ಅಥವಾ
(40) (22) (3) (5) (6) (1) (0) (0) (2) (0) (0) (5) (3) (0) ಅಂ (12) ಅಃ (12) (16) (0) (10) (1) (0) (1) (0) (7) (0) (0) (0) (0) (0) (0) (0) (8) (0) (4) (3) (12) (8) (0) (8) (7) (12) (2) (2) (0) (3) (8) (11) (0) (10) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಿಷ್ಠೆಯ ಮರೆದರೇನಯ್ಯಾ ? ಲೋಕದ ಮನುಜರ ದೃಷ್ಟಿಗೆ ಸಿಲ್ಕಿ ಭ್ರಷ್ಟೆದ್ದುಹೋದರು. ತನು ಕಷ್ಟಮಾಡಿದರೇನಯ್ಯಾ ಮನ ನಿಷ್ಠವಾಗದನ್ನಕ್ಕ ? ತನು ಮನವೆರಡು ನಷ್ಟವಾಗಿ, ಘನವ ನೆಮ್ಮಿ, ನಿಮ್ಮ ನೆನಹು ನಿಷ್ಪತ್ತಿಯಾದ ಶರಣರ ಎನಗೊಮ್ಮೆ ತೋರಯ್ಯ, ನಿಮ್ಮ ಧರ್ಮ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ನುಡಿದರೆ ಗುರುವಾಗಿ ನುಡಿಯಬೇಕು, ನಡೆದರೆ ಪರವಾಗಿ ನಡೆಯಬೇಕು. ಕುಳಿತರೆ ಲಿಂಗವಾಗಿ ಕುಳಿತಿರಬೇಕು, ಇದ್ದರೆ ಜಂಗಮವಾಗಿ ಇರಬೇಕು. ಈ ನಾಲ್ಕರ ಹೊಂದಿಗೆಯನರಿಯದವರು ಎಷ್ಟು ದಿನವಿದ್ದರೂ ಫಲವೇನು ಹೇಳಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ
ನಿಶ್ಚಿಂತ ನಿರಾಕಾರ ಪರಂಜ್ಯೋತಿ ಪರಮಪ್ರಕಾಶ ಆನಂದ ಸ್ವರೂಪನೆ ಜಂಗಮಲಿಂಗ. ಚೈತ್ಯರೂಪವೆ ಲಿಂಗಜಂಗಮ, ಸತ್ವರೂಪವೆ ಗುರುಲಿಂಗ. ಸತ್ತು ಚಿತ್ತಾನಂದವೆ ಸದ್ಭಕ್ತನಲ್ಲಿ ಉದಯ ಇಂತಿವರ ನೆಲೆಯ ವೇದಾಗಮ ಶಾಸ್ತ್ರ ಪುರಾಣಗಳು ಕಾಯದೆ ವಾಗತೀತಃ ಮನೋತೀತಃ ಭಾವಾತೀತಃ ಪರಃ ಶಿವಃ ಸರ್ವಶೂನ್ಯ ನಿರಾಕಾರಂ ನಿತ್ಯತ್ವಂ ಪರಮಂ ಪದಂ || ಎಂದುದಾಗಿ, ಇಂತಪ್ಪ ಶ್ರುತಿ ಒಳ ಹೊರಗಿಪ್ಪ ಜಂಗಮಲಿಂಗವೆ ಜಗತ್ಪಾವನ ಜಂತು ಜಯ ಶರಣಾಗು. ಬಸವಪ್ರಿಯ ಕೂಡಲಸಂಗಮದೇವಾ ಮಾಂ ತ್ರಾಹಿ ತ್ರಾಹಿ ಕರುಣಾಕರನೆ.
