ಅಥವಾ
(40) (22) (3) (5) (6) (1) (0) (0) (2) (0) (0) (5) (3) (0) ಅಂ (12) ಅಃ (12) (16) (0) (10) (1) (0) (1) (0) (7) (0) (0) (0) (0) (0) (0) (0) (8) (0) (4) (3) (12) (8) (0) (8) (7) (12) (2) (2) (0) (3) (8) (11) (0) (10) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಾಕಾರ ನಿರಾಕಾರ ಏಕೀಕೃತಾನಂದ ಗುರುವೆ ಲೋಕ ಚೈತನ್ಯಮಯ ಗುರುವೆ ಲಿಂಗವೇಕ ಪ್ರಣಮಾನಂದ ಗುರುವೆ ಏಕಮೇವನ ದ್ವಿತೀಯಾನಂದ ಗುರುವೆ ಲೋಕಾಲೋಕಂಗಳಿಗತ್ತತ್ತ ಏಕೀಕರಮಯ ಗುರುವೆ ಗುರುವೆ ಪರಂಜ್ಯೋತಿ, ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ.
--------------
ಹಡಪದ ಅಪ್ಪಣ್ಣ
ಸತಿಸುತ ಮಾತಾಪಿತರಂದದಿ ಮೋಹದಲಿ ಮನಮಗ್ನವಾದರೆ, ಅವನಿಗೆ ಲಿಂಗವಿಲ್ಲ , ಲಿಂಗಕ್ಕೆ ತಾನಿಲ್ಲ. ಅದೇನು ಕಾರಣವೆಂದರೆ, ಆತನ ಧ್ಯಾನ ಸತಿಯ ಮೇಲೆ ಸುತರ ಮೇಲೆ ಮಾತಾಪಿತರ ಮೇಲೆ ಇಪ್ಪುದಲ್ಲದೆ, ಲಿಂಗದ ಮೇಲಿಲ್ಲ. ಅದು ಕಾರಣ, ಆತ ಕಟ್ಟಿದುದು ಲಿಂಗವಲ್ಲ , ತೊಟ್ಟುದುದು ವಿಭೂತಿ ರುದ್ರಾಕ್ಷಿಯಲ್ಲ . ಅದು ಕಾರಣ, ಆತನಾಚಾರಕ್ಕೆ ದೂರ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಸೀಮೆಭೂಮಿಯೆಂದೇನೋ, ಹೇಮವನುರುಹಿದಂಗೆ. ಕಾಮದ ಕತ್ತಲೆಯೆಂದೇನೋ, ಕಾಲನ ಗೆಲಿದಂಗೆ. ನೇಮನಿತ್ಯವೆಂದೇನೋ, ತಾನು ತಾನಾದವಂಗೆ. ಸಾಲ ಶೀಲವೆಂದೇನೋ, ನಿಶ್ಶೂನ್ಯವಾದ ಮಹಾಮಹಿಮ ಶರಣಂಗೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಸ್ಥಲವಿಟ್ಟು ನಡೆಯಬೇಕೆಂಬರು, ಸ್ಥಲವಿಟ್ಟು ನುಡಿಯಬೇಕೆಂಬರು. ಸ್ಥಲದ ನೆಲೆಯನಾರೂ ಅರಿಯರು. ಕಾಯಸ್ಥಲ, ಕರಸ್ಥಲ, ಭಾವಸ್ಥಲವನರಿದು, ಆ ಕಾಯಸ್ಥಲ ಕರಸ್ಥಲ ಭಾವಸ್ಥಲದಲ್ಲಿ ಕೂಡಿ ನಿಲಿಸುವದೆ ಸ್ಥಲ. ಇದನರಿಯದೆ, ಹಿಂದಕ್ಕೆ ನುಡಿದವರ ಮಾತು ಕಲಿತುಕೊಂಡು, ಈಗ ನುಡಿವವರ ಮಾತ ಮೆಚ್ಚುವರೆ ನಮ್ಮ ಶರಣರು ? ಅದಂತಿರಲಿ. ಇನ್ನು ನೇಮವಾವುದು ಎಂದರೆ, ಗುರುಲಿಂಗಜಂಗಮದ ಪಾದೋದಕ ಪ್ರಸಾದವನರಿದು, ಅಂಗೀಕರಿಸಿ, ತನ್ನ ತನುವನೆ ಪ್ರಸಾದವ ಮಾಡುವದೀಗ ನೆಲೆ. ಈ ಸ್ಥಲದ ನೆಲೆಯ ಬಲ್ಲವರಿಗೆ ನಮೋ ನಮೋ ಎಂಬೆ. ಇದನರಿಯದೆ ಬರಿಯ ನುಡಿಯ ನುಡಿವವರ ಕಂಡರೆ ಛೀ ಎಂಬೆನು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಸ್ಥಲವೆಂದರೆ ಒಂದು, ನೆಲೆಯೆಂದರೆ ಎರಡು, ಕಲೆಯೆಂದರೆ ಮೂರು, ಕರಣವೆಂದರೆ ನಾಲ್ಕು, ಕಾಯವೆಂದರೆ ಐದು, ಕಾಮವೆಂದರೆ ಆರು, ಸೀಮೆಯೆಂದರೆ ಏಳು, ನೇಮವೆಂದರೆ ಎಂಟು, ತಾಮಸವೆಂದರೆ ಒಂಬತ್ತು , ಹರಿಯೆಂದರೆ ಹತ್ತು, ಹರನೆಂದರೆ ಇನ್ನೊಂದು. ಇದೇ ದಶವಿಧ ಪಾದೋದಕ, ಇದೇ ಏಕಾದಶ ಪ್ರಸಾದ. ಇದೇ ಅರ್ಪಿತ, ಇದೇ ಅವಧಾನ, ಇದೇ ಸುಯಿದಾನ. ಇದೇ ಶುದ್ಧಸಿದ್ಧಪ್ರಸಿದ್ಧ ಪ್ರಸಾದ. ಇದೇ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ ಆಡುವ ಹೊಲಸ್ಥಲದ ನೆಲೆ.
--------------
ಹಡಪದ ಅಪ್ಪಣ್ಣ
ಸಾವಾಗ ದೇವನೆಂದರೆ, ಸಾವು ಬಿಡುವುದೇ ? ಇದಾವ ಮಾತೆಂದು ನುಡಿವಿರಿ. ಎಲೆಯಣ್ಣಗಳಿರಾ, ಬಾಳುವಲ್ಲಿ , ಬದುಕುವಲ್ಲಿ , ಗುರು ಲಿಂಗ ಜಂಗಮವನರಿಯದೆ, ಹಾಳುಹರಿಯ ತಿಂದ ಶುನಕನಂತೆ ಕಾಲ್ಗೆಡೆದು ಓಡಾಡಿ ಏಳಲಾರದೆ ಬಿದ್ದಾಗ, ಶಿವ ಶಿವ ಎಂದರೆ, ಅಲ್ಲಿ ದೇವನಿಪ್ಪನೆಂದು ಇದ ನೋಡಿ ನಾಚಿ ನಗುರ್ತಿರ್ದೆ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಸುಖಾನುಭಾವ, ಲಿಂಗಾನುಭಾವವೆಂದು ನುಡಿದಾಡುತಿಪ್ಪಿರಿ. ಲಿಂಗದ ನೆಲೆಯನಾರು ಬಲ್ಲರು ? ಆರುಲಿಂಗ, ಮೂರುಲಿಂಗ, ಮೂವತ್ತಾರುಲಿಂಗ, ಬೇರೆ ಇನ್ನೂರ ಹದಿನಾರು ಲಿಂಗವೆಂದು ಎಮ್ಮ ಶರಣರು ಸಾರಿಹೋದ ವಾಕ್ಯವನೆ ಮಾರುತಿಪ್ಪರಲ್ಲದೆ, ಬೇರೆ ಇಪ್ಪತ್ತೊಂದು ಮಹಾಘನಲಿಂಗವನಾರೂ ಅರಿಯರು, ನಿಮ್ಮ ಶರಣರಲ್ಲದೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಸಂಜೆ ಮಂಜಾನೆಯೆಂದೆನಬೇಡ, ಅಂಜಿಕೆ ಬೇಡ, ಅಳುಕು ಬೇಡ. ಸಂದುಸಂಶಯವೆಂಬ ಸಂದೇಹ ಬೇಡ. ಮನದಲ್ಲಿ ಸಂಕಲ್ಪ ವಿಕಲ್ಪ ಆದಿವ್ಯಾಧಿ ದುರಿತ ದುಮ್ಮಾನ ಭಯ ಮೋಹ ಚಿಂತೆ ಸಂತೋಷ ಸುಖದುಃಖ ಮೊದಲಾದವು ಒಂದೂ ಇಲ್ಲದಿಲ್ಲದ್ದಡೆ, ಆತನೇತರಲ್ಲಿರ್ದಡೂ ಅಜಾತ ಸ್ವಯಂಭು. ಬಂದುದನೆ ಪರಿಣಾಮಿಸಿ, ನಿಶ್ಚಿಂತ ನಿಜನಿವಾಸಿಯಾಗಿಪ್ಪ ಪರಮ ವಿರಕ್ತಂಗೆ ನಮೋ ನಮೋ ಎಂಬೆ. ಆತ, ಬಸವಪ್ರಿಯ ಕೂಡಲಸಂಗಯ್ಯನಲ್ಲಿ ಒಂದಾದ ಲಿಂಗೈಕ್ಯನು.
--------------
ಹಡಪದ ಅಪ್ಪಣ್ಣ
ಸೋಹಂ ಹೊಕ್ಕು ದಾಸೋಹವೆಂಬ ಅಂಜನವ ಹಚ್ಚಿ, ಮುಂದೆ ನೋಡಲಾಗಿ ಅರುಹ ಕಂಡೆ, ಆ ಅರುಹಿಂದ ಆಚಾರವ ಕಂಡೆ, ಆಚಾರದಿಂದ ಗುರುವ ಕಂಡೆ, ಗುರುವಿಂದ ಲಿಂಗವ ಕಂಡೆ, ಲಿಂಗದಿಂದ ಜಂಗಮವ ಕಂಡೆ, ಜಂಗಮದಿಂದ ಪ್ರಸಾದವ ಕಂಡೆ, ಪ್ರಸಾದದಿಂದ ಪರವ ಕಂಡೆ, ಪರದೊಳಗೆ ವಿಪರೀತ ಸ್ವರೂಪವ ಕಂಡೆ. ವಿಪರೀತ ಸ್ವರೂಪದೊಳಗೆ ನಿರ್ಲೇಪವಾದ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಸುಪ್ರಭಾಕಳೆಯಿಂದ ಚಿತ್ಪ್ರಣಮ ಉದಯ. ಆ ಚಿತ್ಪ್ರಣಮದ ಮುಂದಣ ಚಿದ್ವಿವೇಕವೆ ಚಿದಬ್ಧಿ . ಆ ಚಿದಬ್ಧಿಯೆ ಪಾದೋದಕ, ಚಿದಮೃತವೆ ಪಾದೋದಕ. ನಿಧಿ ನಿಧಾನವೆ ಪಾದೋದಕ, ಸುಧೆ ಸುರರ ತೃಪ್ತಿಯೆ ಪಾದೋದಕ. ಅದಕ್ಕೆ ದೃಷ್ಟ : ಶೋಷಣಂ ಪಾಪಪಂಕಸ್ಯ ದೀಪನಂ ಜ್ಞಾನತೇಜಸಃ | ಗುರುಪಾದೋದಕಂ ಪೀತ್ವಾ ಸಂಸಾರದ್ರುಮನಾಶನಂ || ಇಂತಪ್ಪ ಪಾದೋದಕವ ಕೊಂಡರೆ, ಪಾಶಮುಕ್ತನಾಗಿ, ಪಶುಪತಿಯೆಂಬುಭಯವಳಿದು, ನೀರು ಕ್ಷೀರ ಬೆರೆದಂತಿಪ್ಪ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ . ಮಾಂ ತ್ರಾಹಿ, ತ್ರಾಸಿ ಕರುಣಾಕರನೆ.
--------------
ಹಡಪದ ಅಪ್ಪಣ್ಣ