ಅಥವಾ
(40) (22) (3) (5) (6) (1) (0) (0) (2) (0) (0) (5) (3) (0) ಅಂ (12) ಅಃ (12) (16) (0) (10) (1) (0) (1) (0) (7) (0) (0) (0) (0) (0) (0) (0) (8) (0) (4) (3) (12) (8) (0) (8) (7) (12) (2) (2) (0) (3) (8) (11) (0) (10) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪೃಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ, ಚಂದ್ರ, ಸೂರ್ಯ, ಸೋಮ, ಮಂಗಳ, ಬುಧ, ಬೃಹಸ್ಪತಿ, ಶುಕ್ರ, ಶನಿ ಇವು ಮೊದಲಾದ ಪಂಚತತ್ವ ನವಗ್ರಹಂಗಳಿಲ್ಲದಂದಿನ, ನಕ್ಷತ್ರಂಗಳಿಲ್ಲದಂದಿನ, ಸಪ್ತ ಸಮುದ್ರಂಗಳಿಲ್ಲದಂದಿನ, ಸಪ್ತಕುಲ ಪರ್ವತಂಗಳು ಇಲ್ಲದಂದಿನ, ಸಪ್ತಮುನಿವರ್ಗಂಗು ಇಲ್ಲದಂದಿನ, ಹರಿಬ್ರಹ್ಮ, ಕಾಲಕರ್ಮ, ದಕ್ಷಾದಿಗಳಿಲ್ಲದಂದಿನ ರುದ್ರಕೋಟಿ, ಸದಾಶಿವನಿಲ್ಲದಂದಿನ, ಏನೂ ಏನೂ ಇಲ್ಲದಂದಿನ, ಶೂನ್ಯ ನಿಶ್ಶೂನ್ಯಕ್ಕೆ ನಿಲ್ಕುದ ಮಹಾಘನವ ನಾನು ಬಲ್ಲೆ, ತಾನು ಬಲ್ಲೆನೆಂದು ನುಡಿವ ಹೀನಮನುಜರ ಕೂಗಾಟ, ಬೇಟಕ್ಕೆ ನಾಯಿ ಬೊಗಳಿದಂತಾಯಿತ್ತು. ಆ ತುಟ್ಟತುದಿಯಲ್ಲಿಪ್ಪ ಘನವ ಮುಟ್ಟಿ ಹಿಡಿದುಬಂದ ಶರಣರು ಬಲ್ಲರಲ್ಲದೆ, ಬಹುವಾಕ್ಕು ಜಾಲವ ಕಲಿತಕೊಂಡು, ಗಟ್ಟಿತನದಲ್ಲಿ ಬೊಗಳಿಯಾಡುವ ಮಿಟ್ಟೆಯ ಭಂಡರೆತ್ತ ಬಲ್ಲರು ನಮ್ಮ ಶರಣರ ಸುದ್ದಿಯ, ಬಸವಪ್ರಿಯ ಕೂಡಲಚೆನ್ನಬಸವಣ್ಣ ?
--------------
ಹಡಪದ ಅಪ್ಪಣ್ಣ
ಪ್ರಣಮವೆ ಪ್ರಾಯ, ಪ್ರಾಣವೆ ಲಿಂಗ. ಲಿಂಗವೆ ಅಂಗ, ಆ ಅಂಗವೆ ಆಗಮ್ಯ ಅಗೋಚರ ಅಪ್ರಮಾಣ. ಲಿಂಗಸಂಗವೆ ಜಂಗಮಲಿಂಗ. ಜಂಗಮ ಒಂದೆರಡೆಂದು ಸಂದು ಮಾಡಲಂಜಿ ಬೆರಗಾಗಿರಲು, ಬೇಗೆಯೆದ್ದು ಬೆಳಗಾಯಿತ್ತ ಕಂಡು, ಕಣ್ಣು ಮುಚ್ಚಿ ಕರಗಿ ಪ್ರಾಣಲಿಂಗ ಲೀಯವಾದ, ಬಸವಪ್ರಿಯ ಕೂಡಸಂಗಮದೇವ ಪ್ರಭುವೆ.