--------------
ಹಡಪದ ಅಪ್ಪಣ್ಣ
ನುಡಿದ ನುಡಿಗೆ ನಡೆ ಇಲ್ಲದಿದ್ದರೆ, ಮೃಡನ ಶರಣರು ಕಡೆನುಡಿದಲ್ಲದೆ ಮಾಣರು. ಎಮ್ಮ ಶರಣರು ಮತ್ತೆ ಹೊಡೆಗೆಡೆದು ಎನ್ನ ನುಡಿದು, ಹೊಡೆದು, ರಕ್ಷಿಸಿದಿರಲ್ಲ. ಎನ್ನ ಒಡೆಯರು ನೀವಹುದೆಂದು ಬಿಡದೆ ಅವರ ಬೇಡಿಕೊಂಬೆ. ಇದೀಗ ನಮ್ಮ ಶರಣರ ನಡೆನುಡಿ. ಅದಂತಿರಲಿ. ಅದಕೆ ನಮೋ ನಮೋ ಎಂಬೆ. ಈ ಪೊಡವಿಯೊಳು ಹುಟ್ಟಿದ ಮನುಜರೆಲ್ಲರು ಒಡೆಯರೆಂದು ಪೂಜೆಯಮಾಡಿ,ತುಡುಗುಣಿನಾಯಿಯಂತೆ ಒಕ್ಕುದ ಮಿಕ್ಕುದ ನೆಕ್ಕಿ, ತಮ್ಮ ಇಚ್ಛೆಗೆ ನುಡಿದರೆ ಒಳ್ಳಿದನೆಂಬರು. ಸತ್ಯವ ನುಡಿದರೆ ಸಾಯಲವನೆಲ್ಲಿಯ ಶರಣ ? ಇವನೆಲ್ಲಿಯ ಜಂಗಮ? ಇವರ ಕೂಡಿದ ಮನೆ ಹಾಳೆಂದು, ಕಂಡ ಕಂಡವರ ಕೂಡ ಹೇಳಿಯಾಡುವ, ಈ ಕಾಳುಮನುಜರನು ಲಿಂಗ ಜಂಗಮವೆಂದು ನುಡಿದು ಕೂಡಿಕೊಂಡು ಹೋದರೆ, ತನ್ನ ತನ್ನ ಪದಾರ್ಥವ ಹಿಡಿದರೆ, ಒಡೆಯನೆ ಬದುಕಿದೆ, ತ್ರಾಹಿ ಎಂಬ ಮೃಡಶರಣನು ಈ ಅಡ[ಗು] ಕಚ್ಚಿಕೊಂಡಿರುವ, ಹಡಿಕಿಮನುಜರನು ಸರಿಗಂಡಡೆ, ನಾಯಕ ನರಕದಲ್ಲಿಕ್ಕುವ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ನಿತ್ಯ ಅನಿತ್ಯವೆಂಬುದ ತೋರಿದಿರಿ, ಸತ್ಯ ಅಸತ್ಯವೆಂಬುದ ತೋರಿದಿರಿ. ಆಚಾರ ವಿಚಾರವೆಂಬುದ ತೋರಿದಿರಿ. ಅಯ್ಯಾ ಸೋಹಂ ದಾಸೋಹಂ ಎಂಬುದ ತೋರಿದಿರಿ. ಇದು ಎಂಬುದ ತೋರಿದಿರಿ. ಅಯ್ಯಾ ಮುಕ್ತಿ ಎಂಬುದ ತೋರಿದಿರಿ. ಅಂಗ ಲಿಂಗವೆಂಬುದ ತೋರಿದಿರಿ, ಪ್ರಾಣವೇ ಜಂಗಮವೆಂಬುದ ತೋರಿದಿರಿ. ಪ್ರಸಾದವೇ ಪರವೆಂದು ತೋರಿದಿರಿ. ಇಂತಿವರ ಭೇದಾದಿ ಭೇದವನೆಲ್ಲ ತೋರಿದಿರಿ. ನಿಮ್ಮ ಹಾದಿಯ ಹತ್ತಿಸಿದಿರಿ. ಮೂದೇವರೊಡೆಯ ಚೆನ್ನಮಲ್ಲೇಶ್ವರಾ, ನಿಮ್ಮ ಹಾದಿಗೊಂಡು ಹೋಗುತ್ತಿರ್ದು, ನಾನೆತ್ತ ಹೋದೆನೆಂದರಿಯನಯ್ಯಾ. ಬಸವಪ್ರಿಯ ಕೂಡಲಚೆನ್ನ ಬಸವಣ್ಣಾ , ನಾ ಹೋದ ಹಾದಿಯ ನೀವೆ ಬಲ್ಲಿರಿ.
