ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನೀರ ನೆಳಲ ಮಧ್ಯದಲ್ಲಿ ಹಾರುವ ಭ್ರಮರನ ಗರಿಯ ಗಾಳಿಯಲ್ಲಿ ಮೂರುಲೋಕವೆಲ್ಲ ತಲೆಕೆಳಗಾದುದ ಕಂಡೆ. ನೀರನೆಳಲಂ ಕಡಿದು ಹಾರುವ ಭ್ರಮರನ ಗರಿಯ ಮುರಿದಲ್ಲದೆ ನಿರ್ಮನ ನಿರ್ಮಳ ನಿಶ್ಚಿಂತ ನಿಃಶಂಕ ನಿಃಕಳಂಕ ಶರಣನಲ್ಲ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ನಕಾರ ನರಜನ್ಮದ ಹೊಲೆಯ ಕಳೆದು, ಮಕಾರ ಮಾಂಸಪಿಂಡದ ಹೊಲೆಯ ಕಳೆದು ಮಂತ್ರಪಿಂಡವ ಮಾಡಿತಯ್ಯಾ. ಶಿಕಾರ ಶಿವದೇಹಿಯ ಮಾಡಿತಯ್ಯ, ವಕಾರ ಒಳಹೊರಗೆ ತೊಳಗಿ ಬೆಳಗಿ ಶುದ್ಧನಮಾಡಿತಯ್ಯ, ಯಕಾರ ಎನ್ನ ಭವವ ಹಿಂಗಿಸಿತಯ್ಯ. ಓಂಕಾರ ಪ್ರಾಣ ಜೀವಾತ್ಮ ದೇಹದ ಮಧ್ಯದೊಳು ಸರ್ವಪೂರ್ಣಮಯವಾಗಿದ್ದಿತಯ್ಯಾ. ಇಂತೀ ಷಡಕ್ಷರಿಯ ಮಂತ್ರವ ಜಪಿಸಿ, ಅಂತಕನ ಪಾಶವ ಸುಟ್ಟು ನಿಟ್ಟೊರಸಿದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ನೆನೆವ ಜಿಹ್ವೆ[ಗೆ] ಕಾಮನ ನೆನಸಿದೆ, ನೋಡುವ ಕಂಗಳಿಗೆ ಕಾಮನ ನೋಡಿಸಿದೆ, ಕೇಳುವ ಕರ್ಣಕ್ಕೆ ಕಾಮವನೆ ಕೇಳಿಸಿದೆ, ವಾಸಿಸುವ ನಾಸಿಕಕ್ಕೆ ಕಾಮವನೆ ವಾಸಿಸಿದೆ, ಮುಟ್ಟುವ ಹಸ್ತಕ್ಕೆ ಕಾಮವನೆ ಮುಟ್ಟಿಸಿದೆ. ಅದು ಎಂತೆಂದೊಡೆ : ನೆನೆವ ಜಿಹ್ವೆ ಪರಧನ ಪರಸ್ತ್ರೀಯರ ನೆನೆವುದು, ನೋಡುವ ಕಂಗಳು ಪರಧನ ಪರಸ್ತ್ರೀಯರನೆ ನೋಡುವವು, ಕೇಳುವ ಕರ್ಣ ಪರಧನ ಪರಸ್ತ್ರೀಯರ ಪರನಿಂದ್ಯವನೆ ಕೇಳುವವು, ವಾಸಿಸುವ ನಾಸಿಕ ಪರಧನ ಪರಸ್ತ್ರೀಯರ ವಾಸಿಸುವುದು, ಮುಟ್ಟುವ ಹಸ್ತ ಪರಧನ ಪರಸ್ತ್ರೀಯರನೆ ಮುಟ್ಟುವುದು. ಇಂತೀ ಪಂಚೇಂದ್ರಿಯಮುಖದಲ್ಲಿ ಕಾಮವೆ ಮುಖ್ಯವಾಗಿಪ್ಪುದಯ್ಯ. