ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆಸತ್ತೆ ಸಂಸಾರಸಂಗಕ್ಕೆ, ಬೇಸತ್ತೆ ಸಂಸಾರಸಂಗಕ್ಕೆ. ಸಂಸಾರಸಂಗದಿಂದ ಓಸರಿಸಿ ಒಯ್ಯನೆ ಕಂದಿ ಕುಂದಿ, ಭವಗಿರಿಯ ಸುತ್ತುತ್ತಿದ್ದೆನಯ್ಯಾ. ಅಯ್ಯಾ, ಅಯ್ಯಾ ಎಂದು ಒಯ್ಯನೆ ಒದರಿದರೆ `ಓ' ಎನ್ನಲೊಲ್ಲೇಕೆಲೊ ಅಯ್ಯ ? ನೀ ಪಡೆದ ಸಂಸಾರ ಸುಖ ದುಃಖ, ನೀನೆ ಬೇಗೆಯನಿಕ್ಕಿ, ನೀನೊಲ್ಲೆನೆಂದರೆ ನಾ ಬಿಡೆ, ನಾ ಬಿಡೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆದಿ ಇದ್ದಂದು ನೀನೆ, ಆದಿ ಇಲ್ಲದಂದು ನೀನೆ ; ಅನಾದಿ ಇದ್ದಂದು ನೀನೆ, ಅನಾದಿ ಇಲ್ಲದಂದು ನೀನೆ ; ನಾದ ಬಿಂದು ಕಳೆ ಇದ್ದಂದು ನೀನೆ, ಅವು ಇಲ್ಲದಂದು ನೀನೆ ; ಸಾವಯವ ನಿರವಯವವಿದ್ದಂದು ನೀನೆ, ಅವು ಇಲ್ಲದಂದು ನೀನೆ ; ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆನೆಯ ನುಂಗಿದ ಹುಲಿ, ಹುಲಿಯ ನುಂಗಿದ ಸರ್ಪ, ಸರ್ಪನ ನುಂಗಿದ ಸಿಂಹ, ಸಿಂಹನ ನುಂಗಿದ ಮರೆ, ಮರೆಯ ನುಂಗಿದ ಭಲ್ಲೂಕ ಇಂತಿವರು ಹಕ್ಕಿಯ ಹೊಲನಲ್ಲಿ ತಮ್ಮ ತಮ್ಮ ವೈರತ್ವದಿಂದಲಿರುವುದಿದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆಸೆಯೆಂಬುದು ಆರಾರನು ಕೆಡಿಸದಯ್ಯ ? ಸೀಮೆ ಭೂಮಿಗಾಸೆಗೈದು ಮಡಿದ ರಾಜರ ಹೇಳೆಂದರೊಂದು ಕೋಟ್ಯಾನುಕೋಟಿ. ಹೊನ್ನು ಹೆಣ್ಣಿಂಗೆ ಆಸೆಗೈದು ಮಡಿದವರ ಹೇಳೆಂದರೊಂದು ಕೋಟ್ಯಾನುಕೋಟಿ. ಹೆಣ್ಣು ವಿಷಯಕ್ಕೆ ಆಸೆಗೈದು ಮಡಿದವರೊಂದು ಕೋಟ್ಯಾನುಕೋಟಿ. ಹೊನ್ನು ಹೆಣ್ಣು ಮಣ್ಣಿಗೆ ಆಸೆಗೈದು ಮಡಿದವರ ಕಾಂಬೆನಲ್ಲದೆ, ನಿನಗಾಡಿ ನಿರಾಸಕ್ತರಾಗಿ ಸತ್ತವರನಾರನೂ ಕಾಣೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆಕಾಶದೊಳಗಣ ಆಕಾಶ ಜ್ಞಾನ. ಆಕಾಶದೊಳಗಣ ವಾಯು ಮನಸ್ಸು. ಆಕಾಶದೊಳಗಣ ಅಗ್ನಿ ಅಹಂಕಾರ. ಆಕಾಶದೊಳಗಣ ಅಪ್ಪು ಬುದ್ಧಿ. ಆಕಾಶದೊಳಗಣ ಪೃಥ್ವಿ ಚಿತ್ತ. ಇಂತಿವು ಆಕಾಶದ ಪಂಚಶ್ರುತಿಯೆಂದು