ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಅಃ ಪದದಿಂದ ಪ್ರಾರಂಭವಾಗುವ ವಚನಗಳು:

ಅಂತರಂಗದ ಅಷ್ಟಮದ ಅವಾವೆಂದರೆ ಹೇಳುವೆ ಕೇಳಿರಣ್ಣಾ : ಪೃಥ್ವಿಮದ ಸಲಿಲಮದ ಪಾವಕಮದ ಪವನಮದ ಅಂಬರಮದ ರವಿಮದ ಶಶಿಮದ ಆತ್ಮಮದವೆಂಬ ಅಷ್ಟಮೂರ್ತಿಯ ಮದಂಗಳು. ಇವರ ಗುಣಧರ್ಮಕರ್ಮವೆಂತೆಂದಡೆ, ಅದಕ್ಕೆ ವಿವರ ; ಪೃಥ್ವಿಮದವೆತ್ತಿದಲ್ಲಿ ತನುಗುಣಭರಿತನಾಗಿ, ಆಭರಣ ಅನುಲೇಪನ ತಾಂಬೂಲವಂ ಬಯಸುತ್ತಿಹನು. ಸಲಿಲಮದವೆತ್ತಿದಲ್ಲಿ ಸಂಸಾರಭರಿತನಾಗಿ, ಎನಗೆ ಬೇಕು, ಮನೆಗೆ ಬೇಕು, ಮಕ್ಕಳಿಗೆ ಬೇಕು ಎನುತಿಹನು. ಪಾವಕಮದವೆತ್ತಿದಲ್ಲಿ ಕಾಮರಸಭರಿತನಾಗಿ, ಕರಸಬೇಕು ನುಡಿಸಬೇಕು ಆಲಿಂಗಿಸಬೇಕು ಎನುತಿಹನು. ಪವನಮದವೆತ್ತಿದಲ್ಲಿ ಕೋಪಾಗ್ನಿಭರಿತನಾಗಿ, ಕೊಂದೇನು ತಿಂದೇನು ಸಾದ್ಥಿಸೇನು ಭೇದಿಸೇನು [ಎನುತಿಹನು]. ಶಶಿಮದವೆತ್ತಿದಲ್ಲಿ ಚಿಂತಾಭರಿತನಾಗಿ, ಆದೀತೊ ಆಗದೊ, ಇದ್ದೀತೊ ಇಲ್ಲವೊ ಎನುತಿಹನು. ಆತ್ಮಮದವೆತ್ತಿದಲ್ಲಿ ಅಹಂಕಾರಭರಿತನಾಗಿ, ಎನಗಿಂದು ಅದ್ಥಿಕರಿಲ್ಲ, ಎನಗಿಂದು ಇದಿರಿಲ್ಲವೆಂದು ಅಹಂಭಾವದಿಂದ ಅಹಂಕರಿಸುತ್ತಿಹನು. ಇಂತೀ ಅಷ್ಟಮೂರ್ತಿಮದಂಗಳ ಭ್ರಾಂತಿನ ಬಲೆಯೊಳಿಟ್ಟೆನ್ನನಗಲದಿರು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಂಗದ ಮೇಲೆ ಲಿಂಗವಿಪ್ಪ ಶಿವಭಕ್ತನ ಕಂಡರೆ ಸಂಗಯ್ಯನ ಸಮವೆಂಬೆನಯ್ಯಾ. ಲಿಂಗವಿಲ್ಲದೆ ನಾಲ್ಕು ವೇದವನೋದುವ ವಿಪ್ರನಾದರೂ ಆಗಲಿ, ಹೊಲೆಮಾದಿಗರೇಳು ಜಾತಿಗಿಂತ ಕಡೆಯೆಂಬೆನಯ್ಯಾ. ತಾಯಿಲ್ಲದ ಮಕ್ಕಳಂತೆ, ಗಂಡನಿಲ್ಲದ ಮುಂಡೆಗೆ ಮುತ್ತೈದೆತನವುಂಟೇನಯ್ಯಾ ? ಲಿಂಗವಿಲ್ಲದ ಭವಿ ಏನನೋದಿ ಏನ ಹಾಡಿದರೂ ವ್ಯರ್ಥ. ಸಾಕ್ಷಿ :``ಮಾತಾ ನಾಸ್ತಿ ಯಥಾ ಸುತಂ ಪತಿರ್ನಾಸ್ತಿ ಯಥಾ ನಾರೀ | ಲಿಂಗಂ ನಾಸ್ತಿ ಯಥಾ ಪ್ರಾಣಂ ತಸ್ಯ ಜನ್ಮ ನಿರರ್ಥಕಂ ||'' ಇಂತೆಂಬುದನರಿಯದೆ ವಾಗದ್ವೈತದಿಂದ ತನುಲಿಂಗ ಮನಲಿಂಗ ಪ್ರಾಣಲಿಂಗವೆಂಬ ಹೊಲೆಯರ ಮುಖವನೆನಗೊಮ್ಮೆ ತೋರದಿರಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಂಗದೊಳಗಣ ಅಷ್ಟಮದಮೋಹಿನಿಗಳನಾರನೂ ಕಾಣೆ. ಭಂಗಿಯ ಸೊಪ್ಪು ತಿಂದ ಬಳ್ಳು ಉಳ್ಳಿಟ್ಟು ಒದರುವಂದದಿ ದೇಹ ಆತ್ಮದ ತಲೆಗೇರಿ, ಬರಿದೆ ವೇದಶಾಸ್ತ್ರಪುರಾಣವೆಂದೋದಿ ಬಲ್ಲವರೆನಿಸಿಕೊಂಬರು ಲಜ್ಜೆಭಂಡರು. ನುಡಿಯಂತೆ ನಡೆಯಲರಿಯದ ಜಡದೇಹಿಗಳ ಮೆಚ್ಚುವನೆ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಂದು ಸಹಸ್ರಜನ್ಮಾಂತರದಲ್ಲಿ ತಪೋಧ್ಯಾನವ ಮಾಡಿ ಪಡೆದಕಾರಣ ಮುಂದೆನಗೆ ಗುರುಪಾದ ದೊರೆಯಿತ್ತು. ಆ ಗುರುಪಾದದರುಶನದಿಂದ ಹಿಂದೇಳು ಜನ್ಮಾಂತರದಲ್ಲಿ ಭವಾಂತರ ಹಿಂಗಿ, ಇಂದೆನಗೆ ಶಿವಲಿಂಗವ[ನಿರಿಸೆ], ಶಿವದೇಹಿ ಶಿವಭಕ್ತ ಶಿವಮಾಹೇಶ್ವರನೆಂಬ ನಾಮ ನನಗಾಯಿತ್ತು ನೋಡಾ. ಸಾಕ್ಷಿ :``ಜನ್ಮಾಂತರಸಹಸ್ರೇಷು ತಪೋ ಧ್ಯಾನಂ ಸಮಾಚರೇತ್ | ನರಾಣಾಂ ಕ್ಷೀಣಪಾಪಾನಾಂ ಶಿವೇ ಭಕ್ತಿಃ ಪ್ರಜಾಯತೇ ||'' ಎಂದುದಾಗಿ, ಹೀಗೆಂಬ ಸುಕೃತಫಲದಿಂದ ಭವಸಾಗರವ ದಾಂಟಿ ಭಕ್ತ ಬಸವಣ್ಣ ಮಾಹೇಶ್ವರ ಪ್ರಭುರಾಯರು ಮುಖ್ಯವಾದ ಪ್ರಮಥಗಣಂಗಳ ಲೆಂಕರ ಲೆಂಕನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಂತರಂಗದಲ್ಲಿ ಜ್ಞಾನಪರಿಪೂರ್ಣನಾಗಿ ಸರ್ವಾಂಗವೆಲ್ಲ ಲಿಂಗಮಯವೆಂದು ಜ್ಞಾನದ ಕಣ್ಣಲಿ ಕಂಡು, ಅರುಹು ಪರಮಾರ್ಥನೊಳು ಬೆರದು, ಅಚಲಿತಶರಣನಾದೆನೆಂದು, ಬಹಿರಂಗದಲ್ಲಿ ಗುರುಕರುಣದ ಇಷ್ಟಲಿಂಗಧಾರಣವಿಲ್ಲದಿರಬಹುದೇ ? ಇರಬಾರದು ; ಇದ್ದರೆ ಮಹಾನರಕ. ಮೂರುಕಣ್ಣುಳ್ಳ ಶಿವನಾದರೂ ಆಗಲಿ, ಅಂಗದ ಮೇಲೆ ಇಷ್ಟಲಿಂಗವಿಲ್ಲದೆ ಸುಜ್ಞಾನಿಶರಣನಾದನೆಂದು ನುಡಿದುಕೊಂಡು ನಡೆದರೆ ಅದ ನಮ್ಮ ಪುರಾತರು ಮೆಚ್ಚುವರೆ ? ಮೆಚ್ಚರು. ಮೆಚ್ಚರಾಗಿ ನಾಯಕನರಕ ತಪ್ಪದು. ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಂದು ಆದಿಯಲ್ಲಿ ಶಿವ ಬೀಜವಾಗಿ ಬಂದ ಕಾರಣ ಮತ್ರ್ಯಕೆ ಶಿವಭಕ್ತ [ರುದಯವಾಯಿ]ತು ನೋಡಯ್ಯ. ಅಂದು ಆದಿಯಲ್ಲಿ ಶಿವಬೀಜವಲ್ಲದಿದ್ದರೆ ಇಂದೆಲ್ಲಿಯದಯ್ಯಾ ? ಶಿವಭಕ್ತನೆಂಬ ಶ್ರೇಷ*ತ್ವನಾಮ ಧರೆಯ ಮನುಜರೆಲ್ಲರಿಗಹುದೇನಯ್ಯ ? ಶಿವಭಕ್ತಿ ಹಿಡಿದವರೆಲ್ಲ ಬಂಟರೆ ? ಶಕ್ತಿಯ ಸಾಧಿಸಿದವರೆಲ್ಲ ಜಟ್ಟಿಗಳೇ ? ಸ್ವರಗೈದ ಪಕ್ಷಿಗಳೆಲ್ಲ ಕೋಗಿಲೆಯಾಗಬಲ್ಲುವೆ ? ಅಂಗಹೀನ ಮಾನವರೆಲ್ಲ ಲಿಂಗವ ಧರಿಸಿ ಲಿಂಗವಂತರೆಂದು ನುಡಿದುಕೊಂಡು ನಡೆದರೆ ಶಿವಭಕ್ತಿ ಸಾಧ್ಯವಾಗಬಲ್ಲುದೆ, ಜಗದ ಜಂಗುಳಿಯ ಮಾನವರಿಗೆ ? ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಂಗಗುಣಸಂಸಾರಿಗೆ ಲಿಂಗಗುಣಸಂಸಾರವುಂಟೇನಯ್ಯಾ ? ಲಿಂಗಗುಣಸಂಸಾರಿಗೆ ಅಂಗಗುಣಸಂಸಾರವುಂಟೇನಯ್ಯಾ ? ಈ ಲಿಂಗ ಅಂಗವೆಂಬ ಉಭಯ ಮಧ್ಯೆ ಜ್ಞಾನಸಂಸಾರಿಯಾಗಿಪ್ಪ ಶರಣ ಬಸವಣ್ಣ ಚೆನ್ನಬಸವಣ್ಣ ಪ್ರಭುರಾಯ ಮೋಳಿಗೆಯ್ಯಗಳು ಮುಖ್ಯವಾದ ಏಳುನೂರಾ ಎಪ್ಪತ್ತು ಅಮರಗಣಂಗಳ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಂಧಕ ಅಂಧಕರು ಕರವಿಡಿದರಣ್ಯದೊಳು ಹೋಗುತೊಂದು ಕೊಳ್ಳವ ಬಿದ್ದು ಚಾಲಿವರಿವಂತೆ, ಅಜ್ಞಾನಿ ಗುರುವಿಂಗೆ ಅಜ್ಞಾನಿ ಶಿಷ್ಯನಾದರೆ ಅವರ ಪಾತಕಕೆ ಕಡೆಯೇನಯ್ಯಾ ! ಹೆಸರಿನ ಗುರುವಿಗೆ ಹೆಸರಿನ ಶಿಷ್ಯನಾಗಿ ಗುರು-ಶಿಷ್ಯ ಸಂಬಂಧಕ್ಕೆ ಹೋರಾಡಿ ಒಡಲಾಸೆಗೆ ಲಿಂಗವ ಮಾರಿಕೊಂಬ ಕಡುಪಾಪಿಗೆ ಗುರುತ್ವವುಂಟೇನಯ್ಯಾ ? ಗುರುತ್ವವಿಲ್ಲ. ಸಾಕ್ಷಿ :``ನಾಮಧಾರಕ ಶಿಷ್ಯಶ್ಚ ನಾಮಧಾರೀ ಗುರುಸ್ತಥಾ | ಅಂಧಕೋಂಧಕರಾಬದ್ಧೋ ದ್ವಿವಿಧಂ ಪಾತಕಂ ಭವೇತ್ ||'' ಎಂದುದಾಗಿ, ಬುದ್ಧಿಹೀನ ಶಿಷ್ಯಂಗೆ ಉಪದೇಶವ ಕೊಟ್ಟ ಗುರುವ ಎದ್ದೆದ್ದಿ ತೆಗೆಯುವರು ರೌರವ ನರಕದಲ್ಲಿ ಎಂದಾತ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