ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮರಹೆಂಬುದಾವರಿಸಿದವರಾರಾದಡಾಗಲಿ, ದೇವ ದಾನವ ಮಾನವರೊಳಗಾದವರಾರಾದರೂ, ಮಾಡಬಾರದ ಕರ್ಮವ ಮಾಡಿ, ಬಾರದ ಭವದಲಿ ಬಂದು ಉಣ್ಣದ ಅಪೇಯವ ಉಂಡು, ಕುಡಿದು ಕಾಣದ ದುಃಖವ ಕಂಡು ಸಾಯದ ನಾಯ ಸಾವ ಸತ್ತು ಹೋಹರಿಗೆ ಕಡೆಯಿಲ್ಲ. ಶಿವ ಶಿವ ಮಹಾದೇವ, ನೀನು ಮಾಡಿದ ಬಿನ್ನಾಣದ ಮರವೆಯ ಕಂಡು ನಾನು ಬೆರಗಾದೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಮನ ಮನವ ಬೆರೆಸಿ, ಸ್ನೇಹ ಬಲಿದ ಬಳಿಕ, ನಿನ್ನ ನೆನವುತ್ತಿಪ್ಪೆ ನಾನು, ನನ್ನ ನೆನೆವುತ್ತಿಪ್ಪೆ ನೀನು. ನನಗೂ ನಿನಗೂ ಏನೂ ಹೊರೆಯಿಲ್ಲ. ಇದ ನೀ ಬಲ್ಲೆ, ನಾ ಬಲ್ಲೆ, ನಿನ್ನನಗಲದಿಪ್ಪೆ ನಾನು, ನನ್ನನಗಲದಿಪ್ಪೆ ನೀನು, ಚಿನ್ನ ಬಣ್ಣದಂತೆ ಇಪ್ಪೆವಾಗಿ ಇನ್ನು ಬ್ಥಿನ್ನವುಂಟೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಮುನ್ನಲುಳ್ಳ ಕರ್ಮ ಬೆನ್ನ ಬಿಡದು ನೋಡ. ಜಾತಿ ವಿಜಾತಿಗಳಲ್ಲಿ ತೀವಿ ಭೋಗಕ್ಕೆ ಸಾಧನವಾದ ಪರಿಯ ನೋಡ. ಅಲ್ಲಿಯೆ ಮತ್ತೆ ಮತ್ತೆ ಪುಣ್ಯ ಪಾಪವ ಮಾಡಿ, ಸ್ವರ್ಗನರಕವನೈದುವ ಕರ್ಮಿಗಳು, ಕಣ್ಣುಗೆಟ್ಟು ಮುಂದುಗಾಣದೆ ಪುಣ್ಯ ಪಾಪವ ಬೆನ್ನಲ್ಲಿ ಕಟ್ಟಿ, ರಾಟಾಳದಂತೆ ತನುವ ತೊಡುತ್ತ ಬಿಡುತ್ತ ತಿರುಗುತ್ತಿಹರಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನರಿಯದ ಕರ್ಮಿಗಳ ನೋಡಾ.
