ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹುಸಿಯಿಲ್ಲದ ಶಿಷ್ಯನು, ಮರಹಿಲ್ಲದ ಗುರುವಿನ ಪಾದವ ಹಿಡಿದಡೆ, ಕುರುಹಿಲ್ಲದ ಲಿಂಗವ ಕೊಡಲಿಕ್ಕಾಗಿ, ತೆರಹಿಲ್ಲದಪ್ಪಲೊಡನೆ ಬರಿದಾದವು ತನುಮನಪ್ರಾಣಂಗಳೆಲ್ಲವು. ಈ ಬೆಡಗಿನುಪದೇಶವ ಪಡೆದ ಶಿಷ್ಯನಲ್ಲಿ, ಗುರುವಡಗಿ ಗುರು ಶಿಷ್ಯನಾಗಿ, ಎರಡೂ ಒಂದಾದ ಪರಿಯನೇನೆಂದುಪಮಿಸುವೆನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲೊಂದಾದ ಗುರುಶಿಷ್ಯರ?.
--------------
ಸ್ವತಂತ್ರ ಸಿದ್ಧಲಿಂಗ
ಹುಲ್ಲಹೊರೆಯೊಳಗೊಂದು ಕಿಚ್ಚು ಹುಟ್ಟಿ ಸುಡುವುದ ಕಂಡೆ. ಹುಲ್ಲ ಮೇವ ಎರಳೆಯ ಕೋಡು ಮುರಿದು ಅಡವಿಯಲ್ಲಿ ಬಿಟ್ಟುದ ಕಂಡೆ. ಬಲ್ಲಿದ ಬಲೆಗಾರನ ಬಲೆಯ ನೇಣು ಹರಿದು, ಬಲೆಯ ಬಿಟ್ಟುಹೋದುದ ಕಂಡೆ. ಅಟ್ಟೆಯ ಬಿಟ್ಟು ತಲೆ ಆಕಾಶವನಡರಿತ್ತ ಕಂಡೆ. ದೂರ ದಾರಿ ಸಾರೆಯಾದುದ ಕಂಡೆ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ ನಿಮ್ಮ ಶರಣ, ಹುಟ್ಟು ಮುರಿದು ಬಟ್ಟಬಯಲಾದುದ ಕಂಡೆ.
--------------
ಸ್ವತಂತ್ರ ಸಿದ್ಧಲಿಂಗ
ಹುಟ್ಟು ಹೊಂದೆಂಬುದಿಲ್ಲದ ದೇವಾ, ನಿಮ್ಮಿಂದ ನೀವೆ ಶೂನ್ಯದಲ್ಲಿ ನಿಂದು ಸ್ವಯಂಭುವಾದಿರಲ್ಲ. ಬೀಜ ವೃಕ್ಷದಂತೆ ಸಾಕಾರ ನಿರಾಕಾರವು ನೀವೆಯಾದಿರಲ್ಲ. ಸಕಲವೆಲ್ಲಕ್ಕೆ ಮೂಲಿಗರಾದಿರಲ್ಲ. ನಿಮ್ಮ ನಿಜವ ನೀವೇ ಅರಿವುತ್ತಿರ್ದಿರಲ್ಲ. ನಿಮ್ಮ ಮಹಿಮೆಯ ನೀವೇ ಬಲ್ಲಿರಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಹಲವು ತೃಣ ಕಾಷ್ಠಗಳಲ್ಲಿ ಅಗ್ನಿ ಬೆರದಿರ್ದಂತೆ, ಹಲವು ಘಟಜಲದಲ್ಲಿ ಸೂರ್ಯ ಬಿಂಬಿಸುತ್ತಿರ್ದಂತೆ, ಇಪ್ಪನಯ್ಯ ಶಿವನು ಸಕಲ ಜೀವರ ಹೃದಯದಲ್ಲಿ. ಬೆರಸಿಯೂ ಬೆರಸದಂತಿಪ್ಪನಯ್ಯಾ, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಹದಿನಾಲ್ಕು ಭುವನದಲ್ಲಿ ಮನೋವೇದ್ಯವಾಗಿ, ಅಲ್ಲಿಂದತ್ತತ್ತ ಮೀರಿದ ಘನದಲ್ಲಿ ಕೂಡಿದ ಶಿವಯೋಗಿಗೆ ಪ್ರಳಯವಿಲ್ಲ. ಅದೇನು ಕಾರಣವೆಂದಡೆ: ಆತನರಿವು ಅಖಂಡವಾಗಿ ಬೆಳಗುತ್ತಿರುವ ಕಾರಣ. ಜಲಾಗ್ನಿ ಪ್ರಳಯಂಗಳಾದಡೂ ಮರುತಾದಿತ್ಯರ ಪ್ರಳಯಂಗಳಾದಡೂ ಶಿವನ ನೆನಹಿಂದ ಮನವು ಶಿವಮಯವಾಗಿ ಮನವಿಲ್ಲದ ಮುಕ್ತಂಗೆ ಕೇಡು ಮುನ್ನಿಲ್ಲ ಆತ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ, ನಿತ್ಯನಾಗಿಹನು.
