ಅಥವಾ
(15) (7) (5) (0) (3) (1) (0) (0) (5) (2) (0) (3) (0) (0) ಅಂ (3) ಅಃ (3) (14) (0) (3) (0) (0) (3) (0) (6) (0) (0) (0) (0) (0) (0) (0) (7) (0) (2) (0) (12) (6) (0) (4) (2) (10) (1) (2) (0) (4) (4) (1) (0) (14) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಾನೆಂದೆನಲಿಲ್ಲ, ನುಡಿದು ಹೇಳಲಿಕ್ಕಿಲ್ಲ. ತನ್ನಲ್ಲಿ ಬಯಲ ಘನವನು ಹರಿದು ಹತ್ತುವುದೆ ತನ್ನಲ್ಲಿ ತಾನಾದ ಬಯಲ ಘನವನು? ಇನ್ನೇನನರಸಲಿಲ್ಲ, ಅದು ಮುನ್ನ ತಾನಿಲ್ಲ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ನಿಜವನರಿದವಂಗೆ ಸತ್ಯವೂ ಇಲ್ಲ, ಅಸತ್ಯವೂ ಇಲ್ಲ; ನಿತ್ಯವೂ ಇಲ್ಲ, ಅನಿತ್ಯವೂ ಇಲ್ಲ; ಅದು ತಾ ಮುನ್ನವೆ ಇಲ್ಲ, ಬಚ್ಚ ಬರಿಯ ನಿರಾಳ ತಾನೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನೀವು ಬಯಲು.
--------------
ಘಟ್ಟಿವಾಳಯ್ಯ
ನಾನಾ ವೃಕ್ಷಂಗಳೊಳಗೆ ವಸ್ತು ತಾನೇ. ನಾನಾ ಗಿರಿಪರ್ವತಂಗಳಲ್ಲಿಯೂ ತಾನೇ. ಸಕಲ [ಸಮು]ದ್ರ ಆಕಾಶಾದಿ ಭುವನ ಬ್ರಹ್ಮಾಂಡ ಪಿಂಡಂಗಳೆಲ್ಲವು ತಾನೆಂದರಿಯದೆ, ಇದಿರಲ್ಲಿ ವಸ್ತು ಉಂಟೆಂಬ ಷಟ್‍ಸ್ಥಳಬ್ರಹ್ಮಿ ನೀ ಕೇಳಾ, ಗಿರಿ.... ನೆವುಂಟೆ? ಲಿಂಗವಾಗಿ ಸಂಗವನರಸಲುಂಟೆ? ಬೆಳಗೆಂಬ ಸಂದೇಹನ... ದ್ವಂದ್ವದ ಪ್ರಸಂಗವೆಲ್ಲಿಯದು ಹೇಳಾ. ನಿಂದ ನಿಲವೆ ತಾನಾದ ಅಬದ್ಧಂಗೆ ನಿರಾಳ ಸುರಾಳವೆಲ್ಲಿಯದು ಹೇಳಾ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ನಾದದೊಳಗಿಲ್ಲ, ಸುನಾದದೊಳಗಿಲ್ಲ. ಆದಿಯೊಳಗಿಲ್ಲ, ಅನಾದಿಯೊಳಗಿಲ್ಲ. ಭೇದಾಭೇದದೊಳಗಿಲ್ಲ. ಅದು ಇದು ಎಂಬುದಿಲ್ಲ. ಇದಿರೆಂಬ ಬಯಕೆಯಿಲ್ಲ. ಆದ್ಯರ ಸಂಗವೂ ಇಲ್ಲ. ಸುರಾಳ- ನಿರಾಳವೆಂಬ ಇವೆಲ್ಲವೂ ತಾನೆ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ನಾಮಾನಾಮವೆಂದು ನೀನು ನಾಮಕ್ಕೆ ಬಳಲುವೆ. ನಾಮವಾದ ಸೀಮೆಯೊಳಗಿಪ್ಪುದು ಹೇಳೆಲೆ ಮರುಳೆ? ನಾಮವೂ ಇಲ್ಲ ಸೀಮೆಯೂ ಇಲ್ಲ, ಒಡಲೂ ಇಲ್ಲ ನೆಳಲೂ ಇಲ್ಲ, ನಾನೂ ಇಲ್ಲ ನೀನೂ ಇಲ್ಲ ಏನೂ ಇಲ್ಲ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದುದಾಗಿ.
--------------
ಘಟ್ಟಿವಾಳಯ್ಯ
ನೀರೊಳಗೊಂದು ನೆಳಲು ಸುಳಿಯಿತ್ತು ನೆಳಲೊಳಗೊಂದು ಹೊಳೆವ ಶಬ್ದವು ಅದು ನೆಮ್ಮಲ್ಲ ಸೊಮ್ಮಲ್ಲ ಅಮ್ಮಿದಡಾಯಿತ್ತು ನೆಮ್ಮಿದಡರಳಿಯಿತ್ತು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಬಯಲು!
