ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕುಲ ಛಲ ರೂಪ ಯೌವ್ವನ ವಿದ್ಯೆ ಧನ ರಾಜ್ಯ ತಪಮದವೆಂಬ ಅಷ್ಟಮದಂಗಳ ಬಹಿರಂಗದಲ್ಲಿ ನೆನೆದು ಬರಿದೆ ಭ್ರಮೆಗೆ ಸಿಲ್ಕಿ ಬಳಲುತ್ತಿಪ್ಪರಯ್ಯ. ಅದು ಎಂತೆಂದಡೆ : ಅಂಧಕನ ಮುಂದಣ ಬಟ್ಟೆಯಂತೆ, ಹುಚ್ಚಾನೆಯ ಮುಂದಣ ಬ್ಥಿತ್ತಿಯಂತೆ, ಎನ್ನ ಅನ್ಯೋನ್ಯದ ಬಾಳುವೆಗೆ ಗುರಿಮಾಡಿ ಎನ್ನ ಕಾಡುತಿದ್ದೆಯಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕೊಡುವವ ಮಾನವನೆಂದು ಒಡಲಾಸೆಯ ತೋರದಿರು, ಕೊಡುವವ ಮಾನವನಲ್ಲ. ಕೊಡುವವ ಕೊಂಬುವವ ಮಾನವರ ನಡುವಿಪ್ಪ ಮಹಾತ್ಮ ಸಂಜೀವಂಗೆ ಒಡಲಾಸೆ ತೋರಿ ಬೇಡಿಕೊ. ಜೀವನ ಬುದ್ಧಿಯಿಂದ ನರನನಾಸೆಗೈಯದಿರು. ಆಸೆಗೈದರೆ ಕಾವವರಲ್ಲ , ಕೊಲ್ಲುವವರೂ ಅಲ್ಲ , ಕೊಡುವವರೂ ಅಲ್ಲ , ಬಿಡುವವರೂ ಅಲ್ಲ . ನಾಯ ಬಾಲವ ನಂಬಿ ಹೊಳೆಯ ಹಾದವರುಂಟೇ ? ವೈಷಭನ ಬಾಲವ ಪಿಡಿದರೆ ನದಿಯ ತಡಿಯ ಸೇರುವರಲ್ಲದೆ. ನಂಬು ನಂಬು ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲನೆಂಬ ಮಹಾಭಾಗ್ಯವ ನಂಬಿದರೆ ನಿನಗೆ ಬಡತನವೆ ಆತ್ಮ ?
--------------
ಹೇಮಗಲ್ಲ ಹಂಪ
ಕೂಪದ ತಡಿಯ ಹುಲ್ಲ ಮೇವ ಎರಳೆಯನೆಚ್ಚಲು ಬಂದ ವ್ಯಾಧನ ಬಾಣದಲೊಂದು ಅಚ್ಚ ಆಶ್ಚರ್ಯವ ಕಂಡೆನು. ಕರಿಯ ಮುಖವೈದು, ಬಿಳಿಯ ಮುಖವೈದು, ಮುಂದೈದು ಮುಖದ ಸಂಭ್ರಮವ ಕಂಡು ಎರಳೆ ಬೆದರಿ ಬಾವಿಯ ಬೀಳುತಿರ್ದಡಿದೇನು ಚೋದ್ಯವೋ ! ಚೋದ್ಯದ ಹಗರಣವ ಕಂಡು ಅಡವಿಯ ರಕ್ಷಿ ನಗುತಿದೆ ಇದೇನೋ ನಿನ್ನ ಮಾಯದ ವಿಗಡ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕರಸ್ಥಲದ ಲಿಂಗ ಕೈಸೇರಿ ಇರು ತಿರಲನ್ಯ ಭಯಗಳುಂಟೆ ಗುರುವೆ ? ಪದ :ಕಂಠೀರ[ವ]ನಿಹ ವನದೊಳು ಕರಿಯಭಯ ವುಂಟೇ ಇನ್ನಾ ತೆರದೊಳು ಬಂಟಾಯುಧವಿರೆ ಕರದೊಳು ಸೂಜಿಯ ಮೊನೆಯ ತುಂಟಕದ ಭಯಗಳುಂಟೆ ಗುರವೆ ? | 1 | ಕರಿಯನೇರಿ ಪೋಗುತಿರಲು ಶುನಿ ಬಗುಳುತ ಬರುತಿರುವ ಭಯಗಳುಂಟೆ ನೋಡಾ. ಹರನೆನ್ನ ಕರದೊಳಿರಲು ಪಂಚೇಂದ್ರಿ ದುರಿತ ಭಯದಂಜಿಕೆಯುಂಟೆ ಗುರುವೆ ? | 2 | ದ್ಯುಮಣಿಗುರಿಯ ಭಯಗಳುಂಟೆ ? ಅಷ್ಟದಳ ಕಮಲದೊಳು ಸುಳಿವ ಹಂಸ ತಾನೆ ಭ್ರಮರನಂತೆ ಕರಕಮಲದ ಲಿಂಗವ ತಾ ಭ್ರಮಿಸೆರಗೆ ಭಯಗಳುಂಟೆ ಗುರುವೆ ? | 3 | ಉರಿಯುತಿರೆ ಜ್ಯೋತಿ ಗೃಹದಿ ತಮ ನಡೆದು ಬರುವ ಬ್ಥೀತಿಯುಂಟೆ ನೋಡಾ. ಪರಂಜ್ಯೋತಿರ್ಲಿಂಗಯೆನ್ನ ಅಂಗಾಕಾರದೆ ಇರೆ ಮಾಯದ ಬ್ಥೀತಿಯುಂಟೆ ಗುರುವೆ ? | 4 | ಉರಗ ಮುಟ್ಟಲು ಓರ್ವನ ತನು ವಿಷದಿ ಭರಿತವಾದಂತೆ ಶರಣ ಶರೀರವನು ಸೊಮ್ಮು ಸೋಂಕಿ ಸರ್ವಾಂಗ ಕಾರಣಲಿಂಗವಾಗೆ ಭಯವೆ ಗುರುವೆ ? | 5 | ಅಗಲದೆ ಸರ್ವಾಂಗದಿ ಭರಿತವಾದಂತೆ ಶರಣ ಶಿವಲಿಂಗ ಝಗಝಗಿಸುತಿದೆ ಕೋಯೆಂದು ನುಡಿದು ಪೊಗಳ್ದ ಹೇಮಗಲ್ಲ ಹಂಪ ಪಡುವಿಡಿಯ ಬಗೆಯ ಗುರು ರಾಚನಿರವು ತಾನೆ | 6
--------------
ಹೇಮಗಲ್ಲ ಹಂಪ
ಕರಿಯ ಕಾಲೊಳಗೆ ಸಿಕ್ಕಿದ ಮರಿಯ ನಾಯಿಯಂತೆ, ಅಷ್ಟಮದವೆಂಬ ಕರಿಯ ಕಾಲೊಳಗೆನ್ನ ಸಿಗಿಸಿ, ಮೆಟ್ಟಿ ಮೆಟ್ಟಿ ತುಳಿಸುತ್ತಿದ್ದೆಯಲ್ಲ ! ಅರಸಿನ ಉಪ್ಪನುಂಡು ಆನೆ ಸೇನೆ ದಳ ಅರಸWನಘೆ ಕೈಸೆರೆ ಹಿಡಿವಂತೆ, ಎನ್ನಾತ್ಮದಲ್ಲಿ ಹುಟ್ಟಿದ ಮದ, ಎನ್ನನೆ ತಿಂದು ತೇಗುತ್ತಿದ್ದವಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕಣ್ಗೆಡಿಸಿತ್ತು ಮಾಯಾಕಾವಳ, ಕಾಲ್ಗೆಡಿಸಿತ್ತು ಮಾಯಾಕಾವಳ, ತನುಗೆಡಿಸಿತ್ತು ಮಾಯಾಕಾವಳ. ದಿನಕ್ಕೊಮ್ಮೆ ಕತ್ತಲೆಗವಿದರೆ, ಎನಗೆ ಗಳಿಗೆ ಗಳಿಗೆಗೆ ಮಾಯಾತಮಂಧ ಕತ್ತಲೆ. ಸಮುದ್ರಕ್ಕೆ ದಿನಕ್ಕೊಮ್ಮೆ ತೆರೆ ಬಂದರೆ, ಎನ್ನ ಮನವಿಕಾರದ ತೆರೆ ವೇಳೆವೇಳೆಗೆ ಕವಿದವು. ವರುಷವರುಷಕೊಂದು ಜೋಳದ ಬೆಳೆಯಾದರೆ ಎನ್ನ ತನುವಿಕಾರದ ಚಿಂತೆ ಕರ್ಮದ ಬೆಳೆಯು ಸದಾ ಬೆಳೆಯುತಿಪ್ಪುದು. ಈ ಮಾಯಾತಮಂಧವೆಂಬ ವಿದ್ಥಿಗೆನ್ನ ಗುರಿಮಾಡಿ ಬಿಟ್ಹೋಗದಿರು, ತೊಲಗದಿರು. ಕಾಳಿ ಹೊಲೆಯನದಾದಡೇನು, ಬಿರಿದು ಒಡೆಯನದು. ಕರ್ಮದ ಬಾಯಿ ಹೊಲೆಯಾದಡೇನು ಸುಜ್ಞಾನದ ಮರ್ಮವನಿತ್ತು ಸಲಹಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕಾಮವು ಲಿಂಗಮುಖವಾಗಿ, ಕ್ರೋಧವು ಲಿಂಗಮುಖವಾಗಿ, ಲೋಭವು ಲಿಂಗಮುಖವಾಗಿ, ಮೋಹವು ಲಿಂಗಮುಖವಾಗಿ, ಮದವು ಲಿಂಗಮುಖವಾಗಿ, ಮತ್ಸರವು ಲಿಂಗಮುಖವಾಗಿ ಇಪ್ಪಾತನೆ ನಿರ್ಮೋಹಿ. ಅದು ಎಂತೆಂದೊಡೆ : ಪರಧನ ಪರಸ್ತ್ರೀಯ ಕಾಮಿಸುವಂತೆ ಲಿಂಗವ ಕಾಮಿಸುವುದೆ ಕಾಮ. ಪರರೊಳು ಕ್ರೋದ್ಥಿಸುವಂತೆ ಕರ್ಮವಿರಹಿತನಾದರೆ ಕ್ರೋಧ. ಅರ್ಥ ಸ್ತ್ರೀಯರ ಮೇಲೆ ಲೋಭವಿಡುವಂತೆ ಲಿಂಗದೊಡನೆ ಲೋಭವಿಟ್ಟು ಲಿಂಗವ ಕೂಡಬಲ್ಲರೆ ಲೋಭ. ಅನ್ಯರ ಮೋಹಿಸುವಂತೆ ಲಿಂಗವ ಮೋಹಿಸಬಲ್ಲರೆ ಮೋಹ. ಅನ್ನಮದ ಪ್ರಾಯಮದ ತಲೆಗೇರುವಂದದಿ ಲಿಂಗಮದನಾಗಿರಬಲ್ಲರೆ ಮದ. ಅನ್ಯರೊಡನೆ ಮತ್ಸರಿಸುವಂತೆ ಲಿಂಗದೊಡನೆ ಮತ್ಸರಿಸಿ ಶರಣಕೃಪೆಯ ಪಡೆಯಬಲ್ಲರೆ ಮತ್ಸರ. ಇಂತಪ್ಪ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದಲ್ಲಿ ಲಿಂಗಮುಖವಾಗಿಪ್ಪ ಶರಣರ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕಂಡೆನೆನ್ನ ಕರದೊಳು ಕರುಣವರಮೂರ್ತಿಲಿಂಗವ. ಕಂಡೆನೆನ್ನ ಕರದೊಳು ಆತ್ಮಲಿಂಗವ. ಕಂಡೆನೆನ್ನ ಕರದೊಳು ಚಿನ್ಮಯ ಚಿದ್ರೂಪ ಚಿತ್ಪ್ರಕಾಶಲಿಂಗವ. ಕಂಡೆನೆನ್ನ ಕರದೊಳು ಮನಾತೀತಮಗೋಚರ ಲಿಂಗವ. ಕಂಡೆನೆನ್ನ ಕರದೊಳು ನಿರ್ನಾಮ ನಿರ್ಗುಣ ನಿರಂಜನ ನಿರವಯಲಿಂಗವ. ಕಂಡೆನೆನ್ನ ಕರದೊಳು ಮಹಾಲಿಂಗವ. ಸಾಕ್ಷಿ : ``ಮಹಾಲಿಂಗಮಿದಂ ದೇವಿ ಮನೋತೀತಮಗೋಚರಂ | ನಿರ್ನಾಮ ನಿರ್ಗುಣಂ ನಿತ್ಯಂ ನಿರಂಜನ ನಿರಾಮಯಂ ||'' ಎಂದೆನಿಸುವ ಲಿಂಗವ ಕಂಡೆನಲ್ಲ ಎನ್ನ ಕರದೊಳು ! ಆ ಲಿಂಗವೆನ್ನ ಕರಸ್ಥಲಕ್ಕೆ ಇಷ್ಟಲಿಂಗವಾಗಿ, ಮನಸ್ಥಲಕ್ಕೆ ಪ್ರಾಣಲಿಂಗವಾಗಿ, ಭಾವಸ್ಥಲಕ್ಕೆ ಭಾವಲಿಂಗವಾಗಿ ; ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಮೂರುಲಿಂಗವೆ ಆರುಲಿಂಗವಾಗಿ, ಆರುಲಿಂಗವೆ ಮೂವತ್ತಾರು ಲಿಂಗವಾಗಿ , ಮೂವತ್ತಾರು ಲಿಂಗವೆ ಇನ್ನೂರ ಹದಿನಾರು ಲಿಂಗವಾಗಿ, ಸರ್ವಾಂಗವೆಲ್ಲ ಲಿಂಗಮಯವಾಗಿ, ಸರ್ವತೋಮುಖದ ಲಿಂಗವೆ ಗೂಡಾಗಿಪ್ಪ ಶರಣ ಬಸವಣ್ಣ ಚೆನ್ನಬಸವಣ್ಣ ಪ್ರಭುರಾಯ ಮುಖ್ಯವಾದ ಅಸಂಖ್ಯಾತ ಮಹಾಗಣಂಗಳ ಲೆಂಕರ ಲೆಂಕನೆಂದೆನಿಸಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕೋಣನ ಕೊರಳಲ್ಲಿ ಕಪಿ, ಬೆನ್ನಿನಲ್ಲಿ ರಕ್ಷಿ, ಬಾಲದ ಜವೆಗೊಂದೊಂದು ಮುಸುವ, ಕೊಂಬಿನ ಮೇಲೆ ಕುಣಿವ ಗಿಡುಗ ; ಇಂತಿವೆಲ್ಲವ ಸಂತೈಸಿಕೊಂಡು ರಕ್ಷಿ ನಡೆದಳು. ತಮಪುರವೆಂಬ ಪಟ್ಟಣಕ್ಕೊಸ್ತಿಯ ಹೋಗಿ, ಆ ಪಟ್ಟಣದೊಳು ಸ್ಥಿರವಾಗಿ ನಿಂದು, ಬದುಕು ಮನೆ ಅರ್ಥವಂ ಗಳಿಸಿ, ತಮಪುರದರಸಿಂಗೆ ಸರಿಗೊರನಿಕ್ಕಿ ತಮದ ಮರೆಯಲ್ಲಿಪ್ಪ ವನಿತೆಯ ಕಂಡರೊ[ಂದ]ಗ್ನಿ, ನಡೆದರೆರಡಗ್ನಿ, ನುಡಿದರೆ ಮೂರಗ್ನಿ, ಕೇಳಿದರೆ ನಾಲ್ಕಗ್ನಿ, ವಾಸಿಸಿದರೈದಗ್ನಿ. ಆ ಗಿರಿಯೊಳು ನಿಂದು, ಗಿಡುಗನನಡಸಿ, ಮುಸುವನ ಹರಿಯಬಿಟ್ಟು, ಕಪಿಯ ಕೈವಿಡಿದು ಜಪವ ಮಾಡಿ, ಕೋಣನ ನೆರೆ ಕೂಗುವವ ನುಡಿಯ ಪಾಶದೊಳು ಸಿಲ್ಕಿ, ತ್ರಿಲೋಕವೆಲ್ಲ ವ್ರತಭ್ರಷ್ಟರಾದ ಚೋದ್ಯವ ಕಂಡು ನಾ ಬೆರಗಾಗುತಿರ್ದೆನು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕಾಮಧೇನುವಲ್ಲದೆ ಸಾದಾ ಧರೆಯ ಗೋವುಗಳು ಪಂಚಾಮೃತವನೀಯಬಲ್ಲವೆ ? ಸರ್ವರ ತೃಪ್ತಿಂಗೆ ಕೇಳು ಆತ್ಮ. ಕಲ್ಪವೃಕ್ಷ ಸ್ವಾದಫಲವೀವುದೆಂದು ಬೇವಿನಮರಕೆ ಹಾರೈಸಿಹೋದರೆ ಬರೆಕಾಯಿ. ಕಾಮಧೇನು ಕಲ್ಪವೃಕ್ಷಗಿಂದಲಿ ಮೀರಿದ ಕಾಮಾರಿಲಿಂಗ ನಿನ್ನ ಆತ್ಮದೊಳಿರಲು ಅದ ಮರದು ಅನ್ಯರಿಗೆ ಆಸೆಗೈಯದಿರು. ಆಸೆಗೈ ಆಸೆಗೈ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವ.
--------------
ಹೇಮಗಲ್ಲ ಹಂಪ
ಕ್ಷೀರವನೊಲ್ಲದೆ ಹಂಸ ನೀದಂಗೆ ಹರಿವಂತೆ, ಕಮಲದ ಪರಿಮಳವನೊಲ್ಲದ ತುಂಬಿ ದತ್ತೂರ ಕುಸುಮಕ್ಕೆ ಹರಿವಂತೆ, ನಿನ್ನಸಂಗದಿಂದಾದ ತನುಮನ ನಿನ್ನನರಿಯದೆ ಸಂಸಾರಸಂಗಕ್ಕೆಳಸುವವು. ಇದಕಿನ್ನೆಂತೂ ಶಿವನೆ ! ನೀನೊಡ್ಡಿದ ಸಂಸಾರಬಂಧನವ ನೀನೆ ಪರಹರಿಸಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕಂದ : ಬಣ್ಣಿಪರಳವೆ ಶ್ರೀ ಪಂಚಾಕ್ಷರಿ ಉನ್ನತ ಮಹಿಮೆಯ ತ್ರಿಜಗದೊಳಗಂ ಎನ್ನಯ ಬಡಮತಿಯುಳ್ಳಷ್ಟಂ ಇನ್ನಂ ಪೊಗಳ್ವೆ ಸಿದ್ಧಮಲ್ಲನ ಕೃಪೆಯಿಂ. ರಗಳೆ :ಗುರು ಮಹಿಮೆಯನೋಪ ಪಂಚಾಕ್ಷರಿಯು ನಾಗಭೂಷಣನರ್ತಿನಾಮ ಪಂಚಾಕ್ಷರಿಯು | 1 | ನಡೆವುತಂ ನುಡಿವುತಂ ಶಿವನೆ ಪಂಚಾಕ್ಷರಿಯು ಕುಡುತಲಿ ಕೊಂಬುತಲಿ ಹರನೆ ಪಂಚಾಕ್ಷರಿಯು ಉಡುತಲಿ ಉಂಬುತಲಿ ಸದ್ಗುರುವೇ ಪಂಚಾಕ್ಷರಿಯು ಬಿಡದೆ ಜಪಿಸಲು ಸದ್ಯೋನ್ಮುಕ್ತಿ ಪಂಚಾಕ್ಷರಿಯು. | 2 | ಸಟೆ ಠಕ್ಕು ಠೌಳಿಯಲ್ಲಿ ಬಿಡದೆ ಪಂಚಾಕ್ಷರಿಯು ದಿಟಪುಟದಲ್ಲಿ ಆವಾ ಪಂಚಾಕ್ಷರಿಯು ಕುಟಿಲ ವಿಷಯಂಗಳೊಲಿದು ಪಂಚಾಕ್ಷರಿಯು ನಟಿಸಿ ಜಪಿಸಲು ಮುಕ್ತಿ ಈವ ಪಂಚಾಕ್ಷರಿಯು. | 3 | ಮಂತ್ರಯೇಳ್ಕೋಟಿಗೆ ತಾಯಿ ಪಂಚಾಕ್ಷರಿಯು ಅಂತ್ಯಜಾಗ್ರಜ ವಿಪ್ರರೆಲ್ಲ ಪಂಚಾಕ್ಷರಿಯು ಸಂತತಂ ಬಿಡದೆ ಜಪಿಸುವದು ಪಂಚಾಕ್ಷರಿಯು ಎಂತು ಬಣ್ಣಿಪರಳವಲ್ಲ ಪಂಚಾಕ್ಷರಿಯು. | 4 | ಆದಿ ಪಂಚಾಕ್ಷರಿಯು ಅನಾದಿ ಪಂಚಾಕ್ಷರಿಯು ಭೇದ್ಯ ಪಂಚಾಕ್ಷರಿಯು [ಅಭೇದ್ಯ ಪಂಚಾಕ್ಷರಿಯು] ಸಾಧಿಸುವಗೆ ಸತ್ಯ ನಿತ್ಯ ಪಂಚಾಕ್ಷರಿಯು ಬೋಧೆ ಶೃತಿತತಿಗಳಿಗೆ ಮಿಗಿಲು ಪಂಚಾಕ್ಷರಿಯು. | 5 | ಪಂಚಾನನದುತ್ಪತ್ಯದಭವ ಪಂಚಾಕ್ಷರಿಯು ಪಂಚಮಯ ಬ್ರಹ್ಮಮಯಂ ಜಗತ್ ಪಂಚಾಕ್ಷರಿಯು ಪಂಚವಿಂಶತಿತತ್ವಕಾದಿ ಪಂಚಾಕ್ಷರಿಯು ಪಂಚಶತಕೋಟಿ ಭುವನೇಶ ಪಂಚಾಕ್ಷರಿಯು. | 6 | ಹರಿಯಜರ ಗರ್ವವ ಮುರಿವ ಪಂಚಾಕ್ಷರಿಯು ಉರಿಲಿಂಗವಾಗಿ ರಾಜಿಸುವ ಪಂಚಾಕ್ಷರಿಯು ಸ್ಮರಣೆಗೆ ಸರಿಯಿಲ್ಲ ಪ್ರಣಮಪಂಚಾಕ್ಷರಿಯು ಸ್ಮರಿಸುವಾತನೆ ನಿತ್ಯಮುಕ್ತ ಪಂಚಾಕ್ಷರಿಯು. | 7 | ಪರಮ ಮುನಿಗಳ ಕರ್ಣಾಭರಣ ಪಂಚಾಕ್ಷರಿಯು ಹರನ ಸಾಲೋಕ್ಯದ ಪದವನೀವ ಪಂಚಾಕ್ಷರಿಯು ಉರಗತೊಡೆಶಿವನನೊಲಿಸುವರೆ ಪಂಚಾಕ್ಷರಿಯು ಕರ್ಮಗಿರಿಗೊಜ್ರ ಸುಧರ್ಮ ಪಂಚಾಕ್ಷರಿಯು. | 8 | ನಾನಾ ಜನ್ಮದಲ್ಲಿ ಹೊಲೆಯ ಕಳೆವ ಪಂಚಾಕ್ಷರಿಯು ಮನಸ್ಮರಣೆಗೆ ಸರಿಯಿಲ್ಲ ಪಂಚಾಕ್ಷರಿಯು ಜ್ಞಾನವೇದಿಕೆ ಮುಖ್ಯ ಪಂಚಾಕ್ಷರಿಯು ಧ್ಯಾನಿಸುವ ನೆರೆವ ತಾನೆ ಪಂಚಾಕ್ಷರಿಯು. | 9 | ಏನ ಬೇಡಿದಡೀವ ದಾನಿ ಪಂಚಾಕ್ಷರಿಯು ಸ್ವಾನುಜ್ಞಾನದಲ್ಲು[ದಿ]ಸಿದಂಥ ಪಂಚಾಕ್ಷರಿಯು ಭಾನು ಅಘತಿಮಿರಕ್ಕೆ ತಾನೆ ಪಂಚಾಕ್ಷರಿಯು ಕ್ಷಿತಿಭುವನಗಳ ಬೇಡಲೀವ ಪಂಚಾಕ್ಷರಿಯು. | 10 | ಕಾನನ ಭವತರು ವಹ್ನಿ ಪಂಚಾಕ್ಷರಿಯು ಯತಿಗೆ ಯತಿತನವೀವ ಗತಿಯು ಪಂಚಾಕ್ಷರಿಯು ಉನ್ನತ ಸಿದ್ಧತ್ವವನೀವ ಸಿದ್ಧಿ ಪಂಚಾಕ್ಷರಿಯು ಭಾನು ಅಘತಿಮಿರಕ್ಕೆ ತಾನೆ ಪಂಚಾಕ್ಷರಿಯು ಗತಿ ಮೋಕ್ಷಗಳ ಬೇಡೆ ಕುಡುವ ಪಂಚಾಕ್ಷರಿಯು. | 11 | ಅವಲಂಬಿಗೆ ಅವಲಂಬ ಪಂಚಾಕ್ಷರಿಯು ನಿರಾವಲಂಬಿಗೆ ನಿರಾವಲಂಬ ಪಂಚಾಕ್ಷರಿಯು ಕಾವ ಸಂಹರ ಭಜಿಪರಿಗೆ ಪಂಚಾಕ್ಷರಿಯು ಮಾವದ್ಯುಮಣಿಧರನನೊಲಿಪ ಪಂಚಾಕ್ಷರಿಯು. | 12 | ಅರಿವರ್ಗಗಳ ಮುರಿವ ಶತೃ ಪಂಚಾಕ್ಷರಿಯು ಕರಿಗಳೆಂಟನು ಹೊಡೆವ ಸಿಂಹ ಪಂಚಾಕ್ಷರಿಯು ಹರಿವ ದಶವಾಯುಗಳನಳಿವ ಪಂಚಾಕ್ಷರಿಯು ನೆರೆ ಸಪ್ತವ್ಯಸನಗಳಿಗೊಹ್ನಿ ಪಂಚಾಕ್ಷರಿಯು. | 13 | ತ್ರಿಗುಣಗಳ ಕೆಡಿಪ ನಿರ್ಗುಣವು ಪಂಚಾಕ್ಷರಿಯು ಅಘವೈದೇಂದ್ರಿಯಕೆ ಲಿಂಗೇಂದ್ರಿಯ ಪಂಚಾಕ್ಷರಿಯು ಮಿಗೆ ಕರ್ಮೇಂದ್ರಿಗಳ ತೆರೆತೆಗೆವ ಪಂಚಾಕ್ಷರಿಯು ಝಗಝಗಿಸಿ ಸರ್ವಾಂಗಪೂರ್ಣ ಪಂಚಾಕ್ಷರಿಯು. | 14 | ಷಡೂರ್ಮಿಗಳ ಗಡವನಳಿವ ಪಂಚಾಕ್ಷರಿಯು ಷಡುಕರ್ಮಗಳ ಮೆಟ್ಟಿನಿಲುವ ಪಂಚಾಕ್ಷರಿಯು ಷಡುವೇಕದಂತಿಗೆ ನಾಥ ಪಂಚಾಕ್ಷರಿಯು ಬಿಡದೆ ಜಪಿಸಿದಡವ ಮುಕ್ತ ಪಂಚಾಕ್ಷರಿಯು. | 15 | ಸಂಸಾರಸಾಗರಕೆ ಹಡಗ ಪಂಚಾಕ್ಷರಿಯು ವಂಶಗಳನಳಿವ ನಿರ್ವಂಶ ಪಂಚಾಕ್ಷರಿಯು ಸಂಶಯವಿಲ್ಲದಲಿ ನಿಸ್ಸಂಶಯ ಪಂಚಾಕ್ಷರಿಯು ವಿಂಶಾರ್ಥ ಬಿಡದೆ ಜಪಿಸುವದು ಪಂಚಾಕ್ಷರಿಯು. | 16 | ಗುರುಕೃಪಕಧಿಕದಿ ಭವದಗ್ಧ ಪಂಚಾಕ್ಷರಿಯು ಕರದ ಲಿಂಗಬೆಳಗು ಪ್ರಣಮಪಂಚಾಕ್ಷರಿಯು ನೆರೆಶ್ರೋತ್ರಬೋಧೆ ನಿರ್ಬೋಧೆ ಪಂಚಾಕ್ಷರಿಯು ನಿರುತ ಜಪಿಸುವನೆ ನಿರಾಪೇಕ್ಷ ಪಂಚಾಕ್ಷರಿಯು. | 17 | ದೀಕ್ಷಾ ಪಂಚಾಕ್ಷರಿಯು ದೀಕ್ಷ ಪಂಚಾಕ್ಷರಿಯು ಮೋಕ್ಷಾ ಪಂಚಾಕ್ಷರಿಯು ಮೋಕ್ಷ ಪಂಚಾಕ್ಷರಿಯು ಶಿಕ್ಷಾ ಪಂಚಾಕ್ಷರಿಯು ಶಿಕ್ಷ ಪಂಚಾಕ್ಷರಿಯು ಭಿಕ್ಷಾ ಪಂಚಾಕ್ಷರಿಯು ಭಿಕ್ಷ ಪಂಚಾಕ್ಷರಿಯು | 18 | ಚಿದ್ಭಸ್ಮದೊಳುವಾಭರಣ ಪಂಚಾಕ್ಷರಿಯು ಚಿದ್ಮಣಿಗಳ ಸ್ಥಾನ ಸ್ಥಾನ ಪಂಚಾಕ್ಷರಿಯು ಚಿದಂಗ ಸರ್ವದೊಳು ಪೂರ್ಣ ಪಂಚಾಕ್ಷರಿಯು ಚಿದಂಗ ಲಿಂಗಸಂಗಸಂಯೋಗ ಪಂಚಾಕ್ಷರಿಯು. | 19 | ಪಾದಸಲಿಲಂ ಪ್ರಸಾದಾದಿ ಪಂಚಾಕ್ಷರಿಯು ಆದಿಕ್ಷೇತ್ರಕ್ಕೆ ವೀರಶೈವ ಪಂಚಾಕ್ಷರಿಯು ಸಾಧಿಸುವ ಸದ್ಭಕ್ತಿಯನೀವ ಪಂಚಾಕ್ಷರಿಯು ಓದುವಾತನ ವೇದವಿತ್ತು ಪಂಚಾಕ್ಷರಿಯು. | 20 | ಅಷ್ಟಾವರಣಕೆ ಮಹಾಶ್ರೇಷ* ಪಂಚಾಕ್ಷರಿಯು ದುಷ್ಟನಿಗ್ರಹ ಶಿಷ್ಟಪಾಲ ಪಂಚಾಕ್ಷರಿಯು ಮುಟ್ಟಿ ನೆನದರೆ ಮುಕ್ತಿಸಾರ ಪಂಚಾಕ್ಷರಿಯು ಇಷ್ಟಪ್ರಾಣಭಾವದೀಶ ಪಂಚಾಕ್ಷರಿಯು. | 21 | ಭಕ್ತಿಯುಕ್ತಿಯು ಮಹಾಬೆಳಗು ಪಂಚಾಕ್ಷರಿಯು ನಿತ್ಯನೆನೆವರಿಗೆ ತವರ್ಮನೆಯು ಪಂಚಾಕ್ಷರಿಯು ಸತ್ಯಸದ್ಗುಣಮಣಿಹಾರ ಪಂಚಾಕ್ಷರಿಯು ವಿತ್ತ ಸ್ತ್ರೀ ನಿರಾಸೆ ಮಹೇಶ ಪಂಚಾಕ್ಷರಿಯು. | 22 | ಪರಧನ ಪರಸ್ತ್ರೀಗೆಳಸ ಪಂಚಾಕ್ಷರಿಯು ನಿರುತ ಮಹೇಶ್ವರಾಚಾರ ಪಂಚಾಕ್ಷರಿಯು ಪರಮ ಪ್ರಸಾದಿಸ್ಥಲ ತಾನೆ ಪಂಚಾಕ್ಷರಿಯು | 23 | ಈ ಪರಿಯ ತೋರೆ ಮಹಾಮೂರುತಿ ಪಂಚಾಕ್ಷರಿಯು ತಾ ಪರಬ್ರಹ್ಮ ನಿನಾದ ಪಂಚಾಕ್ಷರಿಯು | 24 | ತಟ್ಟಿ ಮುಟ್ಟುವ ರುಚಿ ಶಿವಾರ್ಪಣ ಪಂಚಾಕ್ಷರಿಯು ಕೊಟ್ಟುಕೊಂಬುವ ಪ್ರಸಾದಾಂಗ ಪಂಚಾಕ್ಷರಿಯು ನಷ್ಟ ಶರೀರಕೆ ನೈಷೆ*ವೀವ ಪಂಚಾಕ್ಷರಿಯು ಭ್ರಷ್ಟ ಅದ್ವೈತಿಗತೀತ ಪಂಚಾಕ್ಷರಿಯು. | 25 | ಸ್ಥೂಲತನುವಿಗೆ ಇಷ್ಟಲಿಂಗ ಪಂಚಾಕ್ಷರಿಯು ಮೇಲೆ ಸೂಕ್ಷ್ಮಕೆ ಪ್ರಾಣಲಿಂಗ ಪಂಚಾಕ್ಷರಿಯು ಲೀಲೆ ಕಾರಣ ಭಾವಲಿಂಗ ಪಂಚಾಕ್ಷರಿಯು ಬಾಳ್ವ ತ್ರಿತನುವಿಗೆ ತ್ರಿಲಿಂಗ ಪಂಚಾಕ್ಷರಿಯು. | 26 | ಪ್ರಾಣಲಿಂಗದ ಹೊಲಬು ತಾನೆ ಪಂಚಾಕ್ಷರಿಯು ಕಾಣಿಸುವ ಇಷ್ಟರೊಳು ಭಾವ ಪಂಚಾಕ್ಷರಿಯು ಮಾಣದೊಳಹೊರಗೆ ಬೆಳಗು ಪಂಚಾಕ್ಷರಿಯು ಕ್ಷೋಣಿಯೊಳು ಮಿಗಿಲೆನಿಪ ಬಿರಿದು ಪಂಚಾಕ್ಷರಿಯು. | 27 | ಆರು ಚಕ್ರಕೆ ಆಧಾರ ಪಂಚಾಕ್ಷರಿಯು ಆರು ಅಧಿದೈವಗಳ ಮೀರ್ದ ಪಂಚಾಕ್ಷರಿಯು ಆರು ವರ್ಣಗಳ ಬಗೆದೋರ್ವ ಪಂಚಾಕ್ಷರಿಯು ಆರು ಚಾಳ್ವೀಸೈದಕ್ಷರಂಗ ಪಂಚಾಕ್ಷರಿಯು. | 28 | ಆರು ಶಕ್ತಿಗಳ ಆರಂಗ ಪಂಚಾಕ್ಷರಿಯು ಆರು ಭಕ್ತಿಗಳ ಚಿದ್ರೂಪ ಪಂಚಾಕ್ಷರಿಯು ಆರು ಲಿಂಗದ ಮೂಲ ಬೇರು ಪಂಚಾಕ್ಷರಿಯು ಆರು ತತ್ವವಿಚಾರ ಪಂಚಾಕ್ಷರಿಯು. | 29 | ಯೋಗಷ್ಟ ಶಿವಮುಖವ ಮಾಡ್ವ ಪಂಚಾಕ್ಷರಿಯು ನಾಗಕುಂಡಲ ಊಧ್ರ್ವವಕ್ತ್ರ ಪಂಚಾಕ್ಷರಿಯು ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಪಂಚಾಕ್ಷರಿಯು ಸಾಗಿಸಿ ಸುಜ್ಞಾನವೀವ ಪಂಚಾಕ್ಷರಿಯು. | 30 | ಇಷ್ಟ ಪ್ರಾಣಲಿಂಗ ಹೊಲಿಗೆ ಪಂಚಾಕ್ಷರಿಯು ಅಷ್ಟದಳಕಮಲದ ಪೀಠ ಪಂಚಾಕ್ಷರಿಯು ದೃಷ್ಟಿ ಅನುಮಿಷಭಾವ ಪಂಚಾಕ್ಷರಿಯು ಕೊಟ್ಟು ಸಲಹುವದಷ್ಟ ಪಂಚಾಕ್ಷರಿಯು. | 31 | ತನು ಸೆಜ್ಜೆ ಪ್ರಾಣವೆ ಲಿಂಗ ಪಂಚಾಕ್ಷರಿಯು ಮನ ಪೂಜಾರಿಯು ಭಾವ ಪುಷ್ಪ ಪಂಚಾಕ್ಷರಿಯು ಇನಿತು ಕೂಡುವುದು ಶಿವಶರಣ ಪಂಚಾಕ್ಷರಿಯು ಬಿನುಗಿಗಳವಡದ ಈ ಸತ್ಯ ಪಂಚಾಕ್ಷರಿಯು. | 32 | ಶರಣಸ್ಥಲದಂಗ ವೈರಾಗ್ಯ ಪಂಚಾಕ್ಷರಿಯು ಶರಣಸತಿ ಲಿಂಗಪತಿ ತಾನೆ ಪಂಚಾಕ್ಷರಿಯು ಶರಣುವೊಕ್ಕರ ಕಾವ ಬಿರಿದು ಪಂಚಾಕ್ಷರಿಯು ಶರಣಗಣರಿಗೆ ಮಾತೆಪಿತನು ಪಂಚಾಕ್ಷರಿಯು. | 33 | ಶರಣಂಗೆ ಸುಜ್ಞಾನದಿರವು ಪಂಚಾಕ್ಷರಿಯು ಶರಣಂಗೆ ಮುಕ್ತಿಯಾಗರವು ಪಂಚಾಕ್ಷರಿಯು ಶರಣಂಗೆ ಭಕ್ತಿಯ ಸೋಪಾನ ಪಂಚಾಕ್ಷರಿಯು ಶರಣಂಗೆ ಪರಮಜಲಕೂಪ ಪಂಚಾಕ್ಷರಿಯು. | 34 | ಶರಣಂಗೆ ಶೈವದ ಗೃಹವು ಪಂಚಾಕ್ಷರಿಯು ಶರಣರಿಗೆ ಸುರಧೇನು ಅಮೃತ ಪಂಚಾಕ್ಷರಿಯು ಶರಣರಿಗೆ ಕಲ್ಪತರು ಫಲವು ಪಂಚಾಕ್ಷರಿಯು ಶರಣರಿಗೆ ಚಿಂತಾಮಣಿ ತಾನೆ ಪಂಚಾಕ್ಷರಿಯು. | 35 | ಶರಣಪದ ಬೇಡುವರಿಗೀವ ಪಂಚಾಕ್ಷರಿಯು ಶರಣ ನಡೆನುಡಿ ಪೂರ್ಣಮಯವು ಪಂಚಾಕ್ಷರಿಯು ಶರಣರಿಗೆ ಶಿವನಚ್ಚು ಮೆಚ್ಚು ಪಂಚಾಕ್ಷರಿಯು ಶರಣರ್ದೂಷಣರೆದೆಗಿಚ್ಚು ಪಂಚಾಕ್ಷರಿಯು. | 36 | ಶರಣು ಶಿವಾನಂದ ಜಲಗಡಲು ಪಂಚಾಕ್ಷರಿಯು ಶರಣರ ಶರೀರ ಮೇಲೆ ಹೊದಿಕೆಯು ಪಂಚಾಕ್ಷರಿಯು ಶರಣು ಕೃತ್ಯಕೆ ವೈದ್ಯ ಕಾಣಾ ಪಂಚಾಕ್ಷರಿಯು ಶರಣು ಸುಜ್ಞಾನದರ್ಪಣವು ಪಂಚಾಕ್ಷರಿಯು. | 37 | ಶರಣ ಚಿದ್ರೂಪದ ಬಯಕೆಯಳಿದ ಪಂಚಾಕ್ಷರಿಯು ಶರಣಷ್ಟೈಶ್ವರ್ಯದೊಳಗಿಡದ ಪಂಚಾಕ್ಷರಿಯು ಶರಣಪೂಜಿಸಿ ಫಲವ ಬೇಡು[ವ] ಪಂಚಾಕ್ಷರಿಯು ಶರಣೊಜ್ರಪಂಜರದ ಬಿರಿದು ಪಂಚಾಕ್ಷರಿಯು. | 38 | ಶರಣಾಸೆ ರೋಷವನಳಿವ ಪಂಚಾಕ್ಷರಿಯು ಶರಣಾಸೆಯ ಮೋಹಲತೆ ಚಿವುಟುವ ಪಂಚಾಕ್ಷರಿಯು ಶರಣಜ್ಞಾನದತರು ಕುಠಾರ ಪಂಚಾಕ್ಷರಿಯು ಶರಣರುದಯಾಸ್ತಮಾನ ತಾನೆ ಪಂಚಾಕ್ಷರಿಯು. | 39 | ಶರಣರ ನಡೆನುಡಿ ಒಂದು ಮಾಡಿ[ದ] ಪಂಚಾಕ್ಷರಿಯು ಶರಣ ಸಂಸಾರಕಿಕ್ಕಿಡದ ಪಂಚಾಕ್ಷರಿಯು ಶರಣಗುಣ ಚಿಹ್ನಕೊರೆ ಶಿಲೆಯು ಪಂಚಾಕ್ಷರಿಯು ಶರಣರೊಡಗೂಡಿದಾನಂದ ಪಂಚಾಕ್ಷರಿಯು. | 40 | ಶರಣರ ಕರ್ಣದಾಭರಣ ಪಂಚಾಕ್ಷರಿಯು ಶರಣ ನುಡಿವ ಮಹಾವಸ್ತು ಪಂಚಾಕ್ಷರಿಯು ಶರಣ ಕೇಳುವ ಕೀರ್ತಿವಾರ್ತೆ ಪಂಚಾಕ್ಷರಿಯು ಶರಣಾಸರ ಬೇಸರಗಳ ಕಳೆವ ಪಂಚಾಕ್ಷರಿಯು. | 41 | ಶರಣರ ಚರಿತ್ರೆಯ ಬರೆವ ಲಿಖಿತ ಪಂಚಾಕ್ಷರಿಯು ಶರಣೀಶ ಲಾಂಛನಕಿಡದ ಪಂಚಾಕ್ಷರಿಯು ಶರಣ ತನು ಬಾಳಳಿದ ಬೋಧೆ ಪಂಚಾಕ್ಷರಿಯು ಶರಣನ ಮನ ಬೋಳಮಾಡಿರುವ ಪಂಚಾಕ್ಷರಿಯು. | 42 | ಶರಣಂಗೆ ಪರತತ್ವಬೋಧವೆ ಪಂಚಾಕ್ಷರಿಯು ಶರಣ ಪರವು ಶಾಂತಿ ಭಸ್ಮಧೂಳ ಪಂಚಾಕ್ಷರಿಯು ಶರಣ ಪರಬ್ರಹ್ಮಮಣಿ ಪಂಚಾಕ್ಷರಿಯು ಶರಣ ಪರಾತ್ಪರವು ಪಂಚಾಕ್ಷರಿಯು, | 43 | ಶರಣಂಗೆ ದೃಢವೆಂಬ ದಂಡ ಪಂಚಾಕ್ಷರಿಯು ಶರಣ ಕರ್ಮವ ಸುಟ್ಟಗ್ನಿ ಪಂಚಾಕ್ಷರಿಯು ಶರಣ ತೃಪ್ತಿಗೆ ನಿತ್ಯಾಮೃತ ಪಂಚಾಕ್ಷರಿಯು ಶರಣ ಹಿಡಿದ ವ್ರತವೈಕ್ಯ ಪಂಚಾಕ್ಷರಿಯು. | 44 | ಶರಣ ಪೂಜಿಪ ಪೂಜೆ ಐಕ್ಯ ಪಂಚಾಕ್ಷರಿಯು ಶರಣಂಗೆ ಐಕ್ಯಪದವೀವ ಪಂಚಾಕ್ಷರಿಯು ಶರಣ ಮಾಡುವ ಕ್ರಿಯಾದ್ವೈತ ಪಂಚಾಕ್ಷರಿಯು ಶರಣಂಗೆ ಇವು ನಾಸ್ತಿ ಪಂಚಾಕ್ಷರಿಯು. | 45 | ನೇಮ ನಿತ್ಯಂಗಳು ಲಿಂಗೈಕ್ಯ ಪಂಚಾಕ್ಷರಿಯು ಕಾಮ ಧರ್ಮ ಮೋಕ್ಷತ್ರಯಕ್ಕೆ ಪಂಚಾಕ್ಷರಿಯು ಕಾಮಿಸುವ ಬಾಹ್ಯಕ್ಕಿಲ್ಲದೈಕ್ಯ ಪಂಚಾಕ್ಷರಿಯು ನಾಮರೂಪಿಲ್ಲದ ನಿರ್ನಾಮ ಪಂಚಾಕ್ಷರಿಯು. | 46 | ಮಾನಸ್ವಾಚಕ ತ್ರಿಕರಣೈಕ್ಯ ಪಂಚಾಕ್ಷರಿಯು ಜ್ಞಾನ ಜ್ಞಾತೃಜ್ಞೇಯದೈಕ್ಯ ಪಂಚಾಕ್ಷರಿಯು ಸ್ವಾನುಭಾವವು ಲಿಂಗದೊಳೈಕ್ಯ ಪಂಚಾಕ್ಷರಿಯು ಮೋನಮುಗ್ಧಂ ತಾನಾದೈಕ್ಯ ಪಂಚಾಕ್ಷರಿಯು. | 47 | ನಡೆವ ಕಾಲ್ಗೆಟ್ಟ ಲಿಂಗೈಕ್ಯ ಪಂಚಾಕ್ಷರಿಯು ಷಡುರೂಪುಗೆಟ್ಟ ನೇತ್ರೈಕ್ಯ ಪಂಚಾಕ್ಷರಿಯು ಜಡ ಘ್ರಾಣೇಂದ್ರಿಲ್ಲದ ಲಿಂಗೈಕ್ಯ ಪಂಚಾಕ್ಷರಿಯು ಷಡುಯಿಂದ್ರಿಯಕೆ ಷಡುಲಿಂಗೈಕ್ಯ ಪಂಚಾಕ್ಷರಿಯು ಷಡುಸ್ಥಲವ ಮೀರಿರ್ದ ಲಿಂಗೈಕ್ಯ ಪಂಚಾಕ್ಷರಿಯು. | 48 | ಭಕ್ತಿ ಸ್ಥಲದಾಸೆಳಿದೈಕ್ಯ ಪಂಚಾಕ್ಷರಿಯು ವ್ಯಕ್ತ ಮಹೇಶ್ವರ ಭಜನೈಕ್ಯ ಪಂಚಾಕ್ಷರಿಯು ಮುಕ್ತಪ್ರಸಾದಿ ಸ್ಥಲದೈಕ್ಯ ಪಂಚಾಕ್ಷರಿಯು ಸತ್ಯ ಪ್ರಾಣಲಿಂಗವೆನ್ನದೈಕ್ಯ ಪಂಚಾಕ್ಷರಿಯು. | 49 | ಶರಣಸ್ಥಲದಾಸೆಳಿದೈಕ್ಯ ಪಂಚಾಕ್ಷರಿಯು ನಿರವಯಲ ಬೆರದ ಮಹಾಐಕ್ಯ ಪಂಚಾಕ್ಷರಿಯು ಉರಿವುಂಡ ಕರ್ಪುರದ ತೆರನು ಪಂಚಾಕ್ಷರಿಯು ಸರ[ವು] ಸರವು ಬೆರದಂತೆ ಮಾಡ್ವ ಪಂಚಾಕ್ಷರಿಯು. | 50 | ಪರಿಮಳ ವಾಯು ಸಂಗದಂತೆ ಪಂಚಾಕ್ಷರಿಯು ನಿರವಯಲಪ್ಪಿದಂತೆ ಪಂಚಾಕ್ಷರಿಯು ನೆರೆ ಮಾಡಿತೋರುವ ನಿತ್ಯ ಪಂಚಾಕ್ಷರಿಯು ಪರಮ ಬೋಧೆಯನೇನ ಹೇಳ್ವೆ ಪಂಚಾಕ್ಷರಿಯು. | 51 | ನಕಾರ ಮಕಾರ ಭಕ್ತ ಮಹೇಶ ಪಂಚಾಕ್ಷರಿಯು ಶಿಕಾರವೆ ಪ್ರಸಾದಿಸ್ಥಲದಂಗ ಪಂಚಾಕ್ಷರಿಯು ವಕಾರವೆ ಪ್ರಾಣಲಿಂಗಿ ತಾನೆ ಪಂಚಾಕ್ಷರಿಯು ಯಕಾರಂ ಓಂಕಾರಂ ಶರಣೈಕ್ಯ ಪಂಚಾಕ್ಷರಿಯು. | 52 | ಷಡಕ್ಷರ ಷಡುಸ್ಥಲದ ಬೀಜ ಪಂಚಾಕ್ಷರಿಯು ಷಡುಭಕ್ತಿಗಳ ಮುಖವು ಪಂಚಾಕ್ಷರಿಯು ಬಿಡದೆ ಸರ್ವತೋಮುಖವಾದ ಪಂಚಾಕ್ಷರಿಯು ಷಡುದರುಶನಕೆ ಮುಖ್ಯವಾದ ಪಂಚಾಕ್ಷರಿಯು. | 53 | ಪರಮ ಪಂಚಾಕ್ಷರಿಯು ಪ್ರಣಮ ಪಂಚಾಕ್ಷರಿಯು ಅರಿವು ಪಂಚಾಕ್ಷರಿಯು ಚರವು ಪಂಚಾಕ್ಷರಿಯು ಸಿರಿಯು ಪಂಚಾಕ್ಷರಿಯು ಕರುಣ ಪಂಚಾಕ್ಷರಿಯು ಹರುಷ ಪಂಚಾಕ್ಷರಿಯು ನಿಧಿಯು ಪಂಚಾಕ್ಷರಿಯು. | 54 | ನಿತ್ಯ ಪಂಚಾಕ್ಷರಿಯು ಮುಕ್ತ ಪಂಚಾಕ್ಷರಿಯು ಸತ್ಯ ಪಂಚಾಕ್ಷರಿಯು ವ್ಯಕ್ತ ಪಂಚಾಕ್ಷರಿಯು ಭಕ್ತ ಪಂಚಾಕ್ಷರಿಯು ಯುಕ್ತ ಪಂಚಾಕ್ಷರಿಯು ಮೌಕ್ತಿಕ ಮಾಣಿಕಹಾರ ಪಂಚಾಕ್ಷರಿಯು. | 55 | ಹರನೆ ಪಂಚಾಕ್ಷರಿಯು ಗುರುವೆ ಪಂಚಾಕ್ಷರಿಯು ಇರವೆ ಪಂಚಾಕ್ಷರಿಯು ಪರವೆ ಪಂಚಾಕ್ಷರಿಯು ಸರ್ವ ಪಂಚಾಕ್ಷರಿಯು ಹೊರೆವ ಪಂಚಾಕ್ಷರಿಯು ಸ್ಥಿರವೇ ಪಂಚಾಕ್ಷರಿಯು ಅರಿವು ಪಂಚಾಕ್ಷರಿಯು. | 56 | ಸ್ಥೂಲ ಪಂಚಾಕ್ಷರಿಯು ಸೂಕ್ಷ್ಮ ಪಂಚಾಕ್ಷರಿಯು ಲೀಲೆ ಪಂಚಾಕ್ಷರಿಯು ಕಾರಣ ಪಂಚಾಕ್ಷರಿಯು ಶೂಲಿ ಪಂಚಾಕ್ಷರಿಯು ಪೀಠ ಪಂಚಾಕ್ಷರಿಯು ಲೋಲ ಪಂಚಾಕ್ಷರಿಯು ಚರ್ಯ ಪಂಚಾಕ್ಷರಿಯು. | 57 | ಯಂತ್ರ ಪಂಚಾಕ್ಷರಿಯು ಮಂತ್ರ ಪಂಚಾಕ್ಷರಿಯು ಸಂತು ಪಂಚಾಕ್ಷರಿಯು ನಿಸ್ಸಂತು ಪಂಚಾಕ್ಷರಿಯು ಚಿಂತ ಪಂಚಾಕ್ಷರಿಯು ನಿಶ್ಚಿಂತ ಪಂಚಾಕ್ಷರಿಯು ಇಂತು ಪಂಚಾಕ್ಷರಿಯು ಜಪಿಸಿ ಪಂಚಾಕ್ಷರಿಯು. | 58 | ಕಂದ :ನಮಃ ಶಿವಾಯಯೆಂಬೀ ಅಮಲ ತೆರದ ನಾಮವ ನೋಡಿ ಜಪಿಸಲಿರುತಂ ಉಮೆಯರಸನನ್ನೊಲಿಸುವ ಕ್ರಮವಿದೆಂದು ಪೊಗಳ್ವೆ ಸಿದ್ಧಮಲ್ಲನ ಕೃಪೆಯಿಂ. | 1 | ಷಡುಸ್ಥಲ ಪಂಚಾಕ್ಷರಿಯನು ಬಿಡದೆ ಜಪಿಸಲು ಮುಕ್ತಿಯೆಂದು ಪೊಗಳ್ದ ಹೇಮಗಲ್ಲಂ ತನ್ನ ದೃಢಮೂರ್ತಿ ಶಂಭು ಗುರುರಾಯ ಪಡುವಿಡಿ ಸಿದ್ಧಮಲ್ಲಿನಾಥ ಕೃಪೆಯಿಂ. | 2 | ಷಡುಸ್ಥಲ ಪಂಚಾಕ್ಷರಿಯ ರಗಳೆ ಸಂಪೂರ್ಣಂ
--------------
ಹೇಮಗಲ್ಲ ಹಂಪ
ಕಾಲಸಂಹರ ಕಾಮವಿದೂರ ಕರಣಾತೀತ ಕರ್ಮಗಿರಿಗೊಜ್ರ ಕಮಲಮಿತ್ರ ಶಶಿಭೂಷ ಕರುಣಕಟಾಕ್ಷ ಕಮಲೋದ್ಭವಶಿರಕರಕಪಾಲ ಕಮಲಪೂಜಿತನಯನ ಪಾದಚರಣದಲಿ ಧರಿಸಿದ ದೇವ ವಿಶ್ವಕ್ಷೇನ ಹೆಣನ ಹೊತ್ತ ದೇವ ವೇದಶಾಸ್ತ್ರಕತೀತದೇವನೆಂದು ಮೊರೆಹೊಕ್ಕೆ. ಎನ್ನಯ ಮೊರೆಯಂ ಕೇಳಿ ಕಾದರೆ ಕಾಯಿ,ಕೊಂದರೆ ಕೊಲ್ಲು, ನಿಮ್ಮ ಧರ್ಮ, ನಿಮ್ಮ ಧರ್ಮ. ನೀನೆ ಹುಟ್ಟಿಸಿ, ನೀನೆ ಕರ್ಮಕಾಯಕೆ ಗುರಿಮಾಡಿ, ನೀನಗಲಿದರೆ ನೊಂದೆ ಬೆಂದೆ. ಬಿಡಬೀಸದಿರು, ಎನ್ನನಿತ್ತ `ಬಾ'ಯೆಂದು ತಲೆದಡಹೊ ಜಯಜಯ ಹರಹರ ಶಿವಶಿವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕಾಮವಿಲ್ಲದಾತ ಭಕ್ತ , ಕ್ರೋಧವಿಲ್ಲದಾತ ಮಹೇಶ್ವರ, ಲೋಭವಿಲ್ಲದಾತ ಪ್ರಸಾದಿ, ಮೋಹವಿಲ್ಲದಾತ ಪ್ರಾಣಲಿಂಗಿ, ಮದವಿಲ್ಲದಾತ ಶರಣ, ಮತ್ಸರವಿಲ್ಲದಾತ ಐಕ್ಯ. ಅದು ಎಂತೆಂದೊಡೆ : ಕಾಮವಿಲ್ಲದ ಭಕ್ತ ಬಸವಣ್ಣ , ಕ್ರೋಧವಿಲ್ಲದ ಮಹೇಶ್ವರ ಪ್ರಭುರಾಯ, ಲೋಭವಿಲ್ಲದ ಪ್ರಸಾದಿ ಚೆನ್ನಬಸವೇಶ್ವರದೇವರು, ಮೋಹವಿಲ್ಲದ ಪ್ರಾಣಲಿಂಗಿ ಘಟ್ಟಿವಾಳಯ್ಯ, ಮದವಿಲ್ಲದ ಶರಣ ಮೋಳಿಗೆಯ್ಯನವರು, ಮತ್ಸರವಿಲ್ಲದ ಲಿಂಗೈಕ್ಯಳು ನೀಲಲೋಚನ ತಾಯಿ. ಇಂತಿವರು ಮುಖ್ಯವಾದ ಏಳನೂರ ಎಪ್ಪತ್ತು ಅಮರಗಣಂಗಳ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕುಲಮದಕ್ಕೆ ಹೋರಾಡಿ ಕೆಟ್ಟುದು ಕೋಟಿ. ಧನಮದಕ್ಕೆ ಹೋರಾಡಿ ಕೆಟ್ಟುದು ಕೋಟಿ. ವಿದ್ಯಾಮದಕ್ಕೆ ಹೋರಾಡಿ ಕೆಟ್ಟುದು ಕೋಟಿ. ರಾಜ್ಯಮದಕ್ಕೆ ಹೋರಾಡಿ ಸತ್ತುದು ಕೋಟಿ. ತಪಮದWಕ್ಕೆಘೆ ಹೋರಾಡಿ ಕೆಟ್ಟುದು ಕೋಟಿ. ನಿನಗಾಗಿ ಕೆಟ್ಟವರನಾರನೂ ಕಾಣೆನಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕುಣಪ ಕೂಗದಕಿಂದ ಮುನ್ನ, ಶಾಸ್ತ್ರ ತೆರೆಮುಸುಕದಕಿಂದ ಮುನ್ನವೆ ಸಂಸಾರಪಾಶವ ಸುಟ್ಟು ನಿಃಸಂಸಾರಿಯಾಗಿಪ್ಪ ಅಚಲರ ತೋರಿ ಬದುಕಿಸೊ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕೆಚ್ಚಲ ಕಚ್ಚಿದ ಉಣ್ಣೆ ನಿಚ್ಚಾಮೃತದ ಸವಿಯನೆತ್ತಬಲ್ಲುದಯ್ಯಾ ? ಪಾಯಸದೊಳಿಹ ಸಟ್ಟುಗ ರುಚಿಯಬಲ್ಲುದೆ ? ಸರ್ವವ ಮುಟ್ಟಿ ಮೂಸುವ ಮಕ್ಷಿಕ ಶುಚಿಯ ಬಲ್ಲುದೇನಯ್ಯಾ ? ಸಂಸಾರದೋಷ ದುಸ್ಸಂಗ ದುಶ್ಚರಿತ್ರದೊಳಿಪ್ಪ ಮಾನವರು ಶಿವಜ್ಞಾನಾಮೃತದ ಸವಿಯನೆತ್ತ ಬಲ್ಲರಯ್ಯಾ ? ಉಣ್ಣೆಯಂತೆ. ಹುಗ್ಗಿಯೊಳಿಹ ಹುಟ್ಟು ತೊಳಸಬಲ್ಲುದಲ್ಲದೆ ಸವಿಯ ಬಲ್ಲುದೇನಯ್ಯಾ ? ವೇದಾಗಮವನೋದಿದ ಮಾನವರೆಲ್ಲ ಸಂಸಾರಬಂಧನವ ಕಳೆಯಬಲ್ಲರೇನಯ್ಯಾ ? ಮನಮಕ್ಷಿಕ ಸರ್ವದುಚ್ಚಿಷ*ವ ಮುಟ್ಟಿ ಮುಟ್ಟಿ ಹಲವು ಕಡೆಗೆ ಹಾರುತಿರಲು, ಮಹದರುವನೆತ್ತ ಬಲ್ಲುದಯ್ಯಾ ! ಪರಮಗುರು ಪಡುವಿಡಿ ಸಿದ್ದಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕುಲದಲ್ಲಿ ಶಿವಕುಲವೆಂಬೆ, ಛಲದಲ್ಲಿ ಶಿವಛಲವೆಂಬೆ, ರೂಪದಲ್ಲಿ ಶಿವರೂಪವೆಂಬೆ, ತಪದಲ್ಲಿ ಶಿವತಪವೆಂಬೆ. ಇಂತೀ ಅಷ್ಟಮದಮುಖದಲ್ಲಿ ಶಿವಮುಖವಾಗಿಪ್ಪ ಶಿವಶರಣರ ಚರಣಕ್ಕೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕಾಳರಕ್ಕಸಿಯ ಕೈಯೊಳಿಪ್ಪ ಶಿಶುವಿನ ಭ್ರಮೆ ಮೂರುಲೋಕಕ್ಕೆ ಕೊಂಡು ಭ್ರಮಿತರಾಗುವುದ ಕಂಡೆ. ಕಾಳರಕ್ಷಿಯ ಕೊಂದು, ಕಾಳ ರಕ್ಷಿಯ ಕೈಯೊಳಿಪ್ಪ ಶಿಶುವಿನ ಗೋಣ ಮುರಿದಾತನಲ್ಲದೆ ಶಿವಶರಣನಲ್ಲ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕರಿಗಳ ಹೊಯಿದಾಟದಾ ನಡುವಿನ ಮರ ಮುರಿ[ವಂತೆ] ಆ ಜಗವಾಗಿದೆ ನೋಡಾ. ಮಾವುತಿಗನ ಅಂಕುಶಕ್ಕಂಜದಾನೆಗಳು ಮನಬಂದಂತೆ ಹರಿವವು. ಮರದ ಬೇರು ಭೂಮಿಯಾಕಾಶಕ್ಕೆ ಹಬ್ಬಿ, ಕೊಂಬೆಕೊಂಬೆಯ ಮೇಲೆ ಕುಣಿವ ಅರಗಿಣಿ ಕೋಡಗ. ಗಿಣಿ ಆನೆಯ ನುಂಗಿ, ಆನೆಯ ಮೇಲೆ ಮಾವುತನ ನುಂಗಿ, ಭಾನುಕೆ ಹರಿದುದಿದೇನು ವಿಚಿತ್ರ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕಣ್ಗಾಣದೆ ಲೋಕ ಮಾಯಾತಮಂಧವೆಂಬ ಬಣ್ಣಛಾಯಕ್ಕೆ ಸಿಲ್ಕಿ ಭ್ರಮಿತಗೊಂಡಿತು. ಪದ : ತನುಮದ ಹುತ್ತದೊಳು ಮನವಿಕಾರದ ಸರ್ಪ ಜನರನೆಲ್ಲರ ಕಚ್ಚಿ ವಿಷವೇರಿಸಿ ಅನುದಿನ ಉಳಿಯಗೊಡದಾ ಮಾಯಾತಮಂಧವೆಂಬ ಅಣಲಿಂಗೆ ಗುರಿಯಾಗಿ ಬರಿದೆ ಕಲಿಗೆಡುತಲಿ. | 1 | ಷಡೂರ್ಮೆ ಷಟ್ಕರ್ಮ ಷಡ್ಭಾವವೈಕರಣ ಷಡ್ಭ್ರಮೆಗಳೆಂದೆಂಬುದ ಷಡು ಅಂಗ ಕತ್ತಲೆಗೆ ನಡೆದು ಮೈಮರೆದು ಬರಿದೆ. | 2 | ಅಸಿಯ ಜವ್ವನೆಯರ ವಿಷಯರಸವೆಂದೆಂಬ ಪ್ರಸರದೊಳು ಲೋಕವನು ಗುರಿಮಾಡಿಯೆ ; ಅಸನ ವ್ಯಸನ ನಿದ್ರೆ ಆಲಸ್ಯ ಮಾಯಾತನು ಬೆಸುಗೆಯೊಳು ಸಿಲ್ಕಿ ಬರಿದೆ. | 3 | ಹಿರಿದು ಮಾಯಾತಮವೆಂಬ ಕತ್ತಲೆಯೊಳಗೆ ನಡೆದು ಬರುತಲಿ ಅಜ್ಞಾನವೆಂದೆಂಬುವ ಕೊರಡನೆಡವಿಯೆ ತಾಪತ್ರಯದಗ್ನಿಗಿರಿಯೊಳಗೆ ಮರೆಗೊಂಡು ಮುಂದುಗಾಣದೆ ಮೂಲೋಕ | 4 | ಸುರೆಗುಡಿದ ಮರ್ಕಟಗೆ ವಿರಚಿ ಭೂತಂ ಸೋಂಕಿ ಹಿರಿದು ಚೇಷ್ಟೆಯ ತೆರದಿ ಮಾಯಾಮದದ ಗುರುವಹಂಕಾರ ಮನ ಚೇಷ್ಟೆಯಂಗಳ ತೊರದು ಗುರುಸಿದ್ಧ ಮಲ್ಲಿನಾಥನೊಳು ಬೆರೆಯಲರಿಯದೆ. | 5 |