ಹೇಳಲ್ಪಟ್ಟತ್ತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆಶೆಯಾಮಿಷವೆಂಬ ಮಾಯಾಪಾಶಕೆನ್ನ ಗುರಿಮಾಡಿ ನೀ ಸಿಕ್ಕದೆ ನಿರ್ಮಾಯನಾಗಿ ಮಾಯಕದ ಬಲೆಯೊಳಿಟ್ಟೆನ್ನ. ಅದು ಎಂತೆಂದರೆ : ನೆನೆವ ಮನಕಾಸೆಯನೆ ತೋರಿದೆ, ನೋಡುವ ಕಂಗಳಿಗಾಸೆಯನೆ ನೋಡಿಸಿದೆ, ನುಡಿವ ಜಿಹ್ವೆಗೆ ಆಸೆಯನೆ ನುಡಿಸಿದೆ, ಕೇಳುವ ಕರ್ಣಕೆ ಆಸೆಯನೆ ಕೇಳಿಸಿದೆ, ವಾಸಿಸುವ ನಾಸಿಕಕೆ ಆಸೆಯನೆ ವಾಸಿಸಿದೆ, ಮುಟ್ಟುವ ಹಸ್ತಕ್ಕೆ ಆಸೆಯನೆ ಮುಟ್ಟಿಸಿದೆ. ಆಸೆಯನೆ ಕಳೆದು, ನಿರಾಸೆಯಾಗಿಪ್ಪ ಶರಣರ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆರೆ ನೀನಾರೆ ಮಾಯದ ಬಲೆಯ ತೋರೆನ್ನ ಸಿಗಿಸಿ ನೀನಗಲಿದರೆ. ತ್ರಿವಿಧ ಗುಣವು ತ್ರಿವಿಧ ಮಲವು ತ್ರಿವಿಧ ತನುವು ತ್ರಿವಿಧ ಮನವು ತ್ರಿವಿಧ ಕರಣ ತ್ರಿವಿಧ ಅಗ್ನಿಗೆನ್ನನಿಕ್ಕಿ ಭಾವಿಸಿ ಕಾಡುತಿದೆ ನಿನ್ನ ಮಾಯ. | 1 | ಪಂಚವಿಂಶವು ಪಂಚಭೂತಗಳುಪವಿ ಪಂಚಕರ್ಮೇಂದ್ರಿಯಂಗಳ ಬಲೆಯು ಸಂಚನಿಕ್ಕಿ ಹರಿಹಂಚ ಮಾಡಿ ಮಾಯಾ ಪ್ರ ಪಂಚನ ಕಾಡುತಿದೆ ಗುರುವೆ. | 2 | ಹೊನ್ನಾಗಿ ಚರಿಸಿ ಹೆಣ್ಣಾಗಿ ಸುಳಿದು ಮಣ್ಣಾಗಿ ನಿಂದು ಮಾಯಾರಕ್ಕಸಿಯು ಕಣ್ಣಿಂದ ನೋಡಿ ಕಾಲ್ನೆಡಿಸಿ ಅಜಹರಿಸುರರ ಬಣ್ಣಗುಂದಿಸಿ ಕಾಡುತಿದೆ ಗುರುವೆ. | 3 | ಪಶುವಿನ ಮುಂದೆ ಗ್ರಾಸವ ಚೆಲ್ಲಲದು ಹಸುರೆಂದು ಆಸೆಗೈವಂತೆ ಮಾಯಾ ರಸ ವಿಷಯ ಅಲ್ಪಸುಖಕೆನ್ನ ಗುರಿಮಾಡಿ ವಿಷಕಂಠ ನೀನಗಲಿದೆ ಗುರುವೆ. | 4 | ಪರುಷಕೆ ಪಾಷಾಣವನೊತ್ತೆಯಿಡುವಂತೆ ಶರೀರಮಾಯೆಗೆ ಎನ್ನ ಗುರಿ ಮಾಡಿ ಹರ ನೀನಗಲದಿರು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. | 5 |
--------------
ಹೇಮಗಲ್ಲ ಹಂಪ
ಆಸೆ ಮಾಡದಿರು ಅಧಮ ಚಾಂಡಾಲಿ ನರರಿಂಗೆ. ಆಸೆಗೈಯದಿರು ಹೊನ್ನು ಹೆಣ್ಣು ಮಣ್ಣಿನ ಮದದಮಲು ತಲೆಗೇರಿದ ಪಿಸುಣಿ ಮಾನವರ. ಆಸೆಗೈಯದಿರು ಪಾಪಿ ಮನವೆ. ಆಸೆಗೈ ಆಸೆಗೈ ಇನ್ನೊಮ್ಮೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಸಮುದ್ರವನಾಸೆಗೈದರೆ ಹವಳ ಮುತ್ತನುಗಿವುದು.
