ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒಡಲಾಸೆಗೆ ಅನ್ಯರ ಸೇವೆಯ ಮಾಡುವ ಕಡುಪಾಪಿಮನವೆ ಕೇಳು. ದದ್ಥಿಯ ಮಥನವ ಮಾಡೆ ಪಂಚಾಮೃತವ ಕೊಡುವುದಲ್ಲದೆ, ಉದಕವ ಕಡೆಯಲೇನ ಕೊಡದ ತೆರದಲ್ಲಿ ಅನ್ಯರನಾಸೆಗೈದರೆ- ಪರುಷ ಮನೆಯೊಳಿರೆ ಪರರ ಹಣವ ಬೇಡಿ ಚಾಲಿವರಿವ ಮರುಳುಮಾನವನಂತೆ, ವರ ಅಮೃತಬಾವಿ ಗೃಹದೊಳಿರೆ ಸವುಳು ನೀರಿಂಗೆ ಚಾಲಿವರಿವ ಹೆಡ್ಡಮನುಜನಂತೆ, ಸರ್ವರ ಮನ ಧರ್ಮ ಕರ್ಮವನರಿವ ಪರಮಾತ್ಮ ನಿನ್ನ ಅಂಗೈಕರದೊಳಿರೆ ಪರರಾಸೆಗೈಯದಿರು, ಆಸೆಗೈಯದಿರು. ಆಸೆಗೈ ಆಸೆಗೈ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವನಾಸೆಗೈದರೆ ನಿನಗೆ ಮುಕ್ತಿಯುಂಟು ಕೇಳಲೆ ಮನುಜ.
--------------
ಹೇಮಗಲ್ಲ ಹಂಪ
ಒಡವೆ ವಸ್ತು ಧನ ಧಾನ್ಯವ ಲೋಭದಿಂದ ಗಳಿಸಿ, ಮಡದಿಮಕ್ಕಳಿಗೆಂದು ಮಡುಗಿಕೊಂಡು, ದಾನಧರ್ಮವ ಪರ ಉಪಕಾರಕ್ಕೆ ನೀಡದೆ, ಹೇಸಿಗುಣದಲ್ಲಿಪ್ಪ ಮಾನವರ ಆಯುಷ್ಯ ವ್ಯಯಿದು ಕಾಲಮೃತ್ಯು ಬಂದು ಹೊಡೆದೊಯ್ಯು[ವಾಗ], ಸುಖದಲ್ಲಿರುವಂದಿನ ಮಡದಿ-ಮಕ್ಕಳು ಒಡವೆ-ವಸ್ತು ಧನಧಾನ್ಯ ಕಾಯುವವೆ ? ಕಾಯವು. ಎರವಿನ ಸಿರಿ, ಎರವಿನ ಮನೆ, ಎರವಿನ ಮಡದೇರು, ಎರವಿನ ಮಕ್ಕಳ ನೆಚ್ಚಿಕೊಂಡು ಊರ ಸೀರಿಂಗೆ ಅಗಸ ಬಡದು ಸಾವಂತೆ, ಪರಾರ್ಥನರಕದೊಡವೆಯ ನೆಚ್ಚಿ ನನ್ನತನ್ನದೆಂದು ಲೋಭತ್ವದಿಂದ ಕೆಟ್ಟರು. ಬರುತೇನು ತರಲಿಲ್ಲ , ಹೋಗುತೇನು ಒಯ್ಯಲಿಲ್ಲ , ಹುಟ್ಟುತ್ತಲೆ ಬತ್ತಲೆ, ಹೋಗುತಲೆ ಬತ್ತಲೆ. ಈ ನಷ್ಟಸಂಸಾರವ ನಂಬಿ ಕೆಡದಿರಿ ಮನುಜರಿರ. ನಂಬಿ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವ.
