ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಯೋಗದ ನೆಲೆಯನರಿದೆನೆಂಬವರಿಗೆ ಹೇಳಿಹೆವು ಕೇಳಿರೇ. ಪೃಥ್ವಿ, ಅಪ್ಪುಗಳೆರಡ ಆಧಾರಗೊಳಿಸಿ, ಅಗ್ನಿ ವಾಯುಗಳೆರಡ ಅಂಬರಸ್ಥಾನಕ್ಕೊಯ್ದು, ಆತ್ಮ ಆಕಾಶವೆರಡ ಅನುಭಾವ ಮುಖಕ್ಕೆ ತಂದು, ಮನದೆ ಅನುಮಾನವಳಿದು, ನೆನಹು ನಿಶ್ಚಲವಾಗಿ, ಒಳಗೆ ಜ್ಯೋರ್ತಿಲಿಂಗವ ನೋಡುತ್ತ, ಹೊರಗೆ ಎರಡು ಹುಬ್ಬಿನ ನಡುವೆ ಉಭಯ ಲೋಚನವಿರಿಸಿ, ಹಿಂದು ಮುಂದನೆಣಿಸದೆ ಸಂದೇಹವಿಲ್ಲದೆ ಖೇಚರಿಯನಾಚರಿಸಲು, ಲೋಚನ ಮೂರುಳ್ಳ ಶಿವ ತಾನಹನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಆತನೇ ಶಿವಯೋಗಿ.
--------------
ಸ್ವತಂತ್ರ ಸಿದ್ಧಲಿಂಗ
ಯೋಗದ ಲಾಗನರಿದು ಯೋಗಿಸಿಹೆನೆಂಬ ಯೋಗಿಗಳು ನೀವು ಕೇಳಿ. ನೆಲವಾಗಿಲ ಮುಚ್ಚಿ, ಜಲವಾಗಿಲ ಮುಚ್ಚಿ, ತಲೆವಾಗಿಲ ತೆಗೆದು ಗಗನಗಿರಿಯ ಪೂರ್ವಪಶ್ಚಿಮ ಉತ್ತರ ದಕ್ಷಿಣದ ನಡುವೆ ಉರಿವ ಅಗ್ನಿಯ ಕಂಡು, ಆ ಅಗ್ನಿಯ ಮೇಲೆ ಸ್ವರನಾಲ್ಕರ ಕೀಲುಕೂಟದ ಸಂಚಯವ ಕಂಡು, ಆ ಸಂಚಯದಲ್ಲಿ ಆಮೃತಸ್ವರವ ಹಿಡಿದು ಕೂಡುವುದೇ ಪರಮಶಿವಯೋಗ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಅದೇ ಪರಮನಿರ್ವಾಣ.
--------------
ಸ್ವತಂತ್ರ ಸಿದ್ಧಲಿಂಗ
ಯೋಗತಾಣವನರಿದು ಯೋಗಿಸಿಹೆನೆಂಬ ಯೋಗಿಗಳಿಗೆ ಯೋಗದ ಕ್ರಮವ ಹೇಳಿಹೆವು ಕೇಳಿರಯ್ಯಾ. ಸುಷುಮ್ನೆಯ ನಾಲ್ದೆಸೆಯಲ್ಲಿ, ಆತ್ಮಕಲೆ ವಿದ್ಯಾಕಲೆ ನಾದಕಲೆ ಬಿಂದುಕಲೆಗಳನರಿಯಬೇಕು. ಆ ಕಲೆ ನಾಲ್ಕು ಸುತ್ತಿ, ಅಗ್ನಿಕಲೆಗಳ ಹತ್ತಿನರಿವುದು. ಪಿಂಗಳೆಯಲ್ಲಿ ಭಾನುಕಲೆಗಳ ಹನ್ನೆರಡನರಿವುದು. ಇಡೆಯಲ್ಲಿ ಚಂದ್ರಕಲೆಗಳು ಹದಿನಾರು ಕ್ಷಯ ವೃದ್ಧಿಯಾಗಿ ನಡೆವುದನರಿವುದು. ಈ ಮೂವತ್ತೆಂಟು ಕಲೆಗಳ ಕೂಡಿಹ ಚಂದ್ರಸೂರ್ಯಾಗ್ನಿಗಳ ಮಧ್ಯದಲ್ಲಿ ತತ್ವಮೂರು ಕೂಡೆ ಬೆಳಗುವ ಪರಜ್ಯೋತಿರ್ಲಿಂಗವನರಿದು ಯೋಗಿಸಿ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಬಳಿಕ ಕೂಡುವುದು ಕಾಣಿರಣ್ಣಾ.
--------------
ಸ್ವತಂತ್ರ ಸಿದ್ಧಲಿಂಗ