ಅಥವಾ
(40) (22) (3) (5) (6) (1) (0) (0) (2) (0) (0) (5) (3) (0) ಅಂ (12) ಅಃ (12) (16) (0) (10) (1) (0) (1) (0) (7) (0) (0) (0) (0) (0) (0) (0) (8) (0) (4) (3) (12) (8) (0) (8) (7) (12) (2) (2) (0) (3) (8) (11) (0) (10) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮನವೆ ಮಾರುತನ ಒಡಗೂಡಿರ್ದು, ತನುವೆ ವಿಕಾರದೊಳಗಿರ್ದು, ಮನವೆಂತು ಕಂಡಿತ್ತೆಂಬಿರಿ ? ಎಲೆ ಅಣ್ಣಗಳಿರಾ, ಘನವೆಂತಿಪ್ಪುದೆಂದರೆ, ಈ ತನುವ ಮರೆದು, ಹರಿವ ಮನವ ಲಿಂಗದಲಿ ನಿಲಿಸಿ, ಈ ಜನಿತಕ್ಕೆ ನಾನಿನ್ನಾರೆಂದು ತ್ರಿಕಾಲದಲ್ಲಿಯೂ ಎಮ್ಮ ಶರಣರಿಗೆ ನೆನೆವನೆ ನಿತ್ಯನು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಮುಟ್ಟಿಯೂ ಮುಟ್ಟಬಾರದ ಠಾವಿನಲ್ಲಿ, ಹುಟ್ಟಿಯೂ ಹುಟ್ಟದೊಂದು ಶಿಶುವಾಯಿತ್ತು. ಅವ ದಿಟ್ಟನಲ್ಲ, ದ್ಥೀರ ವೀರ, ಕೊಟ್ಟದವನಲ್ಲ, ಕೊಟ್ಟುದ ಬೇಡ, ಅವನ ಮುಟ್ಟಿ ಒಡನೆರೆದವರು ನಿತ್ಯನಿತ್ಯಲಿಂಗೈಕ್ಯರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಮಿಥ್ಯವನರಿದವರೆಲ್ಲ ತತ್ವಕ್ಕೆ ಅಂದೇ ಹೊರಗು, ತಥ್ಯವನರಿದ ಶರಣರು ಸತ್ತಂತೆ ಇರಬೇಕು. ತಥ್ಯಮಿಥ್ಯ ಎರಡಳಿದ ಶರಣಂಗೆ ಮತ್ತೊಂದು ಬಾರಿ ನಮೋ ನಮೋ ಎಂಬೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಮಹಾಘನ ನೆಲೆಗೊಂಡಿಪ್ಪ ಶರಣನ ನೆಲೆ ಎಂತಿಪ್ಪುದೆಂದರೆ, ನೆಲದ ಮರೆಯ ನಿಧಾನದಂತೆ, ತಿಲದ ಮರೆಯ ತೈಲದಂತೆ, ಮುಗಿಲ ಮರೆಯ ಮಿಂಚಿನಂತೆ, ನೀರೊಳಗಣ ಕಿಚ್ಚಿನಂತೆ, ಕಾಷ*ದೊಳಗಣ ಅಗ್ನಿಯಂತೆ, ತೃಣದೊಳಗಡಗಿದ ಚೈತನ್ಯದಂತೆ, ಈ ವಿಶ್ವದೊಳು ಇದ್ದೂ ಇಲ್ಲದಂತಿಪ್ಪ ಮಹಾಘನವ ನಿಮ್ಮ ಶರಣರು ಬಲ್ಲರಲ್ಲದೆ, ಮತ್ರ್ಯದ ಮರಣಬಾಧೆಗೊಳಗಾದ ಮನುಜರೆತ್ತಬಲ್ಲರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ
ಮರೆದರೆ ಮಾಯೆ, ಅರಿದರೆ ಮಾಯೆ ಇಲ್ಲ, ಅರಿವು ಮರವೆ ಎರಡ ನೂಂಕಿ ನಿಂದರೆ, ಮುಂದೆ ಕಣ್ಣು ತೆರಪಾಗಿ ತೋರುವ ಬಯಲೆ ಲಿಂಗದ ಬೆಳಗು. ಆ ಲಿಂಗದ ಬೆಳಗೆ ನೆಮ್ಮುಗೆಯಾದರೆ ಲಿಂಗೈಕ್ಯವು. ಆ ಲಿಂಗೈಕ್ಯವು ನಿಜವಾದರೆ ನಿಶ್ಚಿಂತವು. ನಿಶ್ಚಿಂತದಲ್ಲಿ ಲೀಯವಾದರೆ, ನಿರವಯವು, ಇದೀಗ ನಮ್ಮ ಮುನ್ನಿನ ಆದ್ಯರ ನಡೆನುಡಿ, ಇದನರಿಯದೆ ವೇದ ಪುರಾಣ ಶಾಸ್ತ್ರ ಆಗಮ ಇವನೊಂದನು ಓದಿದರೆ ಹಾಡಿದರೆ ಕೇಳಿದರೆ ಕಾಯ ವಾಯವೆಂದರು, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಮೂಲಬ್ರಹ್ಮದಲ್ಲಿ ಮೊನೆದೋರಿದ ಪ್ರಸಾದವೆ ಪರಮಪ್ರಣಮ. ಆ ಪ್ರಮಣದ ಪರಮಪ್ರಕಾಶವೆ ಪ್ರಸಿದ್ಧಪ್ರಸಾದ, ಆ ಪ್ರಸಿದ್ಧಪ್ರಸಾದದಿಂದಲೆ ಬ್ರಹ್ಮಾಂಡ ರೂಪುದೋರಿತ್ತು. ಆ ಸ್ವರೂಪವೆ ಪ್ರಸಾದ, ನಿರೂಪೇ ಲಿಂಗೈಕ್ಯ, ಅದಕ್ಕೆ ದೃಷ್ಟ : ತತ್ತ್ವ ಪ್ರದೀಪಿಕಾಯಾಂ : ಪ್ರಸಾದಂ ಮುಕ್ತಿ ಮೂಲಂಚ ಯತ್ಪ್ರಸಾದಂ ಶಿವಸ್ಯ ಚ | ಶಿವಸ್ಸರ್ವಾಧಿದೇವಸ್ಯಾದ್ ವೇದಕವೆರ್Åೀಷು ತದ್ಘನಂ || ಎಂದುದಾಗಿ, ಇಂತಿದೀಗ ಪ್ರಸಾದ ಮಹಾತ್ಮೆ. ಇದೇ ಪ್ರಸನ್ನಪ್ರಸಾದ, ಇಂತೀ ಪ್ರಸಾದವ ಕೊಂಡವನೆ ಶಿವಕುಲ. ಬಸವಪ್ರಿಯ ಕೂಡಲಸಂಗಮದೇವಾ, ಮಾಂ ತ್ರಾಹಿ, ತ್ರಾಹಿ ಕರುಣಾಕರನೆ,
--------------
ಹಡಪದ ಅಪ್ಪಣ್ಣ
ಮರ್ತ್ಯಲೋಕದ ಮಹಾಗಣಂಗಳು ನೀವು ಕೇಳಿರಯ್ಯ, ಅದೇನು ಕಾರಣವೆಂದರೆ, ಗುರುವೆನ್ನದು, ಲಿಂಗವೆನ್ನದು, ಜಂಗಮವೆನ್ನದು, ಪ್ರಸಾದವೆನ್ನದು. ಈ ಚತುರ್ವಿಧವು ಎನ್ನದಾದ ಕಾರಣದಿಂದ, ಇದರ ಹಾನಿವೃದ್ಧಿ ಎನ್ನದಾದ ಕಾರಣದಿಂದ, ಕಂಡುದ ನುಡಿವೆನಲ್ಲದೆ, ಜಗದಂತೆ ಮಿಥ್ಯಾಳಾಪವಾಗಿ ನುಡಿವನಲ್ಲ. ಮುಂದೆ ಸತ್ತುಗಿತ್ತು ಹುಟ್ಟುವನಲ್ಲ, ಮುಂದೆ ಹೊತ್ತುದ ಹುಸಿಮಾಡಿ, ಮತ್ತೊಂದು ದಿಟ ಮಾಡುವನಲ್ಲ. ಅದನೇನು ಕಂಡವರು ಕಂಡಂತೆ ನುಡಿವರು. ಉಂಡವರು ಉಂಡಂತೆ ತೇಗುವರು ಎಂಬುದ ನೀವು ಅರಿದುಕೊಳ್ಳಿ. ಪಂಚಾಚಾರಕ್ಕೊಳಗಾದ ಶಿವಭಕ್ತರು ಎಮ್ಮಲ್ಲಿ ಹಿಂಚುಮುಂಚು ನೋಡಬೇಡ. ನಿಮ್ಮ ಪ್ರಪಂಚನೆಯ ಹರಿದುಕೊಂಡು, ನಿಮ್ಮಲ್ಲಿರ್ದ ಭವಿಗಳನೆ ಭಕ್ತರ ಮಾಡಿ ವಿವರಿಸಿ ನೋಡಲಾಗಿ, ನಾ ನೀನೆಂಬುವದಕ್ಕಿಲ್ಲ. ಆ ಉಭಯದ ಗೊತ್ತ ಮೆಟ್ಟಲಾಗಿ, ಭಕ್ತಜಂಗಮ ಒಂದೇ ಅಂಗ, ಅದಕ್ಕೆ ನಿಶ್ಚಿಂತ ನಿಜೈಕ್ಯವು. ಆ ನಿಲುವಿಂಗೆ ನಮೋ ನಮೋ ಎನುತಿರ್ದೆ, ಬಸವಪ್ರಿಯ ಕೂಡಲಚೆನ್ನಸಂಗನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಮುಳುಗುತ್ತ ತೆರಹಿಲ್ಲದಲ್ಲಿ ಅಂಗವ ಬೇರಿಟ್ಟರಸಿಹೆನೆಂಬುದೆ ಭಿನ್ನಭಾವ, ಆ ಭಿನ್ನಭಾವವೆ ಭ್ರಮೆ, ಆ ಭ್ರಮೆಯೆ ಭವ. ಆ ಭವವೆ ಭವಿ, ಆ ಭವಿಯೆ ಜೀವ. ಆ ಜೀವನೆ ಎಂಬತ್ತು ನಾಲ್ಕುಲಕ್ಷ ಜೀವಜಂತು. ಇದನರಿದವನೆ ಐಕ್ಯ, ಮರೆದವನೆ ಮಾನವ, ಇದೇ ಜೀವ ಪರಮರ ಹಸಿಗೆ. ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ.
