ಅಥವಾ
(40) (22) (3) (5) (6) (1) (0) (0) (2) (0) (0) (5) (3) (0) ಅಂ (12) ಅಃ (12) (16) (0) (10) (1) (0) (1) (0) (7) (0) (0) (0) (0) (0) (0) (0) (8) (0) (4) (3) (12) (8) (0) (8) (7) (12) (2) (2) (0) (3) (8) (11) (0) (10) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುವಿಂದಾದ ಬಯಲು, ಬಯಲಿಂದಾದ ಬ್ರಹ್ಮವೆ ಲಿಂಗ ಆ ಲಿಂಗದಿಂದೊಗೆದ ಅವಯವಂಗಳೆ ಜಂಗಮ ಆ ಜಂಗಮದ ಪರಮಾನಂದವೆ ಪಾದೋದಕ . ಆ ಪಾದೋದಕ ಪರಿಣಾಮದ ಸುಖ ಪರಮ ಪ್ರಸಾದ ಮತ್ತಾ ಪ್ರಸಾದದ ಪ್ರಚುರವೆ ಪ್ರಣಮಾನಂದ ಪರಂಜ್ಯೋತಿ ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ.
--------------
ಹಡಪದ ಅಪ್ಪಣ್ಣ
ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ, ಅಚ್ಚಪ್ರಸಾದ, ಅರ್ಪಿತಪ್ರಸಾದ, ಸಹಭೋಜನ, ಆರರಲ್ಲಿ ಅರ್ಪಿತ, ಮೂರರಲ್ಲಿ ಮುಕ್ತವೆಂದು ಊರೆಲ್ಲರ ಮುಂದೆ ದೂರಿಯಾಡುವ ನಾಯಿಮನುಜರಿರಾ, ಹೀಗೇಕೆ ದೂರುವಿರಿ? ಗುರುವೆಷ್ಟು, ಲಿಂಗವೆಷ್ಟು, ಜಂಗಮವೆಷ್ಟು, ಪ್ರಸಾದವೆಷ್ಟು, ಅರ್ಪಿತವೆಷ್ಟು? ಇದರ ಅವಧಾನವನರಿದ ಶರಣಂಗೆ, ಒಂದಲ್ಲದೆ ಎರಡುಂಟೆ? ಅವು ಒಂದೆಂಬುವನಕ ಬಂಧನವು. ತತ್ವಾರ್ಥಕ್ಕೆ ಇದಿರಿಟ್ಟುಕೊಂಡಿಪ್ಪನಲ್ಲದೆ, ಅರಿದ ಶರಣಂಗೆ ಒಂದೆಂಬುದು ಸಂದೇಹ. ಈ ರೀತಿಯನರಿಯದೆ ತೂತುಬಾಯೊಳಗೆ ಮಾತಿಗೆ ತಂದು ನುಡಿದಾಡುವ ಪಾತಕರ ಮೆಚ್ಚುವನೆ, ನಮ್ಮ ಶರಣ ಬಸವಪ್ರಿಯ ಕೂಡಲಚೆನ್ನಬಸವಣ್ಣ ?
--------------
ಹಡಪದ ಅಪ್ಪಣ್ಣ
ಗುರುಶಿಷ್ಯಸಂಬಂಧವೆಂತಿಪ್ಪುದೆಂದಡೆ, ಹೇಳಿಹೆ ಕೇಳಿರೋ, ಅರಿಮರುಳುಗಳಿರಾ. ಕಾಯಗುಣವಳಿದುದೇ ಗುರು, ಜೀವಗುಣವಳಿದುದೇ ಲಿಂಗ, ಪ್ರಾಣಗುಣವಳಿದುದೇ ಜಂಗಮ. ಈ ತ್ರಿವಿಧವನರಿದು ಆ ತ್ರಿವಿಧ ನಿಕ್ಷೇಪವನರುಹಿಸಿಕೊಟ್ಟವನೀಗ ಗುರು. ಅಲ್ಲಿ ಉಪದೇಶವ ಕೊಂಡವನೀಗ ಶಿಷ್ಯ. ಹೀಗಿರುವುದೀಗ ಗುರುಶಿಷ್ಯಸಂಬಂಧ. ಅದಕ್ಕೆ ನಮೋ ನಮೋ ಎಂಬೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಗುರು ಗುರು ಎಂದು ಪೂಜೆಯ ಮಾಡುವರು. ಮತ್ತೆಯಾ ಗುರುವ ನರನೆಂದೆಂಬರು, ಅವರು ಗುರುದ್ರೋಹಿಗಳು. ಲಿಂಗ ಲಿಂಗವೆಂದು ಪೂಜೆಯ ಮಾಡುವರು, ಆ ಲಿಂಗವ ಶಿಲೆ ಎಂಬರು, ಅವರು ಲಿಂಗದ್ರೋಹಿಗಳು. ಜಂಗಮ ಜಂಗಮವೆಂದು