ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆಯುಧವೈನೂರಿದ್ದರೇನು, ರಣರಂಗದಲ್ಲಿ ಹಗೆಯ ಗೆಲುವುದು ಒಂದೇ ಅಲಗು. ಏನನೋದಿ ಏನಕೇಳಿದರೇನು, ತಾನಾರೆಂಬುದನರಿಯದನ್ನಕ್ಕ? ತಾನಾರೆಂಬುದನರಿದ ಬಳಿಕ ನೀನಾನೆಂಬುದಿಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತಾನೆಯಾಗಿಹನು.
--------------
ಸ್ವತಂತ್ರ ಸಿದ್ಧಲಿಂಗ
ಆಶೆಯೆಂಬ ಶೃಂಖಲೆಯಿಂದ ಬಂಧವಡೆದವರು ಆರಾದರೂ ಆಗಲಿ ತೊಳಲಿ ಬಳಲುತ್ತಿಹರು ನೋಡಾ. ಆಶೆಯೆಂಬ ಶೃಂಖಲವ ಮುರಿದ ನಿರಾಶಕರು ಆವ ಧಾವತಿಯಿಂದಲೂ ಬಳಲದೆ ಸುಖವಿಹರು ನೋಡಾ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ಆಶೆಯುಳ್ಳಾತನೆ ಮಾಯೆಯುಳ್ಳವನು. ನಿರಾಶೆಯುಳ್ಳವನೆ ನಿಮ್ಮವನು.
--------------
ಸ್ವತಂತ್ರ ಸಿದ್ಧಲಿಂಗ
ಆರು ನೆಲೆ ಮಂಟಪದ ಕೋಣೆಯಲ್ಲಿ ಆರು ಜ್ಯೋತಿಯ ಮುಟ್ಟಿಸಿ ಆ ಜ್ಯೋತಿಯ ಬೆಳಗಿನಲ್ಲಿ ಆರು ಲಿಂಗವ ನಿರ್ಮಿಸಿ ಆರು ಲಿಂಗದ ಪ್ರತುಮೆಯಲ್ಲಿ ಆರು ಹಂತದ ಸೋಪಾನದಲ್ಲಿ ಮಹಾ ನಿರ್ಮಳವೆಂಬ ದುರ್ಗಮಂ ನಿರ್ಮಿಸಿ ಆ ದುರ್ಗದಲ್ಲಿ ಅರಸಂಗೆ ಕಾಲಿಲ್ಲದಾಕೆಯ ಮದುವೆಯ ಮಾಡಿ ತೂತಿಲ್ಲದ ಭೋಗಕ್ಕೆ ಕೂಡಿ ಬಿಂದುವಿಲ್ಲದೆ ಮಕ್ಕಳಾದ ಪರಿಯ ನೋಡಾ. ತೊಟ್ಟಿಲಿಲ್ಲದೆ ಹಾಸಿ ಮಲಗಿಸಿ ನಿದ್ರೆಗೆಯ್ಸಿದ ಶರಣನಾಚರಣೆಯನೆಂತೆಂಬೆನು. ಇದ ಕಂಡು ನಡೆಯಲರಿಯದೆ, ತಮ್ಮ ಮನ ಬಂದಂತೆ ನಡೆವರು. ಶಿವಯೋಗಕ್ಕೆ ದೂರವಾದರು ನೋಡಾ. ಹೊನ್ನ ಕಟ್ಟಿ ವಿರಕ್ತನು ಬ್ಥಿಕ್ಷೆಯೆನಲಾಗದು. ಭಕ್ತನ ಗೃಹವೆಂದು ಜಂಗಮವು ಹೋದಲ್ಲಿ ಆ ಭಕ್ತನು ಎದ್ದು ನಮಸ್ಕರಿಸಿ ತನ್ನಲ್ಲಿರ್ದ ಪದಾರ್ಥವಂ ತಾನು ಸಹವಾಗಿ ಶಿವಾರ್ಪಣವ ಮಾಡ[ಬ]ಹುದಲ್ಲದೆ. ಇದಲ್ಲದೆ, ಜಂಗಮವ ಬೇರೆ ಕುಳ್ಳಿರಿಸಿ ಉಂಡನಾದರೆ ಅವನಿಗೆ ದೀಕ್ಷೆಯ ಕೊಟ್ಟ ಗುರುವಿಗೆ ತನ್ನ ಮಾರ್ಗವ ಬಿಟ್ಟು ಶಿವಭಕ್ತನಾದರೆ ಮೋಕ್ಷವಿಲ್ಲವಾಗಿ. ಕೋಳಿ ಒಂದು ಕುಟುಕ ಕಂಡರೆ ತನ್ನ ಮರಿಗೆ ತೋರದುಳಿವುದೆ? ಕಾಗೆ ಒಂದಗುಳ ಕಂಡರೆ ತನ್ನ ಬಳಗವ ಕರೆಯದುಳಿವುದೆ? ಶಿವಭಕ್ತನಾಗಿ ತನ್ನ ಲಿಂಗವ ಪೂಜಿಸಿ ಜಂಗಮವ ಮರೆದವನಾದರೆ ಸತ್ತ ದನವಿಗೆ ನರಿ ಹೋದಂತಾಯಿತ್ತು. ಆ ನರಿ ಹೋದ ನೆನಹಿನಲ್ಲಿ ನಾಯಿ ಹೋದಂತಾಯಿತ್ತು. ಇಷ್ಟಕ್ಕಿಂದ ಕರಕಷ್ಟವೆ ಶಿವಭಕ್ತರು? ಷಟ್ಚಕ್ರದ ಭಾವದಲ್ಲಿವೊಪ್ಪಿರುವ ಶಿವಶರಣರು ತಮ್ಮ ನಡೆ ನುಡಿಗಳ ಬಿಡದೆ ನಡೆವುದು. ಅದ ಕಂಡು ಕಣ್ದೆರೆದು ನೋಡಿದೆನಯ್ಯ. ಆವ ವರ್ತನೆಯಲ್ಲಿ ತಾನಿದ್ದರೇನು? ಆವ ಭಾವ ಹೇಂಗಿದ್ದರೇನು? ನಮ್ಮಾಚರಣೆ ನಮಗೆ ಶುದ್ಧ. ಗುರು ಕಲ್ಪಿತನಾದರು ಅವನು ಹಿಂದೆ ಸಂಬಂಧವಾದ ಕಾರಣ, ಅವನಿಗೆ ಬಂಧ ದೊರಕುವದಲ್ಲದೆ ನನಗೆ ದೊರಕದೆಂದು ತಾನು ನಿಶ್ಚೆಸಿದರೆ ತನಗೆ ದೊರಕಬಲ್ಲದೆ? ತಾನು ಪೂರ್ವದಲ್ಲಿ ತಾ ಪಡದುದು ತನಗೆ ತಪ್ಪುವದೆ? ಪ್ರಾಣಿಹಿಂಸೆಯ ಮಾಡುವಾತನಾದರೆಯು ಅವನಿಗೆ ಕಲ್ಪಿತವೇತಕ್ಕೆ? ಹಿಂದೆ ಅವನು ಶಿವನಪ್ಪಣೆವಿಡಿದು ಬಂದ ಕಾರಣ ಅವನಿಗೆ ಬಂದಿತಲ್ಲದೆ ಗಗನದ ಮಂಟಪದ ಮೇಲೆ ಊಧ್ರ್ವಮುಖದ ಗದ್ದುಗೆಯ ಮಾಡಿ ಮಹಾಪ್ರಕಾಶವೆಂಬ ಬೆಳಗಂ ತೋರಿ ಓಂಕಾರವೆಂಬ ಲಿಂಗವ ಮೂರ್ತಮಾಡಿಸಿ ಅದಕ್ಕೆ ಸದ್ಭಾವವೆಂಬ ಪುಷ್ಪವ ತಂದು ಜ್ಞಾನಪ್ರಕಾಶವೆಂಬ ಜ್ಯೋತಿಯಂ ಪೊತ್ತಿಸಿ ಸದ್ಭಕ್ತಿಯೆಂಬ ನೈವೇದ್ಯಮಂ ಮಾಡಿ ನಿರ್ಮಳವೆಂಬ ಪೂಜಾರಿಯಾಗಿರ್ಪನು. ಇದನರಿಯದೆ ತಮ್ಮ ಮನ ಬಂದಂತೆ ಇಪ್ಪವರ ಲಿಂಗಹೋದವನಾದರು ಅವನ ಕಣ್ಣಲ್ಲಿ ಕಂಡು ಅವನಷ್ಟಕ್ಕಲ್ಲದೆ ಅನ್ಯರ ಗೃಹವ ಬಿಡಲೇತಕ್ಕೇ? ಪಾಪವ ಮಾಡಿದನಾರು ಅವನ ಗೃಹಕ್ಕಲ್ಲದೆ ಅವನೊಂದಿಗೆ ಬೆರಸಿದವನಾದರು ಅವನಿಗೆ ಪಾಪ ಸಂಭವಿಸುವುದುಂಟೇ? ಇದ ಸಂಕಲ್ಪವ ಮಾಡಿ ಬಿಡಲೇತಕ್ಕೆ? ಒರ್ವಾನೊಬ್ಬನು ಭವಿಯ ಒಡನಾಡಲು ಅವನ ಪಾಪವು ಅವನಲ್ಲಿಪ್ಪುದಲ್ಲದೆ ಮಿಕ್ಕಿನ ಗೃಹಕ್ಕೆ ಸಂಬಂಧವೇನು? `ಮಾಡಿದವರನಲ್ಲದೆ ಮಿಕ್ಕಿನವರ ಸಂಕಲ್ಪವ ಮಾಡಲಾಗದು'ಯೆಂಬುದು ಗುರುವಚನ. ಹೆಣ್ಣು ಬಿಂದು ಸಂಬಂಧವಾಗಲು ಆ ಭೋಗಕ್ಕೆ ಶರಣನು ಅದನು ಮನದಲ್ಲಿ ಕಂಡು ಸಂತೋಷವಾಗಿಪ್ಪ. ಇಂತೀ ಭಾವಶುದ್ಧವುಳ್ಳಾತನು ಮತ್ರ್ಯಲೋಕಕ್ಕೆ ಮರಳಿ ಬಾರನೆಂಬುದು. ಶರಣ ಸಕಲವಿದ್ಯವ ಕಲಿತು ಫಲವೇನು? ನಿಂದ್ಯನೆ ದೊರಕೊಂಡಮೇಲೆ? ಹುಣ್ಣು ಹುಗಳು ಕೋಷ್ಠವಾಗಿರಲು, ಅವರ ಕಂಡು ಜರಿಯಲಾರದೆಂಬುದೆನ್ನ ಭಾಷೆ. ಇಂದ್ರಿಯಸುಖಕ್ಕೆ ಹೋಗಿ ಬಿದ್ದು ಶಿವಮಾಡಿದರಾಯಿತ್ತೆಂಬ ಅವಿಚಾರದ ನುಡಿಯ ಕೇಳಲಾಗದು. ತನ್ನ ಮನವು ಶುದ್ಧವಾದ ಮೇಲೆ, ಸಕಲ ಸುಖಂಗಳು ತನಗುಂಟಲ್ಲದೆ, ಜ್ಞಾನಿಗೆ ಕತ್ತಲೆಯಿಲ್ಲ. ಅಜ್ಞಾನಿಗೆ ಪಾಪವಿಲ್ಲ. ಇದನರಿದು, ಮುಂದುಗೊಂಡು ತಿರುಗುವ, ಅಣ್ಣಗಳ ಕಂಡು, ನಗುತಿರ್ಪರು ನಿಮ್ಮ ಶರಣರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಆವಾವ ಲೋಕದಲ್ಲಿರ್ದರೂ, ಆವಾವ ಪ್ರಕಾರದಲ್ಲಿ ಅವರವರಿಗೆ ತಕ್ಕ ಸಂಸಾರ ಬಿಡದು. ಹಿರಿದಿಂಗೆ ಹಿರಿದಾಗಿ, ಕಿರಿದಿಂಗೆ ಕಿರಿದಾಗಿ, ಕಾಡಿತ್ತು ಮಾಯೆ. ಘಟಸಂಸಾರಿಗಳಿಗೆಲ್ಲ ಘಟಭಾರವ ಹೊರಿಸಿ ಕಾಡಿತ್ತು ಮಾಯೆ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಮಾಯೆಯ ಬಲುಹಿಂಗೆ ನಾನು ಬೆರಗಾದೆನು.
--------------
ಸ್ವತಂತ್ರ ಸಿದ್ಧಲಿಂಗ
ಆವಾವ ಜಾತಿ ಯೋನಿಗಳಲ್ಲಿ ಹುಟ್ಟಿದ ಪ್ರಾಣಿಗಳು ಆ ಜಾತಿಯಂತಹವಲ್ಲದೆ ಮತ್ತೊಂದು ಜಾತಿಯಹವೆ ಹೇಳಾ. ``ಯಥಾ ಬೀಜಸ್ತಥಾ ವೃಕ್ಷಃ' ಎಂಬ ನ್ಯಾಯದಂತೆ, ಲಿಂಗದಿಂದೊಗೆದ ಶರಣ ಲಿಂಗವಹನಲ್ಲದೆ, ಮಾನವನಾಗಲರಿಯನೆಂಬುದಕ್ಕೆ ಗುರುವಚನವೇ ಪ್ರಮಾಣು. ಇಂತಿದನರಿಯದೆ, ನಾನು ಮಾನವನು ದೇಹಿ ಸಂಸಾರಬದ್ಧನು ಎಂಬವಂಗೆ, ಎಂದೆಂದು ಮುಕ್ತಿಯಿಲ್ಲ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಮಾನವನಲ್ಲ.
--------------
ಸ್ವತಂತ್ರ ಸಿದ್ಧಲಿಂಗ
ಆದಿಬಿಂದು ಬೀಜವನರಿದು, ಬಿಂದೋಪರಿ ಅನಾಹತನಾದವನರಿದು, ಆ ಪ್ರಣವ ಸೂತ್ರವಿಡಿದು ಶಿವಧ್ಯಾನವ ಮಾಡಲು, ಆ ಧ್ಯಾನಾಗ್ನಿಯಿಂದ, ಯೋಜನಾಂತರಶೈಲಸಮಾನಪಾಪ, ಬೆಂದು ಹೋದುದು ನೋಡಯ್ಯಾ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ, ನಿಜಪದವಿಯನೈದುವುು ಬಳಿಕ ನೋಡಯ್ಯಾ.
--------------
ಸ್ವತಂತ್ರ ಸಿದ್ಧಲಿಂಗ
ಆದಿ ಅನಾದಿಯೆಂಬವಕ್ಕೆ ತಾನಾದಿಯಾದ ಕಾರಣ, ಆದಿಪ್ರಸಾದವೆನಿಸಿತ್ತು. ಆ ಪ್ರಸಾದವು ಭೇದಿಸಬಲ್ಲ ಪ್ರಸಾದಿಗಲ್ಲದೆ ಸಾಧ್ಯವಾಗದು. ಸರ್ವಾದ್ಥಿಷ್ಠಾತೃ ಶಂಭುಪ್ರಸಾದದಿಂದಲ್ಲದೆ ಸಂಸಾರ ಕೆಡದು, ಮೋಹಗ್ರಂಥಿ ಬಿಡದು. ಅದೆಂತೆಂದಡೆ: ಸೂರ್ಯೋದಯವಾಗೆ ತಮ ಹರಿವಂತೆ, ಪ್ರಸಾದದಿಂದ ಅನೇಕ ಜನ್ಮಶುದ್ಧ. ನಿರಂಹಂಕಾರ ಭಾವಸಿದ್ಧಿಯೆಂದರಿದು, ಪುರಾತನರು ಪ್ರಸಾದವ ಪಡೆದು ಮುಕ್ತರಾದರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣರು.
