ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜ್ಞಾನವಿಲ್ಲದವಂಗೆ ಆಚಾರವಿಲ್ಲ. ಆಚಾರವಿಲ್ಲದವಂಗೆ ಭಕ್ತಿಯಲ್ಲ. ಭಕ್ತಿಯಿಲ್ಲದವಂಗೆ ವಿರಕ್ತಿಯಿಲ್ಲ. ವಿರಕ್ತಿಯಿಲ್ಲದವಂಗೆ ಮುಕ್ತಿಯಿಲ್ಲ. ಇದು ಕಾರಣ, ಜ್ಞಾನ ವಿಚಾರ ಭಕ್ತಿ ವಿರಕ್ತಿ ಉಳ್ಳವಂಗೆ ಮುಕ್ತಿಯುಂಟು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಜಾವ ಘಳಿಗೆಯ ನೇಮದ ಪೂಜೆಯ ನೇಮಕರೆಲ್ಲ, ಫಲದಾಯಕರಾಗಿ ಹೋದರು. ಲಿಂಗಭಕ್ತ ಕಾಲ ನೇಮದ ಪೂಜಾ ಫಲದಾಯಕನೆ ಅಲ್ಲಲ್ಲ. ಲಿಂಗಭಕ್ತ ಮಾಡುವ ಪೂಜೆ ನಿರ್ಮಾಲ್ಯವಾಗದು, ತಾ ಸಹಿತ ಲಿಂಗಕ್ಕೆ ಪೂಜೆಯಹನಾಗಿ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ನಿಜಭಕ್ತ ಮಾಡುವ ಪೂಜೆಯ ಕ್ರಮವಿದು.
--------------
ಸ್ವತಂತ್ರ ಸಿದ್ಧಲಿಂಗ
ಜಪ ತಪ ನಿತ್ಯ ನೇಮ ವ್ರತ ಶೀಲಂಗಳೆಂಬ ಸರ್ವೋಪಾಯಂಗಳಿಂದ ಶಿವನ ಸಾಧಿಸಿ ಭೇದಿಸಿ ಕಂಡೆಹೆವೆಂಬ ಉಪಾಯಸಾಧಕರು ನೀವು ಕೇಳಿ. ಆ ಉಪಾಯಂಗಳನೂ ಶಿವಪ್ರಸನ್ನಿಕೆಯಿಂದ ಪಡೆದು ಶುದ್ಧ ಸಂಸಾರಿಗಳಾದ ಜ್ಞಾನಿಗಳು ಸ್ವಯಂಪ್ರಕಾಶವಾಗಿಯು ವಿಶ್ವಪ್ರಕಾಶನಾದ `ಸತ್ಯಜ್ಞಾನಮನಂತಂ ಬ್ರಹ್ಮ'ವೆಂಬ ಲಕ್ಷಣವುಳ್ಳ ಪರಿಪೂರ್ಣ ಪರಶಿವನ ಜ್ಞೇಯಸ್ವರೂಪದಿಂದರಿದವರು ಜೀವನ್ಮುಕರಾಗಿ ವರ್ತಿಸುತ್ತಿಹರು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಜ್ಞಾತೃ ಜ್ಞಾನ ಜ್ಞೇಯ ಮೂರೊಂದಾದುದೇ ಜೀವ ಪರಮರೈಕ್ಯವಯ್ಯ. ಆ ಜೀವ ಪರಮರೈಕ್ಯವಾದುದೆ ಮನ ಲೀಯ. ಮನ ಲೀಯವಾದ ಬಳಿಕ ಇನ್ನು ಧ್ಯಾನಿಸಲುಂಟೆ? ಅರಿಯಲುಂಟೆ ಹೇಳ? ಬಾಹ್ಯಾಭ್ಯಂತರ ಇಂದ್ರಿಯದ ಮನದ ವಿಕಾರವಳಿದು ಅವಿದ್ಯಾವಾಸನೆಯಡಗಿ, ಅಹಂಕಾರ ಉಡುಗಿದ ಜೀವನ್ಮುಕ್ತಂಗೆ ಸರ್ವಶೂನ್ಯವಾಗಿ, ಸಮುದ್ರಮಧ್ಯದ ತುಂಬಿದ ಕೊಡದಂತೆ ಇದ್ದನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ಜಗದಗಲದ ಮಾಯಾಜಾಲವ ಹಿಡಿದು ಕಾಲನೆಂಬ ಜಾಲಗಾರ ಜಾಲವ ಬೀಸಿದ ನೋಡಯ್ಯ. ಆ ಜಾಲಕ್ಕೆ ಹೊರಗಾದವರನೊಬ್ಬರನೂ ಕಾಣೆ. ಬಲ್ಲಬಲ್ಲಿದರೆಂಬುವರೆಲ್ಲರ ಬಲೆಯ ಕಲ್ಲಿಯೊಳಗೆ ತುಂಬಿದ ಕಾಲ. ಆ ಕಾಲನ ಬಲೆಯೊಳಗೆ ಸಿಕ್ಕಿ ಬೀಳುವೆಗೊಳುತಿದೆ ಜಗವೆಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು, ತನ್ನವರಿಗೆ ತಾ ಮೇಲಾರೈಕೆಯಾಗಿಹನು.
