ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಗವಿದ್ದಂದು ನೀನೆ, ಜಗವಿಲ್ಲದಂದು ನೀನೆ ; ಪಂಚಶತಕೋಟಿ ವಿಸ್ತೀರ್ಣ ಭೂಮಂಡಲವಿದ್ದಂದು ನೀನೆ, ಅವು ಇಲ್ಲದಂದು ನೀನೆ ; ಈರೇಳುಭುವನ ಹದಿನಾಲ್ಕು ಲೋಕವಿದ್ದಂದು ನೀನೆ, ಅವು ಇಲ್ಲದಂದು ನೀನೆ ; ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಜಲದ ಮರೆಯಲ್ಲಿಪ್ಪ ಸೂರ್ಯನಂತೆ, ಸ್ಫಟಿಕದ ಘಟದೊಳಗೆತ್ತಿದ ಜ್ಯೋತಿಯಂತೆ, ಮುಗಿಲಮರೆಯಲ್ಲಿ ಹೊಳೆಯುತ್ತಿಹ ಮಿಂಚಿನಂತೆ, ಎನ್ನ ಪಿಂಡಾಂಡದೊಳು ಜ್ಞಾನವಾಗಿ ಹೊಳೆಯುತ್ತಿದ್ದೆ ಅಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಜಪಿಸಿರೊ ಜಪಿಸಿರೊ ಶ್ರೀ ಪಂಚಾಕ್ಷರಿಯ. ಜಪದಿಂದ ರುದ್ರನಪ್ಪುದು ತಪ್ಪದು ನೋಡಾ ! ಶ್ರೀ ಪಂಚಾಕ್ಷರಿಯನಿಂಬುಗೊಳದವನ ಅಂಗ ಹಾಳು. ಶ್ರೀ ಪಂಚಾಕ್ಷರಿಯ ನೆನೆಯದವ ಜಿಹ್ವೆ ಹೇಳು. ಶ್ರೀ ಪಂಚಾಕ್ಷರಿಯ ಕೇಳದವನ ಕರ್ಣ ಹಾಳು. ನಡೆವೆಡೆಯಲ್ಲಿ ನುಡಿವೆಡೆಯಲ್ಲಿ ಕೊಡುವೆಡೆಯಲ್ಲಿ ಕೊಂಬೆಡೆಯಲ್ಲಿ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಬಿಡದೆ ಪಂಚಾಕ್ಷರಿಯೆಂಬ ಮಂತ್ರವನೆ `ನಮಃ ಶಿವಾಯ' `ನಮಃ ಶಿವಾಯ' `ನಮಃ ಶಿವಾಯ'ಯೆಂದು ಜಪಿಸಿ, ಒಡಲ ದುಗುರ್ಣವ ಕೆಡಿಸಿ, ಮೃಡ ನಿಮ್ಮ ನೆನೆದು ನಾ ಬದುಕಿದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಜ್ಯೋತಿ ಇದ್ದ ಗೃಹಕ್ಕೆ ತಮವುಂಟೇನಯ್ಯಾ ? ಪರಂಜ್ಯೋತಿಲಿಂಗದ ಸಂಗದ ಬೆಳಗಲಿಹ ಮಹಾತ್ಮನಿಗೆ ಮಾಯಾತಮಂಧದ ಭೀತಿಯುಂಟೇನಯ್ಯಾ ? ಕಂಠೀರWವಘೆನಿಹ ವನದೊಳು ಕರಿವುಂಟೇನಯ್ಯಾ ? ಲಿಂಗವೆಂಬ ಸಿಂಹದ ಮರೆಯಬಿದ್ದಾತಂಗೆ ಅಷ್ಟಮದವೆಂಬ ಕರಿಯ ಭಯವುಂಟೇನಯ್ಯಾ ? ಗರುಡನಿದ್ದ ಸ್ಥಾನದಲ್ಲಿಗೆ ಉರಗನ ಭಯವುಂಟೇನಯ್ಯಾ ? ಪರಮಾತ್ಮನೊಳುಬೆರೆದ ನಿಬ್ಬೆರಗಿ ಶರಣಂಗೆ ಕುಂಡಲಿಸರ್ಪನ ಭಯವುಂಟೇನಯ್ಯಾ ? ಆನೆಯ ಮೇಲೆ ಹೋಗುವ ಮಾನವನಿಗೆ ಶ್ವಾನನ ಭಯವುಂಟೇನಯ್ಯಾ ? ಲಿಂಗಾಂಗಸಮರಸವೆಂಬ ಮದ ತಲೆಗೇರಿ ಹೋಗುವ ಶಿವಶರಣಂಗೆ ಪಂಚೇಂದ್ರಿಯವೆಂಬ ಶ್ವಾನನ ಭಯವುಂಟೇನಯ್ಯಾ ? ಉರಿವುತಿಹ ಅಗ್ನಿಗೆ ಸೀತದ ಭಯವುಂಟೇನಯ್ಯಾ ? ಗುರುಕರುಣಾಗ್ನಿಯಲ್ಲಿ ಭವದಗ್ಧನಾದ ಶರಣಂಗೆ ಅನ್ಯಭಯಭೀತಿಯ ಚಳಿ ಉಂಟೇನಯ್ಯಾ ? ಉರಗಮುಟ್ಟಲು ಸರ್ವಾಂಗವನೆಲ್ಲ ವಿಷಕೊಂಡಂತೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಲಿಂಗಸೋಂಕಿದವರೆಲ್ಲ ಸರ್ವಾಂಗಲಿಂಗಿಗಳಾದುದ ನೋಡಾ.
--------------
ಹೇಮಗಲ್ಲ ಹಂಪ
ಜ್ಯೋತಿಯಿಲ್ಲದ ಕತ್ತಲೆಮನೆಯಂತೆ, ಸೂರ್ಯನಿಲ್ಲದ ಗಗನದ ಕಾಳದಂತೆ, ಆತ್ಮ ದೇಹ ಮಧ್ಯದ ಗೃಹದೊಳು ಮಾಯಾತಮಂಧವೆಂಬ ಕತ್ತಲೆಯ ಹೆಚ್ಚಿಸಿ, ಶಿವಜ್ಞಾನವನಡಗಿಸಿ, ಅಹಂಕಾರ ಮಮಕಾರವೆಂಬ ಅಜ್ಞಾನಕೆನ್ನ ಗುರಿಮಾಡಿ, ನೀ ತೊಲಗಿ ಹೋದರೆ ನಾ ಬೀದಿಗರುವಾದೆ. ಗ್ರಾಣಕೊಂಡ ಚಂದ್ರನಂತಾದೆ, ಪಿತ-ಮಾತೆಯಿಲ್ಲದ ಶಿಶುವಿನಂತಾದೆ, ಎನ್ನ ಹುಯ್ಯಲಂ ಕೇಳಿ, ರಂಬಿಸಿ ತಲೆದಡಹು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಜಯ ಜಯ ನಿತ್ಯನಿರಂಜನ ಪರಶಿವ, ಜಯ ಜಯ ಅಮೃತಕರ, ಜಯ ಸದಾನಂದ, ಜಯ ಕರುಣಜಲ, ಜಯ ಭಕ್ತರೊಂದ್ಯ, ಜಯ ಜ್ಞಾನಸಿಂಧು, ಜಯ ಕರ್ಮವಿದೂರ, ಜಯ ಚಿನ್ಮಯ ಚಿದ್ರೂಪ, ಜಯ ಜಗದೀಶ ಎನ್ನವಗುಣವ ನೋಡದೆ ರಕ್ಷಿಸು ಜಯಜಯ ಹರಹರ ಶಿವಶಿವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಜ್ಞಾನ ಗುರುವಿಗೆ ಜ್ಞಾನ ಶಿಷ್ಯನಾದರೆ ಜೇನುತುಪ್ಪದೊಳು ಮಧುರ ಬೆರೆದಂತೆ. ಅಜ್ಞಾನಿ ಗುರುವಿಂಗೆ ಅಜ್ಞಾನಿ ಶಿಷ್ಯನಾದರೆ ಅಮವಾಸೆಯ ಮುಂದಣ ಕಾಳದೊಳು ಮೋಡಕವಿದು ಘೋರಾಂಧಕಾರ ಕತ್ತಲೆಯಾಂದತೆ. ಎನ್ನ ಗುರು ಶಿಷ್ಯ ಸಂಬಂಧ ಇಂತಲ್ಲವಯ್ಯಾ ! ಎನ್ನ ಗುರು ಜ್ಞಾನಿಯಲ್ಲ, ಅಜ್ಞಾನಿಯಲ್ಲ. ಜ್ಞಾನಿಯಜ್ಞಾನಿಯಿಬ್ಬರಿಗೆ ಸುಜ್ಞಾನವನೀವ ನಿಬ್ಬೆರಗಿ ಪರಮಾತ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಜಗದೊಳಗೆ ಜಗ ಹುಟ್ಟಿ ಜಗಮಯವಾಗಿದ್ದುದ ಕಂಡೆನು. ಜಗವನಾಳುವ ದೊರೆ ರಾಕ್ಷಿಗವಿಯಲ್ಲಿ ಸಿಲ್ಕಿ, ಘಾಸಿಯಾಗುತಿರ್ದನು ನೋಡಾ. ಆ ರಾಕ್ಷಿ ಬ್ರಹ್ಮನ ಚರ್ಮವ ಹೊತ್ತು, ವಿಷ್ಣುವಿನ ರಕ್ತವ ಕುಡಿದು, ರುದ್ರನ ಭಸ್ಮವ ಮಾಡಿ, ಈಶ್ವರನ ಗಾಳಿಯಾಗಿ ಹಾರಿಸಿ, ಸದಾಶಿವನ ಆಕಾಶದ ಗುರಿಯನೆ[ಚ್ಚಿ] ಆಡುತಾಡುತ ಬಂದವಳು. ಅರಸಿನ ಪ್ರಜೆ-ಪರಿವಾರ, ಆನೆ-ಸೇನೆ ಎಲ್ಲವ ನುಂಗಿ ತೇಗಿ, ಜಗದೊಳಗಣ ಜಗ ಹಿರಿದಪ್ಪ ಜಗವಾಗಿ ಜಲದ ಕೊಣದಲ್ಲಿ ಹೊರಟು ದೃಷ್ಟವಾಗಿ ನಿಂದುದ ಕಂಡು ರಕ್ಷಿ ನಗುತಿದೆ. ಈ ಭೇದವ ಹಳೆಯ ಮನೆಯ ಸುಟ್ಟು ಹೊಸ ಮನೆಯಾದಲ್ಲಿ ಕಂಡೆ, ಇದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಜನನಭಯದ ಮೂಲದ ಬೇರ ಕಿತ್ತು ಸುಟ್ಟುರುಹುವ ಭಸ್ಮ, ಮರಣಭಯದ ಮೂಲದ ದುರಿತ ದುಃಕೃತವನಿಟ್ಟೊರೆಸುವ ಶ್ರೀ ಮಹಾಭಸ್ಮ, ಹಣೆಯೊಳಿಹ ದುರಿತಲಿಖಿತವ ತೊಡೆದು ದೂರಮಾಡುತ್ತಿಪ್ಪ ಭಸ್ಮ, ತ್ರಿಣಯನ ಸಾಲೋಕ್ಯಪದದ ಬಯಕೆಯ ತೋರುವ ಭಸ್ಮ, ಮತ್ರ್ಯಲೋಕದ ಯತಿ ಸಿದ್ಧ ಸಾಧ್ಯರು ಮಹಾಗಣಂಗಳ ಮುಕ್ತರ ಮಾಡುತಿಪ್ಪ ಭಸ್ಮ, ತ್ರಿಣಯನ ಸಾಲೋಕ್ಯದ ದೇವಗಣಂಗಳ ನಿತ್ಯರ ತೋರುವ ಚಿದ್ಭಸ್ಮ , ಚಿದಾನಂದ ಭಸ್ಮ, ಇದು ಶುದ್ಧ ಪರಶಿವನ ಚಿದ್ರೂಪವೆಂದು ಮುದದೆ ಧರಿಸಿ, ಭವಸಾಗರವ ದಾಂಟಿ ನಿತ್ಯನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