ಅಥವಾ
(15) (7) (5) (0) (3) (1) (0) (0) (5) (2) (0) (3) (0) (0) ಅಂ (3) ಅಃ (3) (14) (0) (3) (0) (0) (3) (0) (6) (0) (0) (0) (0) (0) (0) (0) (7) (0) (2) (0) (12) (6) (0) (4) (2) (10) (1) (2) (0) (4) (4) (1) (0) (14) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಳು ದೇಹದೊಳಗೊಂದು ಕೀಳು ಜೀವ ಹುಟ್ಟಿತ್ತಾಗಿ ಅಪ್ಯಾಯನವಡಗದು, ಸಂದೇಹ ಹಿಂಗದು ಇದೇನೊ ಇದೇನೋ! ಹಂದೆಗಳ ಮುಂದೆ ಬಂದು ಕಾಡುತಲಿದ್ದುದೆ ಇದೇನೊ ಇದೇನೋ! ಕಾಲಾಳು ಮೇಲಾಳುಗಳು ಬೇಳುವೆಗೊಳಗಾದರು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂಬರು.
--------------
ಘಟ್ಟಿವಾಳಯ್ಯ
ಕಂಡು ಕಂಡು ಕಾಣಲುಂಟೆ ಅಯ್ಯಾ. ಕೇಳಿ ಕಂಡಿಹೆನೆಂದಡೆ ಮನಸ್ಸು ನಾಚಿತ್ತು. ನಾಚಿದ ಮನಸ್ಸಿಗೆ, ನೋಡಿದ ನೋಟಕ್ಕೆ ಭಾವ ಬತ್ತಲೆಯಾಗದನ್ನಕ್ಕ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ಕಾಯವೆನ್ನ ಕಲ್ಪಿತವೆನ್ನ, ಅರಿವೆನ್ನ ಮರಹೆನ್ನ; ಮಾಯಿಕ ನಿರ್ಮಾಯಿಕವೆನ್ನ; ದೇವರೆನ್ನ ಭಕ್ತರೆನ್ನ ಬಯಲೆನ್ನ. ಮುಂದೆ ಊಹಿಸುವುದಕ್ಕೆ ಒಡಲಿಲ್ಲವಾಗಿ ನಿಂದ ನಿಲವು ತಾನೆ, ನಿರಾಳ. ಚಿಕ್ಕಯ್ಯಪ್ರಿಯ ಸಿದ್ಧಲಿಂಗಾ, ಮುಂದೆ ಒಂದೂ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಕಾಮನೆ ದೇವ, ಸುಮಾಯೆವೆ ನಿರವಯ. ಕಾಮಯ್ಯ ಕಾಮೇಶ ಕಾಮನೆನ್ನ ಕರಸ್ಥಲದಲ್ಲಿಪ್ಪ. ಕಾಮನೆನ್ನ ಪ್ರಾಣಲಿಂಗ, ಕಾಮನ ಪ್ರಸಾದವೆನಗೆ. ಇದು ಕಾರಣ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂಬೆನು.
--------------
ಘಟ್ಟಿವಾಳಯ್ಯ
ಕಟ್ಟಿದ ಕೊಟ್ಟಿಗೆಯಲ್ಲಿ ಗುಬ್ಬಿ ಗೂಡನಿಕ್ಕದೆ? ತೋಡಿದ ಬಾವಿಯಲ್ಲಿ ತೊತ್ತು ನೀರ ತಾರಳೆ? ರಾಜಮಾರ್ಗದಲ್ಲಿ ಆರಾರೆಡೆಯಾಡರು? ಅಂತೆ ಎನಗಿವರ ಭ್ರಾಂತಿಯಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಕೂಟವ ಕೂಡಿಹೆನೆಂದಡೆ ಸಮಯದವನಲ್ಲ. ಮಾಟವ ಮಾಡಿಹೆನೆಂದಡೆ ಹಿಂದುಮುಂದಣ ದಂದುಗದವನಲ್ಲ. ಸಮಯಕ್ಕೆ ಮುನ್ನವೆ ಅಲ್ಲ, ಆರಾದಡೂ ಎನಲಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಕರವೂರ ನಿರಹಂಕಾರ-ಸುಜ್ಞಾನಿದೇವಿಯರ ಬಸುರಲ್ಲಿ ಬಂದರೆನ್ನಬಹುದೆ ಪ್ರಭುದೇವರ? ಮಂಡಗೆಯ ಮಾದಿರಾಜ- ಮಾದಲಾಂಬಿಕೆಯಮ್ಮನವರ ಬಸುರಲ್ಲಿ ಬಂದರೆನ್ನಬಹುದೆ ಬಸವೇಶ್ವರನ? ಅಕ್ಕನಾಗಲಾಂಬಿಕೆಯಮ್ಮನ ಬಸುರಲ್ಲಿ ಬಂದರೆನ್ನಬಹುದೆ ಚೆನ್ನಬಸವೇಶ್ವರನ? ಮೊರಡಿಯ ಮುದ್ದುಗೌಡ-ಸುಗ್ಗವ್ವೆಯ [ರ] ಬಸುರಲ್ಲಿ ಬಂದೆರೆನ್ನಬಹುದೆ ಸಿದ್ಧರಾಮೇಶ್ವರನ? ಇವರು ಒಬ್ಬರಿಂದಾದವರಲ್ಲ, ತಮ್ಮಿಂದ ತಾವಾದರು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ [ನಿಲ್ಲು] ಮಾಣು.
--------------
ಘಟ್ಟಿವಾಳಯ್ಯ
ಕಷ್ಟದೃಷ್ಟವ ಮುಟ್ಟುವಲ್ಲಿ ಮತ್ತೆ ಮೂವರ ಸಂಚವಿಲ್ಲಾಗಿ ಅಟ್ಟಿ ಹರಿವ ಹರಿಯ ಹಿಡಿದುಕೊಡು ಬಿಟ್ಟು ಕಳೆದೆನು ಬ್ರಹ್ಮನ; ಕಟ್ಟಿಯಾಳಿದೆನು ರುದ್ರನ; ಲಕ್ಷಿ ್ಮೀ ಸರಸ್ವತಿ ಗೌರಿಯರ ಹೋಗೆಂದು ಕಳೆದೆನು. ಚಿಕ್ಕಯ್ಯಪ್ರಿಯ ಸಿದ್ಧಲಿಂಗವಿಲ್ಲೆಂದು ಕಳೆದೆನು.
--------------
ಘಟ್ಟಿವಾಳಯ್ಯ
ಕರ್ಮವನಳಿದ ನಿರ್ಮಳಂಗೆ ಭಾವಿಸುವ ಭಾವವಿಲ್ಲ. ಇಲ್ಲೆಂಬುದು ಉಂಟೆಂಬುದು ತಾನೆ ಚಿಕ್ಕಿಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು
--------------
ಘಟ್ಟಿವಾಳಯ್ಯ
ಕೊಂಬಿನ ಮೇಲಣ ಬೇಡಂಗೆ ಶಿವರಾತ್ರಿಯನಿತ್ತನೆಂಬರು; ಕಾಳಿದಾಸಂಗೆ ಕಣ್ಣನಿತ್ತನೆಂಬರು; ಮಯೂರಂಗೆ ಮಯ್ಯನಿತ್ತನೆಂಬರು; ಬಾಣಂಗೆ ಕಯ್ಯನಿತ್ತನೆಂಬುರು; ಸಿರಿಯಾಳಂಗೆ ಮಗನನಿತ್ತನೆಂಬರು; ಸಿಂಧುಬಲ್ಲಾಳರಾಯಂಗೆ ವಧುವನಿತ್ತನೆಂಬರು; ದಾಸಂಗೆ ತವನಿಧಿಯನಿತ್ತನೆಂಬರು. ಆರಾರ ಮುಖದಲ್ಲಿ ಇದೇ ವಾರ್ತೆ ಕೇಳಲಾಗದೀ ಶಬ್ದವನು. ಲಿಂಗವಿತ್ತುದುಳ್ಳಡೆ ಅಚಳಪದವಾಗಬೇಕು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಅದು ನಿಲದ ವಾರ್ತೆ.