--------------
ಸ್ವತಂತ್ರ ಸಿದ್ಧಲಿಂಗ
ಆವಾವ ಪರಿಯಲ್ಲಿ ಭಾವಿಸುತ್ತಿಹ ಕರಣದ ವ್ಯಾಕುಲವಡಗಿ ಮನವು ಏಕಾಂತವಾಗಿ ನಿಂದ ಯೋಗಿ, ಜ್ಞಾನಸತಿಯ ಸಂಗದಲ್ಲಿರಲು ಆತಂಗೆ ಸರ್ವಲೋಕವು ಆ ಲೋಕದ ಭೋಗಂಗಳೆಲ್ಲಾ ತಡೆದಿಹವಾಗಿ ಆ ಯೋಗಿ ತನಗೆ ಪ್ರಿಯಳಾದ ಚಿತ್ಕಾಂತೆಯನು, ತನ್ನನು ಕಾಣದೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ತಾನು ತಾನಾಗಿಹನು.
--------------
ಸ್ವತಂತ್ರ ಸಿದ್ಧಲಿಂಗ
ಆಜ್ಞಾಚಕ್ರದ ಮಧ್ಯಹೃದಯದಲ್ಲಿ ಭರಿತವಾಗಿ ನಾದ ಬಿಂದು ಕಲೆಯೆಂಬ ದಿವ್ಯಪೀಠದ ಮೇಲೆ ತೋರುತ್ತ ತನ್ನ ಕಲೆಯನ್ನೆಲ್ಲಾ ದ್ವಾರಂಗಳಲ್ಲಿ ಬೀರುತ್ತ ಮತ್ತೆಲ್ಲವ ಮೀರಿದ ನಿರ್ಮಲ ಶಿವಲಿಂಗರೂಪು ತಾನೆ ಪರಮ ಪದವು. ಆ ಪರಮ ಪದವನರಿದ ನಿರ್ಮಲ ಜ್ಞಾನಿಯೇ ನಿಜಮುಕ್ತನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಆಸ್ತಿ ಜಾಯತೇ ವಿಪರಿಣಮತೇ ವಿವರ್ಧತೇ ಅಪಕ್ಷೀಯತೇ ವಿನಶೃತಿ ಎಂಬ ಷಡ್ಭಾವವಿಕಾರಂಗಳು ಕೆಡುವುದಕ್ಕೆ ವಿವರವೆಂತೆಂದಡೆ; ಶ್ರೀಗುರುವಿನ ಕೃಪಾಗರ್ಭದ ಮಧ್ಯದಲ್ಲಿರ್ದವ ನಾನಹುದೆಂದರಿದಾಗವೆ ಅಸ್ತಿ ಎಂಬ ವಿಕಾರ ಕೆಟ್ಟಿತ್ತು. ಗುರುಕರದಲ್ಲಿ ಜನಿಸಿದೆನಾಗಿ ನಾ ಮಾಯಾಯೋನಿಜನವಲ್ಲವೆಂದು ಅರಿದಾಗವೆ ಜಾಯತೇ ಎಂಬ ವಿಕಾರ ಕೆಟ್ಟಿತ್ತು. ಗುರುವಿನ ಸದ್ಭಾವಜಾತಲಿಂಗವನಂಗದಲ್ಲಿ ಧರಿಸಿ ಪರಮಪರಿಣಾಮದಲ್ಲಿ ಪರಿಣಮಿಸುತ್ತಿರ್ದ ಕಾರಣ ವಿಪರಿಣಮತೇ ಎಂಬ ವಿಕಾರ ಕೆಟ್ಟಿತ್ತು. ಗುರುವಿನ ಆಚಾರ ಜ್ಞಾನಮಾರ್ಗದಲ್ಲಿ ಆಚರಿಸಿ ಬೆಳೆವುತ್ತಿದ್ದ ಕಾರಣ ವಿವರ್ಧತೇ ಎಂಬ ವಿಕಾರ ಕೆಟ್ಟಿತ್ತು. ದೇಹೇಂದ್ರಿಯಾದಿಗಳೆಲ್ಲ ಲಿಂಗದಲ್ಲಿ ಅಡಗಿ ಶಿಥಿಲವಾಗಲು ಅಪಕ್ಷೀಯತೇ ಎಂಬ ವಿಕಾರ ಕೆಟ್ಟಿತ್ತು. ಲಿಂಗಾಂಗದ ಐಕ್ಯವನರಿದು ಲಿಂಗದಲ್ಲಿ ಲೀಯವಾಗಲು ವಿನಶ್ಯತಿ ಎಂಬ ವಿಕಾರ ಕೆಟ್ಟಿತ್ತು. ಇಂತೀ `ಲಿಂಗಸಂಗದಿಂದ ಷಡ್ಭಾವವಿಕಾರಂಗಳಳಿದು ನಿಮ್ಮವಿಕಾರವೆಡೆಗೊಂಡಿತ್ತು' ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮಭಕ್ತಂಗೆ.
