನ ಪರವಧು ಪರಾನ್ನವ ಬಯಸದ ವೀರಶೈವಬೇಕು ಭಕ್ತಂಗೆ. ಇಂತೀ ತ್ರಿವಿಧಲಿಂಗದ ವೀರಶೈವದೊಳಿಂಬುಗೊಂಡ ತ್ರಿಕರಣಶುದ್ಧವಾದ ತ್ರಿವಿಧಸಂಪನ್ನ ಶರಣಂಗೆ ನಮೋ ನಮೋಯೆಂದು ಬದುಕಿದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಇಂದ್ರನ ಮೈಯ ಯೋನಿಯ ಮಾಡಿತ್ತು ಮಾಯೆ. ಬ್ರಹ್ಮನ ತಲೆಯ ಕಳೆಯಿತ್ತು ಮಾಯೆ. ವಿಷ್ಣುವಿನ ಕಷ್ಟಬಡಿಸಿತ್ತು ಮಾಯೆ. ಚಂದ್ರನ ಕ್ಷಯರೋಗಿಯ ಮಾಡಿತ್ತು ಮಾಯೆ. ರವಿಯ ಕೊಷ*ನ ಮಾಡಿತ್ತು ಮಾಯೆ. ಈ ಮಾಯೆಯೆಂಬ ವಿಧಿ ಆರಾರನೂ ಕೆಡಿಸಿತ್ತು ನೋಡ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಇ[ರಿ]ವಾಕಳದೆರಡು ಕೋಡು ಧರೆಯಾಕಾಶಕ್ಕೆ ಬೆಳೆದಿಪ್ಪುದ ಕಂಡೆನು ಆಕಳಕೊಂಬಿನ ಭಯಕೆ ರಂಭೆಯರು ಅಮೃತವ ತೊರೆಗಿಳಿಸಲಾರದೆ ಕರೆವ ಮಗಿಯೊಳಡಗುವುದ ಕಂಡೆನು. ಕೊಂಬ ಮುರಿದು, ಗೋವ ತುರಿಸಿ, ರಂಭೆಯರು ಕರೆದ ಅಮೃತವ ದಣಿಯಲುಂಡು ನಿಸ್ಸಂಸಾರಿಯಾಗಿಪ್ಪರ ತೋರಿ ಬದುಕಿಸು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಇನ್ನೇವೆ ಇನ್ನೇವೆನಯ್ಯಾ ? ಸಂಸಾರಕೂಪದ ನೆಲೆಯಿಲ್ಲದ ಜಲದೊಳು ಎನ್ನ ಕೆಡವಿದೆ. ನೆಲೆಗಾಣದೆ ಹಲವು ದೆಸೆಗೆ ಹಂಬಲಿಸಿ ಮುಳುಮುಳುಗಿ ಏಳುತ್ತಿದ್ದೆನಯ್ಯಾ. `ಸಂಸಾರಕೂಪಜಲಮುಚ್ಯತೇ' ಎಂದುದಾಗಿ ಈ ಸಂಸಾರವೆಂಬ ಬಾವಿಯ ಜಲದೊಳು ಮುಳುಗಿರುವಂಗೆ ದುರಿತಸಂಹರವೆಂಬ ತೊಟ್ಟಿಲಿಂಗೆ, ಕರುಣಾಕೃಪೆಯೆಂಬ ಸೇದೆಯ ಹಗ್ಗವ ಕಟ್ಟಿ ಇಳಿವಿಟ್ಟು ಎನ್ನನೆಳೆತೆಗೆದು ಕಾಯೊ ಕಾಯೊ ನಿಮ್ಮ ಧರ್ಮ ನಿಮ್ಮ ಧರ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಇಷ್ಟಲಿಂಗವ ಮರೆದು ಬರಿಯ ಕಲ್ಲಿಗೆರಗುವ ಭ್ರಷ್ಟಂಗಿನ್ನೆಲ್ಲಿಯ ಶಿವಾಚಾರವಯ್ಯಾ ! ಖಡ್ಗವ ಬಿಟ್ಟು ಕೋಲುವಿಡಿದು ಕಾಳಗವ ಮಾಡಿದರೆ ತಲೆ ಹೋಗುವುದನರಿಯಾ ಮನುಜ. ಲಿಂಗವ ಬಿಟ್ಟು ಅನ್ಯಲಿಂಗವ ಪೂಜೆಮಾಡಿದರೆ ನರಕವೆಂಬುದನರಿಯಾ ಪಾಪಿ. ಸಾಕ್ಷಿ :``ಇಷ್ಟಲಿಂಗೇ ಪರೇತ್ ಚ ಭಾವಾದನ್ಯತ್ರ ಗಚ್ಛತಿ | ಸ ಕಿಲ್ಬಿಷಮವಾಪ್ನೋತಿ ಪೂಜಯನ್ ನಿಃಫಲೋ ಭವೇತ್||'' ಎಂಬ ವಚನವನರಿಯದೆ ಮುಂದುಗಾಣದನ್ಯದೈವಕೆರಗುವ ಅಂಧಕರಿಗೆಂದೆಂದು ಭವಹಿಂಗದೆಂದಾತ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