--------------
ಸ್ವತಂತ್ರ ಸಿದ್ಧಲಿಂಗ
ಹೊನ್ನು ಹೆಣ್ಣು ಮಣ್ಣು ತನಗೆ ಸಂಬಂಧವೆಂದು ಹೇಳಿಕೊಂಬರು ತನಗೆ ಸಂಬಂಧವೇನು? ಬ್ರಹ್ಮಚಾರಿಯಾದ ಮೇಲೆ[ಬಿ]ಡದಾಚರಿಸಿದರೆ. ಮುಕ್ತಿಸ್ಥಲ ದೂರವಾಯಿತ್ತು. ಅದು ಇದ್ದರೇನು? ಪರೋಪಕಾರವಿರಬೇಕು. ಜಂಗಮಕ್ಕೆ ಹೆಣ್ಣಿನಲ್ಲಿ ಸಿಕ್ಕಿದರೆ ಅವರಿಗೆ ಹಿಂದಣ ಸಂಬಂಧವಿದ್ದ ಕಾರಣ ದೊರಕಿತ್ತು. ಆವ ನಡೆಯಲ್ಲಿ ನಡೆದರೇನು? ಕಂಡು ಮನದಲ್ಲಿ ಜರಿದೆನಾದರೆ ಜಂಗಮವೆನಗಿಲ್ಲ. ಪಾದೋದಕ ಪ್ರಸಾದಕ್ಕೆ ದೂರವಾಯಿತ್ತು. ನಿಮ್ಮನರಿದು ನಡೆದಾತಂಗೆ ಸಾಧನೆಯಾಗುವುದಲ್ಲದೆ, ಬೆಳಗಿನ ಕತ್ತಲೆಯ ಕಂಡು ಕತ್ತಲೆಯಾಯಿತ್ತೆಂದು, ದೀಪವ ಮುಟ್ಟಿಸಲೆಂದು, ತನ್ನೊಳಗಿರ್ದ ಜೋತಿಯ ಬೆಳಗಮಾಡಿ, ಜ್ಞಾನವನುದ್ಧರಿಸಿರ್ಪ ಶರಣನ ಹೆಜ್ಜೆಯ ತಿಳಿವರೆ? ನೋಡಾ, ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಹಾವಾಡಿಗ ಹಾವನಾಡಿಸುವಲ್ಲಿ, ತನ್ನ ಕಾಯ್ದುಕೊಂಡು, ಹಾವನಾಡಿಸುವಂತೆ, ಆವ ಮಾತನಾಡಿದಡೂ, ತನ್ನ ಕಾಯ್ದು ಆಡಬೇಕು. ಅದೆಂತೆಂದಡೆ, ತನ್ನ ವಚನವೆ ತನಗೆ ಹಗೆಯಹುದಾಗಿ. ಅನ್ನಿಗರಿಂದ ಬಂದಿತ್ತೆನ್ನಬೇಡ. ಅಳಿವುದು ಉಳಿವುದು ತನ್ನ ವಚನದಲ್ಲಿಯೆ ಅದೆ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ಹಗೆಯು ಕೆಳೆಯು ತನ್ನ ವಚನವೇ, ಬೇರಿಲ್ಲ.