--------------
ಸ್ವತಂತ್ರ ಸಿದ್ಧಲಿಂಗ
ಜಾಳು ಮಾತೆಂದಡೆ ನಲಿದು ನಲಿದು ನುಡಿವರು. ಕಾಳುಗೆಲಸವೆಂದಡೆ ನಲಿದು ನಲಿದು ಮಾಡುವರು. ಶ್ರೀಗುರು ಸೇವೆಯೆಂದಡೆ, ನಿತ್ಯ ಲಿಂಗಾರ್ಚನೆಯೆಂದಡೆ, ಮತ್ತೆ ಪಂಚಾಕ್ಷರಿಜಪವೆಂದಡೆ, ಅಳಲುವರು, ಬಳಲುವರು. ಇಂತಪ್ಪ ದುರುಳರಿಗೆ, ದುಃಖವೆ ಪ್ರಾಪ್ತಿಯಲ್ಲದೆ, ನಿಜಸುಖವೆಂಬುದಿಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು, ಅವರ ಬಾರದ ಭವದಲ್ಲಿ ಬರಿಸದೆ ಮಾಣ್ಬನೇ?
--------------
ಸ್ವತಂತ್ರ ಸಿದ್ಧಲಿಂಗ
ಜಗದಗಲದಲ್ಲಿ ಮುಸುಕಿದ ಕತ್ತಲೆ, ದೀವಿಗೆಯ ಬೆಳಗಿಂಗೆ ಹರಿವುದೆ ಸೂರ್ಯನ ಬೆಳಗಿಂಗಲ್ಲದೆ? ಇದು ಕಾರಣ, ಕಾಯವಂತರೆಲ್ಲ ಮಾಯಾಭ್ರಮೆಗೊಳಗಾದರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮನರಿದಾತ ನಿಮ್ಮೊಳಗಾದನು.
--------------
ಸ್ವತಂತ್ರ ಸಿದ್ಧಲಿಂಗ
ಜಾಗ್ರತ್ ಸ್ವಪ್ನ ಸುಷುಪ್ತಿ ಎಂಬ ತ್ರಿವಿಧಾವಸ್ಥೆಯೊಳಗೆ, ತುರ್ಯ ತುರ್ಯಾತೀತ ಸಹಜಾವಸ್ಥೆ ಎಂಬ ಮೂರು ಕೂಡಿ ಯೋಗಿಸುವ ಯೋಗಿಗೆ, ಸಾಲಂಬ ನಿರಾಲಂಬದೊಳಗೆ ಅಡಗಿ ಆ ನಿರಾಲಾಂಬದ ನಿಶ್ಚಿಂತ ನಿವಾಸದಲ್ಲಿ ಆತ್ಮ ಪರಮಾತ್ಮರೊಂದಾದ ಬಳಿಕ ಅನಂತ ಸಚರಾಚರ ಒಂದು ಕಿಂಚಿತ್ತು. ಚತುರ್ಮುಖ ಇಂದ್ರ ವಿಷ್ಣುವೆಂಬವರ ಪದ ಒಂದು ಕಿಂಚಿತ್ತು. ಇನ್ನುಳಿದವರ ಹೇಳಲಿಲ್ಲ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣಂಗೆ ಹಿರಿದೊಂದಿಲ್ಲ.
