ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪೂರ್ವಜನ್ಮದಲ್ಲಿ ಮಾಡಿದ ಕರ್ಮ, ಈಗಿನ ಜನ್ಮದಲ್ಲಿ ಭೋಗಿಸಲಿಕ್ಕೀಡಾಯಿತ್ತು. ಈಗ ಮಾಡಿದ ಕರ್ಮ, ಮುಂದಕ್ಕೆ ಬಿತ್ತಿದ ಬೆಳೆಯನುಂಬಂತೆ ಬರ್ಪುದು ತಪ್ಪದು. ಈ ಕರ್ಮವುಳ್ಳನ್ನಕ್ಕ ಆರಿಗಾದರೂ ಬಳಲಿಕೆ ಬಿಡದು. ಈ ಕರ್ಮ ಹರಿದಂದಿಗೆ ನಿಮ್ಮ ಕಾಂಬರು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಪ್ರಕಾಶದ್ವಾರ ಗಂಧದ್ವಾರ ಶಬ್ದದ್ವಾರವೆಂಬ ಅರುದ್ವಾರ ಕೂಡಿದ ಠಾವಿನಲ್ಲಿ, ನಾದ ಬಿಂದು ಕಲೆಯೆಂಬ ಸಿಂಹಾಸನದ ಮೇಲೆ ಮೂರ್ತಿಗೊಂಡು, ಶಬ್ದ ರೂಪು ಗಂಧಂಗಳ ಗ್ರಹಿಸುವಾತ ನೀನಲ್ಲದೆ ಮತ್ತಾರು ಹೇಳಾ? ಗಳದಲ್ಲಿ ನಿಂದು ಷಡುರಸ್ನಾನದ ರುಚಿಯ ಜಿಹ್ವೆಯಲ್ಲಿ ಸ್ವಾದಿಸುವಾತ ನೀನಲ್ಲದೆ ಮತ್ತಾರು ಹೇಳಾ? ಸರ್ವಾಂಗದಲ್ಲಿ ನಿಂದು, ತ್ವಗಿಂದ್ರಿಯ ಮುಖದಲ್ಲಿ ಸ್ಪರ್ಶನವ ತಳೆದುಕೊಂಬಾತ ನೀನಲ್ಲದೆ ಮತ್ತಾರು ಹೇಳಾ? ಮನವೆಂಬ ಮುಖದಲ್ಲಿ ನಿಂದು ಪರಿಣಾಮವನನುಭವಿಸುವಾತ ನೀನಲ್ಲದೆ ಮತ್ತಾರು ಹೇಳಾ? ಸರ್ವಾವಯವಂಗಳಲ್ಲಿ ಸರ್ವಮುಖವಾಗಿ ಭೋಗಿಸಿ ಪ್ರಸಾದವ ಕರುಣಿಸಿದ ಕೃಪಾಮೂರ್ತಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನೀನಲ್ಲದೆ ಮತ್ತಾರು ಹೇಳಾ?
--------------
ಸ್ವತಂತ್ರ ಸಿದ್ಧಲಿಂಗ
ಪದಾರ್ಥವನರ್ಪಿಸಿ ಪ್ರಸಾದವ ಪಡೆದೆವೆಂದೆಂಬರು ನಾವಿದನರಿಯೆವು. ಪದಾರ್ಥವಾವುದು ಪ್ರಸಾದವಾವುದೆಂದರಿಯರು. ಪದಾರ್ಥವೆ ಆತ್ಮನು. ಪ್ರಸಾದವೇ ಪರವಸ್ತುವು. ಪದಾರ್ಥವ ಪರಮಸ್ತುವಿನಲ್ಲಿ ಅರ್ಪಿಸಿ, ಪದಾರ್ಥಭಾವವಿಲ್ಲದೆ ಪ್ರಸಾದಭಾವವಾದುದೆ, ಪ್ರಸಾದವ ಪಡೆದುದು ಈ ಭೇದವನರಿಯದೆ, ಪರದ್ರವ್ಯವಾದ ಸಕಲ ಪದಾರ್ಥವನರ್ಪಿಸಿ, ಪ್ರಸಾದವ ಪಡೆದೆವೆಂಬ ಭ್ರಾಂತಬಾಲಕರಿಂದ ಬಿಟ್ಟು ಬಾಲಕರುಂಟೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?
--------------
ಸ್ವತಂತ್ರ ಸಿದ್ಧಲಿಂಗ
ಪಕ್ವ ಫಲದಲ್ಲಿಹ ಸ್ವಾದುವಿನಂತೆ, ತುಪ್ಪದಲ್ಲಿಹ ಕಂಪಿನಂತೆ, ಚಿನ್ನದಲ್ಲಿಹ ಬಣ್ಣದಂತೆ, ಅಲ್ಲಿಯೆ ಹುಟ್ಟಿ ಅಲ್ಲಿಯೆ ತೋರುವಂತೆ, ಎನ್ನಂತರಂಗದಲ್ಲಿರ್ದು ತೋರುತ್ತಿಹ ನಿಮ್ಮ ನಿಜವನು, ನಿಮ್ಮಿಂದರಿದೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯ ಆತ್ಮನೆಂಬ ಅಷ್ಟತನುಗಳಲ್ಲಿ, ಶಿವನಧಿಷಾ*ತೃವಾದನೆಂದಡೆ ಅಷ್ಟತನುಗಳು ಶಿವನಾಗಲರಿಯವು. ಮತ್ತೆ, ಶಿವನ ಬಿಟ್ಟು ಬೇರೆ ತೋರಲರಿಯವು. ಅಷ್ಟತನುಗಳೆಲ್ಲ ಸೋಪಾಧಿಕವಲ್ಲದೆ ನಿಜತನುವಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಂಗೆ. ಅಷ್ಟತನುಮೂರ್ತಿಯೆಂಬುದುಪಚಾರವು.
--------------
ಸ್ವತಂತ್ರ ಸಿದ್ಧಲಿಂಗ
ಪಂಚೇಂದ್ರಿಯವೆಂಬ ಹೆಡೆಯನುಳ್ಳ ಸಂಸಾರಸರ್ಪ ದಷ್ಟವಾಗಲು, ಪಂಚವಿಷಯವೆಂಬ ವಿಷ ಹತ್ತಿ, ಮೂರ್ಛಾಗತರಾದರೆಲ್ಲ ಸಮಸ್ತ ಲೋಕದವರೆಲ್ಲ. ಸರ್ವರ ಕಚ್ಚಿ ಕೂಡಿಯಾಡುವ ಸರ್ಪನ ಬಾಯ, ಕಟ್ಟಲರಿಯದೆ ಮರಣವಾದರಲ್ಲ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನರಿಯದವರೆಲ್ಲ.
--------------
ಸ್ವತಂತ್ರ ಸಿದ್ಧಲಿಂಗ
ಪೂರ್ವದ್ವಾರಮಂ ಬಂಧಿಸಿ ಅಧೋದ್ವಾರವ ಬಲಿದು ಊಧ್ರ್ವದ್ವಾರವ ತೆಗೆದು ಎವೆ ಹಳಚದೆ ಒಳಗೆ ನಿಮ್ಮ ನೋಡುತ್ತಿದ್ದೆನಯ್ಯಾ. ಬಂದುದ ಹೋದುದನರಿಯದೆ ನಿಮ್ಮ ನೋಡುತ್ತಿದ್ದೆನಯ್ಯಾ. ಮನ ನಿಂದುದು ನಿಮ್ಮಲ್ಲಿ. ಹೆರೆಹಿಂಗದ ಪರಮ ಸುಖ ದೊರೆಕೊಂಡಿತ್ತು. ಇನ್ನಂಜೆನಂಜೆ ಜನನ ಮರಣವೆರಡೂ ಹೊರಗಾದವು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ, ನಿಜಸುಖ ಸಮನಿಸಿತ್ತಾಗಿ.
