ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಬೆಟ್ಟದ ತುದಿಯ ಮೇಲೆ ಮುಟ್ಟಿ ಕೂಗುವ ಕೋಗಿಲೆಯ ಕಂಡೆನಯ್ಯ. ಆ ಕೋಗಿಲೆಯ ಇರುವೆ ನುಂಗಿ, ಆ ಇರುವೆಯ ನಿರ್ವಯಲು ನುಂಗಿ, ಆ ನಿರ್ವಯಲ ತಾನು ತಾನೇ ನುಂಗಿತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬೆಡಗು : ಕೊಡಲಿ ಪಿಡಿದಲ್ಲದೇ ಕಾಡು ಕಡಿಯದು. ಆ ಕಾಡ ಕಡಿದಲ್ಲದೆ ಕಲ್ಪವೃಕ್ಷದ ವನವು ಕಾಣದು. ಆ ಕಲ್ಪವೃಕ್ಷದ ವನವ ಕಂಡಡೂ, ಆ ಕಲ್ಪವೃಕ್ಷದ ವನವನಳಿದಲ್ಲದೆ ಕದಳಿಯು ಸಿಗದು. ಆ ಕದಳಿಯ ಸುಲಿದು ಒಳಪೊಕ್ಕಲ್ಲದೆ ನಿಜವು ತಿಳಿಯದು. ಆ ನಿಜವು ತಿಳಿದಲ್ಲದೆ ನಿರ್ಬಯಲು ತಾನಾಗದು ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಬಯಲೆಂದಡೆ ಕೀಳು ಮೇಲಿನೊಳಗಾಯಿತ್ತು. ನಿರವಯವೆಂದಡೆ ಸಾವಯದಿಂದ ಕುರುಹುದೋರಿತ್ತು. ಸವಿದ ಸವಿಯನುಪಮಿಸಬಾರದೆಂದಡೆ ಜಿಹ್ವೆಯಿಂದ ಕುರುಹುಗೊಂಡಿತ್ತು. ಆ ಜಿಹ್ವೆ ಸಾಕಾರ, ಸವಿದ ಸವಿ ನಿರಾಕಾರವೆಂದಡೆ, ನಾನಾ ಭೇದಂಗಳಿಂದ ರುಚಿಮಯವಾಯಿತ್ತು. ಆ ಜಿಹ್ವೆಯ ಕೊನೆಯ ಮೊನೆಯಲ್ಲಿ ನಿಂದು, ಅಹುದಲ್ಲವೆಂಬುದ ತಾನೆ ಕುರುಹಿಟ್ಟುಕೊಂಡಂತೆ ಜಿಹ್ವೆ ಬಲ್ಲುದೆಂದಡೆ ತನ್ನಡಿಗೆ ಬಾರದುದನರಿಯಿತ್ತೆ ? ಸಾರ ಸ್ವಾದ ಲೇಸೆಂದಡೆ ಜಿಹ್ವೆ ಹೊರತೆಯಾಗಿ ಕುರುಹುಗೊಂಡಿತ್ತೆ ? ಇದು ಕ್ರೀ ಜ್ಞಾನ ಸಂಪುಟಸ್ಥಲ. ಈ ಉಭಯಸ್ಥಲ ಲೇಪವಾದ ಮತ್ತೆ ನಿರುತ ನಿರ್ಯಾಣವೆಂಬುದು ನನ್ನಲ್ಲಿಯೊ ? ನಿನ್ನಲ್ಲಿಯೊ ? ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ ಸದಾತ್ಮದಲ್ಲಿ ನಿನ್ನ ಕುರುಹೇಕೆ ಅಡಗದು ?