--------------
ಸ್ವತಂತ್ರ ಸಿದ್ಧಲಿಂಗ
ಮಾತಾಪಿತರುಗಳಿಲ್ಲದ ಸಹೋದರ ಬಂಧುಗಳಿಲ್ಲದ, ಕುಲಗೋತ್ರಗಳಿಲ್ಲದ ಅಜಾತನು ನೀವು ಕಂಡಯ್ಯ. ಉಪಮಿಸಬಾರದ ಉಪಮಾತೀತನು, ನಿಮ್ಮ ಹೆಸರುಗೊಂಬವರಾರು ಇಲ್ಲ ಕಂಡಯ್ಯ. ಅಸಮಾಕ್ಷ ಅಪ್ರತಿಮ ಶಿವನೆ, ನೀವು ನೆನಯಲಾಗಿ, ನಾದಬಿಂದುಕಳೆಗಳಂಕುರಿತವಾದವು ಕಂಡಯ್ಯ. ನಿಮ್ಮ ಚಾರಿತ್ರ ನಿಮಗೆ ಸಹಜವಾಗಿದೆ, ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಮೂರು ಮಂಡಲದಲ್ಲಿ ತೋರುವ ಜ್ಯೋತಿಯದು ಆರು ದ್ವಾರಂಗಳಲ್ಲಿ ಬೆಳಗುತ್ತಿಹುದು. ಆರು ಸ್ಥಾನದ ಆರು ಪೀಠಂಗಳಲ್ಲಿ ತೋರಿ ಮೀರಿಹುದು. ಬ್ರಹ್ಮರಂಧ್ರದೊಳಗೆ ಆರಕ್ಕೆ ಆರಾಗಿ ಮೀರಿದುದ ಕೂಡಿದವನಾರೂಢಯೋಗಿ ತಾನೇ ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರನಲ್ಲಿ ಬೇರಿಲ್ಲದಿಪ್ಪ ಪರಮಯೋಗಿ.
--------------
ಸ್ವತಂತ್ರ ಸಿದ್ಧಲಿಂಗ
ಮೂರ್ಖನಾಗಲಿ, ಪಂಡಿತನಾಗಲಿ, ಬ್ರಹ್ಮಚಾರಿಯಾಗಲಿ, ಗೃಹಸ್ಥನಾಗಲಿ, ವಾನಪ್ರಸ್ಥನಾಗಲಿ, ಯತಿಯಾಗಲಿ, ಶ್ರೀ ವಿಭೂತಿಯನೊಲಿದು ಧರಿಸಿದಾತನೆ ಧನ್ಯನು. ಆತನೇ ಸರ್ವಾಪತ್ತುಗಳ ತೊಲಗ ನೂಂಕಿ, ಸಮಸ್ತ ಪಾತಕೋಪಪಾತಕಂಗಳು ತೊಲಗಿ, ಶುದ್ಧಾತ್ಮನಹನಯ್ಯ. ``ತ್ರಿಪುಂಡ್ರಂ ಭಸ್ಮನಾ ಕರೋತಿ ಯೋ ವಿದ್ವಾನ್ ಬ್ರಹ್ಮಚಾರೀ ಗೃಹಸ್ಥೋ ವಾನಪ್ರಸ್ಥೋ ವಿದ್ವಾನ್ ಬ್ರಹ್ಮಚಾರೀ ಗೃಹಸ್ಥೋ ವಾನಪ್ರಸ್ಥೋ ಯತಿರ್ವಾ ಸಮಸ್ತಪಾತಕೋ ಪಾತಕೇಭ್ಯಃ ಪೂತೋ ಭವತಿ' ಎಂದು ಶ್ರುತಿ ಸಾರುತ್ತಿರೆ ಇಂತಪ್ಪ ಶ್ರೀ ವಿಭೂತಿಯನರಿದು ಧರಿಸಿ, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ, ಕೂಡಿರಣ್ಣಾ.
--------------
ಸ್ವತಂತ್ರ ಸಿದ್ಧಲಿಂಗ
ಮಾತಿನ ಪಸರದ ವ್ಯವಹಾರದೊಳಗೆ ಸಿಕ್ಕಿ, ನೂಕು ತಾಕುಗೊಳುತ್ತಿರ್ಪವಂಗೆ ಮಹದ ಮಾತೇಕೆ? ಕೊರಳುದ್ದಕ್ಕೆ ಹೂಳಿಸಿಕೊಂಡು, ಮುಗಿಲುದ್ದಕ್ಕೆ ನೆಗೆದೆಹೆನೆಂಬವನ ಹಾಗೆ. ಶಿವನ ಜೋಕೆಯನರಿಯದೇ ಮಾತನಾಡುವ ಮಾತೆಲ್ಲವು, ಮಾತಿನಮಾಲೆಯಲ್ಲದೆ, ಅಲ್ಲಿ ನಿಜವಿಲ್ಲ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ಅವರೆಲ್ಲ ಭೂಭಾರಕರಾದರು.