--------------
ಹಡಪದ ಅಪ್ಪಣ್ಣ
ಪಿಂಡವಾದುದ ಪಿಂಡಜ್ಞಾನ ಹುಟ್ಟಿ ಅರಿದನಯ್ಯಾ ಶರಣನು. ಅದೆಂತೆಂದಡೆ:ಆತ್ಮರುಗಳಲ್ಲಿ ಪರಮಾತ್ಮನ ಕಳೆ ವೇದ್ಯವಾಗಿರೆ, ತನುವ ರುಧಿರವ ಕೂಡಿಕೊಂಡು ಅಷ್ಟತನುಮೂರ್ತಿಯೆನಿಸಿಕೊಂಡು, ಸಪ್ತಧಾತು ಬೆರೆಸಿಕೊಂಡು, ಷಡುವರ್ಣವ ಕೂಡಿಕೊಂಡು, ಪಂಚತತ್ವವ ಪ್ರವೇಶಿಸಿಕೊಂಡು, ಚತುಷ್ಟಯ ಕರಣವ ದಳಕುಳವ ಮಾಡಿಕೊಂಡು, ಸ್ಥೂಲಸೂಕ್ಷ್ಮಕಾರಣವ ಅಂಗವ ಮಾಡಿಕೊಂಡು, ಕಾಯ ಜೀವವೆರಡು ದಳಕುಳವ ಮೆಟ್ಟಿಕೊಂಡು, ಏಕದಳದ ಮೇಲೆ ಪರಮಾತ್ಮ ತಾ ನಿಂದು, ಸಾಕ್ಷಿಕನಾಗಿ ಸಾವು ಹುಟ್ಟನರಿವುತ್ತ, ಜ್ಞಾನವಿದು ಅಜ್ಞಾನವಿದು ಎಂದು ಕಾಣುತ್ತ, ಸಂಸಾರ ಹೇಯವ ಮಾಡುತ್ತ, ಲಿಂಗವ ಹಾಡುತ್ತ, ಲಿಂಗವ ಹಾಡುತ್ತ, ಜಂಗಮವ ಹರಸುತ್ತ, ಲಿಂಗವಾಗಿ ಬಂದು ಗುರುಪಾದವಿಡಿದಾತನೀಗ ತತ್‍ಶಿಷ್ಯ. ಆ ಶಿಷ್ಯಂಗೆ ಶ್ರೀ ಗುರುಸ್ವಾಮಿ, ಕಾಯವಿದು ಕರಣವಿದು ಜೀವವಿದು ವಾಯುವಿದು, ಮನವಿದು ಪ್ರಾಣವಿದು ಮಾಯವಿದು ಮದವಿದು ಮಲವಿದೆಂದು ಆತನಾದಿಯನುರುಹಿ, ತನ್ನಾದಿಯ ಕುರುಹಿದೇಕೋ ಮಗನೇ ಎಂದು, ಗಣಸಾಕ್ಷಿಯಾಗಿ ಹಸ್ತಮಸ್ತಕಸಂಯೋಗ ಮಾಡಿ, ಕರ್ಣದಲಿ ಮಂತ್ರವ ಹೇಳಿ, ಕರಸ್ಥಲಕ್ಕೆ ಲಿಂಗವ ಕೊಡುವಲ್ಲಿ, ಮಗನೆ ಹಸ್ತವೆಂದರೆ ಮಂತ್ರಲಿಂಗವಾಗಿ ಇದೇನೆ, ಮಸ್ತಕವೆಂದರೆ ಚಿದ್ಬ್ರಹ್ಮದಲ್ಲಿ ತೋರುವ ಸುನಾದಕಳೆ ನಾನೇಯಾಗಿ ಇದೇನೆ. ಸಂಯೋಗವೆಂದರೆ ಸರ್ವಾಂಗದಲ್ಲಿ ಪ್ರಾಣಜಂಗಮನಾಗಿ ನಾನೇ ಇದೇನೆ. ತ್ರಿವಿಧ ಉಪದೇಶವೆ ತ್ರಿವಿಧ ಪ್ರಣವವಾಗಿ ಅದಾವೆ. ತ್ರಿವಿಧ ಪ್ರಣವವೆ ಗುರುಲಿಂಗಜಂಗಮವೆಂದು, ಆ ಗುರುಲಿಂಗಜಂಗಮವೆ ಇಷ್ಟ ಪ್ರಾಣ ತೃಪ್ತಿಯೆಂದು, ಆ ಇಷ್ಟ ಪ್ರಾಣ ತೃಪ್ತಿಯೆ ಆಚಾರಾದಿ ಮಹಾಲಿಂಗವೆಂದು, ಆ ಆಚಾರಾದಿ ಮಹಾಲಿಂಗವೆ ಮೂವತ್ತಾರು ಲಿಂಗವೆಂದು, ಆ ಮೂವತ್ತಾರು ಲಿಂಗವೆ ಇನ್ನೂರ ಹದಿನಾರು ಲಿಂಗವೆಂದರಿದು, ಇಂತಿವೆಲ್ಲಕ್ಕೆ ಇಷ್ಟ ಗುರುವೆ ಆದಿ, ಇಷ್ಟೆ ಲಿಂಗವೆ ಮಧ್ಯ, ಇಷ್ಟಜಂಗಮವೆ ಅವಸಾನ. ಇದು ಕಾರಣ, ಗುರುವಿಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ. ಈ ತ್ರಿವಿಧವು ತ್ರಿವಿಧ ಮುಖದಲ್ಲಿ ಗುರುವಿಂದ ತನು ಶುದ್ಧಪ್ರಸಾದವಾಯಿತ್ತು. ಲಿಂಗದಿಂದ ಮನ ಸಿದ್ಧಪ್ರಸಾದವಾಯಿತ್ತು. ಜಂಗಮದಿಂದ ಪದಾರ್ಥ ಪ್ರಸಿದ್ಧಪ್ರಸಾದವಾಯಿತ್ತು. ಈ ತ್ರಿವಿಧ ಪ್ರಸಾದವೆ ಅಂಗವಾದ ಶರಣಂಗೆ ಅರಿವೇ ಗುರು, ಜ್ಞಾನವೆ ಲಿಂಗ, ಭಾವನೆ ಜಂಗಮ. ಇಂತಪ್ಪ ಶರಣ ಮತ್ತೆ ಗುರುವೆನ್ನ, ಲಿಂಗವೆನ್ನ, ಜಂಗಮವೆನ್ನ, ಆಚಾರವೆನ್ನ, ತಾನೆನ್ನ ನಾನೆನ್ನ, ಏನೂ ಎನ್ನ, ಬಸವಪ್ರಿಯ ಕೂಡಲಚೆನ್ನಸಂಗಮದೇವ ತಾನೆ ತನ್ಮಯವಾಗಿ.
--------------
ಹಡಪದ ಅಪ್ಪಣ್ಣ
ಪುರಾತರು ಪುರಾತರು ಎಂದು, ಪುರಾಣದೊಳಗಣ ಕಥೆಯನೆ ಕಲಿತುಕೊಂಡು, ಪುರದ ಬೀದಿಯೊಳಗೆ ಹರದರಂತೆ, ಮಾತಿನ ಹಸರವನಿಕ್ಕಿ ಮಾರುವ ಅಣ್ಣಗಳಿರಾ, ನೀವು ಕೇಳಿರೊ. ಅಂದು ಹೋದವರ ಸುದ್ದಿಯ ನುಡಿದರೆ, ಇಂದು ಬಂದರೊ ನಿಮಗೆ ಇಂದು ಬಂದವರ ಒಂದೇ ಎಂದರಿದ ಭಕ್ತರ ಆಚರಣೆಯ ತೋರಿ ಬದುಕಿಸಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಪ್ರಥಮದಲ್ಲಿ ಭಕ್ತಸ್ಥಲವೆಂದು ನುಡಿವಿರಿ. ಆ ಭಕ್ತಸ್ಥಲವೆಲ್ಲರಿಗೆಂತಾಯಿತ್ತು ಹೇಳಿರಣ್ಣಾ ! ಸತಿಪತಿಸುತರು ಭೃತ್ಯಾಚಾರದಲ್ಲಿ ಭಕ್ತಿಯ ಮಾಡಿಹೆನೆಂದಣ್ಣಗಳು ಕೇಳಿರೊ. ಪತಿಯ ಮಾತ ವಿೂರುವಾಕೆ ಸತಿಯಲ್ಲ. ಪಿತನ ಮಾತ ವಿೂರುವಾತ ಸುತನಲ್ಲ. ಅತಿ ಕೃಪೆಯಿಂದ ದೀಕ್ಷೆ, ಶಿಕ್ಷೆಯನಿತ್ತ ಗುರುವಿನಾಜ್ಞೆಯ ವಿೂರುವಾತ ಶಿಷ್ಯನಲ್ಲ. ಇಂತಿವು ಭಕ್ತಸ್ಥಲಕ್ಕೆ ಸಲ್ಲವು ಕೇಳಿರಣ್ಣಾ ! ಆ ಸತಿಗೆ ಪತಿಯೇ ಗುರುವಾಗಿ, ಆ ಸುತಗೆ ಪಿತನೆ ಗುರುವಾಗಿ, ಆ ಪಿತಗೆ ಅತಿಕೃಪೆಯಿಂದ ದೀಕ್ಷೆ ಶಿಕ್ಷೆಯನಿತ್ತ ಗುರುವೆ ಗುರುವಾಗಿ, ಏಕಪದವಿಲ್ಲಾಗ ಭಕ್ತಸ್ಥಲವ ಮಾಡಿಹೆನೆಂಬಣ್ಣಗಳಿರಾ ಕೇಳಿ. ಈ ಒಂದು ಸ್ಥಲವುಳ್ಳವರಿಗೆ ಆರುಸ್ಥಲವು ಅಡಗಿತ್ತು. ಇಂತಿವು ಏಕಸ್ಥಲವಾದ ಮೇಲೆ ಮುಂದೆಂತೆಂದಡೆ, ಆ ಪತಿಗೆ ಸತಿಯೇ ಗುರುವಾಗಿ, ಆ ಪಿತಗೆ ಸುತನೇ ಗುರುವಾಗಿ, ಅತಿಕೃಪೆಯಿಂದ ದೀಕ್ಷೆ ಶಿಕ್ಷೆಯನ್ನಿತ್ತ ಗುರುವೇ ಶಿಷ್ಯನಾಗಿ, ಇಂತಿದೀಗ ನಿರ್ಣಯಸ್ಥಲವು. ಇದನರಿಯದೆ, ಅವಳು ಸತಿ, ತಾ ಪತಿ ಎಂಬ ಹಮ್ಮಿಂದವೇ ಅವರು ಸುತರು, ತಾ ಪಿತನೆಂಬ ಹಮ್ಮಿಂದವೇ ಅವರು ಶಿಷ್ಯರು, ತಾ ಗುರುವೆಂಬ ಹಮ್ಮಿಂದವೇ ಇದು ಲಿಂಗಪಥಕ್ಕೆ ಸಲ್ಲದು, ಹಿಡಿದ ವ್ರತಕ್ಕೆ ನಿಲ್ಲದು ಇದ ಮುಂದೆ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಪ್ರಸಾದವೆಂದು, ಅರ್ಪಿತಪ್ರಸಾದವೆಂದು, ಅವಧಾನಪ್ರಸಾದವೆಂದು, ಪರಿಣಾಮಪ್ರಸಾದವೆ,ದು, ಸಮಯಪ್ರಸಾದವೆ,ಧು, ಸರ್ವಾಂಗಪ್ರಸಾದವೆ,ದು, ಶುದ್ಧಪ್ರಸಾದವೆ,ದು, ಸಿದ್ಧಪ್ರಸಾದವೆ,ದು, ಪರ್ರಸಿದ್ಧಪ್ರಸಾದವೆ,ದು, ಪರಿಪೂಣರಪ್ರಸಾದವೆ,ದು, ದಿವ್ಯಪರ್ರಸಾದವೆಂದು, ಆದಿಪ್ರಸಾದವ ಅಂಗಪ್ರಾಣ ಭಾವ. ಅದಕ್ಕೆ ದೃಷ್ಟ : ಪ್ರಕಾರೋಯಂ ಪ್ರಸಾದಸ್ಸ್ಯಾತ್ ಸಾಕಾರಂ ಭಕ್ತಿರುಚ್ಯತೇ | ಪ್ರಸಾದ ಪೂರ್ವಿಕಾ ಭಕ್ತಿರ್ಮುಕ್ತಿರೇತಿ ದಕಾರಕಂ || ಎಂದುದಾಗಿ, ಇಂತೀ ಪ್ರಸಾದಿ ನೀನೆಯಲಾ, ಬಸವಪ್ರಿಯ ಕೂಡಲಸಂಗಮದೇವಾ, ಮಾಂ ತ್ರಾಹಿ, ತ್ರಾಹಿ ಕರುಣಾಕರನೆ.
