ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭೂಮಿಯ ಮೇಲಣ ಅಗ್ನಿ, ಆಕಾಶವನಡರಿದಡೆ ಆಕಾಶದ ಜಲ ಉಕ್ಕಿ ಭೂಮಿಯೆಲ್ಲ ಜಲಮಯವಾಗಿತ್ತು. ಅಲ್ಲಿದ್ದವರೆಲ್ಲ ಅಮೃತಮಯವಾಗಿ ಮಹಾಲಿಂಗ ಸೇವೆಯ ಮಾಡಿ ಪ್ರಸಾದವ ಪಡೆದು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೊಡನೆ ಲಿಂಗಲೀಯವಾದರು.
--------------
ಸ್ವತಂತ್ರ ಸಿದ್ಧಲಿಂಗ
ಭಕ್ತಸ್ಥಲ ಬಸವಣ್ಣಂಗಾಯಿತ್ತು. ಮಾಹೇಶ್ವರಸ್ಥಲ ಮಡಿವಾಳಂಗಾಯಿತ್ತು. ಪ್ರಸಾದಿಸ್ಥಲ ಚೆನ್ನಬಸವಣ್ಣಂಗಾಯಿತ್ತು. ಪ್ರಾಣಲಿಂಗಿಸ್ಥಲ ಸಿದ್ಧರಾಮಯ್ಯಂಗಾಯಿತ್ತು. ಶರಣಸ್ಥಲ ಪ್ರಭುದೇವರಿಗಾಯಿತ್ತು. ಐಕ್ಯಸ್ಥಲ ಅಜಗಣ್ಣಂಗಾಯಿತ್ತು. ಎನಗಿನ್ನಾವ ಸ್ಥಲವೂ ಇಲ್ಲವೆಂದು ನಾನಿರಲು, ಇಂತಿವರೆಲ್ಲಾ ಷಡುಸ್ಥಲ ಪ್ರಸಾದವನಿತ್ತರಾಗಿ, ನಾನು ಮುಕ್ತನಾದೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಭಕ್ತನ ಕಾಯವೆ ಶಿವನ ಕಾಯ, ಶಿವನ ಕಾಯವೆ ಭಕ್ತನ ಕಾಯ. ಶಿವ ಶಿವ, ಭಕ್ತ ಬೇರೆಯೆ? ಶಿವ ಬೇರೆಯೆ? ಒಂದೆ ಕಾಣಿರಯ್ಯ. ಅದೆಂತೆಂದಡೆ. `ಭಕ್ತ ದೇಹಿಕ ದೇವ, ದೇಹಿಕ ಭಕ್ತ' ಎಂದು ಶ್ರುತಿ ಹೊಗಳುವ ಕಾರಣ, ಭಕ್ತಂಗೂ ದೇವಂಗೂ ಕಾಯವೊಂದೆ, ಪ್ರಾಣವೊಂದೇ. ಎರಡೆಂಬ ಪರಿಭಾಷೆಯ ನುಡಿಯಲಾಗದು ಭಕ್ತರಾದವರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಭಕ್ತಂಗೆ ವ್ರತವಾರರಲ್ಲಿ ತದ್ಗತವಾಗಿಹುದೆ ಭಕ್ತಿ. ಅದೆಂತೆಂದಡೆ ಗುರುವೇ ಶಿವನೆಂದರಿದು, ಗುರುವಾಜ್ಞೆಯ ಪಾಲಿಸುವುದೇ ಗುರುವ್ರತ. ಗುರುಮುಖದಲ್ಲಿ ಬಂದ ಲಿಂಗದ ಪೂಜೆಯಲ್ಲಿ, ನಿಯತಾತ್ಮನಾಗಿ ಭಾವ ಸಮೇತವಾದುದು ಲಿಂಗವ್ರತ. ಜಂಗಮವೇ ಮಹಾಲಿಂಗವೆಂದರಿದು, ಪೂಜಾದಿ ಕ್ರಿಯೆಯಿಂದ ಧನವನರ್ಪಿಸುವುದೇ ಚರವ್ರತ. ಗುರು ಲಿಂಗ ಜಂಗಮದ ಪ್ರಸಾದ ಸೇವನಾನುಭವವೇ ಪ್ರಸಾದವ್ರತ. ಲೋಕಪಾವನವಾದ ಶ್ರೀಗುರುಪಾದಾಂಬ್ಲುಜ್ವವ, ಸ್ನಾನಪಾನಾದಿಗಳಿಂದಾಚರಿಸುವುದೇ ಪಾದೋದಕವ್ರತ. ಗುರು ಲಿಂಗ ಜಂಗಮ ಪಾದೋದಕ ಪ್ರಸಾದದಲ್ಲಿ ತಲ್ಲೀನವಾದ ಭಕ್ತಿಯೇ ಭಾಕ್ತಿಕವ್ರತ. ಇಂತೀ ಷಡ್ವಿಧವ್ರತವನರಿದಾಚರಿಸುತ್ತಿರ್ಪಾತನೇ ಸದ್ಭಕ್ತನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಭಾವಿಸಬಾರದ ಪ್ರಸಾದವ ರೂಹಿಸಬಾರದು. ರೂಹಿಸಬಾರದ ಪ್ರಸಾದವ ಸಾಧಿಸಬಾರದು, ಸಾಧಿಸಬಾರದ ಪ್ರಸಾದವ ಸಾಧಿಸಿ ಕಂಡೆಹೆನೆಂದು ನರ ಸುರ ಮನು ಮುನಿಗಳು, ಜಪ ತಪ ಹೋಮ ನಿತ್ಯನೇಮಂಗಳಿಂದರಿಸಿ ತೊಳಲಿ ಬಳಲುತ್ತಿದ್ದರಲ್ಲಾ. ಕಾಯವಂತರೆಲ್ಲರೂ ಕಳವಳಿಸುತ್ತಿದ್ದರು. ಆ ಮಹಾಪ್ರಸಾದವು ಮುನ್ನಾದಿಯ ಶರಣಂಗಲ್ಲದೆ ಸಾಧ್ಯವಾಗದು. ಇದು ಕಾರಣ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಮಹಾಪ್ರಸಾದವು, ಮಹಾಪ್ರಸಾದಿಗೆ ಸಾಧ್ಯ, ಉಳಿದವರಿಗಸಾಧ್ಯವು.
--------------
ಸ್ವತಂತ್ರ ಸಿದ್ಧಲಿಂಗ
ಭಕ್ತಿ ಜ್ಞಾನ ವೈರಾಗ್ಯದಿಂದಲ್ಲದೆ ಮುಕ್ತಿಯನೈದಬಾರದು. ಭಕ್ತಿ ಜ್ಞಾನ ವೈರಾಗ್ಯವೇ ಮುಕ್ತಿಮಾರ್ಗಕ್ಕೆ ತ್ರಿವಿಧ ಸೋಪಾನ. ಭಕ್ತಿ ಜ್ಞಾನ ವೈರಾಗ್ಯವಿಲ್ಲದೆ ತ್ರಿಪದವ ದಾಂಟಬಾರದು. ಭಕ್ತಿ ಜ್ಞಾನ ವೈರಾಗ್ಯವಾವುದೆಂದಡೆ: ಗುರು ಲಿಂಗ ಜಂಗಮದಲ್ಲಿ ತನುವಂಚನೆ ಮನವಂಚನೆ ಧನವಂಚನೆಯಿಲ್ಲದೆ, ತ್ರಿವಿಧವನೂ ವಿಶ್ವಾಸದೊಡಗೂಡಿ ಕೂಡುವುದೇ ಭಕ್ತಿ. ತನ್ನ ಸ್ವರೂಪವನರಿದು ಶಿವಸ್ವರೂಪವನರಿದು ಶಿವನ ತನ್ನ ಐಕ್ಯವನರಿವುದೇ ಜ್ಞಾನ. ಮಾಯಾಪ್ರಪಂಚು ಮಿಥ್ಯವೆಂದರಿದು ಇಹಪರದ ಭೋಗಂಗಳ ಹೇಯೋಪಾಯದಿಂದ ತೊಲಗಿಸುವುದೇ ವೈರಾಗ್ಯ. ಇದು ಕಾರಣ, ಭಕ್ತಿ ಜ್ಞಾನ ವೈರಾಗ್ಯವುಳ್ಳವನೇ ಸದ್ಯೋನ್ಮುಕ್ತನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಭಕ್ತನಾದಡೆ ಇಂದ್ರಿಯಂಗಳ ಭಕ್ತರ ಮಾಡಿ, ತನುಗುಣಂಗಳ ಭಕ್ತರ ಮಾಡಿ, ಅಂತಃಕರಣಂಗಳ ಭಕ್ತರ ಮಾಡಿ, ಅವಸ್ಥಾತ್ರಯಂಗಳನು ಅರ್ಪಿತವ ಮಾಡಿ, ತಾನು ಲಿಂಗಾರ್ಪಿತನಾಗಿ, ಪ್ರಸಾದಗರ್ಭದಲ್ಲಿ ಭರಿತನಾದ ಪ್ರಸಾದಿಗೆ ಬೇರಾಶ್ರಯವಿಲ್ಲ. ತಾನೇ ಚಿದ್ರೂಪನು, ಭಾವಸುಖ ಸ್ವರೂಪನು, ತಾನೇ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಭಾವಿಸಿಹೆನೆಂಬ ಭಾವಕರಿಗೆ ಭಾವಭೇದವುಂಟು. ಆವಾವ ಪರಿಯಲ್ಲಿ ಭಾವಿಸಿದಡೇನು? ಶಿವಭಾವ ನೆಲೆಗೊಂಡುದೆ ಭಾವ. ಗುರುಬೋಧೆಯಿಂದ ಪರವನರಿದೆನೆಂಬವರಿಗೆ ಆತ್ಮಸ್ವರೂಪವನರಿದಲ್ಲದಾಗದು. ಆತ್ಮಸ್ವರೂಪವೆಂಬುವದು ಅಖಂಡ ಬ್ರಹ್ಮ. ಸರ್ವಭೂತಾಂತಃಕರಣಾಶ್ರಿತ, ನಿಸ್ಸಂಗಕರ್ಮ ನಿಯಂತ್ರಿತ, ಸರ್ವವ್ಯಾಪಿ, ನಿತ್ಯನಿರಂಜನ ಸಂವಿತ್ಸ ್ವರೂಪ, ಇಂತಪ್ಪ ಆತ್ಮನ ನೆಲೆಯನರಿದಾತನೇ ಮುಕ್ತನು. ಅರಿಯದಾತನೇ ಬದ್ಧನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.
--------------
ಸ್ವತಂತ್ರ ಸಿದ್ಧಲಿಂಗ
ಭೂಮಿ ಜಲ ಅಗ್ನಿ ಮರುತ ಆಕಾಶವೆಂಬವೆಲ್ಲ, ಶ್ರೀವಿಭೂತಿಯವಾಗಿ ತೋರುತ್ತಿವೆ, ಶಿವ ಶಿವಾ. ಮನ ಚಕ್ಷುರಾದಿ ಇಂದ್ರಿಯಂಗಳೆಲ್ಲವು ಶ್ರೀ ವಿಭೂತಿಮಯವಾಗಿ ತೋರುತ್ತಿವೆ, ಶಿವ ಶಿವಾ. ಚಂದ್ರ ಆದಿತ್ಯ ಸರ್ವದೇವತಾರೂಪವೆಲ್ಲ ಶ್ರೀ ವಿಭೂತಿಮಯವಾಗಿ ತೋರುತ್ತಿವೆ, ಶಿವ ಶಿವಾ. ಈ ಪರಿಯಿಂದ ತೋರಿ, ವ್ಯಾಪಕವಾಗಿ ಬೆಳಗುವ, ಪರಂಜ್ಯೋತಿ ಸ್ವರೂಪ ವಿಭೂತಿಯೆಂದು, ಒಲಿದು ಧರಿಸಿದವನೇ ಜೀವನ್ಮುಕ್ತನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಭಕ್ತಿಯ ಭಾವನಿಷೆ* ನಿಬ್ಬೆರಸಲಾಗಿ ಶಿವನ ತನ್ನ ವಶವ ಮಾಡಿತ್ತು ಭಕ್ತಿ. ಶಿವನ ನಡೆಸಿತ್ತು ಭಕ್ತಿ. ನುಡಿಸಿತ್ತು ಭಕ್ತಿ. ಶಿವನನುಣಿಸಿ ಊಡಿಸಿ ತೊಡಿಸಿತ್ತು ಭಕ್ತಿ. ಶಿವನ ಹಾಡಿಸಿ, ಕುಣಿದಾಡಿಸಿತ್ತು ಭಕ್ತಿ. ಇಂತಲ್ಲದೆ ವಿರಕ್ತಿಯಿಲ್ಲ. ಜ್ಞಾನವಿಲ್ಲ. ಇದು ಕಾರಣ, ಭಕ್ತಿಯೇ ಮುಕ್ತಿಯ ಜನನಿ, ತಾನೆ ಬೇರಿಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಜವನೆಯ್ದುವಡೆ, ಭಕ್ತಿಯಿಂದಲ್ಲದಾಗದು.
--------------
ಸ್ವತಂತ್ರ ಸಿದ್ಧಲಿಂಗ
ಭಾವಿಸುವ ಭಾವದ ವಿಕಾರವಳಿದು, ನಿರ್ಭಾವ ನೆಲೆಗೊಂಡು ಚಿದಾಕಾಶರೂಪನಾದ ಶರಣಂಗೆ ಭಾವವಿಲ್ಲ. ಭಾವವಿಲ್ಲವಾಗಿ ಮನವಿಲ್ಲ. ಮನವಿಲ್ಲವಾಗಿ ನೆನೆಯಲಿಲ್ಲ. ನೆನೆಯಲಿಲ್ಲದನುಪಮ ಸುಖಸಾರಾಯ ಶರಣ ಸರಿತ್ ಸಮುದ್ರವ ಕೂಡಿ ತೆರೆಯಡಗಿ ನಿಂದಂತೆ ಭಾವವಳಿದು ನಿಂದುದೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಲಿಂಗೈಕ್ಯವು.
--------------
ಸ್ವತಂತ್ರ ಸಿದ್ಧಲಿಂಗ
ಭಾವಲಯವಾದ ಮತ್ತೆ, ಇನ್ನು ಭಾವಿಸಲೇನುಂಟು ಹೇಳಾ, ಸಮ್ಯಗ್‍ಜ್ಞಾನಿಯಾದ ಮಹಾತ್ಮ ನಿರ್ಲೇಪಕಂಗೆ. ಕಾರ್ಯ ಕಾರಣವೆಂಬವೆಲ್ಲ ಶೂನ್ಯವಾದವು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಲಿಂಗೈಕ್ಯಂಗೆ.
--------------
ಸ್ವತಂತ್ರ ಸಿದ್ಧಲಿಂಗ
ಭೂತಪಂಚಕಕಾಯವ ಕಳೆದು ಗುರು ಶಿವಮಂತ್ರಕಾಯವ ಮಾಡಿ ಶಿವಜಾತನಾದ ಬಳಿಕ ಜಾತಿಸೂಚಕ ವಣಾಶ್ರಮವಿಲ್ಲವಾಗಿ, ದೇಹಾಭಿಮಾನವಿಲ್ಲ. ದೇಹಾಭಿಮಾನವಿಲ್ಲವಾಗಿ ಜಂಗಮದಲೈಕ್ಯನು. ಆ ಸಮ್ಯಜ್ಞಾನ ಜಂಗಮ ಲಿಂಗೈಕ್ಯಂಗೆ ಲಿಂಗಾಚಾರವಲ್ಲದೆ ಲೋಕಾಚಾರವಿಲ್ಲ. ಆತಂಗೆ ಸರ್ವವೂ ಲಿಂಗಮಯವಾಗಿ ತೋರುತ್ತಿಹುದಾಗಿ ಆ ಮಹಾತ್ಮನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ ವರ್ತಿಸುತ್ತಿಹನು.
--------------
ಸ್ವತಂತ್ರ ಸಿದ್ಧಲಿಂಗ