ಅಥವಾ
(40) (22) (3) (5) (6) (1) (0) (0) (2) (0) (0) (5) (3) (0) ಅಂ (12) ಅಃ (12) (16) (0) (10) (1) (0) (1) (0) (7) (0) (0) (0) (0) (0) (0) (0) (8) (0) (4) (3) (12) (8) (0) (8) (7) (12) (2) (2) (0) (3) (8) (11) (0) (10) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆದಿ ಅನಾದಿ ಎಂದು ಗಾದೆಯ ಮಾತು ನುಡಿದಾಡುವರೆಲ್ಲ ಇವೆರಡರ ಮಧ್ಯದಲ್ಲಿಪ್ಪ ಮಾಯಾಪ್ರಪಂಚನೆ ಅಳೆವುತ್ತ ಸುರಿವುತಿಪ್ಪರಲ್ಲದೆ, ಆದಿಯಿಂದಲತ್ತತ್ತಲಾರು ಬಲ್ಲರು? ಅನಾದಿಯಿಂದತ್ತತ್ತಲಾರು ಬಲ್ಲರು? ಇದರ ಭೇದಾದಿ ಭೇದವ ಮುನ್ನಿನ ಆದ್ಯರು ಬಲ್ಲರಲ್ಲದೆ, ಸಾಧಕರಿಗಳವಲ್ಲ. ವೇದಶಾಸ್ತ್ರಾಗಮ ಪುರಾತರ ವಚನ ಬಹುಶ್ರುತಿ ಇದಿರಿಟ್ಟುಕೊಂಡು, ಕೂಗಿಯಾಡಿ, ಗೋಡೆ ಹಾಯಿಸುವ ಜಡವಾದಿಗಳ ಮಾತ ಮೆಚ್ಚರು ನಮ್ಮ ಶರಣರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಆಸೆಯಳಿದು, ನಿರಾಸೆಯಲ್ಲಿ ನಿಂದು, ವೇಷವ ಜರೆದು, ಸರ್ವವ ಮರೆದು, ಈ ಗುಣತ್ರಯಮಂ ತೊರೆದು, ನಿರಾಸೆಯ ಮೇಲೆ ನಿಂದರೆ, ಅದೇ ಶರಣಂಗೆ ಸರಿ ಎಂಬೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಆಚಾರದರಿವು ಆಗಮವ ಕೂಡಿಕೊಂಡಿಹುದು. ವಿಚಾರದರಿವು ಶಾಸ್ತ್ರವ ಕೂಡಿಕೊಂಡಿಹುದು. ಲಿಂಗಾಚಾರದರಿವು ಅಂಗಭೋಗವ ಕೂಡಿಕೊಂಡಿಹುದು. ಆದಿ ವಿಚಾರದರಿವು ಜ್ಞಾನವ ಕೂಡಿಕೊಂಡಿಹುದು. ಈ ಚತುರ್ವಿಧದೊಳಗೆ ಆವಂಗವೂ ಅಲ್ಲ. ಎಮ್ಮ ಶರಣರ ಪರಿ ಬೇರೆ. ಅದೆಂತೆಂದರೆ; ಗುರು ಕರದಲ್ಲಿ ಹುಟ್ಟಿದರು, ಲಿಂಗದಲ್ಲಿ ಬೆಳೆದರು. ಜಂಗಮದ ಸಂಗವ ಮಾಡಿದರು, ಪ್ರಸಾದದಲ್ಲಿ ಅಡಗಿದರು. ಇದೀಗ ನಮ್ಮ ಶರಣರ ನಡೆನುಡಿ ಅರಿವು ಆಚಾರ ಲಿಂಗೈಕ್ಯ. ಈ ಚತುರ್ವಿಧವು ಹೊರತಾಗಿ, ಅವರೊಬ್ಬರು ಸಾಧಿಸಿ ಎಂದರೆ, ಸಾಧಕರಿಗೆ ಸಾಧ್ಯವಲ್ಲ, ಭೇದಕರಿಗೆ ಭೇದ್ಯವಲ್ಲ. ಅರಿವಿಂಗೆ ಅಪ್ರಮಾಣು, ವಾಙ್ಮನಕ್ಕಗೋಚರ. ಆಗಮ ಶಾಸ್ತ್ರಂಗಳು ಅರಸಿ ಕಾಣವು. ಇದು ಕಾರಣವಾಗಿ, ಎಮ್ಮ ಶರಣರು ಗುರು, ಲಿಂಗ, ಜಂಗಮ, ಪ್ರಸಾದ ಈ ಚತುರ್ವಿಧವಿಡಿದು ಅಚಲಪದವನೆಯ್ದಿದರು. ಇದಕ್ಕೆ ನೀವೆ ಸಾಕ್ಷಿ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗದೊಳು ಬೆರೆದರೆ, ಬಸವಪ್ರಿಯ ಕೂಡಲಚೆನ್ನಬಸವಣ್ಣ .