--------------
ಸ್ವತಂತ್ರ ಸಿದ್ಧಲಿಂಗ
ಆವಾವ ಭಾಷಾಂಗವ ತೊಟ್ಟರೂ ಆ ಭಾಷಾಂಗಕ್ಕೆ ತಕ್ಕ ಗತಿ ಭಾಷೆಯಿರಬೇಕು. ಶಿವಲಾಂಛನಧಾರಿಯಾದಡೆ, ಆ ಲಾಂಛನಕ್ಕೆ ತಕ್ಕ ನಡೆ ನುಡಿ ಇರಬೇಕು. ಅದೆಂತೆಂದಡೆ: ಕಾಯದ ಕಳವಳವ ಗೆಲಿದು, ಮಾಯಾಪ್ರಪಂಚ ಮಿಥ್ಯವೆಂದರಿದು, ಕ್ಷಮೆ ದಮೆ ಶಾಂತಿ ದಯೆ ಜ್ಞಾನ ವೈರಾಗ್ಯ ಮುಂತಾಗಿ ಸುಳಿಯಬೇಕು. ಲಿಂಗಮೋಹಿಯಾಗಿದ್ದಲ್ಲದೆ, ಉಳಿದ ಉದ್ದೇಶದ ಸುಳುಹೆಲ್ಲಾ ಬಿರುಗಾಳಿಯ ಸುಳುಹಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಆತ್ಮ ಪರಮಾತ್ಮ ಯೋಗವನರಿದೆನೆಂಬ ಮಾತಿನ ಮೊದಲ ಜ್ಯೋತಿಯೊಳಗೆ ಆತ್ಮಜ್ಯೋತಿಯನರಿದು, ಮಾತಿನೊಳಗಣ ಪರಮಾತ್ಮನನರಿದಂಗಲ್ಲದೆ, ಆತ್ಮಪರಮಾತ್ಮ ಯೋಗವನರಿಯಬಾರದು. ಆತ್ಮಪರಮಾತ್ಮ ಯೋಗವನರಿದಂಗಲ್ಲದೆ, ಅರಿವು ಮರವೆಗಳು ನಷ್ಟವಾಗದು. ಹಮ್ಮು ನಷ್ಟವಾ[ದುದೇ], ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಜೀವ ಪರಮರೈಕ್ಯವು.
--------------
ಸ್ವತಂತ್ರ ಸಿದ್ಧಲಿಂಗ
ಆಡಿನ ಕೋಡಗದ ಕೂಟದ ಸಂಚದ ಕೀಲ ಕಳೆದು ಆಡಿನ ಕೋಡ ಮುರಿದಡೆ ಕೋಡಗ ಕೊಂಬನೇರಿತ್ತು. ಆ ಕೊಂಬಿನ ಕೋಡಗದ ಕೈಯಲ್ಲಿ ಮಾಣಿಕವ ಕೊಟ್ಟರೆ ಮಾಣಿಕ ಕೋಡಗವ ನುಂಗಿತ್ತು. ಬಳಿಕ ಆಡು ಮಾಣಿಕವ ನುಂಗಿ, ತಾನೊಂದೆಯಾಯಿತ್ತು. ಈ ಪರಿ ಆಡು ಕೋಡಗದ ಸಂಗವ ಹಿಂಗಿಸಿ, ನಿಜವ ಕೂಡಬಲ್ಲಾತನೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಸಹಜಯೋಗಿ.
--------------
ಸ್ವತಂತ್ರ ಸಿದ್ಧಲಿಂಗ
ಆವ ಕ್ರೀಯ ಮಾಡಿದಡೇನು? ಉಪಾಧಿರಹಿತ ನಿರುಪಾಧಿಕ ಚಿದ್ರೂಪ ಪರಮಾನಂದಾತ್ಮ ಶರಣನು. ಕ್ರೀಯ ಮರೆಯಮಾಡಿಕೊಂಡಿಹನೆಂದಡೆ, ಅದು ಪರಮಾರ್ಥವೆ? ಚಂದ್ರಂಗೆ ಮೇಘಸಂಬಂಧವೆಂಬುದು ಕಲ್ಪನೆಯಲ್ಲದೆ, ಅದು ಸಹಜಸಂಬಂಧವೇ? ಅಲ್ಲಲ್ಲ. ಶರಣಂಗೆ ಕಲ್ಪನಾದೇಹವಿದ್ದು, ನಿಃಕ್ರಿಯಾವಂತನಾದ ಮಹಾತ್ಮನು ಚಿತ್ರದೀಪದಂತೆ ತೋರುತ್ತಿಹನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ಆದಿಮುಕ್ತನ, ಅನಾದಿಮುಕ್ತನ, ನಾದ, ಬಿಂದು, ಕಳಾತೀತನ, ಭೇದಿಸಬಾರದಭೇದ್ಯನ, ಅಪ್ರಮಾಣನ, ವೇದ ಶಾಸ್ತ್ರ ಆಗಮ ಪುರಾಣಾದಿಗಳರಸಿ ಕಾಣದನಾದಿಪುರುಷನ, ಸ್ವಯಂಪ್ರಕಾಶ ಸ್ವತಃ ಸಿದ್ಧನನೆಂತು ಅರಿವರಯ್ಯ ಸ್ವಾನುಭಾವಸಿದ್ಧರಲ್ಲದವರು? ಹಲವನೋದಿ ಹೇಳಿ ಕೇಳಿ ಹಲಬರೆಲ್ಲ ಹೊಲಬುಗೆಟ್ಟರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ, ಪ್ರಸಾದವಿಲ್ಲದವರೆಲ್ಲರು ಭ್ರಾಂತರಾದರು.
--------------
ಸ್ವತಂತ್ರ ಸಿದ್ಧಲಿಂಗ
ಆಧಾರದಲ್ಲಿ ಆಚಾರಲಿಂಗವ ಧರಿಸಿದನಾಗಿ ಆಚಾರಲಿಂಗ ಭಕ್ತನಾದನಯ್ಯ ನಿಮ್ಮ ಶರಣ. ಸ್ವಾಧಿಷಾ*ನದಲ್ಲಿ ಗುರುಲಿಂಗವ ಧರಿಸಿದನಾಗಿ ಗುರುಲಿಂಗ ಭಕ್ತನಾದನಯ್ಯ ನಿಮ್ಮ ಶರಣ. ಮಣಿಪೂರಕದಲ್ಲಿ ಶಿವಲಿಂಗವ ಧರಿಸಿದನಾಗಿ ಶಿವಲಿಂಗ ಭಕ್ತನಾದನಯ್ಯ ನಿಮ್ಮ ಶರಣ. ಅನಾಹತದಲ್ಲಿ ಜಂಗಮಲಿಂಗವ ಧರಿಸಿದನಾಗಿ ಜಂಗಮಲಿಂಗ ಭಕ್ತನಾದನಯ್ಯ ನಿಮ್ಮ ಶರಣ. ವಿಶುದ್ಧಿಯಲ್ಲಿ ಪ್ರಸಾದಲಿಂಗವ ಧರಿಸಿದನಾಗಿ ಪ್ರಸಾದಲಿಂಗ ಭಕ್ತನಾದನಯ್ಯ ನಿಮ್ಮ ಶರಣ. ಆಜ್ಞೇಯದಲ್ಲಿ ಮಹಾಲಿಂಗವ ಧರಿಸಿದನಾಗಿ ಮಹಾಲಿಂಗ ಭಕ್ತನಾದನಯ್ಯ ನಿಮ್ಮ ಶರಣ. ಇಂತು ಷಡಾಧಾರದಲ್ಲಿ ಷಡ್ವಿಧಲಿಂಗವ ಧರಿಸಿ ಷಡುಸ್ಥಲ ಭಕ್ತನಾದನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣ.
--------------
ಸ್ವತಂತ್ರ ಸಿದ್ಧಲಿಂಗ
ಆರಾಧಾರದ ಆರು ಕಮಲಂಗಳಲ್ಲಿ, ಐವತ್ತೊಂದಕ್ಷರದ ಲಿಪಿಯ ನೋಡಿ ನೋಡಿ, ಆರಾಧಾರವ ಮೂರಾಧಾರದಲ್ಲಿ ಕಂಡು, ಆ ಮೂರಾಧಾರದ ಮೂಲದಲ್ಲಿ ಕೂಡಿಕೊಂಡೆನು, ಮೂಲಕ್ಕೆ ಮೂಲಿಗನಾದ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಾ.
--------------
ಸ್ವತಂತ್ರ ಸಿದ್ಧಲಿಂಗ
ಆಚಾರವೆ ಭಕ್ತಂಗೆ ಅಲಂಕಾರವು. ಆಚಾರವೆ ಭಕ್ತಂಗೆ ಸರ್ವಪೂಜ್ಯವು. ಇಂತೀ ಆಚಾರವುಳ್ಳವನೆ ಭಕ್ತನು. ಆಚಾರವುಳ್ಳವನೆ ಯುಕ್ತನು. ಆಚಾರವುಳ್ಳವನೆ ಮುಕ್ತನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಆವಾವ ಕಾಲದಲ್ಲಿ ಆವಾವ ಪರಿಯಲ್ಲಿ ಒಂದೊಂದು ವಸ್ತುವನು ಜ್ಞಾನಿ ಮನದಲ್ಲಿ ಭಾವಿಸದಿಹನು. ಆತನು ಹೃದಯಾಕಾಶ ಶೂನ್ಯವಾಗಿ ನಿಸ್ತರಂಗ ಸಹಜಾನಂದಾಂಬುಧಿಯಾದ ಪರಮಾತ್ಮನಲ್ಲಿ ಮುಳುಗಿ ಪರಮಾತ್ಮ ತಾನಾದ ಮತ್ತೆ ಭೇದಭಾವ ಭ್ರಮೆಯ ಸೂತಕವಳಿದು, ಶರಣ ಸಚರಾಚರದಲ್ಲಿ ವ್ಯಾಪಕವಾಗಿಹನು. ಅದೆಂತೆಂದಡೆ: ಗಂಗೆಯ ಉದಕದಲ್ಲಿ ಬಿಂಬಿಸಿದ ಸೂರ್ಯನು ಮೃತ್ಕಾಂಚನ ಘಟಂಗಳ ಉದಕಮಧ್ಯದಲ್ಲಿಯೂ ಬಿಂಬಿಸುವಂತೆ ಹಿರಿದು ಕಿರಿದು ಉತ್ತಮ ಮಧ್ಯಮಾಧಮವೆನ್ನದೆ ಸರ್ವಾಂತರ್ಯಾಮಿಯಾಗಿಹನು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆ ತಾನಾಗಿ.
--------------
ಸ್ವತಂತ್ರ ಸಿದ್ಧಲಿಂಗ
ಆದ್ಯರ ವಚನವ ಕೇಳಿ, ವೇದಾಗಮಂಗಳ ತಿಳಿದು, ಶ್ರೀವಿಭೂತಿಯ ಧಾರಣವೆ ಮುಖ್ಯವೆಂದರಿದು ಧರಿಸಿರಣ್ಣ. ಇಂತಿದನರಿಯದೆ, ಶಿವದೀಕ್ಷೆಯ ಮಾಡಿದರೂ ದೀಕ್ಷೆಯ ಪಡೆದರೂ ಫಲವಿಲ್ಲ. ಶಿವಮಂತ್ರಸ್ಮರಣೆ ತಪಯಜ್ಞಂಗಳ ಮಾಡಿದಲ್ಲಿಯೂ ಫಲವಿಲ್ಲ. ಆತಂಗೆ ವಿದ್ಯೆಯು ದೇವತೆಗಳು ಆಗಮಜ್ಞಾನವು ಇಲ್ಲ. `ನ ದೀಕ್ಷಾ ನ ತಪೋ ಮಂತ್ರಂ ನ ಯಜ್ಞೋ ದೇವತಾ ನ ಚ ವಿದ್ಯಾ ನೈವಾಗಮಜ್ಞಾನಂ ಭಸ್ಮಮಾಹಾತ್ಮವರ್ಜಿತೇ' ಎಂದುದಾಗಿ: ಇದು ಕಾರಣ, ಶ್ರೀವಿಭೂತಿಯ ಮಹಾತ್ಮೆಯನರಿದು ಧರಿಸಲು, ಸರ್ವಸಿದ್ಧಿಯಪ್ಪುದು. ಬಳಿಕ ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೊಳಗಿಪ್ಪನು.
--------------
ಸ್ವತಂತ್ರ ಸಿದ್ಧಲಿಂಗ
ಆವ ವೇಷವ ಧರಿಸಿದಡೇನು? ದೇಹವೆಂಬ ಹುತ್ತಿನಲ್ಲಿ, ಹುಸಿ ಎಂಬ ಸರ್ಪ, ಸಜ್ಜನರನಟ್ಟಿ ಕಡಿದಡೆ, ವಿಷದ ಮೂರ್ಛೆಯಿಂದ ಬಳಲುತ್ತಿರ್ದರಯ್ಯ ಸಜ್ಜನರು. ಶಿವಜ್ಞಾನವೆಂಬ ನಿರ್ವಿಷವ ಕೊಂಡು, `ಓಂನಮಃಶಿವಾಯ' ಎಂಬ ಮಂತ್ರವ ಜಪಿಸಿ, ವಿಷವಂ ಪರಿಹರಿಸಿಕೊಂಡರಯ್ಯ. ಸರ್ಪ ಕಚ್ಚಿ ಏರಿ ಬಾಯಲ್ಲಿ ಹೋಯಿತೆಂಬಂತೆ, ನಿಂದಕರಿಗೆ ನಿಂದಿಸಿತೆ ಬಂದಿತ್ತಲ್ಲದೆ, ಅಲ್ಲಿ ತಮಗೊಂದಾಗಿಲ್ಲ. ಸಜ್ಜನರು ನೊಂದ ನೋವು ಸುಮ್ಮನೆ ಹೋಹುದೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ಅವರಲ್ಲಿ ನೀವಿಪ್ಪಿರಾಗಿ?.
