ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನುವಿಂಗೆ ತನುರೂಪಾಗಿ ತನುವಿಂಗಾಧಾರವಾದೆ. ಮನಕ್ಕೆ ಮನರೂಪಾಗಿ ಮನಕ್ಕೆ ನೆನಹಿನ ಶಕ್ತಿಯನಿತ್ತು ಮನಕ್ಕಾಧಾರವಾದೆ. ಪ್ರಾಣಕ್ಕೆ ಪ್ರಾಣರೂಪಾಗಿ. ಪ್ರಾಣಕ್ಕಾಧಾರವಾದೆ. ಎನ್ನಂಗೆ ಮನ ಪ್ರಾಣದಲ್ಲಿ ನೀವೆ ನಿಂದು, ಸರ್ವಕರಣಂಗಳ ನಿಮ್ಮವ ಮಾಡಿಕೊಂಡ ಕಾರಣ ಎನ್ನ ಪ್ರಾಣ ನಿಮ್ಮಲ್ಲಿ ಆಡಗಿತ್ತು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ತತ್ತ್ವ ಮೂವತ್ತಾರರಿಂದತ್ತತ್ತ ಪರಕ್ಕೆ ಪರವಾದ ಗುರುವಿನ ಅಂಗ ತಾನೆ ಸಕಲ ನಿಃಕಲರೂಪಾದ ಲಿಂಗವು. ಅದು ತಾನೆ ಮತ್ತೆ ಸಕಲಾಂಗವೆನಿಸುವ ಜಂಗಮವು. ಆ ಜಂಗಮವು ತಾನೆ ಗುರುವಿನ ನಿಃಕಲಾಂಗವು. ಆ ಶ್ರೀಗುರುವಿನ ಕಳೆಯಿಂದ ಹುಟ್ಟಿದ ನಿಜಸುಖವೇ ಪ್ರಸಾದಲಿಂಗವು, ಇಂತು ಗುರು ಲಿಂಗ ಜಂಗಮವೆನಿಸುವ ಶುದ್ಧ ಸಿದ್ಧ ಪ್ರಸಿದ್ಧ ಲಿಂಗಕಳೆಗಳಿಂದತಿಶಯವಾಗಿ ಬೆಳಗುವ ಶರಣ ತಾನೇ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ತುದಿ ಮೊದಲಾಯಿತ್ತು. ಮೊದಲೇ ತುದಿಯಾಯಿತ್ತು. ತುದಿ ಮೊದಲೆಂಬವೆರಡಿಲ್ಲದೆ ಹೋಯಿತ್ತು. ಮುನ್ನೆಂತಿದ್ದುದಂತೆ ಆಯಿತ್ತು. ಸಹಜದ ನಿಲವು ಉದಯಸಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣಂಗೆ.
--------------
ಸ್ವತಂತ್ರ ಸಿದ್ಧಲಿಂಗ
ತನ್ನೊಳಡಗಿಹ ಅನಂತಕೋಟಿ ಬ್ರಹ್ಮಾಂಡಗಳಿಗೆ ಉತ್ಪತ್ತಿ ಸ್ಥಿತಿ ಲಯಾಶ್ರಯವಾದ ಮಹಾ ಚಿದ್ಭಾಂಡವೇ ತನ್ನಿರವೆಂದರಿದ ಕಾರಣ ಸರ್ವತತ್ತ್ವ ಸಾಕ್ಷಿಣಿ ವಿಶ್ವಪ್ರಕಾಶ ಪರಾಶಕ್ತಿರೂಪ ವಿಶ್ವತೋಮುಖ ಚಿದಾತ್ಮಕ ಪರಮಾನಂದಮಯ ತಾನೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲವು.