--------------
ಹಡಪದ ಅಪ್ಪಣ್ಣ
ಮನವನರಿದಂಗೆ ಮತದ ಹಂಗೇಕೊ ? ನಿತ್ಯವನರಿದಂಗೆ ತೀರ್ಥದ ಹಂಗೇಕೊ ? ಪರಮಾರ್ಥವನರಿದಂಗೆ ಪ್ರಸಾದದ ಹಂಗೇಕೊ ? ಜ್ಯೋತಿಯನರಿದಂಗೆ ಕತ್ತಲೆಯ ಹಂಗೇಕೊ? ಲೋಕವನರಿದಂಗೆ ವ್ಯಾಕುಲದ ಹಂಗೇಕೊ? ಈ ತೆರನನರಿದಂಗೆ ಮುಂದಾವ ಭೀತಿಯುಂಟು ಹೇಳಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ
ಮತ್ರ್ಯದಲ್ಲಿ ಹುಟ್ಟಿ, ಕಂಗಳ ಮುಂದಣ ಕತ್ತಲೆಯ ಕಳೆಯದೆ, ನಾವು ಗುರು ಜಂಗಮ, ನಾವು ಭಕ್ತರು ಎಂಬ ನುಡಿಗೆ ಏಕೆ ನಾಚರೋ ? ಭಕ್ತನಾದರೆ, ಸತ್ತುಚಿತ್ತಾನಂದವನೊತ್ತಿ ಮೆಟ್ಟಿ, ತತ್ವಮಸಿವಾಕ್ಯವೆಂದು ಕಂಡು ಬಿಟ್ಟು, ಲಿಂಗದ ಗೊತ್ತುವಿಡಿದು, ಹಿಂದೆ ಹರಿದು, ಗುರುವಿನ ಗೊತ್ತನರಿದು, ಜಗದೊಳಗಣ ಗುಂಗುದಿಯನೆಲ್ಲವ ಹರಿದು, ಜಂಗಮದ ಗೊತ್ತನರಿದು, ಮುಂದಣ ಮುಕ್ತಿ ಎಂಬುದ ಮರೆದು, ಎಂತಿರ್ದಂತೆ ಬ್ರಹ್ಮವು ತಾನೆ ಎಂಬುದನರಿದು, ಪರಿಣಾಮದಲ್ಲಿ ಪರವಶನಾಗಿ ನಿಂದು, ಮತ್ತೆ ಆರನೆಣಿಸಲಿಲ್ಲ, ಮೂರು ಮುಟ್ಟಲಿಲ್ಲ, ಬೇರೊಂದುಂಟೆನಲಿಲ್ಲ , ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನಿಗೆ ಸೂರೆಹೋದ ಶರಣನು.
--------------
ಹಡಪದ ಅಪ್ಪಣ್ಣ
ಮರದೊಳಗಣ ಕಿಚ್ಚು ಮರನ ಸುಡುತ್ತಿದ್ದಿತ್ತಯ್ಯ. ಮರ ಬೆಂದು ನಿಂದುರಿಯಿತ್ತು , ಮಣ್ಣು ಜರಿದು ಬಿದ್ದಿತ್ತು , ಉರಿ ಹೋಗಿ ನಂದಿತ್ತು , ಸ್ವಯಂಪ್ರಕಾಶವಾಗಿಪ್ಪ ಎಲೆ ಉಳಿಯಿತ್ತು. ಉರಿ ಬಂದು ಎನ್ನ ಕರಸ್ಥಲದಲ್ಲಿ ಅಡಗಿತ್ತು. ಇದ ಕಂಡು ನಾ ಬೆರಗಾಗಿ ನೋಡುತಿರ್ದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಮಾತು ಮಾತಿಗೆ ಮಥನವ ಮಾಡುವಾತನೆ ಜಾತ. ಮಾತಿಗೆ ಮೊದಲ ಕಂಡಾತನೆ ಅಜಾತ, ಕಾತರಕ್ಕೆ ಕಂಗೆಟ್ಟು, ಕಳವಳಿಸದಿಪ್ಪನೆ ಪರಮಾತ್ಮ. ನೀತಿ ನಿಜ ನೆಲೆಗೊಂಡಾತನೆ ಜಗನ್ನಾಥ, ಇವೇತರೊಳಗು ಸಿಕ್ಕದಿಪ್ಪಾತನೆ ಗುರುನಾಥ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