ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕನ್ನವ ಸವೆವ ಕನ್ನಗತ್ತಿಗೆ ಕನ್ನ ಸವೆಯಿತ್ತೆ ಕೈ ತಟ್ಟಿತೆಂಬಂತೆ, ಹೊನ್ನೆನ್ನದು ಹೆಣ್ಣೆನ್ನದು ಮಣ್ಣೆನ್ನದು ಎಂದು, ಬಳಲುವಣ್ಣಗಳ ಬಾಯ ಟೊಣೆದು, ಇವು ಮೂರು ತನ್ನಿಂದ ಬಲ್ಲಿದರಲ್ಲಿಗೆ ಹೋಗದೆ ಮಾಣವು. ಇವರಲ್ಲಿ ಬನ್ನಬಟ್ಟು ಬಳಲುವ ಕರ್ಮಿಗಳಿಗಿನ್ನೆಲ್ಲಿಯ ಮುಕ್ತಿಯಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಕಾಯವೆಂಬ ಪಟ್ಟಣಕ್ಕೆ ಅಕಾಯನಿತ್ಯನೆಂಬರಸು ಕ್ಷಮೆ ದಮೆ ತಿತಿಕ್ಷೆ ಶಾಂತಿ ಉಪರತಿ ಸುಮನ ನಿರಹಂಕಾರಗಳೆಂಬ ಪರಿವಾರ. ಆ ಪಟ್ಟಣದ ಹೊರ ಒಳಯಕ್ಕೆ ಒಂಬತ್ತು ಬಾಗಿಲು. ಮಧ್ಯ ಒಳಯಕ್ಕೆ ನಾಲ್ಕು ಬಾಗಿಲು. ಆ ಅರಸಿನರಮನೆಯ ಸ್ವಯಂಭುನಾಥನ ಗರ್ಭಗೃಹಕ್ಕೆ ಎರಡು ಬಾಗಿಲು. ಮೇಲುಶಿಖರದಲೊಂದು ಬಾಗಿಲು ಉರಿಯನುಗುಳುವರು. ಆ ಪಟ್ಟಣದ ಅರಸು ಸ್ವಯಂಭುನಾಥನಿಗೆ ನಿತ್ಯ ನೇಮವ ಮಾಡಲೆಂದು ಗರ್ಭಗೃಹವ ಹೊಗಲೊಡನೆ ಆತನ ಕೈವಿಡಿದು ಉಭಯ ಬಾಗಿಲ ಹೊಕ್ಕು ಹೋಗಿ ಉಭಯ ನಿರ್ವಯಲಾದ ನಿಲವನುಪಮಿಸಬಹುದೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಒಂದಾದ ಲಿಂಗೈಕ್ಯವನು?
--------------
ಸ್ವತಂತ್ರ ಸಿದ್ಧಲಿಂಗ
ಕಾಡೊಳಗಣ ಹುಲುಗಿಣಿಯ ಹಿಡಿತಂದು, `ಓಂ ನಮಃಶಿವಾಯ, ಹರಹರ ಶಿವಶಿವ' ಎಂದು ಓದಿಸಿದಡೆ ಓದದೇ? ನಿಚ್ಚ ನಿಚ್ಚ ನರಾರಣ್ಯದೊಳಗಿದ್ದ ಮನುಷ್ಯರ ಹಿಡಿತಂದು, ಹಿರಿದು ಪರಿಯಲ್ಲಿ ಉಪದೇಶವ ಮಾಡಿ, ಶಿವಮಂತ್ರೋಪದೇಶವ ಹೇಳಿದಡೆ, ಅದ ಮರೆದು, ಕಾಳ್ನುಡಿಯ ನುಡಿವವರು, ಹುಲುಗಿಣಿಯಿಂದ ಕಷ್ಟ ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಕಾಷ್ಠದಲ್ಲಿ ಹುಟ್ಟಿದ ಅಗ್ನಿ, ಕಾಷ್ಠವ ದಹಿಸಿ, ತಾನೊಡನೆ ಲೀಯವಾದಂತೆ, ಭಾವದಲ್ಲಿ ಶಿವಾನಂದಭಾವ ಹುಟ್ಟಿ ಭಾವ ನಿಃಪತಿಯಾಯಿತ್ತು. ಭಾವ ನಿಃಪತಿಯಾಗಲು, ಭಾವ್ಯ ಭಾವ ಭಾವಕವೆಂಬುದಿಲ್ಲದೆ ತಮ್ಮಲ್ಲಿ ತಾವೆ ಲೀಯವಾದವು. ಇಂತಾದ ಬಳಿಕ ಭಾವಿಸಲೇನುಂಟು ಹೇಳಾ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ, ಭಾವಾತೀತನೆಂದು ಶ್ರುತಿ ಸಾರುತ್ತಿರಲಿನ್ನು ಭಾವಿಸಲೇನುಂಟು ಹೇಳಾ?.