--------------
ಘಟ್ಟಿವಾಳಯ್ಯ
ಕಯ್ಯ ಲಿಂಗ ಕಯ್ಯಲ್ಲಿ ಮಯ್ಯ ಲಿಂಗ ಮಯ್ಯಲ್ಲಿ ತಲೆಯ ಲಿಂಗ ತಲೆಯಲ್ಲಿ ಮತ್ತೆ ಹೊಲಬನರಸಲೇತಕ್ಕೆ? ಹೊಲಬುದಪ್ಪಿ ಬಿದ್ದಿರಿ ಮೂರರ ಬಲೆಯಲ್ಲಿ. ಬಲುಹೇತಕ್ಕೆ, ಸಾಕು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಕಾಳಾಗ್ನಿ ಕಂಠವಿಲ್ಲದಂದಿನ ಸರವು ಕಾಳಾಗ್ನಿ ಶಬ್ದವಿಲ್ಲದಂದಿನ ಸರವು ಶಕ್ತಿ ಸಂಪುಟವಾಗಿ ನುಡಿಯದಂದಿನ ಸರವು. ಧೃತವನತಿಗಳದೆಯಲ್ಲಾ ಎಲೆ ಸರವೆ ಪದವ ಪತ್ರವೆಂದೆಯಲ್ಲಾ, ಪತ್ರಕ್ಕೆ ಗಣನಾಥನ ತಂದೆಯಲ್ಲಾ ಎಲೆ ಸರವೆ. ನಿಜದಲ್ಲಿ ನಿಂದು ಸಹಜವಾದೆಯಲ್ಲಾ ಅನಾಥನ ತಂದೆಯಾದೆಯಲ್ಲಾ! ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಕಾಯ ಜೀವವನರಿದೆನೆಂಬವರೆಲ್ಲರೂ ಹೋದರಲ್ಲಾ ಹೊಲಬುದಪ್ಪಿ. ಹೆಣ್ಣು ಹೊನ್ನು ಮಣ್ಣಿಗೆ ಹೋರಾಡುವ ಅಣ್ಣಗಳೆಲ್ಲರೂ ಬಸವಣ್ಣನ ಮನೆಯ ಬಾಗಿಲಲಿ ಬಂಧಿಕಾರರಾಗಿ ಕಾಯ್ದು ಕೊಂಡಿದ್ದು ಆ ಹೆಣ್ಣು ಹೊನ್ನು ಮಣ್ಣು ತಮ್ಮ ಕಣ್ಣ ಮುಂದಕೆ ಬಾರದಿದ್ದಡೆ ತಮ್ಮ ಮನದಲ್ಲಿ ನೊಂದು ಬೆಂದು ಕುದಿದು ಕೋಟಲೆಗೊಂಡು ಮತ್ತೆಯೂ ತಾವು ಅರುಹಿರಿಯರೆಂದು ಬೆಬ್ಬನೆ ಬೆರತುಕೊಂಡಿಪ್ಪವರಿಗೆ ನಮ್ಮ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಕಾಲನ ಕರೆದು ಕಪ್ಪೆಯ ಹೊಡೆದೆನು. ಕಲ್ಪಿತವೆಂಬವನ ನೊಸಲಕ್ಕರವ ತೊಡೆದೆನು. ಇನ್ನೇನೋ ಇನ್ನೇನೋ? ಮುಂದೆ ಬಯಲಿಂಗೆ ಬಯಲು ಸನ್ನೆದೋರುತ್ತಿದೆ! ಹಿಂದಿಲ್ಲ ಮುಂದಿಲ್ಲ; ಮತ್ತೇನೂ ಇಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