--------------
ಸ್ವತಂತ್ರ ಸಿದ್ಧಲಿಂಗ
ಮೃತ್ ಕಾಷ* ಷಾಷಾಣಂಗಳಿಂದಲಾದವೆಲ್ಲ ಲಿಂಗವೇ? ಲೋಹ ಬೆಳ್ಳಿ ತಾಮ್ರ ಸುವರ್ಣದಿಂದಲಾದನ್ನೆಲ್ಲ ಲಿಂಗವೇ? ಅಲಲ್ಲ.್ಲ ಅಲ್ಲಿ ಭಾವಿಸುವ ಮನದ ಕೊನೆಯ ಮೊನೆಯಮೇಲೆ ಬೆಳಗುವ ನಿಜ ಬೋಧಾರೂಪು ಲಿಂಗವಲ್ಲದೆ, ಇವೆಲ್ಲ ಲಿಂಗವೇ? ತಿಳಿದು ನೋಡಲು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತಾನೇ ಲಿಂಗವು.
--------------
ಸ್ವತಂತ್ರ ಸಿದ್ಧಲಿಂಗ
ಮನೋವಾಕ್ಕಾಯದಿಂದ ಹುಟ್ಟಿದ ಕರ್ಮ ತೊಟ್ಟನೆ ತೊಳಲಿಸಿ ಬಳಲಿಸಿದಲ್ಲದೆ ಬಿಡದು. ಕರ್ಮವ ಮೀರಿ ನಡೆವ ಬಲ್ಲಿದರನಾರನೂ ಕಾಣೆ. ಬೊಮ್ಮವಾದಿಗಳೆಲ್ಲ ಕರ್ಮಕ್ಕೀಡಾದರು. ಕರ್ಮವು ಅಜ ಹರಿಗಳ ಬಾರದ ಭವದಲ್ಲಿ ಬರಿಸಿತ್ತು. ಕಾಣದ ದುಃಖವ ಕಾಣಿಸಿತ್ತು. ಇನ್ನುಳಿದವರ ಹೇಳಲೇನುಂಟು?. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಆಧೀನವಿಡಿದು ಕಾಡುವ ಕರ್ಮದ ಬಲುಹ ನೋಡಾ.
--------------
ಸ್ವತಂತ್ರ ಸಿದ್ಧಲಿಂಗ
ಮೂಲಮಂತ್ರಾತ್ಮಸ್ವರೂಪದಿಂದ ಸಹಸ್ರಾದಿತ್ಯ ತೇಜೋರೂಪಾಗಿ ಬೆಳಗುತ್ತಿಹ ದೇವರದೇವನಾದ ಮಹಾದೇವನ, ಅನಂತ ಶಕ್ತಿವಂತನ, ವಿಶ್ವಾತ್ಮನಾದ ನಾದಾತ್ಮ ಶಿವನ, ಸದಾ ಸವಾಂಗವು ಕರ್ಣಂಗಳಾಗಿ ಕೇಳಿ ಕೇಳಿ, ಮನ ಮಚ್ಚಿ ಆ ಪರಮಜ್ಞಾನಾನಂದರೂಪನ ನೆನೆನೆನೆದು, ಮರಳಿ ಮರಳಿ ಸರ್ವಾಂಗದಲ್ಲಿ ಸೋಂಕಿ ಸೋಂಕಿ, ಎನ್ನ ಕರಣೇಂದ್ರಿಯಗಳೆಲ್ಲವು ಲಿಂಗಾಕಾರವಾಗಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೊಳಗಡಗಿದವು.
--------------
ಸ್ವತಂತ್ರ ಸಿದ್ಧಲಿಂಗ
ಮನದಲ್ಲಿ ತೋರುವ ನಾನಾ ತೋರಿಕೆಯ ಚಿಂತೆಯಳಿದು ನಿಶ್ಚಿಂತನಾದ ಶಿವಯೋಗಿ, ಏನೊಂದನೂ ಮನದಲ್ಲಿ ಚಿಂತಿಸದೆ ಉದಾಸೀನಪರವಾಗಿ ಶಿವಶಕ್ತ್ಯಾತ್ಯಕವಾದ ಈ ವಿಶ್ವವನು ಜ್ಞಾನಸ್ಥಾನದಲ್ಲಿ ಲಯವನೈದಿಸಿ ಆ ನಿರಾಲಂಬಜ್ಞಾನದಲ್ಲಿ ಮನೋಲಯವಾದ ಶರಣಂಗೆ ಹೊರಗೊಳಗು ಊಧ್ರ್ವಾಧೋಮಧ್ಯವೆಂಬವೇನೂ ತೋರದೆ ಎಲ್ಲವೂ ತನ್ನಾಕಾರವಾಗಿ ನಿರಾಕಾರ ಸ್ವಸಂವೇದ್ಯ ಪರತತ್ತ್ವ ತಾನೆಯಾಗಿಹನು' ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ಮನವಿದು ಕ್ಷಣದೊಳಗೆ ಹೋಗದ ಠಾವಿಗೆ ಹೋದಂತೆ ನೆನೆವುತ್ತಿದೆ. ಬಾರದ ಠಾವಿಂಗೆ ಬಂದಂತೆ ನೆನೆವುತ್ತಿದೆ. ಕಾಣದುದ ಕಂಡಂತೆ ನೆನೆವುತ್ತಿದೆ. ಕೇಳದುದ ಕೇಳಿದಂತೆ ನೆನೆವುತ್ತಿದೆ. ಕ್ಷಣದೊಳಗೆ ದಶದಿಕ್ಕಿಗೈಯುತ್ತಿದೆ. ಶತಮರ್ಕಟವಿಧಿ ಬಂದು ಮನಕ್ಕಾದರೆ ಇದನೆಂತು ತಾಳಬಹುದಯ್ಯ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ಈ ಮನವ ಸೆರೆಯಿಟ್ಟಾಳಯ್ಯಾ ನಿಮ್ಮ ಧರ್ಮ ಬೇಡಿಕೊಂಬೆ.
--------------
ಸ್ವತಂತ್ರ ಸಿದ್ಧಲಿಂಗ
ಮನವಿದೊಮ್ಮೆ ಪ್ರಪಂಚದತ್ತ ಹರಿವುದು. ಒಮ್ಮೆ ಪರಮಾರ್ಥದತ್ತ ತಿರುಗುವುದು. ಒಂದ ಹಿಡಿಸಿ, ಒಂದ ಬಿಡಿಸುವುದು. ಇಂತೀ ಸಂದೇಹವನಿಕ್ಕಿ ದಂದುಗಗೊಳಿಸಿ ಮುಂದುಗೆಡಿಸಿ ಕಾಡುತ್ತಿದೆ. ಈ ಮನದ ಮರುಳತನವ ಬಿಡಿಸಿ, ನಿಮ್ಮ ಶ್ರೀಪಾದದಲ್ಲಿರಿಸೆನ್ನ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಮೂರಾಧಾರ ಮಧ್ಯದಲ್ಲಿ ಹುಟ್ಟಿದ ಪ್ರಾಣಾಪಾನಂಗಳು ಆವಲ್ಲಿ ಮನ ಸಹಿತ ಲಯವಾದವೊ ಆ ಲಯ ಕಾರಣವಾದುದು ಪ್ರಾಣಲಿಂಗ. ಆ ಪ್ರಾಣಲಿಂಗದ ನೆಲೆಯನರಿಯದೆ ಏನ ಮಾಡಿದಡೂ ಫಲದಾಯಕ ಭಕ್ತಿಯಲ್ಲದೆ ಮುಕ್ತಿಯಿಲ್ಲ. ಇದು ಕಾರಣ. ಪ್ರಾಣಲಿಂಗವನರಿದು, ಮನ ಶಕ್ತಿ ಸಂಯೋಗವ ಮಾಡಿ ಮುಕ್ತರಹುದಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಮರ ಮೊದಲಿಗೆ ಬೀಳಲು ಕೊನೆ ಎಲೆ ಹೂವು ಕಾಯಿಗಳನಿರಿಸಿ ತಾ ಬೀಳದು ನೋಡಾ. ಯೋಗಿಯ ಮನವಳಿಯಲು ಮನವಿಡಿದಿಹ ಇಂದ್ರಿಯ ವಿಷಯ ಪ್ರಾಣಂಗಳು ಮನದೊಡನೆ ಅಳಿವವಲ್ಲದೆ ಉಳಿಯವು ನೋಡಾ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡುವರೆ ಮನವಳಿದು ಕೂಡುವುದು ನೋಡಾ.