--------------
ಸ್ವತಂತ್ರ ಸಿದ್ಧಲಿಂಗ
ತನ್ನಲ್ಲಿ ಸುಗುಣವ ಸಂಪಾದಿಸ ಹೋಹುದೀ ಮನವು. ಇ[ತರ] ದುರ್ಗುಣವ ಸಂಪಾದಿಸ ಹೋಹುದೀ ಮನವು. ಇಂತೀ ಮನವಿದು ನಗೆಗೆಡೆಯ ಮಾಡಿ ಕಾಡಿತ್ತು. ಈ ಮನವ ನಿಲಿಸುವರೆನ್ನಳವಲ್ಲ. ಅಗಡೆತ್ತು ಹಗ್ಗವ ಹರಿದುಕೊಂಡಂತಾಯಿತ್ತು. ಸದ್ಬೋಧೆಯೆಂಬ ಮೇವ ಕೊಟ್ಟು ಈ ಮನವ ತಿದ್ದಯ್ಯಾ ನಿಮ್ಮ ಧರ್ಮ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ತನುವಿಂಗೆ ತನುವಾಗಿ, ಮನಕ್ಕೆ ಮನವಾಗಿ, ಅರಿವಿಂಗೆ ಅರಿವಾಗಿ, ತೆರಹಿಲ್ಲದಿರ್ದ ಘನವ, ಒಮ್ಮೆ ಆಹ್ವಾನಿಸಿ ನೆನೆದು, ಒಮ್ಮೆ ವಿಸರ್ಜಿಸಿ ಬಿಟ್ಟಿಹೆನೆಂದಡೆ ತನ್ನಳವೇ? ಪರಿಪೂರ್ಣ ಪರಶಿವನು, ಆರಾರ ಭಾವಕಲ್ಪನೆ ಹೇಗೆ ಹೇಗೆತೋರಿತೆಂದಡೆ ತೋರಿದಂತೆ, ಖಂಡಿತನಹನೇ ಆಗಲರಿಯನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ತಪವೆತ್ತ? ಹೆರರ ಕೇಡಿಂಗೆ ಬಗೆವುದೆತ್ತ? ಜಪವೆತ್ತ? ಶರಣರ ಮೇಲೆ ಅನೃತವ ನುಡಿವುದೆತ್ತ? ಪಂಚಾಚಾರವೆತ್ತ? ಪಾತಕಕ್ಕೆ ಮನಬಗೆವುದೆತ್ತ? ಇಂತೀ ಹೊರಬಳಿಕೆಯ, ಲೋಕರಂಜನೆಯಲ್ಲಿರ್ಪವರಿಗೆ ನಾನಂಜುವೆ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನೀನಂಜಿ, ದೂರದಲೋಡುವೆ.
--------------
ಸ್ವತಂತ್ರ ಸಿದ್ಧಲಿಂಗ
ತ್ರಾಸಿನ ತೂಕದಂತೆ, ಅಂಗ ಲಿಂಗ ಸಮವಾಗಿ, ಬಿಲುಗಾರನೆಸುಗೆಯ ಬಾಣದ ಕೂಡೆ ಕಾಣಿಸುವ ಘಾಯದಂತೆ, ಹೂಣಿಸಿದರ್ಪಿತಸಂಧಾನವೆಸವುತ್ತ, ಅಕ್ಷರದೊಡನೆ ತೋರುವ ಶಬ್ದದಂತೆ, ಅಂಗ ಲಿಂಗೈಕ್ಯವನರಿದಾಂತಗೆ ಅನರ್ಪಿತವೆಂಬುದುಂಟೇ? ಇಲ್ಲ. ಆತ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೊಳಗೆ, ಅಡಗಿ ಅರ್ಪಿಸುವ ಸುಯಿಧಾನಿ ತಾನು.
--------------
ಸ್ವತಂತ್ರ ಸಿದ್ಧಲಿಂಗ
ತಾನೇ ಲಿಂಗವೆಂದರಿದು, ಮತ್ತೆ ಬೇರೆ ಲಿಂಗವಿದೆಂದು ಕಲ್ಪಿಸಿ ರೂಹಿಸಿ ಭಾವಿಸಿ ನೋಡಲು ಅದು ಭಾವಸಂಕಲ್ಪವಲ್ಲದೆ ನಿಜವಲ್ಲ. ಶುಕ್ತಿಯಲ್ಲಿ ರಜತಭಾವ ತೋರಿತ್ತೆಂದಡೆ, ಅದು ಸಹಜವೇ? ಇದು ಭಾವಸಂಕಲ್ಪವೆಂದರಿದಾಗವೆ ಭಾವ ನಿಃಪನ್ನವಾಗಿ ಪರಿಪೂರ್ಣ ಬೋಧಪರಾನಂದರೂಪ ತಾನೆ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನೆ, ಲಿಂಗವಲ್ಲದೆ ಬೇರೆ ಲಿಂಗವಿಲ್ಲ.
--------------
ಸ್ವತಂತ್ರ ಸಿದ್ಧಲಿಂಗ
ತಾನೆಂಬುದನರಿಯ, ಪರವೆಂಬುದನರಿಯ, ಸ್ವಯ ಪರ ತನ್ನೊಳಗಡಗಿ ತಾನೆ ಪರಿಪೂರ್ಣನಾಗಿ, ವಿಶ್ವಾಧಿಪತಿಯಾದ ಅಖಂಡ ಸಂವಿಧಾಕರ ಪರಬ್ರಹ್ಮವು ತಾನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ತಾಳಮರದ ಮೇಲಣ ಕೋಡಗ, ತಾಳರಸವ ಕೊಂಡು ದೆಸೆದೆಸೆಯ ಶಾಖೆಗಳಿಗೆ ಲಂಘಿಸಿ, ಹರಿದಾಡುತ್ತಿದ್ದಿತು ನೋಡಾ. ಹರಿದಾಡುವ ಕೋಡಗವ ಹಿಡಿದು ಕಂಬದಲ್ಲಿ ಕಟ್ಟಿದರೆ, ಕಂಬದ ತುದಿಯ ಮಣಿಯನೇರಿ, ನಿಂದು ನೋಡುತ್ತಿದ್ದಿತ್ತು ನೋಡಾ. ಕಂಬ ಮುರಿದು ವಣಿ ಬಯಲಾಯಿತ್ತು, ಕೋಡಗವಳಿಯಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನ ಮುಂದೆ.
--------------
ಸ್ವತಂತ್ರ ಸಿದ್ಧಲಿಂಗ
ತಪ ಸತ್ಕಿ ್ರೀ ಜಪ ಧ್ಯಾನ ಜ್ಞಾನಂಗಳಿಂದ ಮಾಡುವ ಭಕ್ತಿಗೆ ಶಿವನೊಲಿವ. ಶಿವಶರಣರೊಲಿವರಯ್ಯ. ಹಿಂದೆ ಭವನಾಶ, ಮುಂದೆ ಕೈವಲ್ಯವಯ್ಯ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ತನ್ನಲ್ಲಿ ತಾನು ಪ್ರತ್ಯಕ್ಷಾನುಭಾವದಿಂದ ತಿಳಿದುನೋಡಿ, ಆ ತಿಳಿದ ತಿಳಿವಿನೊಳಗೆ, ಲಿಂಗದ ನಿಜವ ಕಂಡು ಕಾಂಬ ಜ್ಞಾನ ತಾನೆಂದರಿದು, ಕಾಂಬುದು ಕಾಣಿಸಿಕೊಂಬು[ದು] ಎರಡೊಂದಾದ ನಿಲವು ತಾನೆ ನಿಮ್ಮ ನಿಲುವು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ತಾನು ಲಿಂಗಾವಧಾನಿಯಾಗಿ, ಪದಾರ್ಥ ತನ್ನಂಗವ ಸೋಂಕದ ಮುನ್ನ, ಪದಾರ್ಥದ ಪೂರ್ವಾಶ್ರಯವ ಕಳೆದು, ಲಿಂಗಮುಖವ ಮಾಡಿ, ತನು ಮನ ಪ್ರಾಣ ಪ್ರಸಾದ ಸಂತೃಪ್ತಿಯನೆಯ್ದಿ, ಪ್ರಸಾದಸುಖಾಬ್ಧಿಯೊಳೋಲಾಡುತ್ತ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಪ್ರಸಾದ ಸಂಪತ್ತಿನಲ್ಲಿಹನು.
