ಅಥವಾ
(40) (22) (3) (5) (6) (1) (0) (0) (2) (0) (0) (5) (3) (0) ಅಂ (12) ಅಃ (12) (16) (0) (10) (1) (0) (1) (0) (7) (0) (0) (0) (0) (0) (0) (0) (8) (0) (4) (3) (12) (8) (0) (8) (7) (12) (2) (2) (0) (3) (8) (11) (0) (10) (30) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅವರನಕ ಕೂಳ ಇಡಿದ ಒಡಲಿಗೆ, ಅದೆದು ಕುದಿದು, ಕೋಟಲೆಗೊಂಬುತಿದ್ದರು. ಈ ಹದನನರಿಯದೆ ಕೆಡುತ್ತಿದ್ದೆಯಲ್ಲಾ ಎಂದು ತುದಿ ಹಿಡಿದು, ತೆಗೆದುಕೊಂಡಾತ ಚೆನ್ನಮಲ್ಲೇಶ್ವರನಯ್ಯ. ಆ ಒಡಲಗುಣದ ಕೆಡಿಸುವುದಕ್ಕೆ ಪ್ರಸಾದವೆಂಬ ಮದ್ದನಿಕ್ಕಿ. ಸಲಹಿದಾತ ಚೆನ್ನಮಲ್ಲೇಶ್ವರನಯ್ಯ. ಅಂಗಕ್ಕೆ ಆಚಾರ, ಮನಸ್ಸಿಗೆ ಅರುಹು, ಕಂಗಳಿಗೆ ಲಿಂಗವ ತೋರಿದಾತ ಚೆನ್ನಮಲ್ಲೇಶ್ವರನಯ್ಯ. ಇಂತು ಎನ್ನ ಭವವ ಕೊಂದಿಹೆನೆಂದು ಗುರುಲಿಂಗಜಂಗಮ ಈ ತ್ರಿವಿಧವಾಗಿಯು ಸುಳಿದಾತ ಚೆನ್ನಮಲ್ಲೇಶ್ವರನಯ್ಯ. ಇಂತಪ್ಪ ಚೆನ್ನಮಲ್ಲೇಶ್ವರನ ಶ್ರೀಪಾದವಿಡಿದು ಕೆಟ್ಟು ಬಟ್ಟಬಯಲಾದೆನಯ್ಯ. ಬಸವಪ್ರಿಯ ಚೆನ್ನಮಲ್ಲೇಶ್ವರನ ಪಾದವ ಮುಟ್ಟಿ, ಹುಟ್ಟುಗೆಟ್ಟುಹೋದೆನಯ್ಯ.
--------------
ಹಡಪದ ಅಪ್ಪಣ್ಣ
ಅಂಗದ ಲಯ ಲಿಂಗದೊಳಗೆ, ಲಿಂಗದ ಲಯ ಅಂಗದೊಳಗೆ. ಇವೆರಡರ ಸಂಗಸುಖ ಜಂಗಮದೊಳಗೆ ಏಕವಾಯಿತ್ತು . ಅಂದೆ ಪ್ರಸಾದದಿಂದ ರೂಪಾಯಿತ್ತು. ಮುಂದೆ ಪ್ರಸಾದದಲ್ಲಿ ಪರಿಪೂರ್ಣವಾಯಿತ್ತು. ಇದರಂದವ ಬಲ್ಲ ಶರಣರೆ ಎನ್ನ ತಂದೆಗಳಾಗಿಪ್ಪರು ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಅಂಗದ ಮೇಲೆ ಲಿಂಗವಿದ್ದವರೆಲ್ಲರು ಸರಿಗಾಣಬೇಕೆಂಬರು, ಲಿಂಗಲಾಂಛನಧಾರಿಗಳೆಲ್ಲ, ಶರಣಂಗೆ ಸರಿಯೆ? ಶರಣರ ಸಂಗ ಎಂತಿಪ್ಪುದೆಂದರೆ, ಪರಮಜ್ಞಾನವೆಂಬ ಉರಿಯನೆ ಉಟ್ಟು, ಉರಿಯನೆ ತೊಟ್ಟು, ಉರಿಯನೆ ಉಂಡು, ಉರಿಯನೆ ಹಾಸಿ, ಉರಿಯನೆ ಹೊದ್ದು, ನಿರವಯಲಾದ ಶರಣಂಗೆ ನರರುಗಳು ಸರಿ ಎನ್ನಬಹುದೆ? ಹರಿಗೆ ಕರಿ ಸರಿಯೇ? ಉರಗಗೆ ಒಳ್ಳೆ ಸರಿಯೇ? ಮರುಗಕ್ಕೆ ಗರುಗ ಸರಿಯೇ? ಇಂತೀ ನಿರ್ವಯಲಾದ ಶರಣಂಗೆ ಮರ್ತ್ಯದ ನರಗುರಿಗಳು ಸರಿ ಎಂದರೆ, ನಾಯಕ ನರಕದಲ್ಲಿಕ್ಕುವ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಅಂಗಕ್ಕೆ ಲಿಂಗಕ್ಕೆ ಪೊಂಗೆ ಪರಿಮಳದ ಶೃಂಗಾರದ ಹಾರ. ಕಂಗಳ ಬೆಳಗಿನಲ್ಲಿ ಮಂಗಳದ ಮಹಾಬೆಳಗಿರುತಿರಲು, ಇದ ಅಂಗವಿಸಿ ನೋಡಿ, ಎರಡರ ಸಂಗಸುಖವನೊಂದುಗೂಡಿ, ತಾನೇ ಬೇರೆ ಲಿಂಗವಾಗಿ ನಿಂದು, ಅಂಗವಳಿಯದೆ, ಬಿಂದು ತುಳುಕದೆ, ನಂದಿ ಮುಂದುಗೆಡದ ಮುನ್ನ, ನಿಮ್ಮೊಳು ಒಂದಾದ ಲಿಂಗೈಕ್ಯವನರಿದು, ಕಣ್ದೆರೆದು ಕರಗಿ ಆಲಿ ನೀರಾದಂತಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅಯ್ಯಾ, ಎನ್ನ ಬಾಳುವೆಯಲ್ಲಿ ಹೇಳದೆ ಕೇಳದೆ, ಒಬ್ಬ ಕಾಳರಕ್ಕಸಿ ನುಂಗಿದಳಯ್ಯ. ಆ ಬಾಳುವೆಗೋಸುಗ ಕಾಳರಕ್ಕಸಿಯ ಬಾಯೊಳಗೆ ಸಿಲ್ಕಿದೆನಯ್ಯಾ. ಆ ಕಾಳರಕ್ಕಸಿ ಆವಾಗ ಅಗಿದಾಳೆಂದರಿಯೆ, ಆವಾಗ ಉಗಿದಾಳೆಂದರಿಯೆ. ಆ ಕಾಳರಕ್ಕಸಿಯ ಬಾಯಿಂದವೆ ಹೊರಟು ಆ ಬಾಳುವೆಯನಲ್ಲಿಯೆ ಬಿಟ್ಟು, ಆ ಕಾಳರಕ್ಕಸಿಯ ಬಾಯಿಂದಲೆ ಹೊರವಂಟು ಆ ಮಹಾಜಾಣನಾಳುವ ಪುರವ ಹೊಕ್ಕೆ. ಆ ಜಾಣನಾಳುವ ಪುರದೊಳಗೆ, ಕಾಣಬಾರದುದನೆ ಕಂಡೆ, ಕೇಳಬಾರದುದುನೆ ಕೇಳಿದೆ. ಕದಳಿಯನೆ ದಾಂಟಿದೆ, ಜ್ಞಾನಜ್ಯೋತಿಯ ಕಂಡೆ. ತಾನು ತಾನಾಗಿಪ್ಪ ಮಹಾಬೆಳಗಿನೊಳು ನಾನು ಓಲಾಡುತ್ತಿಪ್ಪೆನಯ್ಯ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ,
--------------
ಹಡಪದ ಅಪ್ಪಣ್ಣ
ಅತ್ತಿಗೆ ಸತ್ತಳು, ನಾದಿನಿ ಮೊರೆಯಲಿಲ್ಲ. ಅತ್ತೆಯ ಕಣ್ಣು ಅರಯಿತ್ತು, ಮಾವನ ಕಾಲು ಮುರಿಯಿತ್ತು. ಭಾವನ ಸಂದುಸಂದುವೆಲ್ಲ ಮುರಿದವು, ಮೈದುನನ ಮೈಯೆಲ್ಲ ಉರಿಯಿತ್ತು. ಹಿತ್ತಿಲಗೋಡೆ, ಪಶ್ಚಿಮದ ಬಾಗಿಲು ಬಯಲಾಯಿತ್ತು. ಇದ ನೋಡಿ ಕೂಡಿ, ನಾ ನಿಶ್ಚಿಂತ ಲಿಂಗೈಕ್ಯನಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅಂಗ ಲಿಂಗವಾಯಿತ್ತೆಂಬಿರಿ, ಲಿಂಗ ಅಂಗವಾಯಿತ್ತೆಂಬಿರಿ. ಅಂಗ ಲಿಂಗ ಸಂಬಂಧ ಎಲ್ಲರಿಗೆ ಎಂತಾಯಿತ್ತು ಹೇಳಿರಣ್ಣಾ. ಅಂಗ ಲಿಂಗ ಸಂಬಂಧವಾದರೆ, ಗುರುವಿನಲ್ಲಿ ಗುಡ್ಡನಾಗಿರಬೇಕು, ಲಿಂಗದಲ್ಲಿ ನಿಷ*ನಾಗಿರಬೇಕು, ಜಂಗಮದಲ್ಲಿ ಅವಧಾನಿಯಾಗಿರಬೇಕು. ಇವ ಮೂರರಲ್ಲಿ ದೂರಾಗಿಪ್ಪರ ಎನಗೊಮ್ಮೆ ತೋರದಿರಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅವಿರಳ ಲಿಂಗವ ಕಂಡಿಹೆನೆಂದು ಅವರಿವರಲ್ಲಿನ್ನೇನ ಕೇಳುವಿರಿ? ಭವವಿರಹಿತ ಗುರುಲಿಂಗಜಂಗಮದೊಳು ತಾವೆ ಬೆರೆಯೆ, ತಲ್ಲೀಯವಾಗಿಪ್ಪಲ್ಲಿಗೆ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅಯ್ಯಾ ಹಾಳೂರೊಳಗೊಂದು ಹಗವ ಕಂಡೆನಯ್ಯಾ. ಹಗದ ಮೇಲೊಂದು ಬಾವಿ ಹುಟ್ಟಿತ್ತು. ಹಗದ ಬಾವಿಯ ನಡುವೆ ವಡಬಾಗ್ನಿಯೆಂಬ ಕಿಚ್ಚು ಹುಟ್ಟಿತ್ತು. ಆ ಹಗದ ಧಾನ್ಯವ ತೆಗೆತೆಗೆದು, ಬಾವಿಯ ನೀರ ಮೊಗೆಮೊಗೆದು, ವಡಬಾಗ್ನಿಯೆಂಬ ಕಿಚ್ಚಿನೊಳಗೆ ಅಡಿಗೆಯ ಮಾಡಿಕೊಂಡು, ಉಂಡು ಉಟ್ಟಾಡಬಂದರು, ಹಲಬರು ಕೆಲಬರು. ಉಂಡುಟ್ಟಾಡಿ ಗಂಡು ಗೆಲವುದ ಕಂಡು ತಾಳಲಾರದೆ, ಕುಂಡಲಿ ಅಗ್ನಿಯ ಎಬ್ಬಿಸಿ ಉರುಹಿದಡೆ, ಇವರೆಲ್ಲರೂ ದಹನವಾದರು. ಆ ಹಗವು ಬೆಂದಿತ್ತು, ಬಾವಿಯು ಬತ್ತಿತ್ತು, ವಡಬಾಗ್ನಿಯೆಂಬ ಕಿಚ್ಚು ಕೆಟ್ಟಿತ್ತು. ಇದಕಂಡು ನಾ ನಿಮ್ಮೊಳಚ್ಚೊತ್ತಿದಂತಿರ್ದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅಯ್ಯಾ ನಿಮ್ಮ ಶರಣರು ವೇಷವ ತೋರಿ ಗ್ರಾಸವ ಬೇಡುವರಲ್ಲ. ದೇಶವ ತಿರುಗಿ ಕಲಿತಮಾತ ನುಡಿವರಲ್ಲ. ಲೇಸಾಗಿ ನುಡಿವರು, ಆಶೆ ಇಲ್ಲದೆ ನಡೆವರು, ರೋಷವಿಲ್ಲದೆ ನುಡಿವರು. ಹರುಷವಿಲ್ಲದೆ ಕೇಳುವರು, ವಿರಸವಿಲ್ಲದೆ ಮುಟ್ಟುವರು. ಸರಸವಿದ್ದಲ್ಲಿಯೇ ವಾಸಿಸುವರು. ಇಂತಪ್ಪ ಬೆರಸಿ ಬೇರಿಲ್ಲದ ನಿಜೈಕ್ಯಂಗೆ ನಮೋ ನಮೋ ಎಂಬೆ, ಬಸವಪ್ರಿಯ ಕೂಡಲಚೆನ್ನಬಸವಣ್ಣ. ಇಂತಪ್ಪ ಶರಣರ ನೆಲೆಯ ನಾನೆತ್ತ ಬಲ್ಲೆನಯ್ಯಾ ?