--------------
ಸ್ವತಂತ್ರ ಸಿದ್ಧಲಿಂಗ
ಕರ್ಮವ ನುಂಗಿತ್ತು ಹಾಹೆ, ಹಾಹೆಯ ನುಂಗಿತ್ತು ರಜ್ಜು, ರಜ್ಜುವ ನುಂಗಿತ್ತು ವಿದ್ಯೆ, ವಿದ್ಯೆಯ ನುಂಗಿತ್ತು ಕಳೆ, ಕಳೆಯ ನುಂಗಿತ್ತು ಬೆಳಗು, ಬೆಳಗ ನುಂಗಿತ್ತು ನಾದ, ನಾದವ ನುಂಗಿತ್ತು ಶೂನ್ಯ, ಶೂನ್ಯವ ನುಂಗಿತ್ತು ಮಹಾಶೂನ್ಯ, ಮಹಾಶೂನ್ಯವ ನುಂಗಿತ್ತು ನಿರಾಳ. ಆ ನಿರಾಳದಲ್ಲಿ ನಿಂದು ನಿಶ್ಚಿಂತವಾಸಿಯಾಗಿದ್ದೆನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ನಿಮ್ಮಲ್ಲಿ ಅವಿರಳನಾಗಿ.
--------------
ಸ್ವತಂತ್ರ ಸಿದ್ಧಲಿಂಗ
ಕರ್ಣಂಗಳು ಕೇಳಿದ ಶಬ್ದದಿಂದಾದ ಸುಖವನು, ನೇತ್ರಂಗಳು ನೋಡಿದ ರೂಪಿನಿಂದಾದ ಸುಖವನು, ರಸನೆ ಸವಿದ ರಸದಿಂದಾದ ಸುಖವನು, ವಾಸಿಸುವ ಘ್ರಾಣದಿಂದರಿವ ಗಂಧಸುಖವನು, ಮುಟ್ಟುವ ತ್ವಕ್ಕಿನಿಂದಾದ ಸ್ಪರ್ಶಸುಖವನು, ಅರ್ಪಿತದ ಮಾಡಿ ಅನುಭವಿಸುವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಪ್ರಸಾದಿಯು.
--------------
ಸ್ವತಂತ್ರ ಸಿದ್ಧಲಿಂಗ
ಕಾಲ ಕೈಯೊಳಗಿರಿಸಿ ನಡೆವಾತನ ನಡೆ ಶುದ್ಧ. ಕೈಯ ಕಣ್ಣೊಳಗಿರಿಸಿ ನೋಡುತ್ತಿಪ್ಪಾತನ ನೋಟ ಶುದ್ಧ. ಆ ಕಣ್ಣ ಮನದೊಳಗಿರಿಸಿ ನೆನೆವುತ್ತಿಪ್ಪಾತನ ಮನ ಶುದ್ಧ, ಆ ಮನವ ಭಾವದೊಳಗಿರಿಸಿ ಭಾವಿಸುತ್ತಿಪ್ಪಾತನ ಭಾವ ಶುದ್ಧ. ಆ ಭಾವವು ನಿರ್ಭಾವವನೆಯ್ದಿ ನಿರವಯಲಾದರೆ, ಆತ ಸ್ವತಂತ್ರ ಶರಣ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ, ಒಂದಾದ ಲಿಂಗೈಕ್ಯನು.