--------------
ಸ್ವತಂತ್ರ ಸಿದ್ಧಲಿಂಗ
ತಟಿದಂಕುರದಂತೆ ಕ್ಷಣದಲ್ಲಿ ತೋರಿಯಡಗುವ ಸಂಸಾರ. ಇದರಲ್ಲೇನು ಲೇಸಕಂಡು, ನಿತ್ಯಾನಂದ ಚಿದಾತ್ಮಸುಖವ ಬಿಡುವೆ? ಈ ಸಂಸಾರ ಸ್ಥಿರವಲ್ಲ. ಬೇಗ ಗುರು ಚರಣವ ದೃಢವಿಡಿ. ಕಾಬೆ, ಮುಂದೆ ನೀನು ಕೈವಲ್ಯವ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲೊಂದಹ ಸೌಖ್ಯವನು.
--------------
ಸ್ವತಂತ್ರ ಸಿದ್ಧಲಿಂಗ
ತನುವೆಂಬ ಭೂಮಿಯ ಮೇಲೆ, ಶೃಂಗಾರದ ಇಂದ್ರಕೂಟಗಿರಿಯೆಂಬ ಕೈಲಾಸದಲ್ಲಿ ಉತ್ತರ ದಕ್ಷಿಣ ಪಶ್ಚಿಮದಳದ ಆತ್ಮ ಶಕ್ತಿ ಬಿಂದು ನಾದಗಳ ಮಧ್ಯದಲ್ಲಿ ಶೂನ್ಯಸಿಂಹಾಸನವೆಂಬ ಸುಜ್ಞಾನಪೀಠದ ಮೇಲೆ ನೀವು ಮೂರ್ತಿಗೊಂಡಿಹಿರಾಗಿ ಕಂಡು ಹರುಷಿತನಾದೆನು. ಸೂರ್ಯಮಂಡಲದ ದ್ವಾತ್ರಿಂಶದಳದ ರುದ್ರರು ರುದ್ರಶಕ್ತಿಯರು ನಿಮ್ಮನೋಲೈಸುತ್ತಿಹರು. ಚಂದ್ರಮಂಡಲದ ಷೋಡಶದಳದ ರುದ್ರರು ರುದ್ರಶಕ್ತಿಯರು ನಿಮ್ಮನೋಲೈಸುತ್ತಿಹರು. ಅಗ್ನಿಮಂಡಲದ ಅಷ್ಟದಳದ ರುದ್ರರು ರುದ್ರಶಕ್ತಿಯರು ನಿಮ್ಮನೋಲೈಸುತ್ತಿಹರು. ಈ ಪರಿಯಿಂದ ದೇವರದೇವನ ಓಲಗವನೇನೆಂದು ಹೇಳುವೆನು. ಮತ್ತೆ ಭೇರಿ ಮೃದಂಗ ನಾಗಸರ ಕೊಳಲು ವೀಣೆ ಕಹಳೆ ಘಂಟೆ ಶಂಖನಾದ ನಾನಾ ಬಹುವಿಧದ ಕೇಳಿಕೆಯ ಅವಸರದಲ್ಲಿ ರಾಜಿಸುವ ರಾಜಯೋಗದ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣರಾದ ರಾಜಯೋಗಿಗಳೇ ಬಲ್ಲರು.
--------------
ಸ್ವತಂತ್ರ ಸಿದ್ಧಲಿಂಗ
ತಾಲು ಮೂಲ ದ್ವಾದಶಾಂತದ ಮೇಲಣ ಚಿತ್ಕಲಾ ಸೂರ್ಯನು ನೆತ್ತಿಯ ಮಧ್ಯಮಂಡಲದಲ್ಲಿ ನಿಂದು, ಉದಯಾಸ್ತಮಯವಿಲ್ಲದೆ ಬೆಳಗಲು, ಮೂರು ಲೋಕದ ಕತ್ತಲೆ ಹರಿದು ಹೋಯಿತ್ತು ನೋಡಾ. ಆ ಮೂರು ಲೋಕದ ಕಳ್ಳರೆಲ್ಲಾ ಬೆಳ್ಳರಾಗಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನ ಬೆಂಬಳಿಯಲ್ಲಿಯೆ ಲಿಂಗವನಾರಾಧಿಸುತ್ತಿರ್ದರು.