ಪೂಜೆಯ ಮಾಡುವರು, ಆ ಜಂಗಮವ ಜಗದ ಹಂಗಿಗರೆಂಬರು, ಅವರು ಜಂಗಮದ್ರೋಹಿಗಳು. ಈ ಮೂರು ಕರ್ತರೆಂದು ಅರಿಯದವಂಗೆ ಕುಂಭೀಪಾಕ ನಾಯಕನರಕ ತಪ್ಪದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಗುರುವಿನಿಂದಾದ ಪರಂ ಗೂಢಂ ಶರೀರ ಸ್ಥಲಂ. ಲಿಂಗಕ್ಷೇತ್ರಮನಾದಿಯೆಂಬ ಪಂಚಸಂಜ್ಞೆಯನುಳ್ಳ ಗುರುವಿನಿಂದಾದ ಕಾರಣ ಗುರುವಿಂದ ಪರವಿಲ್ಲವೆಂದು ಒರೆವುತ್ತಿವೆ ನೋಡಾ ವೇದಾಗಮ ಶಾಸ್ತ್ರ ಪುರಾಣಗಳು ಇದು ಕಾರಣ, ನಿಮ್ಮ ಚರಣದ ಕಿರಣವೆ ಅಖಿಳ ಬ್ರಹ್ಮಾಂಡವೆಂದು ಆದಿ ಪರಮ ಪ್ರಣಮವೆಂದೊರಲುತ್ತಿವೆ, ಪರಂಜ್ಯೋತಿ ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ.
--------------
ಹಡಪದ ಅಪ್ಪಣ್ಣ
ಗುರುಭಕ್ತಿಯ ಮಾಡಿಹೆವೆಂದು ಅಂಗಸೂತಕವ ಮಾಡಿದರು. ಲಿಂಗಭಕ್ತಿಯ ಮಾಡಿಹೆವೆಂದು ಮನಸೂತಕವ ಮಾಡಿದರು. ಜಂಗಮಭಕ್ತಿಯ ಮಾಡಿಹೆವೆಂದು ಜಗದ ಹಂಗಿಗರಾದರು. ಈ ತ್ರಿವಿಧಭಕ್ತಿಯ ಮಾಡಿಹೆವೆಂದು ತ್ರಿವಿಧವ ಹಿಡಿದು, ತ್ರಿವಿಧಮಲಸಂಬಂಧಿಗಳಾಗಿ ಹೋದರಲ್ಲದೆ ತ್ರಿವಿಧವನು ತ್ರಿವಿಧಕ್ಕಿತ್ತು ತ್ರಿವಿಧದ ನೆಲೆಯನರಿದು, ಈ ಕಲಿಯುಗದ-ಭವವ ದಾಂಟಿ, ಬಯಕೆಯ ಸವಿದು, ಭಾವ ಬಯಲಾಗಿ, ಆ ಬಯಲನೆಯ್ದಿ ಹೋಗುವ ಶರಣರ ಪಾದವ ನಂಬಿ ಕೆಟ್ಟು ಬಟ್ಟಬಯಲಾದೆನಯ್ಯಾ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಗುರುಪಾದೋದಕಕ್ಕೆ ಹರಿವ ನದಿಯೆಲ್ಲ ಸರಿಯೆಂದು ನುಡಿದರೆ, ಸುರಿಯವೆ ಬಾಲಹುಳು? ಇಷ್ಟಲಿಂಗದ ಪಾದೋದಕಕ್ಕೆ ಅಷ್ಟಾಷಷ್ಟಿತೀರ್ಥಂಗಳು ಸರಿಯಿಲ್ಲ. ಜಂಗಮದ ಪಾದೋದಕಕ್ಕೆ ಜಗದ ತೀರ್ಥ ಜಾತ್ರೆ ಸರಿಯೆಂದು ನುಡಿದರೆ, ಜಗದ ಜಂಗುಳಿಗಳೆಂಬೆ. ಇಂತೀ ತ್ರಿವಿಧ ಪಾದೋದಕ ತ್ರಿವಿಧ ಅಂಗಕ್ಕೆ ಪ್ರಾಣ. ಇಂತು ಮಂತ್ರೋದಕ ಮಜ್ಜನೋದಕ ಪ್ರಸಾದೋದಕ ಈ ತ್ರಿವಿಧವು ತ್ರಿವಿಧ ಲಿಂಗಕ್ಕೆ ಪ್ರಾಣವು. ಈ ಷಡ್ವಿಧ ಪಾದೋದಕವೆ ಷಡ್ವಿಧ ಅಂಗ ಲಿಂಗದ ಕಳೆ. ಆ ಕಳೆಯೆ ಕಾರಣ, ಆ ಕಾರಣವೆ ಎಲ್ಲರಿಗೆಯೂ ಪ್ರಾಣದ ಕಳೆ. ಪ್ರಾಣದ ಕಳೆಯೆ ಪಾದೋದಕ. ಅದಕ್ಕೆ ದೃಷ್ಟ-ರಹಸ್ಯೇ : ಸರ್ವತೀರ್ಥಾಭಿಷೇಕಾದಿ ಶುದ್ಧೇ ಮಾನಸಿ ಜಾಯತೇ | ಗುರೋರಂಘ್ರಿಸ್ಪರ್ಶಜಲಂ ತಸ್ಮಾತ್ ಶಿರಸಿ ಧಾರಯೇತ್ || ಎಂದುದಾಗಿ, ಆ ಪಾದೋದಕವ ಕೊಂಡವನೆ ಪರಬ್ರಹ್ಮಸ್ವರೂಪು. ಬಸವಪ್ರಿಯ ಕೂಡಲಸಂಗಮದೇವಾ, ಮಾಂ ತ್ರಾಹಿ, ತ್ರಾಹಿ ಕರುಣಾಕರನೆ.