--------------
ಸ್ವತಂತ್ರ ಸಿದ್ಧಲಿಂಗ
ಕೊಡುವಾತ ನಾನಲ್ಲ. ಕೊಡುವಾತನೂ ಕೊಂಬಾತನೂ ಶಿವನೆಂದರಿದು, ಜಂಗಮಮುಖದಲ್ಲಿ ಲಿಂಗಾರ್ಪಿತವಹುದೆಂದು, ಕೊಟ್ಟ ಭಕ್ತನೊಳಗೆ ಜಂಗಮವಡಗಿ, ಭಕ್ತಜಂಗಮ ಒಂದಾದ ಮಾಟ ಭವದೋಟ ಲಿಂಗದ ಕೂಟ. ಈ ತೆರನನರಿದು ಮಾಡುವ ಭಕ್ತನೇ ದೇವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಕರ್ಮರಹಿತನಾದ ನಿರ್ಮಲ ನಿತ್ಯಂಗೆ ಮಾಯಾ ಭ್ರಮೆಯಿಲ್ಲ. ಮಾಯಾಭ್ರಮೆಯಿಲ್ಲವಾಗಿ ಮನದ ಸಂಕಲ್ಪ ವಿಕಲ್ಪವಿಲ್ಲ. ಮನದ ಸಂಕಲ್ಪ ವಿಕಲ್ಪವಿಲ್ಲವಾಗಿ ವಿಷಯಾಭಿಮಾನವಿಲ್ಲ. ವಿಷಯಾಭಿಮಾನವಿಲ್ಲವಾಗಿ ಪಂಚೇಂದ್ರಿಯಂಗಳ ವ್ಯಾಪಾರವಿಲ್ಲ. ಪಂಚೇಂದ್ರಿಯಂಗಳ ವ್ಯಾಪಾರವಿಲ್ಲವಾಗಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ನಿರ್ದೇಹಿ.
--------------
ಸ್ವತಂತ್ರ ಸಿದ್ಧಲಿಂಗ
ಕರಣದ ಕಲ್ಮಷ ಹರಿಯಿತ್ತಾಗಿ ನಿರ್ಮಲತನುವಾಯಿತ್ತು. ಆ ನಿರ್ಮಲತನುವಿನಲ್ಲಿ ಶಿವಪ್ರಸಾದವೆಡೆಗೊಂಡಿತ್ತಾಗಿ ಭಕ್ತಿಪಿಂಡವಾಯಿತ್ತು. ಆ ಭಕ್ತಿಪಿಂಡದಲ್ಲಿ ನೀವಿಪ್ಪಿರಾಗಿ ಶರಣಂಗೆ ಪಿಂಡನಾಮವಾಯಿತ್ತು. ಅದು ಕಾರಣ ಶರಣಂಗೂ ನಮಗೂ ಒಂದೆ ಭಕ್ತಿಪಿಂಡವಾಯಿತ್ತು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಕಾಶಿಯಲ್ಲಿ ಗೋವಧೆಯ ಮಾಡಿ ಗುರುಕರುಣವ ಪಡೆದು ಪರವನರಿಯಬಲ್ಲಾತನೇ ಯೋಗಿ. ತ್ರಿವೇಣಿಸಂಗಮದಲ್ಲಿ ಮಂಡೋದರಿಯ ಕೊಂದು, ಮನನ ತ್ರಾಣಮಂತ್ರವನನುಸಂಧಾನಿಸಬಲ್ಲಾತನೇ ಯೋಗಿ. ಶ್ರೀಶೈಲದಲ್ಲಿ ಶಿವಸ್ತುತಿಯ ಕೇಳಿ, ಹಯವ ಹತಮಾಡಿ, ಮನವಳಿದಿರಬಲ್ಲಾತನೇ ಯೋಗಿ. ಪ್ರಯಾಗದಲ್ಲಿ ಉರಗನ ಕೊಂದು, ಘಣಾಮಣಿಯ ಸೆಳೆದುಕೊಂಡು, ಆ ಮಣಿಯ ಬೆಳಗಿನೊಳಗೆ ಸುಳಿದಾಡಬಲ್ಲಾತನೇ ಯೋಗಿ. ಕೇದಾರದಲ್ಲಿ ಮತ್ಸ ್ಯವ ಕೊಂದು, ಮರಣವ ಗೆಲಿದು, ಪರಮ ಪದದಲ್ಲಿರಬಲ್ಲಾತನೇ ಯೋಗಿ. ಇಂತೀ ಪುಣ್ಯಕ್ಷೇತ್ರಂಗಳಲ್ಲಿ ಮಾಡಬಾರದುದ ಮಾಡಿ, ನೋಡಬಾರದುದ ನೋಡಿ, ಕೇಳಬಾರದುದ ಕೇಳಿ, ಶಿವನೊಲಿಸಿ ಶಿವನೊಳಗಾದರು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ ನಿಮ್ಮ ಶರಣರು.
--------------
ಸ್ವತಂತ್ರ ಸಿದ್ಧಲಿಂಗ
ಕಾದಬಲ್ಲೆವೆಂಬವರೆಲ್ಲ ಕಲಿವೀರಭಟರಹರೆ? ಇರಿಯದ ವೀರತ್ವ ಮೆರೆಯಬಲ್ಲುದೆ ಹೇಳಾ? ನಿಜವನರಿಯದೆ ಬರಿಮಾತನಾಡುವರೆಲ್ಲ ಜ್ಞಾನಿಗಳಹರೇ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನರಿದು, ಮಾಯೆಯ ಗೆಲ್ಲಬಲ್ಲಾತನೆ ಕಲಿವೀರನು.
--------------
ಸ್ವತಂತ್ರ ಸಿದ್ಧಲಿಂಗ
ಕತ್ತಲೆಯ ಮನೆಯ ಹೊಕ್ಕು ತೊಳಲುವ ವ್ಯರ್ಥ ಜೀವರನೇನೆಂಬೆ ನೋಡಾ. ಅರ್ತಿಕಾರಿಕೆಗೆ ಬಲುಗುಂಡ ಹೊತ್ತು ಬಳಲುವಂತೆ ಬಳಲುತೈದಾರೆ ನೋಡಾ. ಶಿವಜ್ಞಾನವಿಲ್ಲದೆ ದೇಹಭಾರವ ಹೊತ್ತು ಗತಿಗೆಡುತೈದಾರೆ. ಮುನ್ನ ಮಾಡಿದ ಕರ್ಮ, ಬೆನ್ನಲ್ಲಿ ಮನೆಯ ಹೊರುವಂತಾಯಿತ್ತು. ಇನ್ನಾದರೂ ಅರಿದು ನಡೆಯಲು, ಬೆನ್ನ ಹತ್ತಿದ ಮನೆಯ ತೊ[ಲ]ಗೆ ನೂಂಕಿ ತನ್ನತ್ತ ತೆಗೆದುಕೊಂಬನು ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಕಾರ್ಯಕಾರಣವಾದ ತತ್ತ್ವವಿತತ್ತ್ವಂಗಳೆಲ್ಲ ತೋರಿಯಡಗುವ ಇಂದ್ರಚಾಪದಂತೆ, ಸಾವಯ ನಿರವಯವಾಗಿ, ಉಂಟಿಲ್ಲವೆಂಬ ರೂಪು ನಿರೂಪುಗಳೆಲ್ಲ ಅಜ್ಞಾನವಶದಿಂದ ತೋರುತ್ತಿಹವಾಗಿ ಅಂತಪ್ಪ ಅಜ್ಞಾನದ ಬಲುಹಿಂದ, ನಾನು ನನ್ನದೆಂಬ ಅಹಂಕಾರ ಮಮಕಾರ ಮೊದಲಾದವೆಲ್ಲವೂ ತೋರುತ್ತಿಹವು. ಇಂತಪ್ಪ ಅಹಂಕಾರ ಮಮಕಾರ ಮೊದಲಾದವೆಲ್ಲವ ನೇತಿಗಳೆವುದೇ ಬ್ರಹ್ಮಜ್ಞಾನವು. ಅಂತಪ್ಪ ಬ್ರಹ್ಮಜ್ಞಾನಿಯಾದ ಶರಣನಲ್ಲಿ ಏನೂ ತೋರಿಕೆಯಿಲ್ಲದೆ ಜ್ಞಾನ ಜ್ಞೇಯಂಗಳೇಕವಾಗಿ, ಜ್ಞಾನ ನಿಃಪತಿಯಾದುದೇ ಲಿಂಗೈಕ್ಯವಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಕಮಲನಾಳದ ಸೂತ್ರ ಸಮವಾಗಿ ನಿಂದಲ್ಲಿ ಒಂದಾಶ್ಚರ್ಯದ ರೂಪದೆ. ಅದ ನೋಡಿ ಘನವ ಕೂಡುವ ಪರಿಯೆಂತೋ? ಅದ ಕೂಡಿಹೆನೆಂದಡೆ, ತಾನಿಲ್ಲದೆ ಕೂಡಬೇಕು ಕೂಡದ ಕೂಟವನುಸುರಲೆಡದೆರಹುಂಟೆ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ[ದ] ಬಳಿಕ ತಾನು ತಾನಾಗಿರಬೇಕು.
