ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಂಡಜ ಸ್ವೇದಜ ಉದ್ಭಿಜ ಜರಾಯುಜವೆಂಬ, ಜೀವರಾಶಿಯ ಕಂಡಿಯಲ್ಲಿ ಹೊಕ್ಕು ಹೊರಡುವ, ಜೀವನ ತಿಳಿಯಲರಿಯದನ್ನಕ್ಕ, ಕಾಯದ ಜೀವದ ಸಂದ ಬಿಚ್ಚಲರಿಯದನ್ನಕ್ಕ, ಮತ್ತೇನ ಮಾಡಿದಡೇನು ಫಲ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನರಿಯದವನ ಬಾಳುವೆ, ಮೃತಶರೀರದಂತೆ.
--------------
ಸ್ವತಂತ್ರ ಸಿದ್ಧಲಿಂಗ
ಅಂಗೇಂದ್ರಿಯ ಕರಣ ಹರಣದಲ್ಲಿ ಲಿಂಗವ ಧರಿಸಿ ಲಿಂಗಾಂಗಿಯಾದನಯ್ಯ ನಿಮ್ಮ ಶರಣ. ಅದೆಂತೆಂದಡೆ: ಘ್ರಾಣದಲ್ಲಿ ಲಿಂಗವ ಧರಿಸಿದನಾಗಿ, ಘ್ರಾಣ ಲಿಂಗದ ಘ್ರಾಣವಾಯಿತ್ತು. ಜಿಹ್ವೆಯಲ್ಲಿ ಲಿಂಗವ ಧರಿಸಿದನಾಗಿ, ಜಿಹ್ವೆ ಲಿಂಗದ ಜಿಹ್ವೆಯಾಯಿತ್ತು. ನೇತ್ರದಲ್ಲಿ ಲಿಂಗವ ಧರಿಸಿದನಾಗಿ, ನೇತ್ರ ಲಿಂಗದ ನೇತ್ರವಾಯಿತ್ತು. ತ್ವಕ್ಕಿನಲ್ಲಿ ಲಿಂಗವ ಧರಿಸಿದನಾಗಿ, ತ್ವಕ್ಕು ಲಿಂಗದ ತ್ವಕ್ಕಾಯಿತ್ತು. ಶ್ರೋತ್ರದಲ್ಲಿ ಲಿಂಗವ ಧರಿಸಿದನಾಗಿ, ಶ್ರೋತ್ರ ಲಿಂಗದ ಶ್ರೋತ್ರವಾಯಿತ್ತು. ಮನದಲ್ಲಿ ಲಿಂಗವ ಧರಿಸಿದನಾಗಿ, ಮನ ಲಿಂಗದ ಮನವಾಯಿತ್ತು. ಸರ್ವಾಂಗದಲ್ಲಿ ಲಿಂಗವ ಧರಿಸಿದನಾಗಿ, ಸರ್ವಾಂಗಲಿಂಗವಾಯಿತ್ತು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣಂಗೆ.
--------------
ಸ್ವತಂತ್ರ ಸಿದ್ಧಲಿಂಗ
ಅಂಗೈಯ ಲಿಂಗದಲ್ಲಿ ಕಂಗಳು ನಟ್ಟು, ಎವೆಹಳಚದೆ, ಮನ ಕವಲಿಡದೆ, ಚಿತ್ರದ ರೂಹಿನ ತೆರನಂತೆ, ಲಿಂಗವ ನೋಡಿ ನೋಡಿ, ಕಂಗಳಲಚ್ಚೊತ್ತಿ, ಮನದಲ್ಲಿ ನೆನೆನೆನೆದು ನೆರೆವ ಲಿಂಗಸುಖ ಸಂಪನ್ನರನೆ, ಲಿಂಗವೆಂಬೆನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅಶನಕ್ಕಾಗಿ ವನಸಕ್ಕಾಗಿ ದೆಸೆ ದೆಸೆಯಲ್ಲಿರ್ದವರೆಲ್ಲ ನೆರೆದ ಪರಿಯ ನೋಡಾ. ಒಬ್ಬರ ನುಡಿ ಒಬ್ಬರಿಗೆ ಸೊಗಸದ ಕಾರಣ ಮಥನಕರ್ಕಶದಲ್ಲಿರ್ಪ ಪರಿಯ ನೋಡಾ. ಅಯ್ಯಾ ಜೀಯಾ ದೇವರು ಎಂಬರು ಮತ್ತೊಂದು ಮಾತ ಸೈರಿಸದೆ. ಎಲವೊ ಎಲವೊ ಎಂದು ಕುಲವೆತ್ತಿ ನುಡಿವರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನೀ ಮಾಡಿದ ಮಾಯದ ಬಿನ್ನಾಣದ ಮರೆಯಲ್ಲಿದ್ದವರ ಕಂಡು ನಾ ಬೆರಗಾದೆನು.
--------------
ಸ್ವತಂತ್ರ ಸಿದ್ಧಲಿಂಗ
ಅಖಿಳಾಗಮ ಶ್ರುತಿ ಪುರಾಣಂಗಳು ವಿಭೂತಿಯನೊಲಿದು ಧರಿಸೆಂದು ಹೇಳುತ್ತಿವೆ ನೋಡಾ. ಇದನರಿದರಿದು ಧರಿಸದಿಹ ನರನೆ ಪತಿತನೆಂದು ಸಾರುತ್ತಿವೆ ವೇದಾಗಮಂಗಳು ನೋಡಾ. ಪಂಚಾಕ್ಷರಿಯ ಮಂತ್ರ ಸಹಿತ ವಿಭೂತಿಯನು, ಲಲಾಟಾದಿ ಸಮಸ್ತ ಸ್ಥಾನಂಗಳಲ್ಲಿ ಅಲಂಕರಿಸಲು, ಆತನ ಲಲಾಟದ ದುರ್ಲಿಖಿತವ ತೊಡೆದು, ನಿಜಸುಖವೀವುದೆಂದು ಹೇಳುತ್ತಿವೆ ಸಕಲ ಸಂಹಿತೆಗಳು. ಇಂತಪ್ಪ ವಿಭೂತಿಯ ಧಾರಣವನುಳಿದು, ಮೋಕ್ಷವನೆಯ್ದಿಹೆನೆಂಬುವನ ಬುದ್ಧಿ, ವಿಷಪಾನವ ಮಾಡಿ, ಶರೀರಕ್ಕೆ ನಿತ್ಯತ್ವದ ಪಡೆದೆಹೆನೆಂಬವನಂತೆ. ಇದು ಕಾರಣ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಜವ ಬೆರಸುವಡೆ, ಶ್ರೀವಿಭೂತಿಯ ಧಾರಣವೇ ಮುಖ್ಯವಯ್ಯ.
--------------
ಸ್ವತಂತ್ರ ಸಿದ್ಧಲಿಂಗ
ಅಯ್ಯಾ ನಿಮ್ಮ ಶರಣರು ಕರ್ಮಕಾಯರಲ್ಲ, ಜ್ಞಾನಕಾಯರು ನೋಡಯ್ಯ. ಅದೇನು ಕಾರಣವೆಂದಡೆ: ಭಕ್ತಿಕಾರಣ ಅವತರಿಸಿದರಾಗಿ. `ಭಕ್ತಕಾಯ ಮಮಕಾಯ' ವೆಂದುದು ಗುರುವಚನ. ದೇವಗೂ ಭಕ್ತಗೂ ಕಾಯ ಒಂದಾದ ಕಾರಣ, ಕರ್ಮರಹಿತರು ನಿಮ್ಮ ಶರಣರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅಂಗ ಲಿಂಗವೆಂಬ ಸಂದು ಸಂಶಯವಳಿದು ಲಿಂಗಾಂಗದೈಕ್ಯವನರಿದು ಕೂಡಿದ ಶಿವಯೋಗಿಗೆ ನಿಶ್ಚಿಂತತ್ವವೇ ಶಿವಧ್ಯಾನ; ಸಕಲ ಕ್ರೀಗಳು ಲಯವಾದ ಇರವೇ ಶಿವಪೂಜೆ; ಚರಾಚರವನು ವ್ಯಾಪಿಸಿ ನಿಂದ ನಿಶ್ಚಲವೇ ಪ್ರದಕ್ಷಿಣ; ಸೋಹಂ ದಾಸೋಹಂ ಭಾವವಳಿದು ಆ ಶಿವೋಹಂ ಭಾವ ತನ್ನಲ್ಲಿ ನಿಂದುದೇ ನಮಸ್ಕಾರ; ಸ್ವಯ ಪರವೆಂಬ ವಿವೇಕದನುಭಾವವಡಗಿ ನಿಂದ ಮೌನವೇ ಸ್ತೋತ್ರ; ಬಿಂದು ನಾದಾದಿ ಉಪಾಧಿಯ ತೊಲಗಿದ ಪರಿಪೂರ್ಣ ಶಿವನಾಗಿ ತಾ ಶಿವನಾದೆನೆಂಬ ಚಿದಹಂಭಾವವಡಗಿ ವಿಧಿ ನಿಷೇಧಂಗಳನರಿಯದುದೇ ಮಹಾಶೀಲ; ಸರ್ವಜ್ಞತ್ವ ನಿತ್ಯತೃಪ್ತಿ ಅನಾದಿಪ್ರಬೋಧ, ಸ್ವತಂತ್ರ ನಿತ್ಯ ಶಕ್ತಿ ಎಂಬ ಷಡ್ಗುಣೈಶ್ವರ್ಯ ತನಗೂ ಶಿವಂಗೂ ಸಮವಾಗಿ ಶಿವನೊಳಗೆ ತಾನು, ತನ್ನೊಳಗೆ ಶಿವನು ಅಡಗಿ ಸಮರಸವಾದುದೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಪರಮನಿರ್ವಾಣವೆನಿಸುವುದು.
--------------
ಸ್ವತಂತ್ರ ಸಿದ್ಧಲಿಂಗ
ಅದ್ವೆ ೈತವ ಸಾಧಿಸಿ ಸರ್ವವೂ ಶಿವನೆಂಬರು ಎನಲಾಗದು. ಸರ್ವಕ್ಕೂ ಲಯ ಗಮನವುಂಟು ಶಿವಂಗಿಲ್ಲವಾಗಿ. ಯಂತ್ರವಾಹಕನೆಲ್ಲಿಯೂ ಪರಿಪೂರ್ಣವಾಗಿಹನೆಂದಡೆ ಎಲ್ಲವೂ ಶಿವನಾಗಬಲ್ಲವೆ? ಆಗಲರಿಯವು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು, ಪದ್ಯಪತ್ರಜಲದಂತೆ ಹೊದ್ದಿಯು ಹೊದ್ದದಂತಿಹನು.
--------------
ಸ್ವತಂತ್ರ ಸಿದ್ಧಲಿಂಗ
ಅಯ್ಯಾ, ನಿಮಗೆ ಪತ್ರೆ ಪುಷ್ಪದಿಂದ ಪೂಜೆಯ ಮಾಡುತಿರ್ದಡೇನು ಸರ್ವೇಂದ್ರಿಯಂಗಳು ಸೋಂಕಿದವೆಲ್ಲ ನಿಮ್ಮ ಪೂಜೆಯಾಗಿ ಮಾಡದನ್ನಕ್ಕಾ? ಅಯ್ಯಾ, ನಿಮ್ಮ ನೆನೆವುತ್ತಿರ್ದಡೇನು ನೆನೆವ ಮನದಲ್ಲಿ ನಿಮ್ಮ ನೆಲೆಗೊಳಿಸಿ ಮನ ನಿಮ್ಮಲ್ಲಿ ಲೀಯವಾಗದನ್ನಕ್ಕಾ? ಅಯ್ಯಾ ನಿಮಗೆ ಸಕಲ ಸುಯಿಧಾನವನರ್ಪಿಸುತ್ತಿರ್ದಡೇನು ಅರ್ಪಣದೊಳಗೆ ತನ್ನ ನಿಮ್ಮಲ್ಲಿ ಅರ್ಪಿಸಿ ನಿಮ್ಮೊಳಗಾಗದನ್ನಕ್ಕಾ? ಅದು ಕಾರಣ, ತನುಗುಣವಿಡಿದು ಲಿಂಗವ ಮುಟ್ಟಿ ಪೂಜೆಯ ಮಾಡಿದವರೆಲ್ಲ, ನಿಮಗೆ ಮುನ್ನವೇ ದೂರವಾದರು. ನಾನಿದನರಿದು ಅವಿರಳ ಲಿಂಗಾರ್ಚನೆಯ ಮಾಡಿ ನಿಮ್ಮೊಳಗಾದೆನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅರ್ಥದಲ್ಲೇನೂ ಸುಖವಿಲ್ಲ. ಅರ್ಥವಗಳಿಸಿ ಆತ್ಮಪುತ್ರರ್ಗಿರಿಸಬೇಡ. ಆರಿಗಾರೂ ಇಲ್ಲ. ಶಿವನಲ್ಲದೆ ಹಿತವರಿಲ್ಲವೆಂದರಿದು, ಶಿವನೊಡವೆಯ ಶಿವನವರಿಗೆ ಕೊಡು ಮರುಳೆ. ಅರ್ಥದಲ್ಲೇನೂ ಸುಖವಿಲ್ಲ. ಅರ್ಥವನಾರ್ಜಿಸುವಲ್ಲಿ ದುಃಖ. ಅರ್ಜಿಸಿದ ಧನವ ರಕ್ಷಿಸುವಲ್ಲಿ ದುಃಖ. ನಾಶವಾದಡೆ ದುಃಖ, ವೆಚ್ಚವಾದಡೆ ದುಃಖ. ಈ ಪರಿಯಲ್ಲಿ ಅರ್ಥದಿಂದ ಸದಾ ದುಃಖವಡೆವವರಿಗೆ ಸುಖವಿಲ್ಲೆಂದರಿಯದೆ, ಧನದರ್ಥದ ಮರವೆಯಲ್ಲಿ ಬಳಲುತ್ತಿಹ, ಮನುಜರಿಗಿನ್ನಾವ ಗತಿಯಿಲ್ಲವಯ್ಯ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅಯ್ಯಾ ನಿನ್ನ ಭಕ್ತನು ನಿನ್ನನಲ್ಲದೆ ಕೇಳನಾಗಿ, ಆತನ ಶ್ರೋತ್ರದಲ್ಲಿ ನಿನ್ನ ಶೋತ್ರಪ್ರಸಾದವ ತುಂಬುವೆ. ನಿನ್ನ ಭಕ್ತನು ನಿನ್ನನಲ್ಲದೆ ಸೋಂಕನಾಗಿ, ಆತನ ಕಾಯದಲ್ಲಿ ನಿನ್ನ ಕಾಯಪ್ರಸಾದವ ತುಂಬುವೆ. ನಿನ್ನ ಭಕ್ತನು ನಿನ್ನನಲ್ಲದೆ ಕಾಣನಾಗಿ, ಆತನ ನೇತ್ರದಲ್ಲಿ ನಿನ್ನ ನೇತ್ರಪ್ರಸಾದವ ತುಂಬುವೆ. ನಿನ್ನ ಭಕ್ತನು ನಿನ್ನನಲ್ಲದೆ ನುತಿಸನಾಗಿ, ಆತನ ಜಿಹ್ವೆಯಲ್ಲಿ ನಿನ್ನ ಜಿಹ್ವಾಪ್ರಸಾದವ ತುಂಬುವೆ. ನಿನ್ನ ಭಕ್ತನು ನಿನ್ನ ಸದ್ವಾಸನೆಯನಲ್ಲದೆ ಅರಿಯನಾಗಿ, ಆತನ ಘ್ರಾಣದಲ್ಲಿ ನಿನ್ನ ಘ್ರಾಣಪ್ರಸಾದವ ತುಂಬುವೆ. ಈ ಪರಿಯಲ್ಲಿ ಪ್ರಸಾದಿಗೆ ನಿನ್ನ ಪ್ರಸಾದವನಿತ್ತು ಸಲಹಿದೆಯಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅನುಭಾವ ನೆಲೆಗೊಂಡಲ್ಲದೆ, ಅಂಗ ಲಿಂಗದ ಹೊಲಬನರಿಯಬಾರದು. ಅನುಭಾವ ನೆಲೆಗೊಂಡಲ್ಲದೆ, ಭಕ್ತಿ ವಿರಕ್ತಿ ನೆಲೆಗೊಳ್ಳದು. ಅನುಭಾವ ನೆಲೆಗೊಂಡಲ್ಲದೆ, ಜ್ಞಾನ ಸುಜ್ಞಾನದ ನೆಲೆಯ ಕಾಣಬಾರದು. ಅನುಭಾವ ನೆಲೆಗೊಂಡಲ್ಲದೆ, ತಾನು ಇದಿರೆಂಬುದ ತಿಳಿದು ತಾನು ತಾನಾಗಬಾರದು. ಇದು ಕಾರಣ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಅನುಭಾವದ ಅನುವಿನಲ್ಲಿಪ್ಪವ ನೀವೆಂದೆ ಕಾಂಬೆನು.
--------------
ಸ್ವತಂತ್ರ ಸಿದ್ಧಲಿಂಗ
ಅರ್ಕನ ಉದಯಕ್ಕೆ ಕತ್ತಲೆ ಹರಿದು, ಚಕ್ಕನೆ ಬೆಳಗಾಯಿತ್ತು. ಬೆಳಗು ಪಸರಿಸಲಾಗಿ ನಿದ್ರೆ ಹರಿದು ಎದ್ದು ಕುಳ್ಳಿರ್ದು ಇದೆತ್ತಣ ಬೆಳಗೆಂದು ಹಿಂಬಾಗಿಲ ತೆಗೆದು ನೋಡಲು ಒಳ ಹೊರಗೆಲ್ಲಾ ತಾನೆ ಬೆಳಗುತ್ತಿರಲು ಆ ಬೆಳಗಿನೊಳಗೆ ನಿಂದು ಬೆಳಗುತ್ತಿದ್ದರಯ್ಯಾ. ಬೆಳಗನ ಬೆಳಗು ಒಬ್ಭುಳಿಯಾದಂತೆ, ಬೆಳಗು ಬೆಳಗು ಹಳಚಿದಂತೆ ಬೆಳಗುತ್ತಿದ್ದರಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣರು.
--------------
ಸ್ವತಂತ್ರ ಸಿದ್ಧಲಿಂಗ
ಅನುಭಾವವಿಲ್ಲದ[ವನ] ಭಕ್ತಿ ಆಯುಧವಿಲ್ಲದ ವೀರನಂತೆ. ಅನುಭಾವವಿಲ್ಲದ[ವನ] ಆಚಾರ ಕಾಲಿಲ್ಲದ ಹೆಳವನಂತೆ. ಅನುಭಾವವಿಲ್ಲದವನ ವಿಚಾರ ಕಣ್ಣಿಲ್ಲದ ಕುರುಡನಂತೆ. ಅನುಭಾವವಿಲ್ಲದವನ ಯೋಗ ಬರಿಕೈಯಲ್ಲಿ ಹುಡಿಯ ಹೊಯ್ದಕೊಂಬ ಗಜಸ್ನಾನದಂತೆ. ಭಕ್ತಿ ವಿರಕ್ತಿ ಮುಕ್ತಿಗೆ ಅನುಭಾವವೇ ಬೇಕು. ಅನುಭಾವವಿಲ್ಲದಾತಂಗೆ ಮುಕ್ತಿಯಿಲ್ಲ ಇದು ಸತ್ಯ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ಸಾಕ್ಷಿಯಾಗಿ.
