ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಅಃ ಪದದಿಂದ ಪ್ರಾರಂಭವಾಗುವ ವಚನಗಳು:

ಅಂತರಂಗ ಶುದ್ಧವಿಲ್ಲದವರೊಳಗೆ ಅತ್ತಿಯ ಹಣ್ಣಿನಂತೆ ಕ್ಷುದ್ರ ಬಿಡಿದು ನೋಡಯ್ಯಾ. ಅಂತರಂಗ ಶುದ್ಧವುಳ್ಳವರೊಳಗೆ ಬಾಳೆಯ ಹಣ್ಣಿನಂತೆ ಸಂಗದಲ್ಲಿ ಇರಬಾರದು ಶರಣರು. ಇದು ಕಾರಣ. ಅಂತರಂಗ ಶುದ್ಧವಿಲ್ಲದವರ ಸಂಗದಲ್ಲಿ ಇರಬಾರದು ಶರಣರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅಂಗದೊಳಗೆ ಲಿಂಗವಿದೆ, ಲಿಂಗದೊಳಗೆ ಅಂಗವಿದೆ. ಅಂಗ ಲಿಂಗ ಸಂಗದೊಳಗೆ ಪರಮ ಸುಖವಿದೆ. ಪರಮ ಸುಖದೊಳಗೆ ಪ್ರಸಾದವಿದೆ. ಪ್ರಸಾದದೊಳಗೆ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ. ನಿಮ್ಮ ಶರಣನ ನಿಲವಿದೆ.
--------------
ಸ್ವತಂತ್ರ ಸಿದ್ಧಲಿಂಗ
ಅಂತರಂಗ ಶುದ್ಧವಿಲ್ಲದವರು, ಬಹಿರಂಗದಲ್ಲಿ ಸದಾಚಾರ ಸತ್ಕಿ ್ರೀಯೆಯ, ಸರ್ವಜನ ಮೆಚ್ಚುವಂತೆ ಮಾಡುತಿರ್ದರೇನು? ಅದು ಲೋಕರಂಜನೆಯಲ್ಲದೆ ಶಿವ ಮೆಚ್ಚ. ಶಿವಶರಣರು ಮೆಚ್ಚರು. ಬಿತ್ತಿದ ಬೆಳೆಯನುಂಬಂತೆ, ಮಾಡಿದ ಸತ್ಕರ್ಮಫಲವನುಂಬ, ಕೈಕೂಲಿಕಾರಂಗೆ ಮುಕ್ತಿಯುಂಟೆ? ನಿಜಗುರು ಸ್ವತಂತ್ರಸಿದ್ಧಲೀಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅಂಗದ ಮೇಲೆ ಲಿಂಗ ಬರಲಾಗಿ, ಕಾಯದ ಗುಣವಳಿದು ಪ್ರಸಾದಕಾಯವಾಯಿತ್ತು. ಲಿಂಗದ ನೆನಹು ನೆಲೆಗೊಂಡು ಮನ ಹಿಂಗದಿರಲು ಮನದ ಮೇಲೆ ಪ್ರಸಾದ ನೆಲೆಗೊಂಡಿತ್ತು. ಲಿಂಗದಲ್ಲಿ ಪ್ರಾಣರತಿಸುಖವಾವರಿಸಿತ್ತಾಗಿ ಪ್ರಾಣದಲ್ಲಿ ಪ್ರಸಾದ ನೆಲೆಗೊಂಡಿತ್ತು. ಸರ್ವೇಂದ್ರಿಯಂಗಳು ಲಿಂಗದಲ್ಲಿ ಸಾವಧಾನಿಗಳಾದ ಕಾರಣ ಇಂದ್ರಿಯಂಗಳಲ್ಲಿಯೂ ಪ್ರಸಾದವೇ ನೆಲೆಗೊಂಡಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣಂಗೆ.
--------------
ಸ್ವತಂತ್ರ ಸಿದ್ಧಲಿಂಗ
ಅಂಗದಲ್ಲಿ ಆಯತವಾಯಿತ್ತು. ಮನದಲ್ಲಿ ಸ್ವಾಯತವಾಯಿತ್ತು. ಭಾವದಲ್ಲಿ ಸನ್ನಿಹಿತವಾಯಿತ್ತು. ಆಯತವಾದುದೇ ಸ್ವಾಯತವಾಗಿ, ಸ್ವಾಯತವಾದುದೇ ಸನ್ನಿಹಿತವಾಗಿ, ಸನ್ನಿಹಿತ ಸಮಾಧಾನವಾಗಿ ನಿಂದುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೇ ತಾನಾಗಿ.
--------------
ಸ್ವತಂತ್ರ ಸಿದ್ಧಲಿಂಗ
ಅಂಗ ಲಿಂಗ ಸಂಗವರಿದ ಲಿಂಗದೇಹಿ, ತನ್ನಿಂದ ಹಿರಿದೊಂದೂ ಇಲ್ಲವೆಂದು ತಿಳಿದು ಆ ತಿಳಿವಿನೊಳಗಣ ತಿಳಿವು ತಾನೆ ವಿಶ್ವಾತ್ಮಪತಿಯಾದ ಶಿವನಜ್ಞಾನವೆಂದರಿದು ಆ ಸರ್ವಜ್ಞನಾದ ಶಿವನು ನಿರ್ಮಲದರ್ಪಣದೊಳಗಣ ಪ್ರತಿಬಿಂಬದಂತೆ ಯೋಗಿಯ ಮನವೆಂಬ ದರ್ಪಣದಲ್ಲಿ ತೋರುವ ಚಿದಾಕಾಶರೂಪ ಶಿವನ ಶರಣಜ್ಞಾನಲೋಚನದಿಂದ ಕಂಡು ಕೂಡಿ ಎರಡಳಿದು ನಿಂದನು ನಮ್ಮ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ಅಂಬರದಲಾಡುವ ಪಕ್ಷಿ ಕೊಂಬಿನ ಮೇಲಣ ಕೋಡಗವ ನುಂಗಿ ತುಂಬಿಯ ಒಡಲೊಳಡಗಿತ್ತು. ತುಂಬಿ ಅಂಬರದಲಡಗಿ, ಅಂಬರ ತುಂಬಿಯಲಡಗಿ ಎರಡು ಒಂದಾಗಿ ತುಂಬಿಯಂಬರವಿಲ್ಲದೆ ಹೋಯಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮಲ್ಲಿ.
--------------
ಸ್ವತಂತ್ರ ಸಿದ್ಧಲಿಂಗ
ಅಂತರಂಗದಲ್ಲಿದ್ದ ನಿರ್ಮಲ ಪರಂಜ್ಯೋತಿ ಪ್ರಾಣಲಿಂಗವನರಿಯದೆ ಬಹಿರಂಗದಲ್ಲಿ ಬಳಲುತ್ತಿದ್ದರಲ್ಲಾ! ಒಳಗೆ ತೊಳಗಿ ಬೆಳಗಿ ತೋರುವ ಚಿದಾಕಾರ ಪರಬ್ರಹ್ಮ ಪ್ರಾಣಲಿಂಗವನವರೆತ್ತ ಬಲ್ಲರು? ಮಹಾನುಭಾವದಿಂದ ತಿಳಿದು ನೋಡಲು ತನ್ನಲ್ಲಿಯೇ ತೋರುತ್ತಿದೆ. ಹೇಳಿಹೆ ಕೇಳಿಹೆನೆಂದಡೆ ನುಡಿಗೊಳಗಾಗದು. ತಿಳಿದುನೋಡಲು ತಾನಲ್ಲದೆ ಮತ್ತೇನೂ ಇಲ್ಲ. ಅದೇ ಆದಿಪ್ರಾಣಮಯಲಿಂಗ. ತಾನೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಅಂದು ಆದಿಯ ಬಿಂದುವಿಲ್ಲದಂದು, ನಿಮಗೂ ನನಗೂ ಲಿಂಗಾಂಗವೆಂಬ ಹೆಸರಿಲ್ಲದೆ ಇರ್ದೆವೆಂದು, ಆದಿಬಿಂದು ರೂಹಿಸಿದಲ್ಲಿ ಲಿಂಗಾಂಗವೆಂಬ ಹೆಸರು ಬಂದಿತ್ತೆಂದು, ಅಂದು ಆದಿಯಾಗಿ ನೀವಾವಾವ ಲೀಲೆಯ ಧರಿಸಿದಡೆ, ಆ ಲೀಲೆಗೆ ನಾನಾಧಾರವಾದೆ. ನಿಮಗೂ ನನಗೂ ಎಂದೆಂದೂ ಹೆರಹಿಂಗದ ಯೋಗ. ಅದು ನೀವು ಬಲ್ಲಿರಿ, ನಾ ಬಲ್ಲೆನು, ನುಡಿದು ತೋರಲೇಕಿನ್ನು? ಇಂದೆನಗೆ ತನು ಯೋಗವಾದಲ್ಲಿ ನಿಜ ಹೊರತೆ? ``ಶಿವಯೋಗಿ ಶರೀರೇ ಚ ಸದಾ ಸನ್ನಿಹಿತಶ್ಯಿವಃ' ಎಂದುದಾಗಿ, ನಿಮಗೆ ಬೇರೆ ದೇಹವಿಲ್ಲ. ನನ್ನ ದೇಹವೆ ನಿಮ್ಮ ದೇಹವೆಂಬುದಕ್ಕೆ ನೀವೇ ಸಾಕ್ಷಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅಂತರಂಗ ಸನ್ನಿಹಿತ ಪರಂಜ್ಯೋತಿರ್ಲಿಂಗದಲ್ಲಿ ಧ್ಯಾನನಿಷ*ನಾದ ಯೋಗಿ ಎಲ್ಲಾ ಕಡೆಯಲ್ಲಿ ಪರಿಪೂರ್ಣ ಜ್ಞಾನದೃಷ್ಟಿಯಿಂದ ನೋಡಲು ಪಶ್ಚಿಮಮುಖವಾದ ಪರತತ್ವವೆಂಬ ನಿರ್ಮಲ ದರ್ಪಣದೊಳಗೆ ತನ್ನ ಕಂಡು, ಕಂಡೆನೆಂಬ ಚಿದಹಂಭಾವವಳಿದು ನಿಂದ ನಿಲವೇ ನಿಜ ನಿರ್ವಾಣವಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅಂಧಕನ ಮುಂದೆ ನೃತ್ಯ ಬಹುರೂಪವನಾಡಿದಡೇನು ಕಂಡು ಪರಿಣಾಮಿಸಬಲ್ಲನೆ ಹೇಳಾ? ಬಧಿರನ ಮುಂದೆ ಸಂಗೀತ ಸಾಹಿತ್ಯವನೋದಿದಡೇನು ಕೇಳಿ ತಿಳಿದು ಪರಿಣಾಮಿಸಬಲ್ಲನೆ ಹೇಳಾ? ಜ್ಞಾನಾನುಭಾವವಿಲ್ಲದವರು ಏನನೋದಿ ಏನ ಕೇಳಿ ಏನು? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನರಿಯದವರ ಓದು ಕೇಳಿಕೆ, ಬಧಿರಾಂಧಕರ ಕೇಳಿಕೆ ನೋಟದಂತಾಗಿತ್ತು.
--------------
ಸ್ವತಂತ್ರ ಸಿದ್ಧಲಿಂಗ
ಅಂಗದಲ್ಲಿ ಲಿಂಗ ಬೆರೆದು, ಲಿಂಗದಲ್ಲಿ ಅಂಗ ಬೆರೆದು ಅಂಗ ಲಿಂಗ ಸಂಗದಿಂದ ಸಹವರ್ತಿಯಾದ ಲಿಂಗಪ್ರಸಾದಿಯ ಇಂಗಿತವನೇನೆಂದು ಹೇಳಬಹುದು? ಲಿಂಗ ನಡೆಯಲು ಒಡನೆ ಪ್ರಸಾದಿ ನಡೆವ ಲಿಂಗ ನೋಡಲು ಒಡನೆ ಪ್ರಸಾದಿ ನೋಡುವ ಲಿಂಗ ಕೇಳಲು ಒಡನೆ ಪ್ರಸಾದಿ ಕೇಳುವ ಲಿಂಗ ಮುಟ್ಟಲು ಒಡನೆ ಪ್ರಸಾದಿ ಮುಟ್ಟುವ ಲಿಂಗ ರುಚಿಸಲು ಒಡನೆ ಪ್ರಸಾದಿ ರುಚಿಸುವ. ಲಿಂಗ ಘ್ರಾಣಿಸಲು ಒಡನೆ ಪ್ರಸಾದಿ ಘ್ರಾಣಿಸುವ. ಇಂತು ಸರ್ವಭೋಗವ ಲಿಂಗದೊಡನೆ ಕೂಡಿ ಭೋಗಿಸಬಲ್ಲ, ನಿಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಚೆನ್ನಬಸವಣ್ಣನು.
--------------
ಸ್ವತಂತ್ರ ಸಿದ್ಧಲಿಂಗ
ಅಂಡಜ ಸ್ವೇದಜ ಉದ್ಭಿಜ ಜರಾಯುಜವೆಂಬ, ಜೀವರಾಶಿಯ ಕಂಡಿಯಲ್ಲಿ ಹೊಕ್ಕು ಹೊರಡುವ, ಜೀವನ ತಿಳಿಯಲರಿಯದನ್ನಕ್ಕ, ಕಾಯದ ಜೀವದ ಸಂದ ಬಿಚ್ಚಲರಿಯದನ್ನಕ್ಕ, ಮತ್ತೇನ ಮಾಡಿದಡೇನು ಫಲ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನರಿಯದವನ ಬಾಳುವೆ, ಮೃತಶರೀರದಂತೆ.
--------------
ಸ್ವತಂತ್ರ ಸಿದ್ಧಲಿಂಗ
ಅಂಗೇಂದ್ರಿಯ ಕರಣ ಹರಣದಲ್ಲಿ ಲಿಂಗವ ಧರಿಸಿ ಲಿಂಗಾಂಗಿಯಾದನಯ್ಯ ನಿಮ್ಮ ಶರಣ. ಅದೆಂತೆಂದಡೆ: ಘ್ರಾಣದಲ್ಲಿ ಲಿಂಗವ ಧರಿಸಿದನಾಗಿ, ಘ್ರಾಣ ಲಿಂಗದ ಘ್ರಾಣವಾಯಿತ್ತು. ಜಿಹ್ವೆಯಲ್ಲಿ ಲಿಂಗವ ಧರಿಸಿದನಾಗಿ, ಜಿಹ್ವೆ ಲಿಂಗದ ಜಿಹ್ವೆಯಾಯಿತ್ತು. ನೇತ್ರದಲ್ಲಿ ಲಿಂಗವ ಧರಿಸಿದನಾಗಿ, ನೇತ್ರ ಲಿಂಗದ ನೇತ್ರವಾಯಿತ್ತು. ತ್ವಕ್ಕಿನಲ್ಲಿ ಲಿಂಗವ ಧರಿಸಿದನಾಗಿ, ತ್ವಕ್ಕು ಲಿಂಗದ ತ್ವಕ್ಕಾಯಿತ್ತು. ಶ್ರೋತ್ರದಲ್ಲಿ ಲಿಂಗವ ಧರಿಸಿದನಾಗಿ, ಶ್ರೋತ್ರ ಲಿಂಗದ ಶ್ರೋತ್ರವಾಯಿತ್ತು. ಮನದಲ್ಲಿ ಲಿಂಗವ ಧರಿಸಿದನಾಗಿ, ಮನ ಲಿಂಗದ ಮನವಾಯಿತ್ತು. ಸರ್ವಾಂಗದಲ್ಲಿ ಲಿಂಗವ ಧರಿಸಿದನಾಗಿ, ಸರ್ವಾಂಗಲಿಂಗವಾಯಿತ್ತು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣಂಗೆ.
--------------
ಸ್ವತಂತ್ರ ಸಿದ್ಧಲಿಂಗ
ಅಂಗೈಯ ಲಿಂಗದಲ್ಲಿ ಕಂಗಳು ನಟ್ಟು, ಎವೆಹಳಚದೆ, ಮನ ಕವಲಿಡದೆ, ಚಿತ್ರದ ರೂಹಿನ ತೆರನಂತೆ, ಲಿಂಗವ ನೋಡಿ ನೋಡಿ, ಕಂಗಳಲಚ್ಚೊತ್ತಿ, ಮನದಲ್ಲಿ ನೆನೆನೆನೆದು ನೆರೆವ ಲಿಂಗಸುಖ ಸಂಪನ್ನರನೆ, ಲಿಂಗವೆಂಬೆನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅಂಗ ಲಿಂಗವೆಂಬ ಸಂದು ಸಂಶಯವಳಿದು ಲಿಂಗಾಂಗದೈಕ್ಯವನರಿದು ಕೂಡಿದ ಶಿವಯೋಗಿಗೆ ನಿಶ್ಚಿಂತತ್ವವೇ ಶಿವಧ್ಯಾನ; ಸಕಲ ಕ್ರೀಗಳು ಲಯವಾದ ಇರವೇ ಶಿವಪೂಜೆ; ಚರಾಚರವನು ವ್ಯಾಪಿಸಿ ನಿಂದ ನಿಶ್ಚಲವೇ ಪ್ರದಕ್ಷಿಣ; ಸೋಹಂ ದಾಸೋಹಂ ಭಾವವಳಿದು ಆ ಶಿವೋಹಂ ಭಾವ ತನ್ನಲ್ಲಿ ನಿಂದುದೇ ನಮಸ್ಕಾರ; ಸ್ವಯ ಪರವೆಂಬ ವಿವೇಕದನುಭಾವವಡಗಿ ನಿಂದ ಮೌನವೇ ಸ್ತೋತ್ರ; ಬಿಂದು ನಾದಾದಿ ಉಪಾಧಿಯ ತೊಲಗಿದ ಪರಿಪೂರ್ಣ ಶಿವನಾಗಿ ತಾ ಶಿವನಾದೆನೆಂಬ ಚಿದಹಂಭಾವವಡಗಿ ವಿಧಿ ನಿಷೇಧಂಗಳನರಿಯದುದೇ ಮಹಾಶೀಲ; ಸರ್ವಜ್ಞತ್ವ ನಿತ್ಯತೃಪ್ತಿ ಅನಾದಿಪ್ರಬೋಧ, ಸ್ವತಂತ್ರ ನಿತ್ಯ ಶಕ್ತಿ ಎಂಬ ಷಡ್ಗುಣೈಶ್ವರ್ಯ ತನಗೂ ಶಿವಂಗೂ ಸಮವಾಗಿ ಶಿವನೊಳಗೆ ತಾನು, ತನ್ನೊಳಗೆ ಶಿವನು ಅಡಗಿ ಸಮರಸವಾದುದೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಪರಮನಿರ್ವಾಣವೆನಿಸುವುದು.