--------------
ಸ್ವತಂತ್ರ ಸಿದ್ಧಲಿಂಗ
ಕಾಯದ ಕರದಲ್ಲಿ ಲಿಂಗವ ಧರಿಸಿ, ಲಿಂಗಾರ್ಚನೆಯ ಮನಮುಟ್ಟಿ ಮಾಡುತ್ತಿದ್ದಡೆ, ಮನ ಲಿಂಗದಲ್ಲಿ ತರಹರವಾಯಿತ್ತು. ಮತ್ತೆ, ಮನದ ಮೇಲೆ ಲಿಂಗ ನೆಲೆಗೊಂಡಿತ್ತು. ಮನದ ಮೇಲಣ ಲಿಂಗವ, ಭಾವ ಭಾವಿಸಿ, ಭಾವ ಬಲಿದಲ್ಲಿ, ಭಾವದ ಕೊನೆಯಲ್ಲಿ ನಿಂದಿತ್ತಾಗಿ, ಭಾವ ಬಯಲಾಗಿ ನಿರ್ಭಾವವಾಯಿತ್ತು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ ನಿಮ್ಮ ಶರಣಂಗೆ.
--------------
ಸ್ವತಂತ್ರ ಸಿದ್ಧಲಿಂಗ
ಕಾಲೋಚಿತವಾಗಿ ಅರ್ಪಿತಕ್ಕೆ ಬಂದ ಭೂತಜಾತಪದಾರ್ಥಂಗಳನು, ಕಾಯದ ಕರದಲ್ಲಿ ಮುಟ್ಟಿ, ಅರ್ಪಿಸುವ ಅರ್ಪಣವನರಿದು, ಇಂದ್ರಿಯಂಗಳ ಮುಖದಲ್ಲಿ ಮುಟ್ಟದೆ, ಅರ್ಪಿಸುವ ಅರ್ಪಣವರಿದು, ಇಷ್ಟಲಿಂಗಕ್ಕೆ ರೂಪು, ಪ್ರಾಣಲಿಂಗಕ್ಕೆ ರುಚಿಯನಿತ್ತು ಕೊಂಬ, ಅನುಪಮ ಪ್ರಸಾದಿಯನುಪಮಿಸಬಹುದೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?