--------------
ಸ್ವತಂತ್ರ ಸಿದ್ಧಲಿಂಗ
ಅಗ್ನಿ ರಜ್ಜುವಿನಿಂದ ಕಟ್ಟುವಡೆವುದೆ? ಸೂರ್ಯನ ಕತ್ತಲೆ, ಬಾಧಿಸಲಾಪುದೆ ಅಯ್ಯಾ?. ಆಕಾಶವು ರಜ ಧೂಮಗಳಿಂದ, ಮಲಿನವಹುದೆ ಅಯ್ಯಾ?. ನಿಮ್ಮನರಿದ ಶಿವಯೋಗಿಗೆ, ಸಂಸಾರ ಬಂಧಿಸಬಲ್ಲುದೆ ಹೇಳಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?
--------------
ಸ್ವತಂತ್ರ ಸಿದ್ಧಲಿಂಗ
ಅಂಡ ಪಿಂಡೋಪಾಧಿಗಳಿಲ್ಲದ ಅಖಂಡ ಬಯಲು, ಖಂಡಿತವಾದ ನೆನಹಿಗೆ ನಿಲುಕದ ಚಿದ್ರೂಪ ಪರಮಾನಂದ ಪರತತ್ವವು ತಾನೆ ವಿಚಾರಿಸಿ ಕರಸ್ಥಲವಾಗಿ, ಅಂಡ ಪಿಂಡಂಗಳಿಗೆ ತೆರಹ ಕೊಟ್ಟ ಮಹದಾಕಾಶರೂಪ ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಅನುಭಾವವ ನುಡಿವ ಅಣ್ಣಗಳಿರಾ, ಅನುಭಾವವೆತ್ತ ನೀವೆತ್ತ ಹೋಗಿರಣ್ಣ. ಅನುಭಾವವೆಂಬುದು ಆತ್ಮವಿಧ್ಯೆ. ಅನುಭಾವವೆಂಬುದು ತಾನಾರೆಂಬುದ ತೋರುವುದು. ಅನುಭಾವವೆಂಬುದು ನಿಜನಿವಾಸದಲ್ಲಿರಿಸುವುದು. ಇಂತಪ್ಪ ಅನುಭಾವದನುವನರಿಯದೆ ಶಾಸ್ತ್ರಜಾಲದ ಪಸರವನಿಕ್ಕಿ ಕೊಳ್ಳದೆ ಕೊಡದೆ ವ್ಯವಹಾರವ ಮಾಡುವ ಅಣ್ಣಗಳಿರಾ, ನೀವೆತ್ತ?, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಅನುಭಾವವೆತ್ತ?
--------------
ಸ್ವತಂತ್ರ ಸಿದ್ಧಲಿಂಗ
ಅಂತರಂಗದಲ್ಲಿ ಆಡುವ ಪಕ್ಷಿಯ ಅಂತುವನಾರು ಬಲ್ಲರು ಹೇಳ? ಅಂತರ ಮಹದಂತರವನೊಡಗೂಡಿ ಸ್ವತಂತ್ರನಾಗಿ ನಿಂದ ನಿಲವನು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣರಾದ ಮಹಾಂತರೇ ಬಲ್ಲರು.
--------------
ಸ್ವತಂತ್ರ ಸಿದ್ಧಲಿಂಗ
ಅನಲ ಸಂಗದಿಂದ ಕಾಷ* ಅನಲವಾದಂತೆ, ಶಿವಸಂಸ್ಕಾರ ಸಂಪನ್ನನಾದ ಶಿವಭಕ್ತನು, ಶಿವನಹಲ್ಲದೆ ಮಾನವನಾಗಲರಿಯನಯ್ಯ. ಅದು ಕಾರಣ, ಶಿವಭಕ್ತಂಗೆ ಜಾತಿಯಿಲ್ಲ ಸೂತಕವಿಲ್ಲ. ಶಿವನೆಂತಿಹನಂತೆ ಇಹನು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಜಭಕ್ತನು.
