ಅಥವಾ
(40) (22) (3) (5) (6) (1) (0) (0) (2) (0) (0) (5) (3) (0) ಅಂ (12) ಅಃ (12) (16) (0) (10) (1) (0) (1) (0) (7) (0) (0) (0) (0) (0) (0) (0) (8) (0) (4) (3) (12) (8) (0) (8) (7) (12) (2) (2) (0) (3) (8) (11) (0) (10) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬ್ರಹ್ಮಾಂಡದ ಬಯಲ ಪಸರಿಸಿ, ಹಿಡಿವರೆ ಬಯಲಾವುದುಂಟು ಹೇಳಿರಣ್ಣಾ ? ಕಂಗಳ ಮುಂದಣ ಕತ್ತಲೆ ಹರಿವುದಕ್ಕೆ ಜ್ಯೋತಿ ಆವುದುಂಟು ಹೇಳಿರಣ್ಣಾ ? ಇಂಗಿತವನರಿದ ಬಳಿಕ, ತ್ರಿವಿಧಕ್ಕೆ ತ್ರಿವಿಧವನಿತ್ತು ತ್ರಿವಿಧವನರಿದು, ತ್ರಿವಿಧವ ಮರೆದು, ಕಲಿಯುಗದ ಕತ್ತಲೆಯ ದಾಂಟಿ, ತನ್ನ ಭವವ ದಾಂಟಿದವಂಗೆ, ಬ್ರಹ್ಮಾಂಡದ ಬಯಲು ಕೈವಶವಾಯಿತ್ತು. ಕಂಗಳ ಮುಂದಣ ಕತ್ತಲೆ ಹರಿದುಹೋಯಿತ್ತು, ನಿಮ್ಮ ಸಂಗಸುಖದೊಳಗಿಪ್ಪ ಲಿಂಗೈಕ್ಯಂಗೆ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಬ್ರಹ್ಮನ ಹುಟ್ಟು, ವಿಷ್ಣುವಿನ ಸ್ಥಿತಿ, ರುದ್ರನ ಲಯಕ್ಕೆ ಒಳಗಾದ ಮನುಜರೆಲ್ಲ ತಾವು ಪ್ರಸಾದಿ, ಪ್ರಾಣಲಿಂಗಿಗಳೆಂದು ನುಡಿದುಕೊಂಬಿರಿ. ಪ್ರಸಾದಿಸ್ಥಲ ಎಲ್ಲರಿಗೆಂತಾದುದಣ್ಣಾ ? ಪ್ರಸಾದಿಸ್ಥಲ ಪರಮಸುಖ ಪರಿಣಾಮ. ಮನ ಮೇರೆದಪ್ಪಿ ತನುವನೆ ಪ್ರಸಾದವ ಮಾಡುವದೀಗ ಪ್ರಸಾದ. ಇದನರಿಯದೆ ಸದಮದವಾಗಿ ಮುಡಿ ನೋಡಿ ಒಡಲ ಕೆಡಿಸಿಕೊಂಬ ಜಡಮನುಜರ ನುಡಿಯ ಕೇಳಲಾಗದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಬಟ್ಟಬಯಲ ತುಟ್ಟತುದಿಯ ನಟ್ಟನಡುವಣ, ಕಟ್ಟಕಡೆಯ ಮೆಟ್ಟಿ ನೋಡಿ, ಉಟ್ಟುದನಳಿದು ಒಟ್ಟಬತ್ತಲೆಯಾದೆ. ಇನ್ನು ಬಿಟ್ಟುದ ಹಿಡಿಯಬಾರದು, ಶಿಡಿದುದ ಬಿಡಬಾರದು. ಇದಕ್ಕೆ ಒಡೆಯನಾವನೆಂದು ನೋಡಲಾಗಿ ನೋಡಿಹೆನೆಂದರೆ ನೋಟಕ್ಕಿಲ್ಲ. ಕೂಡಿಹೆನೆಂದರೆ ಕೂಟಕ್ಕಿಲ್ಲ, ಹಿಡಿದಿಹೆನೆಂದರೆ ಹಿಡಿಹಿಗಿಲ್ಲ. ಪೂಜಿಸಿಹೆನೆಂದರೆ ಪೂಜೆಗಿಲ್ಲ. ಇದ ಮೆಲ್ಲಗೆ ಓಜೆಯಿಂದ ನೋಡಿಲಾಗಿ, ನೋಡುವ ನೋಟವು ತಾನೆ, ಕೂಡುವ ಕೂಟವು ತಾನೆ, ಹಿಡಿವುದು ಆ ಹಿಡಿಗೆ ಸಿಕ್ಕಿಕೊಂಬುದು ತಾನೆ, ಪೂಜಿಸುವುದು ಪೂಜೆಗೊಂಬುದು ತಾನೆ. ನಾನಿದರ ಭೇದವನರಿದು ಆದಿ ಅನಾದಿಯನು ಏಕವ ಮಾಡಿ, ನಾನಲ್ಲೇ ಐಕ್ಯನಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಬಯಲಿಂದಲೆ ಹುಟ್ಟಿ, ಬಯಲಿಂದಲೆ ಬೆಳೆದು, ಬಯಲಾಮೃತವನೆ ಉಂಡು, ಬಯಲನೆ ಉಟ್ಟು, ಬಯಲನೆ ತೊಟ್ಟು, ಬಯಲು ಬಯಲೊಳಗೆ ಬೆರೆದ ಭೇದವ, ಈ ಭುವನದೊಳಗೆ ಇಪ್ಪ ಭವಭಾರಿಗಳು ಎತ್ತಬಲ್ಲರು, ಭವವಿರಹಿತ ಶರಣರ ನಿಲವ, ಬಸವಪ್ರಿಯ ಕೂಡಲಚನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ
ಬೆಟ್ಟವ ಬೆಳ್ಳಕ್ಕಿ ನುಂಗಿ, ತುಟ್ಟತುದಿಯ ಬಟ್ಟಬಯಲ ನಟ್ಟನಡುವಣ ಶಬ್ದವ ಮುಟ್ಟಿ, ಹಿಡಿದವ ಹುಟ್ಟಲಿಲ್ಲ, ಹೊದ್ದಲಿಲ್ಲ, ಅಷ್ಟದಳ ಕುಳವ ಮುಟ್ಟಲಿಲ್ಲ. ಹೃತ್ಕಮಲಕರ್ಣಿಕಾಮಧ್ಯದಲ್ಲಿರ್ಪ ಸದ್ವಾಸನೆಯ ಸ್ವಾನುಭಾವ ಅಮೃತವನುಂಡು, ಮನ ಮಗ್ನವಾದಾತನೆ ಪ್ರಾಣಲಿಂಗಿ, ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ.
--------------
ಹಡಪದ ಅಪ್ಪಣ್ಣ
ಬಯಲೆ ರೂಪಾಯಿತ್ತು, ನಿರ್ವಯಲೆ ನಿರೂಪಾಯಿತ್ತು. ಸರ್ವಾಂಗದೊಳು ಉರಿ ವೇಧಿಸಿತ್ತು. ಅಲ್ಲೊಂದು ಸದಮದಗಜ ಹಯನಾಯಿತ್ತು. ಅಮೃತವನೆ ಉಂಡಿತ್ತು, ಮಧುರಸವನೇ ಉಂಡಿತ್ತು. ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನ ಕೂಡಿತ್ತು.
--------------
ಹಡಪದ ಅಪ್ಪಣ್ಣ
ಬಯಲಬ್ರಹ್ಮವೆ ಪಿಂಡಬ್ರಹ್ಮವೆನಿಸಿ, ಆ ಪಿಂಡಬ್ರಹ್ಮವೆ ಶಿವಶಕ್ತಿಯೆನಿಸಿ, ಆ ಶಿವಶಕ್ತಿಯ ಪ್ರಪಂಚೇ ಪಂಚಮೂರ್ತಿಯ ಪ್ರಪಂಚೆನಿಸಿ, ಆ ಪಂಚಮೂರ್ತಿಯ ಪ್ರಪಂಚು ಯುಕ್ತಿಯಿಂ ಜಗಬ್ರಹ್ಮಾಂಡ ಜೀವ ಜಂತು ಜಾಲ ಎಂಬತ್ತುನಾಲ್ಕು ಲಕ್ಷ ವರ್ಣಾಶ್ರಮದಲ್ಲಿ ಆಡಿಸಿ, ಆಡದಂತಿರ್ಪ ಪರಂಜ್ಯೋತಿ ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ.
--------------
ಹಡಪದ ಅಪ್ಪಣ್ಣ
ಬೆಳಗ ನುಂಗಿದ ಕತ್ತಲೆಯಂತೆ, ಕತ್ತಲೆಯ ನುಂಗಿದ ಬೆಳಗಿನಂತೆ, ಹೊಳೆವ ಜ್ಯೋತಿಯ ಕಳೆ ಬಯಲೊಳಡಗಿದಂತೆ, ನಳಿನಮಿತ್ರನ ಬೆಳಗು, ಹೊಳೆವ ಕಂಗಳ ಬೆಳಗು ಥಳ ಥಳ ಹೊಳೆದು ಒಂದಾದಂತೆ, ಸರ್ವಜೀವರೊಳು ಕಳೆ ಒಂದಲ್ಲದೆ ಎರಡಿಲ್ಲ. ಸಂದಳಿದ ಸಮರಸೈಕ್ಯ, ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ.
--------------
ಹಡಪದ ಅಪ್ಪಣ್ಣ