ಅಥವಾ
(40) (22) (3) (5) (6) (1) (0) (0) (2) (0) (0) (5) (3) (0) ಅಂ (12) ಅಃ (12) (16) (0) (10) (1) (0) (1) (0) (7) (0) (0) (0) (0) (0) (0) (0) (8) (0) (4) (3) (12) (8) (0) (8) (7) (12) (2) (2) (0) (3) (8) (11) (0) (10) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಗದಗಲ ಮುಗಿಲಗಲ ಪಾದ ಪಾತಾಳದಿಂದತ್ತತ್ತ ಪಾದ. ಬ್ರಹ್ಮಾಂಡದಿಂದತ್ತತ್ತ ಮಕುಟ ವಿಶ್ವ ಬ್ರಹ್ಮಾಂಡವನು, ತನ್ನ ಕುಕ್ಷಿಯೊಳು ನಿಕ್ಷೇಪವ ಮಾಡಿಕೊಂಡಿಪ್ಪ ದೇವನೀಗ ಎನ್ನದೇವ. ಆ ದೇವನೊಳಗೆ ನಾನಡಕ, ನನ್ನೊಳಗೆ ಆ ದೇವನಡಕ. ಇಂತಪ್ಪ ದೇವನ ನಂಬಿ, ನಾ ಕೆಟ್ಟು ಬಟ್ಟಬಯಲಾದೆ. ಈ ದೇವನರಿಯದೆ ಜಗವೆಲ್ಲ ಕಲ್ಲದೇವರು, ಮಣ್ಣದೇವರು, ಮರದೇವರು ಎಂದು ಇವನಾರಾದ್ಥಿಸಿ, ಕೆಟ್ಟರಲ್ಲಿ. ಸ್ವರ್ಗ ಮರ್ತ್ಯ ಪಾತಾಳದವರೆಲ್ಲರು ಎನ್ನ ದೇವನನರದು ಅರ್ಚಿಸಲಿಲ್ಲ, ಪೂಜಿಸಲಿಲ್ಲ, ಭಾವಿಸಲಿಲ್ಲ. ಇದು ಕಾರಣ, ಆವ ಲೋಕದವರಾದರೂ ಆಗಲಿ, ಎನ್ನ ದೇವನನರಿದರೆ, ಭವವಿಲ್ಲ ಬಂಧನವಿಲ್ಲ. ನೆರೆ ನಂಬಿರೆ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನ.
--------------
ಹಡಪದ ಅಪ್ಪಣ್ಣ
ಜಗದೊಳಗೆ ಹುಟ್ಟಿ ಜಗದ ಹಂಗಿಗರಾಗಿ, ನಾವು ಜಂಗಮ, ನಾವು ಭಕ್ತರೆಂಬ ನುಡಿಗೆ ನಾಚರು ನೋಡಾ. ಅಪ್ಪುವಿನ ಘಟನ ಹೊತ್ತುಕೊಂಡು ಅನ್ನಪಾಂಗಳಿಗೆ ಅನುಸರಿಸಿ ನಡೆವುತ್ತ, ಹೊನ್ನು, ಹೆಣ್ಣು, ಮಣ್ಣನೀವವರ ಬಾಗಿಲ ಕಾಯ್ವ ಅಣ್ಣಗಳ ವೇಷಕ್ಕೆ ಶರಣಾರ್ಥಿ. ಅವರ ಆಶಾಪಾಶವ ಕಂಡು, ಹೇಸಿತ್ತೆನ್ನ ಮನವು. ಅದಂತಿರಲಿ, ಅದು ಬ್ರಹ್ಮನ ಹುಟ್ಟು, ವಿಷ್ಣುವಿನ ಸ್ಥಿತಿ, ರುದ್ರನ ಲಯಕ್ಕೊಳಗಾಗಿ ಹೋಯಿತ್ತು ಅಂತಲ್ಲ ಕೇಳಿರಣ್ಣ. ಜಂಗಮವಾದರೆ ಜಗದೊಳಗೆ ಹುಟ್ಟಿ, ಜಗದ ಹಂಗ ಹರಿದು, ಹೊನ್ನು, ಹೆಣ್ಣು, ಮಣ್ಣು ಕಣ್ಣಿಲೆ ನೋಡಿ ಕಾಮಿಸದೆ, ಮನದಲ್ಲಿ ನೆನೆಯದೆ, ಮಾಯವನುಣ್ಣದೆ, ಆಶೆಗೊಳಗಾಗದೆ, ವೇಷವ ಹೊರದೆ, ದೇಶದ ಮನುಜರ ಸುತ್ತಿದ ಪಾಶಕ್ಕೆ ಹೊರಗಾಗಿ ಸುಳಿವ ಜಂಗಮದ ಈಶನೆಂದೆ ಕಾಂಬೆ. ಆ ಜಂಗಮಕ್ಕೆ ಅರ್ಥ, ಪ್ರಾಣ, ಅಬ್ಥಿಮಾನವನೊಪ್ಪಿಸಿ, ತಪ್ಪದೆ ಒಡೆಯನೆಂದರಿದು ಮಾಡುವ ಭಕ್ತನ ಎಂತಿಪ್ಪನೆಂದು ಕಾಂಬೆ. ಇದನೆಂತಾದರೂ ಒಪ್ಪುಗೊಳ್ಳ ಎನ್ನ. ಬಸವಪ್ರಿಯ ಕೂಡಲಚೆನ್ನಸಂಗನ ಬಸವಣ್ಣನಲ್ಲಿ ಶರಣಗಣಂಗಳು.