--------------
ಹಡಪದ ಅಪ್ಪಣ್ಣ
ಆಟ ಕೋಟಲೆ ಎಂಬ ರಾಟಾಳವ ಮುರಿದು, ನೋಟ ನುಡಿಗಳೆಂಬುವ ಸೂತ್ರವರಿದು, ದಾಟಿ ಸಪ್ತಮದವೆಂಟು, ನೋಟ ಬೇಟದೊಳು ಲಿಂಗದೋಳು ಬೆರೆದಿದ್ದರೆ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಆದಿಪ್ರಸಾದಿ, ಅನಾದಿಪ್ರಸಾದಿ, ಅಂತ್ಯಪ್ರಸಾದಿ, ಆದಿಪ್ರಸಾದಿಯೆ ಗುರು, ಅನಾದಿಪ್ರಸಾದಿಯೆ ಲಿಂಗ, ಅಂತ್ಯಪ್ರಸಾದಿಯೆಂಬುದೆ ಜಂಗಮ. ಈ ಗುರು ಲಿಂಗ ಜಂಗಮದಿಂದಾದುದೆ ಪ್ರಸಿದ್ಧ ಪ್ರಸಾದ. ಅದಕ್ಕೆ ದೃಷ್ಟ; ಮತ್ಪ್ರಾಣೋ ಜಂಗಮೋ ನಿತ್ಯಂ ಮಲ್ಲಿಂಗಂ ಜಂಗಮಸ್ತಥಾ ಅವಯೋಸ್ತತ್ಪ್ರಸಾದಂ ಚ ಭೋಗಸ್ಯಾದಿ ನಿಶ್ಚಯಂ|| ಎಂದುದಾಗಿ, ಇಂತಪ್ಪ ಪ್ರಸಿದ್ಧ ಪ್ರಸಾದಿಗೆ ನಮೋ ನಮೋ ಎಂಬೆ. ಬಸವಪ್ರಿಯ ಕೂಡಲಸಂಗಮದೇವಾ, ಮಾಂ ತ್ರಾಹಿ, ತ್ರಾಹಿ ಕರುಣಾಕರನೆ.
--------------
ಹಡಪದ ಅಪ್ಪಣ್ಣ
ಆಟದಲಿ ಕೆಲಹೊತ್ತುಗಳೆದು, ಕೂಟದಲಿ ಕೆಲಹೊತ್ತುಗಳೆದು, ನೋಟದಲಿ ಕೆಲಹೊತ್ತುಗಳೆದು, ಊಟದ ಹೊತ್ತಿಗೆ ಲಿಂಗವ ಕೂಡಿಹೆನೆಂಬವನೊಬ್ಬ, ಊಟ ಮಾಟಕೂಟದಲ್ಲಿ ಕೋಟಲೆಗೊಳುತ್ತಿದೆನೆಂಬುವನೊಬ್ಬ ಪೋಟ. ಇವರಿಬ್ಬರ ನೋಟ ಬೇಟಕ್ಕೆ ಸಿಕ್ಕದೆ ದಾಂಟಿಹೋದನು, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಆಸೆಯನುಳಿದು ನಿರಾಸೆಯಲ್ಲಿ ನಿಂದು, ವೇಷವ ಮರೆದು, ಜಗದ ಹೇಸಿಯಾಟವ ತೊರೆದು, ವಿೂಸಲಾಗಿದ ಮನವನೆ ಲಿಂಗವ ಮಾಡಿ, ಗಾಸಿಗೊಳಗಾಗುವ ತನುವನೆ ಗುರುವ ಮಾಡಿ, ಇವಿಷ್ಟಕ್ಕೂ ಕರ್ತನಾಗಿರುವ ಪ್ರಾಣವನ್ನೆ ಜಂಗಮವ ಮಾಡಿ, ಈ ತ್ರಿವಿಧವನು ಏಕವ ಮಾಡುವೆ. ಆ ಭಾವವನೆ ಭಾವರುಚಿ ಪ್ರಸಾದವ ಮಾಡುವೆ. ಈ ತ್ರಿವಿಧವನರಿದು ಅಂಗವಿಸಿದವನೆ ಎನ್ನ ದೇವನೆಂದು ಕಾಂಬೆ ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣ, ನೀವು ಸಾಕ್ಷಿಯಾಗಿ.
--------------
ಹಡಪದ ಅಪ್ಪಣ್ಣ
ಆದಿ ಅನಾದಿ ಅಂತ್ಯವೆಂದು ನುಡಿದಾಡುವರಲ್ಲದೆ, ಇವರ ಭೇದಾದಿ ಭೇದವನಾರೂ ಅರಿಯರು. ಆದಿಯಿಂದತ್ತತ್ತಲಾರು ಬಲ್ಲರು? ಅನಾದಿಯಿಂದತ್ತತ್ತಲಾರು ಬಲ್ಲರು? ಸಾಧಕರಿಗಳವಲ್ಲ. ವೇದ, ಶಾಸ್ತ್ರ, ಆಗಮ ಪುರಾಣಂಗಳು ಕಾಣದೆಹೋದವು. ಅದು ಹೇಗೆಂದರೆ, ಆದಿ ಕೂರ್ಮ ಕರಿ ಸರ್ಪ ಹೊತ್ತಿಪ್ಪವೆಂಬರು. ಅವನಾಗುಮಾಡಿ, ಅವಕ್ಕೆ ಆದಿಯಾಗಿಪ್ಪವರಾರೆಂದು ಅರಿಯರು. ಅನಾದಿಯೆಂಬ ಆಕಾಶದ ಮೇಲೆ, ದಿಕ್ಪಾಲಕರು, ದೇವರ್ಕಳು, ರುದ್ರ, ಶಿವ, ಸದಾಶಿವ ಉಂಟೆಂಬರು. ಅವರನಾಗುಮಾಡಿ, ಅವರ ನಿಲಿಸಿಕೊಂಡಿಪ್ಪವರಾರೆಂದು ಅರಿಯರು. ಇಂತೀ ಅಜಾಂಡ ಬ್ರಹ್ಮಾಂಡವೆಲ್ಲವು ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನ [ಕುಕ್ಷಿ]ಯೊಳು ಇಪ್ಪವು ಕಾಣಿರೊ.
--------------
ಹಡಪದ ಅಪ್ಪಣ್ಣ
ಆಗುತಿವೆ ಉದಯ ಮಧ್ಯಾಹ್ನ ಅಸ್ತಮಾನ. ಹೋಗುತಿವೆ ದಿನ ವಾರ ಮಾಸ ಸಂವತ್ಸರವು. ಸಾವುತಿವೆ ಆಯುಷ್ಯ ಭಾಷೆ. ಇವರೊಳು ಬೇಗದಿ ತಿಳಿದು ನೀಗಿ, ನಿಷ್ಪತ್ತಿಯಾದರೆ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಆದಿಯ ತೋರಿದ, ಅನಾದಿಯ ತೋರಿದ, ಭಾವವ ತೋರಿದ. ಅದು ಹೇಗೆ ಎಂದರೆ, ಆದಿ ಲಿಂಗವೆಂದು ಅರುಹಿದಿರಿ, ಅನಾದಿ ಶರಣನೆಂದು ಅರುಹಿದಿರಿ. ಈ ಎರಡರ ಭಾವವೇ ಜಂಗಮವೆಂದು ಅರುಹಿದಿರಿ. ಈ ತ್ರಿವಿಧ ಪರಿಣಾಮವೆ ಪ್ರಸಾದವೆಂದರುಹಿದಿರಿ. ಇಂತೀ ಚತುರ್ವಿಧವು ಏಕವೆಂದು ತೋರಿದ ಲೋಕಾರಾಧ್ಯರು ಚೆನ್ನಮಲ್ಲೇಶ್ವರನ ಸಾಕಾರವೇ ರೂಪಾಗಿ, ನಾ ಬದುಕಿದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಆಧಾರದ ಕುಂಡಲಿ ಸರ್ಪನ ಮಂಡೆಯ ಮೆಟ್ಟಿ ನಿಲಲು, ಗಂಡಾಳ ಕಾಲ ಕಾಮ ಇಬ್ಬರು ಹತವಾದರು. ಅವರ ಹೆಂಡಿರುಗಳು ಮುಂಡಮೋಚಿದರು. ದಂಡೆಯನೂಡಿದರು, ತೊಂಡಲ ಹರಿದರು. ತಮ್ಮ ಗಂಡಂದಿರ ಕೂಡೆ ಸಮಾಧಿಯ ಹೊಕ್ಕರು. ಇದ ಕಂಡು ನಾ ಬೆರಗಾಗಿ ಮುಂದೆ ನೋಡಲು, ಒಂದೂ ಇಲ್ಲದೆ ಸಂದುಸಂಶಯವಳಿಯಲು, ಹೊಂದದ ಬಟ್ಟೆಯನೆ ಹೊಂದಿದೆ. ಬಂದ ಬಟ್ಟೆಯನೊಲ್ಲದೆ ನಿಮ್ಮ ವೃಂದ ಚರಣದಲ್ಲಿ ವಂದಿದೆನಯ್ಯಾ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ. ಇದರಂದವನಳಿದು ನೋಡಿದ ಶರಣರೆ ಬಲ್ಲರು.
--------------
ಹಡಪದ ಅಪ್ಪಣ್ಣ
