ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶ್ರೀಪಂಚಾಕ್ಷರಿಯ ಮೂಲದ ಹೊಲಬ ತಿಳಿಯಬಲ್ಲಾತನೆ ವೇದಾಂತವಬಲ್ಲಾತನೆಂಬೆ. ಶ್ರೀಪಂಚಾಕ್ಷರಿಯ ಮೂಲದ ಹೊಲಬ ತಿಳಿಯಬಲ್ಲಾತನೆ ಸಿದ್ಧಾಂತವ ಬಲ್ಲಾತನೆಂಬೆ. ಶ್ರೀಪಂಚಾಕ್ಷರಿಯ ಮೂಲವ ಬಲ್ಲಾತನೆ ವೇದ ಶಾಸ್ತ್ರ ಪುರಾಣ ಆಗಮವ ಬಲ್ಲಾತನೆಂಬೆ. ಶ್ರೀಪಂಚಾಕ್ಷರಿಯ ಧ್ಯಾನವ ಧ್ಯಾನಿಸಲರಿಯದೆ ವೇದಾಗಮವನೋದುತ್ತಿದ್ದೆವೆಂಬ ಪಿಸುಣರ ಓದೆಲ್ಲ ಕುಂಬಿಯ ಮೇಲೆ ಕುಳಿತು ಒದರುವ ವಾಯಸನಸರಿಯೆಂಬೆನಯ್ಯಾ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಶಕ್ತಿ ಸಾಧನೆಯ ಸಾದ್ಥಿಸಿ, ಆನೆ ಸೇನೆ ತಳತಂತ್ರ ಮಾರ್ಬಲ ಅಲಗು ಈಟೆಯ ಮೊನೆ ಹಿಡಿದು ಕಾದುವರುಂಟೆ ? ಮಂತ್ರಿ ಮನ್ನೆಯ ಬಂಟರೆಲ್ಲರು ರಣದೊಳಗೆ ಕಾದಿ ಗೆಲ್ವರಲ್ಲದೆ. ಮಾಯಾಪಾಶವೆಂಬ ರಾಕ್ಷಿ, ಕರಣಗುಣವೆಂಬ ಭೂತಗಳ ಕೂಡಿಕೊಂಡು, ಭೂಮಂಡಲ ಹತಮಾಡುತ, ತಿಂದು ತೇಗುತ ಬರುತಿದೆ. ಮಾಯಾರಣ್ಯವ ಕಾದಿ ಗೆಲುವರನಾರನೂ ಕಾಣೆ ಎನ್ನಾಳ್ದ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಶಿವ ಗುರುವೆಂದು ನಂಬಿಪ್ಪಾತನೆ ಶಿವಭಕ್ತ. ಶಿವ ಲಿಂಗವೆಂದು ನಂಬಿಪ್ಪಾತನೆ ಶಿವಭಕ್ತ. ಶಿವ ಜಂಗಮವೆಂದು ನಂಬಿಪ್ಪಾತನೆ ಶಿವಭಕ್ತ. ಶಿವ ಪಾದೋದಕ ಪ್ರಸಾದವೆಂದು ನಂಬಿಪ್ಪಾತನೆ ಶಿವಭಕ್ತ. ಗುರುಲಿಂಗಜಂಗಮದ ಪಾದೋದಕ ಪ್ರಸಾದದ ಬಂದ ಬಟ್ಟೆಯನರಿಯದೆ ಬರಿದೆ ಭಕ್ತರೆಂದು ಅನ್ಯವನಾಶ್ರಯಿಸಿ ಅನ್ಯದೈವಕೆರಗುವ ಕುನ್ನಿಮಾನವರನೆಂತು ಭಕ್ತರೆಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಶೂಲದ ಮೇಲಣ ಕುಣಪಂಗಳು ತಾಳು ತಾಳಮರದ ಮೇಲೆ ಕುಣಿವುದ ಕಂಡೆನು. ಏಳು ಸಮುದ್ರದೊಳಿಪ್ಪ ಕಪ್ಪೆಯಧ್ವನಿ ಮೂರುಲೋಕ ಕೇಳಿಸುವುದ ಕಂಡೆನು. ಹೆಣನ ತಿನಬಂದ ನಾಯಿ ಕಪ್ಪೆಯ ಗೆಣೆತನದಿಂದ ಅಲಗಿನ ಮೇಲೆ ಅಡಿ ಇಡುವುದ ಕಂಡೆನು. ಇದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ !
--------------
ಹೇಮಗಲ್ಲ ಹಂಪ
ಶೈವರು ಕಟ್ಟಿದ ಗುಡಿಯ ಹೊಗದ ಭಾಷೆ, ಶೈವರು ನಟ್ಟ ಲಿಂಗವ ಪೂಜಿಸದ ಭಾಷೆಯ ವಿವರವನೆನಗೆ ಪಾಲಿಸಯ್ಯಾ ! ದೇಹದ ದೇವಾಲಯದ ಮಧ್ಯದಲ್ಲಿ ಭಾವಿಸುತಿಪ್ಪ ಶಿವಲಿಂಗದ ಗೊತ್ತಿನ ಸುಖದ ಪರಿಣಾಮದ ಭಕ್ತಿಯ ನಿರಾವಲಂಬವನೆನಗೆ ಕೃಪೆಮಾಡಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬ ಪಂಚೇಂದ್ರಿಯಂಗಳು. ಸಾಕ್ಷಿ :``ಶ್ರೋತ್ರತ್ವಕ್‍ನೇತ್ರಜಿಹ್ವಾಶ್ಚ ಘ್ರಾಣಂ ಪಂಚೇಂದ್ರಿಯಾಸ್ತಥಾ | ಆಕಾಶ ಅಗ್ನಿವಾರ್ಯುಶ್ಚ ಅಪ್‍ಪೃಥ್ವೀ ಕ್ರಮೇಣ ಚ ||'' ಎಂದುದಾಗಿ, ಇವಕ್ಕೆ ವಿವರ : ಶ್ರೋತ್ರೇಂದ್ರಿಯಕ್ಕೆ ಆಕಾಶವೆಂಬ ಮಹಾಭೂತ, ದಶದಿಕ್ಕುಗಳೆ ಅಧಿದೈವ, ಅದಕ್ಕೆ ಶಬ್ದ ವಿಷಯ. ಅಕ್ಷರಾತ್ಮಕ ಅನಕ್ಷರಾತ್ಮಕ ಇವು ಎರಡು ಅಕ್ಷರ ಭೇದ. ತ್ವಗಿಂದ್ರಿಯಕ್ಕೆ ವಾಯುವೆಂಬ ಮಹಾಭೂತ, ಚಂದ್ರನಧಿದೇವತೆ ಅದಕ್ಕೆ ಸ್ಪರುಶನ ವಿಷಯ ; ಮೃದು ಕಠಿಣ ಶೀತ ಉಷ್ಣ ಇವು ನಾಲ್ಕು ಸ್ಪರುಶನ ಭೇದ. ನೇತ್ರೇಂದ್ರಿಯಕ್ಕೆ ಅಗ್ನಿಯೆಂಬ ಮಹಾಭೂತ, ಸೂರ್ಯನಧಿದೇವತೆ. ಅದಕ್ಕೆ ರೂಪ ವಿಷಯ ; ಶ್ವೇತಪೀತ ಹರಿತ ಮಾಂಜಿಷ್ಟ ಕೃಷ್ಣ ಕಪೋತವರ್ಣ ಇವಾರು ರೂಪಭೇದ. ಜಿಹ್ವೇಂದ್ರಿಯಕ್ಕೆ ಅಪ್ಪುವೆಂಬ ಮಹಾಭೂತ, ವರುಣನಧಿದೇವತೆ. ಅದಕ್ಕೆ ರಸ ವಿಷಯ ; ಮಧುರ ಆಮ್ಲ ತಿಕ್ತ ಕಟು ಕಷಾಯ ಲವಣ ಇವಾರು ರಸಭೇದ. ಘ್ರಾಣೇಂದ್ರಿಯಕ್ಕೆ ಪೃಥ್ವಿಯೆಂಬ ಮಹಾಭೂತ. ಅಶ್ವಿನಿ ಅಧಿದೇವತೆ, ಇದಕ್ಕೆ ಗಂಧ ವಿಷಯ ; ಸುಗಂಧ ದುರ್ಗಂಧವೆರಡು ಗಂಧ ಭೇದ. ಇಂತೀ ಪಂಚೇಂದ್ರಿಯೆಂಬ ಶುನಕ ಕಂಡಕಡೆಗೆ ಹರಿಯುತಿವೆ. ಈ ಪಂಚೇಂದ್ರಿಯವ ನಿರಸನವ ಮಾಡಿ, ಪಂಚವದನನೊಳು ಬೆರದಿಪ್ಪ ನಿರ್ವಂಚಕ ಶರಣಂಗೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಶಿವಾಚಾರಸಂಪನ್ನನಾಗಿ ಶಿವಭಕ್ತನೆನಿಸಿಕೊಂಡು ಶಿವಲಿಂಗವು ಕರಸ್ಥಲ ಉರಸ್ಥಲ ಶಿರಸ್ಥಲದಲ್ಲಿರುತಿರೆ ಅದ ಮರೆದು, ಹಲವು ದೇವರ ಪೂಜೆಮಾಡಿ, ಹಲವು ದೇವರ ಬಳಿಯಲ್ಲಿ ನೀರ ಕುಡಿದು, ಹಲವು ದೇವರ ನೈವೇದ್ಯವ ತಿಂಬ ಹೊಲೆಯನ ಶಿವಭಕ್ತನೆನಬಹುದೆ ? ಎನಲಾಗದು. ಅದೇನು ಕಾರಣವೆಂದಡೆ, ಅದಕ್ಕೆ ಸಾಕ್ಷಿ : ``ಶಿವಾಚಾರೇಣ ಸಂಪನ್ನಃ ಪ್ರಸಾದಂ ಭುಂಜತೇ ಯದಿ | ಅಪ್ರಸಾದೀ ಅನಾಚಾರೀ ಸರ್ವಭಕ್ತಶ್ಚ ವಾಯಸಃ ||'' ಎಂಬುದನರಿಯದೆ, ಮತ್ತೆ ಕೇಳು ಗ್ರಂಥ ಸಾಕ್ಷಿಯ ಮನುಜ : ಸಾಕ್ಷಿ :``ಲಿಂಗಾರ್ಚನೈಕ ಪರಾಣಾಂ ಅನ್ಯದೈವಂತು ಪೂಜನಂ | ಶ್ವಾನಯೋನಿಶತಂ ಗತ್ವಾ ರೌರವಂ ನರಕಂ ವ್ರಜೇತ್ ||'' ಎಂಬುದನರಿಯದೆ, ಮತ್ತೆ ಮೇಣ್, ಸಾಕ್ಷಿ :``ಶಿವಲಿಂಗಂ ಪರಿತ್ಯಜ್ಯ ಅನ್ಯದೈವಮುಪಾಸತೇ | ಪ್ರಸಾದಂ ನಿಷ್ಫಲಂ ಚೈವ ರೌರವಂ ನರಕಂ ವ್ರಜೇತ್ ||'' ಹೀಗೆಂಬುದನರಿಯದೆ, ಲಿಂಗವಿದ್ದು ಅನ್ಯದೈವಂಗಳಿಗೆರಗಿ, ಆಚಾರಭ್ರಷ್ಟನಾಗಿ ಪಾದೋದಕ ಪ್ರಸಾದವ ಕೊಂಡರೆ ಎಂದೆಂದಿಗೂ ಭವಹಿಂಗದು. ಅದೇನುಕಾರಣ ಹಿಂಗದೆಂದರೆ ಹೇಳುವೆ ಕೇಳಿರಣ್ಣಾ : ಹೆಗ್ಗಣವನೊಳ ಹೋಗಿಸಿ ನೆಲಗಟ್ಟ ಹೊರೆದಂತೆ, ಅನ್ಯಕೆ ಹರಿವ ದುರ್ಗುಣವ ಕೆಡೆಮೆಟ್ಟದೆ ಶಿವಭಕ್ತರೆಂದೆಂದು ನುಡಿದುಕೊಂಡು ನಡೆದರೆ, ಹಂದಿ ನಾಯಿ ನರಿ ವಾಯಸನ ಜನ್ಮ ತಪ್ಪದೆಂದಾತ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಶ್ರೀ ಪಂಚಾಕ್ಷರಿಯುಳ್ಳ ಅಗ್ರಜ ವಿಪ್ರನಿಂದಧಿಕ ನೋಡಾ ! ಶ್ರೀ ಪಂಚಾಕ್ಷರಿಯುಳ್ಳ ಅಂತ್ಯಜ ವಿಪ್ರನಿಂದಧಿಕ ನೋಡಾ ! ಶ್ರೀ ಪಂಚಾಕ್ಷರಿಯನಾವಾತನಾದರೂ ನೆನೆದರೆ ರುದ್ರನಪ್ಪುದು ತಪ್ಪದು ನೋಡಾ ಅಯ್ಯಾ ! ಅದೆಂತೆಂದರೆ : ಸಾಕ್ಷಿ : ``ಅಗ್ರಜೋ ಅಂತ್ಯಜೋ ವಾಪಿ ಮೂರ್ಖೋವಾ ಪಂಡಿತೋý ಪಿವಾ | ಜಪೇತ್ ಪಂಚಾಕ್ಷರೀಂ ನಿತ್ಯಂ ಸ ರುದ್ರೋ ನಾತ್ರ ಸಂಶಯಃ ||'' ಎಂದಿತ್ತು ದೃಷ್ಟ. `ಓಂ ನಮಃ ಶಿವಾಯಃ' ಯೆಂಬ ಆರಕ್ಷರವ ನೆನೆಯಲರಿಯದೆ ಜಪ ತಪ ನೇಮ ನಿತ್ಯ ಅನುಷಾ*ನ ಪೂಜೆಗಳೆಲ್ಲ ನಿಷ್ಫಲವೆಂದಿತ್ತು ರಹಸ್ಯದಲ್ಲಿ. ಸಾಕ್ಷಿ :``ಷಡಕ್ಷರಮಿದಂ ಖ್ಯಾತಂ ಷಡಾನನಂ ಷಡನ್ವಿತಂ | ಷಡ್ವಿಧಂಯೋನ ಜಾನಾತಿ ಪೂಜಾಯಾಂ ನಿಃಫಲಂ [ಭವೇತ್]'' ಎಂಬ ಷಡಕ್ಷರಿಯ ಸಂಭ್ರಮದಲ್ಲಿ ನೆನೆದು, ಭವಾಂಬೋಧಿಯ ದಾಂಟಿ, ಸ್ವಯಂಭುವಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಶಿಲೆ ಮೌಕ್ತಿಕ ಪದ್ಮಾಕ್ಷಿ ಸುವರ್ಣ ಸಲೆ ಪುತ್ರಂಜಿ ಮೊದಲಾದ ಇಂತಿವರಲ್ಲಿ ಜಪವ ಮಾಡಿದರೆ ಒಂದೊಂದಕೊಂದು ಫಲವಿಹುದು. ಶ್ರೀ ರುದ್ರಾಕ್ಷಿಯ ಧರಿಸಲು ಅನಂತಫಲವೆಂದಿತ್ತು ಪೌರಾಣ. ಸಾಕ್ಷಿ : ``ಅಂಗುಲೀ ಜಪಸಂಖ್ಯಾಭಿರೇಕೈಕಾಂತು ವರಾನನೇ | ರೇಖಾಯಾಷ್ಟಗುಣಂ ಪ್ರೋಕ್ತಂ ಪುತ್ರಜೀವಿಪಲೈರ್ದಶ ||'' ಎಂದುದಾಗಿ, ``ಶಂಖೆಶ್ಶತಗುಣವಿಂದ್ಯಾತ್ಪ್ರವಾಳಸ್ತು ಸಹಸ್ರಕಂ | ಸ್ಫಟಿಕೈರ್ದಶಸಾಹಸ್ರಂ ಮೌಕ್ತಕಂ ಲಕ್ಷಮೇವ ಚ ||'' ಎಂದುದಾಗಿ, ``ಪದ್ಮಾಕ್ಷಿರ್ದಶಲಕ್ಷಂತು ಸುವರ್ಣಕೋಟಿರುಚ್ಯತೇ | ದಶಕೋಟಿ ಕುಶದ್ರಾಂತೆ ರುದ್ರಾಕ್ಷಿಯನಂತ ಫಲ ||'' (?) ಎಂದೆನಿಸುವ ರುದ್ರಾಕ್ಷಿಯ ಧರಿಸಿ ರುದ್ರನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಶಿವಂಗೂ ಶಿವಭಕ್ತಂಗೂ ಭಿನ್ನವುಂಟೇ ? ಇಲ್ಲ. ಅದೇನು ಕಾರಣವೆಂದರೆ ಪ್ರಸಾರವ ಮಾಡಿ ಹೇಳುವೆ ಕೇಳಿರಣ್ಣಾ . ವೃಕ್ಷಕ್ಕೂ ವೃಕ್ಷದಿಂದಾದ ಫಲಕ್ಕೂ ಭಿನ್ನವುಂಟೇ ? ಇಲ್ಲ. ಅಗ್ನಿಗೂ ಅಗ್ನಿಯಿಂದಾದ ಕಳೆಗೂ ಭಿನ್ನವುಂಟೇ? ಇಲ್ಲ. ಚಂದ್ರ[ಂಗೂ] ಚಂದ್ರನಿಂದಾದ ಕಳೆಗೂ ಭಿನ್ನವುಂಟೇ ? ಇಲ್ಲ. ಶಿವಂಗೂ ಶಿವನಿಂದಾದ ಭಕ್ತಂಗೂ ದೇಹ ಪ್ರಾಣದ ಹಾಗೆ. ಆದ ಕಾರಣ ಭಕ್ತಗಣ ಶೋಡಷಗಣ ದಶಗಣಂಗಳು ಮುಖ್ಯವಾದ ಏಳನೂರಾ ಎಪ್ಪತ್ತು ಅಮರಗಣಂಗಳೆಲ್ಲ ಬಸವಣ್ಣನಿಂದ ಮೋಕ್ಷಪಡೆದರು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಶಿರದೊಳು ಧರಿಸಲು ಕೋಟಿ ಫಲ ಕರ್ಣದೊಳು ಧರಿಸಲು ದಶಕೋಟಿ ಫಲ ಕೊರಳೊಳು ಧರಿಸಲು ಶತಕೋಟಿ ಫಲ. ಬಾಹುವಿನೊಳು ಧರಿಸಲು ಸಾವಿರ ಫಲವೆಂದಿಹುದು ದೃಷ್ಟ. ಸಾಕ್ಷಿ : ``ಶಿರಸಾ ಧಾರಣಾತ್ಕೋಟಿ ಕರ್ಣಯೋರ್ದಶಕೋಟಿ ಚ | ಶತಂ ಕೋಟಿ ಗಳೇ ಬದ್ಧಂ ಸಾಹಸ್ರಂ ಬಾಹುಧಾರಣಾತ್ ||'' ಎಂದುದಾಗಿ, ಹಸ್ತ ಬಾಹು ಉರ ಕಂಠ ಕರ್ಣ ಮಸ್ತಕದಲ್ಲಿ ಶ್ರೀ ರುದ್ರಾಕ್ಷಿಯ ಧರಿಸಿ ನಿತ್ಯ ಮುಕ್ತನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಶಿವಪೂಜೆಯ ಮಾಡುತಿದ್ದೆನೆಂಬ ಅಣ್ಣಗಳು ನೀವು ಕೇಳಿರೊ. ಶಿವ ಮಹೇಶ್ವರರುಗಳು ಗೃಹದ ಮುಂದೆ ಬಂದು ಲಿಂಗಾರ್ಪಿತವೆಂಬ ಶಬ್ದವಿಡಲು, ಜಪವ ಮಾಡುತ ನಾನೇಳಬಾರದೆಂದು ಬೆಬ್ಬನೆ ಬೆರತು, ಅಹಂಕಾರದಲ್ಲಿ ಸತಿ ಸುತರುಗಳ ಕೈಯಲ್ಲಿ ಬಿನ್ನಹವ ಮಾಡಿಸದೆ, ತಾನೆ ಭಕ್ತಿಕಿಂಕುರ್ವಾಣದಿಂದೆದ್ದು ಭಸ್ಮಾಂಗಿಗಳಿಗೆ ಆಸನವ ಕೊಟ್ಟು, ಮಾಡುವ ನಡೆನುಡಿಯು ಒಂದೇ ಆದರೆ, ಮೃಡಬೇರೆ ಒಂದೆ ಕಡೆ [ಇರದೆ ಇವರೊ]ಡಲೊಳಿಪ್ಪನು