ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬ್ರಹ್ಮಾದಿ ದೇವತೆಗಳೇನು ಮುಕ್ತಿ ದಾನಶೀಲರೇ? ಅಲ್ಲ. ಮಾಯಾಪಾಶದಲ್ಲಿ ಬದ್ಧರಾದವರೆಲ್ಲ ಮುಕ್ತಿ ದಾನಶೀಲರಹರೇ? ಮುಕ್ತಿ ದಾನಶೀಲ ಶಿವನೊಬ್ಬನಲ್ಲದಿಲ್ಲವೆಂದು ನಂಬಿ ದೃಢವಿಡಿವುದು. ಹಲವ ಹಂಬಲಿಸಿ ಬಳಲಲೇಕೆ?. ಶ್ರೀಗುರುವಚನವ ತಿಳಿದು ನೋಡಿ ನೆನೆದು ಸುಖಿಯಹುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಮುಕ್ತಿ ದಾನಶೀಲನ.
--------------
ಸ್ವತಂತ್ರ ಸಿದ್ಧಲಿಂಗ
ಬಿಂದು ನಾದವನೊಂದು ರೂಪು ಮಾಡಿ ಮನವ ಸಂದ್ಥಿಸಿ ಬಂದ್ಥಿಸಿ ನಿಲಿಸಿ ಇಂದ್ರಿಯಂಗಳನೇಕಮುಖವ ಮಾಡಿ ಚಂದ್ರ ಸೂರ್ಯರನೊಂದು ಮಾರ್ಗದಲ್ಲಿ ನಡೆಸಿ ಚೌದಳಮಧ್ಯದ ಜ್ಞಾನಪೀಠದಲ್ಲಿರ್ದ ಅಮೃತಲಿಂಗವ ಕಂಡು ಕೂಡುವ ಬೆಡಗಿನ ಯೋಗವ ನಿಮ್ಮ ಶರಣರಲ್ಲದೆ ಉಳಿದ ಭವರೋಗಿಗಳೆತ್ತ ಬಲ್ಲರಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?
--------------
ಸ್ವತಂತ್ರ ಸಿದ್ಧಲಿಂಗ
ಬಿಸಜತಂತುವಿನ ಶೃಂಖಲದಿಂದ, ಮದಗಜ ಬಂಧವೊಡೆಯಬಲ್ಲುದೆ? ತರಗೆಲೆ ಮುಸುಕಿದಡೆ, ದಾವಾನಲ ಕೆಡಬಲ್ಲುದೆ? ಮಂಜಿನ ಪೌಜು ಸೂರ್ಯನ ಮುತ್ತಬಲ್ಲುದೆ? ನಿಮ್ಮನರಿದಾತಂಗೆ, ಪುಣ್ಯ ಪಾಪ ಕರ್ಮ ಲೇಪಿಸಬಲ್ಲವೆ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಬಂದುದ ಕಿರಿದು ಮಾಡಿ ಬಾರದುದ ಹಿರಿದು ಮಾಡಿ ಆವಾಗ ಚಿಂತಿಸಿ ಬಳಲುತ್ತಿ[ಹಿ]ರೇಕೆ? ಇರುಹೆ ಅರುದಿಂಗಳ ದವಸವ ಕೂಡಹಾಕುವಂತೆ ತಾ ಕಿರಿದಾದರೂ ಆಸೆ ಹಿರಿದಾಯಿತ್ತು. ಸ್ಥೂಲಕಾಯವಾದ ಮದಗಜಕ್ಕೇನು, ಮುಂದಕ್ಕೆ ಬೇಕೆಂಬ ಆಸೆಯುಂಟೆ? ಇಲ್ಲ. ಇರುಹೆಯ ಆನೆಯ ಅಂತರವ ನೋಡಿರಣ್ಣ. ಅರಿದು ಸಲಹುವ ಶಿವನಿದ್ದ ಹಾಗೆ ಬರಿದೆ ಆಸೆಯಿಂದಲೇಕೆ ಸಾವಿರಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಾಧೀನವನರಿಯದೆ?.