--------------
ಹಡಪದ ಅಪ್ಪಣ್ಣ
ಪ್ರಾಣಲಿಂಗಿ ಪ್ರಾಣಲಿಂಗಿ ಎಂದು ನುಡಿದಾಡುತಿಪ್ಪಿರಿ. ಪ್ರಾಣಲಿಂಗದ ನೆಲೆಯನಾರು ಬಲ್ಲರು ? ಪ್ರಾಣಲಿಂಗಿಯಾದರೆ, ವಾಯು ಪ್ರಾಣವ ನಿಲಿಸಿ, ಲಿಂಗ ಪ್ರಾಣವಾಗುವದೀಗ ಪ್ರಾಣಲಿಂಗ. ಪ್ರಾಣಲಿಂಗಿಯಾದರೆ, ಗುರುಲಿಂಗಜಂಗಮದ ಪಾದೋದಕ ಪ್ರಸಾದವ ತನ್ನೊಳರಿದು ಮೈರೆದು ಪರವಶನಾಗಿ, ಲಿಂಗದೊಳಗೆ ಬೆರೆಸುವದೀಗ ಪ್ರಾಣಲಿಂಗಿ. ಇದನರಿಯದೆ ವಾಯು ಪ್ರಾಣವಾಗಿ, ಬಾಯನುಡಿಯ ಬಲ್ಲಿದವರಾಗಿ, ಬೊಗುಳಿಯಾಡುವ ಜಾವಳರ ಮಾತ ಮೆಚ್ಚುವನೆ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ ?
--------------
ಹಡಪದ ಅಪ್ಪಣ್ಣ
ಪರಾಪರದಲ್ಲಿ ಹುಟ್ಟಿದ ಪಾದೋದಕ. ಪರಬ್ರಹ್ಮದ ಪರಮಪ್ರಕಾಶವೆ ಪಾದೋದಕ. ಪರಿಪೂರ್ಣವ ಪ್ರವೇಶಿಸಿಕೊಂಡಿರ್ಪುದೆ ಪಾದೋದಕ. ಪರಮನಂಘ್ರಿಕಮಲದಲ್ಲಿ ಹುಟ್ಟಿದುದೆ ಪಾದೋದಕ. ತರತರದ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯದೊಳಡಗಿದ ಪಾದೋದಕ. ಅದಕ್ಕೆ ದೃಷ್ಟ : ಪಾಕಾರಂ ಪರಮಜ್ಞಾನಂ ದೋಕಾರಂ ದೋಷನಾಶನಂ | ದಕಾರಂ ದಹತೇ ಜನ್ಮ ಕಕಾರಂ ಕರ್ಮಛೇದನಂ || ಎಂದುದಾಗಿ, ಇಂತಪ್ಪ ಪಾದೋದಕವ ಕೊಂಡು, ಪರಿಣಾಮ ತೃಪ್ತಿಯನೆಯ್ದುವ ಸದ್ಭಕ್ತಂಗೆ ನಮೋ ನಮೋ ಎಂಬೆ. ಬಸವಪ್ರಿಯ ಕೂಡಲಸಂಗಮದೇವಾ, ಮಾಂ ತ್ರಾಹಿ, ತ್ರಾಹಿ ಕರುಣಾಕರನೆ.
--------------
ಹಡಪದ ಅಪ್ಪಣ್ಣ