ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸೇವ್ಯಗುರುವಿನ ಮಹಾಪ್ರಸಾದವನನುಭವಿಸಿ, ತಾನೇ ಗುರುತತ್ತ್ವವಾದ ಮಹಾಪ್ರಸಾದಿಗೆ, ಬೇರೆ ಜ್ಞಾನವುಂಟೇ? ಅಪರಿಚ್ಛಿನ್ನ ವಾಙ್ಮನಕ್ಕಗೋಚರ ಪರಾನಂದರೂಪ ನಿತ್ಯ ತೃಪ್ತ ನಿಜಮುಕ್ತನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ಸಂಸಾರದ ಸುಖವೆತ್ತ ನಿಮ್ಮ ನಿಜ ಸುಖವೆತ್ತ? ಕತ್ತಲೆಯೆತ್ತ ಬೆಳಗೆತ್ತ? ಎನ್ನಂತರಂಗದೊಳಗಿರ್ದು ತೋರುವೆ ಅಡಗುವೆ ಇದೇನು ಗಾರುಡಿಗತನ ನಿನಗೆ?. ಸವಿವಾಲು ಸಕ್ಕರೆಯನುಣ ಕಲಸಿ, ಬೇವನುಣಿಸಿಹೆನೆಂದಡೆ ಅದು ಹಿತವಹುದೆ? ನಿನ್ನ ನಿಜಸುಖದ ಸವಿಗಲಿಸಿ, ಸಂಸಾರಸುಖವನುಣಿಸಿಹೆನೆಂದರದು ಮನಕೊಂಬುದೆ?. ಎನ್ನೊಡನೆ ವಿನೋದವೆ ನಿನಗೆ? ಬೇಡ ಬೇಡ. ಎನ್ನ ನೀನರಿದು ಸಲಹು, ನಿನಗೆ ಎನ್ನಾಣೆಯಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಸರ್ವ ಕ್ರೀಯ ಲಯಸ್ಥಾನವಾದ ಭಾವಭರಿತ ಲಿಂಗವ ಭಾವ ಭಾವಿಸುತ, ಭಾವ ಲಯವಾಯಿತ್ತು ನೋಡಾ. ಇನ್ನು ಭಾವಿಸಲುಂಟೆ ಹೇಳಾ ಮಹಾಘನವ? ಭಾವ ನಿರ್ಭಾವದ ನಿಜವು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲವು.
--------------
ಸ್ವತಂತ್ರ ಸಿದ್ಧಲಿಂಗ
ಸೂರ್ಯನ ಕರಜಾಲಂಗಳು ಸೂರ್ಯೋದಯವಾದಲ್ಲಿ ಹುಟ್ಟಿ, ಸೂರ್ಯನು ಅಸ್ತಮಿಸಲು ಕೂಡ ಅಡಗುವಂತೆ, ಮನೋವಿಕಾರದಿಂದ ಲೋಕವೆಲ್ಲವೂ ತೋರಿ, ಮನ ಲಯವಾದೊಡನೆ ಆ ಲೋಕವೆಲ್ಲವೂ ಅಡಗಿ, ಜ್ಞಾನತತ್ತ್ವವೊಂದೇ ತನ್ನ ಸ್ವರೂಪವಾಗಿ ಉಳಿದಿಹ ಯೋಗಿಗೆ ಮುಂದೆ ಅರಿಯಬೇಕಾದುದೊಂದೂ ಇಲ್ಲವಯ್ಯಾ. ಉಳಿದ ಉಳುಮೆ ಜ್ಞಾನರೂಪಾಗಿ ನಿಂದಿತಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣಂಗೇ.
