ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಧರಣಿಯನಾಳುವ ಅರಸಿಂಗೆ, ಮಾರಿಯ ಭಯ, ಭೂರಿಯ ಭಯ, ಚೋರ ಭಯ. ಅಗ್ನಿಯ ಭಯ, ಹಿರಿದಪ್ಪ ಅರಿರಾಯರ ಭಯ. ಇವೈದು ಭಯಕಂಜಿ, ಅಷ್ಟದಳಮಂಟಪದ ಕೋಣೆಯ ನೆರೆ ಪೂರ್ವದಿಕ್ಕಿನ ರಾಜ್ಯಕ್ಕೊಳಿತಂ ಬಯಸಿ, ಅಗ್ನಿಕೋಣೆಯ ರಾಜ್ಯವ ಭಕ್ಷಿಪೆನೆಂದು, ಯಮದಿಕ್ಕಿನ ರಾಜ್ಯವ ಕ್ರೋಧದಲ್ಲುರುಹುವೆನೆಂದು, ನೈಋತ್ಯದಿಕ್ಕಿನ ರಾಜ್ಯವ ಮರತು ಮಲಗಿಸುವೆನೆಂದು, ವರುಣದಿಕ್ಕಿನ ರಾಜ್ಯಕ್ಕೆ ಸತ್ಯವ ಬಯಸಿ, ವಾಯುವ್ಯದಿಕ್ಕಿನ ರಾಜ್ಯವ ಗಾಳಿಗಿಕ್ಕಿ ಹಾರಿಸುವೆನೆಂದು, ಕುಬೇರದಿಕ್ಕಿನ ರಾಜ್ಯಕ್ಕೆ ಧರ್ಮನು ಬಯಸಿ ಈಶಾನ್ಯಕೋಣೆಯ ರಾಜ್ಯದ ಹೆಣ್ಣ ವಿಷಯತೂರ್ಯದಲ್ಲಿ ದಳೆಯ ಹಿಡಿವೆನೆಂದು, ಅಷ್ಟದಿಕ್ಕಿನ ರಾಜ್ಯದ ನಟ್ಟನಡುವೆ ಕಷ್ಟಬಡುತಿರ್ಪ ಅರಸಿನ ಕಳವಳಿಕೆ ; ಬುದ್ಧಿಗುಡುವ ಮಂತ್ರಿ, ಕಪಿಚಾಷ್ಠಿ ತಂತ್ರಿ, ತಾಮಸಬುದ್ಧಿ ದಳವಾಯಿಗಳು, ದಶಗುಣಿಗಳು ಮನ್ನೆಯ ನಾಯಕರು, ಮದಡರು ಪಾಯದಳ. ಪರಿಯಾಟಗೊಳಿಸುವ ಅರಸಿನ ಪ್ರಜೆ ಪರಿವಾರ ಮಂತ್ರಿಮನ್ನೆಯರನೆಲ್ಲ ಕೈಸೆರೆಯ ಹಿಡಿದು ಆಳುವ ಅಂಗನೆ ರಾಜ್ಯಾದ್ಥಿಪತಿಯಾದುದೇನು ಚೋದ್ಯ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಧರಿಸಿರೊ ಶ್ರೀ ರುದ್ರಾಕ್ಷಿಯ ಬಾಹು ಉರ ಕಂಠ ಕರ್ಣ ಮಸ್ತಕದಲ್ಲಿ ಒಲಿದು. ಪದ : ಹರನಕ್ಷಿ ಜಲದಲ್ಲುದಯವಾಗಿ ಮುನಿ ವರ ವಿಶ್ವಾಮಿತ್ರ ಗೌತಮ ವಶಿಷ್ಠರ ನೆರೆ ಮುಕ್ತರ ಮಾಡಿ ಕೈಲಾಸಪದದೊಳ ಗಿರಿಸುವ ಭಸಿತ ರುದ್ರಾಕ್ಷಿಯನೊಲಿದು. | 1 | ನೆತ್ತಿಯೊಳಗೆ ತ್ರಯ ಶಿಖಿಗೇಕ ಮೇಣ್ ಚಿತ್ತಸಮಸ್ತಕೆ ಧಾರಣಗಳು ಅದ ರೊತ್ತಿಲಿ ಕರ್ಣಕುಂಡಲಕೆ ಏಕೈ ಕೆಂದು ವಿಸ್ತರಿಸಿ ರುದ್ರಾಕ್ಷಿಯನೊಲಿದು. | 2 | ಕೊರಳೊಳು ಬತ್ತೀಸ ಉರದೊಳು ಮಹಾ ಸರ ಅಷ್ಟಶತಮಾಲೆಯನುವೆ ನೀವು ಕರಕಂಕಣಕೆ ದಶಬಾಹುಪೂರಕೆ ನೆರೆ ಷೋಡಶ ರುದ್ರಕ್ಷಿಯನೊಲಿದು. | 3 | ಕರದಂಘ್ರಿಮಾಲೆಗೆ ದಶವೇಕ ಮಹಾಜಪ ಸರ [ಕೂಡಿಕೊಂಡು ಲೇಸೆಂದು] ಮೇಣ್ ವಿರಚಿಸಿ ಶಿವಪೂಜೆಯನು ಮಾಡೆ ಕರ್ಮ ಗಿರಿಗೊಜ್ರವೆನಿಪ ರುದ್ರಾಕ್ಷಿಯನೊಲಿದು. | 4 | ಇನಿತು ತೆರದ ರುದ್ರಾಕ್ಷಿಯ ಮಹಾ ಘನವೆಂಬಲ್ಲಿ ಮುಕ್ತಿಯ ಸಾರ ತ್ರಿಣಯ ಸದ್ಗುರು ಪಡುವಿಡಿ ಸಿದ್ಧಮಲ್ಲನಾ ನೆನವ ತೋರುವ ತತ್ವಚಿಂತಾಮಣಿಯನೊಲಿದು. | 5 |
--------------
ಹೇಮಗಲ್ಲ ಹಂಪ
ಧರೆಯಾಗಿ ನಿಂದು, ಹರಿಯಾಗಿ ಹರಿದು, ಉರಿಯಾಗಿ ಉಲಿವ ಅಂಗನೆ, ಬ್ರಹ್ಮ ವಿಷ್ಣು ರುದ್ರರ ನುಂಗಿ ಜಾಲವ ಬೀಸುತಿಪ್ಪಳು ನೋಡಾ ! ಆಕೆಯ ಮಹೇಂದ್ರಜಾಲದ ತೆರೆಯೊಳು ಅನುಮಿಷ ಮೊದಲು ತಲೆಯಿಲ್ಲದ ಏಡಿಯ ನುಂಗಿ, ಆ ಏಡಿಯ ಬೆನ್ನಿನಲ್ಲಿ ಆನೆ ಎಂಟು, ಶ್ವಾನ ಐದು, ಆರು ಮೊಸಳೆಯ ನುಂಗಿ, ಏಳು ಬಗೆಯ ಮಡುವಿಗೆ ಬಿದ್ದು, ತಮ್ಮ ತಾವೆ ಒದ್ದಾಡುತಿವೆ ಇದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ !
--------------
ಹೇಮಗಲ್ಲ ಹಂಪ
ಧರಿಸಿರಣ್ಣ ಶ್ರೀ ವಿಭೂತಿಯ, ಧರಿಸಿರಣ್ಣ ಶ್ರೀ ರುದ್ರಾಕ್ಷಿಯ, ಸ್ಮರಿಸಿರಣ್ಣ ಶ್ರೀ ಪಂಚಾಕ್ಷರಿಯ. ಶ್ರೀ ವಿಭೂತಿಯ ಹೂಸದೆ, ಶ್ರೀ ರುದ್ರಾಕ್ಷಿಯ ಧರಿಸದೆ, ಶ್ರೀ ಪಂಚಾಕ್ಷರಿಯ ನೆನೆಯದೆ ಶಿವಪದವ ಸಾಧಿಸಿದೆನೆಂದರೆ ಸಾಧ್ಯವಾಗದು ಕಾಣಿರಣ್ಣಾ ! ಕಣ್ಣು ಕಾಲು ಕಿವಿಯಿಲ್ಲದಿರೆ ಶರೀರಕೆ ಒಪ್ಪವಹುದೆ ? ಮುಕ್ಕಣ್ಣನ ಆಭರಣವೆನಿಸುವ ಭಸ್ಮ ರುದ್ರಾಕ್ಷಿ ಷಡಕ್ಷರಿಯಿಂದಲೆನ್ನ ಭವದಗ್ಧವಾಗಿ ನಿತ್ಯ ಮುಕ್ತನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಧ್ಯಾನಕೆಲ್ಲ ಮೂಲ ಗುರುವಿನ ಮೂರ್ತಿ ಕಾಣಿರೊ ! ಪೂಜೆಗೆಲ್ಲ ಮೂಲ ಗುರುವಿನ ಪಾದ ಕಾಣಿರೋ ! ಮಂತ್ರಕೆಲ್ಲ ಮೂಲ ಗುರುವಿನ ವಾಕ್ಯ ಕಾಣಿರೋ ! ಮುಕ್ತಿಗೆಲ್ಲ ಮೂಲ ಗುರುವಿನ ಕೃಪೆ ಕಾಣಿರೋ ! ಗುರು ಹೇಳಿದಂತಿಹುದೆ ವೇದಾಗಮಶಾಸ್ತ್ರ ಕಾಣಿರೋ ! ಸಾಕ್ಷಿ :``ಧ್ಯಾನಮೂಲಂ ಗುರೋರ್ಮೂರ್ತಿಃ ಪೂಜಾಮೂಲಂ ಗುರೋಃ ಪದಂಃ | ಮಂತ್ರಮೂಲಂ ಗುರೋರ್ವಾಕ್ಯಂ | ಮುಕ್ತಿಮೂಲಂ ಗುರೋಃ ಕೃಪಾ ||'' ಎಂದುದಾಗಿ, ಗುರುಮೂರ್ತಿಯ ಧ್ಯಾನದಲ್ಲಿ ನೀನೇಯಾದೆ, ಅನ್ಯವ ಧ್ಯಾನಿಸುವ ಅಜ್ಞಾನಿ ನೀ ಕೇಳಾ. ಗುರುಪಾದಪೂಜೆಯ ಮಾಡದೆ ಅನ್ಯಪೂಜೆಯ ಮಾಡುವ ಅಧಮ ಚಾಂಡಾಲಿ ಮಾನವ ನೀ ಕೇಳಾ. ಗುರುಮಂತ್ರವ ಜಪಿಸದೆ ಅನ್ಯಮಂತ್ರವ ಜಪಿಸುವ ಅನಾಮಿಕ ಹೊಲೆಯ ನೀ ಕೇಳಾ. ಗುರುಕೃಪೆಯ ಪಡೆಯದೆ ಅನ್ಯದೈವದ ಕೃಪೆಯ ಪಡೆದೆನೆಂಬ ಪಾಪಿ ನೀ ಕೇಳಾ. ಗುರುಕರುಣ ಕೃಪೆಯ ಪಡೆದರೆ ಹರಿದು ಹೋಹುದು ನಿನ್ನ ಪೂರ್ವಜನ್ಮದ ಹೊಲೆ. ಗುರುವನರಿಯದೆ, ಲಿಂಗವನರಿಯದೆ, ಜಂಗಮವನರಿಯದೆ, ಅನ್ಯದೈವ ಕೊಟ್ಟಿತೆಂದು ಅನ್ಯವ ಹೊಗಳಿದರೆ ಎಂದೆಂದಿಗೂ ಭವಹಿಂಗದೆಂದಾತ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