--------------
ಸ್ವತಂತ್ರ ಸಿದ್ಧಲಿಂಗ
ಪ್ರಸಾದವ ಬಯಸಿ ಪರವನರಿದೆನೆಂಬವಂಗೆ, ಬೇರೆ ಮತ್ತೆ ಸಾಧಿಸಿ ಅರಿದೆನೆಂಬ ಬಳಲಿಕೆಯದೇಕೇ? ಜಂಗಮವೆ ಲಿಂಗವೆಂದು ನಂಬಿ ಪೂಜೆಯ ಮಾಡಲು, ಅದು ತಾನೆ, ಲಿಂಗಪೂಜೆ ನೋಡಾ. ಆ ಜಂಗಮ ಭಕ್ತಿಯಿಂದ ಪ್ರಸಾದ ಸಾಧ್ಯವಹುದು. ಮುಂದೆ ಪರವನರಿವ. ಇದು ಕಾರಣ, ಜಂಗಮಭಕ್ತಿಯೇ ವಿಶೇಷ, ಇದು ತಪ್ಪದು, ನಿಜಗುರು ಸ್ವತಂತ್ರಲಿಂಗೇಶ್ವರನ ನಂಬಿ ನಿಜವನೈದುವಂಗೆ.
--------------
ಸ್ವತಂತ್ರ ಸಿದ್ಧಲಿಂಗ
ಪದಾರ್ಥದ ಪೂರ್ವವ ಕಳೆದಲ್ಲದೆ ಹಿಡಿಯಬಾರದು. ಮುಟ್ಟಿ ಕೊಡಬಾರದು. ಮುಟ್ಟದೆ ಕೊಡಬಾರದು. ಅಂದೆಂತೆಂದೆಡೆ: ತನ್ನ ಹಸ್ತದೊಳಗೆ ಲಿಂಗದ ಹಸ್ತವ ಕೂಡಿ ಮುಟ್ಟದೆ ಮುಟ್ಟಿಸುವ ಕ್ರಮವನರಿದು ಕೊಡಬೇಕು. ರುಚಿಗಳ ತಾನರಿದು ಕೊಡಬಾರದು. ತಾನರಿಯದೆ ಕೊಡಬಾರದು. ಅದೆಂತೆಂದಡೆ: ತನ್ನ ಜಿಹ್ವೆಯಲ್ಲಿ ಲಿಂಗದ ಜಿಹ್ವೆಯ ಕೂಡಿ ರುಚಿಗಳನರ್ಪಿಸುವ ಕ್ರಮವನರಿದು ಕೊಡಬೇಕು. ಅನರ್ಪಿತವ ಸೋಂಕಬಾರದು. ಅರ್ಪಿತಕ್ಕೆ ಬಂದುದ ನೂಕಬಾರದು. ಇಂತಿವರ ವಿಚಾರವನರಿದು ಅರ್ಪಿಸಿ ಪ್ರಸಾದವ ಭೋಗಿಸುವಾತನೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಸರ್ವ ಸುಯಿಧಾನಿ.