--------------
ಹೇಮಗಲ್ಲ ಹಂಪ
ಒರಳೊನಕಿಯ ನಡುವಿನ ಸಿಹಿಧಾನ್ಯದಂತೆ, ಖಣಿ ಗಾಣದ ನಡುವಿನ ತಿಲದಂತೆ, ಅಗ್ನಿ ಕುಂಭದ ನಡುವಿನ ಜೀವಪಾಕದಂತೆ, ತ್ರಿದೋಷದಿಂದಲೆನ್ನ ಕಾಡುತಿದೆ ಮಾಯೆ. ಅದುಯೆಂತೆಂದಡೆ : ಜನನ ಮರಣವೆಂಬ ಯಂತ್ರದಲ್ಲಿ ತಿರುವಿ, ಹೊನ್ನು ಹೆಣ್ಣು ಮಣ್ಣೆಂಬ ಒರಳೊನಕಿಯ ನಡುವೆ ಹಾಕಿ ಕುಟ್ಟಿ, ತಾಪತ್ರಯವೆಂಬ ಅಗ್ನಿ ಕುಂಭದೊಳಿಟ್ಟೆನ್ನ ಸುಟ್ಟು ಸೂರೆಮಾಡಿ ಕಾಡುತಿರ್ದುದೀ ಮಾಯೆ, ಕಳೆವರೆನ್ನಳವಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಒಂದೆಸೆಯಲ್ಲಿ ಹುಲಿ, ಒಂದೆಸೆಯಲ್ಲಿ ರಕ್ಷಿ, ನಡುವೆ ಬಂದು ಸಿಲ್ಕಿದ ಪಶುವಿನಂತೆ ; ಒಂದೆಸೆಯಲ್ಲಿ ಕರಿ, ಒಂದೆಸೆಯಲ್ಲಿ ಭಲ್ಲೂಕ, ನಡುವೆ ಬಂದು ಸಿಲ್ಕಿದ ಎರಳೆಯಮರಿಯಂತೆ ; ಒಂದೆಸೆಯಲ್ಲಿ ಕಾಕ, ಒಂದೆಸೆಯಲ್ಲಿ ಗಿಡುಗ, ನಡುವೆ ಬಂದು ಸಿಲ್ಕಿದ ಗಿಳಿಯಂತೆ. ಇಂತಿವು ಸ್ಥಿರವಿಲ್ಲದಂತೆ ಎನ್ನ ಬಾಳ್ವೆ. ಅದು ಎಂತೆಂದೊಡೆ : ಕಾಲವ್ಯಾಘ್ರನೆಂಬ ಹುಲಿ ಮರಣಕ್ಕೆ ಗುರಿಮಾಡಿ ನರಕಕ್ಕಿಕ್ಕಿ ಕೊಲ್ಲುತ್ತಿಪ್ಪುದಾಗಿ. ಮಾಯೆಯೆಂಬ ರಕ್ಷಿ ಜನನಕ್ಕೆ ಗುರಿಮಾಡಿ ಸುಖದುಃಖಕ್ಕಿಕ್ಕಿ ಕೊಲ್ಲುತ್ತಿಪ್ಪುದಾಗಿ. ಅಷ್ಟಮದವೆಂಬ ಕರಿ ಮೆಟ್ಟಿ ಕೊಲ್ಲುತ್ತಿಪ್ಪುದಾಗಿ. ಅರಿಷಡ್ವರ್ಗವೆಂಬ ಭಲ್ಲೂಕಂಗಳು ಹರಿದು ಹೀರಿ ಹಿಪ್ಪೆಯ ಮಾಡುತ್ತಿಪ್ಪುವಾಗಿ. ಮನವೆಂಬ ಕಾಗೆ ಕಂಡಕಡೆಗೆ ಹಾರಿ, ಅಜ್ಞಾನವೆಂಬ ಗಿಡುಗ ಅಂತರಂಗದೊಳುಲಿದಾಡಿ ಸುಜ್ಞಾನವ ಮರಸಿ ಕಾಡುತಿಪ್ಪುದು ನಿನ್ನ ಮಾಯೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