--------------
ಸ್ವತಂತ್ರ ಸಿದ್ಧಲಿಂಗ
ಹುರಿದ ಬೀಜದಂತೆ, ಬೆಂದ ನುಲಿಯಂತೆ, ಹಿಂದಣಂಗ ಉಂಟೆ ಹೇಳಾ? ಸಮ್ಯಗ್ ಜ್ಞಾನಾಗ್ನಿಯಲ್ಲಿ ದಗ್ಧವಾದ ಜನ್ಮ ಬೀಜವನುಳ್ಳ ಶರಣನು, ಶಿವಕಾಯವನಾಶ್ರಯಿಸಿ ಶಿವ ತಾನಾಗಿಹನಲ್ಲದೆ, ತನಗೆ ಬೇರೆ ಕಾಯವಿಲ್ಲ. ತಾನೆಂಬುದು ಮುನ್ನವೇ ಇಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಲಿಂಗವೇ ಅಂಗವಾದಂಗೆ.
--------------
ಸ್ವತಂತ್ರ ಸಿದ್ಧಲಿಂಗ
ಹರಗಣಂಗಳೆಲ್ಲ ನರಗಣಂಗಳಾಗಿ ಒಬ್ಬರ ಆಗಿಂಗೆ ನೆರೆದು ಒಬ್ಬರ ಚೇಗಿಂಗೆ ನೆರೆದು ನುಡಿವರು. ಒಬ್ಬರು ಒಳ್ಳಿಹರು, ಒಬ್ಬರು ಹೊಲ್ಲಹರು ಎಂದು ತಮತಮಗೆಲ್ಲ ನುಡಿವರು, ಇದೇನು ಪಂಚಾಕ್ಷರಿ ಮಂತ್ರವೇ? ಇದೇನು ಮಹಾನುಭಾವದ ನುಡಿಯೇ? ಹೊತ್ತು ಹೋಕಿನ ಮಾತ ಕಲಿತವರೆಲ್ಲ, ಮೃತ್ಯುವಿನ ಬಾಯತುತ್ತಾದುದ ಕಂಡು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಮ್ಮ ಶರಣ ನೋಡಿ ನಗುತಿರ್ದನು.
--------------
ಸ್ವತಂತ್ರ ಸಿದ್ಧಲಿಂಗ
ಹೊತ್ತುಳ್ಳಲ್ಲಿ ಅಗ್ಛವಣಿ ಪತ್ರೆ ಪುಷ್ಪವ ತಂದು, ಅರ್ಥಿಯಲ್ಲಿ ಶಿವಲಿಂಗಪೂಜೆಯ ಮಾಡಲು, ಎತ್ತಿದ ಮಣಿಮಕುಟದ ಮೊತ್ತದ ಗಣಂಗಳ ನಡುವೆ, ಮೃತ್ಯುಂಜಯನೊಯ್ದಿರಿಸುವನವರ, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಹಲವು ದೇವರುಗಳ ಭಜಿಸಿ ಹೊಲಬುದಪ್ಪಿ ಹೋದರೆಲ್ಲ. ದೇವರುದೇವರೆಂದರೇನು? ಒಮ್ಮರ ದೇವರೇ? ವಿಶ್ವಾಧಿಪತಿ ಶಿವನೊಬ್ಬನೆ ದೇವನಲ್ಲದೆ, ಉಳಿದವರೆಲ್ಲ ದೇವರೆ? ಬ್ರಹ್ಮ ದೇವರೆಂಬಿರೇ? ಬ್ರಹ್ಮನ ಶಿರವ ಹರ ಚಿವುಟಿದ. ವಿಷ್ಣು ದೇವರೆಂಬಿರೇ? ಹತ್ತವತಾರದಲ್ಲಿ ಹರನಿಂದ ಹತಿಸಿಕೊಂಡ. ಇಂದ್ರ ದೇವರೆಂಬಿರೇ? ಇಂದ್ರನ ಮೈಯೆಲ್ಲಾ ಭಗವಾಗಿ ನಿಂದೆಗೊಳಗಾದ. ಚಂದ್ರ ದೇವರೆಂಬಿರೇ? ಕುಂದ ಹೆಚ್ಚ ತಾಳಿ ಕ್ಷಣಿಕನಾದ. ಸೂರ್ಯ ದೇವರೆಂಬಿರೇ? ಸೂರ್ಯ ಕುಷ*ರೋಗದಿಂದ ಭ್ರಷ್ಟಾದ. ಇನ್ನುಳಿದ ದೇವತೆಗಳು ಭಂಗಬಟ್ಟುದಕ್ಕೆ ಕಡೆಯಿಲ್ಲ. ``ಸರ್ವದೇವ ಪಿತಾ ಶಂಭುಃ ಭರ್ಗೋಃ ದೇವಸ್ಯ ಧೀಮಹಿ' ಎಂದುದಾಗಿ, ಸರ್ವದೇವರುಗಳ ಉತ್ಪತ್ಯ ಸ್ಥಿತಿ ಲಯಂಗಳ ಮಾಡುವ ಕರ್ತ ಶಿವನೊಬ್ಬನೇ ದೇವನೆಂದು ನುಡಿದೆನು ನಡೆದೆನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲದೆ ಇಲ್ಲವೆಂದು.
--------------
ಸ್ವತಂತ್ರ ಸಿದ್ಧಲಿಂಗ
ಹಲವು ಕಾಲದಿಂದಗಿದಗಿದು ತಿಂದು, ಸವಿಗಲಿತ ಮಾಯಾರಕ್ಕಸಿ ಬಿಡೆಂದರೆ ಬಿಡುವಳೆ? ಇವಳ ಬಾಧೆಯ ಗೆಲಿವರೊಂದುಪಾಯವ ಕಾಬುದು ಕಾಣಿರಯ್ಯ. ಎಲ್ಲ ದೇವರಿಗೆ ಬಲ್ಲಿದ ಪರಶಿವನ ಮರೆಯ ಹೊಕ್ಕು ಇವಳ ಬಾಯ ಟೊಣೆವುದಯ್ಯ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಬೆರಸಬೇಕಾದಡೆ.
--------------
ಸ್ವತಂತ್ರ ಸಿದ್ಧಲಿಂಗ
ಹಗಲಿರುಳ ನುಂಗಿದರೆ ಉದಯಾಸ್ತಮಾನ ನಿಂದಿತ್ತು. ಸಾಕಾರವ ನಿರಾಕಾರ ನುಂಗಿ ಏಕವಾಯಿತ್ತು. ಲೋಕಲೌಕಿಕವೆಂಬುದಿಲ್ಲದೆ ಏಕವಾಯಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆನ್ನಲಿಲ್ಲದೆ ಏಕವಾಯಿತ್ತು.
--------------
ಸ್ವತಂತ್ರ ಸಿದ್ಧಲಿಂಗ
ಹಣೆಗಣ್ಣು ಕೊರಳಕಪ್ಪು ಫಣಿಕುಂಡಲ ದಶಭುಜ ಉಡುಪತಿಯ ಜಡೆಯ ನಡುವಿನ ಗಂಗೆಯ ಉಡಿಯ ಪುಲಿಚರ್ಮವ ತೊಡಿಗೆಯ ಕರೋಟಿಮಾಲೆಯ ಹಿಡಿದ ಕಂಕಾಳದಂಡವ, ಇವನಡಗಿಸಿ ಮೃಡ ಶರಣನಾಮವಿಡಿದು ಚರಿಸಿದನೆಂಬ ದೃಢಭಕ್ತಿಯಿಲ್ಲದವರಿಗೆ ಶಿವನೊಲಿಯೆಂದರೆಂತೊಲಿವ ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಹೊನ್ನು ಹೆಣ್ಣು ಮಣ್ಣೆಂಬ ಸೊಕ್ಕನಿಕ್ಕಿ ಸಿಕ್ಕಿಸಿ ಕೆಡಹಿದನಯ್ಯಾ ಜೀವರ, ಮುಕ್ಕಣ್ಣ ಶಿವನು. ಕಾಲನಿಗೊಪ್ಪಿಸಿ ಜಗವ ಠಕ್ಕಿಸಿ ಮಿಕ್ಕು ಮೀರಿ ಹೋದನಯ್ಯ, ಶಿವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಹಲವು ಬಣ್ಣದ ಮೃಗದ ನೆಲೆಯನರಿದೆವೆಂದು ಹಲಬರು ತಲೆವಾಲಗೆಟ್ಟರು ನೋಡಾ. ಬಣ್ಣವ ಬೇರುಮಾಡಿದವಂಗಲ್ಲದೆ, ಮೃಗದ ನೆಲೆಯ ಕಾಣಬಾರದು. ಮೃಗದ ನೆಲೆಯ ಕಂಡರೇನು, ಆ ಮರ್ಕಟನ ಕಾಟ ಬೆನ್ನ ಬಿಡದು. ಆ ಮರ್ಕಟನ ಹಿಡಿದು ಶೂಲಕ್ಕೆ ಹಾಕಿದ ಬಳಿಕ ನಿಶ್ಚಿಂತೆಯಹುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಜ ಪದವನೆಯ್ದುವಂಗೆ.
--------------
ಸ್ವತಂತ್ರ ಸಿದ್ಧಲಿಂಗ
ಹರ ಹರ ಶಿವ ಶಿವ ಪ್ರಸಾದದ ಘನವ, ಪ್ರಸಾದಿಯ ಘನವನೇನೆಂದುಪಮಿಸುವೆನು? ಪ್ರಸಾದವಿಲ್ಲದೆ ಪ್ರಸಾದಿಯಿಲ್ಲ. ಪ್ರಸಾದಿಯಿಲ್ಲದೆ ಪ್ರಸಾದವಿಲ್ಲ. ಶಿವ ಶಿವ ಒಂದನೊಂದು ಬಿಡದೆ ಎರಡೊಂದಾಗಿ ಕೂಡಿ ಬೆಳಗುವ ಪರಿಯ ನೋಡಾ! ಪ್ರಸಾದವು ಪ್ರಸಾದಿಯ ಗ್ರಹಿಸಿ ಪ್ರಸಾದಿಯಾಯಿತ್ತು. ಪ್ರಸಾದಿಯೂ ಪ್ರಸಾದವ ಗ್ರಹಿಸಿ ಪ್ರಸಾದವಾ- ದಿರವನೇನೆಂಬೆನು?. ಇಂತು ಒಂದರೊಳಗೊಂದು ಕೂಡಿ ಎರಡೊಂದಾದ ಘನವನುಪಮಿಸಬಾರದು. ವಾಙ್ಮನಕ್ಕತೀತವಾದ ನಿಲವನು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ತಾನೆ ಬಲ್ಲಾ.
--------------
ಸ್ವತಂತ್ರ ಸಿದ್ಧಲಿಂಗ
ಹಲವು ಮಾತಕಲಿತ ಉಲಿಗಿತಿ ಸೂಳೆಯ ಹಾಂಗೆ, ಉಲಿವರ ಕಂಡಡೆ ನಿಃಕಪಟಿ ಒಳ್ಳಿದನೆಂಬರು. ಪಾಪಕ್ಕಂಜಿ ಸತ್ಯವನ್ನಾಡಿದಡೆ ಈತನ ಒಳಗೆಣಿಸರು ಅತಿ ಕಪಟಿಯೆಂಬರು. ದುರ್ಜನರ ಮುಂದೆ ಸಜ್ಜನಿಕೆ ಮೆರವುದೆ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನೀ ಮಾಡಿದ ಮಾಹೇಂದ್ರಜಾಲದ ಮಾಯಕೆ ನಾನು ಬೆರಗಾದೆನು.
