ಅಥವಾ
(40) (22) (3) (5) (6) (1) (0) (0) (2) (0) (0) (5) (3) (0) ಅಂ (12) ಅಃ (12) (16) (0) (10) (1) (0) (1) (0) (7) (0) (0) (0) (0) (0) (0) (0) (8) (0) (4) (3) (12) (8) (0) (8) (7) (12) (2) (2) (0) (3) (8) (11) (0) (10) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹೊತ್ತುಹೋಗದ ಮುನ್ನ ನೀವು ಸತ್ತಂತೆ ಇರಿರೊ. ಸತ್ತಂತೆ ಇದಲ್ಲದೆ ತತ್ವವ ಕಾಣಬಾರದು. ತತ್ತವ ಕಂಡಲ್ಲದೆ ಮನ ಬತ್ತಲೆಯಾಗದು. ಬತ್ತಲೆಯಾದಲ್ಲದೆ ಘನವ ಕಾಣಬಾರದು. ಘನವ ಕಂಡಲ್ಲದೆ ನಿಮ್ಮ ನೆನಹು ನಿಷ್ಪತ್ತಿಯಾಗದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಹುಟ್ಟಲೇಕೊ ನರರ ಜನ್ಮದಲ್ಲಿ ? ಕಟ್ಟಲೇಕೋ ಕೊರಳಲ್ಲಿ ಲಿಂಗವ ? ಕಟ್ಟಿಯೂ ಕಾಣದೆ, ತೊಟ್ಟನೆ ತೊಳಲಿ, ಅರಸಲೇಕೊ ಧರೆಯ ಮೇಲೆ ? ಅರಸಿಯೂ ಕಾಣದೆ, ಸತ್ತು ಮೆಟ್ಟಿ ಮೆಟ್ಟಿ ಹೂಳಿಸಿಕೊಳಲೇಕೊ ? ಇದನರಿದರಿದು, ಹುಟ್ಟು ಹೊಂದಳಿದ ಶರಣರ ನಿತ್ಯನಿತ್ಯ ನೆನೆದು ಬದುಕಿದೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಹೊತ್ತುಹೊತ್ತಿಗೆ ಲಿಂಗಪೂಜೆಯ ಮಾಡಿಯೂ ಮತ್ತೆಯು ಸತ್ಯವಾವುದು, ನಿತ್ಯವಾವುದೆಂದರಿಯದೆ ಕೆಟ್ಟರೆಲ್ಲ ಜಗವು. ಸತ್ಯವಾಗಿ ನುಡಿವ ಶರಣರ ಕಂಡರೆ, ಕತ್ತೆಮಾನವರೆತ್ತಬಲ್ಲರೊ ? ಅಸತ್ಯವನೆ ನುಡಿದು, ಹುಸಿಯನೆ ಬೋಧಿಸುವ ಹಸುಕರ ಕಂಡರೆ, ಇತ್ತ ಬನ್ನಿ ಎಂಬರು. ಇಂತಪ್ಪ ಅನಿತ್ಯದೇಹಿಗಳ ಭಕ್ತರೆಂದು ಜಂಗಮವೆಂದು ನೋಡಿದರೆ, ನುಡಿಸಿದರೆ, ಮಾತನಾಡಿದರೆ, ನೀಡಿದರೆ, ಅಘೋರನರಕವೆಂದು ನಮ್ಮ ಆದ್ಯರ ವಚನ ಸಾರುತಿದೆ, ಬಸವಪ್ರಿಯ ಕೂಡಲಚೆನ್ನಬಸಣ್ಣಾ .
