ಅಥವಾ
(40) (22) (3) (5) (6) (1) (0) (0) (2) (0) (0) (5) (3) (0) ಅಂ (12) ಅಃ (12) (16) (0) (10) (1) (0) (1) (0) (7) (0) (0) (0) (0) (0) (0) (0) (8) (0) (4) (3) (12) (8) (0) (8) (7) (12) (2) (2) (0) (3) (8) (11) (0) (10) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶೀಲವಂತರು, ಶೀಲವಂತರು ಎಂದೇನೊ ? ಶೀಲವಂತಿಕೆಯನಾರು ಬಲ್ಲರು? ಶೀಲವಾದರೆ ಶಿವನೊಳು ಬೆರೆವುದೇ ಶೀಲ. ಶೀಲವಾದರೆ ಗುರುಲಿಂಗಜಂಗಮವ ತನ್ನೊಳಗರಿವುದೇ ಶೀಲ. ಅದಕ್ಕೆ ಮೀರಿದ ಶೀಲವಾದರೆ, ಹಸಿವು ತೃಷೆ ನಿದ್ರೆ ವಿಷಯವ ಕೆಡಿಸುವುದೇ ಶೀಲ. ಅದಕ್ಕೆ ತುರಿಯಾತೀತ ಶೀಲವಾದರೆ, ಬಾಲನಾಗಿ ತನ್ನ ಲೀಲಾವಿನೋದವ ಭೂಮಿಯ ಮೇಲೆ ನಟಿಸುವುದೇ ಶೀಲ. ಇದನರಿಯದೆ ಶೀಲಶೀಲವೆಂದು ಮನೆಮನೆಗೆ ಶೀಲವಲ್ಲದೆ, ತನ್ನ ತನಗೆ ಕಾಯಕೃತ್ಯವಲ್ಲದೆ, ಇದನರಿದು ಮೋಹ ಘನವನೆ ಮರೆದು, ಮನವನೆ ಬಳಲಿಸಿ, ಘನವ ಮಾಡಿ, ತನುವ ಹೊರೆದೆನೆಂಬ ಬಿನುಗರ ನುಡಿಯ ಮೆಚ್ಚುವನೆ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ ?
--------------
ಹಡಪದ ಅಪ್ಪಣ್ಣ
ಶರಣರಿಗೆ ಭವವುಂಟೆಂದು ಮತ್ರ್ಯದಲ್ಲಿ ಹುಟ್ಟಿದ ಭವಭಾರಿಗಳು ನುಡಿದಾಡುವರು. ತಮ್ಮ ಹುಟ್ಟ ತಾವರಿಯರು, ತಾವು ಮುಂದೆ ಹೊಂದುವದನರಿಯರು. ಇವರು ಬಂದ ಬಂದ ಭವಕ್ಕೆ ಕಡೆಮೊದಲಿಲ್ಲ . ಇಂತಪ್ಪ ಸಂದೇಹಿಗಳು ನಮ್ಮ ಶರಣರ ಹುಟ್ಟ ಬಲ್ಲೆನೆನಬಹುದೆ ? ತನ್ನ ನರಿದವನಲ್ಲದೆ ಇದಿರನರಿಯರು. ಈ ಉದರಪೋಷಕರೆಲ್ಲರೂ ಇದ ಬಲ್ಲೆನೆಂಬುದು ಹುಸಿ. ಇದ ಬಲ್ಲವರು ಬಲ್ಲರಲ್ಲದೆ, ಸೊಲ್ಲಿಗಭೇದ್ಯನ ನಾನೆತ್ತ ಬಲ್ಲೆ ? ಎನ್ನ ಗುರು ಚೆನ್ನಮಲ್ಲೇಶ್ವರನೇ ಬಲ್ಲ . ಇನ್ನು ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನೆ ಬಲ್ಲ .