--------------
ಹೇಮಗಲ್ಲ ಹಂಪ
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದ ಸೀಮೆಗಳೆನಿಸಿ ಯತಿ ಸಿದ್ಧ ಸಾಧ್ಯರೆಲ್ಲ ವ್ರತಭ್ರಷ್ಟರಾದರು. ಅದು ಎಂತೆಂದೊಡೆ : ಕಾಮವೆಂಬ ಅಗ್ನಿ, ಕ್ರೋಧವೆಂಬ ಕಾಷ*, ಲೋಭವೆಂಬ ಗಾಳಿ ಪುಟಮಾಡಿ, ಮೋಹವೆಂಬರಣ್ಯ, ಮದವೆಂಬ ಕುಳ್ಳು, ಮತ್ಸರವೆಂಬ ಗಿರಿಗೆ ಬೆಂಕಿ ಹತ್ತಿ , ಸುಟ್ಟು ಸುಟ್ಟು ಬೆಂದರು ಹಲಬರು, ನೊಂದರು ಹಲಬರು. ಕಾಮವ ಕಳದು ನಿಃಕಾಮಿಯಾಗಿ, ಕ್ರೋಧವ ಕಳದು ನಿಃಕ್ರೋಧಿಯಾಗಿ, ಲೋಭವ ಕಳದು ನಿರ್ಲೋಭಿಯಾಗಿ, ಮೋಹವ ಕಳದು ನಿರ್ಮೋಹಿಯಾಗಿ, ಮದವ ಕಳದು ನಿರ್ಮದವಾಗಿ, ಮತ್ಸರವ ಕಳದು ನಿರ್ಮತ್ಸರರಾಗಿಪ್ಪ ಚೆನ್ನಬಸವೇಶ್ವರದೇವರು ಪ್ರಭುರಾಯ ಮುಗ್ಧಸಂಗಯ್ಯ ಘಟ್ಟಿವಾಳಯ್ಯ ಮರುಳಶಂಕರದೇವರು ಮುಖ್ಯವಾದ ಏಳ್ನೂರಯೆಪ್ಪತ್ತು ಅಮರಗಣಂಗಳ ಪಾದಕ್ಕೆ ನಮೋ ನಮೋ ಎಂಬೆನಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕೊಡುವಾತ ಶಿವ, ಕೊಂಬಾತ ಶಿವ, ಹುಟ್ಟಿಸುವಾತ ಶಿವ, ಕೊಲ್ಲುವಾತ ಶಿವನೆಂಬ ದೃಷ್ಟವನರಿಯದೆ, ನಡುಮನೆಯಲೊಂದು ದೇವರ ಜಗುಲಿಯನಿಕ್ಕಿ ಅದರ ಮೇಲೆ ಹಲವು ಕಲ್ಲು ಕಂಚು ಬೆಳ್ಳಿ ತಾಮ್ರದ ಪಾತ್ರೆಯನಿಟ್ಟು ಪೂಜೆ ಮಾಡಿ, ತಲೆ, ಹೊಟ್ಟೆ, ಕಣ್ಣುಬೇನೆ ಹಲವು ವ್ಯಾಧಿ ದಿನ ತಮ್ಮ ಕಾಡುವಾಗ ನಮ್ಮನೆದೇವರೊಡ್ಡಿದ ಕಂಟಕವೆಂದು ಬೇಡಿಕೊಂಡು ಹರಕೆಯ ಮಾಡಿ, ತನ್ನ ಸವಿಸುಖವ ಕೊಂಡು ಪರಿಣಾಮಿಸಿ, ವಿಧಿ ವಿಘ್ನ ಹೋದ ಮೇಲೆ ಪರದೇವರು ಕಾಯಿತೆಂದು ನುಡಿವವರ ಲೋಕದ ಗಾದೆಯ ಕಂಡು ನಾ ಬೆರಗಾದೆನೆಂದರೆ : ಹುಟ್ಟಿಸಿದ ಶಿವ ಪರಮಾತ್ಮ ಭಕ್ಷಿಸಿಕೊಂಡೊಯ್ಯುವಾಗ ಕಟ್ಟೆಯ ಮೇಲಣ ಕಲ್ಲು ಕಾಯುವುದೆ ? ಕಾಯದಯ್ಯ. ಮತ್ತೆ ಹೇಳುವೆ ಕೇಳಿರಣ್ಣಾ : ಸಿರಿ ತೊಲಗಿ ದರಿದ್ರ ಎಡೆಗೊಂಡು, ಮನೆಯೊಳಿಹ ಚಿನ್ನ ಬೆಳ್ಳಿ ತಾಮ್ರ ಕಂಚಿನ ಪ್ರತಿಮೆಯನೆಲ್ಲ ಒತ್ತೆಯ ಹಾಕಿ, ಹಣವ ತಂದು, ಉದರವ ಹೊರೆವಗೆ ಎತ್ತ ಹೋದನಯ್ಯಾ ಅವರ ಮನೆಯೊಳಿಹ ಮಿಥ್ಯದೈವ ? ಅಕ್ಕಸಾಲೆಯ ಮನೆಯ ಕುಪ್ಟುಟೆಯಲುರಿವುತಿಹ ಅಗ್ನಿದೇವತೆಗೆ ಗುರಿಯಾಗಿ ಹೋದವಯ್ಯಾ. ಸರ್ವದೇವಪಿತ ಶಂಭು[ವೆಂಬು]ದನರಿಯದೆ ಶಿವನಿಂದ ಹುಟ್ಟಿ, ಶಿವನಿಂದ ಬೆಳೆದು, ಶಿವದೈವವ ಮರೆದು, ಅನ್ಯದೈವವ ಹೊಗಳುವ ಕುನ್ನಿಮಾನವರ ಕಂಡು ನಾ ಬೆರಗಾದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕಾಮನ ಸುಟ್ಟು ವಿಭೂತಿಯಿಲ್ಲದಂದಿನ, ಕಾಲನ ಸುಟ್ಟು ವಿಭೂತಿಯಿಲ್ಲದಂದಿನ, ತ್ರಿಪುರವ ಸುಟ್ಟು ವಿಭೂತಿಯಿಲ್ಲದಂದಿನ, ಪಂಚಮುಖದಲ್ಲಿ ಜನಿಸಿದ ಪಂಚಗವ್ಯ ಗೋಮಯದಿಂದಾದ ಚಿದ್‍ಭಸ್ಮವಿದು ಅಪರಂಪಾರವೆಂದು ಜಪಿಸಿದ ಎನ್ನ ಪರಿಭವವ ದಾಟಿಸಿದ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕಾಮವೆಂಬ ಆನೆಯ ಕಾಲಿಂಗೆ ಹಾಕಿ ತುಳಿಸಿ, ಕ್ರೋಧವೆಂಬ ಹುಲಿಯ ಬಳಿಯಿಕ್ಕಿ, ಲೋಭವೆಂಬ ಸರ್ಪನ ಕಚ್ಚಿಸಿ, ಮೋಹವೆಂಬ ಸಿಂಹ[ನ] ತೊಡರಿಸಿ, ಮದವೆನಿಪ್ಪ ಮರೆಯಹಿಂಡ ಕವಿಸಿ, ಮತ್ಸರವೆಂಬ ಭಲ್ಲೂಕಂಗಳನಡರಿಸಿ, ಭವಾರಣ್ಯದ ಬಟ್ಟೆಯೊಳು ತಿರುವಿ ತಿರುವಿ ಕಾಡುತಿದ್ದೆಯಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ

ಇನ್ನಷ್ಟು ...