--------------
ಹೇಮಗಲ್ಲ ಹಂಪ
ಆಸೆಯಾಗಿ ನಿಂದು, ರೋಷವಾಗಿ ಕೊಂದು, ಮೋಸವಾಗಿ ತಿಂದು, ವೇಷವಾಗಿ ಸುಳಿದು, ಭಾಷೆಯಾಗಿ ನಿಂದು, ಪಾಶವಾಗಿ ಕಟ್ಟಿ, ಶೇಷವಾಗಿ ಕರಗಿ, ವಿೂಸಲಕ್ಷಿಯಾಗಿ ಜಗವ ಮರುಳುಮಾಡಿ ಕಾಡುತಿದ್ದುದು ನಿಮ್ಮ ಮಾಯದ ದಿಗಡ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆನೆಯ ಹೆಣಕ್ಕೆ ಕೋಡಗ ಶೋಕಂಗೈವುದ ಕಂಡೆ. ಮಾಗಿಗಂಜಿದ ಕೋಗಿಲೆ ಮರುಜೇವಣಿಗೆಯ ಬೆಟ್ಟದೊಳಡಗುವುದ ಕಂಡೆನು. ಸಾಗರದ ಮೇಲೆ ಹಾರುವ ಹಂಸ ಭ್ರಮರನ ಗೆಣೆವಿಡಿಯಲಿ. ಯತಿ ಸಿದ್ಧ ಸಾಧ್ಯರೆಲ್ಲ ಸಂಸಾರಭರಿತರಾದರೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ ?
--------------
ಹೇಮಗಲ್ಲ ಹಂಪ
ಆಸೆ ಮಾಡದಿರು ಪರರಿಗೆ ಕೇಳು ಮನವೆ ದೋಷರಹಿತಲಿಂಗವಲ್ಲದನ್ಯರಿಗೆ ದಯವೆಂದು. ಪದ : ಜಲವಿಲ್ಲದ ಕೆರೆಗೆ ತುರು ಬಂದು ಹಿಂದಿರುಗುವಂತೆ ಫಲವಿಲ್ಲದ ಮರಕೆ ಗಿಣಿವಿಂಡು ಮುಸುಕಿದಂತೆ ನಳಿನವಿಲ್ಲದ ಕೊಳಕೆರಗಿದಳಿಚರದಂತೆ ಮಲಹರನ ಭಕ್ತಿಜ್ಞಾನವೈರಾಗ್ಯವಿಲ್ಲದವರಿಗೆ | 1 | ಕಾಮಧೇನಲ್ಲದೆ ಸಾದಾಧರೆಯ ಗೋವುಗಳು [ಪಂ ಚಾಮೃತವನೀಯಬಲ್ಲುದೆ ? ಕಲ್ಪವೃಕ್ಷವಲ್ಲದೆ ಬೇವು ಸ್ವಾ ದು ಫಲವನೀವುದೇ? ***]ಪಡುವುದೆ ಕಾಮಾರಿಲಿಂಗವಲ್ಲದನ್ಯರಿಗೆ ದಯವೆಂದು | 2 | ಕರಸೆರೆಯಲ್ಲಿ ಹಣ್ಣಿರೆ ಮರನೇರಿ ಕೊಯ್ಯುವರುಂಟೇ ? ಪರುಷ ಮನೆಯೊಳಿರೆ ಪರರ ಹಣವ ಬೇಡಲುಂಟೇ ? ಪರಬ್ರಹ್ಮ ಮೂಲವೃಕ್ಷ ಶರೀರದೊಳಿರೆ ಲೋಕ ನರರನಾಸೆಗೈವೆನೆಂಬ ಭ್ರಾಂತಿಯಾಕೆ ಮನುಜ ? | 3 | ದಧಿಯ ಮಥನವ ಮಾಡೆ ಪಂಚಾಮೃತವ ಕುಡುವುದು ಉದಕವ ಕಡೆಯಲೇನ ಕೊಡುವುದಾ ತೆರದಲ್ಲಿ ಸುಧಾಕರ ರತ್ನಲಿಂಗ ನಿನ್ನಿದಿರಿನಲ್ಲಿರುತಿರೆ ಅಧಮರಾದನ್ಯರಿಗೆ ಆಸೆಗೈಯಲಿಬೇಡ. | 4 | ಸರ್ವರ ಮನಧರ್ಮವನರಿವ ಪರಮಾತ್ಮ ನಿನ್ನ ಕರದೊಳಿರೆ ಅನ್ಯಸಂಗವ ಮಾಣಿಸಿ ಗುರು ಪಡುವಿಡಿ ಸಿದ್ಧಮಲ್ಲಿನಾಥನೊಳು ಬೆರೆದು ನಿಶ್ಚಿಂತನಾಗಿರು ಕಂಡ್ಯ ಮನವೆ. | 5 |
--------------
ಹೇಮಗಲ್ಲ ಹಂಪ
ಆಸೆಬದ್ಧವು ಬಿಡದು ಈ ಮನದ ಸಾಸಿರಬಗೆಯ ಬೋಧೆಯ ಹೇಳ್ದಡೆಳ್ಳಿನಿತು. ಪದ :ಮೋಷನ ದನಿಗೆ ಆಸೆಗೈದ ವ್ಯಾಘ್ರಬಂಧನ ಸೂಸಲನಾಸೆಗೈದು ಮೂಷಕ ಮಡಿಯದೆ ? ಆಸೆಮಾಡದಿರು ಪರಧನ ಪರಸ್ತ್ರೀಯರಿಗೆ ರೋಷಧಿಪತಿಯ ಬಾಧೆಯಿದೆಯೆನೆ ನಾಚದೆ. | 1 | ದಶದಿಕ್ಕು ಆನೆ ಸೇನೆ ಹೊನ್ನು ಭಂಡಾರ ಕೈ ವಶವಾಗಿ ಇದು ಸಾಲದೆಂಬುದೀ ಆಸೆಯೆಂಬ ಹಸುಗೂಸನೆತ್ತಲು ರೋಷವೆಂಬ ತಾಯಿ ಸುಳಿದು ವಸುಧೆಯ ಜನರ ತಿಂದು ತೇಗಿ ಕಾಡುವ ಮನದ | 2 | ಆಸೆಯನಳಿದು ನಿರಾಸೆಯಾಗಿಹರೆ ಶರಣ- ರಾ ಶಿಶುವಾಗೆನ್ನನಿರಿಸು ಕಂಡೆಲೆ ಜಗದೀಶ ಗುರು ಪಡುವಿಡಿ ಸಿದ್ಧಮಲ್ಲಿನಾಥ ನಿಮ್ಮ ಭಾಷೆಯನಿತ್ತು ಮನವ ಸೆರೆಯ ಹಿಡಿಯಯ್ಯ ದೇವ. | 3 |
--------------
ಹೇಮಗಲ್ಲ ಹಂಪ
ಆಕಾರವಿಲ್ಲದಂದು ನಿರಾಕಾರದ ಮರೆಯಲ್ಲಿ ಇದ್ದೆಯಯ್ಯಾ. ನಿರಾಕಾರದ ಮರೆಯಿಲ್ಲದಂದು, ಸ್ವಯಪರದ ಮರೆಯಲ್ಲಿದ್ದೆ ಅಯ್ಯಾ. ಸ್ವಯಪರದ ಮರೆಯಿಲ್ಲದಂದು, ನೀನೆ ನೀನಾಗಿ ಜ್ಞಾನಪರನಾಗಿಯಿದ್ದೆ ಅಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