--------------
ಹಡಪದ ಅಪ್ಪಣ್ಣ
ಹೆಸರಿಗೆ ಬಾರದ ಘನವ ಹೆಸರಿಗೆ ತಂದು, ನುಡಿದಾಡುವ ಕಿಸುವಾಯರ ಮಾತ ಕೇಳಲಾಗದು. ಅದೇನು ಕಾರಣವೆಂದರೆ, ಈ ಪಶುಗಳೇನು ಬಲ್ಲರು ? ಬಸವನೆಂತಿಪ್ಪನೆಂಬುದ ವಸುಧೆಯ ಮನುಜರೆತ್ತಬಲ್ಲರು ? ಇದು ಹುಸಿ ಹುಸಿ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ಆ ಬಸವನ ನೆಲೆಯ ಬಸವಾದಿ ಪ್ರಮಥರೆ ಬಲ್ಲರಲ್ಲದೆ, ಈ ಹುಸಿಮಾಯೆಗೊಳಗಾದ ಸೂತಕರೆತ್ತಬಲ್ಲರು ನಿಮ್ಮ ಶರಣರ ಸುದ್ದಿಯ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ
ಹೊತ್ತಾರೆಯಿಂದ ಅಸ್ತಮಯ ತನಕ ಸುತ್ತಿರ್ದ ಮಾಯಾಪ್ರಪಂಚನೆ ಅಳೆವುತ್ತ ಸುರುವುತ್ತಲುರ್ದು, ಕತ್ತಲೆಯಾದರೆ, ಕಾಳುವಿಷಯದೊಳಗೆ ಮುಳುಗುತ್ತ , ಸತ್ತು ಹುಟ್ಟುತ್ತ , ಮತ್ತೆ ಬೆಳಗಾಗಿರ್ದು, ನಾನು ತತ್ವವ ಬಲ್ಲೆನೆಂದು ನುಡಿವ ಕತ್ತಲೆಮನುಜರ ಅತ್ತ ಹೊದ್ದದೆ, ಇತ್ತಲೆ ನಿಂದು ನಾಚಿ ನಗುತಿರ್ದ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ .
--------------
ಹಡಪದ ಅಪ್ಪಣ್ಣ
ಹುತ್ತದ ಮೇಲಣ ಸರ್ಪ ಸತ್ತಿತ್ತೆಂದು ಮುಟ್ಟಿ ಬಾಳ್ದ ಮನುಜರುಂಟೆ ? ಒತ್ತಿಗೆ ಬಂದ ವ್ಯಾಘ್ರನನಪ್ಪಿಕೊಂಡ ಮನುಜರುಂಟೆ ? ತತ್ವವ ಬಲ್ಲ ಶರಣರು ಸತ್ತ ಹಾಗೆ ಇದ್ದರೆ, ಇವರು ಕತ್ತೆಯ ಮನುಜರೆಂದು ಮತ್ರ್ಯದವರು ಒತ್ತಿ ನುಡಿದರೆ, ಅವರೆತ್ತ ಬಲ್ಲರೊ ? ಅವರ ನುಡಿದವರು ಅತ್ತಲೂ ಅಲ್ಲ , ಇತ್ತಲೂ ಅಲ್ಲ ನೋಡಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಹಲವಂದ ಚಂದದಲ್ಲಿ ಹಾಡಿದರೇನಯ್ಯ, ಲಿಂಗದ ನೆಲೆಯನರಿಯದನ್ನಕ್ಕ ? ಕಲಿಯಾಗಿ ವೈರಾಗ್ಯ ತಲೆಗೇರಿ ಹರಿದಾಡಿದರೇನಯ್ಯ ? ಮಾಯೆಯ ಬಲೆಯ ನುಸುಳಿಸಿದಲ್ಲದೆ ನಿಮ್ಮ ನೆಲೆಯ ಕಾಣಬಾರದು, ಬಸಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಹುಸಿಯ ಹಟ್ಟಿಯಲಿಪ್ಪ ಸೊನಗ, ಹಾಕಿದ ಹಿಟ್ಟಿಗೆ ಬೊಗಳುವಂತೆ. ಆರಾದರು ಕೊಟ್ಟುದೊಂದು ವಾಟುಹಾಸಿಗೆ, ಅವರಿಚ್ಛೆಗೆ ಬೊಗಳುವ ಖೊಟ್ಟಿಗಳ ಮಾತ ಕೇಳಲಾಗದು. ಅದೇನು ಕಾರಣವೆಂದರೆ, ಮುಟ್ಟಿ ಅವರ ಸಂಗವ ಮಾಡುವ ಮನುಜಗೆ, ಕರ್ಮ ಕಟ್ಟಿಹುದಲ್ಲದೆ ಮಾಣದು ನೋಡಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಹಾಕಿದ ಮುಂಡಿಗೆಯ ಎತ್ತುವರಿಲ್ಲ. ಎತ್ತಿದ ಮುಂಡಿಗೆಯ ದೃಷ್ಟದಲ್ಲಿ , ಶ್ರುತದಲ್ಲಿ ಗೆದ್ದು , ಇಸಕೊಂಬವರಿಲ್ಲ . ಈ ಉಭಯದ ಗೊತ್ತನರಿಯದೆ ಕೆಟ್ಟರು, ನಾವು ಭಕ್ತ ಜಂಗಮರೆಂಬುವರೆಲ್ಲ . ಅದಂತಿರಲಿ. ನಾನು ನೀನು ಎಂಬುಭಯದ ಗೊತ್ತನರಿದು, ದೃಷ್ಟದಲ್ಲಿ ಶ್ರುತದಲ್ಲಿ ಗೆದ್ದು ಕೊಟ್ಟು, ನ್ಯಾಯದಲ್ಲಿ ಜಗವನೊಡಂಬಡಿಸಿ ಕೊಟ್ಟು, ಆ ಸಿಕ್ಕಿಹೋಗುವ ಮುಂಡಿಗೆಯ ಎತ್ತಿಕೊಂಡು, ಸುತ್ತಿ ನೋಡಿದರೆ ಬಟ್ಟಬಯಲಾಗಿರ್ದಿತ್ತು . ಆ ಬಟ್ಟಬಯಲ ದಿಟ್ಟಿಸಿ ನೋಡಲು, ನೆಟ್ಟಗೆ ಹೋಗುತ್ತಿದೆ . ಹೋಗಹೋಗುತ್ತ ನೋಡಿದರೆ, ನಾ ಎತ್ತ ಹೋದೆನೆಂದರಿಯೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಹುಡಿಯ ಹಾರಿಸಿ ಅಡಗಿಸುವ ವಾಯು ಅಡಗಿ ತೋರುವ ಬೆಡಗಿನಂತೆ, ಪ್ರಾಣಲಿಂಗಿಯ ಅಂಗ. ಅಂಗವಡಗಿದಲ್ಲಿ ವಾಯುವಿಂಗೆ ಭಂಗವೊ ? ಅಲ್ಲಾ , ನುಡಿದವರ ನುಡಿಗೆ ಭಂಗವೊ ? ಇದರ ತೊಡಕ ತಿಳಿದಾತನೆ ಮೃಡನು, ಬಸವಪ್ರಿಯ ಕೂಡಲಚೆನ್ನಬಸವಣ್ಣ ಪ್ರಭುವೆ.
--------------
ಹಡಪದ ಅಪ್ಪಣ್ಣ
ಹರಿ ಬ್ರಹ್ಮ ಕಾಲ ಕಾಮ ದಕ್ಷಾದಿಗಳ ದೇವರೆಂದು ಗಟ್ಟಿಯತನದೊಳು ಬೊಗಳುವ ಮಿಟ್ಟೆಯಭಂಡರು ನೀವು ಕೇಳಿರೊ. ಅವರ ಹುಟ್ಟನರಿಯಿರಿ, ಹೊಂದನರಿಯಿರಿ. ಅವರ ಹುಟ್ಟು ಕೇಳಿರಣ್ಣಾ ! ಏನೇನೂ ಇಲ್ಲದಂದು, ಶೂನ್ಯ ನಿಃಶೂನ್ಯಕ್ಕೆ ನಿಲುಕದ ಘನವು ಕೋಟಿಚಂದ್ರಸೂರ್ಯರ ಬೆಳಗಾಗಿ ಬೆಳಗುತ್ತಿಪ್ಪಲ್ಲಿ , ಒಂಕಾರವೆಂಬ ನಿರಕ್ಷರ ಹುಟ್ಟಿತ್ತು . ಒಂಕಾರದಿಂದ ನಕಾರ, ಮಕಾರ, ಶಿಕಾರ, ವಕಾರ, ಯಕಾರವೆಂಬ ಪಂಚಾಕ್ಷರ ಹುಟ್ಟಿದವು. ಆ ಪಂಚಾಕ್ಷರಿಗೆ ಪರಾಶಕ್ತಿ ರೂಪಾದಳು. ಆ ಪಂಚಾಕ್ಷರಕ್ಕೂ ಪರಾಶಕ್ತಿಗೂ ಇಬ್ಬರಿಗೂ ಸದಾಶಿವನಾದ. ಆ ಸದಾಶಿವಂಗೆ ಜ್ಞಾನಶಕ್ತಿಯಾದಳು. ಆ ಸದಾಶಿವಂಗೆ ಜ್ಞಾನಶಕ್ತಿಯರಿಬ್ಬರಿಗೂ ಶಿವನಾದ. ಆ ಶಿವಂಗೆ ಇಚ್ಛಾಶಕ್ತಿಯಾದಳು. ಆ ಶಿವಂಗೂ ಇಚ್ಛಾಶಕ್ತಿಗೂ ಇಬ್ಬರಿಗೂ ರುದ್ರನಾದ. ಆ ರುದ್ರಂಗೆ ಕ್ರಿಯಾಶಕ್ತಿಯಾದಳು. ಆ ರುದ್ರಂಗೂ ಕ್ರಿಯಾಶಕ್ತಿಗೂ ಇಬ್ಬರಿಗೂ ವಿಷ್ಣುವಾದ. ಆ ವಿಷ್ಣು ಪಡೆದ ಸತಿ ಲಕ್ಷಿ ್ಮೀಯು. ಆ ವಿಷ್ಣುವಿಂಗೂ ಮಹಾಲಕ್ಷಿ ್ಮೀಗೂ ಇವರಿಬ್ಬರಿಗೂ ಬ್ರಹ್ಮನಾದ. ಆ ಬ್ರಹ್ಮಂಗೆ ಸರಸ್ವತಿಯ ಕೊಟ್ಟು, ಬರೆವ ಸೇವೆಯ ಕೊಟ್ಟ. ಬ್ರಹ್ಮಂಗೂ ಸರಸ್ವತಿಗೂ ಇಬ್ಬರಿಗೂ ಮನುಮುನಿದೇವರ್ಕಳಾದರು. ಆ ಮನುಮುನಿದೇವರ್ಕಳಿಗೆ ಸಕಲ ಸಚರಾಚರವಾಯಿತ್ತು . ಇಹಲೋಕಕ್ಕೆ ನರರು ಆಗಬೇಕೆಂದು ಬ್ರಹ್ಮನು ಹೋಗಿ, ಹರನಿಗೆ ಬಿನ್ನಹಂ ಮಾಡಲು, ಹರನು ಪರಮಜ್ಞಾನದಿಂದ ನೋಡಿ, ತನ್ನ ಶರೀರದಿಂದಲೆ ನಾಲ್ಕು ಜಾತಿಯ ಪುಟ್ಟಿಸಿ ಇಹಲೋಕಕ್ಕೆ ಕಳುಹಿಸಿದನು. ಆ ಶಿವನ ಶರೀರದಲ್ಲಿ ಪುಟ್ಟಿದವರು ಶಿವನನ್ನೇ ಅರ್ಚಿಸಿ, ಶಿವನನ್ನೇ ಪೂಜಿಸಿ, ಶಿವನನ್ನೇ ಭಾವಿಸಿ, ಶಿವನೊಳಗಾದರು. ಅದರಿಂದಾದ ಭವಬಾಧೆಗಳು ತಾವು ತಮ್ಮ ಹುಟ್ಟನರಿಯದೆ, ಹುಟ್ಟಿಸುವಾತ ಬ್ರಹ್ಮ , ರಕ್ಷಿಸುವಾತ ವಿಷ್ಣು , ಶಿಕ್ಷಿಸುವಾತ ರುದ್ರನೆಂದು ಹೇಳಿದರು. ಈ ಭ್ರಷ್ಟರ ಮಾತ ಕೇಳಿ ಕೆಟ್ಟಿತ್ತು ಜಗವೆಲ್ಲ . ಆಗ ಶಿವನು ಕೊಟ್ಟು ಕಳುಹಿದ ಮಾಯೆಗೆ ಮರವೆಂಬ ಪಾಶ. ಅವಳು ಕಟ್ಟಿ ಕೆಡಹಿದಳು ಮೂರುಜಗವೆಲ್ಲವನು. ಇವಳ ಕಟ್ಟಿಗೊಳಗಾದ ಭ್ರಷ್ಟರೆತ್ತಬಲ್ಲರೋ ನಿಮ್ಮ ಶರಣರ ಸುದ್ದಿಯ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ
ಹಿಂದನರುಹಿ ಹಿಂದ ಹರಿದಿರಿ, ಮುಂದನರುಹಿ ಮುಕ್ತನ ಮಾಡಿದಿರಿ. ಸಂದುಸಂಶಯವನಳಿದಿರಿ, ಗುರುಲಿಂಗಜಂಗಮವ ಒಂದೇ ಎಂದು ತೋರಿದಿರಿ. ಪ್ರಸಾದವೇ ಪರವೆಂದರುಹಿದಿರಿ. ಇಂತಿವರ ಪೂರ್ವಶ್ರಯವ ಕಳೆದು ಎನಗೆ ಏಕವ ಮಾಡಿ ತೋರಬೇಕಾಗಿ, ನೀವು ಒಂದು ಸಾಕಾರವ ತಾಳಿ ಬಂದಿರಿ. ಇದು ಕಾರಣ ನಿಮ್ಮ ಲೋಕಾರಾಧ್ಯರೆಂದು ನೆರೆನಂಬಿ ಸಲೆಸಂದು ನಿಮ್ಮ ಪಾದದೊಳು ಏಕವಾದೆನಯ್ಯ ಚೆನ್ನ ಮಲ್ಲೇಶ್ವರ. ಇದ ನಿಮ್ಮನರಿದ ಶರಣರೇ ಬಲ್ಲರು. ಬಸವಪ್ರಿಯ ಕೂಡಲಚೆನ್ನಬಸವಣ್ಣ .