--------------
ಸ್ವತಂತ್ರ ಸಿದ್ಧಲಿಂಗ
ಪರಿಶುದ್ಧ ಮನದಿಂದ ಲಿಂಗವ ಧರಿಸಿ, ನಿಯಮ ವ್ರತ ಶೀಲ ಧರ್ಮದಲ್ಲಿ ನಿರತನಾದ ಭಕ್ತನ, ಅಂಗವೆಂಬ ಅರಮನೆಯಲ್ಲಿಹ ಲಿಂಗಕ್ಕೆ ಮನವೆ ಮಂಚ, ನೆನಹೆ ಹಾಸುಗೆ, ಅನುಭಾವವೆ ಒರಗು, ಶಾಂತಿಯೆ ಆಲವಟ್ಟವು, ಸಮತೆಯೆ ಸಂತೋಷವಾಗಿ, ಸದ್ಭಕ್ತನ ಹೃದಯ ಸಿಂಹಾನಸದಲ್ಲಿ ಮೂರ್ತಿಗೊಂಡಿಪ್ಪನಯ್ಯಾ, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಪೃಥ್ವಿಯ ಬೀಜ ಅಪ್ಪುವ ಕೂಡಿ, ಅಗ್ನಿಯಲ್ಲಿ ಮೊಳೆದೋರಿತ್ತು. ವಾಯುವಿನಲ್ಲಿ ಶಾಖೆದೋರಿ, ಆಕಾಶದಲ್ಲಿ ಪಲ್ಲವಿಸಿತ್ತು. ಮಹದಾಕಾಶದಲ್ಲಿ ಫಲದೋರಿ, ಶೂನ್ಯದಲ್ಲಿ ಹಣ್ಣಾಯಿತ್ತು. ಅದು ನಿರಾಳದಲ್ಲಿ ರಸತುಂಬಿ, ನಿರ್ವಯಲಲ್ಲಿ ತೊಟ್ಟು ಬಿಟ್ಟಿತ್ತು. ಆ ಹಣ್ಣ ಪ್ರಭುದೇವರಾರೋಗಿಸಿದರಾಗಿ ನಿರ್ವಯಲಾದರು. ಆ ಪ್ರಭುದೇವರಾರೋಗಿಸಿ ಮಿಕ್ಕ ಪ್ರಸಾದವ ಬಸವಣ್ಣ ಮೊದಲಾದಸಂಖ್ಯಾತ ಮಹಾಗಣಂಗಳು ಸ್ವೀಕರಿಸಿದರಾಗಿ ಶಿವನೊಳಗಾದರು. ನಾನು ಮಹಾಗಣಂಗಳ ಪ್ರಸಾದವನಾರೋಗಿಸಿದೆನಾಗಿ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು, ತನ್ನೊಳಗೆನ್ನನಿಂಬಿಟ್ಟುಕೊಂಡನು.
--------------
ಸ್ವತಂತ್ರ ಸಿದ್ಧಲಿಂಗ
ಪಿಂಡ ಪಿಂಡವೆಂದೇನು? ತನು ಪಿಂಡವೆ? ಮನ ಪಿಂಡವೆ? ವಾಯು ಪಿಂಡವೆ? ಅಲ್ಲ: ಆದಿ ಪಿಂಡವಿಡಿದು ಬಂದ ಜ್ಞಾನಪಿಂಡವೆ ಪಿಂಡ. ಅದನರಿಯಲಿಲ್ಲ. ಅದು ಕ್ಷೀರದೊಳಗಣ ಅಜ್ಯದಂತೆ. ಪಾಷಾಣದೊಳಗಣ ಪಾವಕದಂತೆ ಅಡಗಿರ್ಪುದಾಗಿ. ಅಂತಪ್ಪ ನಿರ್ಮಲ ಪಿಂಡ ನಿಮ್ಮ ಶರಣಂಗಾಯಿತ್ತು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಪ್ರಾಣಾಪಾನಸಂಘಟದಿಂದ ಪ್ರಾಣನ ಗುಣವಳಿದು ಪ್ರಾಣಮಯಲಿಂಗವಾದ ಪ್ರಾಣಲಿಂಗಕ್ಕೆ ಸಮತೆಯೇ ಸ್ನಾನೋದಕ. ಪರಿಪೂರ್ಣಭಾವವೇ ವಸ್ತ್ರ ಶಕ್ತಿಗಳೇ ಯಜ್ಞಸೂತ್ರ. ವಿದ್ಯೆಯೇ ಸುಗಂಧ. ಭೂತದಯೆಯೇ ಅಕ್ಷತೆ. ಪಂಚ ವಿಷಯಂಗಳೇ ಪುಷ್ಟ. ಅಂತಕರಣಂಗಳೇ ಧೂಪ. ಪಂಚೇಂದ್ರಿಯಂಗಳೇ ದೀಪ. ಸುಖದುಃಖಶೂನ್ಯವಾದ ಆತ್ಮಕಳೆಯೇ ನೈವೇದ್ಯ. ಗುಣತ್ರಯಂಗಳೇ ತಾಂಬೂಲ. ಪ್ರಾಣಸಮರ್ಪಣವೇ ನಮಸ್ಕಾರವು. ಶಾಂತಿಯೇ ಪುಷ್ಪಾಂಜಲಿಯಾಗಿ, ಈ ಪರಿಯಿಂದ, ಪ್ರಾಣಲಿಂಗಪೂಜೆಯ ಮಾಡಬಲ್ಲಾತನೇ ಪ್ರಾಣಲಿಂಗಿ. ಆತನೇ ನಿಜಾನುಭಾವಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಆತನೇ ನಿರ್ಮಳ ಜ್ಞಾನಿ.
--------------
ಸ್ವತಂತ್ರ ಸಿದ್ಧಲಿಂಗ
ಪ್ರಾಣಲಿಂಗೈಕ್ಯವಾದ ಬಳಿಕ ವಿಧಿ ನಿಷೇಧ, ಪುಣ್ಯ ಪಾಪ ಮಾನ ಅಪಮಾನ, ಹೆಚ್ಚು ಕುಂದುಗಳೆಂಬವೇನೂ ಇಲ್ಲ. ಆತನಿರವು ಬೆಂದ ಪಟದಂತೆ, ಬಯಲ ಚಿತ್ರಿಸಿದ ರೂಹಿನಂತೆ, ತನ್ನ ತೋರದೆ ತಾನೇ ಶಿವನಾಗಿ ನಿಂದ, ನಿಜಗುರು ಸ್ವತಂತ್ರಸಿದ್ಧಲಂಗೇಶ್ವರ ನಿಮ್ಮ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ಪರಮೇಶ್ವರನ ಪರಮೈಶ್ವರ್ಯವೆನಿಪ, ನಿತ್ಯ ನಿಜವಾದ ವಿಭೂತಿಯನು, ಭಕ್ತಿಯಿಂದೊಲಿದು ಧರಿಸಲು, ನಿತ್ಯರಪ್ಪರು ನೋಡಿರೇ. ಮುನ್ನ ಜಮದಗ್ನಿ ಕಶ್ಯಪ ಅಗಸ್ತ್ಯ ಮೊದಲಾದ ಋಷಿಗಳು, ಸಮಸ್ತ ದೇವತೆಗಳು, ಮೂರು ಮೂರು ಬಾರಿ, ಆಯುಷ್ಯವ ಪಡದೆರೆಂದು ವೇದಗಳು ಸಾರುತ್ತಿವೆ. `ತ್ರಿಯಾಯುಷಂ ಜಮದಗ್ನೇ:ಕಶ್ಯಪಸ್ಯ ತ್ರಿಯಾಯುಷಂ ಅಗಹಸ್ತ್ಯಸ್ಯ ತ್ರಿಯಾಯುಷಂ ಯುದ್ದೇವಾನಾಂ ತ್ರಿಯಾಯುಷಂ ತನ್ಮೇ ಅಸ್ತು ತ್ರಿಯಾಯುಷಂ' ಎಂದುವು ಶ್ರುತಿಗಳು. ಇದನರಿದು ಧರಿಸಿರೇ, ನಿಜಗುರುಸ್ವತಂತ್ರಸಿದ್ಧಲಿಂಗೇಶ್ವರನನೊಲಿಸಬಲ್ಲಡೆ.
--------------
ಸ್ವತಂತ್ರ ಸಿದ್ಧಲಿಂಗ
ಪರಮಾತ್ಮಲಿಂಗದಲ್ಲಿ ಅರ್ಪಿತವಾಗಿ ಉಚ್ಚರಿಸಿ ಕೊಂಬುದೊಂದಕ್ಷರದ ನೆಲೆಯನರಿದು ಪ್ರಾಣವ ಲಿಂಗಕ್ಕೆ ಅರ್ಪಿತವ ಮಾಡಿ ಅಂಗವ ಲಿಂಗಕ್ಕೆ ಅರ್ಪಿತವ ಮಾಡಿದಡೆ ಅತಂಗೆ ರುಜೆ ಕರ್ಮ ಮರಣಂಗಳಿಲ್ಲ. ಆತನು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ, ಸರ್ವಾರ್ಪಿತ ಸಾವಧಾನ ಪ್ರಸಾದಭೋಗಿಯೆನಿಸುವನು.
--------------
ಸ್ವತಂತ್ರ ಸಿದ್ಧಲಿಂಗ
ಪ್ರಸಾದ ಪ್ರಸಾದವೆಂದೆಂಬರು, ಪ್ರಸದಾದಾದಿಕುಳವನಾರು ಬಲ್ಲರು? ಪ್ರಸಾದವೆಂಬುದು ಅತಕ್ರ್ಯ ಅಪ್ರಮಾಣವು. ಗುರುವಿನಲ್ಲಿ ಶುದ್ಧಪ್ರಸಾದವೆನಿಸಿತ್ತು. ಲಿಂಗದಲ್ಲಿ ಸಿದ್ಧಪ್ರಸಾದವೆನಿಸಿತ್ತು. ಜಂಗಮದಲ್ಲಿ ಪ್ರಸಿದ್ಧಪ್ರಸಾದವೆನಿಸಿತ್ತು. ಇಂತೀ ತ್ರಿವಿಧಮುಖವೊಂದೇ ಪ್ರಸಾದವಾಗಿ ತೋರಿ ಮತ್ತೆ ವಿಶ್ವದೊಳಗೆ ವಿಶ್ವತೋಮುಖವಾಗಿ ಪ್ರಕಾಶಿಸುತ್ತ, ಎನ್ನಂತರಂಗದಲ್ಲಿ ಬೆಳಗುವ ಮಹಾಪ್ರಸಾದವು ಎನ್ನ ಸರ್ವಾಂಗಮಯವಾಗಿ ತೋರುತ್ತಿದೆ. ಶಿವ! ಶಿವಾ!! ನಿಮ್ಮ ಪ್ರಸಾದದ ಮಹಿಮೆಯನೇನೆಂದುಪಮಿಸುವೆನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಪ್ರಸಾದವನು ಪ್ರಸಾದಿಯನು ಪದಾರ್ಥದ ಭೇದವನು ಅರಿವುದರಿದು ನೋಡಾ. ಮುನ್ನಾದಿಯ ಪ್ರಸಾದವು ಅರ್ಪಣಕ್ಕೆ ಬಂದಲ್ಲಿ ಉಪಚಾರದಿಂದ ಪದಾರ್ಥವೆನಿಸಿತ್ತು. ಅರ್ಪಣದ ಮೇಲೆ ಪ್ರಸಾದವೆನಿಸಿತ್ತು. ಈ ಪ್ರಸಾದದಾದಿ ಕುಳವ ಬಲ್ಲಡೆ, ಆತ ಪ್ರಸಾದಿ. ಪ್ರಸಾದಿಯ ಬಿಟ್ಟು ಪ್ರಸಾದವಿಲ್ಲ, ಪ್ರಸಾದ ಬಿಟ್ಟು ಪ್ರಸಾದಿಯಿಲ್ಲ. ಪ್ರಸಾದವೂ ಪ್ರಸಾದಿಯೂ ಕೂಡಿ ಸೋಂಕದ ಪದಾರ್ಥವಿಲ್ಲ. ಇದು ಕಾರಣ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಪ್ರಸಾದಿಯ ಪ್ರಸಾದದಿಂದ, ಮೂರು ಲೋಕವೆಲ್ಲಾ ಜೀವಿಸಿತ್ತಾಗಿ, ಅಂತಪ್ಪ ಪ್ರಸಾದಿಗೆ ನಮೋ ನಮೋ ಎನುತ್ತಿರ್ದೆನು.
--------------
ಸ್ವತಂತ್ರ ಸಿದ್ಧಲಿಂಗ