--------------
ಸ್ವತಂತ್ರ ಸಿದ್ಧಲಿಂಗ
ಸರ್ವಾಂಗವು ಲಿಂಗಸಂಗವಾಗಿ, ಲಿಂಗ ಸರ್ವಾಂಗಸಂಗವಾಗಿ, ಪ್ರಾಣ ಲಿಂಗದಲ್ಲಿ ಸಂಗವಾಗಿ, ಲಿಂಗ ಪ್ರಾಣದಲ್ಲಿ ಸಂಗವಾಗಿ, ಸಕಲೇಂದ್ರಿಯಂಗಳು ಲಿಂಗಸಂಗವಾಗಿ, ಲಿಂಗ ಸಕಲೇಂದ್ರಿಯಂಗಳಲ್ಲಿ ಸಂಗವಾಗಿ, ಮನ ಲಿಂಗಸನ್ನಿಹಿತವಾಗಿ, ಲಿಂಗ ಮನಸನ್ನಿಹಿತವಾಗಿ, ಸಮರಸ ಸದ್ಭಾವಿಯಾದ ಶರಣನೆ ಲಿಂಗವು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಸಪ್ತದ್ರವ್ಯಂಗಳು ಎಡೆಯಿಲ್ಲದೆ ಹೋದುವು. ಅಷ್ಟಮದಂಗಳು ನಷ್ಟವಾದುವು. ಅರಿಷಡ್ವರ್ಗದುರವಣಿ ತರಹರಿಸಲಾರದೆ ಹೋದವು. ಪಂಚೇಂದ್ರಿಯಂಗಳ ವಂಚನೆ ಬರತವು. ಕರ್ಮೇಂದ್ರಿಯಂಗಳ ವ್ಯಾಪಾರ ನಿಂದವು. ಕಾಮನ ಬಾಣ ಬತ್ತಳಿಕೆಯಲ್ಲಿ ಹಾಯ್ದುವು. ಕಾಲನ ಅಧಿಕಾರ ನಿಂದಿತ್ತು ಮಾಯೆ ಮುಂದುಗೆಟ್ಟು ಮುಖವಿಡಲಮ್ಮದೆ ಹೋಯಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣರ ಮುಂದೆ.
--------------
ಸ್ವತಂತ್ರ ಸಿದ್ಧಲಿಂಗ
ಸುಜ್ಞಾನವೆಂಬ ಹಡಗನೇರಿದ ಗುರು ತನ್ನನಾಶ್ರಯಿಸಿದ ಶಿಷ್ಯನ ಸಂಸಾರವೆಂಬ ಮಹಾಪಾಪಸಮುದ್ರವ ದಾಂಟಿಸಿ, ತಡಿಗೆ ಸೇರಿಸಿ ಮುಕ್ತಿಯೆಂಬ ಗ್ರಾಮಕ್ಕೆ ಎಯ್ದುವ ಭಕ್ತಿಮಾರ್ಗವ ತೋರಿಸುವನಲ್ಲದೆ, ಸುಜ್ಞಾನಿಯಲ್ಲದ ಗುರು, ತನ್ನನಾಶ್ರಯಿಸಿದ ಶಿಷ್ಯನ ಸಂಸಾರ ಸಮುದ್ರದ ದಾಂಟಿಸಲರಿಯ. ಅದೆಂತೆಂದಡೆ: ಅರೆಗಲ್ಲು ಅರೆಗಲ್ಲ ನದಿಯ ದಾಂಟಿಸಲರಿಯದಂತೆ. ಇದು ಕಾರಣ, ಸುಜ್ಞಾನಗುರುವಿನ ಪಾದವ ಹಿಡಿದು ಸಂಸಾರಸಮುದ್ರವ ದಾಂಟಿಸಬಲ್ಲಡಾತನೇ ಧನ್ಯನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.
--------------
ಸ್ವತಂತ್ರ ಸಿದ್ಧಲಿಂಗ
ಸ್ಫಟಿಕದ ಘಟದಂತೆ ಒಳಹೊರಗೆ ಒಂದೆ ಪರಿ ನೋಡಾ. ಶರಣಂಗೆ ಅಂತರಂಗ ಬಹಿರಂಗವೆಂದೆನಲುಂಟೆ? ಕಾದ ಕಬ್ಬುನದ ಘಟ್ಟಿಯಂತೆ ಶರಣನ ಸರ್ವಾಂಗವೆಲ್ಲ ಲಿಂಗವಾವರಿಸಿ ಲಿಂಗವಾಯಿತ್ತಾಗಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ ನಿಮ್ಮ ಶರಣ ಲಿಂಗಸಂಗಿಯೇ ಅಂಗಸಂಗಿಯೆಂದು ತಿಳಿಯಬಾರದು.
--------------
ಸ್ವತಂತ್ರ ಸಿದ್ಧಲಿಂಗ
ಸದಾಚಾರವನಾಚರಿಸುವ ಸತ್ಕಿ ್ರೀಯಾಚಾರ ಸಂಪನ್ನಂಗೆ, ಸಮ್ಯಗ್‍ಜ್ಞಾನ ಉದಯವಹುದು. ಆ ಸಮ್ಯಗ್‍ಜ್ಞಾನೋದಯದಿಂದ, ತನ್ನ ತಾನರಿದು, ತಾನೆ ಶಿವನಲ್ಲದೆ, ಸ್ವತಂತ್ರಸಿದ್ಧಲಿಂಗೇಶ್ವರನ ನಿಜವನೆಯ್ದುವಡೆ, ಸದಾಚಾರವೇ ಮುಖ್ಯವಯ್ಯ.
