ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹಳ್ಳದೊಳು ತೇಲಿಹೋಗುವ ಕಂಬಕೆ ತೊರೆನೆರೆಗಳು ಮುಸುಕಿ ಹೋಗುತಿದೆ ನೋಡಾ ! ತೊರೆನೆರೆಗಳ ಸಂಭ್ರಮದಲ್ಲಿ ಹೋಗುವ ಸ್ತಂಭ ಆರಿಗೆ ಕಾಣಬಾರದು ನೋಡಾ ! ಹಳ್ಳವ ಬತ್ತಿಸೆ, ತೊರೆನೆರೆಗಳ ಕೆಡಿಸಿ, ಹಳ್ಳದೊಳಿಹ ಕಂಬದೊಳಿಪ್ಪ ಮಾಣಿಕ್ಯವ ಸಾದ್ಥಿಸಿಕೊಳಬಲ್ಲರೆ ನಿಃಸಂಸಾರಿ ನಿರಾಭಾರಿ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹಿಂದೇನು ಸುಕೃತವ ಮಾಡಿದ ಕಾರಣ ಇಂದೆನಗೆ ಗುರುಪಾದ ದೊರೆಯಿತ್ತು ನೋಡಾ. ಗುರುವೆಂಬೆರಡಕ್ಷರದ ಸ್ಮರಣೆಯ ನೆನೆದು ಪರಿಭವವ ತಪ್ಪಿಸಿಕೊಂಡೆ ನೋಡಾ. ಗುರುವೆಂಬೆರಡಕ್ಷರವನೇನೆಂದು ಉಪಮಿಸವೆನಯ್ಯಾ, ಸಾಕ್ಷಿ :``ಗುಕಾರಂ ಚ ಗುಣಾತೀತಂ ರುಕಾರಂ ರೂಪವರ್ಜನಮ್ | ಗುಣರೂಪಮತೀತೊ ಯೋ ಸದೃಷ್ಟಃ [ಸ]ಗುರುಃ ಸ್ಮøತಃ ||'' ಎಂದುದಾಗಿ, ಇಂತಪ್ಪ ಗುರುವನೆಂತು ಮರೆವೆನಯ್ಯಾ. ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಗುರುವ ಮರೆದವರಿಗಿಂದೇ ನರಕ.
--------------
ಹೇಮಗಲ್ಲ ಹಂಪ
ಹಡಗ ಹರಿಗೋಲ ನಂಬಿದವರು ಕಡಲತೊರೆ ದಾಂಟರೇನಯ್ಯಾ ? ಧನು ಖಡ್ಗವ ಪಿಡಿದು ಕಾಳಗವ ಮಾಡಿದವರು ರಣವ ಗೆಲ್ಲರೇನಯ್ಯಾ ? ಗುರುವ ನಂಬಿದವರು ಭವವ ಗೆಲ್ಲರೇನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ ?
--------------
ಹೇಮಗಲ್ಲ ಹಂಪ
ಹರಿಯ ನಯನ ಹರನ ಶ್ರೀಪಾದದೊಳು ಅಡಕವಾದುದ ಸಟೆಯೆಂಬ ವಿಪ್ರ ನೀ ಕೇಳಾ. ಹರಿ ಸಹಸ್ರಕಮಲದಲ್ಲಿ ಹರನ ಶ್ರೀಪಾದದ ಪೂಜೆ ಮಾಡುತಿರೆ, ಒಂದರಳು ಕುಂದಿದರೆ ನಯನಕಮಲವನೇರಿಸಿ, ಶಿವನ ಪಾದಕೃಪೆಯಿಂದ ಶಂಖ ಚಕ್ರವ ಪಡೆದುದು ಹುಸಿಯೆ ? ಹುಸಿಯಲ್ಲ. ಮತ್ತೆ ಹೇಳುವೆ ಕೇಳು ದ್ವಿಜ. ಹರಿಯಜರಿಬ್ಬರು ಹರನ ಶ್ರೀಪಾದಮಗುಟವ ಕಾಣ್ಬೆನೆಂದು ವರಗೃಧ್ರಗಳಾದುದು ಸಟೆಯೇ ? ಸಾಕ್ಷಿ :``ಯುಗ್ಧಸಂಯುಕ್ತ ಉಭಯ ಚ ದೃಷ್ಟ ಬ್ರಾಹ್ಮಣ ರಾಜಸಬದ್ಧ ವರಗೃಧ್ರ |'' (?) ಎಂದುದಾಗಿ, ಹದ್ದು ಹೆಬ್ಬಂದಿಯಾಗಿ ಶ್ರೀಪರಮಾತ್ಮನ ಮಗುಟಚರಣವ ಕಾಣದೆ ತೊಳಲಿ ಬಳಲುತಿರಲು, ಹರಿಯಜರ ಮಧ್ಯದಲ್ಲಿ ಉರಿಲಿಂಗವಾದ ಪರಮಾತ್ಮನ ನಿಲವನರಿಯದೆ, ಅನ್ಯದೈವವ ತಂದು ಪನ್ನಗಧರಗೆ ಸರಿಯೆಂಬ ಕುನ್ನಿಮಾನವರ ತಲೆಕೆಳಗಾಗಿ ನರಕಕ್ಕೆ ಕೆಡುವುದ ಮಾಣ್ಬನೆ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹುಟ್ಟಿದ ಶಿಶುವಿಗೆ ಮೊಲೆ ಮುಡಿ ಜವ್ವನ ಬಂದು, ಬಟ್ಟೆಯೊಳು ನಿಂದು ಆಕಾರವಿಡಿದು ಬಂದ ನಲ್ಲನ ಕೈಯ ಒತ್ತೆಯ ಹಿಡಿವುದ ಕಂಡು ಬೆರಗಾದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹಲವು ಹಡಗವಾದರೇನಯ್ಯಾ ? ಸಮುದ್ರ ಒಂದೇ ನೋಡಾ ! ಹಲವು ಪಕ್ಷಿ ಇದ್ದರೇನಯ್ಯಾ ? ಹಾರುವ ಪವನ ಒಂದೇ ನೋಡಾ ! ಹಲವು ಉಡುರಾಜರಿದ್ದರೇನಯ್ಯಾ ? ಬೆಳಗಮಾಡಿ ತೋರುವ ಸೂರ್ಯ ಒಂದೇ ನೋಡಾ ! ಹಲಬರಿಗೆ ಹಲವು ಗುರುರೂಪಾದ ತಾ ಪರಮಾತ್ಮ ಒಬ್ಬನೆ ನೋಡಾ ! ಹಲಬರು ಕೈಯೊಳು ಬಿಲ್ಲ ಸೇರಿ ಹಲವಂಬಿಲೆಚ್ಚರದು ಎಚ್ಚಾತನ ಕೈಯೋಜೆ. ಇದಿರಿನಲ್ಲಿ ತೋರುವ ಗುರು ಒಬ್ಬನೆ ನೋಡಾ ! ಹಲವು ಲಿಂಗರೂಪಾದಾತ ಶ್ರೀಪರಮಾತ್ಮ ಒಬ್ಬನೆ ನೋಡಾ ! ಹಲಬರ ಕಣ್ಣಿಗೆ ಹಲವು ಜಂಗಮರೂಪಾಗಿ ತೋರುವಾತ ಶ್ರೀ ಪರಮಾತ್ಮ ಒಬ್ಬನೆ ನೋಡಾ ! ಹಲಬರ ಹಣೆಯಲ್ಲಿಹ ದುರ್ಲಿಖಿತಗಳ ತೊಡೆದು ಶ್ರೀ ವಿಭೂತಿಯಾಗಿ ನಿಂದಾತ ಶ್ರೀ ಪರಮಾತ್ಮ ಒಬ್ಬನೆ ನೋಡಾ. ಹಲಬರ ಕೊರಳಲ್ಲಿ ಶ್ರೀ ರುದ್ರಾಕ್ಷಿಯಾಗಿ ನಿಂದಾತ ಶ್ರೀ ಪರಮಾತ್ಮ ಒಬ್ಬನೆ ನೋಡಾ ! ಹಲಬರ ಜಿಹ್ವೆಯ ಕೊನೆಯ ಮೊನೆಯಲ್ಲಿ ಶ್ರೀ ಪಂಚಾಕ್ಷರಿಯಾಗಿ ನಿಂದಾತ ಶ್ರೀ ಪರಮಾತ್ಮ ಒಬ್ಬನೆ ನೋಡಾ ! ಹಲವು ಶಿವಭಕ್ತಜನಂಗಳಿಗೆ ಪಾದೋದಕ ಪ್ರಸಾದವಾಗಿ ಮುಕ್ತಿಯ ತೋರಿದಾತ ಶ್ರೀ ಪರಮಾತ್ಮ ಒಬ್ಬನೆ ನೋಡಾ ! ಹಲಬರಿಗೆ ಹಲವು ರೂಪಾದಾತ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಪರಶಿವನೊಬ್ಬನೆ ಕಾಣಿರೋ !
--------------
ಹೇಮಗಲ್ಲ ಹಂಪ
ಹರಿಣಪಾದಮಾತ್ರದಷ್ಟು ಉಪಾಸ್ತಕೆ (?) ಹರಿ ಸುರ ಬ್ರಹ್ಮಾದಿಗಳು ನೆರೆ ಮೂರುಲೋಕವೆಲ್ಲ ಮರುಳಾಗಿ ವಿಷಯಭಂಗಿತರಾಗಿ ಭವಕೆ ಗುರಿಯಾದರಯ್ಯಾ. ಅದು ಎಂತೆಂದರೆ : ಸಾಕ್ಷಿ :ಹರಣಿಪದಮಾತ್ರೇಣ ಮೋನಸ್ಯ (?) ಜಗತ್ರಯಂ | ಸುಖ ಬಿಂದು ವಿಷಯಾಸ್ತತ ದುಃಖಪರ್ವತ ಏವ ಚ || (?) '' ಎಂದುದಾಗಿ, ಬಿಂದುಸುಖ ವಿಷಯಧಾವತಿಯ ದಂದುಗ, ಸಂಸಾರದುಃಖ ಪರ್ವತದಷ್ಟು ನೋಡ. ನಿಃಸಂಸಾರಿ ನಿರಾಭಾರಿಯಾಗಿ ನೋಡುತಿದ್ದೆಯಲ್ಲ ಜಗದಾಟವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹುಟ್ಟಿದ ಮಾನ್ಯರೆಲ್ಲ ದಶವಾಯು ಪಂಚಭೂತ ಸಪ್ತಧಾತು ಅರಿಷಡ್ವರ್ಗ ಅಷ್ಟಮದಂಗಳನೆಲ್ಲ ಸುಟ್ಟು ಸೂರೆಮಾಡಿ ನಿನ್ನೊಳು ಬೆರೆದರೆ, ಅಂಡಜ ಶ್ವೇದಜ ಉದ್ಬಿಜ ಜರಾಯುಜವೆಂಬ ನಾಲ್ಕು ತೆರದ ಯೋನಿಯಲ್ಲಿ ಹುಟ್ಟಿ, ಚೌರಾಸಿಲಕ್ಷ ಜೀವರಾಸಿಯಾಗಿ ಪಾಪಕರ್ಮವ ಗಳಿಸಿ ಯಮಂಗೆ ಗುರಿಯಾಗುವರಾರು ? ಅದು ಕಾರಣ, ಮೋಡದಮರೆಯ ಸೂರ್ಯನಂತೆ, ಸ್ಫಟಿಕದ ಘಟದೊಳಗಣ ಜ್ಯೋತಿಯಂತೆ, ಸರ್ವರ ಆತ್ಮದೊಳು ಮರೆಗೊಂಡುಯಿಪ್ಪ ತನುಗುಣ ಮನಗುಣ ಅಹಂಕಾರ ಮಾಯಾಮದದ ತಮಂಧದ ಕತ್ತಲೆಯ ಮರೆಮಾಡಿ ಕಾಣಗೊಡದೆಯಿಪ್ಪ ಮರೆಗೊಂಡ ಭೇದವ ಶಿವಶರಣರು ಬಲ್ಲರುಳಿದ ನರಗುರಿಗಳಿಗಸಾಧ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹರನಿಂದೆ ಗುರುನಿಂದೆ ಪರನಿಂದ್ಯವ ತೊರೆದು ಶಿವಕೇಳಿಯೊಳಿಂಬುಗೊಂಡ ಕರ್ಣಕ್ಕೆ ಕರ್ಣೇಂದ್ರಿಯವೆಲ್ಲಿಹುದೋ ? ಕಾಮವೆಂಬ ಶೀತ, ಕ್ರೋಧವೆಂಬ ಉಷ್ಣ , ಮೋಹನ ಮುದ್ದುಮುಖ ಮೊಲೆ, ಅಂಗನೆಯೆಂಬ ಮೃದು, ವಿಷಯಾತುರವೆಂಬ ಕಠಿಣವ ಮುಟ್ಟದೆ, ಲಿಂಗ ಮುಟ್ಟಿ ಲಿಂಗವ ಪೂಜಿಸಿ ಲಿಂಗವ ಮೋಹಿಪ ಹಸ್ತಕ್ಕೆ ತ್ವಗಿಂದ್ರಿಯವೆಲ್ಲಿಯದೋ ? ಶ್ವೇತ ಪೀತ ಹರಿತ ಮಾಂಜಿಷ್ಟ ಮಾಣಿಕ್ಯ ಕಪೋತವರ್ಣವೆಂಬ ಷಡುರೂಪವ ಕಳೆದು ಲಿಂಗದ ಷಡುರೂಪದೊಳಿಂಬುಪಡೆದುಕೊಂಡು ಅನುಮಿಷದೃಷ್ಟಿ ಇಟ್ಟ ನಯನಕ್ಕೆ ನೇತ್ರೇಂದ್ರಿಯವೆಲ್ಲಿಯದೊ ? ತಿಕ್ತ ಕಟು ಕಷಾಯ ಮಧುರ ಆಮ್ಲ ಲವಣವೆಂಬ ಷಡುರುಚಿಗೆಳಸದೆ, ಲಿಂಗಾನುಭಾವಾಮೃತವ ಸೇವಿಪ ಜಿಹ್ವೆಗೆ ಜಿಹ್ವೇಂದ್ರಿಯವೆಲ್ಲಿಯದೋ ? ಗಂಧ ದುರ್ಗಂಧವನಳಿದು ಸ್ವಾನುಭಾವಸದ್ವಾಸನೆಗೆಳಸಿಪ್ಪ ನಾಸಿಕಕ್ಕೆ ಘ್ರಾಣೇಂದ್ರಿಯವೆಲ್ಲಿಯದೋ ? ಇಂತೀ ಪಂಚೇಂದ್ರಿಯಮುಖದಲ್ಲಿ ಪಂಚವದನನ ಮುಖವಾಗಿಪ್ಪ ಶಿವಶರಣರು ಲಕ್ಷಗಾವುದದಲ್ಲಿದ್ದರೂ ಇರಲಿ, ಅಲ್ಲಿಗೆನ್ನ ಮನಮಂ ಹರಿಯಬಿಟ್ಟು ನಮಸ್ಕರಿಸುವೆನು. ಕಂದ :ಲಕ್ಷಯೋಜನದೊಳಾಡೆ ಮುಕ್ಕಣ್ಣನ ಶರಣನೈದನೆನೆ ಕೇಳ್ದೊಲವಿಂ ದಿಕ್ಕನೆ ಮನಮಂ ಕಳುಹಿ ಪ ದಕ್ಕೆರಗುವೆ ನಾಂ ಪ್ರಸನ್ನಶಂಕರಲಿಂಗ. ಈ ಕಾರಣ ನಿಮ್ಮ ಶರಣರ ನೆನೆದು ನೋಡಿ ವಾರ್ತೆಯ ಕೇಳಿ ಮನಮುಟ್ಟಿ ದರುಶನವ ಮಾಡಲೆನ್ನ ಭವ ಹಿಂಗಿತ್ತು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹೊನ್ನಿನಾಸೆ ತನುವಿನೊಳಿಂಬುಗೊಂಡು ಪನ್ನಗಧರ ನಿಮ್ಮ ಮರೆಸಿತಯ್ಯ. ಹೆಣ್ಣಿನ ವಿಷಯ ಮನದೊಳಿಂಬುಗೊಂಡು ಪನ್ನಗಧರ ನಿಮ್ಮಿಂದರಿವ ಜ್ಞಾನವ ಮರೆಸಿತಯ್ಯ. ಮಣ್ಣಿನಾಸೆ ತನು ಮನ ಬುದ್ಧಿಯೊಳಿಂಬುಗೊಂಡು ಜ್ಞಾನದಿಂದರಿವ ಪುಣ್ಯಫಲವ ಮರೆಸಿತಯ್ಯ. ಹೊನ್ನು ಹೆಣ್ಣು ಮಣ್ಣು ಮೂರೆಂಬ ಭಿನ್ನ ವಿಷಯವ ನೆಚ್ಚಿ. ಸಂಸಾರಸಾಗರದೊಳು ಮುಳುಗಿದವರು ನಿಮ್ಮನೆತ್ತ ಬಲ್ಲರಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹಲವು ತರುಗಿರಿ ತೃಣಕಾಷ*ವೆಲ್ಲಕೆಯೂ ಒಂದೇ ಕಿಡಿ ಸಾಲದೇನಯ್ಯಾ ! ಹಲವು ಜನನದಲ್ಲಿ ಒದಗಿದ ಪಾಪಂಗಳ ಸುಡುವರೆ ಗುರುಕರುಣವೆಂಬ ಒಂದೇ ಕಿಡಿ ಸಾಲದೇನಯ್ಯಾ ? ಸಾಕ್ಷಿ :``ಇಂಧನಂ ವಹ್ನಿಸಂಯುಕ್ತಂ ವೃಕ್ಷನಾಮ ನ ವಿದ್ಯತೇ | ಗುರುಸಂಸಾರಸಂಪನ್ನಃ ಸ ರುದ್ರೋ ನಾತ್ರ ಸಂಶಯಃ ||'' ಎಂದುದಾಗಿ, ಅದು ಕಾರಣ, ಎನ್ನ ಭವವ ಕಳೆದು ಲಿಂಗದೇಹಿಯ ಮಾಡಿದ, ಮಾಂಸಪಿಂಡವ ಕಳೆದು ಮಂತ್ರಪಿಂಡವ ಮಾಡಿದ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥನೆಂಬ ಗುರುವ ಮರೆದವರಿಗೆ ಇದೇ ನರಕ.
--------------
ಹೇಮಗಲ್ಲ ಹಂಪ
ಹತ್ತುವಾಯು ಹರಿದಾಡಿ ಆನೊಳ ಸುತ್ತಿ ಸುತ್ತಿ ಕೃತ್ಯದಿಂದ ನರಳಿಸಿ ಒರಲಿಸಿ ಚೇತರಿಸಿ ಆವರಿಸಿ ಕಾಡುತಿದೆ. ಅದು ಎಂತೆಂದೊಡೆ : ಅರೆಗಾಯವಡೆದ ಉರಗಗೆ ಇರುವೆ ಮುಕುರುವಂತೆ, ದಶವಾಯುಗಳ ಮುಖದಲ್ಲಿ ಹರಿವ ಕರಣೇಂದ್ರಿಯಂಗಳು ಮನವೆಂಬ ಅರೆಗಾಯದ ಸರ್ಪಂಗೆ ಮುಕುರಿ ನರಳಿ[ಸಿ] ಕಾಡುತಿವೆ ; ಕಾಡಿದರೇನು ? ಹಲವು ಬಗೆಯಲ್ಲಿ ಹರಿವ ವಾಯುಮುಖದಲ್ಲಿ ನೀನೆ ; ನೀನಲ್ಲದನ್ಯವಿಲ್ಲ . ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹಾಳೂರೊಳಗಣ ನಾಯಜಗಳಕ್ಕೆ ಭೂ[ತ]ಗಳೆದ್ದು ಕೆಲೆವುದ ಕಂಡೆ. ಗಗನದಲಿಪ್ಪ ಗಿಣಿ, ಮಾರ್ಜಾಲನ ನುಂಗುವುದ ಕಂಡೆನು. ಸೂಳೆ ನೆಂಟನ ನುಂಗಿ, ಕೋಳಿ ಸರ್ಪನ ನುಂಗಿ, ಅರಗು ಉದಕವ ನುಂಗಿ, ಸಿರಿ ದರಿದ್ರವ ನುಂಗುವುದ ಕಂಡೆ. ಇದೇನು ಚೋದ್ಯ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹೆಣ್ಣಿನ ಮುದ್ದುಮುಖ ಮೊಲೆ ಮೋಹನ ಮುಗುಳುನಗೆಯ ಕಣ್ಣಿಂದ ಕಂಡು ಕಾಮಾತುರದಿಂದ ತಿಲದಷ್ಟು ಸುಖಕ್ಕಾಗಿ ಬಣ್ಣಗುಂದಿ ಭ್ರಮಿತರಾದರು ನೋಡಾ ಮನುಜರು. ತೆರನರಿಯದೆ ಹೆಣ್ಣಿನ ಮುಖಕಳೆ ತನ್ನ ಕೆಡಿಸುವ ಬಣ್ಣದ ಛಾಯೆಯೆಂದರಿಯರು ನೋಡಾ. ಹೆಣ್ಣಿನ ಸೋಲ್ಮುಡಿ ತಮ್ಮ ಕಟ್ಟುವ ಪಾಶವೆಂದರಿಯದೆ ಹೆಣ್ಣಿನ ಮುಗುಳನಗೆ ತಮ್ಮ ಮುದ್ದಿಸಿ ಭವಕೆ ತರುವ ಮೋಹವೆಂದರಿಯರು ನೋಡಾ. ಹೆಣ್ಣಿನ ಚುಂಬನ ತಮ್ಮ ಹೀರುವ ಭೂತವೆಂದರಿಯರು ನೋಡಾ. ಹೆಣ್ಣಿನ | ನೋಟ ತಮ್ಮ ಇರಿವ ಕಠಾರಿಯೆಂದರಿಯರು ನೋಡಾ. ಹೆಣ್ಣಿನ ಮೊಲೆ ತಮ್ಮ ಭವಕ್ಕಿಕ್ಕಿ ಈಡಿಸುವ ಗುಂಡೆಂದರಿಯರು ನೋಡಾ. ಹೆಣ್ಣಿನ ಯೋನಿ ತಮ್ಮ ತಿರುಹುವ ಗಾಣವೆಂದರಿಯರು ನೋಡಾ. ಇಂತಪ್ಪ ಹೆಣ್ಣಿನ ಮುದ್ದುಮುಖ ಮೊಲೆ ನೋಟ ಮುಗುಳನಗೆ ಚುಂಬನ ಭವದ ಭ್ರಾಂತಿಗೆ ತರಿಸಿ ಹಿಂಡಿ ಹೀರಿ ಹಿಪ್ಪೆಯ ಮಾಡಿ ನುಂಗುವ ಮೃತ್ಯುದೇವತೆಯೆಂದರಿಯರು ನೋಡಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹಸಿಹಂದರದಿ ಪಡೆದ ಗಂಡನ ವಂಚಿಸಿ, ವಿಷಯಾತುರದಿ ಪಿಸುಣಮಾನವರನಪ್ಪುವ ಹಾದರಗಿತ್ತಿಯೆಂತೆ, ಪಂಚಕಳಸವಿಕ್ಕಿ ದೇವಭಕ್ತರ ನಡುವೆ ಹಸ್ತಮಸ್ತಕ ಸಂಯೋಗವ ಮಾಡಿ ಗುರುಕರುಣಿಸಿ ಕೊಟ್ಟ ಪ್ರಾಣಲಿಂಗವನವಿಶ್ವಾಸವ ಮಾಡಿ, ಕ್ಷೇತ್ರ ಜಾತ್ರಿ ಲಿಂಗವ ಕಂಡು, ವಿಶ್ವಾಸವಿಟ್ಟು ಎರಗುವ ಪಂಚಮಹಾಪಾತಕರ ನೋಡಾ ! ಸಾಕ್ಷಿ :``ಪ್ರಾಣಲಿಂಗಮವಿಶ್ವಸ್ಯ ತೀರ್ಥಲಿಂಗಂ ವಿಶೇಷಯೇತ್ | ಪ್ರಸಾದನಿಷ್ಫಲಂ ಚೈವ ರೌರವಂ ನರಕಂ ವ್ರಜೇತ್ || '' ಎಂದುದಾಗಿ, ಮತ್ತೊಮ್ಮೆ ಗ್ರಂಥಸಾಕ್ಷಿಯ ಕೇಳು ಮುಂದರಿಯದ ಮಾನವ. ಸಾಕ್ಷಿ :``ಇದಂ ತೀರ್ಥಮಿದಂ ತೀರ್ಥಂ ಭ್ರಮಂತಿ ತಾಮಸಾ ನರಾಃ| ಶಿವಜ್ಞಾನಂ ನ ಜಾನಂತಿ ಸರ್ವತೀರ್ಥಂ ನಿರರ್ಥಕಂ ||'' ಎಂದುದಾಗಿ. ಇಂತೆಂಬುದನರಿಯದೆ, ಅಜ್ಞಾನದ ಭ್ರಾಂತಿಯಲ್ಲಿ ಅನ್ಯಲಿಂಗವನಾಶ್ರಯಿಸುವ ಕುನ್ನಿಗಳಿಗೆ ಗುರುವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲವಾಗಿ ಮುಕ್ತಿಯೆಂಬುದು ಎಂದಿಗೂ ಇಲ್ಲವಾಗಿ ರೌರವನರಕದಲ್ಲಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹಿಂಗದೆನ್ನಯ ಮನಸು ಗುರುಪಾ ದಂಗಳ ಕೃಪೆಯ ಪಡೆವೆನೆಂಬ ಸುಗ್ಗಿಯೊಳಗೆ ಸಿಲ್ಕಿ. ಪದ : ಶ್ವೇದಜ, ಉದ್ಬಿಜ, ಜರಾಯುಜ, ಅಂಡಜವೆಂಬ ಖ್ಯಾತಿಭವದೊಳು ಸಿಲ್ಕಿ ತೊಳಲಿ ಬಳಲಿ ಬಂದ ಆತ್ಮಶುದ್ಧ ಮೂರೇಳುದೀಕ್ಷೆಯನಿತ್ತು ಶಿವಕುಲ ಜತನ ಮಾಡಿದ ನಿಜಗುರುಪಾದಾಂಬುಜವ ಕಂಡು. | 1 | ನೆತ್ತಿಯೊಳಿಹ ಪರಬ್ರಹ್ಮವಸ್ತುವ ತೆಗೆದು ಬಿತ್ತೆನ್ನೀ ಕರಭೂಮಿಯಲ್ಲಿ ಪರತತ್ವವಂ ವಿಸ್ತರಿಸಿ ಮೂರು ಷಡ್ವಿಧ ಮೂವತ್ತಾರು ದುರ್ಗುಣ ಆತ್ಮ ಸರ್ವಲಿಂಗದೇಹಿಯ ಮಾಡ್ದ ಗುರುಪದವ. | 2 | ಪರಶಾಂತಿಯೆಂಬ ವಿಭೂತಿಯ ಪಣೆಯೊಳ ಗೊರದು ಭವಾಂತರಕರ್ಮವೆಂದೆಂಬ ಗಿರಿಯನಿಡುವ ವಜ್ರಗುಂಡು ರುದ್ರಾಕ್ಷಿಯ ಕೊರಳೊಳು ಧರಿಸ ಕಲಿಸಿದ ಗುರುಪಾದವ. | 3 | ವರಪಂಚಾಕ್ಷರಿಯ ದುರಿತಹರ ದುರ್ಗುಣನಾಶಂ ಪರತತ್ವಕಿದೇ ನಿತ್ಯಾನಂದ ನಿಜನೆಲೆಯೆಂದು ಒರೆದು ಶ್ರೋತ್ರದಿ ಸದಾಕಾಲದಿ ಪ್ರಣಮವನು ಚ್ಚರಿಸೆಂದು ತೋರಿದ ಗುರುಪಾದಾಂಬುಜವ ಕಂಡು. | 4 | ಭವರೋಗಕಿದೆ ವೈದ್ಯ ಶಿವಪಾದಾಂಬು ಪ್ರಸಾದ ಹವಿ ಪಾಪಗಿರಿ ತರುಮರವನು ಸುಡುವುದು ಪವಿತ್ರವಿದ ಸವಿದು ಮೂರಡಿಕ್ರಾಂತನಾಗಿ ಪಾಲಿಪ ನಿಜಗುರುಪಾದಾಂಬುಜವ ಕಂಡು. | 5 | ಗುರುವಿಗೆ ತನುವು ಲಿಂಗಕೆ ಮನವು ಜಂಗಮಕೆ ವರಧನವನಿತ್ತು ಕಿಂಕರ ಭೃತ್ಯ [ಭಾವದಿಂ ಭವ] ಶರಧಿಯ ದಾಂಟುವ ಹಡಗವೆಂ ದೊರೆದು ಭಕ್ತಿಯ ಪಾಲಿಪ ನಿಜಗುರು ಪಾದವ. | 6 | ಇಂತು ಶಿವನ ಅಷ್ಟಾವರಣದೊಳಗೆ ಮನ[ವ ನಿಲಿಸಿ ಸಂತ ನಿರ್ಮ]ಲದೇಹಿಯಾಗಿ ಕೇಳ ನಿ ಶ್ಚಿಂತ ಹೇಮಗಲ್ಲನೆಂದೊರೆದ ಗುರು ಪಡುವಿಡಿ ಶಾಂತ ರಾಜೇಶ್ವರನ ಪಾದಕಮಲಕೆ ಭೃಂಗನಾಗಿಹWನು ಸದಾಘೆ. | 7 |
--------------
ಹೇಮಗಲ್ಲ ಹಂಪ
ಹರಸ್ರಾವದಲ್ಲಿ ಹುಟ್ಟಿ ನರಸ್ರಾವವ ನೆನೆವ ಭಂಡರನೆನಗೊಮ್ಮೆ ತೋರದಿರಯ್ಯಾ ! ಹರಸ್ರಾವವೆಂದರೆ-ಗುರುವಿನ ಕರಕಮಲದಲ್ಲಿ ಹುಟ್ಟಿ ನರರ ತಂದೆತಾಯಿಗಳೆನಬಹುದೆ ? ಎನಲಾಗದು. ನಿಮಗೆ ತಂದೆ ತಾಯಿಗಳೆಂದರೆ ಹೇಳುವೆ ಕೇಳಿರೊ. ಗುರುವೆ ತಾಯಿ, ಗುರುವೆ ತಂದೆ, ಗುರುವೆ ಬಂಧು, ಗುರುವೆ ಬಳಗ, ಗುರುವಿನಿಂದ ಅಧಿಕವಾಗಿಪ್ಪರು ಇನ್ನಾರೂ ಇಲ್ಲ. ಸಾಕ್ಷಿ :``ಗುರುರ್ಮಾತಾ ಗುರುಃಪಿತಾ ಗುರುಶ್ಚ ಬಂಧುರೇವ ಚ | ಗುರುದೈವತಾತ್‍ಪರಂ ನಾಸ್ತಿ ತಸ್ಮೆ ೈ ಶ್ರೀ ಗುರುವೇ ನಮಃ ||'' ಎಂದುದಾಗಿ, ಗುರುಪುತ್ರನಾಗಿ ನರರ ಹೆಸರ ಹೇಳುವ ನರಕಜೀವಿಯನೆನಗೊಮ್ಮೆ ತೋರದಿರಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹುಟ್ಟಿದಂದು ತನುವ ಸೋಂಕಿದ ಲಿಂಗವ, ಸಾವಾಗ ಶರೀರದೊಡನೆ ಹೂಳಿಸಿಕೊಂಬ ಲಿಂಗವ ಬಿಟ್ಟು ಬಟ್ಟೆ ಬಟ್ಟೆಯಲ್ಲಿ ಕಂಡ ಕಲ್ಲಿಗೆರಗುವ ಭ್ರಷ್ಟಹೀನ ಹೊಲೆಯರ ನೋಡಾ ! ಇಂತಪ್ಪವರ ಶಿವಭಕ್ತರೆನಬಹುದೆ ? ಎನಲಾಗದು. ಶಿವಭಕ್ತರಾರೆಂದಡೆ ಹೇಳುವೆ ಕೇಳಿರಣ್ಣಾ ; ಗುರುಲಿಂಗಜಂಗಮವೆ ಶಿವನೆಂದು ನಂಬಿಪ್ಪಾತನೆ ಶಿವಭಕ್ತ. ಗುರುವ ನಂಬದೆ, ಲಿಂಗವ ನಂಬದೆ, ಜಂಗಮವ ನಂಬದೆ ಕಿರುಕುಳದೈವಕ್ಕೆ ಹರಕೆಯ ಹೊರುವವ ಭಕ್ತನೂ ಅಲ್ಲ, ಭವಿಯೂ ಅಲ್ಲ. ಇಂತಿವೆರಡರೊಳು ಒಂದೂ ಅಲ್ಲಾದ ಎಡ್ಡಗಳ ನಾನೇನೆಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹಳ್ಳ ಮೇರೆದಪ್ಪಿದರೆ ಇಳಿವುದು, ಹೊಳೆ ಮೇರೆದಪ್ಪಿದರೆ ಇಳಿವುದು, ಸಮುದ್ರ ಮೇರೆದಪ್ಪಿದರೆ ಇಳಿವುದು. ಮನ ಮೇರೆದಪ್ಪಿದರೆ ಏರಿ ಇಳಿದು ಕಾಡುತ್ತಿದೆ. ಅದು ಎಂತೆಂದರೆ : ಹಳ್ಳ ಮೇರೆದಪ್ಪಿದರೆ ಸಂಗಡ ಕಾಯಿಯಿಂದ ನಡೆವುದು. ಹೊಳೆ ಮೇರೆದಪ್ಪಿದರೆ ಹರುಗೋಲು ನಡೆವುದು. ಸಮುದ್ರ ಮೇರೆದಪ್ಪಿದರೆ ಭೈತ್ರ ನಡೆವುದು. ಮನ ಮೇರೆದಪ್ಪಿದರೆ ಎನ್ನ ಕೊಂಡು ಮುಳುಗಿತ್ತು. ಈ ಮನ ವೇದ ಶಾಸ್ತ್ರ ಆಗಮದ ಕಟ್ಟಳೆಗೆ ನಿಲ್ಲುವುದೆ ? ನಿಲ್ಲದು. ಓದುವುದು ಮನ, ಹೇಳುವುದು ಮನ, ಕೇಳುವುದು ಮನ, ಕೇಳಿ ನರಕಕ್ಕಿಳಿವುದು ಕೆಡುವುದು ಮನ. ಈ ಮನದಂದುಗದ ದಾಳಿಯಲ್ಲಿ ನೊಂದು ಬೆಂದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹರಲಿಂಗಕೆ ಹರಿ ಅಜಾಸುರರು ಸರಿಯೆಂಬ ಕುರಿಮಾನವ ನೀ ಕೇಳಾ. ಹರ ನಿತ್ಯ, ಹರಿಯಜಾಸುರರು ಅನಿತ್ಯ. ಅದೇನು ಕಾರಣವೆಂದರೆ : ಹರಿಗೆ ಹತ್ತು ಪ್ರಳಯ, ಬ್ರಹ್ಮಂಗೆ ಅನಂತಪ್ರಳಯ, ಸುರರ ಪ್ರಳಯವೆಂದರೆ ಅಳವಲ್ಲ. ಪ್ರಳಯಕ್ಕೆ ಗುರಿಯಾಗಿ ಸತ್ತು ಸತ್ತು ಹುಟ್ಟುವ ಅನಿತ್ಯದೈವವ ತಂದು ನಿತ್ಯವುಳ್ಳ ಶಿವಂಗೆ ಸರಿಯೆಂಬ ವಾಗದ್ವೈತಿಯ ಕಂಡರೆ ನೆತ್ತಿಯ ಮೇಲೆ ಟೊಂಗನಿಕ್ಕೆಂದಾತ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹಂಸೆಯ ಪಂಜರವ ಹಿಡಿದಾಳುವ ರಕ್ಷಿ ಮಾಂಸದ ಗುಡಿಯ ತಿಂದು, ಮರುಜೇವಣಿಗೆಯ ಬೆಟ್ಟವನಡರಿ ಕೂಗುತ ತೆಳಗಿಳಿಯದ ಮುನ್ನ ಒಡ್ಡಿದಾವೆ ಮಹಾದುಃಖದಲ್ಲಿ ಮೂರು ಬಲಿ. ಬಲಿಯ ಬಿದ್ದು, ನಲಿದಾಡುವ ಮಾಯೆಯ ಕಂಡೆನೆಂದ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹೆಳವನಿದ್ದೆಸೆಗೆ ಜಲನಿಧಿ ನಡೆತಂದಂತೆ, ಕರುಣಜಲಮೂರ್ತಿಲಿಂಗ ಎನ್ನ ಕರಸ್ಥಲಕೆ ನಡೆತಂದನಲ್ಲ ! ರೋಗಿಯಲ್ಲಿಗೆ ಅಮೃತವೆ ಮೈಯಾಗಿ ನಡೆತಂದಂತೆ, ಭವರೋಗದ ಪಾಪಿ ಪಿಸುಣಮಾನವನಿದ್ದೆಡೆಗೆ ಅಮೃತಕರಮೂರ್ತಿ ನಡೆತಂದನಲ್ಲ ಎನ್ನ ಕರದೊಳು !. ಘೋರಾಂಧಕಾರದ ಕತ್ತಲೆಯೊಳು ತೊಳಲಿ ಬಳಲುವ ಕಮಲದೆಡೆಗೆ ಸೂರ್ಯನುದಯವಾದಂತೆ, ಮಾಯಾತಮಂಧವೆಂಬ ಕತ್ತಲೆಯೊಳು ತೊಳಲಿಬಳಲುವ [ವೇಳೆಯೊಳು] ದ್ಯುಮಣಿಕೋಟಿ ಪ್ರಕಾಶಲಿಂಗವ ಕಂಡೆನಲ್ಲಾ ಎನ್ನ ಕರದೊಳು ! ಹಗಲೆ ಬಳಲುವ ಕುಸುಮದೆಡೆಗೆ, ಇರುಳುಗವಿದು, ಶಶಿ ಉದಯವಾದಂತೆ, ಹಗಲು ಇರುಳೆಂಬ ಬಂಧನದ ಬಯಕೆಗೆ ಸಿಕ್ಕಿದ ಮಾನವನೆಡೆಗೆ ಶಶಿಕಾಂತಲಿಂಗ ಉದಯವಾದನಲ್ಲ ಎನ್ನ ಕರದೊಳು ! ಸುದತಿ ಬಯಸಲು ಪುರುಷಾತ್ಮ ಕೈಸಾರಿದಂತೆ ಹಲವು ಜನನದಿ ಬಯಸಿ ಬಳಸಿದರೂ ಸಿಲ್ಕದ ಲಿಂಗವೆನ್ನ ಕೈಸಾರಿತಲ್ಲ ! ಪರವೆ ಗೂಢಾಗಿಪ್ಪ ಲಿಂಗವ ಕಂಡೆನಲ್ಲ ಎನ್ನ ಕರದೊಳು ! ಶರೀರದೊಳು ಪರಿಪೂರ್ಣವಾಗಿಹ ಲಿಂಗವ ಕಂಡೆನಲ್ಲ ಎನ್ನ ಕರದೊಳು ! ಸಾಕ್ಷಿ :``ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾಮಯಮ್ |'' ಯಥ್ಶೆಶ್ವರಂ ಹ್ಯಾದಿ ತೇಜಃ ತಲ್ಲಿಗಂ ಪಂಚಸಂಜ್ಞಕಂ ||'' ಎಂಬ ಪಂಚಸಂಜ್ಞೆಯನೊಳಕೊಂಡ ಲಿಂಗವು ಎನ್ನ ಕರಸ್ಥಲ ಉರಸ್ಥಲ ಶಿರಸ್ಥಲ ಮನಸ್ಥಲ ಜ್ಞಾನಸ್ಥಲ ಭಾವಸ್ಥಲ ಪರಿಪೂರ್ಣವಾಗಿ `ಲಿಂಗದಷ್ಟಸ್ಯ ದೇಹನಂ', ಸರ್ವಾಂಗದೊಳಗೆಲ್ಲ ಲಿಂಗಮಯವಾಗಿ ಲಿಂಗಲಿಂಗ ಸಂಗಸಂಗಯೆಂಬಾ ಪರಮಹರುಷದೊಳೋಲಾಡುತಿದ್ದೆನಲ್ಲಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹೆಳವರ ನಡುವೆ ಅಂಧಕರ ನಡುವೆ ಮನೆಬೆಂದಂತೆ ಸಂಸಾರ. ಅದು ಎಂತೆಂದರೆ : ಹೆಳವ ಅಡಿಯಿಟ್ಟು ನೊಂದಿಸಲಾರ, ಅಂಧಕ ಕಣ್ಣುಗಾಣ. ಅಜ್ಞಾನವೆಂಬುದೆ ಅಂಧಕನ ತೆರ,ಸುಜ್ಞಾನವೆಂಬುದೆ ಹೆಳವನ ತೆರ. ಅದು ಎಂತೆಂದರೆ : ಕರಣಗುಣ ಮನವಿಕಾರಂಗಳು ಹೆಚ್ಚಿಗೆ ನಡೆಯದೆ, ಕೈಕಾಲು ಮುರಿದು ಅಡಿಯಿಡಗೊಡದಕಾರಣ ಹೆಳವನೆಂಬ ಭಾವ. ಇಂತಿವರಿಬ್ಬರ ನಡುವೆ ಬೇವ ಮನೆಯೆಂದರೆ ಪಂಚಭೂತಸಂಬಂಧವಪ್ಪ ದೇಹ. ಈ ದೇಹಕ್ಕೆ ತಾಪತ್ರಯವೆಂಬ ಅಗ್ನಿ ಹತ್ತಿ ಸುಡುತ್ತಿದ್ದಕಾರಣದಿ ಅಗ್ನಿಯೆಂಬ ನಾಮ. ಮರಕೆ ಮರ ಹೊಸದು ಅಗ್ನಿ ಬಿದ್ದಂತೆ ತನುಗುಣ ಮನಗುಣ ಹೊಸೆದಾಡಿ ಕಾಯದೊಳುರಿದುರಿದು ಬೆಂದು ಜೀವ ಘೋರಸಂಸಾರ. ಅದು ಎಂತೆಂದರೆ : ಸಾಕ್ಷಿ : ``ಸಂಸಾರದುಃಖಕಾಂತಾರೇ ನಿಮಗ್ನಶ್ಚ ಮಹಾತಪೇ | ಚಕ್ರದ್ಭ್ರಮತೇ ದೇವಿ ಲಿಂಗಂ ನೈವ ಚ ದರ್ಶಿತಂ || '' ಎಂದುದಾಗಿ, ಇಂತಪ್ಪ ಸಂಸಾರವನೆಂತು ನೀಗುವೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ ?