--------------
ಸ್ವತಂತ್ರ ಸಿದ್ಧಲಿಂಗ
ಮಿಂಚಿನ ರವೆಯಂತೆ ಎನ್ನಂತರಂಗದಲ್ಲಿ ತೋರುವೆ, ಅಡಗುವೆ, ಇದೇನು ವಿಗಡ ಚರಿತ್ರೆ? ಒಳಗೆ ತೊಳಗಿ, ಬೆಳಗಿ ಬೆಳಗದಂತಿಹೆ. ಸದೋದಿತನೆಂದು ಶ್ರುತಿ ಸಾರುತ್ತಿರಲು, ತೋರಿಯಡಗುವುದು ನಿನಗೆ ಸಹಜವಲ್ಲಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಮೋಹ ಮದ ರಾಗ ವಿಷಾದ ತಾಪ ಶೋಕ ವೈಚಿಂತ್ಯವೆಂಬ ಸಪ್ತಮಲವಾವರಿಸೆ ಮತ್ತರಾಗಿ, ತಮ್ಮ ತಾವರಿಯದೆ, ಕಣ್ಣಿಗಜ್ಞಾನತಿಮಿರ ಕವಿದು, ಮುಂದುಗಾಣದವರು ಶಿವನನವರೆತ್ತ ಬಲ್ಲರು? ಗೃಹ ಕ್ಷೇತ್ರ ಸತಿ ಸುತಾದಿ ಪಾಶಂಗಳಲ್ಲಿ ಬಿಗಿವಡೆದ ಪಶುಗಳು ಶಿವನನವರೆತ್ತ ಬಲ್ಲರು? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು, ತಾನವರನೆತ್ತಲೆಂದರಿಯನು.
--------------
ಸ್ವತಂತ್ರ ಸಿದ್ಧಲಿಂಗ
ಮೂರುಮುಖದಗ್ನಿಯೆದ್ದು ಮೂರುಲೋಕವ ಸುಡುತ್ತಿರಲು ಅಗ್ನಿಯ ಕೆಡಿಸಬಲ್ಲ ಬಲ್ಲಿದನಾರನು ಕಾಣೆ. ಆ ಅಗ್ನಿಯ ಸ್ತಂಭನವ ಮಾಡಲರಿಯದೆ, ಬಲ್ಲಿದರೆಲ್ಲ ದಳ್ಳುರಿಗೊಳಗಾದರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ, ಅಕ್ಷರ ಪಂಚಕಮಂತ್ರವ ಜಪಿಸಿ, ಅಗ್ನಿಸ್ತಂಭನವ ಮಾಡಿದನು.
