ಅಥವಾ
(40) (22) (3) (5) (6) (1) (0) (0) (2) (0) (0) (5) (3) (0) ಅಂ (12) ಅಃ (12) (16) (0) (10) (1) (0) (1) (0) (7) (0) (0) (0) (0) (0) (0) (0) (8) (0) (4) (3) (12) (8) (0) (8) (7) (12) (2) (2) (0) (3) (8) (11) (0) (10) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನ್ನ ತಾನರಿದವರು ಎಂತಿಪ್ಪರೆಂದರೆ, ಕನ್ನಡಿಗೆ ಕನ್ನಡಿಯ ತೋರಿದಂತಿಪ್ಪರು. ಕಣ್ಣಿಲಿ ನೋಡಿದರೆ ಮನದಲ್ಲಿ ಹಳಚದಂತಿಪ್ಪರು. ಕುಂದಣದ ಚಿನ್ನವ ಪುಟಕೆ ಹಾಕಿದಂತಿಪ್ಪರು. ಅದಂತಿರಲಿ, ಮುಂದೆ ಮೀರಿದ ಘನವು ಅಗಮ್ಯವಾಯಿತ್ತು. ಇದನರಿಯಬಾರದು. ಇನ್ನು ತನ್ನ ತಾನರಿಯದವರು ಎತ್ತಿಪ್ಪರೆಂದರೆ, ಕೇಳಿ. ಚಿನ್ನ ಬಣ್ಣವಿಟ್ಟಂತಿಪ್ಪರು ಕಾಣಾ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ತಾನೆನಬೇಡ, ಮನ ಮುಗ್ಧನೆನಬೇಡ, ಮುನ್ನವರ ಬೇಡ ಬೇಡ, ತನುಜರೊಳ್ನುಡಿಬೇಡ, ಕಂಡೆವೆಂದು ಉಲಿಯಬೇಡ, ಉಣ್ಣೆವೆಂದು ಸುಮ್ಮನಿರಬೇಡ, ಬಂಡುಮಾಡಿಕೊಳಬೇಡ, ಚಂಡವಿಕ್ರಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ತನುವಿನಿಚ್ಛೆಗೆ ಶೀಲವ ಕಟ್ಟಿಕೊಂಬವರು ಲಕ್ಷೋಪಲಕ್ಷ ಉಂಟು. ಮನದಿಚ್ಛೆಗೆ ಶೀಲವ ಕಟ್ಟಿಕೊಂಬವರು ಅಪೂರ್ವ ನೋಡಾ. ತನುಮನವೆರಡು ಏಕವಾಗಿ, ಧನದಾಸೆಯಂ ಬಿಟ್ಟು, ಮನ ಮಹದಲ್ಲಿ ನಿಂದುದೆ ಶೀಲಸಂಬಂಧ. ಇನಿತಲ್ಲದ ದುಶ್ಶೀಲರ ಎನಗೊಮ್ಮೆ ತೋರದಿರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ತೀರ್ಥ ಯಾತ್ರೆ ಲಿಂಗದರುಶನಕ್ಕೆ ಹೋಗಿ, ಕರ್ಮವ ಹಿಂಗಿಸಿಕೊಂಡೆನೆಂಬ ಭಂಗಿತರ ಮಾತ ಕೇಳಲಾಗದು. ಅದೇನು ಕಾರಣವೆಂದರೆ, ತೀರ್ಥವಾವುದು, ಯಾತ್ರೆ ಯಾವುದು, ಲಿಂಗವಾವುದು, ಬಲ್ಲರೆ ನೀವು ಹೇಳಿರೆ. ಮಹಾಘನ ಗುರುಪಾದತೀರ್ಥದಿಂದ ವೆಗ್ಗಳ ತೀರ್ಥ ಉಂಟೆ ? ಜಗತ್ಪಾವನ ಜಂಗಮ ದರುಶನದಿಂದ ಬೇರೆ ಯಾತ್ರೆ ಉಂಟೆ? ಇಂಗಿತವನರಿದ ಬಳಿಕ ತನ್ನ ಅಂಗದ ಮೇಲಿರ್ಪ ಲಿಂಗವಲ್ಲದೆ ಬೇರೆ ಲಿಂಗ ಉಂಟೆ ? ಇದನರಿಯದೆ ಇನ್ನು ತೀರ್ಥಯಾತ್ರೆ ಲಿಂಗ ದರುಶನ ಉಂಟೆಂಬ ಅಂಗಹೀನರ ಮುಖವ ನೋಡಲಾಗದು, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ತಲೆ ಇಲ್ಲದ ಮುಂಡ, ಮೊಲೆ ಇಲ್ಲದಾವು. ಜಲವಿಲ್ಲದ ಕೆರೆ, ನೆಲೆ ಇಲ್ಲದ ನಂಟ, ಕಲಿ ಇಲ್ಲದ ಬಂಟ. ಇವು ಅಯ್ದರ ಕಲೆಯನರಿಯದೆ ನುಡಿವ ಮನುಜನೆಂತುಂಟು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ?