--------------
ಸ್ವತಂತ್ರ ಸಿದ್ಧಲಿಂಗ
ಬಡಕಲ ಪಶುವಿಂಗೆ ಬಲುದಂಡಿಯ ಕಟ್ಟಿದರೆ ಎಳೆದೆಳೆದು ಸಾವಂತೆ, ಸಾವುತ್ತಿದೆ ನೋಡ. ಅಜ್ಞಾನ ಜಡಜೀವರು ದೇಹವೆಂಬ ದಂಡಿಯ ಕಟ್ಟಿಸಿಕೊಂಡು, ಬಿಡಲುಪಾಯುವ ಕಾಣದೆ, ಹೊತ್ತು ತೊಳಲುತ್ತಿದ್ದರಲ್ಲ, ಜನ್ಮಜನ್ಮಾಂತರದಲ್ಲಿ. ಶಿವಭಕ್ತಿಯೆಂಬ ಸಜ್ಜನಿಕೆ ಬಂದರೀದೇಹವೆಂಬ ದಂಡಿಯ ಬಿಡಿಸುವ[ನ]ಯ್ಯಾ, ಕರುಣಿ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಬ್ರಹ್ಮಕಲ್ಪಿತವಾದ ತ್ರಿಪುರನುರುಹಬೇಕೆಂದು, ಪರಮೇಶ್ವರನು ತ್ರಿಯಕ್ಷಿಯಿಂದ ನೋಡುತ್ತಿರಲು, ಆ ಮೂರು ನೇತ್ರಂಗಳಿಂದ ಉದಕದ ಬಿಂದುಗಳು, ಭೂಮಿಯ ಮೇಲೆ ಪತನವಾಗಲು, ಸರ್ವಾನುಗ್ರಹಾರ್ಥವಾಗಿ, ರುದ್ರಾಕ್ಷಿಯ ವೃಕ್ಷಂಗಳು ಹುಟ್ಟಿದವಂದು ನೋಡಾ. ಆ ರುದ್ರಾಕ್ಷಿಯ ವೃಕ್ಷದ ಬೀಜಂಗಳ ಧರಿಸಿದವರು, ಸ್ಮರಿಸಿದವರು, ಕೊಂಡಾಡಿದವರು, ರುದ್ರಾಕ್ಷಿಯಲ್ಲಿ ಜಪವ ಮಾಡಿದವರು, ಕೈವಲ್ಯವನಿತೆಗೆ ವಲ್ಲಭರಾಗಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ ಸುಖದಿಹರು ನೋಡಾ.
--------------
ಸ್ವತಂತ್ರ ಸಿದ್ಧಲಿಂಗ
ಬ್ರಾಹ್ಮಣ ಮೂರ್ಖ ಪಂಡಿತ ಬ್ರಹ್ಮಚಾರಿ ಗೃಹಸ್ಥ ವಾನಪ್ರಸ್ಥ ಯತಿಯಾದಡಾಗಲಿ, ಶ್ರೀರುದ್ರಾಕ್ಷಿಯನೊಲಿದು ಧರಿಸುವುದು ಕಾಣಿರಣ್ಣ. ಮತ್ತೆ, ಜಪಕಾಲದಲ್ಲಿ, ತಪಕಾಲದಲ್ಲಿ, ದೇವಪೂಜೆಯಲ್ಲಿ, ಶ್ರೀರುದ್ರಾಕ್ಷಿಯನೊಲಿದು ಧರಿಸುವುದು ಕಾಣಿರಣ್ಣ. ಈ ಶ್ರೀಮಹಾ ರುದ್ರಾಕ್ಷಿಯನೊಲಿದು ಧರಿಸಿದ ಮಹಾತ್ಮನು, ಹೆಜ್ಜೆ ಹೆಜ್ಜೆಗೆ ಅಶ್ವಮೇಧಶತಯಾಗದ ಫಲವ ಪಡೆದು, ಬಳಿಕ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ, ಸುಖದಿಹನು ಕಾಣಿರಣ್ಣಾ.