--------------
ಹಡಪದ ಅಪ್ಪಣ್ಣ
ಶ್ರೋತ್ರ, ನೇತ್ರ, ಜಿಹ್ವೆ, ತ್ವಕ್ಕು, ಘ್ರಾಣವೆಂಬ ಬುದ್ಧೀಂದ್ರಿಯಂಗಳನರಿದು, ವಾಕ್ಕು, ಪಾಣಿ, ಪಾದ, ಪಾಯು, ಗುಹ್ಯವೆಂಬ ಕರ್ಮೇಂದ್ರಿಯವ ತೊರೆದು, ಗಂಧ, ರಸ, ರೂಪು, ಸ್ಪರ್ಶನ, ಶಬ್ದವೆಂಬ ಪಂಚೇಂದ್ರಿಯವ ಜರಿದು, ಮನ, ಬುದ್ಧಿ, ಚಿತ್ತ, ಅಹಂಕಾರವೆಂಬ ಚತುಷ್ಟಯ ಕರಣಂಗಳ ಮೆಟ್ಟಿ, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವೆಂಬ ಅರಿಷಡ್ವರ್ಗಮಂ ಸುಟ್ಟು, ತನುವ್ಯಸನ, ಮನವ್ಯಸನ, ಧನವ್ಯಸನ, ವಾಹನವ್ಯಸನ, ಉತ್ಸಾಹವ್ಯಸನ, ಸೇವಕವ್ಯಸನ, ಮತ್ಸರವ್ಯಸನವೆಂಬ ಸಪ್ತವ್ಯಸನಂಗಳ ಸ್ವಪ್ನದಲ್ಲಿ ನೆನೆಯದೆ, ಪೃಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ, ಚಂದ್ರ, ಸೂರ್ಯ, ಆತ್ಮರೆಂಬ ಇಂತೀ ಅಷ್ಟಮದವ ಹಿಟ್ಟುಗುಟ್ಟಿ, ಪ್ರಾಣ, ಅಪಾನ, ಉದಾನ, ಸಮಾನ, ನಾದ, ಕೂರ್ಮ, ಕ್ರಕರ, ದೇವದತ್ತ, ಧನಂಜಯವೆಂಬ ದಶವಾಯುವ ಕಡೆಮೆಟ್ಟಿ, ಸಂಸಾರವ ಒಡಹಾಯ್ದು, ಜಗವ ಹೊದ್ದದೆ, ತಾನೊಂದು ಕಡೆಯಾಗಿ ನಿಂದು, ಮಾಯೆಗೆ ಒಡೆಯನಾಗಿ, ಆ ಮಹಾಘನವ ಸೂರೆಗೊಂಡ ಶರಣಂಗೆ ನಮೋ ನಮೋ ಎಂದು ಬದುಕಿದೆನಯ್ಯಾ. ಬಸವಪ್ರಿಯ ಕೂಡಲಚೆನ್ನಬಸವಣ್ಣ, ನಿಮ್ಮ ಧರ್ಮ, ನಿಮ್ಮ ಧರ್ಮ.
--------------
ಹಡಪದ ಅಪ್ಪಣ್ಣ
ಶೀಲವಂತರು, ಶೀಲವಂತರು ಎಂಬರು ಶೀಲವಂತಿಕೆಯನಾರು ಬಲ್ಲರು ಹೇಳಾ ? ನೆಲಕೆ ಶೀಲ ಶೀಲವೆಂಬೆನೆ ? ಹೊಲೆ ಹದಿನೆಂಟುಜಾತಿ ನಡೆ ನುಡಿವುದಕ್ಕೆ ಒಂದೆಯಾಯಿತ್ತು . ಜಲಕೆ ಶೀಲವೆಂಬೆನೆ ? ವಿೂನ ಮೊಸಳೆಗಳು ಖಗಮೃಗಂಗಳು ನಿಂದೆಂಜಲು. ಬೆಳೆಗೆ ಶೀಲವೆಂಬೆನೆ ? ಎತ್ತು ಕತ್ತೆ ತಿಂದು ಮಿಕ್ಕ ಎಂಜಲು. ಹೊನ್ನಿಗೆ ಶೀಲವೆಂಬೆನೆ ? ಉರ ಹೊರೆಯಾಗಿಪ್ಪುದು. ಹೆಣ್ಣಿಗೆ ಶೀಲವೆಂಬೆನೆ ? ಕಣ್ಣುಗೆಡಿಸಿ ಕಾಡುತಿಪ್ಪುದು. ಇನ್ನಾವುದು ಶೀಲ ಹೇಳಿರಣ್ಣಾ ? ಇದಕ್ಕೆ ಒಳಗಾದವರೆಲ್ಲ ದುಃಶೀಲರು. ಇದ ಹಿಡಿದು ಹಿಡಿಯದೆ, ಬಿಟ್ಟು ಬಿಡದೆ. ತನ್ನ ಮನಕ್ಕೆ ಶೀಲವಾಗಿಪ್ಪುದೆ ಅಚ್ಚಶೀಲ ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಶುದ್ಧ , ಸಿದ್ಧ , ಪ್ರಸಿದ್ಧ , ಪ್ರಸಾದವೆಂದು ಹೆಸರಿಟ್ಟುಕೊಂಡು ಚೆನ್ನಾಗಿ ನುಡಿವಿರಿ. ಶುದ್ಧವಾದ ಮುಖ, ಸಿದ್ಧವಾದ ಮುಖ, ಪ್ರಸಿದ್ಧವಾದ ಮುಖ, ಅರಿದರೆ ನೀವು ಹೇಳಿರೊ. ಅರಿದು ಅರಿಯದೆ, ಅರಿಮರುಳುಗಳಿರಾ ನೀವು ಕೇಳಿರೊ. ಕಾಯಕರಣಾದಿಗಳ ಗುಣವಳಿದುದೆ ಶುದ್ಧ . ಜೀವನ ದೃಶ್ಯ ಕೆಟ್ಟು, ಜಗದ ವ್ಯಾಕುಳವಳಿದು, ನಿರಾಕುಳದಲ್ಲಿ ನಿಂದುದೆ ಸಿದ್ಧ. ಪ್ರಾಣದ ಭಯ ಮರಣದ ಭಯ ಮರಣಾದಿಗಳ ಹಿಂಗಿ, ಭಾವಳಿದು ಭವಕ್ಕೆ ಸವೆದುದೆ ಪ್ರಸಿದ್ಧ . ಈ ತೆರನನರಿಯದೆ ಎತ್ತರ ತೆತ್ತರನಾಗಿ ನುಡಿವಿರಿ. ಬಲ್ಲವರೆನಿಸಿಕೊಂಡಿಹೆವೆಂದು ನಿಮ್ಮ ಬಲ್ಲತನ ಹಾಳಾಯಿತ್ತು . ನೀವು ಬರುಸೂರೆಯ ಹೋಗುವುದನರಿಯದೆ, ಬರಿದೆ ಏಕೆ ಅರಚಾಗಿ ಸತ್ತಿರಿ, ನೆರೆ ಮೂರುಲೊಕವೆಲ್ಲ ? ಇದನರಿದಾದರೂ ಆರಿಗೂ ಕೊಡಬೇಡ, ಕೊಳಬೇಡ. ಮನಮುಟ್ಟಿ ಎರಗಿ ಬದುಕಿರೆ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಶೃಂಗಾರದ ಊರಿಗೆ ಒಂಬತ್ತು ಹಾಗಿಲು, ಐದು ದಿಡ್ಡಿ , ಎರಡು ತೋರಗಂಡಿ, ಐವರು ತಳವಾರರು, ಮೂವರು ಪ್ರಧಾನರು, ಇಬ್ಬರು ಸೇನಬೋವರು, ಒಬ್ಬ ಅರಸು. ಅರಸಿಂಗೆ ಐವರು ಸೊಳೆಯರು, ಅವರ ಬಾಗಿಲ ಕಾವರು ಹತ್ತು ಮಂದಿ. ಅವರ ಪಾ[ಲಿ]ಪ ಡಕ್ಕಣದವರು ಇಪ್ಪತ್ತೈದು ಮಂದಿ. ಅವರ ಭಂಡಾರ ಬೊಕ್ಕಸ ಅಟ್ಟುಮಣಿಹ, ಹರಿಮಣಿಹ, ಕಟ್ಟಿಗೆಯವರು, ಬೋಹೋ ಎಂದು ಕೊಂಡಾಡುವರು, ಮೂವತ್ತಾರುಮಂದಿ ಚೂಣಿಯರು. ಹುಯ್ಯಲ ಕಾಲಾಳುಗಳು ನೂರನಾಲ್ವತ್ತೆಂಟು. ಈ ಸಂಭ್ರಮದಲ್ಲಿ ಆ ಮನವೆಂಬ ಅರಸು ಸುಖಸಂತೋಷದಲ್ಲಿ ರಾಜ್ಯಂಗೆಯ್ಯುತ್ತಿರಲು, ಇತ್ತ ಶರಣ ತನ್ನ ತಾನೆ ಎಚ್ಚೆತ್ತು ನೋಡಿ, ಪಶ್ಚಿಮ ಕದವ ಮುರಿದು ಒಳಹೊಕ್ಕು, ಒಳಗೆ ತೊಳಗಿ ಬೆಳಗುವ ಜ್ಯೋತಿರ್ಮಯ ಲಿಂಗವನೆ ಕಂಡು, ಆ ಲಿಂಗದಂಘ್ರಿವಿಡಿದು ಸಂಗಸುಖದೊಳಗೆ ಒಂಬತ್ತು ಬಾಗಿಲಿಗೂ ಲಿಂಗವನೆ ಸ್ಥಾಪ್ಯವ ಮಾಡಲಾಗಿ, ಮನವೆಂಬ ಅರಸು ಒಳಗೆ ಸಿಕ್ಕಿದ ಅಗಳ ಮುರಿದು ಬರುತ್ತಿರಲು, ದಾರಿಯ ಕಾಣದೆ ಕಣ್ಣುಗೆಟ್ಟು ಹೋದರು. ಮನವೆಂಬ ಅರಸು ತನ್ನ ಸೊಳೆಯರೈವರು, ಪ್ರಧಾನರು, ಸೇನಬೋವರು, ಪಾಲಿಪ ಡಕ್ಕಣದವರು, ಬೋಹೋ ಎಂದು ಉಗ್ಘಡಿಸುವವರು, ಆನೆ ಕುದುರೆ ಇವರೆಲ್ಲರನು ಹಿಡಿದು ಕಟ್ಟಿಕೊಂಡು ಮಹಾಲಿಂಗವೆಂಬ ಅರಸಿಂಗೆ ತಂದೊಪ್ಪಿಸಿದನು. ಆ ಲಿಂಗವ ಕಂಡವರೆಲ್ಲ ಲಿಂಗದಂತೆ ಆದರು. ಇದು ಕಾರಣ, ಶರಣಂಗೆ ಅಂಗಭೋಗವೆಲ್ಲ ಲಿಂಗಭೋಗವಾಯಿತ್ತು . ಲಿಂಗಭೋಗವೆ ಅರ್ಪಿತವಾಯಿತ್ತು , ಅರ್ಪಿತವೆ ಪ್ರಸಾದವಾಯಿತ್ತು , ಪ್ರಸಾದದೊಳಗೆ ಪರಿಣಾಮಿಯಾದ. ಇದು ಕಾರಣ, ಎನ್ನ ಅಂಗ ಉರಿವುಂಡ ಕರ್ಪುರದಂತಾಯಿತ್ತಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಶರಣನ ಅಂಗವು ಎಂತಿಪ್ಪುದೆಂದರೆ, ವಾರಿಕಲ್ಲು ನೀರೊಳಗೆ ಬಿದ್ದಂತೆ, ಸಾರ ಬಲಿದು, ಶರಧಿಯ ಕೂಡಿದಂತೆ, ಅರಗಿನ ಬೊಂಬೆಗೆ ಉರಿಯ ಸರವ ಮಾಡಿದಂತೆ, ಪರಿಮಳವ ಕೂಡಿದ ವಾಯುವಿನಂತೆ, ಆಡಂಬರವ ಮಾಡಿ ತೋರಿದ ಆಕಾಶದಂತೆ, ಇದೀಗ ಶರಣರಂಗ. ಇದರಂದವ ತಿಳಿದರೆ ಐಕ್ಯ. ಇದರೊಳು ನಿಶ್ಚಿಂತನಾದರೆ ನಿರವಯವು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಶಿವಭಕ್ತರ ಹಾದಿಯ ಕಾಣದೆ, ಹರಗಣಂಗಳೆಲ್ಲಕ್ಕೆ ಪರಮಗುರುವಾಗಿ, ಪರಮಾರಾಧ್ಯರಾಗಿ ಸುಳಿದಿರಲ್ಲದೆ ನೀವು ಒಡಲುವಿಡಿದಿದ್ದರೆನ್ನಬಹುದೆ ? ಅದೇನು