--------------
ಸ್ವತಂತ್ರ ಸಿದ್ಧಲಿಂಗ
ಅಂತರಂಗ ಸನ್ನಿಹಿತ ಪ್ರಾಣಲಿಂಗಕ್ಕೆ ಕ್ಷಮೆ ಎಂಬ ಸತ್ಯೋದಕದಿಂದ ಅಭಿಷೇಕವ ಮಾಡುವೆನಯ್ಯ. ಮನವ ನಿಲಿಸಿ ಗಂಧವನರ್ಪಿಸುವೆ. ನಿರಹಂಕಾರವೆಂಬ ಅಕ್ಷತೆಯನಿಡುವೆ. ವೈರಾಗ್ಯವೆಂಬ ಪುಷ್ಪವನರ್ಪಿಸಿ, ಸತ್ಯವೆಂಬ ಆಭರಣವ ತೊಡಿಸುವೆ. ವಿವೇಕವೆಂಬ ವಸ್ತ್ರವ ಹೊದಿಸಿ, ಶ್ರದ್ಧೆಯೆಂಬ ಧೂಪವ ಬೀಸುವೆ. ಮಹಾಜ್ಞಾನವೆಂಬ ದೀಪವ ಬೆಳಗಿ, ಪ್ರಪಂಚು ಭ್ರಾಂತಳಿದ ನೈವೇದ್ಯವನೀವೆ. ವಿಷಯಾರ್ಪಣವೆಂಬ ತಾಂಬೂಲವ ಕೊಟ್ಟು ಈ ಪರಿಯಲ್ಲಿ ಮಾಡುವೆನಯ್ಯಾ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಪ್ರಾಣಲಿಂಗ ಪೂಜೆಯನು.
--------------
ಸ್ವತಂತ್ರ ಸಿದ್ಧಲಿಂಗ
ಅರಳಿದ ಪುಷ್ಪ ಪರಿಮಳಿಸಿದಲ್ಲದೆ ಮಾಣದು. ಗುರುವಿನಿಂದ ಪಡೆದ ಶಿವಲಿಂಗವ ಹರುಷದಿಂದ ನೋಡಿ ನೆನೆದಡೆ, ಆ ಲಿಂಗ, ಕಣ್ಮನವ ವೇದಿಸಿದಲ್ಲದೆ ಮಾಣದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡುವಡೆ, ನೋಟ ಬೇಟವೆರಡು ಅಳಿದಲ್ಲದಾಗದು.
--------------
ಸ್ವತಂತ್ರ ಸಿದ್ಧಲಿಂಗ
ಅಂತರಂಗದಲ್ಲಿ ಬೆಳಗುವ ಜ್ಯೋತಿರ್ಲಿಂಗವು, ಸರ್ವಜ್ಯೋತಿವಸ್ತುಗಳಿಗೆ ಪರಮಾಶ್ರಯ ತಾನಾಗಿ, ಒಳಹೊರಗೆ ತೆರಹಿಲ್ಲದೆ ವ್ಯಾಪಿಸಿ, ಮನದ ನೆನಹಿನ ವಿಶ್ರಾಮಕ್ಕೆ ಸ್ಥಾನವಾದ ಜ್ಯೋತಿರ್ಲಿಂಗವ ನೆನೆದು ಸುಖಿಯಾದೆ, ಎನ್ನ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಾ.