--------------
ಹೇಮಗಲ್ಲ ಹಂಪ
ಹರ ತ್ರಿಪುರದಹನದಲ್ಲಿ [ಈಕ್ಷಿಸಿ] ನೋಡಲಾಕ್ಷಣ ನಯನಜಲದೊರೆದು ಉದಯವಾದ ಶ್ರೀರುದ್ರಾಕ್ಷಿ. ಪರಮ ಮುನಿಗಳಿಗೆ ಮೋಕ್ಷಾರ್ಥವನೀವ ಶ್ರೀರುದ್ರಾಕ್ಷಿ. ಧರೆಯ ಸದ್ಭಕ್ತರುಗಳ ಪಾಲನಮಾಡಿ ತೋರುವ ಶ್ರೀರುದ್ರಾಕ್ಷಿ, ಕರ್ಮಶರಧಿಯ ನಿಟ್ಟೊರಸುವುದಕ್ಕೆ ಶ್ರೀರುದ್ರಾಕ್ಷಿ. ದರುಶನವ ಮಾಡಿದರೆ ಲಕ್ಷಪುಣ್ಯ, ಸ್ಪರುಶನವ ಮಾಡಿದರೆ ಕೋಟಿಫಲಂ, ಧರಿಸಿದಡಂ ದಶಶತಕೋಟಿ ಫಲಂ ಇನಿತು ಫಲವಪ್ಪುದು ಶ್ರೀ ರುದ್ರಾಕ್ಷಿಯಿಂ. ಸಾಕ್ಷಿ : ``ಲಕ್ಷಂ ತದ್ದರ್ಶನಾತ್ಪುಣ್ಯಂ ಕೋಟಿಃ ಸಂಸ್ಪರ್ಶನಾದಪಿ | ದಶಕೋಟಿ ಶತಂ ಪುಣ್ಯಂ ಧಾರಣಾತ್ ಲಭತೇ ನರಃ ||'' ಹೀಗೆನಿಸುವ ರುದ್ರಾಕ್ಷಿಯ ಧರಿಸಿ, ರುದ್ರಪದವಿಯನೈದುವುದು ತಪ್ಪದು ನೋಡಾ ! ಅದು ಹೇಗೆಂದರೆ :ಆವನೊಬ್ಬನು ಕೊರಳಲ್ಲಿ ರುದ್ರಾಕ್ಷಿಯ ಧರಿಸೆ ಅವನ ಕುಲಕೋಟಿ ಸಹವಾಗಿ ಶಿವಲೋಕವನೈದರೆ ? ಅದಕೆ ಶ್ರುತಿ ದೃಷ್ಟವುಂಟೇಯೆಂದರೆ ಉಂಟು. ಸಾಕ್ಷಿ : ``ರುದ್ರಾಕ್ಷಾಶ್ರಿತಕಂಠಶ್ಚ ಗೃಹೇ ತಿಷ*ತಿ ಯೋ ನರಃ | ಕುಲೈಕಂ ವಿಂಶಯುಕ್ತಂ ಚ ಶಿವಲೋಕೇ ಮಹೀಯತೇ ||'' ಎಂದೆನಿಸುವ ರುದ್ರಾಕ್ಷಿಯ ಮೂಲ ಬ್ರಹ್ಮನೆಂದಿತ್ತು ಪೌರಾಣ. ರುದ್ರಾಕ್ಷಿಯ ಗಳ ವಿಷ್ಣುವೆಂದಿತ್ತು ಪೌರಾಣ. ರುದ್ರಾಕ್ಷಿಯ ಮುಖ ಸದಾಶಿವನೆಂದಿತ್ತು ಪೌರಾಣ. ರುದ್ರಾಕ್ಷಿಯ ಸರ್ವಾಂಗವೆಲ್ಲ ಸರ್ವದೇವರೆಂದಿತ್ತು ಪೌರಾಣ. ಸಾಕ್ಷಿ :``ರುದ್ರಾಕ್ಷಿಮೂಲಂ ಬ್ರಹ್ಮಾ ಚ ತನ್ನಾಳಂ ವಿಷ್ಣುರುಚ್ಯತೇ | ಮುಖಂ ಸದಾಶಿವಂ ಪ್ರೋಕ್ತಂ ಬಿಂದುಃ ಸರ್ವತ್ರ ದೇವತಾ ||'' ಎಂದೆನಿಸುವ ರುದ್ರಾಕ್ಷಿಯ ಧರಿಸಿ ರುದ್ರನಾಗಿದ್ದೆನು. `ಅತಏವ ರುದ್ರಾಕ್ಷಿಧಾರಣಂ ರುದ್ರಾ'ಯೆಂದಿತ್ತು ವೇದ. ರುದ್ರಾಕ್ಷಿಯ ಧರಿಸಿ ಶುದ್ಧಚಿದ್ರೂಪನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹರಿ ಸುರ ಬ್ರಹ್ಮರ ಪರಿಯಾಟಗೊಳಿಸಿದ ಮಾಯಾದುರಿತವೆನ್ನ ಕಾಡುತಿದೆ, ಶಿವಶಿವ ಇದಕಿನ್ನೆಂತೊ ! ನೀನಿಕ್ಕಿದ ಕಿಚ್ಚು ನೀ ನೊಂದಿಸಿದರೆ ನೊಂದೂದಲ್ಲದೆ ಮತ್ತಾರಿಗೆಯೂ ನೊಂದದು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ

ಇನ್ನಷ್ಟು ...