--------------
ಹಡಪದ ಅಪ್ಪಣ್ಣ
ಗುರು ಗುರು ಎಂದು ನುಡಿದಾಡುತಿಪ್ಪರು, ಆ ಗುರು ನೆಲೆ ಎಂತಿಪ್ಪುದೆಂದರಿಯರು. ಆ ಗುರು ನೆಲೆ ಎಂತೆಂದರೆ, ಪರಮಸುಖಪರಿಣಾಮ ತಲೆಗೇರಿ ನೆಲೆಗೊಂಬುದೆ ಗುರು ನೆಲೆ. ವರ ಸಮಾಧಿಯೊಳಗೆ ಚರಿಸುವ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವನರಿದಿಪ್ಪುದೆ ಗುರು ನೆಲೆ. ಇದನರಿಯದೆ ಮನಕೆ ಬಂದಂತೆ ಕಾಯವೆ ಗುರು, ಪ್ರಾಣವೆ ಲಿಂಗ, ಭಾವವೆ ಜಂಗಮವೆಂದು ನುಡಿದಾಡುವ ಗಾವಿಲರ ಮಾತ ಕೇಳಲಾಗದು ಎಂದಾತ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಗುರುವ ಮುಟ್ಟಿ ಗುರುವಿನಂತಾಗಬೇಡವೆ? ಲಿಂಗವ ಮುಟ್ಟಿ ಪೂಜಿಸಿ ಲಿಂಗದಂತಾಗಬೇಡವೆ? ಜಂಗಮವ ಮುಟ್ಟಿ ಪೂಜಿಸಿ ಪಾದೋದಕ ಪ್ರಸಾದವ ಕೊಂಡು ಜಂಗಮದಂತಾಗಬೇಡವೆ? ಈ ತ್ರಿವಿಧವಿಡಿದು, ತ್ರಿವಿಧವ ಬಿಟ್ಟು, ತ್ರಿವಿಧವ ಮುಟ್ಟಿ, ತ್ರಿವಿಧವನೇಕವ ಮಾಡಿ, ಈ ಭವವ ದಾಂಟಿ ಹೋದವರ ಭಕ್ತರೆಂಬೆ, ಮಹೇಶ್ವರ, ಪ್ರಸಾದಿ ಪ್ರಾಣಲಿಂಗಿ, ಶರಣ, ಐಕ್ಯರೆಂಬೆ. ಇದನರಿಯದೆ ಮದ ಮತ್ಸರವ ಬಿಡದೆ, ಕುದಿದು ಕೋಟಲೆಗೊಂಬ, ಬಿನುಗರನೊಲ್ಲ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ .
--------------
ಹಡಪದ ಅಪ್ಪಣ್ಣ
ಗುರುವಿಂದಾದ ಲಿಂಗ, ಲಿಂಗದಿಂದಾದ ಜಂಗಮ, ಜಂಗಮದಿಂದಾದುದು ಜಗ. ಜಗಹಿತಾರ್ಥವಾಗಿ ಪಾದೋದಕ ಪ್ರಸಾದವಾಯಿತ್ತು. ಪಾದೋದಕ ಪ್ರಸಾದದಿಂದ ಪರವನೆಯ್ದಿದರು ಜಗದೊಳು ಭಕ್ತಗಣಂಗಳು, ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ.
--------------
ಹಡಪದ ಅಪ್ಪಣ್ಣ