--------------
ಸ್ವತಂತ್ರ ಸಿದ್ಧಲಿಂಗ
ಬಳ್ಳಿಯಲಡಗಿ ಕೋಟರದಲ್ಲಿ ತೋರುವ ತಾವರೆಯ ಬೀಜದಂತೆ, ನೀನು ಎನ್ನಂತರಂಗದಲ್ಲಡಗಿರ್ದ ಕಾರಣ, ಅಲ್ಲೆ ತೋರುವೆ ಎಲೆ ಅಯ್ಯ. ರನ್ನದ ಕಾಂತಿಯಂತೆ, ಎನ್ನೊಳಗಡಗಿರ್ದು ಮೈದೋರದ ಭೇದವ, ನಿಮ್ಮಲ್ಲಿ ಕಂಡೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಬ್ರಹ್ಮ ವಿಷ್ಣುಗಳಿಗಗೋಚರ ಪ್ರಸಾದವು. ಸಿದ್ಧ ಗಂಧರ್ವರಿಗಸಾಧ್ಯ ಪ್ರಸಾದವು. ನರಸುರ ಮನುಮುನಿಗಳಿಗಭೇದ್ಯ ಪ್ರಸಾದವು. ವಿಶ್ವದೊಳು ಪರಿಪೂರ್ಣವಾಗಿ, ವಿಶ್ವಕ್ಕಿತೀತವೆನಿಸಿದ ಪರಮ ಪ್ರಸಾದವು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮಶರಣಂಗೆ ಸಾಧ್ಯ, ಉಳಿದವರಿಗಸಾಧ್ಯವು.
--------------
ಸ್ವತಂತ್ರ ಸಿದ್ಧಲಿಂಗ
ಬೆಳಗು ಬರಲು ಕತ್ತಲೆ ಹರಿಯಿತ್ತು. ಸುಳಿಗಾಳಿ ಸುಸರವಾಯಿತ್ತು. ಇಳೆ ಜಲ ವಹ್ನಿಯೊಳಗಡಗಿತ್ತು. ಮೇಲೆ ಮಳೆಗಾಲ ಘನವಾಯಿತ್ತು. ಅರಳಿದ ಪುಷ್ಪದೊಳಗೆ ಘಳಿಲನೆ ಮೂರ್ತಿಗೊಂಡನೊಬ್ಬ ಶರಣ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಲಿಂಗದೊಳಗಾದನು ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ಬ್ರಹ್ಮಸ್ಥಾನದ ಬಳಿಯ ಸಹಸ್ರದಳಕಮಲ ಮಧ್ಯದಲ್ಲಿ ಸೂಕ್ಷ ್ಮರಂಧ್ರವೆಂಬ ಒಂದು ಕೈಲಾಸದ್ವಾರವುಂಟು. ಆ ದ್ವಾರಕವಾಟವ ತೆಗೆದು ನೋಡಲು ಕೋಟಿ ಚಂದ್ರಪ್ರಕಾಶದ ದಿವ್ಯಪೀಠದ ಮೇಲೆ ಮೂರ್ತಿಗೊಂಡಿದ್ದ ಶಿವನ ಕಂಡು ಆ ನೋಡಿದ ನೋಟವಲ್ಲಿಯೆ ಸಿಕ್ಕಿ ಬಾವವಚ್ಚೊತ್ತಿ, ಸರ್ವಕರಣಂಗಳು ನಿವೃತ್ತಿಯಾಗಿ ಮನ ಉನ್ಮನಿಯಲ್ಲಿ ನಿಂದು ಸಮರಸ ಸಮಾಧಿಯಲ್ಲಿ ಇದ್ದನಯ್ಯಾ ನಿಮ್ಮ ಶರಣ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಬೀಜದಿಂದ ಅಂಕುರ ತೋರಿದ ಬಳಿಕ ಬೀಜ ನಾಶವಪ್ಪುದು ನೋಡಯ್ಯ. ಪುಷ್ಟದಿಂದ ಫಲ ತೋರಿದ ಬಳಿಕ ಪುಷ್ಟ ನಾಶವಪ್ಪುದು ನೋಡಯ್ಯ. ಸತ್ಕರ್ಮದಿಂದ ತತ್ತ್ವ ವ್ಯಕ್ತವಾದ ಬಳಿಕ ಕರ್ಮ ನಾಶವಪ್ಪುದು ನೋಡಯ್ಯ. ಈ ಪರಿಯಿಂದ ಅಂಕುರ ಫಲದಂತೆ, ತಮ್ಮಲ್ಲಿ ತನ್ಮಯವಾಗಿರ್ದ ತತ್ತ್ವವ ತಾವರಿಯದೆ, ಹಲವು