ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪುರುಷನಿಂದ ಸತಿ ಹಿರಿಯಳಾದರೂ ಆಗಲಿ, ಹಸೆಹಂದರವನಿಕ್ಕಿ ಮದುವೆಯ ಮಾಡಿದ ಮೇಲೆ ಪುರುಷನಿಂದ ಕಿರಿಯಳು ನೋಡಾ. ಗುರುವಿಗಿಂದ ಶಿಷ್ಯ ಅರುಹುಳ್ಳಾತನಾದರೂ ಆಗಲಿ, ಶಿಷ್ಯನ ಭಾವಕ್ಕೆ ಗುರು ಅದ್ಥಿಕ ನೋಡಾ. ನಾನರುಹುಳ್ಳಾತ, ಗುರುವಿಗರುಹುವಿಲ್ಲೆಂದು ಜರೆದು ನುಡಿವ ನುಡಿ ಅಂಗದೊಳು ಹೊಳೆದರೆ ಕುಂಬ್ಥಿನಿಯ ಪಾಪದೊಳಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪಲ್ಲ :ಬಂಧನ ಸಂಸಾರದಂದುಗದ ದಾಳಿಯಲ್ಲಿ ನೊಂದು ಬೆಂದೆನೊ ಎನ್ನ ಹುಯ್ಲು ತಂಬಿಸು ಗುರುವೆ ಭವಹರ ನಿತ್ಯನಿರ್ಮಳಾತ್ಮಕ ಶಂಭುವೆ. ಪದ :ಹಲವು ಜನ್ಮದಿ ಹುಟ್ಟಿ ಹಲವಾಹಾರವನುಂಡು ಹಲವು ಭೂಮಿಯ ಮೆಟ್ಟಿ ಹಲವು ಕರ್ಮವ ಕಂಡು ಹಲವು ಭವಕೀಡಾಗಿ ಹಲವು ಹಂಬಲಿಸುತಿರುವ ಹೊಲೆಜನ್ಮ ಸಂಸಾರ ಮಾಯಾರಕ್ಕಸಿ ತುಡುರೆ ನಿಲ್ಲಲಾರದಲಿ ನಿಮ್ಮ ಮರೆಹೊಕ್ಕೆ ಎನ್ನ ಕೊಡದೆ ಗೆಲಿದುಕೊ ದುರಿತಹರ ಕರುಣಾಳು ಪರಮಗುರುವೆ. | 1 | ಸಟೆ ಠಕ್ಕು ಠೌಳಿ ಅಟಮಟದ ಬಂಧನದ ಕುಟಿಲಸಂಸಾರಸಾಗರದ ತೊರೆನೆರೆಗಳೊಳು ಪುಟನೆಗೆದು ತಲೆ ಮುಣುಗುತಲಿರುವನ ಕಂಡು ನಿಟಿಲಾಕ್ಷ ಕೃಪೆಯೆಂಬ ಹಡಗವನು ತಂದೊಲಿ ತಟಕೆನ್ನನೆಳೆದು ತಗೆದೀಗ ಇನಿತಾತ್ಮ ಘಟದೊಳಗೆ ಜ್ಞಾನಜ್ಯೋತಿಯ ತೀವು ಪರಮಗುರುವೆ. | 2 | ರಸವಿಷಯ ಮೋಹನದ ಕೂಪಜಲದೊಳು ಮುಳುಗಿ ದೆಸೆದೆಸೆಗೆ ಚಾಲಿವರಿವನ ಕಂಡು ಬೇಗದಲಿ ವಿಷಕಂಠ ದುರಿತಸಂಹರ ಕರುಣಾಕರ ತೊಟ್ಟಿಲಿಗೆ ಎಸೆವ ಹಗ್ಗವ ಕಟ್ಟಿ ಎಳೆದು ತಗೆಯೆನ್ನ ರಂ ಬಿಸುತ ಸಂತೈಸಿ ದುಃಖದಲ್ಲಿ ಭೋರ್ಗರೆದಳುವ ಶಿಶುವ ಬೋಳೈಸುವಂದದಲೆನ್ನ ಬೋಳೈಸು ಅಸಮಾಕ್ಷ ಪರಮಗುರುವೆ.| 3 | ತೆರಣಿಯ ಹುಳು ನೂಲು ಸುತ್ತಿಕೊಂಡು ಎಸೆವ ತೆರದಿ ಈ ಸಂಸಾರ ಸುಖದುಃಖ ಎನ್ನನು ಸುತ್ತಿ ಪರಿಭವಕ್ಕೆ ಗುರಿಯಾಗಿ ಯೋನಿಯಂತ್ರದೆ ತಿರುಗಿಯೆ ಬರುತಲಿರ್ದೆನು ಘೋರ ಅರಣ್ಯದೊಳು ಸುತ್ತಿ ಹರಹರ ನಿಮ್ಮ ಸ್ಮರಣೆಯ ಮರೆದ ಕಾರಣದಿ ದುರಿತನ್ಯಾಯದ ಬಂಧನಕೆ ಗುರಿಯಾಗಿದ್ದೆನಯ್ಯಾ ಶಿವನೆ. | 4 | ಮಾಯಾಸಂಸಾರಸರ್ಪನ ವಿಷವು ತಲೆಗೇರಿ ನೋಯುತಿದ್ದೆನು ಹಲವುವಿಧದಾಸೆಪಾಶದಲಿ ಬೇಯುವವನ ಕಂಡು ನೀ ಬೇಗಲೊಯಿದ್ಯವ ಮಾಡಿಯೆ ಶವವನುಳುವಿಕೋ ಭವರೋಗವೈದ್ಯ ನಿತ್ಯ ಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭು ನೀವಲ್ಲದೆನಗನ್ಯವಿಲ್ಲ ಕಾಯೋ ಕಾಯೋ ದೇವಾ. | 5 |
--------------
ಹೇಮಗಲ್ಲ ಹಂಪ
ಪಿಂಡಾಂಡವ ನಿರ್ಮಿಸಿದ ಶಿವನು ಆ ಪಿಂಡದೊಳು ಜ್ಞಾನವ ಆನೆ ಕಡೆ ಇರುವೆ ಮೊದಲು ಎಂಬತ್ತನಾಲ್ಕುಲಕ್ಷ ಜೀವರಾಶಿಯೊಳಗೆ ಜ್ಞಾನಚೈತನ್ಯಸ್ವರೂಪವಾಗಿಯಿದ್ದನು. ಅದಕ್ಕೆ ಸಾಕ್ಷಿ : ``ಸಕಲಜೀವ ಶಿವಚೈತನ್ಯಂ ಸಕಲ ಜಗದಾರಾಧ್ಯದೈವಂ ಸಕಲ ದೇವರೊಂದೇ ಪಿತಾ ಪರಮೇಶ್ವರಂ ನಿತ್ಯನಿತ್ಯಃ ||'' ಎಂದುದಾಗಿ, ಇದು ಕಾರಣ, ಸಕಲರಾತ್ಮಜ್ಞಾನಜ್ಯೋತಿಯಾಗಿ ನೀನೆ ಇದ್ದೆಯಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪಂಕದಲ್ಲಿ ಬಿದ್ದ ಪಶುವಿನಂತೆ, ಕಿರಾತನ ಕೈಯ ಮೃಗದಂತೆ, ಗರುಡನ ಮುಂದಿನ ಸರ್ಪನಂತೆ, ಸಿಂಹದ ಮುಂದಣ ಕರಿಯಂತೆ, ದೀಪದ ಮುಂದಣ ಪತಂಗನಂತೆ, ಪಾಪಿಯ ಕೂಸಿನಂತೆ. ಇಂತಿವೆಲ್ಲಕ್ಕೆಯೂ ಸ್ಥಿರವಿಲ್ಲದಂತೆ, ಮಾಯವೆಂಬ ರಾಕ್ಷಿಯ ಬಲೆಯಲ್ಲಿ ಸಿಲ್ಕಿ ಬಳಲುತಿರ್ದೆ. ನಿನಗನ್ಯನಾದ ಕಾರಣ ಎನಗೀ ದುರಿತ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪಂಚಾಕ್ಷರವೆ ಶಿವನ ಪಂಚಮುಖದಿಂದಲುದಯವಾಗಿ ಪಂಚತತ್ವಸ್ವರೂಪವಾಯಿತ್ತು ನೋಡಾ. ಆ ಪಂಚಸ್ವರೂಪಿಂದಲೆ ಬ್ರಹ್ಮಾಂಡ ನಿರ್ಮಿತವಾಯಿತ್ತು. ಆ ಬ್ರಹ್ಮಾಂಡದಿಂದ ಪಿಂಡಾಂಡ ನಿರ್ಮಿತವಾಯಿತ್ತು. ಅದು ಎಂತೆಂದರೆ ಹೇಳುವೆ ಕೇಳಿರಣ್ಣಾ : ಸದ್ಯೋಜಾತಮುಖದಲ್ಲಿ ನಕಾರ ಪುಟ್ಟಿತ್ತು , ಆ ನಕಾರದಿಂದ ಪೃಥ್ವಿ ಪುಟ್ಟಿತ್ತು , ವಾಮದೇವಮುಖದಲ್ಲಿ ಮಕಾರ ಪುಟ್ಟಿತ್ತು. ಆ ಮಕಾರದಿಂದ ಅಪ್ಪು ಪುಟ್ಟಿತ್ತು , ಅಘೋರಮುಖದಲ್ಲಿ ಶಿಕಾರ ಜನನ. ಆ ಶಿಕಾರದಿಂದ ಅಗ್ನಿ ಪುಟ್ಟಿತ್ತು , ತತ್ಪುರುಷಮುಖದಲ್ಲಿ ವಕಾರ ಪುಟ್ಟಿತ್ತು , ಆ ವಕಾರದಿಂದ ವಾಯು ಪುಟ್ಟಿತ್ತು , ಈಶಾನಮುಖದಲ್ಲಿ ಯಕಾರ ಜನನ, ಆ ಯಕಾರದಿಂದ ಆಕಾಶ ಹುಟ್ಟಿತ್ತು , ಈ ಪಂಚತತ್ವಸ್ವರೂಪಿಂದ ಬ್ರಹ್ಮಾಂಡ ನಿರ್ಮಿತವಾಯಿತ್ತು. ಆ ಬ್ರಹ್ಮಾಂಡದಿಂದ ಪಿಂಡಾಂಡ ನಿರ್ಮಿತವಾಯಿತ್ತು. ಹೇಗೆ ನಿರ್ಮಿತವಾಯಿತ್ತೆಂದರೆ, ಪೃಥ್ವಿ ಅಪ್ ತೇಜ ವಾಯು ಆಕಾಶವೆಂಬ ಪಂಚಭೂತಂಗಳಿಂದವೆ ಪಂಚವಿಂಶತಿತತ್ವಂಗಳುತ್ಪತ್ಯವಾದವು. ಆ ಪಂಚವಿಂಶತಿ ತತ್ವಂಗಳಿಂದವೆ ಶರೀರವಾಯಿತ್ತು. ನಕಾರದಿಂದ ಕರ್ಮೇಂದ್ರಿಯಂಗಳ ಜನನ. ಮಕಾರದಿಂದ ಪಂಚವಿಷಯಂಗಳುತ್ಪತ್ಯ. ಶಿಕಾರದಿಂದ ಬುದ್ಧೀಂದ್ರಿಯಗಳು ಜನನ. ವಕಾರದಿಂದ ಐದು ಪ್ರಾಣವಾಯುಗಳ ಜನನ. ಯಕಾರದಿಂದ ಅಂತಃಕರಣಚತುಷ್ಟಯಂಗಳು `ನಮಃ ಶಿವಾಯ' `ನಮಃ ಶಿವಾಯ'ವೆಂಬ ಪಂಚಾಕ್ಷರದಿಂದವೆ ಉತ್ಪತ್ಯವೆಂದು ಹೇಳಲ್ಪಟ್ಟಿತ್ತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪಟ್ಟವ ಕಟ್ಟಿದ ಮೇಲೆ ಲಕ್ಷಣವನರಸಲುಂಟೇನಯ್ಯಾ ? ಕೊಡುಂಡು ಜಾತಿಭೇದವನರಸಲುಂಟೇನಯ್ಯಾ ? ಅನ್ಯಭವಿಗೆ ಲಿಂಗುಪದೇಶವ ಕೊಟ್ಚು, ಅವನಲ್ಲುಣಬಾರದೆಂದು ಕುಲಕಂಜಿ, ಒಣ ಪಡಿಯ ತಂದು, ಬೆರಸಿ ಪಾಕವ ಮಾಡಿ ಉಂಬ ಅಜ್ಞಾನಿ ಗುರು ನೀ ಕೇಳಾ. ನಿನ್ನ ಚಿತ್ಕಳಾಪರಬ್ರಹ್ಮಲಿಂಗವನವರಿಗೆ ಕುಡುವಾಗ `ಅವರು ಮಾಡಿದ ದೋಷ ಎನ್ನನಂಡಲೆವವು ಕೊಡಲಮ್ಮೆ' ಎಂಬ ಭಾವ ನಿನ್ನಲ್ಲರಿಯದೆ, ಕಾಂಚಾಣ ಕಪ್ಪಡದಾಸೆಗೆ ದೀಕ್ಷವ ಮಾಡಿ, ಹಿಂದೆ ಉಣಬಾರದೆಂಬ ಶೀಲವ ಹಿಡಿದರೆ, ಮುಂದೆ ಯಮದಂಡನೆ ಬರುವುದನರಿಯಾ ? ಇಂತೀ ಅಜ್ಞಾನಿಗಳ ಗುರು ಶಿಷ್ಯ ಸಂಬಂಧಕ್ಕೆ ಎಂತು ಮೆಚ್ಚುವನಯ್ಯಾ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪೃಥ್ವಿಯೊಳಗಣ ಪೃಥ್ವಿ ಪಾಯುವಿಂದ್ರಿಯ. ಪೃಥ್ವಿಯೊಳಗಣ ಆಕಾಶ ವಾಗೀಂದ್ರಿಯ. ಪೃಥ್ವಿಯೊಳಗಣ ವಾಯು ಪಾಣೀಂದ್ರಿಯ. ಪೃಥ್ವಿಯೊಳಗಣ ಅಗ್ನಿ ಪಾದೇಂದ್ರಿಯ. ಪೃಥ್ವಿಯೊಳಗಣ ಅಪ್ಪು ಗುಹ್ಯೇಂದ್ರಿಯ. ಇಂತಿವು ಪೃಥ್ವಿಯ ಪಂಚಕೃತಿಯಯ್ಯ. ಪಂಚಮಹಾಭೂತಂಗಳು ಪಂಚೀಕೃತಿಯನ್ನೈದಿ ಶರೀರರೂಪಾಯಿತ್ತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪರಬ್ರಹ್ಮ ಪರವಸ್ತುವಿನ ಪಂಚಮುಖದಲ್ಲಿ ಹುಟ್ಟಿದ ಪಂಚಮಹಾಭೂತವೆ ಶರೀರವಾಯಿತ್ತು. ಅದು ಎಂತೆಂದೊಡೆ : ಮಣ್ಣು ನೀರು ಶಿಲೆಯ ಕೂಡಿ ಭಿತ್ತಿಯನಿಕ್ಕುವಂತೆ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಇವೈದು ಕೂಡಿ ಶರೀರ ನಿರ್ಮಿತವಾಯಿತಯ್ಯ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪಂಚೇಂದ್ರಿಯೆಂಬ ಕರ್ಮಿಗಳ ಉರಿಯ ಪ್ರಪಂಚಿಗೆ ಗುರಿಯಾಗಿ ಯತಿ ಸಿದ್ಧ ಸಾಧ್ಯರೆಲ್ಲ ಮತಿಭ್ರಷ್ಟರಾದರು. ಅದು ಎಂತೆಂದೊಡೆ : ಹಾಳೂರ ಹೊಕ್ಕರೆ ನಾಯ ಜಗಳವ ಕಂಡಂತೆ, ಶಿವಜ್ಞಾನವಿಲ್ಲದಂಗಹಾಳಿಂಗೆ ಪಂಚೇಂದ್ರಿಯವೆಂಬ, ನಾಯಿ ಬೊಗಳೆ ಹಂಚು[ಹರಿಯಾದರು] ಕೆಲಬರು. ಇಂತೀ ಪಂಚೇಂದ್ರಿಯಂಗಳು ಸುಟ್ಟು ಲಿಂಗೇಂದ್ರಿಯಮುಖವಾಗಿಪ್ಪ ಶರಣನ ಏನೆಂದು ಉಪಮಿಸುವೆನಯ್ಯಾ ? ಆತನಂಗವೆ ಶಿವನಂಗ, ಶಿವನಂಗವೆ ಶರಣನಂಗ, ಸಾಕ್ಷಿ :``ಶಿವಾಂಗಂ ಶರಣಾಂಗಂ, ಚ ಶರಣಾಂಗಂ ಶಿವಾಂಗಕಂ | ದ್ವಯೋರಂಗಯೋರ್ಭೇದಃ ನಾಸ್ತಿ ಸಾಕ್ಷಾತ್ ಪರಶಿವಃ ||'' ಎಂದುದಾಗಿ, ನಿಮ್ಮ ಶರಣರ ದರುಶನದಿಂದಲೆನ್ನ ಬದುಕಿಸಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪಿಂಡ ಬ್ರಹ್ಮಾಂಡವ ಒಂದು ಮಾಡಿ ನಿರ್ಮಿಸಿದ ಶಿವನ ಕಂಡವರುಂಟೇ ? ಹೇಳಿರೆ ! ಕಂಡವರುಂಟು, ಅದು ಹೇಗೆಂದಡೆ : ಶಿಲೆಯೊಳಗಣ ಪಾವಕನಂತೆ, ತಿಲದೊಳಗಣ ತೈಲದಂತೆ, ಬೀಜದೊಳಗಣ ವೃಕ್ಷದಂತೆ, ಉದಕದೊಳಗಣ ಪ್ರತಿಬಿಂಬದಂತೆ, ಹಸುವಿನೊಳಗಣ ಘೃತದಂತೆ ಇದ್ದಿತ್ತು ಆ ಪರಬ್ರಹ್ಮದ ನಿಲವು. ಇದ್ದರೇನು, ಕಾಣಬಹುದೇ ? ಕಾಣಬಾರದು. ಕಾಣುವ ಬಗೆ ಹೇಗೆಂದರೆ ಹೇಳುವೆ ಕೇಳಿರಣ್ಣಾ : ಶಿಲೆಯೊಳಗಣ ಅಗ್ನಿ ಚಕಿಮಕಿ ದೂದಿವಿಡಿದು ಕ್ರೀಯಿಟ್ಟು ಮಾಡಿದಲ್ಲದೆ ಪ್ರಜ್ವಲಿಸದು. ತಿಲದೊಳಗಣ ತೈಲ ಯಂತ್ರದಲ್ಲಿ ಕ್ರೀಡಿಸಿದಲ್ಲದೆ ತೋರದು. ಬೀಜದೊಳಗಣ ವೃಕ್ಷ ಮೇಘದ ದೆಸೆಯಲ್ಲಿ ಪಸಿಯಕ್ಷೇತ್ರಕ್ಕೆ ಬಿದ್ದಲ್ಲದೆ ಮೊಳೆದೋರದು. ಪಶುವಿನೊಳಗಣ ಘೃತ ಪಶುವ ಬೋಧಿಸಿ ಕ್ರೀಯಿಟ್ಟು ಅಮೃತ ಕರೆದರೆ ಕೊಡುವುದು. ಮೇಘದ ದೆಸೆಯಲಿ ಉದಕ ಬಂದು ಎಲೆಯ ತುಂಬಿದರೆ ಸೂರ್ಯನ ಪ್ರತಿಬಿಂಬವದರೊಳು ತೋರುವಂತೆ, ನಾದ ಬಿಂದು ಕಳೆಯ ದೆಸೆಯಲಿ ಪಿಂಡವಾಯಿತ್ತು. ಆ ಪಿಂಡದೊಳಗಣ ಜೀವ ಶಿವಚೈತನ್ಯ. ಅದು ಹೇಗೆಂದಡೆ, ಅದಕ್ಕೆ ಸಾಕ್ಷಿ : ``ಶಿವೋ ಜೀವಃ ಜೀವಂ ಶಿವಃ ಸ ಜೀವಃ ಕೇವಲಂ ಶಿವಃ'' ಎಂದುದಾಗಿ, ಪಿಂಡ ಬ್ರಹ್ಮಾಂಡದೊಳಗಣ ಶಿವನಿಲವು ಇಂತಿದ್ದಿತ್ತು. ಇದ್ದರೇನು ? ಲೋಕದ ಜಡದೇಹಿಗಳಿಗೆ ಕಾಣಬಾರದು. ಆದಿಯಲ್ಲಿ ಶಿವಬೀಜವಾದ ಮಹಿಮರಿಗೆ ತೋರುವುದು. ಉಳಿದವರಿಗೆ ಸಾಧ್ಯವೇ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪಶುವಿನ ಮುಂದೆ ಮುರವುಂ ಹಾಕಿ ಅಮೃತವ ಕರಕೊಂಬಂತೆ, ಹೊನ್ನು ಹೆಣ್ಣು ಮಣ್ಣು ಮೂರೆಂಬ ಮಾಯಾಪಾಶWದಘೆ ಹಸರು ಹುಲ್ಲಂ ಎನ್ನ ಮುಂದೆ ಚೆಲ್ಲಿ, ಆಸೆಗೆಳೆಸಿ, ಶಿವಜ್ಞಾನಾಮೃತವನೊಯಿದು ಅಜ್ಞಾನಕೆನ್ನ ಗುರಿ ಮಾಡಿ ಎನ್ನ ಕಾಡುತಿದ್ದೆಯಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪಂಚಭೂತಂಗಳೆ ಪಂಚವಿಂಶತಿತತ್ವಯುಕ್ತವಾಗಿ ಶರೀರವಾಯಿತ್ತು. ಅದು ಹೇಗೆಂದಡೆ : ಆಕಾಶದಿಂದ ಅಂತಃಕರಣಚತುಷ್ಟಯಂಗಳು ಹುಟ್ಟಿದವಯ್ಯ. ವಾಯುವಿನಿಂದ ಪಂಚಪ್ರಾಣವಾಯುಗಳು ಹುಟ್ಟಿದವಯ್ಯ. ಅಗ್ನಿಯಿಂದ ಬುದ್ಧೀಂದ್ರಿಯಂಗಳು ಹುಟ್ಟಿದವಯ್ಯ. ಅಪ್ಪುವಿನಿಂದ ಶಬ್ದಾದಿ ಪಂಚವಿಷಯಂಗಳು ಹುಟ್ಟಿದವಯ್ಯ. ಪೃಥ್ವಿಯಿಂದ ವಾಗಾದಿ ಕರ್ಮೇಂದ್ರಿಯಂಗಳು ಹುಟ್ಟಿದವಯ್ಯ. ಇಂತೀ ಚತುರ್ವಿಂಶತಿತತ್ವಯುಕ್ತವಾಗಿ ಶರೀರವೆತ್ತಿ ಕರೆಸಿತಯ್ಯ ಪರುಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪುಣ್ಯಫಲಕೆ ಬೀಜ ಶ್ರೀಪಂಚಾಕ್ಷರಿ, ಪಾಪಗಿರಿಗೆ ವಜ್ರ ಶ್ರೀಪಂಚಾಕ್ಷರಿ, ಶ್ರೀಗುರುಕೃಪೆಯನೊಲಿಸುವರೆ ಶ್ರೀಪಂಚಾಕ್ಷರಿ, ಲಿಂಗದೆಡೆಗೆ ನಡೆ ಸೋಪಾನ ಶ್ರೀಪಂಚಾಕ್ಷರಿ, ಜಂಗಮಕೆ ತವರ್ಮನೆ ಶ್ರೀಪಂಚಾಕ್ಷರಿ. ಶ್ರೀ ಗುರುಲಿಂಗಜಂಗಮ ನಿತ್ಯಮುಕ್ತರ ಮಾಡಿತೋರುವ ಶ್ರೀಪಂಚಾಕ್ಷರಿಯ ಅರಿತು ನೆನೆದರೆ ಅನಂತಕೋಟಿ ಪುಣ್ಯ, ಮರೆತು ನೆನೆದರೆ ಮಹಾಕೋಟಿ ಪುಣ್ಯ. ಅರಿತು ಅರಿಯದೆ, ಮರೆತು ಮರೆಯದೆ ಸದಾವಕಾಲದಲ್ಲಿ `ನಮಃಶಿವಾಯ' ಎಂದು ಜಪಿಸುತಿಪ್ಪ ಶಿವಶರಣರ ಪಾದಧ್ಯಾನದಲ್ಲಿಪ್ಪ ಕೃಪೆಯನೆನಗೆ ಪಾಲಿಸಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪರಮಾರ್ಥ ಪರಬ್ರಹ್ಮ ಪರಂಜ್ಯೋತಿಲಿಂಗ ಪರಶಿವ ಪರಾಪರ ಶಾಂತಿ ಪರಾತ್ಮಸಂಜೀವ, ಪನ್ನಗಭೂಷಣ, ಪರಹಿತ, ಪರದೇವಾತ್ಮಲಿಂಗ, ಪರಜನ್ಮಕರ್ಮವಿದೂರ, ಪರಿಣಾಮಿ, ಪರುಷವಿನೋಟ, ಪಾವನಸ್ವರೂಪ ರಕ್ಷಿಪುದೆಮ್ಮ ಜಯಜಯ ಹರಹರ ಶಿವಶಿವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪಕ್ಕವಿಲ್ಲದ ಹಕ್ಕಿ ಅಕ್ಕಜನ ಪಂಜರವ ಗೂಡುಮಾಡಿಕೊಂಡು ದಿಕ್ಕುದಿಕ್ಕನ್ನೆಲ್ಲ ಚರಿಸ್ಯಾಡಿ ಬರುತಿಪ್ಪದು. ಆ ಪಕ್ಷಿಯ ನೆರಳು ಬೀಳೆ ಯತಿ ಸಿದ್ಧ ಸಾಧ್ಯ ಯೋಗಿಗಳ ಯೋಗತ್ವ ಯತಿತನ ಸಿದ್ಧತ್ವ ಕೆಟ್ಟು ಕೆಲಸಾರಿ ಹೋಗುವುದ ಕಂಡೆ. ಪಕ್ಕವಿಲ್ಲದ ಹಕ್ಕಿಯ ಕೊಂದು ಅಕ್ಕಜನ ಪಂಜರವ ಮುರಿದುದಲ್ಲದೆ ನಿರ್ಮನನಲ್ಲ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪಂಕದೊಳು ಬಿದ್ದ ಪಶುವಿನಂತೆ ಸಂಸಾರರಸವಿಷಯದ ಕೊಗ್ಗೆಸರ ನಟ್ಟನಡು ಹುದಿಲೊಳಿಪ್ಪವನ ಪಶುವಿನೊಡೆಯ ಪಶುವನರಸಿಕೊಂಡು ಬಂದು ಎಳೆತಗೆವಂತೆ ನರಪಶು ನನ್ನವನೆಂದು ಹುದಿಲೊಳಿಪ್ಪವನ ತೆಗೆದು ಕರುಣಜಲವೆಂಬ ನೀರೆರೆದು ಮೈದೊಳೆದು ತಲೆದಡಹಿ ಕಾಯಿದು ರಕ್ಷಣ್ಯವ ಮಾಡಿಕೊಳ್ಳಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪರುಷ ಮನೆಯೊಳಿರುತಿರೆ ಪಾಷಾಣಕೆ ಚಾಲಿವರಿವಂತೆ, ಸುಧೆ ಇರಲು ಅಂಬಲಿ ಬಯಸುವನಂತೆ, ಗುರುಕರುಣದ ಇಷ್ಟಲಿಂಗ ತನ್ನ ಕರದೊಳಿರುತಿರೆ ಅದ ಮರೆದು ಸೂಳೆಗೆ ಹುಟ್ಟಿದ ಮಗುವು ಕಂಡ ಕಂಡವರಿಗೆ `ಅಪ್ಪಾ ' ಎಂದು ಕರೆವಂತೆ, ಈ ಸಂತೆಸೊಳೆಮಕ್ಕಳಿಗೆ ಒಂದು ದೇವರು ನಿತ್ಯವಲ್ಲ ! ಹಲವು ಕಲ್ಲಿಗೆರಗಿ ಕುಲಕೋಟಿ ನರಕಕಿಳಿವ ಹೊಲೆಯರ ಮುಖವನೆನಗೊಮ್ಮೆ ತೋರದಿರಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪಿಂಡಾಂಡ ಕಿರಿದಲ್ಲ, ಬ್ರಹ್ಮಾಂಡ ಹಿರಿದಲ್ಲ, ಕಾಣಿರಣ್ಣಾ ! `ಪಿಂಡ ಬ್ರಹ್ಮಾಂಡ ದ್ವಯೋರೈಕ್ಯ'ಯೆಂದುದಾಗಿ. ಇದು ಕಾರಣ, ಪಿಂಡ ಬ್ರಹ್ಮಾಂಡವಾಯಿತ್ತು. ಆ ಪಂಚಭೂತವೆ ಶರೀರವಾಯಿತ್ತು. ಅದು ಹೇಗೆಂದಡೆ : `ಪಂಚಭೂತಮಯಂ ದೇಹಂ' ಎಂದುದಾಗಿ, ಬ್ರಹ್ಮಾಂಡದಲ್ಲುಳ್ಳ ಜನನ ಪಿಂಡಾಂಡದಲ್ಲುಂಟು ; ಪಿಂಡಾಂಡದಲ್ಲುಳ್ಳ ಜನನ ಬ್ರಹ್ಮಾಂಡದಲ್ಲುಂಟು. ಬ್ರಹ್ಮಾಂಡದ ಲಯ ಬ್ರಹ್ಮಾಂಡಕ್ಕೆ. ಪಿಂಡಾಂಡದ ಲಯ ಬ್ರಹ್ಮಾಂಡಕ್ಕೆ ಇಂತೀ ಎರಡರ ಭೇದವ ನೀನೆ ಬಲ್ಲೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪೃಥ್ವಿ ಆಕಾಶವ ಬೆರಸಲು ವಾಗೀಂದ್ರಿಯದ ಜನನ. ಪೃಥ್ವಿ ವಾಯುವ ಬೆರಸಲು ಪ್ರಾಣೇಂದ್ರಿಯದ ಜನನ. ಪೃಥ್ವಿ ತೇಜವ ಬೆರೆಸಲು ಪಾದೇಂದ್ರಿಯದ ಜನನ. ಪೃಥ್ವಿ ಅಪ್ಪುವ ಬೆರಸಲು ಗುಹ್ಯೇಂದ್ರಿಯದ ಜನನ. ಪೃಥ್ವಿ ಪೃಥ್ವಿಯ ಬೆರಸಲು ಪಾಯುವಿಂದ್ರಿಯದ ಜನನ. ಇಂತಿವು ಚತುರ್ವಿಂಶತಿತತ್ವಂಗಳುತ್ಪತ್ಯವೆಂದು ಅರಿಯಲು ಯೋಗ್ಯವಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