ಅಥವಾ
(244) (65) (104) (2) (1) (0) (1) (0) (3) (7) (1) (0) (3) (0) ಅಂ (219) ಅಃ (219) (5) (0) (5) (3) (0) (4) (0) (9) (0) (0) (0) (0) (0) (0) (0) (16) (0) (1) (0) (37) (30) (0) (8) (10) (15) (0) (4) (0) (2) (5) (16) (1) (18) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಏನೂ ಏನೂ ಎನಲಿಲ್ಲದಂದು ಮಹಾಘನಕ್ಕೆ ಘನವಾದ ಮಹಾಘನ ನಿರಂಜನಾತೀತಪ್ರಣವದ ನೆನಹು ಮಾತ್ರದಲ್ಲಿ ನಿರಂಜನಪ್ರಣವ ಉತ್ಪತ್ಯವಾಯಿತ್ತು. ಆ ನಿರಂಜನಪ್ರಣವದ ನಿರ್ದೇಶ ಸ್ಥಲದ ವಚನವೆಂತೆಂದಡೆ : ಅವಾಚ್ಯಪ್ರಣವ ಕಲಾಪ್ರಣವ ಉತ್ಪತ್ಯವಾಗದತ್ತತ್ತ , ಪ್ರಣವನಾದ ಪ್ರಣವಬಿಂದು ಪ್ರಣವಕಲೆಗಳುತ್ಪತ್ಯವಾಗದತ್ತತ್ತ , ನಿರಂಜನಪ್ರಣವವಾಗಿದ್ದನಯ್ಯ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಏನು ಏನೂ ಎನಲಿಲ್ಲದ ಮಹಾಘನ ನಿರಂಜನಾತೀತದ ನೆನಹುಮಾತ್ರದಲ್ಲಿಯೆ ನವಪದ್ಮ ನವಶಕ್ತಿಗಳುತ್ಪತ್ಯ ಲಯವು. ನಿಶ್ಶಬ್ದವೆಂಬ ಪರಬ್ರಹ್ಮದ ನೆನಹುಮಾತ್ರದಲ್ಲಿಯೆ ಏಕಾಕ್ಷರ ತ್ರಯಾಕ್ಷರ ಸಹಸ್ರಾಕ್ಷರ ಅಷ್ಟನಾದ ಉತ್ಪತ್ಯ ಲಯವು. ದಶಚಕ್ರ ಮೊದಲಾಗಿ, ಚತುರ್ವೇದ ಗಾಯತ್ರಿ ಅಜಪೆ ಕಡೆಯಾಗಿ, ಸಮಸ್ತವು ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದಲ್ಲಿ ಉತ್ಪತ್ಯ ಲಯವೆಂದು ಬೋದ್ಥಿಸಿ ಕೃತಾರ್ಥನ ಮಾಡಿದ ಮಹಾಗುರುವಿನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು ಕಾಣಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಏನೂ ಏನೂ ಎನಲಿಲ್ಲದ ಅನಾದಿ ಅಕಾರ, ಅನಾದಿ ಉಕಾರ, ಅನಾದಿ ಮಕಾರವೆಂಬ ಪ್ರಣವತ್ರಯಂಗಳ ನೆನಹು ಮಾತ್ರದಲ್ಲಿಯೇ ಆದಿ ಪ್ರಣವ ಉತ್ಪತ್ಯವಾಯಿತು. ಆ ಆದಿ ಪ್ರಣವಸ್ಥಲದ ವಚನವದೆಂತೆಂದಡೆ : ಆಧಾರಚಕ್ರ ಸ್ವಾದ್ಥಿಷ್ಠಾನಚಕ್ರ ಉತ್ಪತ್ಯವಾಗದ ಮುನ್ನ , ಮಣಿಪೂರಕಚಕ್ರ ಅನಾಹತಚಕ್ರ ಉತ್ಪತ್ಯವಾಗದ ಮುನ್ನ , ವಿಶುದ್ಧಿಚಕ್ರ ಆಜ್ಞಾಚಕ್ರ ಉತ್ಪತ್ಯವಾಗದ ಮುನ್ನ , ಬ್ರಹ್ಮಚಕ್ರ ಶಿಖಾಚಕ್ರ ಉತ್ಪತ್ಯವಾಗದ ಮುನ್ನ , ಪಶ್ಚಿಮಚಕ್ರ ಅಣುಚಕ್ರ ಉತ್ಪತ್ಯವಾಗದ ಮುನ್ನವೆ ಓಂಕಾರವೆಂಬ ಆದಿಪ್ರಣವವಾಗಿದ್ದನು ನೋಡಾ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಏಕರಾತ್ರಿಗೆ ಹಾಲಿಗೆ ಹೆಪ್ಪ ಕೊಟ್ಟ ಹಾಗೆ ಕದಡಿಕೊಂಡಿಹುದು. ಪಂಚರಾತ್ರಿಗೆ ಬುದ್ಬುಧಾಕಾರವಾಗಿಹುದು. ದಶರಾತ್ರಿಗೆ ಶೋಣಿತವಾಗಿಹುದು. ತ್ರಿಪಂಚರಾತ್ರಿಗೆ ಮಾಂಸ ಅಸ್ಥಿಯಾಗಿಹುದು. ಚತುರ್ವಿಂಶತಿರಾತ್ರಿಗೆ ಪುನರ್ಮಾಂಸವಾಗಿ ಗರ್ಭಸ್ಥಾನದಲ್ಲಿ ಕ್ರಮದಿಂದ ವರ್ತಿಸುತ್ತಿಹುದು ನೋಡಾ. ಇದಕ್ಕೆ ಈಶ್ವರ ಉವಾಚ : ``ಕಲಲಂ ತ್ವೇಕರಾತ್ರೇಣ ಪಂಚರಾತ್ರೇಣ ಬುದ್ಬುಧಂ | ಶೋಣಿತಂ ದಶರಾತ್ರೇಣ ಮಾಂಸಪಿಂಡಂ ತ್ರಿಪಂಚ ತೇ | ಪೂರ್ಣಿಮಾಂಸಶ್ಚ ವಿಂಶಾಯೇ ಗರ್ಭೇನಾ ವರ್ಧತೇ ಕ್ರಮಾತ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಏನು ಏನೂ ಎನಲಿಲ್ಲದ ಮಹಾಘನ ಚಿತ್ಕಲಾಪ್ರಣವದ ನೆನಹುಮಾತ್ರದಲ್ಲಿ ಅನಾದಿಪ್ರಣವದ ಉತ್ಪತ್ಯವಾಯಿತ್ತು. ಆ ಅನಾದಿಪ್ರಣವಸ್ಥಲದ ವಚನವೆಂತೆಂದಡೆ : ಆದಿ ಅಕಾರ ಆದಿ ಉಕಾರ ಆದಿ ಮಕಾರವೆಂಬ ಆದಿ ಅಕ್ಷರತ್ರಯಂಗಳಿಲ್ಲದಂದು. ಆದಿ ನಾದ ಆದಿ ಬಿಂದು ಆದಿ ಕಲೆಗಳೆಂಬ ಭಿನ್ನನಾಮ ತಲೆದೋರದಂದು, ಆದಿ ಪ್ರಕೃತಿ ಆದಿ ಪ್ರಾಣವಿಲ್ಲದಂದು, ಅಖಂಡ ಜ್ಯೋತಿರ್ಮಯವಾಗಿಹ ಗೊಳಕಾಕಾರಪ್ರಣವ ಜ್ಯೋತಿರ್ಲಿಂಗವಿಲ್ಲದಂದು, ಓಂಕಾರವೆಂಬ ಅನಾದಿಪ್ರಣವವಾಗಿದ್ದನು ನೋಡಾ ಇಲ್ಲದಂತೆ, ನಮ್ಮ ಅಪ್ರಮಾಣಕೂಡಸಂಗಮದೇವನು
--------------
ಬಾಲಸಂಗಯ್ಯ ಅಪ್ರಮಾಣ ದೇವ
ಏನು ಏನೂ ಎನಲಿಲ್ಲದಂದು ಮಹಾಘನ ನಿರಂಜನಾತೀತವಾಗಿಹ ವಸ್ತು ಲೋಕಾದಿಲೋಕಂಗಳ ಸೃಜಿಸಬೇಕೆಂದು ನೆನಹುಮಾತ್ರದಲ್ಲಿಯೇ ನಿರಂಜನಪ್ರಣವ ಉತ್ಪತ್ಯವಾಯಿತ್ತು. ಇನ್ನು ನಿರಂಜನಪ್ರಣವಸ್ಥಲದ ವಚನ ಅದೆಂತೆಂದಡೆ : ಮಂತ್ರಾಧ್ವ ಪದಾಧ್ವ ಜನನಕ್ಕೆ ಬಾರದಂದು, ವರ್ಣಾಧ್ವ ಭುವನಾಧ್ವ ಜನನಕ್ಕೆ ಬಾರದಂದು, ತತ್ತ್ವಾಧ್ವ ಕಲಾಧ್ವ ಜನನಕ್ಕೆ ಬಾರದಂದು, ನಿರಂಜನಪ್ರಣವನಾಗಿದ್ದನಯ್ಯ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮ ದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಏನೂ ಏನೂ ಎನಲಿಲ್ಲದ ಅನಾದಿ ಪ್ರಣವದ ನೆನಹು ಮಾತ್ರದಲ್ಲಿಯೇ ಅನಾದಿ ಅಕಾರ, ಅನಾದಿ ಉಕಾರ, ಅನಾದಿ ಮಕಾರವೆಂಬ ಪ್ರಣವತ್ರಯಂಗಳುತ್ಪತ್ಯವಾಯಿತ್ತು. ಆ ಅನಾದಿ ಅಕಾರ, ಆ ಅನಾದಿ ಉಕಾರ, ಆ ಅನಾದಿ ಮಕಾರವೆಂಬ ಪ್ರಣವತ್ರಯಂಗಳ ನಿರ್ದೇಶನಸ್ಥಲದ ವಚನವದೆಂತೆಂದಡೆ : ಅಕಾರ ಉಕಾರ ಮಕಾರವೆಂಬ ನಿರಾಕಾರಪ್ರಣವತ್ರಯದ ಮೇಲೆ ನಿರ್ವಯಲು ಬಂದು ಕುಳ್ಳಿರದಂದು, ಬಯಲು ನಿರ್ವಯಲೆಂಬಾ ನಾಮ ತಲೆದೋರದಂದು, ಪ್ರರಬ್ರಹ್ಮಲೀಲೆಯು ನಿಂದು ಏನೂ ಏನೂ ಎನಲಿಲ್ಲದಂದು, ಅನಾದಿ ಅಕಾರ, ಅನಾದಿ ಉಕಾರ, ಅನಾದಿ ಮಕಾರವೆಂಬ ಪ್ರಣವತ್ರಯವಾಗಿದ್ದನು ನೋಡಾ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