--------------
ಸ್ವತಂತ್ರ ಸಿದ್ಧಲಿಂಗ
ಅಂಡ ಪಿಂಡೋಪಾಧಿಗಳಿಲ್ಲದ ಅಖಂಡ ಬಯಲು, ಖಂಡಿತವಾದ ನೆನಹಿಗೆ ನಿಲುಕದ ಚಿದ್ರೂಪ ಪರಮಾನಂದ ಪರತತ್ವವು ತಾನೆ ವಿಚಾರಿಸಿ ಕರಸ್ಥಲವಾಗಿ, ಅಂಡ ಪಿಂಡಂಗಳಿಗೆ ತೆರಹ ಕೊಟ್ಟ ಮಹದಾಕಾಶರೂಪ ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಅಂತರಂಗದಲ್ಲಿ ಆಡುವ ಪಕ್ಷಿಯ ಅಂತುವನಾರು ಬಲ್ಲರು ಹೇಳ? ಅಂತರ ಮಹದಂತರವನೊಡಗೂಡಿ ಸ್ವತಂತ್ರನಾಗಿ ನಿಂದ ನಿಲವನು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣರಾದ ಮಹಾಂತರೇ ಬಲ್ಲರು.
--------------
ಸ್ವತಂತ್ರ ಸಿದ್ಧಲಿಂಗ
ಅಂತರಂಗ ಸನ್ನಿಹಿತ ಪ್ರಾಣಲಿಂಗಕ್ಕೆ ಕ್ಷಮೆ ಎಂಬ ಸತ್ಯೋದಕದಿಂದ ಅಭಿಷೇಕವ ಮಾಡುವೆನಯ್ಯ. ಮನವ ನಿಲಿಸಿ ಗಂಧವನರ್ಪಿಸುವೆ. ನಿರಹಂಕಾರವೆಂಬ ಅಕ್ಷತೆಯನಿಡುವೆ. ವೈರಾಗ್ಯವೆಂಬ ಪುಷ್ಪವನರ್ಪಿಸಿ, ಸತ್ಯವೆಂಬ ಆಭರಣವ ತೊಡಿಸುವೆ. ವಿವೇಕವೆಂಬ ವಸ್ತ್ರವ ಹೊದಿಸಿ, ಶ್ರದ್ಧೆಯೆಂಬ ಧೂಪವ ಬೀಸುವೆ. ಮಹಾಜ್ಞಾನವೆಂಬ ದೀಪವ ಬೆಳಗಿ, ಪ್ರಪಂಚು ಭ್ರಾಂತಳಿದ ನೈವೇದ್ಯವನೀವೆ. ವಿಷಯಾರ್ಪಣವೆಂಬ ತಾಂಬೂಲವ ಕೊಟ್ಟು ಈ ಪರಿಯಲ್ಲಿ ಮಾಡುವೆನಯ್ಯಾ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಪ್ರಾಣಲಿಂಗ ಪೂಜೆಯನು.
--------------
ಸ್ವತಂತ್ರ ಸಿದ್ಧಲಿಂಗ
ಅಂತರಂಗದಲ್ಲಿ ಬೆಳಗುವ ಜ್ಯೋತಿರ್ಲಿಂಗವು, ಸರ್ವಜ್ಯೋತಿವಸ್ತುಗಳಿಗೆ ಪರಮಾಶ್ರಯ ತಾನಾಗಿ, ಒಳಹೊರಗೆ ತೆರಹಿಲ್ಲದೆ ವ್ಯಾಪಿಸಿ, ಮನದ ನೆನಹಿನ ವಿಶ್ರಾಮಕ್ಕೆ ಸ್ಥಾನವಾದ ಜ್ಯೋತಿರ್ಲಿಂಗವ ನೆನೆದು ಸುಖಿಯಾದೆ, ಎನ್ನ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಾ.
--------------
ಸ್ವತಂತ್ರ ಸಿದ್ಧಲಿಂಗ