--------------
ಸ್ವತಂತ್ರ ಸಿದ್ಧಲಿಂಗ
ಮೇಘ ಮರೆಯಾಗಿ ಚಂದ್ರನಿದ್ದನೆಂದಡೆ ಆ ಚಂದ್ರಂಗೆ ಕಳೆ ಕುಂದುವುದೇ ಅಯ್ಯಾ?. ದೇಹದ ಮರೆವಿಡಿದು ಶರಣನಿದ್ದನೆಂದಡೆ ಆತನ ಮಹಿಮಾಗುಣ ಕೆಡುವುದೇ ಅಯ್ಯಾ?. ಗಿಡದ ಮೇಲಣ ಪಕ್ಷಿಯಂತೆ, ಪದ್ಮಪತ್ರದ ಜಲದಂತೆ, ದೇಹಸಂಗದಲ್ಲಿದ್ದೂ ಇಲ್ಲದಿಹನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನಿರವಿನ ಪರಿ ಇಂತುಟು.
--------------
ಸ್ವತಂತ್ರ ಸಿದ್ಧಲಿಂಗ
ಮರುಳು ಮಾಯೆಯ ಹುರುಳಗೆಡಿಸಿ, ಅಂತಕನ ಹಲ್ಲ ಕಿತ್ತು, ವಿಧಿಲಿಖಿತವ ತೊಡೆವುದು ವಿಭೂತಿ. ಪರಮಜ್ಞಾನದ ಸಿರಿಯನಿತ್ತು, ಭವವ ಪರಿವುದು ವಿಭೂತಿ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಜಪದದಲ್ಲಿರಿಸುವುದು, ವಿಭೂತಿಯಯ್ಯ.
--------------
ಸ್ವತಂತ್ರ ಸಿದ್ಧಲಿಂಗ
ಮರಹೆಂಬ ಕತ್ತಲೆಯೊಳಗೆ ತ್ರಿಜಗದ ಪ್ರಾಣಿಗಳೆಲ್ಲ ಹಿಂದುಗಾಣದೆ ಮುಂದುಗಾಣದೆ ಗೊಂದಣಗೊಳ್ಳುತ್ತಿರ್ದರಲ್ಲ. ತಂದಿಕ್ಕಿದೆ ಬಲು ಮರವೆಯ ಶಿವನೇ, ನಿನ್ನ ಕಾಣದಂತೆ. ಈ ಅಂಧಕಾರದಲ್ಲಿರ್ದ ಪ್ರಾಣಿಗಳಿಗಿನ್ನೆಂದಿಂಗೆ ಮುಕ್ತಿಯಹುದೊ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?.
--------------
ಸ್ವತಂತ್ರ ಸಿದ್ಧಲಿಂಗ
ಮಹಾಕರ್ತನು ತನ್ನ ಶಕ್ತಿಯ ವಿನೋದಕ್ಕೀ ಜಗವ ನಿರ್ಮಿಸಿದ ಅನಂತ ಲೋಕಂಗಳನು. ಚಂದ್ರಸೂರ್ಯ ನಕ್ಷತ್ರ ಸಿಡಿಲು ಮಿಂಚುಗಳನು. ತತ್ತ್ವ ವಿತತ್ತ್ವ ಕಾಲ ಕರ್ಮ ಪ್ರಳಯಂಗಳನು. ಹೆಣ್ಣು ಗಂಡು ಜಾತಿ ವಿಜಾತಿಗಳಾದ ನರಸುರ ತಿರ್ಯಗ್ಜಾತಿ ಸ್ಥಲ ಭೋಗಾಯುಷ್ಯ ನಿದ್ರೆ ಮೊದಲಾದ ಸಮಸ್ತ ಪ್ರಪಂಚುಗಳನು. ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳನು, ಹುಟ್ಟಿಸಿದ ತನ್ನ ವಿನೋದಕ್ಕೆ, ಮಂತ್ರವಾಹಕನು ಮಾಡಿದ ಕಟ್ಟಳೆ, ಯಾರಿಗೂ ತಿಳಿಯಬಾರದು ನೋಡಾ, ಸರ್ವಾತ್ಮರು ಮಲಪಾಶದಿಂದ ಬಂಧಿಸಿಕೊಂಬ ಪಶುಗಳಾದರು, ತಾ ಪಶುಪತಿಯಾದ, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