ಅಥವಾ
(15) (7) (5) (0) (3) (1) (0) (0) (5) (2) (0) (3) (0) (0) ಅಂ (3) ಅಃ (3) (14) (0) (3) (0) (0) (3) (0) (6) (0) (0) (0) (0) (0) (0) (0) (7) (0) (2) (0) (12) (6) (0) (4) (2) (10) (1) (2) (0) (4) (4) (1) (0) (14) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹೊರಗಣ ಮಲತ್ರಯಕ್ಕೆ ಒಳಗಣ ಅರಿವ ನೀಗಾಡಲೇತಕ್ಕೆ? ಅಲ್ಪ ಸುಖಕ್ಕೆ ಮಚ್ಚಿ ಕುಕ್ಕುರನಂತೆ ಸಿಕ್ಕಿಸಾಯಲೇತಕ್ಕೆ? ನಿಶ್ಚಯವಾಗಿ ತಾ ಬಂದ ಆದಿ ಅನಾದಿಯೆಂಬ ವಸ್ತುವ ತಿಳಿದು ನೋಡಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗವನರಿಯಬಲ್ಲಡೆ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಹಸೆಯಿಲ್ಲದ ಹಂದರದಲ್ಲಿ ನಿಬ್ಬಣವಿಲ್ಲದ ಮದುವೆಯ ಮಾಡಿ ಮದುವಣಿಗನಿಲ್ಲದೆ ಸೇಸೆಯ ತುಂಬಿ ಕಳವಳಗೊಂಡಿತು ಜಗವೆಲ್ಲ ನಿಬ್ಬಣಿಗರು ಮದವಣಿಗನನರಿಯದೆ ಅಬ್ಬರದೊಳಗಿದ್ದಡೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.
--------------
ಘಟ್ಟಿವಾಳಯ್ಯ
ಹಲವು ಬಣ್ಣದ ಹಕ್ಕಿ ಹಣ್ಣ ಮೆಲಬಂದಡೆ, ಹಣ್ಣು ಹಕ್ಕಿಯ ನುಂಗಿ ಉಗುಳದಿನ್ನೆಂತೊ! ಕಣ್ಣ ಕಾಣದ ಹಕ್ಕಿ ಹಣ್ಣ ಮೆಲಬಂದಡೆ, ಹಣ್ಣು ಹಕ್ಕಿಯ ನುಂಗಿ ಉಗುಳದಿನ್ನೆಂತೊ! ಸಣ್ಣ ಬಣ್ಣದ ಮಾತಿನ ಅಣ್ಣಗಳೆತ್ತ ಬಲ್ಲರೊ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲವೆಂದುದಾಗಿ.
--------------
ಘಟ್ಟಿವಾಳಯ್ಯ
ಹೆಣ್ಣು ಹೊನ್ನು ಮಣ್ಣು ಕುರಿತು ಚರಿಸುವನ್ನಬರ ಉಭಯದ ಕೇಡು. ವರ್ಮವನರಿಯದೆ ಮಾಡುವನ್ನಬರ ದ್ರವ್ಯದ ಕೇಡು. ಇಂತೀ ಉಭಯದ ಭೇದವನರಿತು, ಚರಿಸಿ ಮಾಡಿ ಅರಿಯಬೇಕು, ಚಿಕ್ಕಯ್ಯಪ್ರಿಯ ಸಿದ್ಧಲಿಂಗವನರಿಯಬಲ್ಲಡೆ.
--------------
ಘಟ್ಟಿವಾಳಯ್ಯ
ಹೆಣ್ಣು ಹೊನ್ನು ಮಣ್ಣಿಗೆ ಹೊಡೆದಾಡುವನ್ನಬರ ಅರುಹಿರಿಯರು ಎಂತಪ್ಪರೊ? ತ್ರಿವಿಧ ಮಲಕ್ಕೆ ತ್ರಿವಿಧ ಅಮಲದಿಂದ ಮಲ ಹರಿದಲ್ಲದೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಹುಟ್ಟಿದ ಮರ ನೆಟ್ಟ ಕಲ್ಲು ಮತ್ತೇತರ ಇಷ್ಟದ ಒತ್ತಿದ ಲಿಂಗಮುದ್ರೆ ಇರಲಿಕ್ಕೆ? ಕಿತ್ತುಕೊಂಡವ ದ್ರೋಹಿ ಎಂಬರು. ದೃಷ್ಟದಲ್ಲಿ ಜಂಗಮಭಕ್ತರ ಕೊಲುತ್ತ ಇಂತೀ ಉರುಳುಗಳ್ಳರ ಭಕ್ತರು ಜಂಗಮವೆಂದಡೆ ಒಪ್ಪನಯ್ಯಾ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಹಸಿದು ತಾರಕೆ ಊಟವ ಕೇಳಹೋದಡೆ ಕೂಟವೆದ್ದು ಬಡಿದರು. ಸಾಕಾರ ಮೊದಲು ಧಾತುಗೆಟ್ಟೆಯಲ್ಲಾ. ಪರಶಿವ ಆತ್ಮನಾಗಿ ಇದೇತಕ್ಕೆ ಬಂದೆ ತನುವಿನಾಶೆಗಾಗಿ. ಇದರಾಶೆಯ ಹೊಗದಿರು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.
--------------
ಘಟ್ಟಿವಾಳಯ್ಯ
ಹಾದಿಯ ಬೆಳ್ಳನ ಕಳ್ಳರು ತಾಕಿದಡೆ ಇನ್ನಾರಿಗೆ ಮೊರೆಗೊಡುವ? ತಾ ಸತ್ತ ಮತ್ತೆ ತನ್ನನರಿದವಂಗೆ ಇನ್ನಾರಿಗೂ ಮಿಥ್ಯವೇಕೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.
--------------
ಘಟ್ಟಿವಾಳಯ್ಯ
ಹಿಂದೆ ಕೆಟ್ಟುದ ಮುಂದೆ ನೀನರಸುವೆ. ಹಿಂದಕ್ಕೆ ನೀನಾರು ಹೇಳೆಲೆ ಮರುಳೆ! ತಾ ಕೆಟ್ಟು ತನ್ನನರಸುವಡೆ ತಾನಿಲ್ಲ ತಾನಿಲ್ಲ. ತಾನು ತಾನಾರೋ? ಮುಂದಕ್ಕೆ ಮೊದಲಿಲ್ಲ, ಹಿಂದಕ್ಕೆ ಲಯವಿಲ್ಲ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಬಯಲು.
--------------
ಘಟ್ಟಿವಾಳಯ್ಯ