--------------
ಹಡಪದ ಅಪ್ಪಣ್ಣ
ಜಪ ತಪ ನೇಮ ನಿತ್ಯದಿಂದ ನಿಶ್ಚಂತರೂಪನ ಕಂಡೆ, ಏನೆಂಬಿರಿ? ಆ ಪರಾತ್ಪರದೊಳಗಾಡುವ ಶರಣರ ಪಾದ ನಖದೊಳ್ಬರೆಯೆ ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಜಂಗಮ ಜಂಗಮವೆಂದು ನುಡಿದು, ಜಗದ ಹಂಗಿಗರಾಗಿ ಇರಲಾಗದು. ಜಗದ ಕರ್ತನ ಕೈಯಲ್ಲಿ ಹಿಡಿದುಕೊಂಡು ಜಂಗುಳಿಗಳ ಬಾಗಿಲ ಕಾಯಲಾಗದು. ಜಂಗಮದ ಸುಳುಹು ಎಂತಿರಬೇಕೆಂದರೆ, ತನ್ನ ನಂಬಿದ ಸಜ್ಜನರ ಸದ್ಭಕ್ತರಲ್ಲಿಗೆ ಲಿಂಗವಾಗಿ ಗಮಿಸಿ, ತಾ ಕಂಡ ಲಿಂಗಾಂಗವನು ಅಲ್ಲಿಯೇ ನಿಕ್ಷೇಪಿಸಿ, ತಾ ನಿರ್ಗಮನಿಯಾಗಿ ಸುಳಿಯಬಲ್ಲರೆ, ಜಂಗಮಲಿಂಗವದು ಇಂತಲ್ಲದೆ ಕಂಡವರ ಕಾಡಿ ಬೇಡಿಕೊಟ್ಟರೆ ಕೊಂಡಾಡಿ, ಕೊಡದಿದ್ದಡೆ ಜರಿದು, ತಾಗು ನಿರೋಧಕ್ಕೆ ಗುರಿಯಾಗಿ ನೋವುತ್ತ, ಬೇವುತ್ತ ಧಾವತಿಗೊಂಬ ಗಾವಿಲರ ಎಂತು ಜಂಗಮವೆಂಬೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ?
--------------
ಹಡಪದ ಅಪ್ಪಣ್ಣ
ಜಗದೊಳಗೆ ಹುಟ್ಟಿದವರೆಲ್ಲ ಹಗರಣಿಗರಾಗಿ ಹುಟ್ಟಿದರಲ್ಲದೆ, ಜಗವ ಗೆಲ್ಲಲರಿಯದೆ, ನಗೆಗೆಡೆಯಾಗಿ ಹೋದರು. ಎಮ್ಮ ಶರಣರು ಅಂತಲ್ಲ ಕೇಳಿರಣ್ಣಾ. ಜಗದಲ್ಲಿಯೇ ಹುಟ್ಟಿ, ಜಗದಲ್ಲಿಯೇ ಬೆಳೆದು, ಜಗದಂತೆ ಇದು, ಈ ಜಗವ ಗೆದ್ದು ಹೋಗುವರು. ನಿಗಮಶಾಸ್ತ್ರ ಸಾಕ್ಷಿಯಾಗಿ, ಚೆನ್ನಮಲ್ಲೇಶ್ವರ ನಿನಗಾಯಿತ್ತಯ್ಯಾ. ಅಂತಪ್ಪ ಚೆನ್ನಮಲ್ಲೇಶ್ವರನ ಪಾದವಡಿದು, ಅವರು ಹೋದ ಹಾದಿಗೊಂಡು ಹೋಗುವನಲ್ಲದೆ, ಈ ಮೇದಿನಿಯೊಳಗೆ ಕಾಮಕಾಲಾದಿಗಳ ಬಲೆಯೊಳಗೆ ಸಿಕ್ಕಿಬಿದ್ದು ಹೋದೆನಾದರೆ, ನಿಮ್ಮ ಪಾದಕ್ಕೆ ಅಂದೇ ದೂರವಯ್ಯಾ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಜಂಗಮಲಿಂಗವೆಂತಾಹನೆಂದರೆ: ಇಂತೀ ವಿಶ್ವಬ್ರಹ್ಮಾಂಡವು ತನ್ನ ಕುಕ್ಷಿಯೊಳು ನಿಕ್ಷೇಪವಾಗಿ, ತಾ ನಿರ್ಗಮನಿಯಾಗಿ, ಲಿಂಗರೂಪಾಗಿ ಸುಳಿಯಬಲ್ಲರೆ ಜಂಗಮಲಿಂಗವೆಂಬೆ. ಅದಕ್ಕೆ ನಮೋ ನಮೋ. ಆ ನಿಲವಿಂಗೆ ಭವವಿಲ್ಲ, ಬಂಧನವಿಲ್ಲ. ಇಂತಲ್ಲದೆ ವೇಷವ ಹೊತ್ತು, ಹೊರವೇಷದ ವಿಭೂತಿ ರುದ್ರಾಕ್ಷಿಯಂ ತೊಟ್ಟು, ಕಾಸು ಹುಲುಸಕ್ಕೆ ಕೈಯಾಂತು, ವೇಶಿ ದಾಸಿಯರ ಬಾಗಿಲ ಕಾಯ್ದು, ಲೋಕದೊಳಗೆ ಘಾಸಿಯಾಗಿ, ಜಂಗಮವೇಷಕ್ಕೆಲ್ಲ ಭಂಗವ ಹೊರಿಸಿ, ಕಣ್ಣುಗಾಣದೆ ಜಾರಿ ಜರಿಯಬಿದ್ದು, ತಾ ದೂರಿಗೆ ಬಂದು, ಈ ಮೂರಕ್ಕೊಳಗಾಗಿ ಗಾರಾಗಿ ಹೋಗುವರ ವೇಷಕ್ಕೆ ಶರಣಾರ್ಥಿ. ಅವರ ಸುತ್ತಿರ್ದ ಪಾಶವ ಕಂಡು ಹೇಸಿತ್ತೆನ್ನ ಮನ, ನಿಮ್ಮಾಣೆ ಬಸವಪ್ರಿಯ ಕೂಡಲಸಂಗಮದೇವಾ.
--------------
ಹಡಪದ ಅಪ್ಪಣ್ಣ
ಜಂಗಮಲಿಂಗ ಎಂತಿಹನು ಎಂದರೆ, ಅಂತರಂಗದಲ್ಲಿ ಅರಿವು, ಬಹಿರಂಗದಲ್ಲಿ ಶಮೆ, ದಮೆ, ಸರ್ವಶಾಂತಿ ಎಡೆಗೊಂಡು, ತನ್ನ ನಂಬಿದ ಸಜ್ಜನಸದ್ಭಕ್ತರಿಗೆ, ಭಾವಕ್ಕೆ ಜಂಗಮವಾಗಿ, ಪ್ರಾಣಕ್ಕೆ ಲಿಂಗವಾಗಿ, ಕಾಯಕ್ಕೆ ಗುರುವಾಗಿ, ಪ್ರಾಣಕ್ಕೆ ಬಂದ ಪದಾರ್ಥವ ಲಿಂಗಾರ್ಪಿತವ ಮಾಡುತ್ತ, ಬಾರದ ಪದಾರ್ಥವ ಮನದಲ್ಲಿ ನೆನೆಯದೆ, ಮಾನವರ ಬೇಡದೆ, ಬಡಭಕ್ತರ ಕಾಡದೆ, ಒಡನೆ ಇಹ ಘನವನರಿದು, ದೃಢಭಕ್ತರೊಳು ಲಿಂಗವಾಗಿ, ಏನು ನುಡಿದರೂ ನಿಕ್ಷೇಪಿಸಿ, ನಿರ್ಗಮನಿಯಾಗಿ ಸುಳಿಯಬಲ್ಲರೆ, ಆತ ಲಿಂಗ ಜಂಗಮ. ಅದಕ್ಕೆ ನಮೋ ನಮೋ ಎಂದು ಭವಂ ನಾಸ್ತಿಯಾಯಿತ್ತು ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