--------------
ಹಡಪದ ಅಪ್ಪಣ್ಣ
ನಮ್ಮಂತುವ ತಿಳಿದು, ನೋಡಿದರೆ ಹೇಳಿಹೆನು. ಅದೆಂತೆಂದರೆ, ಮೇಲು ಕೀಳಾಯಿತ್ತು, ಕೀಳು ಮೇಲಾಯಿತ್ತು. ನಿರಾಳ ಆಳವಾಯಿತ್ತು, ಆಳ ನಿರಾಳವಾಯಿತ್ತು. ಉತ್ತರ ಪೂರ್ವವಾಯಿತ್ತು, ಪೂರ್ವ ಉತ್ತರವಾಯಿತ್ತು, ಗುರುವು ಶಿಷ್ಯನಾಯಿತ್ತು, ಶಿಷ್ಯ ಗುರುವಾಯಿತ್ತು. ಅರ್ಪಿತ ಅನರ್ಪಿತವಾಯಿತ್ತು, ಅನರ್ಪಿತ ಅರ್ಪಿತವಾಯಿತ್ತು, ಇಂತಪ್ಪ ಘನವ ವೇಧಿಸಿ ನುಡಿಯಬಲ್ಲರೆ, ಆತನೆ ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣ. ನಡೆದುದೆ ಬಟ್ಟೆ, ನುಡಿದುದೆ ತತ್ವ. ಇಂತಪ್ಪ ಸರ್ವಾಂಗ ಪ್ರಸಾದಿಯ ಪ್ರಸಾದವ ಕೊಂಡು, ಸರ್ವಾಂಗ ಶುದ್ಧವಾಯಿತ್ತು. ನಾ ನಿಮ್ಮ ಪಾದದೊಳು ನಿರ್ಮುಕ್ತನಾಗಿ ಏನೂ ಇಲ್ಲದಂತಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ನುಡಿದರೇನಯ್ಯ ನಡೆ ಇಲ್ಲದನ್ನಕ್ಕ ? ನಡೆದರೇನಯ್ಯ ನುಡಿ ಇಲ್ಲದನ್ನಕ್ಕ ? ಈ ನಡೆನುಡಿಯರಿದು ಏಕವಾಗಿ, ತಾವು ಮೃಡಸ್ವರೂಪರಾದ ಶರಣರಡಿಗೆರಗಿ ನಾನು ಬದುಕಿದೆನಯ್ಯಾ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ನಾನೊಂದು ಸುಖವ ಕಂಡು, ಸುಯಿಧಾನಿಯಾಗಿ ನಿಂದೆ. ಸುಖವೆನಗೆ ಸುಖವಾಸನೆಯಾಗಿ ವೇಧಿಸಿತ್ತು. ಆ ವೇಧಿಸಿದ ಸುಖವ ನೋಡಲಾಗಿ, ಅದು ತಾನೆ ಬ್ರಹ್ಮನಾಗಿ ನಿಂದಿತ್ತು. ಆ ಬ್ರಹ್ಮದ ನೆಲೆಯನರಿದವರಿಗೆ ಹಮ್ಮಬಿಮ್ಮು ಮನ ನಾಸ್ತಿ. ಅವರು ಸುಮ್ಮಾನದ ಸುಖಿಗಳು. ಒಮ್ಮನವಾಗಿ ನಿಮ್ಮನೆ ನೋಡಿ, ನಿಮ್ಮನೆ ಕೂಡಿದರಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ನಂಬುವುದು, ಶರಣರನೆ ನಂಬುವುದು. ಕೊಂಬುವುದು, ಶರಣರ ಪ್ರಸಾದವನೆ ಕೊಂಬುವುದು. ಕೊಡುವುದು, ಶರಣರಿಗೆ ಕೊಡುವುದು. ಉಡುವುದು, ಶರಣರುಟ್ಟ ಮೈಲಿಗೆಯನೆ ಉಡುವುದು. ಇಂತಪ್ಪ ಶರಣರ ಬರವೆ, ಎನ್ನ ಪ್ರಾಣದ ಬರವು. ಅವರ ಹೊಕ್ಕೆ ಎನ್ನ ಪ್ರಾಣದ ಹೊಕ್ಕು. ಇಂತಪ್ಪ ಶರಣರ ಸಂಗವ ಮಾಡಿದ ಕಾರಣ, ಏಕವಾಗಿ ಹೋದೆ ಅವರ ಪಾದದಲ್ಲಿ. ಇನ್ನು ಬೇಕು ಬೇಡೆಂಬ ಸಂದೇಹ ಹುಟ್ಟಿದರೆ, ಇಹಲೋಕಕ್ಕೂ ಅಲ್ಲ, ಪರಲೋಕಕ್ಕೂ ಅಲ್ಲ. ಇದಕ್ಕೆ ನೀವೇ ಸಾಕ್ಷಿ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ
--------------
ಹಡಪದ ಅಪ್ಪಣ್ಣ
ನಾವು ಜಂಗಮವೆಂಬರು, ತಾವು ಭಕ್ತರೆಂಬರು. ಭಕ್ತ, ಜಂಗಮದ ನಿಲುಕಡೆ ಎಂತಿರಬೇಕೆಂದರೆ, ಮೂರುವಿಡಿದು ಮೂರನರಿದಡೆ ಭಕ್ತನೆಂಬೆ. ಮೂರ ಬಿಟ್ಟರೆ, ಮೂರ ಕಂಡರೆ, ಜಂಗಮವೆಂಬೆ. ಈ ಉಭಯವು ಒಂದಾದ ಭೇದವೆಂತೆಂದರೆ, ಭಕ್ತನ ನಡೆನುಡಿಯಲ್ಲಿ ಕವಲುದೋರುತಿರ್ದಡೆ, ಹೀಗಲ್ಲವೆಂದು ಆ ಸ್ಥಲಕ್ಕೆ ತಕ್ಕ ಹಾಗೆ ನಿಲುಕಡೆಯ ತೋರಿ ಕೊಟ್ಟು, ಆತನಲ್ಲಿದ್ದ ಕರ್ಮವು ತನ್ನ ಮುಟ್ಟದಂತೆ, ಅವನ ತಟ್ಟದಂತೆ, ಈ ಉಭಯಕ್ಕೊಡೆಯನಾಗಿ ನಿಂದರೆ, ಜಂಗಮಲಿಂಗವೆಂಬೆ. ಇಂತಾದರೆ ಆ ಭಕ್ತ ಜಂಗಮಕ್ಕೆ ನಮೋ ನಮೋ ಎಂಬೆ. ಇಂತಲ್ಲದೆ ಇದ್ದವರ ಎನ್ನತ್ತ ತೋರದಿರಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ನಾವು ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯರೆಂದು ನುಡಿವಿರಿ. ಭಕ್ತಸ್ಥಲ ಒತ್ತಿ ಹೇಳಿದರೆ, ಚಿತ್ತದಲ್ಲಿ ಕರಗುವಿರಿ, ಕೊರಗುವಿರಿ. ಮತ್ತೆ ನಮಗೆ ಮುಕ್ತಿಯಾಗಬೇಕೆಂದು ಚಿಂತೆಯ ಮಾಡುವಿರಿ. ಇಂತೀ ಉಭಯದಿಂದ ಸತ್ಯವಾವುದು, ನಿತ್ಯವಾವುದು ಎಂದರಿಯದೆ, ಕೆಟ್ಟರಲ್ಲ ಜಗವೆಲ್ಲ. ಜಗದ ವ್ಯಾಕುಳವಳಿದುದೇ ಸತ್ಯ ನಿರಾಕುಳದಲ್ಲಿ ನಿಂದುದೇ ನಿತ್ಯ. ಈ ಉಭಯದ ಗೊತ್ತನರಿದರೆ ಅದೇ ಐಕ್ಯ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ನೀವು ಹೊತ್ತಿಪ್ಪ ವೇಷದಲ್ಲಿ ತತ್ವವ ತಿಳಿದು ನೋಡಿರಣ್ಣಾ. ಜ್ಞಾನ ಬಿತ್ತಿಗಿಯ ಮೇಲೆ ನಿಂದು ಅಂಗದ ನಿಚ್ಚಣಿಕೆಯನಿಕ್ಕಿ, ಒತ್ತಿನಿಂದರೆ ಉತ್ತರಜ್ಞಾನವೆಂಬುದು ನಿಮ್ಮ ಒತ್ತಿನಲ್ಲಿಪ್ಪುದು, ಇದ ನೋಡಿದರೆ ನಿಶ್ಚಯ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