--------------
ಸ್ವತಂತ್ರ ಸಿದ್ಧಲಿಂಗ
ಜ್ಞಾನಿಯ ನಡೆ ನುಡಿ ಅಜ್ಞಾನಿಗೆ ಸೊಗಸದು. ಅಜ್ಞಾನಿಯ ನಡೆ ನುಡಿ ಜ್ಞಾನಿಗೆ ಸೊಗಸದು. ದಿವಾ ರಾತ್ರಿಗಳಂತೆ ಒಂದಕ್ಕೊಂದಾಗದು. ಅರಿವಿನಿಂದ ಉದಯಿಸಿದ ಶರಣನು ಮೆರೆಯಬೇಕೆಂದು ಮರಹಿಂದ ಹುಟ್ಟಿದ ಮಾನವನಿದಿರ ಮಾಡಿದೆಯಲ್ಲಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಜಂಬೂದ್ವೀಪದ ಮಧ್ಯದಲ್ಲಿ ಹುಟ್ಟಿ ಬೆಳೆದ ವಂಶದ ಏಕವಿಂಶತಿಗ್ರಂಥಿಯ ಕೊರೆದು ಮೇಲಕ್ಕೆ ಹೋದ ಅಗ್ನಿಯ ಒಡಲೊಳಗೆ ಈರೇಳು ಲೋಕವ ನುಂಗಿದ ತುಂಬಿಯ ಅಂಗಕ್ಕಳಿವಿಲ್ಲದೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ ಬಯಲಾಯಿತ್ತು.
--------------
ಸ್ವತಂತ್ರ ಸಿದ್ಧಲಿಂಗ
ಜಗದ ಪ್ರಾಣಿಗಳಂತೆ ಉಳಿವವರಿಗೆ, ಜಗದೀಶನ ಮಂತ್ರವೆಂತು ನೆಲಗೊಂಬುದಯ್ಯ? ``ಯಥಾ ಮನಸ್ತಥಾವಚನಂ' ಎಂದುದಾಗಿ. ಹೇಗೆ ಮನ ಹಾಗೆ ವಚನ ತಪ್ಪದು. ಅದು ಕಾರಣ, ಮನದಲ್ಲಿ ನಿಮ್ಮ ನೆನಹು ನೆಲೆಗೊಂಡವಂಗೆ, ನುಡಿಯೊಡನೆ ಮಂತ್ರ ನೆಲೆಸಿಪ್ಪುದು ಸತ್ಯ. ನೀನೆ ಬಲ್ಲೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಜಗಭರಿತ ಶಿವನೆಂದು ನೆಗಳಿ ಹೊಗಳಿತಿವೆ ವೇದಂಗಳೆಲ್ಲ. `ಏಕಮೇವಾದ್ವಿತೀಯ' ಎಂದು ಹೊಗಳುತಿವೆ ವೇದಂಗಳೆಲ್ಲ. `ವಿಶ್ವತಃ ಪಾದ ಪಾಣಿ, ವಿಶ್ವತೋಮುಖ ವಿಶ್ವತಃ ಶ್ರೋತ್ರ' ಎಂದು ಹೊಗಳುತಿವೆ ವೇದಂಗಳೆಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ. ಶರಣಭರಿತ ಲಿಂಗ ಲಿಂಗಭರಿತ ಶರಣನೆಂದು, ಹೊಗಳಲರಿಯದೆ ನಿಂದುವು ವೇದಂಗಳೆಲ್ಲ.
--------------
ಸ್ವತಂತ್ರ ಸಿದ್ಧಲಿಂಗ
ಜ್ಞಾನಾನಂದ ಪರಬ್ರಹ್ಮವೆ ಲಿಂಗವೆಂದು ಅರಿದ ಅರಿವು ತಾನೇ ತನ್ನಲ್ಲಿ ವಿಶ್ರಮಿಸಿ, ತೆರಹಿಲ್ಲದೆ ಅವಿರಳ ಸಂಬಂಧವಾದ ಲಿಂಗವ ಭಾವಿಸಲುಂಟೇ? ಅರಿಯಲುಂಟೇ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ನಿತ್ಯ ನಿರಾಳದ ಕುರುಹಿಡಿಯಲುಂಟೆ ಹೇಳಾ?
--------------
ಸ್ವತಂತ್ರ ಸಿದ್ಧಲಿಂಗ