--------------
ಸ್ವತಂತ್ರ ಸಿದ್ಧಲಿಂಗ
ತತ್ತಿಯೊಳಗಣ ಪಕ್ಷಿಯಂತೆ, ಎತ್ತಲೆಂದರಿಯದೆ ಅಜ್ಞಾನದ ಕತ್ತಲೆಯೊಳಗೆ ಸಿಕ್ಕಿ ದುಃಖಗೊಳುತ್ತಿಹರೆಲ್ಲರು. ದಿವಾ ರಾತ್ರಿ ಇಂತು ದುಃಖವನನುಭವಿಸುತ್ತ, ಕಾಯುವ ಹೊತ್ತು ಬಳಲುವ ಜೀವರುಗಳು, ತಾವಾರೆಂದರಿಯದೆ ನೋವುತ್ತ ಬೇವುತ್ತ ಸಾವುತ್ತಿರ್ಪರವರಿಗಿನ್ನೆಂದಿಂಗೆ ಮುಕ್ತಿಯಹುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?.
--------------
ಸ್ವತಂತ್ರ ಸಿದ್ಧಲಿಂಗ
ತೋರಿಯಡಗುವ ಮೇಘಾಡಂಬರದಂತೆ, ತನುವಿನ ತೋರಿಕೆ. ಹೀಗೆಂದರಿದು ನಿತ್ಯತ್ವವ ಪಡೆದಹಂಗೆ, ಮತ್ತೇಕೆ ಈ ದೇಹವ ಮಮಕರಿಸುವೆ? ಆವಾಗ ಬಿಟ್ಟು ಹೋಹುದೆಂದರಿಯಬಾರದು. ದೇವ ದಾನವ ಮಾನವರೊಳಗಾದವರೆಲ್ಲ ಅಳಿದು, ಹೋಹುದ ಕಂಡು ಕೇಳಿ, ಮತ್ತೆ ತನುವಿನಾಸೆಯೇಕೆ ಬಿಡು. ವಿರಕ್ತನಾಗು ಮರುಳೆ. ಕಾಯಜವೈರಿಯ ಪಾದವ ಬಿಡದಿರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ನಿನ್ನ, ತನ್ನತ್ತಲೊಯ್ವನು.
--------------
ಸ್ವತಂತ್ರ ಸಿದ್ಧಲಿಂಗ
ತೆರಹಿಲ್ಲದ ಕುರುಹಿಲ್ಲದ ಅರಿವಿಗಗೋಚರವಾದ ಮಹಾಪ್ರಸಾದವ ಕೊಂಡು, ತಾ ಪ್ರಸಾದವರೂಪನಾದ ಬಳಿಕ, ಮುಖ್ಯಲಕ್ಷಾ ್ಯರ್ಥ ಮೊದಲಾದ ಸರ್ವಾಲಂಬನ ಉಂಟೇ? ಇಲ್ಲವಾಗಿ. ಮನವಾತ್ಮಜ್ಯೋತಿಯಲಡಗಿ, ಜ್ಞಾನ ಜ್ಞೇಯಂಗಳೇಕವಾದ ಬಳಿಕ, ಮಾತೃಮೇಯ ಪ್ರಮಾಣಾದಿ ವ್ಯವಹಾರಗಳುಂಟೇ? ಇಲ್ಲವಾಗಿ. ಇದು ಕಾರಣ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು, ಶರಣ ನಿಶ್ಚಿಂತ ನಿವಾಸಿ.
--------------
ಸ್ವತಂತ್ರ ಸಿದ್ಧಲಿಂಗ
ತುಂಬಿ, ಇಂಬಿನ ತುಂಬಿ, ಕಾಯ ತುಂಬಿ, ಕರಣ ತುಂಬಿ, ಈರೇಳು ಭುವನವ ತುಂಬಿ, ತುಂಬಿ ಪರಿಮಳವನುಂಡು ಅಂಬರದಲ್ಲಿ ನಿಂದಿತ್ತು. ಸಂಭ್ರಮ ನಿಂದಿತ್ತು. ಮಹಾಘನ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ತುಂಬಿ ತುಳುಕದಂತೆ ಇದ್ದಿತ್ತು.