--------------
ಸ್ವತಂತ್ರ ಸಿದ್ಧಲಿಂಗ
ಕಾಷ*ದ ಮೇಲೊಂದು ಕಾಷ*ವನಿರಿಸಿ ಹಿಡಿದು ಮಥನವ ಮಾಡಲು ಆ ಮಥನದಿಂದುದ್ಭವಿಸಿದಗ್ನಿ ಆ ಕಾಷ*ವ ವೇಷ್ಟಿಸಿ, ತನ್ನ ಸ್ಫುರಣೆಯಿಂದ ಉಷ್ಣಿಸುವಂತೆ ಶಿವಶರಣರ ಅನುಭಾವಮಥನದಿಂದ ಮಹಾಜ್ಞಾನೋದಯವಾಗಿ ಕರ್ಪೂರದ ಗಿರಿಯನುರಿಕೊಂಡು ನಿರಂಶಿಕವಾಗಿ ಉಭಯ ನಿರ್ವಯಲಾದಂತೆ ಲಿಂಗಾಂಗದೈಕ್ಯವಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಕೆಲರೊಳ್ಳಿದನೆಂಬರು, ಕೆಲರು ಹೊಲ್ಲನೆಂಬರು ಆರಾರ ತಿಳಿವ ಭ್ರಾಂತಿಯನಾರು ತಿಳಿಯಬಹುದಯ್ಯ? ಇದು ಕಾರಣ, ಹಲವು ಸುಕರ್ಮ ದುಃಕರ್ಮಂಗಳ ಬುದ್ಧಿಭೇದದಿಂದ ನುಡಿದರೆಂದರೆ, ತಾನವರಂತಹನೆ ಜ್ಞಾನಿಯಾದ ಶರಣನು? ತನ್ನ ಪರಿಯನಾರಿಗೂ ತೋರದೆ ಜಗದ ಕಣ್ಣಿಂಗೆ ಮರೆಯಾಗಿ ಸುಳಿವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ಕುರುಡ ಕನ್ನಡಿಯ ಹಿಡಿದಡೇನು? ತನ್ನ ಮುಖವ ತಾ ಕಾಣಲರಿಯದಂತೆ. ಜ್ಞಾನವಿಲ್ಲದವನ ಕೈಯಲ್ಲಿ ಲಿಂಗವಿದ್ದಡೇನು? ಆ ಲಿಂಗದಲ್ಲಿ ತನ್ನ ನಿಜವ ತಾ ಕಾಣಲರಿಯ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಅರಿಯದವರು ಲಿಂಗವ ಹಿಡಿದಡೇನು ವ್ಯರ್ಥ ಕಾಣಿರಣ್ಣ.
--------------
ಸ್ವತಂತ್ರ ಸಿದ್ಧಲಿಂಗ
ಕಾಬೂದೊಂದು ಜ್ಞಾನ, ಕಾಣಿಸಿಕೊಂಬುದೊಂದು ಜ್ಞೇಯವೆಂದು ವಿವರಿಸಿ ನುಡಿಯಬಹುದೇ? ಇಂದು ಭಾನು ದೀಪಂಗಳು ತಮ್ಮ ಬೆಳಗಿನಿಂದ ತಮ್ಮನರುಹಿಸಿಕೊಂಬಂತೆ. ಜ್ಞಾನ ಜ್ಞೇಯಂಗಳ ಪರಿಯೆಂದರಿದಾತನರಿವು, ``ನಿಜ ಅಖಂಡಾನಂದ ಸಂವಿತ್ ಸ್ವರೂಪಂ ಬ್ರಹ್ಮ ಕೇವಲಂ' ಎಂದುದಾಗಿ, ಲಿಂಗಾಂಗ ಸಂಬಂಧ ಸಕೀಲವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಬಲ್ಲ.
--------------
ಸ್ವತಂತ್ರ ಸಿದ್ಧಲಿಂಗ
ಕಣ್ಣು ಕಾಲು ಎರಡುಳ್ಳವ ದೂರ ಎಯ್ದುವನಲ್ಲದೆ, ಕಣ್ಣು ಕಾಲೆರಡರೊಳಗೊಂದಿಲ್ಲದವನು, ದೂರವೈಯ್ದಲರಿಯನೆಂಬಂತೆ, ಜ್ಞಾನರಹಿರತನಾಗಿ ಕ್ರೀಯನೆಷ್ಟು ಮಾಡಿದಡೇನು? ಅದು ಕಣ್ಣಿಲ್ಲದವನ ನಡೆಯಂತೆ. ಕ್ರೀರಹಿತವಾಗಿ ಜ್ಞಾನಿಯಾದಡೇನು? ಅದು ಕಾಲಿಲ್ಲದವನ ಇರವಿನಂತೆ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಜವ ಬೆರಸುವಡೆ, ಜ್ಞಾನವೂ ಕ್ರೀಯೂ ಎರಡೂ ಬೇಕು.