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದ ಸೀಮೆಗೆಳಸದ ನಿಸ್ಸೀಮ ಶರಣಂಗೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ನಗನೂರಠಾಣ್ಯದ ತೆಳಗಿಪ್ಪ ಇಪ್ಪತ್ತೈದು ಹಳ್ಳಿಯ ಸಾಗಿಸಿ ಕೋರನಡಸುವ ಕಾರಕೂನರೈವರು, ಕಾಡಹೊಲನ ಕಂಡಣಿಯ ಮಾಡುತಿರೆ ; ಹಾರುವರು ಹರಿಕಾರರು, ಗೌಡರಿಬ್ಬರು ಗೊಮಗುಸುಕರು, ಊರೊಳಹೊರಗೆ ಬಾರದ ಸೇನಬೋವರು, ಕಿಂಚಿತು ಉಳಿಯಗೊಡದ ಠೇವಣಿಯನಿಕ್ಕುವರು. ಹೃದಯಧರರು ಹುಸಿಕಾರರು, ರಾಶಿಯನೊಕ್ಕುವ ಒಕ್ಕಲಿಗರು ವಂಚಕರು, ಊರ ಪಂಚಾಳರು ಪ್ರಪಂಚಿಗಳು, ಅಗಸ ಮೈಲಿಗೆಗಳ್ಳ, ನಾಯಿಂದ ಕೇಶಭುಂಜಕ, ಕುರುಬ ಭುಸಗೊಂಡ, ಕುಂಬಾರ ತಿಗುರಿಸುತ್ತಳ, ತಳವಾರರು ಮರೆದೊರಗುವರು, ಬಾರಿಕ ಬಲುಬೆದಕ, ಹೊಲೆಯ ಹುಸಿಕಾರ, ಮಾದಿಗ ಮಾಂಸಭುಂಜಕ ; ರಾಜ್ಯದ ತಪ್ಪ ವಿಚಾರಿಸುವ ರಾಜ ಮಹಾಕ್ರೋಧಿ, ಪರಿವಾರ ಬಾಧಕರು. ಇಂತಿವರೊಳೊಬ್ಬನೂ ಮೋಹಿಯಲ್ಲ ! ನಾನೆಂತು ಜೀವಿಪೆನಯ್ಯಾ ? ಕಾಯಪುರದ ಸಂಭ್ರಮದ ಮಾಯಾಪಾಶಕೆನ್ನನಿಕ್ಕಿ ನೀನಗಲಿದೆಯಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ನುಡಿವೆಡೆಯಲ್ಲಿ ಕ್ರೋಧವನೆ ನುಡಿವರು, ನೋಡುವೆಡೆಯಲ್ಲಿ ಕ್ರೋಧವನೆ ನೋಡುವರು, ಕೇಳುವೆಡೆಯಲ್ಲಿ ಕ್ರೋಧವನೆ ಕೇಳುವರು, ವಾಸಿಸುವೆಡೆಯಲ್ಲಿ ಕ್ರೋಧವನೆ ವಾಸಿಸುವರು, ಮುಟ್ಟುವೆಡೆಯಲ್ಲಿ ಕ್ರೋಧವನೆ ಮುಟ್ಟಿಸುವರು, ಇಂತೀ ಪಂಚೇಂದ್ರಿಯಮುಖದಲ್ಲಿ ಕ್ರೋಧವೆ ಮುಖ್ಯವಾಗಿಪ್ಪರು ನಿಮ್ಮನೆಂತು ಬಲ್ಲರಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ನಿರಾಕಾರ ಪರಬ್ರಹ್ಮವಸ್ತು ಎನ್ನ ಕರಸ್ಥಲಕೆ ಆಕಾರವಾಗಿ ಬಂದರೆ ಹೊಗಳಲಮ್ಮೆ, ಹೊಗಳದಿರಲಮ್ಮೆ. ಅದೇನು ಕಾರಣವೆಂದರೆ : ಬ್ರಹ್ಮ ವಿಷ್ಣು ರುದ್ರರ ಸ್ತುತಿಗೆ ನಿಲುಕದ ವಸ್ತುವೆನ್ನ ನೆಮ್ಮಲು ನಾ ಬದುಕಿದೆನಯ್ಯಾ ನಾ ಬದುಕಿದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ನೊಂದೆನೀ ಮನದಿಂದಲಿ, ಬೆಂದೆನೀ ಮನದಿಂದಲಿ, ಕಂದಿದೆನೀ ಮನದಿಂದಲಿ, ಕುಂದಿದೆನೀ ಮನದಿಂದಲಿ. ಮನವೆಂಬ ಸಂದೇಹದ ಕೀಲ ಕಳೆದು, ನಿಸ್ಸಂದೇಹಿಯಾಗಿಪ್ಪ ನಿರಾಭಾರಿ ಶರಣಂಗೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ನಡೆಯಲಾರದ ಹೆಳವಂಗೆ ಅಂಧ ಹೆಂಡತಿ ದೊರೆತರೆ ನಡೆವುದೇನಯ್ಯಾ ಅವರ ಜೀ[ವಿ]ತರೂಪ ? ನುಡಿಯಿಲ್ಲದ ಮೂಕಮಾನವಂಗೆ ಅರಸುಪಟ್ಟಬಂದರೆ, ಪ್ರಜೆ ಪರಿವಾರ ರಾಜ್ಯವ ನಡೆಸಿಕೊಳಬಲ್ಲನೇನಯ್ಯಾ ? ಅಜ್ಞಾನಗುಣ ಮಾಯಕ ಹರಿವನಕ ಸುಜ್ಞಾನಸಂಸಾರವುಂಟೇನಯ್ಯಾ ? ಜೀವನ ಬುದ್ಧಿಗುಣವುಳ್ಳನಕ್ನ ಪರಮಾತ್ಮನ ಬೋಧೆಗೆ ಹರಿಯೆ ಸ್ವಸ್ಥಿರ ಚಿತ್ತನಯ್ಯಾ ! ಸಂಸಾರಮಾಯೆ ಪ್ರಾಣವಾಗಿಪ್ಪವರಿಗೆ ನಿಃಸಂಸಾರವುಂಟೇನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥ ಪ್ರಭುವೆ ?
--------------
ಹೇಮಗಲ್ಲ ಹಂಪ
ನಿರಾಕಾರಲಿಂಗವಿಡಿದು ಸಾಕಾರಲಿಂಗ, ಸಾಕಾರಲಿಂಗವಿಡಿದು ಆಕಾರಲಿಂಗ, ಆಕಾರಲಿಂಗವಿಡಿದು ಮಹಾಲಿಂಗ, ಮಹಾಲಿಂಗವಿಡಿದು ವಿಷ್ಣು, ವಿಷ್ಣುವಿಡಿದು ಬ್ರಹ್ಮ, ಬ್ರಹ್ಮವಿಡಿದು [ಬ್ರಹ್ಮಾಂಡ], ಬ್ರಹ್ಮಾಂಡವಿಡಿದು ಪಿಂಡಾಂಡ, ಪಿಂಡಾಂಡವಿಡಿದು ಜ್ಞಾನ, ಜ್ಞಾನವಿಡಿದು ನಾನು, ನಾನುವಿಡಿದು ನೀನು, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ನೆಲೆಯನರಿಯದ ಮನುಜರು ಜಲವ ಹೊಕ್ಕರೆ ಮುಳುಗುವರಲ್ಲದೆ ನೆಲೆಯಬಲ್ಲವರು ಮುಳುಗುವರೇನಯ್ಯಾ ? ಆ ತೆರದಿ, ನಾ ನೆಲೆಯನರಿಯದೆ ಸಂಸಾರವೆಂಬ ಸಾಗರ ಹೊಕ್ಕರೆ ಪ್ರಥಮದಲ್ಲಿ ಜಂಘೆಗೆ ಬಂತು, ದ್ವಿತೀಯೆಯಲ್ಲಿ ಮಣಿಪಾದಕ್ಕೆ ಬಂತು, ತೃತೀಯೆಯಲ್ಲಿ ಕಟಿಸ್ಥಾನಕ್ಕೆ ಬಂತು, ಚತುರ್ಥದಲ್ಲಿ ನಾಭಿತನಕ್ಕೆ ಬಂತು, ಪಂಚಮದಲ್ಲಿ ಉರಸ್ಥಾನಕ್ಕೆ ಬಂತು, ಆರನೆಯಲ್ಲಿ ಕಂಠಸ್ಥಾನಕ್ಕೆ ಬಂತು, ಏಳನೆಯಲ್ಲಿ ಸರ್ವಾಂಗವನೆಲ್ಲ ಮುಳುಗಿ ಸಲೆ ಸಾಯಲಾರದೆ ಒದ್ದಾಡುತ್ತಿರುವನ ಕಂಡು ಸುಮ್ಮನಿರದಿರೋ ಭೈತ್ರಾಧಿಪತಿಯೆ, ನಿನ್ನ ಕರುಣಕೃಪೆಯೆಂಬ ಭೈತ್ರವ ಎನ್ನ ಕಡೆಗೆ ತಂದು `ಸಂಸಾರಸಾಗರಜಲಂ' ಎಂದುದಾಗಿ, ಸಂಸಾರಸಾಗರದ ನಟ್ಟನಡುವೆ ಮುಳುಗಿಪ್ಪವನನೆಳೆದು ತೆಗೆಯೊ ಅಘಹರನೆ ಅಮೃತಕರನೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ನೆತ್ತಿಯಲ್ಲಿ ಶ್ರೀ ವಿಭೂತಿಯ ಧರಿಸಿ ಮಿಥ್ಯದೈವಕೆರಗದ ಭಾಷೆ. ನಯನದಲ್ಲಿ ಶ್ರೀ ವಿಭೂತಿಯ ಧರಿಸಿ ಪರಧನ ಪರಸ್ತ್ರೀಯರ ನೋಡದ ಭಾಷೆ. ಭಾಳೊಳು ವಿಭೂತಿಯ ಧರಿಸಿ ಗಂಧ ಚಂದನಾದಿಗಳ ಪೂಸದ ಭಾಷೆ. ಕರ್ಣದಲ್ಲಿ ವಿಭೂತಿಯ ಧರಿಸಿ ಶಿವನಿಂದ್ಯವ ಕೇಳದ ಭಾಷೆ. ನಾಸಿಕದಲ್ಲಿ ವಿಭೂತಿಯ ಧರಿಸಿ ಲಿಂಗಸಂಗವಲ್ಲದನ್ಯವ ವಾಸಿಸದ ಭಾಷೆ. ಜಿಹ್ವೆಗೆ ಶ್ರೀ ವಿಭೂತಿಯ ಧರಿಸಿ ಲಿಂಗ ಜಂಗಮ ಪ್ರಸಾದವಲ್ಲದನ್ಯವ ಸೇವಿಸದ ಭಾಷೆ. ಕಂಠದಲ್ಲಿ ವಿಭೂತಿಯ ಧರಿಸಿ ಅನ್ಯಕೆ ಸೆರಗೊಡ್ಡದ ಭಾಷೆ. ಭುಜದಲ್ಲಿ ವಿಭೂತಿಯ ಧರಿಸಿ ಸತ್ಯ ಸದಾಚಾರವ ಭುಜಗೊಟ್ಟಾನುವ ಭಾಷೆ. ತೋಳಿನಲ್ಲಿ ವಿಭೂತಿಯ ಧರಿಸಿ ಪರಧನವನಪ್ಪದ ಭಾಷೆ. ಮುಂಗೈಯಲ್ಲಿ ವಿಭೂತಿಯ ಧರಿಸಿ ಅನ್ಯರಿಗೆ ಕೈಯೊಡ್ಡಿ ಬೇಡದ ಭಾಷೆ. ಅಂಗೈಯಲ್ಲಿ ವಿಭೂತಿಯ ಧರಿಸಿ ಲಿಂಗವಲ್ಲದನ್ಯದೈವವ ಪೂಜಿಸದ ಭಾಷೆ. ಇಂತಿವು ಮುಖ್ಯವಾದ ಸ್ಥಾನಂಗಳಲ್ಲಿ ಶ್ರೀ ವಿಭೂತಿಯನೊಲಿದು ಧರಿಸಿ ಶಿವಸತ್ಯ ಶಿವದೇಹಿಯಾದೆ ನೋಡಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ನೀರ ಮಧ್ಯೆ ಉರಿವ ಜ್ಯೋತಿ ಊರೊಳಗೆ ಬೆಳಗುವುದ ಕಂಡೆ. ಊರೊಳಗೆಲ್ಲ ಬೆಳಗಾಗಿ, ಊರ ಕದಳಿಯವನದ ಗಿರಿಯನಡರಿ ಉರಿವುದ ಕಂಡೆನು. ಇದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