ಕಾಣಿರೋ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಶರಧಿಯನಾರಾಧಿಸಿದರೆ ಹವಳ ಮೌಕ್ತಿಕಗಳನೀವುದು ನೋಡಾ ! ಗಿರಿಯನಾರಾಧಿಸಿದರೆ ಬಯಸಿದ ಮೂಲಿಕೆಗಳನೀವುದು ನೋಡಾ ! ಗುರುವನಾರಾಧಿಸಿದರೆ ಗುರುಕರುಣ ಜಲಸಮುದ್ರದ ತೆರೆಯೊಳು ಲಿಂಗವೆಂಬ ಸುವಸ್ತುವನೊಗೆಯಿತ್ತು ನೋಡಾ ! ಆ ಲಿಂಗ ಎನ್ನ ಸೋಂಕಿ, ಅಂಗ ಚಿನ್ನವಾಗಿ, ಲಿಂಗವ ಪೂಜಿಸಿ ಭವಂಗಳ ದಾಂಟಿ ನಿರ್ಭವನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಶ್ರೀ ವಿಭೂತಿಯಿಲ್ಲದವನ ಹಣೆಯ ಸುಡುಯೆಂದಿತ್ತು ಪೌರಾಣ. ಶಿವಾಲಯವಿಲ್ಲದ ಗ್ರಾಮವ ಸುಡುಯೆಂದಿತ್ತು ಪೌರಾಣ. ಶಿವಾರ್ಚನೆಯಿಲ್ಲದವನ ಜನ್ಮವ ಸುಡುಯೆಂದಿತ್ತು ಪೌರಾಣ. ಶ್ರೀ ಶಿವಸ್ತುತಿಯಿಲ್ಲದವನ ಆಗಮವ ಸುಡುಯೆಂದಿತ್ತು ಪೌರಾಣ. ಅದು ಎಂತೆಂದರೆ : ಸಾಕ್ಷಿ :``ಧಿಗ್ ಭಸ್ಮರಹಿತಂ ಭಾಳಂ ಧಿಗ್ ಗ್ರಾಮಮಶಿವಾಲಯಂ | ಧಿಗ್ ಗನೀಶ್ರಾಶ್ರಿತಂ ಜನ್ಮ ಧಿಗ್‍ವಿದ್ಯಾಮಶಿವಾಶ್ರಯಾಂ ||'' ಎಂದುದಾಗಿ, ಎಲ್ಲಿ ಲಿಂಗಾರ್ಚನೆಯಿಲ್ಲ, ಎಲ್ಲಿ ತ್ರಿಪುಂಡ್ರವಿಲ್ಲ, ಎಲ್ಲಿ ರುದ್ರಜಪವಿಲ್ಲ ಅವನ ಮನೆ ಹೊಲೆಮಾದಿಗನ ಮನೆಯ ಸರಿಯೆಂದಿತ್ತು ಪೌರಾಣ. ಅದು ಎಂತೆಂದರೆ : ಸಾಕ್ಷಿ :``ಯತ್ರ ಲಿಂಗಾರ್ಚನಂ ನಾಸ್ತಿ | ನಾಸ್ತಿ ಯತ್ರ ತ್ರಿಪುಂಡ್ರಕಂ | ಯತ್ರ ರುದ್ರ ಜಪಂ ನಾಸ್ತಿ | ತತ್‍ಚಾಂಡಾಲ ಗುರೋರ್ಗೃಹಂ ||'' ಹೀಗೆಂಬುದನರಿಯದೆ ವಾಗದ್ವೈತದಿಂದ ಶ್ರೀವಿಭೂತಿಯ ಪೂಸದೆ, ಶ್ರೀರುದ್ರಾಕ್ಷಿಯ ಧರಿಸದೆ, ಶಿವಲಿಂಗದ ಪೂಜೆಯನನುದಿನ ಮಾಡದೆ, ಶಿವನಿರೂಪದಿಂದಲಾವರಣವನರಿಯದೆ, ಶಿವನ ಸಾಧಿಸೇನೆಂಬ ಅಜ್ಞಾನಿಗಳ ಕಂಡು ನಾ ಬೆರಗಾದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