--------------
ಸ್ವತಂತ್ರ ಸಿದ್ಧಲಿಂಗ
ಹಿಂದು ಮುಂದಣ ಮನದ ಸಂಕಲ್ಪ ವಿಕಲ್ಪವಳಿದು, ರೂಪಜ್ಞಾನ ನಿರೂಪಜ್ಞಾನವೆಂಬುವೇನೂ ತೋರದೆ, ಜ್ಞಾನ ಜ್ಞೇಯ ಧ್ಯಾನ ಧ್ಯೇಯ ಲಕ್ಷಾ ್ಯಲಕ್ಷ ್ಯ ದೃಶ್ಯಗಳೆಂಬ ವಿಚಾರವಳಿದ ಜೀವನ್ಮುಕ್ತಂಗೆ ಅರಿಯಲೊಂದಿಲ್ಲ, ಮರೆಯಲೊಂದಿಲ್ಲ, ತೆರೆಯಡಗಿದ ಅಂಬುನಿಧಿಯಂತೆ ನಿಶ್ಚಿಂತನಾಗಿದ್ದನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೇ ತಾನಾಗಿ.
--------------
ಸ್ವತಂತ್ರ ಸಿದ್ಧಲಿಂಗ
ಹೇಡಿಮನದ ಸಖತ್ವದಿಂದೇನಾಗದಯ್ಯ? ಇಹಪರದ ವೈರಾಗ್ಯವ ಕೆಡಿಸಿ ಹೇಡಿಗೊಳಿಸಿತ್ತು. ಮುಂದಕ್ಕೊಂದಡಿಯಿಡಲೀಯದೆ ಹಿಂದಕ್ಕೆ ಹಿಡಿದೆಳೆವುತ್ತಿದೆ. ಈ ಮನಕ್ಕೆ ಜ್ಞಾನಶಾಸ್ತ್ರವ ಕೊಟ್ಟು ಕಲಿಮಾಡಿ ಸನ್ನಿಧಿಯಲ್ಲಿ ನಿಮ್ಮಾಳಾಗಿರಿಸಿಕೊಳ್ಳಯ್ಯಾ ಈ ಮನವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಹರಿವ ಮನ ವಾಯುವನೊಂದು ಹುರಿಯ ಮಾಡಿ ಮನವ ಸ್ಥಿರಗೊಳಿಸಿ, ಸಗುಣ ಧ್ಯಾನದಲ್ಲಿ ಮನ ಸವೆದು, ನಿರ್ಗುಣದಲ್ಲಿ ನಿಂದು, ಆ ನಿರ್ಗುಣ ಧ್ಯಾನ ಬಲಿದು, ಸಗುಣ ನಿರ್ಗುಣದಲ್ಲಿ ಅಡಗಿ ಆ ನಿರ್ಗುಣವಾದ ನಿಜದಲ್ಲಿ ಮನೋಲಯವಾದುದೇ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಲ್ಲಿ ಪರಮ ರಾಜಯೋಗವು.
--------------
ಸ್ವತಂತ್ರ ಸಿದ್ಧಲಿಂಗ
ಹರಿವ ಹರಿಯ ನಿಲಸಿ, ಉರಗನ ನಿದ್ರೆಯ ಕೆಡಿಸಿ, ಸರೋವರದ ಕಮಲದೊಳಗಣ ಉದಕವ ಕುಡಿಯಬಲ್ಲರೆ ಯೋಗ. ಅರಮನೆಯೊಳಗಣ ಅರಗಿಳಿಯ ಹರಮಂತ್ರವನೋದಿಸಬಲ್ಲರೆ ಯೋಗ. ಅರಸು ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಹೊರೆಯಿಲ್ಲದೆ ಕೂಡಬಲ್ಲರೆ ಅದು ಪರಮಯೋಗ.
--------------
ಸ್ವತಂತ್ರ ಸಿದ್ಧಲಿಂಗ