--------------
ಸ್ವತಂತ್ರ ಸಿದ್ಧಲಿಂಗ
ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯ ಆನಂದಮಯ ಎಂಬ ಪಂಚಕೋಶ ಕೆಡುವುದಕ್ಕೆ ವಿವರ: ಸರ್ವಪದಾರ್ಥವನು ಸಾವಧಾನಮುಖದಲ್ಲಿ ಲಿಂಗಾರ್ಪಿತ ಮಾಡಿ ಲಿಂಗಭೋಗೋಪಭೋಗಿಯಾದಲ್ಲಿ ಅನ್ನಮಯಕೋಶ ಕೆಟ್ಟಿತ್ತು. ಪ್ರಾಣಮಯ ಲಿಂಗಾಂಗವಾಗಿ ಲಿಂಗಪ್ರಾಣಿಯಾದಲ್ಲಿ ಪ್ರಾಣಮಯಕೋಶ ಕೆಟ್ಟಿತ್ತು. ಮನೋಮಧ್ಯದಲ್ಲಿ ಲಿಂಗದ ನೆನಹು ನೆಲೆಗೊಂಡು ಮನವೆ ಲಿಂಗವಾದಲ್ಲಿ ಮನೋಮಯಕೋಶ ಕೆಟ್ಟಿತ್ತು. ಸುಜ್ಞಾನ ಪರಿಪೂರ್ಣವಾಗಿ ಜ್ಞಾನ ಜ್ಞೇಯಂಗಳೆರಡೂ ಒಂದಾದಲ್ಲಿ ವಿಜ್ಞಾನಮಯಕೋಶ ಕೆಟ್ಟಿತ್ತು. ಪರಮಾನಂದ ಪದದಲ್ಲಿ ಓಲಾಡುತ್ತ ಆ ಶಿವಾನಂದದಲ್ಲಿ ಇರಲಿಕ್ಕಾಗಿ ಆನಂದಮಯಕೋಶ ಕೆಟ್ಟಿತ್ತು. ಇಂತೀ ಪಂಚಕೋಶ ಪ್ರಕೃತಿಗುಣ ಕೆಟ್ಟು ಲಿಂಗಗುಣ ನಿಂದುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣಂಗೆ.
--------------
ಸ್ವತಂತ್ರ ಸಿದ್ಧಲಿಂಗ
ಅಣುವಿಂಗೆ ಅಣು, ಮಹತ್ತಿಂಗೆ ಮಹತ್ತಾಗಿ ಎಣಿಸಬಾರದ ಬಹಳ ಬ್ರಹ್ಮಕ್ಕೆ ಎಣೆಯಾವುದು ಹೇಳಾ? ಅಗಣಿತನಕ್ಷಯ ಸರ್ವಜೀವ ಮನಃಪ್ರೇರಕ ಸರ್ವಗತ ಸರ್ವಜ್ಞ ಏಕೋದೇವ ಸಂವಿತ್ ಪ್ರಕಾಶ ಪರಮೇಶ್ವರನು ಮನವೆಂಬ ದರ್ಪಣದೊಳಗೆ, ಬಿಂದ್ವಾಕಾಶರೂಪನಾಗಿ ಬೆಳಗಿ ತೋರುವ ಶಿವನ ಅಂದವ ತಿಳಿದು ನೋಡಿ ಕೂಡಬಲ್ಲಾತನೆ ಪರಮಶಿವಯೋಗಿ. ಆತನೇ ಜನನ ಮರಣ ರಹಿತ, ಆತನೇ ಸರ್ವಜ್ಞನು, ಆತನೇ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತಾನೇ.
--------------
ಸ್ವತಂತ್ರ ಸಿದ್ಧಲಿಂಗ
ಅರಿದಿಹೆನೆಂಬ ಅವಸ್ಥೆಯಿದ್ದಡೇನು? ಮತ್ತೆ ಮರವೆಗೆ ಕಾರಣವಾದ ಸಂಸಾರದ ಕಾಯ ಕಳವಳಕ್ಕೊಳಗಾದಡೆ ಮಾಯೆ ಮನವನೆಡೆಗೊಂಡಿತ್ತು. ಮಾಯೆ ಮನವನೆಡೆಗೊಂಡಲ್ಲಿ ಅರಿವು ಜಾರಿತ್ತು. ಮರಹು ಘನವಾಯಿತ್ತು. ಅರಿವುದಿನ್ನೇನು ಹೇಳಾ?. ಕೈಯ ತುತ್ತು ಬಾಯ್ಗೆ ಬಾರದಂತಾಯ್ತು. ಇನ್ನೆಲ್ಲಿಯದು ಲಿಂಗ? ಇನ್ನೆಲ್ಲಿಯದು ಜಂಗಮ? ಇನ್ನೆಲ್ಲಿಯದು ಪ್ರಸಾದ? ಅಕಟಕಟಾ ಹಾನಿಯ ಹಿಡಿದು ಹೀನವಾದರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ

ಇನ್ನಷ್ಟು ...