--------------
ಘಟ್ಟಿವಾಳಯ್ಯ
ನಿನ್ನ ಪ್ರಾಣವಾದಡೆ ನಿನ್ನ ಹೇಳಿತ ಕೇಳದೆ? ಲಿಂಗಪ್ರಾಣವಾದಡೆ ಅಂಗದಿಂದ ಅಳಿಯಲದೇಕೆ? ನಿಜಪ್ರಾಣವಾದಡೆ ಪ್ರಾಣಭೀಕರವೇತಕ್ಕಯ್ಯಾ? ಇಹಪ್ರಾಣದ ಪರಪ್ರಾಣದ ಭೇದ ನಿಮಗೇಕೆ? ಪ್ರಾಣ ತಾರ್ಕಣೆಯ ಅನುವನು ಬಲ್ಲವರು ನೀವು ಹೇಳಿರೊ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಏನೂ ಇಲ್ಲ.
--------------
ಘಟ್ಟಿವಾಳಯ್ಯ
ನಿರಾಳಲಿಂಗಕ್ಕೆ ನಿರೋಧ ಬಂದಿತ್ತಲ್ಲಾ! ನಿರೂಪಿಂಗೆ ಭಂಗ ಹೊದ್ದಿತ್ತಲ್ಲಾ! ದೇಹಾರವ ಮಾಡುವರಳಿದು ದೇಹ ದೇಹಾರದೊಳಗಡಗದಿದೆಂತೊ? ದೇಹಾರ ಆಹಾರವಾಗಿ ಅರ್ಪಿಸಲಿಲ್ಲದ ಪ್ರಸಾದಿ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲದ ಹುಸಿಯಲ್ಲಿ.
--------------
ಘಟ್ಟಿವಾಳಯ್ಯ
ನಾ ನೀನೆಂಬುದಳಿದ ಪರಮಲಿಂಗೈಕ್ಯಂಗೆ ಪರವೆಂಬುದಿಲ್ಲ, ಇಹವೆಂಬುದಿಲ್ಲ. ಮರಹೆಂಬುದಿಲ್ಲ, ಅರಿವೆಂಬುದಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ನಮ್ಮವರು ಭಕ್ತರಲ್ಲ ನಮ್ಮವರಿಗೆ ದೇವರಿಲ್ಲ. ನಮ್ಮವರು ಜಂಗಮಕ್ಕೆ ಮಾಡುವರಲ್ಲ ನಮ್ಮವರು ಜಂಗಮದ ಕೈಯಲ್ಲಿ ಮಾಡಿಸಿಕೊಂಬರು. ನಮ್ಮವರು ನಮ್ಮವರು ಎಂಬ ಶಬ್ದ ಸತ್ತಿತ್ತು. ನಮ್ಮವರಾದ ಪರಿಯ ನಾನಿನ್ನೇನ ಹೇಳುವೆ? ಇದು ಕಾರಣ, ನಮ್ಮವರಿಗೆಯೂ ಇಲ್ಲ, ನನಗಂತೂ ಇಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ!
--------------
ಘಟ್ಟಿವಾಳಯ್ಯ
ನೀರ ಕೊಳಗವ ಮಾಡಿ ನೆಳಲನಳೆದೆನೆಂಬ ಗಾವಳಿಯ ನಾನೇನೆಂಬೆನಯ್ಯಾ. ಸುಳಿದಳೆಯದ ಬೆಳಗಿನ, ಅಳೆಯದ ರಾಶಿಯ ನರರು ಅಳೆವರಯ್ಯಾ. ಅದು ಬಂದು ಆಶ್ರಯವಿಲ್ಲ, ನಿಂದು ನಿರವಯ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ನೀರೊಳಗೆ ಕಿಚ್ಚಿರ್ದು ನೆಳಲ ಸುಟ್ಟಿತ್ತು! ನೆಳಲ ಸುಟ್ಟ ಬೂದಿಯನಿಟ್ಟು ಕೊಂಡಡೆ ಭೂಮಿ ಸತ್ತಿತ್ತು! ಆಕಾಶ ಹೊತ್ತಿತ್ತು! ದೇವನ ದೇವತ್ವ ಕೆಟ್ಟಿತ್ತು! ದೇವಿಯ ಒಕತನ ಮುರಿಯಿತ್ತು! ಕೇಳಬಾರದ ಠಾವಿನಲ್ಲಿ ಕಾಣಬಾರದ ಲಿಂಗ ಮೂರ್ತಿಗೊಂಡಿರೆ ನೋಡಬಾರದ ಪೂಜೆಯಾಯಿತ್ತು! ಚಿಕ್ಕಯ್ಯಪ್ರಿಯ ಸಿದ್ಧಲಿಂಗಾ ಪ್ರಭುದೇವ [ರ] ನಿಲವ ಕಂಡು ಇಲ್ಲ ಇಲ್ಲವೆನುತಿರ್ದೆನು.
--------------
ಘಟ್ಟಿವಾಳಯ್ಯ