ಆಣವಮಲ, ಮಾಯಾಮಲ, ಕಾರ್ಮಿಕಮಲದೊಳಗಣ ಆಟ ಕೋಟಲೆ ಅಡಗದೆ, ಕಂಡಕಂಡವರೊಳಗಣ ನುಡಿ ನೋಟ ಹಿಂಗದೆ, ಮಾಟಕೂಟ ಜಪಕೋಟಲೆಯಿಂದ ನಟಿಸಿ, ಲಿಂಗವ ನೋಡಿ ಕೂಡಿಹನೆಂಬವರ ಬದುಕೆಂತಾಯಿತ್ತೆಂದರೆ, ಮೋಟ ಗಂಡನ ಮೂಕೊರತಿ ಹೆಂಡತಿ, ಬೇಟವ ಮಾಡಿದಂತಾಯಿತ್ತು ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಆಚಾರದ ಅರಿವು ಹೊರಗಾದ ಮೇಲೆ. ಅಂಗದ ಮೇಲೆ ಲಿಂಗವಿದ್ದು ಫಲವೇನು? ಕುರುಡನ ಕೈಯ ಕನ್ನಡಿ ಇದ್ದ ಹಾಗೆ, ಬರಡಾವಿಗೆ ಶಿಶು ಹುಟ್ಟಿದ ಹಾಗೆ, ಕುರುಡಗೆ ಕಣ್ಣೆಬೇನೆ ಬಂದ ಹಾಗೆ, ಕುರುಡಿಗೆ ಮಕ್ಕಳಾದ ಹಾಗೆ, ದೀನನ ಮನೆಯಲ್ಲಿ ಹೊನ್ನಿದ ಹಾಗೆ. ಇವರೇನ ಮಾಡಿದರೇನು? ತಮ್ಮ ಹಾನಿವೃದ್ಧಿಯನರಿಯದನ್ನಕ್ಕ, ಕಾಲ ಕಾಮಾದಿಗಳ ಬಾಯೊಳಗೆ ಸಿಲ್ಕಿ, ಅಗಿದಗಿದು ತಿನಿಸಿಕೊಳುತಿಪ್ಪರಲ್ಲ, ಎನ್ನ ದೇವ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಆಧಾರ, ಸ್ವಾಧಿಷ*ನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾಚಕ್ರವೆಂಬ ಷಡಾಧಾರಚಕ್ರವನರಿದು, ಏರಿ ಏರಿ ಇಳಿದು ಆದಿಯ ನೋಡಿಕೊಂಡು, ಆದಿ ಅನಾದಿ ಎಂಬ ಭೇದವ ನೋಡಿ, ಶೋಧಿಸಿ, ಸಪ್ತಧಾತುವಿನ ನೆಲೆಯ ಕಂಡು, ಮನ ಬುದ್ಧಿ ಚಿತ್ತವ ಏಕಹುರಿಯ ಮಾಡಿ, ಉತ್ಪತ್ತಿ ಸ್ಥಿತಿ ಲಯವೆಂಬ ಕಾಲಮೂಲಾದಿಗಳ ಸುಟ್ಟು, ಧ್ಯಾನದಲ್ಲಿ ನಿಂದು, ಅಂಗ ಲಿಂಗ ಹಸ್ತ ಮುಖ ಅರ್ಪಿತ ಅವಧಾನವೆಂಬ ಷಟ್‍ಸ್ಥಲವ ಮೆಟ್ಟಿನಿಂದು, ಆರರಿಂದ ವಿೂರಿ ತೋರುವ ಬೆಳಗ ಕಂಡು, ನಾನು ಒಳಹೊಕ್ಕು ನೋಡಲಾಗಿ, ಒಳಹೊರಗೆ ತೊಳತೊಳಗಿ ಬೆಳಗುತ್ತ ಇಳೆ ಬ್ರಹ್ಮಾಂಡ ತಾನೆಯಾಗಿರ್ದ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಆಡುವ ಹಾಡುವ ನಡೆವ ನುಡಿವ ಬೆಡಗ ಬಿಡದೆ, ಒಡಲ ದುರ್ಗುಣಗಳ ಕೆಡದೆ, ಪೊಡವಿಯೊಳು ನುಡಿಯ ನುಣ್ಣನೆ ನುಡಿದುಕೊಂಡು ಒಡಲಹೊರೆವ ಅಣ್ಣಗಳಿರಾ, ನೀವು ಭಕ್ತಮಾಹೇಶ್ವರರೆಂದು ನುಡಿದುಕೊಂಬಿರಿ ಅಂತಲ್ಲ, ಕೇಳಿರಣ್ಣಾ. ನೋಡುವ ಕಣ್ಣು, ನುಡಿವ ನಾಲಿಗೆಯ ನುಂಗಿತ್ತು. ಕೇಳುವ ಕಿವಿ, ವಾಸಿಸುವ ನಾಸಿಕವ ನುಂಗಿತ್ತು. ಕೊಡುವ ಕೊಂಬುವ ಕೈ, ಅಡಿ ಇಡುವ ಕಾಲ ನುಂಗಿತ್ತು. ಇವನೊಡಬಿಡದೆ ಕೊಂಬತನುವ ನುಂಗಿತ್ತು. ತಲೆಯಷ್ಟೆಯುಳಿದು, ಆ ತಲೆಯ ನೆಲವಿಡಿದು, ಘನವ ನಂಬಿದವರ ಭಕ್ತ ಮಹೇಶ್ವರರೆಂಬೆ ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ,
--------------
ಹಡಪದ ಅಪ್ಪಣ್ಣ
ಆದಿ ನಿರಾಳ, ಮಧ್ಯ ನಿರಾಳ, ಊಧ್ರ್ವ ನಿರಾಳ. ಪ್ರಮಾಣು ನಿರಾಳ, ಅಪ್ರಮಾಣು ನಿರಾಳ. ಆಕಾರವು ನಿರಾಳ, ಉಕಾರವು ನಿರಾಳ, ಮಕಾರವು ನಿರಾಳ, ನಿರಾಳವೆಂಬುದು ನಿರಾಳ, ಸುರಾಳವೆಂಬುದು ನಿರಾಳ, ಅವಿರಳವೆಂಬುದು ನಿರಾಳ. ಬಂದೆನೆಂಬುದು ನಿರಾಳ, ಹೋದೆನೆಂಬುದು ನಿರಾಳ. ಅದೆಂತೆದಡೆ; ಪ್ರಣಮ ನಿರಾಳವಾದ ಕಾರಣ ಪ್ರತಿಯಿಲ್ಲ. ಪ್ರತಿಯಿಲ್ಲವಾಗಿ, ಅಪ್ರತಿಮ ನಮ್ಮ ಶರಣ ಬಸವಪ್ರಿಯ ಕೂಡಲಚೆನ್ನಸಂಗಮದೇವ.
--------------
ಹಡಪದ ಅಪ್ಪಣ್ಣ
ಆಯತಲಿಂಗದಲ್ಲಿ ನೀವೆನಗೆ ಆಚಾರವ ತೋರಿದಿರಾಗಿ, ಸ್ವಾಯತಲಿಂಗದಲ್ಲಿ ನೀವೆನಗೆ ಅರುಹ ತೋರಿದಿರಾಗಿ, ಸನ್ನಹಿತಲಿಂಗದಲ್ಲಿ ನೀವೆನಗೆ ಪರಿಣಾಮವ ತೋರಿದಿರಾಗಿ. ಈ ತ್ರಿವಿಧದ ವರನೆಲೆಯ ತೋರಿ, ಈ ತ್ರಿವಿಧದ ಸಂಬಂಧವನು ಹರಿದು, ಎನ್ನ ಭವವ ದಾಂಟಿಸಿದ ಕಾರಣ, ಭವವಿರಹಿತನೆಂದು ಚೆನ್ನಮಲ್ಲೇಶ್ವರನ ನಂಬಿ, ಕೆಟ್ಟು ಬಟ್ಟಬಯಲಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಆದಿ ಅನಾದಿ ಎಂದು ನೀವು ಗಾದೆಯಮಾತ ನುಡಿದಾಡುವಿರಿ. ಇದರ ಭೇದಾದಿ ಭೇದವ ಬಲ್ಲರೆ ನೀವು ಹೇಳಿರೊ. ಅಂಗವನೆ ಆದಿಯ ಮಾಡಿ, ಸಂಗವನೆ ಅನಾದಿಯ ಮಾಡಿ, ಈ ಎರಡರ ಮಧ್ಯದಲ್ಲಿಪ್ಪ ಲಿಂಗವ ಸ್ಥಾಪ್ಯವ ಮಾಡಿದವರಾರೊ? ಅಲ್ಲಿ ಮಾಂಗಲ್ಯಕ್ಕೆ ಮಾಂಗಲ್ಯವಾದ ಶೃಂಗಾರವ ನಿಲಿಸಿದವರಾರೊ? ಅಲ್ಲಿಗೆರಡು ಕಂಗಳ ಢವಳಾರವ ಹೂಡಿದವರಾರೊ? ಈ ಕಂಗಳ ಢವಳಾರದಿಂದ ನೋಡಿದವರು ಹೆರೆಹಿಂಗಲಾರದೆ, ಆ ಲಿಂಗಗೂಡಾದರು ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಆಕಾಶವ ನೂಕುತ್ತಿಯ ಹಾಗೆ ಅಟಗೋಲ ಹಂಗುಂಟೆ ? ಏಕ ಮನವ ನಿಲಿಸುವರೆ, ಬೇರೊಂದು ಸಾಕಾರ ಉಂಟೆ ? ಬೇಕು ಬೇಡೆಂಬವೆರಡಳಿದವಂಗೆ, ಇಹಲೋಕದ ಹಂಗುಂಟೆ ? ಈ ಜೋಕೆ ನಿಮ್ಮೊಳು ಏಕವಾಗಿಹ ಶರಣಂಗಲ್ಲದೆ, ಲೋಕದ ಮಾನವರಿಗುಂಟೆ? ನಿಮ್ಮ ನೆಲೆಯನರಿವುದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಆಶನ ವಸನಕ್ಕಾಗಿ ಒಂದು ಪಶುವು ಹುಟ್ಟಿತ್ತು. ತನ್ನ ಸುಖವನರಿಯಲಾಗಿ, ತನಗೊಂದು ಶಿಶು ಹುಟ್ಟಿತ್ತು. ಆ ಶಿಶುವಿನ ಮೇಲಣ ಮೋಹದಿಂದ, ಮೊಲೆಯಲ್ಲಿ ಅಮೃತ ಹುಟ್ಟಿತ್ತು. ಅಮೃತವ ಸೇವಿಸಿ, ಆ ಶಿಶುವು ನಲಿದಾಡುವುದ ಕಂಡು, ನಾನದರ ಬೆಂಬಳಿವಿಡಿದು ಹೋಗಿ, ಅದು ಕೊಂಬ ಅಮೃತವ ನಾ ಕೊಳ್ಳಲಾಗಿ, ಪರಮಸುಖಪರಿಣಾಮ ತಲೆದೋರಿತ್ತು . ಅದರ ನೆಲೆವಿಡಿದು, ತಲೆಹೊಲನನೇರಿ ನೋಡಲಾಗಿ, ಉಲುಹು ಅಡಗಿತ್ತು . ಪುರುದಗಲಕೆ ನಿಂದಿತ್ತು. ಇಳಿದುಬರುವುದಕ್ಕೆ ಹಾದಿಯ ಕಾಣದೆ, ಅದರಲ್ಲಿಯೇ ನಿರ್ಮುಕ್ತನಾದೆನಯ್ಯಾ. ಬಸವಪ್ರಿಯ ಕೂಡಲಚೆನ್ನಬಸವಣ್ಣ ,
--------------
ಹಡಪದ ಅಪ್ಪಣ್ಣ
ಆಸೆ ರೋಷವೆಂಬ ದ್ವೇಷವ ಬಿಟ್ಟು, ದೋಷ ದುರಿತವ ಬಿಟ್ಟು, ಕ್ಲೇಶವ ಹರಿದು, ಸಾಸಿರಮುಖದೊಳು ಸೂಸುವ ಮನವ ನಿಲ್ಲಿಸಿ, ನಿರಾಶಿಕನಾಗಿ ನಿಂದರೆ, ಬಸವಪ್ರಿಯ ಕೂಡಲಚೆನ್ನ ಬಸವಣ್ಣ.
--------------
ಹಡಪದ ಅಪ್ಪಣ್ಣ