ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತಿಯಿಲ್ಲದೆ ಗುರುಪೂಜೆಯ ಅನಂತಕಾಲ ಮಾಡಿದರೂ ವ್ಯರ್ಥವೆಂದಿತ್ತು ಗುರುವಚನ. ಭಕ್ತಿಯಿಲ್ಲದೆ ಧ್ಯಾನ ಮೌನ ಗಂಗಾಸ್ನಾನ ಜಪತಪ ನೇಮ-ನಿತ್ಯ ವ್ಯರ್ಥವೆಂದಿತ್ತು ಗುರುವಚನ. ಜಂಗಮತೃಪ್ತಿಯಿಲ್ಲದೆ ಲಿಂಗಕೆ ಪುಷ್ಪ ಪತ್ರಿಯನೇರಿಸಿ ಫಲವೇನು ? ಲಿಂಗಕ್ಕೆ ಜಂಗಮವೆ ಬಾಯಿಯೆಂದಿತ್ತು ಗುರುವಚನ. ವೃಕ್ಷಕ್ಕೆ ಭೂಮಿ ಬಾಯಿಯೆಂದು ನೀರನೆಸಿದರೆ ಮೇಲೆ ಪಲ್ಲವಿಸಿತ್ತು ನೋಡಾ ! ಸ್ಥಾವರಕ್ಕೆ ಜಂಗಮವೆ ಬಾಯಿಯೆಂದು ಪಡಿಪದಾರ್ಥವ ನೀಡಿದರೆ ಶಿವಂಗೆ ತೃಪ್ತಿಯೆಂದಿತ್ತು ರಹಸ್ಯ. ಸಾಕ್ಷಿ : ``ವೃಕ್ಷಸ್ಯ ವದನಂ ಭೂಮಿಃ ಸ್ಥಾವರಸ್ಯತು ಜಂಗಮಃ || ಮಮ ತೃಪ್ತಿರುಮಾದೇವಿ ಉಭಯೋರ್ಲಿಂಗ ಜಂಗಮತಾ ||'' ಎಂದುದಾಗಿ, ``ಸ್ಥಾವರಾರ್ಪಿತನೈವೇದ್ಯಾತ್ ನ ತೃಪ್ತಿರ್ಮಮ ಪಾರ್ವತಿ | ಜಂಗಮಾರ್ಪಿತ ನೈವೇದ್ಯಾತ್ ಮಮ ತೃಪ್ತಿಶ್ಚ ಸರ್ವಥಾ | ಎಂದುದಾಗಿ, ಈ ಶ್ರುತ ದೃಷ್ಟ ಅನುಮಾನವ ಕಂಡು, ಮಾಡುವಾತನೆ ಸದ್ಭಕ್ತನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಭಸಿತವಿದು ಶಿವರೂಪೆಂದು ನೊಸಲೊಳು ಧರಿಸಿದಡವ ನಿತ್ಯ. ಪದ : ಭವಬಂಧನಕೆ ಅರಿಯು ಭಕಾರವು ಶಿವಪದದ ಬಯಕೆಯನೀವ ಸಿಕಾರವು ಕವಿವ ತಾಮಸಗುಣಹಾರ ತಕಾರವೆಂದು ವಿವರಿಸಿ ಶ್ರೀ ಭಸಿತವನೆನ್ನ ಭಾಳೊಳು ತವೆ ಪೂಸಕಲಿಸಿದ ಗುರುವ ನೆನೆದು ನಾ ಜವನ ಪಾಶವನು ಸುಟ್ಟು ನಿಟ್ಟೊರೆಸಿದೆನು. | 1 | ಈ ಜನ್ಮದ ಹೊಲೆಗಳೆವ `ವಿ'ಕಾರವು ಸಾಜ ಭೂತಭಯ ಭೀತಿಗೆ `ಭೂ'ಕಾರವು ರಾಜಿಪ ತಿಮಿರಕೆ ಜ್ಯೋತಿ `ತಿ'ಕಾರವೆಂದು ಮೂಜಗಪಾಲಗೆ ಸಿತಗೊರಳನಾಮವು ಸೂಚಿಸುತಿಹ [ವಿ]ಭೂತಿಯ ಧರಿಸಿಯೆ ನೀ ಜೀವಿಸು ಮಗನೆಂದು ಅರುಹಿದ ಗುರುವೆ. | 2 | ಪ್ರಥಮಪುಂಡ್ರ ಬ್ರಹ್ಮತ್ಯಕರ ದ್ವಿತೀಯಪುಂಡ್ರ ವಿಷ್ಣುವಿನ ಸ್ಥಿತಿಗತಿಕ್ಷಯಂ ತೃತೀಯ ಪುಂಡ್ರ ರುದ್ರನ ಲಯಗೆಡವುದೆಂದು ಪ್ರತಿಯಿಲ್ಲ ತ್ರಿಪುಂಡ್ರವ ಭಾಳೊಳು ಸದವಕಾಲ ಧರಿಸಿದಡವ ನಿತ್ಯನೆಂದುನ್ನತಿ ಪೊಗಳೆ ವೇದ ಅಷ್ಟ ಪೌರಾಣದಲ್ಲಿ. | 3 | ಪಂಚಗವ್ಯ ಗೋಮಯದಿ ಜನಿಸಿಯೆ ಪಂಚಮುಖಗೆ ಆಭರಣವೆನಿಸಿ ತನು ಪಂಚಭೂತಂಗಳನಳಿದು ಪಣೆಯೊಳಿರುವ ಸಂಚಿತ ಪ್ರಾರಬ್ಧಾಗಾಮಿ ತ್ರೈಗಳ ಹಂಚುಹರಿಯ ಮಾಡುರುಹುವ ಭಸ್ಮ ಪ್ರ ಪಂಚಿಲ್ಲದೆ ಧರಿಸಿದಡವ ಮುಕ್ತ . | 4 | ಚಿದಂಗ ವೃಷಭಾಕಾರ ವಿಭೂತಿಯ ಅದ ಸರ್ವಾಂಗಕುದ್ಧೂಳನ ಮಾಡಿಪ ಸದ್ಭಕ್ತನೆ ಶಿವ ತಾನೆಂದು ಮುದದಿ ಪೊಗಳುತಿಹ ವೇದಾಗಮಗಳು ಮಿದ ನೀ ಧರಿಸೆಂದೆನಗರುಹಿದ ಗುರು ಮದಹರ ಪಡುವಿಡಿ ಸಿದ್ಧಮಲ್ಲೇಶಾ. | 5 |
--------------
ಹೇಮಗಲ್ಲ ಹಂಪ
ಭಸಿತದ ಮೇಲೆ ಅನ್ಯದೇವರ ಬಂಡಾರವನಿಡುವ ಅನಾಮಿಕ ಹೊಲೆಯನ ಶಿವಭಕ್ತನೆಂದು ಕರೆಯಬಹುದೆ ? ಕರೆಯಬಾರದು. ಕರೆದವರಿಗೆ ಮಹಾದೋಷ. ತೊತ್ತಿನಮೇಲೆ ಗರತಿಯಲ್ಲದೆ, ಗರತಿಯ ಮೇಲೆ ತೊತ್ತೆ ? ಮಿಥ್ಯದೈವದ ಗಂಟಲಗಾಣವೆಂಬ ಶ್ರೀ ವಿಭೂತಿಯ ಧರಿಸಿ, ಶಿವಪದ ಸಾಧಿಸಲರಿಯದೆ ಮಣ್ಣು ಪಟ್ಟಿಯ ಧರಿಸಿ ಕೆಡುವ ಕುನ್ನಿಗಳ ನಾನೇನೆಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಭವಿ ಭಕ್ತರೆಂಬೆರಡು ವಿವರವಾಯಿತು ನೋಡಾ ಅಯ್ಯಾ. ಭವಿಗೆ ಶೈವ, ಭಕ್ತಂಗೆ ವೀರಶೈವ. ಭವಿ ಶೈವಲಿಂಗವ ಪೂಜೆಮಾಡಿದರೆ ಅವರ ಭಾವಕ್ಕೆ ಒಲಿವನಲ್ಲದೆ, ಶಿವಭಕ್ತ ಶೈವಲಿಂಗವ ಪೂಜೆಮಾಡಿದರೆ ತಪ್ಪದು ನರಕ. ಅದು ಕಾರಣವೆಂದರೆ : ಶಿವಲಿಂಗ ಕರಸ್ಥಲದಲ್ಲಿರುತಿರೆ ಆ ಲಿಂಗದ ಪೂಜೆಯ ಮಾಡಿ, ವರವ ಪಡೆಯಲರಿಯದೆ, ಅನ್ಯಲಿಂಗಕ್ಕೆ ಹರಿದು ಹೋಗಿ, ಗಡಗಡನುರುಳಿ, ಆ ಲಿಂಗದೇವಾಲಯವ ಪ್ರದಕ್ಷಣ ಮಾಡಿದರೆ, ಕುನ್ನಿ ಬೂದಿಯೊಳಗೆ ಹೊರಳಿ ಲಟಪಟನೆ ಝಾಡಿಸಿ ಎದ್ದು ತುಡುಗಿಗೆ ಮನೆಯೊಳು ಹೊಕ್ಕು ಸುತ್ತುತಿರೆ ನಡುನೆತ್ತಿಯ ಮೇಲೆ ಬಡಿವಂತೆ, ಏನೆಂದು ಸಟೆಮಾಡನಯ್ಯಾ ಇಂತಪ್ಪ ಅಜ್ಞಾನಿಗಳ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ ?
--------------
ಹೇಮಗಲ್ಲ ಹಂಪ
ಭಕಾರ ಭವಬಂಧನ ಕರ್ಮವ ಕಳೆವುದೆಂದು, ಸಿಕಾರ ಶಿವಪದದ ಬಯಕೆಯ ತೋರುವುದೆಂದು, ತಕಾರ ತಾಮಸಗುಣ ಕಳೆವುದೆಂದು ನಿರೂಪಿಸಿ ಶ್ರೀಭಸಿತವ ಧರಿಸಕಲಿಸಿದೆಯಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