--------------
ಸ್ವತಂತ್ರ ಸಿದ್ಧಲಿಂಗ
ತನು ಮುಂತಾದ ಕ್ರೀಯಿಂದ ಗುರುಭಕ್ತನಹುದಯ್ಯ. ಮನ ಮುಂತಾದ ಕ್ರೀಯಿಂದ ಲಿಂಗಭಕ್ತನಹುದಯ್ಯ. ಧನ ಮುಂತಾದ ಕ್ರೀಯಿಂದ ಜಂಗಮಭಕ್ತನಹುದಯ್ಯ. ಇಂತು ತನು ಮನ ಧನವ, ಗುರು ಲಿಂಗ ಜಂಗಮಕ್ಕೆ ಕೊಟ್ಟು ತಾ ನಿರ್ಲೇಪಿಯಾದನಯ್ಯ ನಿಮ್ಮ ಭಕ್ತನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ತಿರುಳು ಕರಗಿದ ಬೀಜ ಮರಳಿ ಹುಟ್ಟಬಲ್ಲುದೆ ಅಯ್ಯಾ? ತೊಟ್ಟ ಬಿಟ್ಟ ಹಣ್ಣ ಮರಳಿ ತೊಟ್ಟ ಹತ್ತುವುದೆ ಅಯ್ಯಾ? ನೆಟ್ಟನೆ ಪ್ರಾಣಲಿಂಗದ ನಿಜವನರಿದವ ಮರಳಿ ಹುಟ್ಟಬಲ್ಲನೆ ಹೇಳಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?
--------------
ಸ್ವತಂತ್ರ ಸಿದ್ಧಲಿಂಗ
ತನು ಮನ ಪ್ರಾಣವ ಲಿಂಗಕ್ಕರ್ಪಿಸಿ ತಾನೆ ಲಿಂಗದೊಳಗಡಗಿದ ಪ್ರಸಾದಿ. ಪ್ರಸಾದಿಯೊಳಗೆ ಲಿಂಗವಡಗಿ, ಪ್ರಸಾದವೇ ತಾನಾದ ಪ್ರಸಾದಿಗೆ ಪರಮಪ್ರಸಾದಿಯೆಂಬುದು ಕರತಳಾಮಳಕದಂತೆ ತೋರುತ್ತಿಹುದಾಗಿ ಶಿವ ಶಿವಾ, ಪ್ರಸಾದಿಯ ಘನವನೇನೆಂದುಪಮಿಸಬಹುದು? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನೀನೆ ಬಲ್ಲೆ, ನಾನರಿಯೆನು.
--------------
ಸ್ವತಂತ್ರ ಸಿದ್ಧಲಿಂಗ
ತರಗೆಲೆಯ ಮೆದ್ದು ತಪವಿದ್ದರೂ ಬಿಡದು ಮಾಯೆ. ಗಾಳಿಯನಾಹಾರವ ಕೊಂಡು, ಗುಹೆಯ ಹೊಕ್ಕಡೆಯೂ ಬಿಡದು ಮಾಯೆ. ತನುವಿನಲ್ಲಿ ವ್ಯಾಪಾರ, ಮನದಲ್ಲಿ ವ್ಯಾಕುಳವಾಗಿ ಕಾಡಿತ್ತು ಮಾಯೆ. ಆವಾವ ಪರಿಯಲ್ಲಿಯೂ ಘಾತಿಸಿ ಕೊಲುತ್ತಿದೆ ಮಾಯೆ. ಈ ಪರಿಯ ಬಾಧೆಯಲ್ಲಿ ಬಳಲುತ್ತಿದೆ ಜಗವೆಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿನ್ನವರನು ಈ ಮಾಯಾಸಂಸಾರದ ಬಾಧೆಯಲ್ಲಿ, ಬಳಲದಂತೆ ಮಾಡಯ್ಯ ನಿಮ್ಮ ಧರ್ಮ.
--------------
ಸ್ವತಂತ್ರ ಸಿದ್ಧಲಿಂಗ