--------------
ಮೋಳಿಗೆ ಮಹಾದೇವಿ
ಬ್ರಹ್ಮ ವಿಷ್ಣುವಿನಲ್ಲಿ ಎಯ್ದಿ, ವಿಷ್ಣು ರುದ್ರನಲ್ಲಿ ಎಯ್ದಿ, ರುದ್ರ ಈಶ್ವರನಲ್ಲಿ ಎಯ್ದಿ, ಈಶ್ವರ ಸದಾಶಿವನಲ್ಲಿ ಎಯ್ದಿ, ಸದಾಶಿವ ಪರಶಿವನಲ್ಲಿ ಎಯ್ದಿ, ಪರಶಿವ ನಿತ್ಯನಿಜದಲ್ಲಿ ಎಯ್ದಿ, ಅತ್ತತ್ತಲೆ, ನಿರಾಕುಳ ನಿರಂಜನ ನಿಷ್ಪತಿ ನಿರವಯ ತಾನೇ ನೋಡಾ. ಮನೋಲಯವಾಯಿತ್ತು, ಭಾವ ನಿಃಶೂನ್ಯವಾಯಿತ್ತು ನೆನಹು ನಿಷ್ಪತಿಯಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬ್ರಹ್ಮಾಂಡದ ಬಯಲ ಪಸರಿಸಿ, ಹಿಡಿವರೆ ಬಯಲಾವುದುಂಟು ಹೇಳಿರಣ್ಣಾ ? ಕಂಗಳ ಮುಂದಣ ಕತ್ತಲೆ ಹರಿವುದಕ್ಕೆ ಜ್ಯೋತಿ ಆವುದುಂಟು ಹೇಳಿರಣ್ಣಾ ? ಇಂಗಿತವನರಿದ ಬಳಿಕ, ತ್ರಿವಿಧಕ್ಕೆ ತ್ರಿವಿಧವನಿತ್ತು ತ್ರಿವಿಧವನರಿದು, ತ್ರಿವಿಧವ ಮರೆದು, ಕಲಿಯುಗದ ಕತ್ತಲೆಯ ದಾಂಟಿ, ತನ್ನ ಭವವ ದಾಂಟಿದವಂಗೆ, ಬ್ರಹ್ಮಾಂಡದ ಬಯಲು ಕೈವಶವಾಯಿತ್ತು. ಕಂಗಳ ಮುಂದಣ ಕತ್ತಲೆ ಹರಿದುಹೋಯಿತ್ತು, ನಿಮ್ಮ ಸಂಗಸುಖದೊಳಗಿಪ್ಪ ಲಿಂಗೈಕ್ಯಂಗೆ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಬಸವಣ್ಣನ ಪ್ರಸಾದದಿಂದ ಭಕ್ತಿಜ್ಞಾನ ವೈರಾಗ್ಯ ಸಂಪನ್ನನಾದೆನಯ್ಯ. ಚೆನ್ನಬಸವಣ್ಣನ ಪ್ರಸಾದದಿಂದ ಷಟ್‍ಸ್ಥಲಜ್ಞಾನಸಂಪನ್ನನಾದೆನಯ್ಯ. ಪ್ರಭುದೇವರ ಪ್ರಸಾದದಿಂದ ಪರಶಿವತತ್ವಸ್ವರೂಪವೇ ಎನ್ನ ಸ್ವರೂಪವೆಂದರಿದು ಸಮಸ್ತ ಸಂಸಾರಪ್ರಪಂಚ ಕೊಡಹಿದೆನು ನೋಡಾ. ನೀಲಲೋಚನೆಯಮ್ಮನ ಪ್ರಸಾದದಿಂದ ನಿಜಲಿಂಗೈಕ್ಯನಾದೆನಯ್ಯ. ಮಹಾದೇವಿಯಕ್ಕಗಳ ಪ್ರಸಾದದಿಂದ ಸುತ್ತಿದ ಮಾಯಾಪಾಶವ ಹರಿದು ನಿರ್ಮಾಯನಾಗಿ ನಿರ್ವಾಣಪದದಲ್ಲಿ ನಿಂದೆನಯ್ಯ. ಸಿದ್ಧರಾಮಯ್ಯನ ಪ್ರಸಾದದಿಂದ ಶುದ್ಧ ಶಿವತತ್ವವ ಹಡೆದೆನಯ್ಯ. ಮೋಳಿಗೆಯ ಮಾರಿತಂದೆಗಳ ಪ್ರಸಾದದಿಂದ ಕಾಯದ ಕಳವಳನಳಿದು ಕರ್ಮನಿರ್ಮಲನಾಗಿ ವೀರಮಾಹೇಶ್ವರನಾದೆನು ನೋಡಾ. ಇವರು ಮುಖ್ಯವಾದ ಏಳುನೂರೆಪ್ಪತ್ತುಮರಗಣಂಗಳ ಪರಮಪ್ರಸಾದದಿಂದ ಎನ್ನ ಕರಣಂಗಳೆಲ್ಲವು ಲಿಂಗಕರಣಂಗಳಾಗಿ ಕರಣೇಂದ್ರಿಯಂಗಳ ಕಳೆದುಳಿದು ಇಂದ್ರಿಯಂಗಳಿಗೆ ನಿಲುಕದ ಸ್ಥಾನದಲ್ಲಿರ್ದು ಪರಮಾನಂದ ಪ್ರಭಾಮಯನಾಗಿರ್ದೆನು ನೋಡಾ. ನಿಮ್ಮ ಶರಣರ ಪ್ರಸಾದದಿಂದ ನಾನು ಪ್ರಸಾದಿಯಾಗಿರ್ದೆನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬ್ರಹ್ಮವೆಂಬ ವೃಕ್ಷದಲ್ಲಿ ಫಲಪತ್ರಕುಸುಮಂಗಳೆಂಬ ಸಚರಾಚರಂಗಳಷ್ಟಮೂರ್ತಿಗಳಾಗಿ ಆಗಿ ಆಗಿ ಅಳಿವುತ್ತಿಪ್ಪವಯ್ಯಾ. ಇದಕ್ಕೆ ಶ್ರುತಿ: ಬ್ರಹ್ಮಣೋ ವೃಕ್ಷಾನ್ಮಹತೋ ಪತ್ರಂ ಕುಸುಮಿತಂ ಫಲಂ ಚರಾಚರಾಷ್ಟಮೂರ್ತಿಂ ಚ ಫಲಿತಂ ಫಲಶೂನ್ಯವತ್ ಇಂತೆಂದುದಾಗಿ, ಅಷ್ಟಮೂರ್ತಿಗಳು ನಷ್ಟವಾದಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗ ನಷ್ಟವಾಯಿತ್ತೆಂಬ ಮಿಟ್ಟಿಯ ಭಂಡರನೇನೆಂಬೆನಯ್ಯಾ.
--------------
ಆದಯ್ಯ
ಬಾರನೇತಕವ್ವಾ ನಮ್ಮನೆಯಾತ ? ತೋರನೇತಕವ್ವಾ ತನ್ನ ದಿವ್ಯರೂಪವ ? ಬೀರನೇತಕವ್ವಾ ಅತಿಸ್ನೇಹವ ? ಇನ್ನೆಂತು ಸೈರಿಸುವೆನವ್ವಾ. ಹೇಗೆ ತಾಳುವೆನವ್ವಾ. ತನು ತಾಪಗೊಳ್ಳುತ್ತಿದೆ, ಮನ ತಲ್ಲಣವಾಗುತ್ತಿದೆ. ಅಖಂಡೇಶ್ವರನೆಂಬ ನಲ್ಲನ ತೋರಿಸಿ ಎನ್ನ ಪ್ರಾಣವನುಳುಹಿಕೊಳ್ಳಿರವ್ವಾ.
--------------
ಷಣ್ಮುಖಸ್ವಾಮಿ
ಬಾಹ್ಯವ್ರತ, ಭ್ರಮೆವ್ರತ, ಸೀಮೋಲ್ಲಂಘನವ್ರತ, ಉಪಚರಿಯಕೂಟಸ್ಥವ್ರತ, ಸಮಕ್ರೀ ಭೋಜನವ್ರತ, ಇಷ್ಟಸಂಬಂಧಕೂಟವ್ರತ, ದ್ರವ್ಯ ಉಪಚರಿಯ ಸಂಪದವ್ರತ, ಅಹುದಲ್ಲವೆಂಬ ಸಂದೇಹ ಸಂಕಲ್ಪವ್ರತ, ತಿಲ ಮಧುರ ಕ್ರಮಕ ಲವಣ ಪರಿಪಾಕ ವಿಸರ್ಜನವ್ರತ, ಗಮನ ಸುಮನ ಸಮತೆ ನೇಮ ಸಂತೋಷವ್ರತ. ಇಂತೀ ಸೀಮೆಯೊಳಗಾದ ಅರುವತ್ತನಾಲ್ಕು ಶೀಲವನರಿದಡೇನು? ಪರವಧುವಿಂಗೆ ಪಲ್ಲಟಿಸದೆ, ಪರಧನಕ್ಕೆ ಕೈದುಡುಕದೆ, ಅನರ್ಪಿತಕ್ಕೆ ಮನ ಮುಟ್ಟದೆ, ತಾ ಕೊಂಡ ಸೀಮೆಯಲ್ಲಿ ಭಾವಭ್ರಮೆಯಿಲ್ಲದೆ, ಮನ ವಚನ ಕಾಯದಲ್ಲಿ ಕೊಂಡ ವ್ರತಕ್ಕೆ ಪೂಜಿಸುವ. ಗುರುಲಿಂಗಜಂಗಮಕ್ಕೆ ಉಭಯದೋರದೆ ನಿಂದುದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಸಂದುದು.
--------------
ಶಿವಲೆಂಕ ಮಂಚಣ್ಣ
ಬಂಧುಗಳ ಬೆಂಬಳಿಯ ಕಳ್ಳನ ಹೆಂಡತಿಗೆ ಭಗ ಮೂರು, ಬಾಯಾರು, ಪೃಷ್ಠ ಎಂಬತ್ತನಾಲ್ಕುಲಕ್ಷ. ರೋಮ ಎಂಟುಕೋಟಿ. ಹಲ್ಲು ಹದಿನಾರು, ನಾಲಗೆ ಏಳು. ಕಿವಿ ಇಪ್ಪತ್ತೈದು, ನಾಡಿ ಶತದಶ. ಮೂಗು ಮೂವತ್ತೇಳು, ಕಾಲೆಂಟು. ಭುಜವೆರಡು, ಕೈವೊಂದೆ. ಹಿಂದೆ ಮುಂದೆ ನೋಡುವ ಕಣ್ಣು, ಅಬ್ಥಿಸಂದ್ಥಿಯೊಳಗೆ ಒಂದೆ ಅದೆ. ಅರ್ಕೇಶ್ವರಲಿಂಗವ ಕಾಣಬಾರದು.
--------------
ಮಧುವಯ್ಯ
ಬಯಸುವೆನಯ್ಯಾ ನಿನ್ನವರ ಸಂಗವ ಎಳಸುವೆನಯ್ಯಾ ನಿನ್ನವರ ಸಂಗಕ್ಕೆ ಬಯಕೆ ಬೇರನ್ಯಕ್ಕೆಳಸದಂತೆ ಹರುಷಿತನ ಮಾಡಯ್ಯಾ ಭಕ್ತಿಯೊಳಗೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಬಸವಾ ಬಸವಾ ಎಂಬ ಶಬ್ದವಡಗಿತ್ತು. ಬಸವ ಬಸವಾಯೆಂಬ ರೂಪು ನಿರೂಪಾಯಿತ್ತು. ಬಸವನ ಕಾಯವಳಿದು ನಿರಾಕುಳವಾಗಲು ಆನು ಬಸವಾ ಬಸವಾ ಬಸವಾಯೆಂದು ಬಯಲಾದೆನಯ್ಯಾ.
--------------
ನೀಲಮ್ಮ
ಬ್ರಹ್ಮ ತಲೆದೋರದಂದು, ವಿಷ್ಣು ಉದಯಿಸದಂದು ರುದ್ರನವತರಿಸದಂದು, ಈರೇಳುಭುವನ ನೆಲೆಗೊಳ್ಳದಂದು ಸಪ್ತಸಾಗರಂಗಳುಕ್ಕಿ ಹರಿಯದಂದು, ಅಮೃತಮಥನವಿಲ್ಲದಂದು, ಮೂವತ್ತುಮೂರುಕೋಟಿ ದೇವರ್ಕಳಿಲ್ಲದಂದು ಮುನ್ನಾರು ಬಲ್ಲರು ? ಮುನ್ನಾರು ಬಲ್ಲರು ? ಆದಿಮೂಲಸ್ವಾಮಿ ಕೂಡಲಚೆನ್ನಸಂಗಯ್ಯ ಹಮ್ಮಿಲ್ಲದಿರ್ದನಂದು !
--------------
ಚನ್ನಬಸವಣ್ಣ
ಬ್ರಹ್ಮಚಾರಿಯಾಗಿಹ, ಅಪೇಕ್ಷೆಯಂ ಬಿಟ್ಟು ನಿರಾಪೇಕ್ಷನಾಗಿಹ, ಧನಾಪೇಕ್ಷೆಯಿಲ್ಲದಿಹ, ಆಗಮವಿಡಿದು ಆಚರಿಸುತ್ತಿಹ, ಗುರುತತ್ತ್ವ ಶಿವತತ್ತ್ವ ಪರತತ್ತ್ವಸ್ವರೂಪಂಗಳನರಿದಿಹ, ಇವು ಐದು ನಿಯಮಯೋಗ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಬತ್ತಲೆ ಬಯಲಾದ ಹೆಂಗಸು ನಿತ್ಯವಾದ ಕೇರಿಗಳಲ್ಲಿ ಸುಳಿದಾಡುತಿಪ್ಪಳು ನೋಡಾ! ಮೇಲಾದ ದಾರಿಯಲ್ಲಿ ಸಾಧಕನೆಂಬ ಮೂರ್ತಿ ಬಂದು ಬತ್ತಲೆ ಬಯಲಾದ ಹೆಂಗಸ ನೆರೆದು ನಿಶ್ಚಿಂತ ನಿರಾಕುಳವೆಂಬ ಲಿಂಗದಲ್ಲಿ ಅಡಗಿಪ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ

ಇನ್ನಷ್ಟು ...
-->