--------------
ಸ್ವತಂತ್ರ ಸಿದ್ಧಲಿಂಗ
ಕ್ಷುತ್ತು ಪಿಪಾಸೆ ಶೋಕ ಮೋಹ ಜರೆ ಮರಣ ಈ ಷಡೂರ್ಮಿಗಳು, ಕೆಡುವುದಕೊಂದು ವಿವರವ ಹೇಳಿಹೆ ಕೇಳಿರಯ್ಯ. ಅಂಗದಾಪ್ಯಾಯನವಳಿದು, ಲಿಂಗದಾಪ್ಯಾಯನ ಉಳಿದಡೆ ಕ್ಷುತ್ತು ಕೆಟ್ಟುದು. ಪಾದೋದಕವೆಂಬ ಪರಮಾನಂದಜಲವನೀಂಟಿದಲ್ಲಿ ಪಿಪಾಸೆ ಕೆಟ್ಟುದು. ಲಿಂಗಪೂಜೆಪರದಲ್ಲಿ ಗದ್ಗದುಕೆಗಳು ಪುಟ್ಟಿ ಆನಂದಾಶ್ರುಗಳು ಸೂಸಿದಲ್ಲಿ ಶೋಕ ಕೆಟ್ಟುದು. ಲಿಂಗ ಮೋಹಿಯಾಗಿ, ದೇಹ ಮೋಹವ ಮರೆದಲ್ಲಿ, ಮೋಹ ಕೆಟ್ಟದು. ಶಿವಲಿಂಗದಲ್ಲಿ ಕರಗಿ ಕೊರಗಿ, ಸರ್ವ ಕರಣೇಂದ್ರಿಯಂಗಳು ಲಿಂಗದಲ್ಲಿ ಲೀಯ್ಯವಾಗಿ, ಶಿಥಿಲತ್ವವನೆಯ್ದಿದಲ್ಲಿ, ಜರೆ ಕೆಟ್ಟುದು. ಮಹಾಲಿಂಗದಲ್ಲಿ ತಾನೆಂಬುದಳಿದು ಲಿಂಗೈಕ್ಯವಾದಲ್ಲಿ, ಮರಣ ಕೆಟ್ಟುದು. ಇಂತೀ ಷಡೂರ್ಮಿಗಳನು ಈ ಪರಿ ಲಿಂಗಾವಧಾನದಲ್ಲಿ ಕೆಡಿಹಸಿದಾತನೆ, ಭಕ್ತನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಕೋಳಿ ಕೂಗಿದಡೆ ಹಾವು ಹೆಡೆ ಎತ್ತಿತ್ತು. ಊರೊಳಗಣವರ ಉಲುಹು ಅಡಗಿತ್ತು. ಮೇರು ಮಂದಿರದ ಆವು ಕರೆಯಿತ್ತು. ಅಮರಗಣಂಗಳೆಲ್ಲಾ ಅಮೃತವನುಂಡು ತೃಪ್ತರಾದರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣಂಗೆ, ಪರಮ ಪರಿಣಾಮ ಪದವಿ ದೊರಕೊಂಡಿತ್ತು.
--------------
ಸ್ವತಂತ್ರ ಸಿದ್ಧಲಿಂಗ
ಕಿಚ್ಚಿನೊಳಗೆ ಕಿಚ್ಚು ಹುಟ್ಟಿ ಉರಿವುತ್ತಿದ್ದಿತ್ತು. ಕಿಚ್ಚ ಕಾಯ ಹೋದವರ ಹಚ್ಚಡ ಬೆಂದು ಬತ್ತಲೆಯಾದರು. ಆ ಕಿಚ್ಚು ಗ್ರಾಮವ ಸುತ್ತಿ ದಳ್ಳುರಿಗೊಳಲು ಗ್ರಾಮದವರು ಗ್ರಾಮದಾಸೆಯ ಬಿಟ್ಟು ಹೋದರು. ಗ್ರಾಮಕ್ಕಿನ್ನು ಮರಳಿ ಬಾರವೆಂದು ನೇಮವ ಮಾಡಿಕೊಂಡರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಗ್ರಾಮಕ್ಕಾಗಿ ಬೇಗ ಹೋದರು.
--------------
ಸ್ವತಂತ್ರ ಸಿದ್ಧಲಿಂಗ

ಇನ್ನಷ್ಟು ...