--------------
ಹಡಪದ ಅಪ್ಪಣ್ಣ
ಹಂಚುಕಂಥೆ, ಅತೀತ, ವಿರಕ್ತರು, ಸ್ಥಲದವರು ಎಂದು ನುಡಿದಾಡುವರು. ಜಂಗಮ ಒಂದೆ, ಲಿಂಗ ಒಂದೆ, ಗುರು ಒಂದೆ. ಎನ್ನ ಪರಮಾರಾಧ್ಯರು ಬಸವಣ್ಣ , ತನ್ನ ಲೀಲೆಯಿಂದ ಒಂದ ಮೂರು ಮಾಡಿ ತೋರಿದ, ಮೂರನೊಂದು ಮಾಡಿ ತೋರಿದ. ಆ ಒಂದು ನಾಮರೂಪಿಗಿಲ್ಲ . ಇದರಂದವ ಬಲ್ಲ ಶರಣರು ತಿಳಿದು ನೋಡಿ. ಇದನರಿಯದೆ ಸ್ಥಲನೆಲೆಯುಂಟೆಂದು ಹೊಲಬುಗಾಣದೆ ಹೋರಾಡಿ, ಭವಭಾರಿಗಳಾಗಬೇಡಾ ! ಭವವಿರಹಿತ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಂಗೆ, ಬಯಕೆ ಸವೆದು, ಭಾವ ಬಯಲಾಗಿ ನಮೋ ನಮೋ ಎಂದು ಬದುಕಿದೆ. ನೀವೂ ಬದುಕಿರೊ.
--------------
ಹಡಪದ ಅಪ್ಪಣ್ಣ
ಹಸನ ಮಾಡಿ ಹರಗಿ ಹೊಲದಲ್ಲಿ ಕಸವ ಬಿತ್ತುವ ಮರುಳರಂತೆ, ವಿಷಯಸುಖಂಗಳಿಗೆ ಹುಸಿಯನೆ ನುಡಿದು, ಗಸಣೆಗೊಳಗಾಗುವ ಮನುಜರೆತ್ತ ಬಲ್ಲರೊ, ಮಹಾಘನಗುರುವಿನ ನೆಲೆಯ ? ಮರಣಬಾಧೆಗೊಳಗಾದವರು ನಿಮ್ಮನೆತ್ತ ಬಲ್ಲರೊ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ
ಹುಟ್ಟಿದ ಮನುಜರೆಲ್ಲ ಹೊಟ್ಟೆಯ ಹೊರೆವುದೇನು ಸೋಜಿಗವೊ ? ಹುಲುಹೆಣನ ಸುಟ್ಟು, ಹೊಲೆಯನು ಹೊಟ್ಟೆಯ ಹೊರೆವುತ್ತ ಅವನೆ ಸಂತೆಯಲ್ಲಿ ಎದೆಯ ಮೇಲೆ ಕಲ್ಲಹಾಕಿಕೊಂಬವನು, ಹೊಟ್ಟೆಯ ಹೊರೆವುತ್ತಲವನೆ ಉಲಿ ಉಲಿದು ಕಂಡವರಿಗೆ ಹಲುಗಿರಿವವನು. ಹೊಟ್ಟೆಯ ಹೊರೆವುತ್ತ , ಅವನು, ಈ ಲಿಂಗದ ನೆಲೆಯನರಿಯದವರು ಇವರೊಳು ಸಲುವರಲ್ಲದೆ ಎಮ್ಮ ಶರಣರಿಗೆ ನಿಲುಕರು ನೋಡಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಹಾವ ಹಿಡಿವುದ ಹಾವಾಡಿಗ ಬಲ್ಲನಲ್ಲದೆ, ಕಡೆಯಲಿದ್ದ ಜಾವಳಿಗನೆತ್ತ ಬಲ್ಲನು ? ನೋವು ಬಂದರೆ ವ್ಯಾಧಿಯಲ್ಲಿ ನರಳುವಾತ ಬಲ್ಲನಲ್ಲದೆ, ಕಡೆಯಲಿಪ್ಪ ದುರುಳನೆತ್ತ ಬಲ್ಲನು ? ದೇವ ನಿಮ್ಮ ಶರಣನು ಬೆರೆದಿಪ್ಪ ಭೇದವ ನೋವುತ್ತ ಬೇವುತ್ತ ಧಾವತಿಗೊಳುತಿಪ್ಪ ಗಾವಿಲರೆತ್ತ ಬಲ್ಲರು ಲಿಂಗೈಕ್ಯರನುವ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ
ಹುಟ್ಟುವಾತ ಲಿಂಗಪಿಂಡದೊಳಡಗಿ ಬರಲು, ಪಿಂಡಗತಸ್ಥಲವೆನಿಸಿತ್ತು . ಬೆಳೆವಲ್ಲಿ ಶ್ರೀಗುರುಸ್ವಾಮಿ ಹಸ್ತಮಸ್ತಕಸಂಯೋಗವಂ ಮಾಡಿ, ಅಷ್ಟಾವರಣವನಳವಡಿಸಿ, ಅಷ್ಟತನುಗುಣವ ಕೆಡಿಸಿ, ಇಷ್ಟಲಿಂಗವಂ ದೃಷ್ಟವ ಮಾಡಿಕೊಡುವಲ್ಲಿ , ಅಂಗವೆ ಲಿಂಗಾರ್ಪಿತವೆಂದು ಸಂಗನಶರಣರಂ ಸಾಕ್ಷಿಯಂ ಮಾಡಿ, ಮೋಕ್ಷವನೈದಿಸಿದಿರಾಗಿ ಅದೀಗ ಲಿಂಗೈಕ್ಯ. ಇದು ಕಾರಣ, ಪಿಂಡಗತವೆಂದರೂ ಲಿಂಗೈಕ್ಯವೆಂದರೂ ಒಂದೇ ಸಮರಸ. ಅದಕ್ಕೆ ದೃಷ್ಟ : ಅಭೇದಂ ಜ್ಞಾನರೂಪೇಣ ಮಹಾನಂದಮಮಲಂ ಧ್ರುವಂ ಅತಕ್ರ್ಯಮದ್ವಯಂ ಪೂರ್ಣಂ ಬ್ರಹ್ಮೈವಾಸ್ತಿ ನ ಸಂಶಯಃ || ಎಂದುದಾಗಿ, ಇದೀಗ ಲಿಂಗೈಕ್ಯದಿರವು. ಬಸವಪ್ರಿಯ ಕೂಡಲಚೆನ್ನಬಸವಣ್ಣ , ಮಾಂ ತ್ರಾಹಿ, ತ್ರಾಹಿ ಕರುಣಾಕರನೆ.
--------------
ಹಡಪದ ಅಪ್ಪಣ್ಣ
ಹಗಲು ಗೂಗೆಗೆ ಇರುಳಾಗಿಪ್ಪುದು, ಇರುಳು ಕಪಟಗೆ ಹಗಲಾಗಿಪ್ಪುದು. ಇದು ಜಗದಾಟ. ಈ ಹಗಲು ಇರುಳೆಂಬ ಉಭಯವಳಿದು, ನಿಗಮಂಗಳಿಗೆ ನಿಲುಕದ, ಸಗುಣ ನಿರ್ಗುಣ ಅಗಮ್ಯ ಅಗೋಚರವಪ್ಪ ಮಹಾಘನ ಗುರುವಿನ ನೆಲೆಯ, ನಿಮ್ಮ ಶರಣರು ಬಲ್ಲರಲ್ಲದೆ ಮತ್ರ್ಯದ ಮರಣಬಾಧೆಗೊಳಗಾಗುವ ಮನುಜರೆತ್ತ ಬಲ್ಲರೊ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ !
--------------
ಹಡಪದ ಅಪ್ಪಣ್ಣ
ಹೆತ್ತವರೇ ಹೆಸರಿಡಬೇಕಲ್ಲದೆ, ತೊತ್ತಿರು ಬಂಟರು ಎತ್ತಬಲ್ಲರೊ ? ಕರ್ತೃ ನಿಮ್ಮ ನೆಲೆಯ ನಿಮ್ಮ ಒತ್ತಿನಲಿಪ್ಪ ಶರಣರು ಬಲ್ಲರಲ್ಲದೆ, ಈ ಸತ್ತು ಹುಟ್ಟುವ ಮನುಜರೆತ್ತ ಬಲ್ಲರೊ ? ನಿತ್ಯವಪ್ಪ ಮಹಾಘನ ಗುರು ಮಾತ ನೀನೆ ಬಲ್ಲೆ , ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಹರಿವ ಜಲಧಿಯಂತೆ, ಚರಿಸಿ ಬಹ ಮನವ ನಿಲ್ಲೆಂದು ನಿಲಿಸುವ ಪುರುಷರುಂಟೆ ? ಬಿರುಗಾಳಿ ಬೀಸಿದರೆ ಒಲಿ ಒಲಿದು ಉರಿವ ಬಲುಗಿಚ್ಚಿನ ಉರಿಯ ನೆಲೆಗೆ ನಿಲಿಸುವರುಂಟೆ ? ಮಹಾಬಯಲೊಳಗಣ ಸಂಚವನರಿದು ಅವಗಡಿಸುವರುಂಟೆ ? ಮಹಾಬಯಲೊಳಗಣ ಸಂಚವನರಿದು ಅವಗಡಿಸುವರುಂಟೆ ? ಇವ ಬಲ್ಲೆನೆಂಬವರೆಲ್ಲ ಅನ್ನದ ಮದ, ಅಹಂಕಾರದ ಮದ, ಕುಲಮದ, ಛಲಮದ, ಯೌವನಮದ, ವಿದ್ಯಾಮದ, ತಪದ ಮದ, ಆತ್ಮದ ಮದ ಇಂತೀ ಅಷ್ಟಮದವಿಡಿದು ಬಲ್ಲೆವೆಂಬರಲ್ಲದೆ, ದೃಷ್ಟನಷ್ಟವಾವುದೆಂದರಿಯದೆ, ಎಲ್ಲರೂ ಭ್ರಷ್ಟರಾಗಿಹೋದರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ , ನಿಮ್ಮ ನೆಲೆಯನರಿಯದ ಕಾರಣ.
--------------
ಹಡಪದ ಅಪ್ಪಣ್ಣ
ಹಾಲಸಾಗರದೊಳು ತೇಲಾಡುತ್ತಿದ್ದು , ಚಿಲುಮೆಯ ನೀರಿಗೆ ಹರಿದಾಡಬೇಡ. ಮೇಲುಗಿರಿ ಶಿಖರದ ಪಶ್ಚಿಮದಿ ತೇಲಾಡುತಿರೆ, ಬಸವಪ್ರಿಯ ಕೂಡಲಚೆನ್ನಬಸವಣ್ಣ .
--------------
ಹಡಪದ ಅಪ್ಪಣ್ಣ
ಹರನಲ್ಲದೆ ದೈವವಿಲ್ಲೆಂದು ಶ್ರುತಿ ಸಾರುತಿರ್ದು, ವೇದಂಗಳು ಪೊಗಳುತಿರ್ದು, ನರರು ಸುರರು ಅರಿವಿರ್ದು, ಅರಿಯದೆ, ಹರಿಯು ದೈವ, ಬ್ರಹ್ಮನು ದೈವ, ಸುರಪನು ದೈವ, ಮನುಮುನಿ ತ್ರಿವಿಧ ದೇವರ್ಕಳು ದೈವವೆಂದು, ಚಂದ್ರ, ಸೂರ್ಯರು ದೈವವೆಂದು ಆರಾಧಿಸುವಿರಿ. ಪತಿವ್ರತೆಯಾದವಳಿಗೆ ತನ್ನ ಪುರುಷನ ನೆನೆಹಲ್ಲದೆ, ಅನ್ಯರ ನೆನೆವಳೆ ? ವೇಶಿಯಂತೆ ಹಲಬರು ನಂಟರೆ ? ಇವರೆಲ್ಲರ ಸಂತವಿಟ್ಟು, ಮತ್ತೆ ಶಿವನೆ ಎಂಬ ಶಿವದ್ರೋಹಿಗಳು ಕೇಳಿರೊ. ಹರಿ ದೈವವೆಂದು ಆರಾಧಿಸುವರೆಲ್ಲ ಮುಡುಹ ಸುಡಿಸಿಕೊಂಡು, ಮುಂದಲೆಯಲ್ಲಿ ಕೆರಹ ಹೊತ್ತರು. ಬ್ರಹ್ಮವೇ ದೈವವೆಂದು ಆರಾಧಿಸುವವರೆಲ್ಲ ಹೆಮ್ಮೆಯ ನುಡಿದು, ಹೋಮವನಿಕ್ಕಿ ಹೋತನ ಕೊಂದು ತಿಂದು, ಪಾತಕಕ್ಕೆ ಒಳಗಾದರು. ಸುರಪ ದೈವವೆಂದು ಆರಾಧಿಸಿದವರೆಲ್ಲ ತಮ್ಮ ಸಿರಿಯಲ್ಲಿ ಹೋಗಿ ಶಿವನಲ್ಲಿಗೆ ಸಲ್ಲದೆ ಹೋದರು. ಮನುಮುನಿದೇವರ್ಕಳು ದೈವವೆಂದು ಆರಾಧಿಸಿದವರೆಲ್ಲ ಹಿಂದುಮುಂದಾಗಿ ಅಡ್ಡಬಿದ್ದು , ಅವರು ಬಂದ ಭವಕ್ಕೆ ಕಡೆ ಇಲ್ಲ . ಇದನ್ನೆಲ್ಲ ಅರಿದು ಮತ್ತೆ ಇವರೇ ದೈವವೆಂದು ಆರಾಧಿಸುವ ವಿವರಗೆಟ್ಟ ಭವಭಾರಿಗಳ ನುಡಿಯ ಕೇಳಲಾಗದು, ಅವರೊಡನೆ ನುಡಿಯಲಾಗದು. ಅವರ ನಡೆಯ ಕಂಡರೆ ಛೀ ಎಂಬರು ನಿಮ್ಮ ಶರಣರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಹೊನ್ನ ಗಳಿಸಿದರೇನಯ್ಯಾ, ಹೊಲೆಯರ ಮನೆಯಲ್ಲಿದ್ದರೆ ? ಹೆಣ್ಣ ಗಳಿಸಿದರೇನಯ್ಯಾ, ವೇಶಿಯರ ಮನೆ ದಾಸಿಯಾಗಿದ್ದರೆ ? ಮಣ್ಣ ಗಳಿಸಿದರೇನಯ್ಯಾ, ಉಣ್ಣ ದಾಹಾರವನುಂಡರೆ ? ಹೋಗುವ ಹಾಳುಗೇರಿಯಾಗಿರದೆ, ಇದನರಿದು ಮಹಾಘನವನೆ ಮರೆದು, ಮತ್ತೆ ಹೊನ್ನು ಹೆಣ್ಣು ಮಣ್ಣು ತನ್ನದೆಂಬರು, ಕಣ್ಣುಗಾಣದ ಕುರುಡರಂತಾದರು ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಹಸಿವಿನಾಸೆಗೆ ಅಶನವ ಕೊಂಬರು, ವಿಷಯದಾಸೆಗೆ ಹುಸಿಯ ನುಡಿವರು. ಹಸನಾಗಿ ವ್ಯಸನವ ಹೊತ್ತು , ಭಸಿತವ ಹೂಸಿ ವಿಶ್ವವ ತಿರುಗಿದರು. ಈ ಹುಸಿಯ ಬಿಟ್ಟು, ಮಾಯೆಯ ಮಸಕವ ಮಾಣ್ದಲ್ಲದೆ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನ ಕೂಡಾ.
--------------
ಹಡಪದ ಅಪ್ಪಣ್ಣ
ಹಾಲ ಕಂಡ ಬೆಕ್ಕು ಮೆಲ್ಲುಲಿ ತೆಗೆದು ಕುಡಿವುತ್ತಿರಲು, ಬಾಲನಿಗಿರ್ದ ಹಾಲ ಬೆಕ್ಕು ಕುಡಿವುತ್ತಿದೆಯೆಂದು ನಾರಿ ಕಂಡು, ಗುದಿಗೆಯಲಿ ಹೊಡೆದರೆ, ಏಳುತ್ತ ಬೀಳುತ್ತ ಕಾಲ್ಗೆಡೆದು ಓಡುವಂತೆ, ಏನ ಹೇಳುವೆಯಯ್ಯ ? ಮತ್ರ್ಯದ ಮನುಜರು ಕರಣಂಗಳ ಹರಿಯ ಬಿಟ್ಟು, ತಮ್ಮ ಬಾಳುವೆಯ ಮರೆದು, ಕಾಲನ ಬಾಯಲ್ಲಿ ಅಳುತ್ತ ಮುಳುಗುತ್ತಲಿಪ್ಪುದನಾರೂ ಅರಿಯರು ನೋಡಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ

ಇನ್ನಷ್ಟು ...