ಕಾರಣವೆಂದರೆ, ಎನ್ನ ಭವವ ಛೇದನೆಯ ಮಾಡಿದುದಕ್ಕೆ ಎನ್ನ ಮನಕ್ಕೆ ಮನವೇ ಸಾಕ್ಷಿ. ಮತ್ತೆ ಚೆನ್ನಮಲ್ಲೇಶ್ವರ ಸಾಕ್ಷಿ. ಮರವೆಯಿಂದ ಈ ಮತ್ರ್ಯದಲ್ಲಿ ಒಡಲುವಿಡಿದು ಹುಟ್ಟಿದವರು ಬ್ರಹ್ಮನಾದರೂ ಆಗಲಿ, ವಿಷ್ಣುವಾದರೂ ಆಗಲಿ, ರುದ್ರನಾದರೂ ಆಗಲಿ, ಶಿವನಾದರೂ ಆಗಲಿ, ಸದಾಶಿವನಾದರೂ ಆಗಲಿ, ಮಾಯೆವಿಡಿಸಿ ಕಾಡಿದಲ್ಲದೆ ಮಾಣದು. ಮಿಕ್ಕಿನವರ ಭವಕ್ಕೆ ಕಡೆ ಇಲ್ಲ . ಎನ್ನ ಪರಮಾರಾಧ್ಯರು ಚೆನ್ನಮಲ್ಲೇಶ್ವರ ಮಾಯೆಯ ಮಂಡೆಯ ಮೆಟ್ಟಿ, ಎನ್ನ ತನು ಮನ ಧನಕ್ಕೆ ಒಡೆಯನಾಗಿ ತನ್ಮಯನಾಗಿ ತಾನೇ ರೂಪಾದನಯ್ಯ. ನಾನೆಂಬುದಿಲ್ಲ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಶ್ರೀಜಂಗಮಲಿಂಗ ಎಂತಿಹನೆಂದಡೆ : ಇಂತೀ ಅಜಾಂಡಬ್ರಹ್ಮಾಂಡವು ತನ್ನ ಕುಕ್ಷಿಯೊಳು ನಿಕ್ಷೇಪವಾಗಿ, ತಾ ನಿರ್ಗಮನಿಯಾಗಿ ಲಿಂಗರೂಪಾಗಿ ಸುಳಿಯಬಲ್ಲರೆ ಜಂಗಮಲಿಂಗವೆಂಬೆ. ಅದಕ್ಕೆ ನಮೋ ನಮೋ, ಆ ನಿಲವಿಂಗೆ ಭವವಿಲ್ಲ ಬಂಧನವಿಲ್ಲ . ಇಂತಲ್ಲದೆ ವೇಷವ ಹೊತ್ತು , ಹೊರವೇಷದ ವಿಭೂತಿ ರುದ್ರಾಕ್ಷಿಯ ತೊಟ್ಟು, ಕಾಸುವಿಗೆ ಕೈಯಾಂತು ವೇಶಿದಾಸಿಯರ ಬಾಗಿಲ ಕಾಯ್ದು, ಲೋಕದೊಳಗೆ ಗಾಸಿಯಾಗಿ ಜಂಗಮವೇಷಕ್ಕೆಲ್ಲ ಭಂಗವ ಹೊರಿಸಿ, ಕಣ್ಣುಗಾಣದೆ ಜಾರಿಬಿದ್ದು , ದೂರಿಂಗೆ ಬಂದು, ಈ ಮೂರಕ್ಕೊಳಗಾಗಿ, ಪಾರಾಗಿ ಹೋಗುವರ ವೇಷಕ್ಕೆ ಶರಣಾರ್ಥಿ. ಅವರು ಸುತ್ತಿರ್ದ ಪಾಶವ ಕಂಡು ಹೇಸಿತ್ತೆನ್ನ ಮನ. ನಿಮ್ಮಾಣೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಶ್ರೀ ಗುರುವಿನ ಕೃಪಾದೃಷ್ಟಿ ತತ್‍ಶಿಷ್ಯನ ಹೃದಯದಲ್ಲಿ ಪ್ರವೇಶಿಸಿ, ಆ ತತ್ ಶಿಷ್ಯಂ ಗುರೂಪಾವಸ್ಥೆಯ ಮಾಡುತ್ತಿರಲು ಆ ಶ್ರೀ ಗುರುಸ್ವಾಮಿ ಪ್ರಸನ್ನರಾಗಿ, ಹತ್ತಿರಕ್ಕೆ ಕರೆದು, ಬತ್ತಿನಲ್ಲಿ ಕುಳ್ಳಿರಿಸಿ, ಮಸ್ತಕದ ಮೇಲೆ ಹಸ್ತವನ್ನಿರಿಸಲು ಅವಲೋಹದ ಮೇಲೆ ಪರುಷ ಬಿದ್ದಂತಾಯಿತ್ತಯ್ಯಾ ಲಲಾಟದಲ್ಲಿ ವಿಭೂತಿಯ ಧರಿಸಲು ಮುಕ್ತಿರಾಜ್ಯ ಕ್ಕೊಡೆತನವನಿತ್ತಂತಾಯಿತ್ತಯ್ಯಾ ಸಂಚಿತ ಪ್ರಾರಬ್ಧ ಆಗಾಮಿ ಜಾರಿ ಹೋದವಯ್ಯಾ. ಕರ್ಣದಲ್ಲಿ ಮಂತ್ರವ ಹೇಳಲೊಡನೆ ಪಂಚಾಕ್ಷರವೆ ಸ್ಥಾಪ್ಯವಾಗಿ ಪಂಚಭೂತಂಗಳು ಬಿಟ್ಟುಹೋದವಯ್ಯಾ. ಕರಸ್ಥಲಕ್ಕೆ ಲಿಂಗವ ಕೊಡಲೊಡನೆ ಅಂಗವೆ ಲಿಂಗಾರ್ಪಣವಾಗಿ ಸರ್ವಾಂಗ ಲಿಂಗವಾಗಿ ಅಂಗಕರಣಂಗಳಲ್ಲಿ ಲಿಂಗಕಿರಣಂಗಳಾಗಿ ಆಡುವುದು ಲಿಂಗದ ಲೀಲೆ ಎಂದಂದು ಆ ತತ್‍ಶಿಷ್ಯ ತಲೆಯೆತ್ತಿ ನೋಡಿ ತಾನನಾದಿ ಶಿವತತ್ವವಲ್ಲದಿದ್ದರೆ ಆ ಪರಶಿವನಪ್ಪ ಗುರುವೆ ಪ್ರಸನ್ನರಪ್ಪರೆ ಎಂದರಿದು, ಪಾದದ ಮೇಲೆ ಬಿದ್ದು ಬೇರಾಗದಿರಲು ಆತನು ಗುರುವ ಸೋಂಕಿ ಕಿಂಕುರ್ವಾಣ ಭಯಭಕ್ತಿಯಿಂದ ಅಹಂಕಾರವಳಿದು ಭಕ್ತನಾದ. ಮನ ಲಿಂಗವ ಸೋಂಕಿ ಭಯ ಭಕ್ತಿಯಿಂದ ಚಿತ್ತಗುಣವಳಿಸು ಮಹೇಶ್ವರನಾದ, ಧನ ಜಂಗಮವ ಸೋಂಕಿ ಪ್ರಕೃತಿಯಳಿದು, ಪರಮಾನಂದರಸಭರಿತನಾಗಿ ಮನ ಮನನ ಲೀಯವಾಗಿ ಪ್ರಾಣಲಿಂಗಿಯಾದ. ಭಾವ ಪ್ರಸಾದವ ಸೋಂಕಿಯೆ ಭ್ರಮೆಯಳಿದು ನಿರ್ಭಾವಿಯಾಗಿ ಜೀವಗುಣವಳಿದು ಶರಣನಾದ. ಅರಿವು ತನುಕರಣ ಮನ ಇಂದ್ರಿಯನವಗಿವಿಸಿ ಸರ್ವಾಂಗಲಿಂಗವಾಗಿ ಅರಿವಡಗಿ ಮರಹು ನಷ್ಟವಾಗಿ ತೆರಹಿಲ್ಲದ ಬಯಲಿನೊಳಗೆ ಕುರುಹಳಿದುನಿಂತ ಬಸವಪ್ರಿಯ ಕೂಡಲಸಂಗಮದೇವನೆಂಬ ಶ್ರೀಗುರುವಿನ ಚರಣಕ್ಕೆ ನಮೋ ನಮೋ ಎನುತಿರ್ದೆನು.
--------------
ಹಡಪದ ಅಪ್ಪಣ್ಣ
ಶ್ರೀಗುರುವೆ ಮದ್ಗುರುವೆ ಸದ್ಗುರುವೆ ಸದಾಸನ್ನಿಹಿತ ಗುರುವೆ ಷಡಾಂಗ ಸನ್ಮತಗುರುವೆ ಸಾವಧಾನದೊಳು ಸಮರಸ ಗುರುವೆ ಭಾವದೊಳು ಭರಿತ ಗುರುವೆ ಬ್ರಹ್ಮಾಂಡ ಪಿಂಡಾಂಡ ಪರಿಪೂರ್ಣ ಗುರುವೆ ಮಹದಾನಂದ ಗುರುವೆ, ಬಸವಪ್ರಿಯ ಕೂಡಲಸಂಗಮೇದೇವ ಪ್ರಭುವೆ.
--------------
ಹಡಪದ ಅಪ್ಪಣ್ಣ