ಶಾಸ್ತ್ರವನೋದಿ ತಿಳಿವಿಲ್ಲದ ಮೂಢರೆಲ್ಲ ಹೊಲಬುಗೆಟ್ಟು ಹೋದರಲ್ಲ. ಅದೆಂತೆಂದಡೆ: ಗೋಪ ಕಕ್ಷೆಯಲ್ಲಿ ಛಾಗದ ಮರಿಯನಿಟ್ಟು ಮರಿಯ ಕಾಣೆನೆಂದು ಬಾವಿಯ ನಿಲಿಕಿ ನೋಡೆ ಬಾವಿಯ ನೀರೊಳಗೆ ಮರಿಯ ಬಿಂಬವ ಕಂಡು ಬಾವಿಯ ್ಲಲ್ವಿ ಬೀಳುವ ಗೋಪನಂತೆ, ಉಭಯಕುಚಮಧ್ಯಕೋಟರದಲ್ಲಿ ನಿದ್ರೆಗೆಯ್ವುತಿರ್ದ ಸುತನ ಮರೆದು, ಸುತನ ಕಾಣೆನೆಂದು ರೋದನವ ಮಾಡುವ ಮೂಢಸ್ತ್ರೀಯಂತೆ, ತಮ್ಮಲ್ಲಿದ್ದ ನಿಜತತ್ತ್ವವ ತಾವರಿಯದವರು ಆತ್ಮಾರ್ಥವಾಗಿ ಕೆಟ್ಟು ವ್ಯರ್ಥರಾದರೆಲ್ಲಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಬಯಲಲ್ಲಿ ಹುಟ್ಟಿದ ಶಿಶುವಿಂಗೆ, ಬಯಲ ತಾಯಿ ಬಂದು ಮೊಲೆಯ ಕೊಟ್ಟರೆ, ಬಯಲಮೃತವನುಂಡು ತೃಪ್ತಿಯಾಗೆ, ಬಯಲು ಸ್ವಯಂವೆಂದರಿದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಬಯಲೊಳಗೆ, ಬಯಲಾಯಿತ್ತು ಶಿಶು ನೋಡಾ.
--------------
ಸ್ವತಂತ್ರ ಸಿದ್ಧಲಿಂಗ
ಬ್ರಹ್ಮನಾಳಾಗ್ರದ ಸಹಸ್ರದಳಕಮಲ ಕರ್ಣಿಕಾಮಧ್ಯದೊಳು, ದ್ಯುಮಣಿ ಶಶಿ ಶಿಖಿ ಕೋಟಿಬೆಳಗ ಮೀರಿ ತೋರುವ ಪರಂಜ್ಯೋತಿಯನು, ಸುಮನ ಸುಜ್ಞಾನ ಸದ್ಭಾವನೆಗಳಿಂದ ನೆನೆನೆನೆದು, ಅರಿದರಿದು ಭಾವಿಸಿ ಭಾವಿಸಿ, ಶಿವಸುಖಾನಂದದೊಳಗೋಲಾಡುತ್ತ, ಶಿವಸುಖ ಸಹಸ್ರಮಡಿಯಾಗಿ ಮುಸುಕಿ, ತಾನಲ್ಲದೆ ನಾನೆಂಬುದಕ್ಕೆ ತೆರಹುಗೊಡದೆ ನಿಂದಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ, ತಾನು ತಾನಾದ ಶರಣನ ಏನ ಹೇಳಬಹುದು?
--------------
ಸ್ವತಂತ್ರ ಸಿದ್ಧಲಿಂಗ
ಬ್ರಹ್ಮ ವಿಷ್ಣು ಇಂದ್ರಾದಿ ದಿಕ್ಪಾಲಕರ ಪದವೆಲ್ಲ ತೃಣವತ್ತಾಯಿತ್ತು ಲಿಂಗಪದದ ಮುಂದೆ. ಯಕ್ಷ ಗಂಧರ್ವಾದಿಗಳ ಪದವೆಲ್ಲ ತೃಣವತ್ತಾಯಿತ್ತು ಲಿಂಗಪದದ ಮುಂದೆ. ಇನ್ನುಳಿದ ಪದವಂತಿರಲಿ, ರುದ್ರಪದ ಪ್ರಮಥಪದ ಘನವೆಂಬೆನೇ? ಕ್ಷಣಿಕವಾದವು ಲಿಂಗಪದದ ಮುಂದೆ. ಇದು ಕಾರಣ ಲಿಂಗಪದಕ್ಕಿಂಥ ಇನ್ನಾವುದೂ ಘನವಿಲ್ಲೆಂದರಿದು ಲಿಂಗಪದದಲ್ಲಿದ್ದ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನು.
--------------
ಸ್ವತಂತ್ರ ಸಿದ್ಧಲಿಂಗ