--------------
ಸ್ವತಂತ್ರ ಸಿದ್ಧಲಿಂಗ
ಆದಿ ಮಧ್ಯಾವಸಾನಂಗಳಿಂದತ್ತತ್ತಲಾದ ಶಿವಾಂಗರೂಪ ತಾನೆಂದರಿಯದೆ, ನಿತ್ಯ ನಿರ್ಗುಣ ನಿರವಯ ಅಗಣಿತ ಅಕ್ಷಯ ತಾನೆಂದರಿಯದೆ, ನಿತ್ಯೋದಿತ ಸ್ವಯಂಪ್ರಕಾಶ ತಾನೆಂದರಿಯದೆ, ಸರ್ವಗತ ಸರ್ವಜ್ಞ ಸರ್ವಶಕ್ತಿಯನುಳ್ಳ ಪರಮಾತ್ಮ ತಾನೆಂದರಿಯದೆ, ಮಹದಾದಿ ತತ್ತ್ವಂಗಳ ಮೇಲಿಹ ಸಚ್ಚಿದಾನಂದರೂಪ ತಾನೆಂದರಿಯದೆ, ಅಜ್ಞಾನದ ಬಲದಿಂದ ಅಹಂಕಾರವಶನಾಗಿ, ನಾನು ಕರ್ತನು, ನಾನು ಭೋಕ್ತನೆಂದು ಬಗೆದು, ಇಲ್ಲದ ಮಾಯಾ ಮೋಹರೂಪಾದ ಕರ್ಮಜನ್ಯ- ಸಂಸಾರವ ಹೊಂದಿಸಿಕೊಂಡು, ತನ್ನ ನಿಜಸ್ವರೂಪವನರಿಯದೆ, ಎಂದೆಂದೂ ಭವದಲ್ಲಿ ಬಳಲುತ್ತಿಹರು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಆನೆಯು ಕೋಣನೂ ಕೂಡಿ ಅಡವಿಯಲ್ಲಿ ಆಡುತ್ತಿರಲು ಕೇಸರಿ ಬಂದು ಬೆದರಿಸಿತ್ತು. ಕೇಸರಿಯ ಕಂಡು ಆನೆ ಅಳಿಯಿತ್ತು. ಕೋಣ ಕೇಸರಿಯ ನುಂಗಿ ಕೇಸರಿಯಾಯಿತ್ತು. ಉಡು ಸರ್ಪನ ಹಿಡಿದು ನುಂಗಲು ಉಡುವಿಂಗೆ ಹೆಡೆಯಾಯಿತ್ತು. ಆ ಉಡುವಿನ ಹೆಡೆದು ಮಾಣಿಕವ ಕಂಡು ಅಡಗಿದ್ದ ಹದ್ದು ಹಾಯ್ದು ಆಕಾಶಕ್ಕೊಯ್ಯಿತ್ತು. ಆ ಆಕಾಶದಲ್ಲಿ ಮಾಣಿಕದ ಬೆಳಗು ತುಂಬಲು ಆ ಬೆಳಗ ಕಂಡು ಹಿರಿದೊಂದು ನರಿ ಕೂಗಿತ್ತು. ಆ ಮಾಣಿಕ ನರಿಯ ನುಂಗಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ನಿರವಯಲಾಯಿತ್ತು.
--------------
ಸ್ವತಂತ್ರ ಸಿದ್ಧಲಿಂಗ
ಆಸೆಯೆಂಬ ಸ್ತ್ರೀಗೆ ಮನಸೋತವರೆಲ್ಲಾ ಕೆಟ್ಟ ಕೇಡನೇನೆಂಬೆನಯ್ಯ? ಯತಿಗಳಾಗಲಿ ವೇದಾಧ್ಯಾಯಿಗಳಾಗಲಿ ವ್ರತಿಗಳಾಗಲಿ ಸರ್ವವಿದ್ಯಾಕಲಾವಂತರಾಗಲಿ ನರರೊಳಗಾಗಲಿ ಸುರರೊಳಗಾಗಲಿ ಇವರೆಲ್ಲರ, ಧನವುಳ್ಳವರ ಬಾಗಿಲ ಕಾಯಿಸಿದಳು ನೋಡ. ಇವಳಿಗಾರಾರು ಮರುಳಾಗದಿರರು? ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರನ ಶರಣರಲ್ಲದವರ, ಕಿವಿಯ ಹಿ[ಂಡಿ] ಕುಣಿಸಿದಳು ನೋಡಾ.
--------------
ಸ್ವತಂತ್ರ ಸಿದ್ಧಲಿಂಗ
ಆದಿಯ ಪ್ರಸಾದವ ಸಾಧಿಸಬಾರದು, ಬೇಧಿಸಬಾರದು. ನಿಮ್ಮ ಪ್ರಸಾದಿಗಲ್ಲದೆ ನೆಲೆಗೊಳಗಾಗದು. ಚರಾಚರದಲ್ಲಿ ಅನುಶ್ರುತ ಸುಖ ಪ್ರಸಾದವ ಭಕ್ತಿಪದಾರ್ಥವೆಂದು ರೂಹಿಸಿದ ಪರಿಯ ನೋಡಾ. ಅರ್ಚನಮುಖದಲ್ಲಿ ಪದಾರ್ಥವೆಂದು, ಅರ್ಪಣಮುಖದಲ್ಲಿ ಪ್ರಸಾದವೆಂದು ಕಲ್ಪಿಸಿದ ಪರಿಯ ನೋಡಾ. ಆದಿಯಲ್ಲಿ ಪ್ರಸಾದ, ಅಂತ್ಯದಲ್ಲಿ ಪ್ರಸಾದ, ಮಧ್ಯದಲ್ಲಿ ಒಂದು ಕ್ಷಣ ಪದಾರ್ಥವೆಂದು ಮಾಡಿದ ಪರಿಯ ನೋಡಾ. ಕಡೆ ಮೊದಲಿಲ್ಲದ ಪ್ರಸಾದವು ಭಕ್ತಿಗೆ ಸಾಧ್ಯವಾದ ಪರಿಯ ನೋಡಾ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ಭಕ್ತಿಪ್ರಿಯನಾದ ಕಾರಣ, ಭಕ್ತಿಪ್ರಸಾದವ ಪಡೆದೆನಾಗಿ ಎನಗೆ ಪ್ರಸಾದ ಸಾಧ್ಯವಾಯಿತ್ತು.
--------------
ಸ್ವತಂತ್ರ ಸಿದ್ಧಲಿಂಗ

ಇನ್ನಷ್ಟು ...