ಅಥವಾ
(40) (22) (3) (5) (6) (1) (0) (0) (2) (0) (0) (5) (3) (0) ಅಂ (12) ಅಃ (12) (16) (0) (10) (1) (0) (1) (0) (7) (0) (0) (0) (0) (0) (0) (0) (8) (0) (4) (3) (12) (8) (0) (8) (7) (12) (2) (2) (0) (3) (8) (11) (0) (10) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವೇಷವ ಹೊತ್ತು , ಆಶೆ ರೋಷವ ಬಿಡದೆ, ದೇಶವ ತಿರುಗಿ, ಹೊರವೇಷದ ವಿಭೂತಿ ರುದ್ರಾಕ್ಷಿ ಕಾವಿ ಕಾಷಾಯಾಂಬರವ ಧರಿಸಿ ಫಲವೇನು? ಕಾಮ ಕೆಡದು, ಕ್ರೋಧ ಬಿಡದು, ಲೋಭ ಹಿಂಗದು, ಮೋಹ ನಿಲ್ಲದು, ಮದ ಹೆರೆಸಾರದು, ಮತ್ಸರ ಬೆಂದುಹೋಗದು. ಇವೆಲ್ಲ ಸಹಿತ ಜಂಗಮಭಕ್ತರೆಂದು ಸುಳಿವವರ ಕಂಡು ನಾಚಿತ್ತು ಎನ್ನ ಮನ. ಭಕ್ತಜಂಗಮ ಘನವನೇನೆಂದು ಉಪಮಿಸುವೆ ? ರೂಪಿನ ಹಾಗೆ, ನೆಳಲಿನ ಹಾಗೆ, ದೇಹದ ಹಾಗೆ, ಪ್ರಾಣದ ಹಾಗೆ, ಭಾವದ ಹಾಗೆ, ನಿರ್ಭಾವದ ಹಾಗೆ, ಉರಿಯ ಹಾಗೆ, ಕರ್ಪುರದ ಹಾಗೆ, ಆವಿಯ ಹಾಗೆ, ನೀರ ಹಾಗೆ, ಎರಡೊಂದಾದರೆ ತೆರಹಿಲ್ಲ. ಆ ನಿಲುವಿಂಗೆ ನಮೋ ನಮೋ ಎನುತಿರ್ದೆ ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ವೇದಪುರಾಣಾಗಮಶಾಸ್ತ್ರ ನಾದದ ಸೊಮ್ಮೆಂಬಿರಿ. ಆ ನಾದದಿಂದ ಆಕಾಶ ಪುಟ್ಟಿತ್ತು . ಆಕಾಶದಿಂದ ವಾಯು ಪುಟ್ಟಿತ್ತು , ವಾಯುವಿನಿಂದ ಅಗ್ನಿ ಪುಟ್ಟಿತ್ತು . ಅಗ್ನಿಯಿಂದ ಅಪ್ಪು ಪುಟ್ಟಿತ್ತು , ಅಪ್ಪುವಿನಿಂದ ಪೃಥ್ವಿ ಪುಟ್ಟಿತ್ತು. ಪೃಥ್ವಿಯಿಂದ ಇರುವೆ ಕಡೆಯಾಗಿ ಎಂಬತ್ತುನಾಲ್ಕುಲಕ್ಷ ಜೀವಂಗಳು ಪುಟ್ಟಿದವು. ಅದೇನು ಕಾರಣವೆಂದಡೆ, ರಸಗಂಧದಿಂದ ರೂಪಾದವು, ಅಗ್ನಿಕಳೆಯಾಯಿತ್ತು . ವಾಯು ಚೈತನ್ಯವಾಯಿತ್ತು . ಆಕಾಶ ನಾದವಾಯಿತ್ತು. ಇಂತಿದರೊಳಗೆ ನಮ್ಮ ದೇವ ಇವರೊಂದರಂತೆಯೂ ಅಲ್ಲ . ಪಂಚತತ್ವವನಿಳುಹಿ, ಆತ್ಮತತ್ವ ಅನಾತ್ಮನೊಳು ಕೂಡಿ, ಅನಾಮಯಲಿಂಗ ಕಾಣಬಹುದು. ಅನಾಮಯಲಿಂಗವ ಕಂಡ ಬಳಿಕ, ಅದೇ ಲಿಂಗೈಕ್ಯವು. ಇದು ತಪ್ಪದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ವಜ್ರದ ಮನೆಯೊಳಗಿರ್ದು, ಗೊರಲೆ ಮುಟ್ಟಿತೆಂಬ ಸಂದೇಹವೇಕೆ ? ಭದ್ರಗಜ ಮೇಲೆ ಬರುತಿರ್ದು ಕೆಳಗಿರ್ದ ಗುಜ್ಜನಾಯಿ ಮುಟ್ಟಿತೆಂಬ ಸಂದೇಹವೇಕೆ ? ಸಂಜೀವನ ಕೈಯ ಸಾರಿರ್ದು ಇಂದಿಗೆ ನಾಳಿಗೆಂಬ ಸಂದೇಹವೇಕೆ ? ಸಜ್ಜನ ಸದ್ಭಕ್ತರ ಸಂಗದೊಳಗಿರ್ದು, ಸತ್ತೆನೋ, ಬದುಕಿದೆನೋ ಎಂಬ ಸಂದೇಹವೇಕೆ ? ಹತ್ತರಡಿಯ ಬಿದ್ದ ಹಾವು ಸಾಯದೆಂದು ಗಾದೆಯ ಮಾತ ನುಡಿವರು. ನಿತ್ಯರಪ್ಪ ಶರಣರ ಸಂಗದೊಳಗಿರ್ದು, ಮತ್ತೊಂದು ಉಂಟೆಂದು ಭಾವಿಸಿ ನೋಡುವ ಕತ್ತೆಮನುಜರ ಅತ್ತ ಹೊದ್ದದೆ, ಇತ್ತಲೆ ನಿಂದು ನಾಚಿ ನಗುತಿರ್ದ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ .
--------------
ಹಡಪದ ಅಪ್ಪಣ್ಣ
ವ್ಯಸನವುಳ್ಳನ್ನಕ್ಕ ಪ್ರಸಾದಿಯಲ್ಲ . ವಿಷಯವುಳ್ಳನ್ನಕ್ಕ ಪಾದೋದಕಸಂಬಂಧಿಯಲ್ಲ . ಭಾವವುಳ್ಳನ್ನಕ್ಕ ಭವವಿರಹಿತನಲ್ಲ , ಬಯಕೆಯುಳ್ಳನ್ನಕ್ಕ ಐಕ್ಯನಲ್ಲ . ಇಂತೀ ಐಕ್ಯಸ್ಥಲವೆಲ್ಲರಿಗೆಲ್ಲಿಯದೊ ? ಐಕ್ಯನಾದರೆ ಅನ್ನಪಾನಾದಿಗಳ ಇಚ್ಛೆ ನಿಂದು, ಅನಲ, ಪವನನ ಗುಣ ಕೆಟ್ಟು, ಆಕಾಶದ ಗುಣವರತು, ಆತ್ಮನೊಳು ಬೆರೆದವರ ಐಕ್ಯರೆಂಬೆ. ಆತ್ಮ ಅನಾತ್ಮನೊಳು ಅಡಗಿದರೆ ನಿರವಯಲನೆಂಬೆ. ಇಂತಪ್ಪ ಶರಣ ಬಯಲು ಬಯಲಾಗಿಪ್ಪನಲ್ಲದೆ, ವಿವರಿಸಿ ನೋಡಿದರೆ ಏನೆಂದರಿಯಬಾರದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ವೇದವನೋದಿದವರೆಲ್ಲ ನಮ್ಮ ಶರಣರು ಹೋದ ಹಾದಿಯನರಿಯದೆ, ನಾಹಂ ಎಂದು ಅಹಂಕರಿಸಿ, ಅನಿತ್ಯದೇಹಿಗಳಾಗಿ, ಅನಾಮಿಕರಾಗಿಹೋದರು. ಶಾಸ್ತ್ರವನೋದಿದವರೆಲ್ಲ ನಮ್ಮ ಶರಣರು ಹೋದ ಹಾದಿಯನರಿಯದೆ, ಶ್ರವಣ, ಸನ್ಯಾಸಿ, ಯೋಗಿ, ಜೋಗಿಯಾಗಿ ಹೀಗೆ ಕೆಲಬರು ಕೆಟ್ಟರು. ಆಗಮವನೋದಿದವರೆಲ್ಲ ನಮ್ಮ ಶರಣರು ಹೋದ ಹಾದಿಯನರಿಯದೆ, ಕ್ರಿಯಾಪಾದ, ಚರ್ಯಪಾದ, ಜ್ಞಾನಪಾದವೆಂದು ನಾನಾಪರಿಯ ಕರ್ಮಭಕ್ತಿಯ ಮಾಡಿ, ಲಿಂಗ ಜಂಗಮದ ಮರ್ಮವನರಿಯದೆ, ಅಧರ್ಮಿಗಳಾಗಿ ಹೋದರು. ಪುರಾಣವನೋದಿದವರೆಲ್ಲ ನಮ್ಮ ಪುರಾತರು ಹೋದ ಹಾದಿಯನರಿಯದೆ, ಪುರದ ಬೀದಿಯೊಳಗೆ ಮಾತು ಕಥೆಯ ಪಸಾರವನಿಕ್ಕಿ ಮಾಡಿ, ಫಲಪದ ಮುಕ್ತಿಗೆ ಸಲ್ಲದೆ ಹೋದರು. ಇದು ಕಾರಣ, ಈ ಚತುರ್ವಿಧದೊಳಗಾವಂಗವೂ ಅಲ್ಲ . ಎಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನ ಶರಣರ ಪರಿ ಬೇರೆ.
--------------
ಹಡಪದ ಅಪ್ಪಣ್ಣ
ವಾದಿಗೆ ಜೂಜನಾಡುವಾತನೊಬ್ಬ ಪಾತಕ. ಪರರ ಹಾದಿಯ ಹೋಗುವಾತನೊಬ್ಬ ಪಾತಕ. ಪಶುವಧೆಯ ಮಾಡುವಾತನೊಬ್ಬ ಪಾತಕ. ಇವರು ಮೂವರು ಹೋದ ಹಾದಿಯಲ್ಲಿ ಹೋಗಲಾಗದು. ಅದೇನು ಕಾರಣವೆಂದರೆ, ಅವರು ಚಂದ್ರ ಸೂರ್ಯರುಳ್ಳನ್ನಕ್ಕ ನರಕದಲ್ಲಿಪ್ಪುದು ತಪ್ಪದು ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ವಂದನೆಗೆ ನಿಲ್ಲಬೇಡ, ನಿಂದೆಗಂಜಿ ಓಡಲಿಬೇಡ. ಹಿಂದು ಮುಂದು ಆಡಲಿಬೇಡ, ಸಂದೇಹಗೊಳಲಿಬೇಡ. ದ್ವಂದ್ವಬುದ್ಧಿಯ ಕಳೆದು ನಿಂದಿರೆ, ಬಸವಪ್ರಿಯ ಕೂಡಲಚೆನ್ನಬಸವಣ್ಣ .
--------------
ಹಡಪದ ಅಪ್ಪಣ್ಣ
ವಿೂಸಲು ಸೂಸಲಾಗಿ, ದೋಸೆ ಕಡಬು ಹೊಯ್ದು, ಹಬ್ಬವ ಮಾಡಿಹೆನೆಂಬ ಹೇಸಿಗಳ ಮಾತ ಕೇಳಲಾಗದು. ಅದೇಕೆ ಎಂದರೆ, ಲಿಂಗ ಜಂಗಮದ ಭಾಷೆ ಸಲ್ಲದಾಗಿ, ಇನ್ನು ವಿೂಸಲಾವುದೆಂದರೆ, ಭಾಷೆಗೇರಿಸಿದ ತನುವೆ ಅಡ್ಡಣಿಗೆ, ಘನವೆ ಹರಿವಾಣ, ಮನ ವಿೂಸಲೋಗರ, ಈ ಅನುವನರಿದು, ಮಹಾಲಿಂಗಕ್ಕೆ ಅರ್ಪಿತವ ಮಾಡುವನೆ ಸದ್ಭಕ್ತನು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