--------------
ಹಡಪದ ಅಪ್ಪಣ್ಣ
ತನ್ನ ಮನೆಯನರಿಯದೆ ತವರುಮನೆಗೆ ಹಾರುವ ಹೆಣ್ಣಿನಂತೆ, ಭಿನ್ನವಿಟ್ಟು ನೋಡಿಹೆನೆಂದು, ನಿಮ್ಮನರಿಯದೆ ಕೆಟ್ಟಿತು ಜಗವೆಲ್ಲ. ಅದಂತಿರಲಿ, ಇನ್ನ ತನ್ನ ತಾನರಿದವಂಗೆ ತನುವೇ ಲಿಂಗ, ಮನವೇ ಪುಷ್ಪ. ಈ ಅನುವರಿದು, ಘನವ ನೆಮ್ಮಿದ ಶರಣರ ಎನಗೊಮ್ಮೆ ತೋರಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ, ಬಸವಪ್ರಿಯ ಕೂಡಲಚೆನ್ನಬಸವಣ್ಣ .
--------------
ಹಡಪದ ಅಪ್ಪಣ್ಣ
ತನುವ ಕೊಟ್ಟು ಭಕ್ತರಾದೆವೆಂಬರು, ಮನವ ಕೊಟ್ಟು ಭಕ್ತರಾದೆವೆಂಬರು, ಧನವ ಕೊಟ್ಟು ಭಕ್ತರಾದೆವೆಂಬರು. ತನು, ಮನ, ಧನವನೆಂತು ಕೊಟ್ಟಿರಿ ಹೇಳಿರಣ್ಣಾ? ನಿಮ್ಮ ಒಡವೆ ನಿಮ್ಮಲ್ಲಿ ಇದೆ. ಅದು ಹೇಗೆಂದರೆ, ಬಲ್ಲವರು ನೀವು ಕೇಳಿ, ತನುವ ನೀವು ಕೊಟ್ಟರೆ ನೀವು ರೂಪಾಗಿ ಇರುವದಕ್ಕೇನು? ಮನವ ನೀವು ಕೊಟ್ಟರೆ ನೀವು ನಿಮಗೆ ನಡೆನುಡಿ ಚೈತನ್ಯವೇನು? ಧನವ ನೀವು ಕೊಟ್ಟರೆ ಕ್ಷುತ್ತಿಂಗೆ ಭಿಕ್ಷ, ಸೀತಕ್ಕೆ ರಗಟೆ ಏನು? ಅಂತಲ್ಲ, ಕೇಳಿರಣ್ಣಾ ! ತನುವ ಕೊಟ್ಟುದಾವುದೆಂದರೆ, ಹುಸಿಮನವ ಕೊಟ್ಟುದಾವುದೆಂದರೆ, ವ್ಯಾಕುಳವನೆಲ್ಲ ಅಳಿದು ನಿರಾಕುಳವಾಗಿ ನಿಂದ ಮನವೆ ಲಿಂಗವಾಯಿತ್ತು ಧನವ ಕೊಟ್ಟಿಹೆನೆಂಬುದಾವುದೆಂದರೆ, ಇಂದಿಗೆ ನಾಳಿಗೆ ಎಂಬ ಸಂದೇಹದ ಭಾವಕ್ಕೆ, ಭಯಕ್ಕೆ ಭವವಳಿವುದುದೆ ಜಂಗಮವಾಯಿತ್ತು. ಇಂತಿದೀಗ ನಮ್ಮ ಮುನ್ನಿನ ಆದ್ಯರ ನಡೆನುಡಿ, ಮಾಟಕೂಟ. ಇದನರಿಯದೆ ಏನೊಂದು ಮಾಡಿದರೂ ನೀಡಿದರೂ ಕೊಟ್ಟರೂ ಕೊಂಡರೆಯೂ, ವಾಯಕ್ಕೆ ವಾಯ ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ತನ್ನ ತಾನರಿಯದೆ ತನ್ನ ತಾ ನೋಡದೆ, ತನ್ನ ತಾ ನುಡಿಯದೆ, ಅನ್ಯರ ಸುದ್ದಿಯ ನುಡಿದಾಡುವ ಕುನ್ನಿಗಳಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ. ಅವನು ಸರ್ವಾಪರಾಧಿ, ಅವನ ಮುಖವ ನೋಡಲಾಗದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