--------------
ಸ್ವತಂತ್ರ ಸಿದ್ಧಲಿಂಗ
ಸ್ವಸ್ಥ ಸಿದ್ಧಾಸನದಲ್ಲಿ ಕುಳ್ಳಿರ್ದು ಅತ್ತಿತ್ತ ಕಂಪಿಸದೆ ನೆಟ್ಟೆಲುವ ನೆಟ್ಟನೆ ಮಾಡಿ ಅಧೋಮುಖಗಮನವಾಯುವ ಊಧ್ರ್ವಮುಖವ ಮಾಡಿ, ಆಧಾರವಂ ಬಲಿದು ಪ್ರಾಣವಾಯುವ ಪಾನವ ಮಾಡಿ ಆರುವೆರಳಿನಿಂ ಆರುದ್ವಾರವನೊತ್ತಲು ಶಶಿ ರವಿ ಬಿಂಬಗಳ ಮಸುಳಿಪ ನಾದ ಬಿಂದು ತೇಜವು ಕೂಡಿ ಮೂರ್ತಿಯಾಗಿ ಥಳಥಳಿಸಿ ಹೊಳೆವ ಲಿಂಗದ ಬೆಳಗಿನೊಳಗೆ ಮನವಳಿದಾತನೆ ಉನ್ಮನಿವನಿತೆಗೆ ವಲ್ಲಭನೆನಿಸುವ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಆತನೇ ಪರಮಯೋಗಿ.
--------------
ಸ್ವತಂತ್ರ ಸಿದ್ಧಲಿಂಗ
ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣ ಪರಂಜ್ಯೋತಿಯೊಡಗೂಡಿ ಅರಿದಿರ್ದಾತಂಗೆ, ಸರ್ವ ವಿಷಯಜ್ಞಾನವಿಲ್ಲ, ದೇವತಿರ್ಯಙ್ಮನುಷ್ಯಾದಿ ವ್ಯವಹಾರ ವಿಕಲ್ಪವಿಲ್ಲ, ಮಾಯಾಭ್ರಾಂತಿ ಲಯವಾಯಿತ್ತಾಗಿ. ಸುಜ್ಞಾನ ಸುಷುಪ್ತಿಯನೆಯ್ದಿ ಶಿವ ತಾನಾದ ಅವಿರಳ ಪ್ರಸಾದಿಗೆ ಇಹಪರವೆಂಬುದಿಲ್ಲ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೇ ತಾನಾಗಿಹನು.
--------------
ಸ್ವತಂತ್ರ ಸಿದ್ಧಲಿಂಗ
ಸ್ವರ್ಗ ಮತ್ರ್ಯ ಪಾತಾಳವೆಂಬ ಮೂರುಲೋಕದ ಒಳಗೂ ಹೊರಗೂ ಶಿವನು ಭರಿತನಾಗಿರ್ದನೆಂದಡೆ, ಆ ಮೂರುಲೋಕದ ಪ್ರಾಣಿಗಳೆಲ್ಲಾ ಶಿವಪದವನೆಯ್ದೆ ಬಲ್ಲರೇ? ಎಯ್ದಲರಿಯರಾಗಿ. ಅದೇನು ಕಾರಣವೆಂದಡೆ, ಶ್ರೀಗುರುದರ್ಶನದಿಂದಲ್ಲದೆ ಎಯ್ದಬಾರದಾಗಿ. ಅದು ಕಾರಣ ಗುರುಕೃಪಾ ನಿರೀಕ್ಷಣೆಯಿಂದವೆ ಪರಮಮುಕ್ತಿಯಪ್ಪುದು ತಪ್ಪದಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಸಂಸಾರವೆಂಬ ಘೋರಾರಣ್ಯದೊಳಗೊಬ್ಬಳು, ಜಗವ ನುಂಗಿ ಉಗುಳುವ ಬಲು ರಕ್ಕಸಿಯಿದ್ದಾಳೆ. ಗಜ ವ್ಯಾಘ್ರ ಕ್ರೂರ ಮೃಗಂಗಳ ಭಯ ಘನ. ಹುಲ್ಲ ಬಿಲ್ಲಿನವ, ಕೈಯ ಹಗ್ಗದವ ಇವರಿಬ್ಬರು ಬಲುವ್ಯಾಧರು ಕಣುವೆಯ ಕಟ್ಟಿ ಐದಾರೆ ಆ ಕಡೆಗಡಿಯಿಡದಿರಣ್ಣ. ಭಕ್ತಿಗ್ರಾಮದತ್ತ ನಡೆಯಿರಣ್ಣ. ಎಡರಾಪತ್ತುಗಳಿಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ, ಭಕ್ತಿಗ್ರಾಮದಲ್ಲಿ.
--------------
ಸ್ವತಂತ್ರ ಸಿದ್ಧಲಿಂಗ
ಸಂಸಾರ ಸೌಖ್ಯವಲ್ಲ, ಸಂಸಾರ ಸೌಖ್ಯವಲ್ಲ. ಇಹಲೋಕ ಪರಲೋಕ ಸೌಖ್ಯವಲ್ಲ, ಸ್ಥಿರವಲ್ಲ. ಗೃಹಪಾಶ, ಕ್ಷೇತ್ರಭ್ರಮೆ ಬಳಸಿ ಬಳಸಿ ಬರುತ್ತಿದೆ, ಬಿಡು ಬಿಡು ವಾಂಛೆಯ, ಆಗ ಹುಟ್ಟಿ ಬೇಗ ಸಾವವರ ಕಂಡು ಮತ್ತೇಕೆ ಸಂಸಾರದಾಸೆ? ನಿನ್ನ ದೇಹ ಸ್ಥಿರವಲ್ಲ. ನೀ ಬಂದುದನರಿದು ಹೋಹ ಗತಿಪಥವ ತೆರಹುಮಾಡು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಒಂದಹರೆ.
--------------
ಸ್ವತಂತ್ರ ಸಿದ್ಧಲಿಂಗ
ಸರ್ವ ಶಾಸ್ತ್ರೋಪಾಧಿಯಿಂದ ಬೇರೊಂದನಾಶ್ರೈಸಿ ಅರಿದಿಹೆನೆಂಬ ಉಪಮೆಯಳಿದು, ಸ್ವಾನುಭವಸಿದ್ಧಿಯಿಂದ ತನ್ನ ಸ್ವರೂಪವ ತಾನರಿದು ಅರಿದೆನೆಂಬ ಅರಿವಿನ ಮರವೆಯ ಕಳೆದು, ವರ್ಣಾಶ್ರಮಂಗಳಾಚಾರಂಗಳ ಮೀರಿದ ಶಿವಯೋಗಿಯೇ ವೇದವಿತ್ತಮನು, ವೇದವಿತ್ತಮನು. ಆತನೆಲ್ಲರ ಅಜ್ಞಾನವ ತೊಳೆದು ನಿಜಮುಕ್ತರ ಮಾಡುವ ಕರುಣಾಕರನು. ಆ ಮಹಾತ್ಮನೇ ಸರ್ವಪ್ರಪಂಚಿನ ಉತ್ಪತ್ತಿ ಸ್ಥಿತಿ ಲಯಂಗಳಿಗೆ ಕಾರಣನಾದಾತನು. ಆ ಯೋಗಿ ಶರಣನೇ ಸಚ್ಚಿದಾನಂದ ಪರಮ ಸಾಯುಜ್ಯರೂಪನು. ಆ ಮಹಾಪುರುಷನೇ ಸಾಲೋಕ್ಯಾದಿ ಸಮಸ್ತ ಮುಕ್ತಿಯ ಕೊಡುವಾತನೂ ಆಗಿ, ಪರಿಪೂರ್ಣ ಭಾವದಿಂದ ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರನಾಗಿ ತೋರುತ್ತಿಹನು.
--------------
ಸ್ವತಂತ್ರ ಸಿದ್ಧಲಿಂಗ
ಸ್ಥಾವರ ಜಂಗಮಾತ್ಮಕವಾದ ಸಮಸ್ತ ಲೋಕವನು ಸುಜ್ಞಾನವಿಚಾರವಿಡಿದು ಗ್ರಹಿಸಿ, ತಾನು ಗ್ರಹಿಸಿದ ಲೋಕವು, ಸೂತ್ರದಲ್ಲಿಯ ಮಣಿಗಣದಂತೆ ಶಿವನಾಧಾರವಾಗಿಹೆನೆಂದರಿದು, ಅಂಥಾ ಲೋಕಾಧಾರವಾದ ಶಿವನ ನಿರ್ಮಲ ಸಾತ್ವಿಕಗುಣಿಗಳಾದ ಶಿವಜ್ಞಾನಿಗಳು ಕಂಡು ಸಮಾಧಿನಿಷ*ರಾಗಿಹರು, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣರು.
--------------
ಸ್ವತಂತ್ರ ಸಿದ್ಧಲಿಂಗ
ಸಿತ ಕೆಂಪು ಕೃಷ್ಣವೆಂಬ ಮೂರರ ಮೇಲೆ, ಅತಿಶಯವಾಗಿ ಬೆಳಗುವ ಶಿವಲಿಂಗವ, ಅನುದಿನ ಮನವಿಲ್ಲದ ಮನದಲ್ಲಿ ನೆನೆದು ಸುಖಿಯಾದೆನು, ಎನ್ನ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಾ.
--------------
ಸ್ವತಂತ್ರ ಸಿದ್ಧಲಿಂಗ
ಸಂಸಾರವೆಂಬ ಮಹಾಘೋರಾರಣ್ಯದಲ್ಲಿ ಹೊಲಬುಗೆಟ್ಟು, ನೆಲೆಯ ಕಾಣದೆ ಹೋದರು. ನಿಜದ ಹೊಲಬುದಪ್ಪಿ ಬಳಲುತ್ತಿದ್ದಾರೆ ನೋಡಯ್ಯ. ಇರುಳುಹಗಲೆನ್ನದೆ ಸಂಸಾರದಲ್ಲಿ ಸಾವುತ್ತಿದ್ದಾರೆ ನೋಡಯ್ಯ. ಇಂತಪ್ಪ ಸಂಸಾರಾರಣ್ಯದಲ್ಲಿ, ಹೊಲಬುಗೆಟ್ಟು ನೆಲೆಯ ಕಾಣದೆ ಹೋದರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮನರಿಯದೆ.
--------------
ಸ್ವತಂತ್ರ ಸಿದ್ಧಲಿಂಗ
ಸಂಸಾರವೆಂಬ ಮಹಾವ್ಯಾಧಿ ಬಾಧಿಸಿ, ನಡೆವೆಣನ ಮಾಡಿ ಕಾಡುತ್ತಿದೆ ನೋಡಯ್ಯ. ಮುಂದೆ ಸತ್ಪಥದಲ್ಲಡಿಯಿಡಲು ಶಕ್ತಿಯಿಲ್ಲದವನ ಮಾಡಿ, ಕಾಡುತ್ತಿದೆ ನೋಡಯ್ಯ. ಶಿವನೆ ನಿನ್ನ ನಾ ಬೇಡಿಕೊಂಬೆನು. ನೀನೇ ಶ್ರೀಗುರುವೆಂಬ ವೈದ್ಯನಾಗಿ ಬಂದು, ಕೃಪಾಪ್ರಸಾದವೆಂಬ ಮದ್ದ ಕೊಟ್ಟು, ಪಂಚಾಕ್ಷರಿಯೆಂಬ ಪಥ್ಯವನೆರೆದು, ಸಂಸಾರವೆಂಬ ವ್ಯಾಧಿಯ ಮಾಣಿಸಯ್ಯ ನಿಮ್ಮ ಧರ್ಮ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಸಂಸಾರ ವಿಷಯರಸವೆಂಬ ಕಾಳಕೂಟ ಹಾಲಹಲವಿಷವ ಕೊಂಡವರಾರಾದರೂ ಜೀವಿಸಿದವರುಂಟೆ? ಇಲ್ಲವಾಗಿ. ಎಲ್ಲರೂ ಸಂಸಾರ ವಿಷಯರಸದಲ್ಲಿ ಸಾವುತ್ತೆ ೈದಾರೆ. ಆ ವಿಷಯದ ಗಾಳಿ ಸೋಂಕಿ ಬಳಲುತ್ತಿದ್ದೇನಯ್ಯ. ನಿಮ್ಮ ಕೃಪಾಪ್ರಸಾದವೆಂಬ ನಿರ್ವಿಷವ ಕೊಟ್ಟು ರಕ್ಷಿಸಯ್ಯ ಎನ್ನ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಸಂಸಾರವೆಂಬ ವಿಷವೃಕ್ಷಕ್ಕೆ ಪಂಚೇಂದ್ರಿಯಂಗಳೆ ಶಾಖೆಗಳು. ಪಂಚಕ್ಲೇಶಂಗಳೆ ಫಲಂಗಳು, ಪಂಚವಿಷಯಂಗಳೆ ರಸವು. ಈ ಫಲವ ಬಯಸಿ, ಮೆದ್ದವರೆಲ್ಲಾ ಮರಣಕ್ಕೊಳಗಾದರು. ಅದನರಿದು ಆ ಫಲವ ನಾನು ಮುಟ್ಟೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಸುವಿಚಾರದರಿವು ಕಣ್ದೆರೆದು, ನಿರ್ಮಲತ್ವ ನಿರಹಂಕಾರ, ಅನಪೇಕ್ಷೆ ಅಕಾಮ ಮತಿಯಾಗಿ, ನಿರ್ಮಲಾಚಾರದಿಂದ ಶಿವನ ಭಜಿಸಿ, ಪರಮಾನಂದರೂಪನಾಗಿ ಶಿವಪದವ ನೆಮ್ಮಿ, ಇತರವನರಿಯದ ಶಿವನಿಷ*ನ ನೋಡಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಸಮತೆಯೆಂಬ ಕಂಥೆಯ ಧರಿಸಿ ಕ್ಷಮೆಯೆಂಬ ಭಸ್ಮಧಾರಣವನಳವಡಿಸಿ ಸರ್ವಜೀವದಯಾಪರವೆಂಬ ಕಮಂಡಲವ ತಳೆದುಕೊಂಡು ಸುಜ್ಞಾನವೆಂಬ ದಂಡವ ಹಿಡಿದು ವೈರಾಗ್ಯವೆಂಬ ಭಿಕ್ಷಾಪಾತ್ರೆ ಸಹಿತ, ಭಕ್ತಿ ಭಿಕ್ಷವ ಬೇಡ ಬಂದನಯ್ಯ. ಸತ್ಯ ಶರಣರಾದ ಭಕ್ತರನರಸುತ್ತ. ಭಕ್ತಿ ಭಿಕ್ಷವ ಬೇಡ ಬಂದನಯ್ಯ. ಕಾಯದ ಕಳವಳವ ಕಳೆದು, ಜೀವನೋಪಾಯವಿಲ್ಲದೆ, ಸುಳಿವನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಭಕ್ತಿ ಕಾರಣವಾಗಿ.
--------------
ಸ್ವತಂತ್ರ ಸಿದ್ಧಲಿಂಗ
ಸ್ಥೂಲ ಸೂಕ್ಷ ್ಮ ಕಾರಣವೆಂಬ ತನುತ್ರಯವ ವಿಭಾಗಿಸಿ ಕಳೆದು ಆ ತನುತ್ರಯದಿಂದ ಜೀವತ್ರಯವನು ಹಿಂಗಿಸಿ ಒಂದು ಮಾಡಿ ನಿಜಾಂಗರೂಪನಾದ ಪರಮಾತ್ಮನಲ್ಲಿ ಕೂಡಿ ಅಂಗ ಲಿಂಗ ಸಂಗರೂಪಾದ ಪರಮಾತ್ಮನೆ ಪರವೆಂದರಿದು ಪರಮಾತ್ಮನೆ ಘನವೆಂದರಿದು, ಪರಮಾತ್ಮನೆ ತಾನೆಂದರಿದು ಲಿಂಗಾಂಗಸಂಗವಾದ ಷಡುಸ್ಥಲವನಂಗೀಕರಿಸಿ ಅನುದಿನ ಎಡೆಬಿಡುವಿಲ್ಲದೆ ಶಿವಾನುಭಾವಿಯಾಗಿ ಶಿವಲಿಂಗನ ಭಜಿಸುವವನೆ ಮುಕ್ತನು. ಉಳಿದವರೆಲ್ಲಾ ಬದ್ಧರಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಸುಖ ದುಃಖ ಮೋಹದೊಡಲುಗೊಂಡು ಹುಟ್ಟಿತ್ತೀ ಜಗವೆಲ್ಲ. ಆ ಜಗದಂತೆ ಶಿವಭಕ್ತನಾದಡೆ, ಅದರ ಕುಂದೇನು? ತನ್ನ ಹೆಚ್ಚೇನು? ಜಗವು ಮಾಯೆಯಂತೆ:ಅದ ಬೇರೆ ಮಾಡೆ. ತಾ ಶಿವನಂತೆ ಇದ್ದವನ ಇರವು ಶುದ್ಧ. ಜಗದೀಶನವರೊಳಗೆ ತೆರಹಿಲ್ಲದಿಪ್ಪ:ಇದು ಸತ್ಯ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ

ಇನ್ನಷ್ಟು ...