--------------
ಹಡಪದ ಅಪ್ಪಣ್ಣ
ಅಯ್ಯಾ ಏನು ಏನೂ ಇಲ್ಲದಂದು, ಧರೆ ಬ್ರಹ್ಮಾಂಡಗಳು ಇಲ್ಲದಂದು, ಸಚರಾಚರ ರಚನೆಗೆ ಬಾರದಂದು ಅಂದು ನೀವಿಪ್ಪ ಭೇದವ ಎನಗೆ ತೋರಿದರಾಗಿ. ಅದು ಹೇಗೆಂದರೆ :ನಾನು ಪುಷ್ಪದ ಹಾಗೆ, ನೀವು ಪರಿಮಳದ ಹಾಗೆ, ನಾನಾಲಿಯ ಹಾಗೆ, ನೀವು ನೋಟದ ಹಾಗೆ, ನಾ ಬ್ರಹ್ಮಾಂಡದ ಹಾಗೆ, ನೀವು ಬಯಲಿನ ಹಾಗೆ, ಒಳಹೊರಗೆ ಪರಿಪೂರ್ಣವಾಗಿಪ್ಪಿರಿಯಾಗಿ, ಆ ಭೇದವನು ಎನಗೆ ನೀವೆ ಅರುಹಿದಿರಾಗಿ. ಉರಿ ಕರ್ಪುರದ ಸಂಯೋಗದಂತೆ ಎರಡೂ ಒಂದೆ ಎಂಬ ಭೇದವ ಎನ್ನ ಗುರು ತಂದೆ ನೀವು ತೋರಿದಿರಲ್ಲ. ಚೆನ್ನಮಲ್ಲೇಶ್ವರ ಬಸವಪ್ರಿಯ ಕೂಡಲಚೆನ್ನಬಸವಣ್ಣಾ, ನೀವೆನ್ನ ಪರಮಾರಾಧ್ಯರಾದ ಕಾರಣ.
--------------
ಹಡಪದ ಅಪ್ಪಣ್ಣ
ಅಯ್ಯಾ ಧರೆಯ ಮೇಲೆ ಹುಟ್ಟಿದವರೆಲ್ಲ ವಾಕ್ಕುಜಾಲವ ಕಲಿತುಕೊಂಡು, ಅನುಭಾವವ ಬಲ್ಲವೆಂದು ನುಡಿವರು. ಅನುಭಾವವೆಂತಿಪ್ಪುದೆಂದರಿಯರು. ತೂರ್ಯಾತೂರ್ಯ ನುಡಿಯ ಪರಾತ್ಪರದ ನುಡಿ ಎಂದು ಹರಶರಣರ ವಾಕ್ಯವ ಕಲಿತುಕೊಂಡು ನುಡಿದಾಡುವರು. ತೂರ್ಯಾತೂರ್ಯವೆಂಬುದು ನಾಮರೂಪಿಗುಂಟೆ ? ಪರಾತ್ಪರವೆಂಬ ವಾಕ್ಯ ಮನಸಿಂಗುಂಟೆ ? ಹೆಸರಿಗೆ ಬಾರದ ಘನವೆಂದು ನೀವೆ ಹೇಳುತಿರ್ದು ಮತ್ತೆ ಹೆಸರಿಗೆ ತಂದು ನುಡಿದಾಡುವರು. ಇದು ಹುಸಿಯೋ, ದಿಟವೊ ? ಇದು ಹಸುಮಕ್ಕಳಾಟ. ಸಸಿನೆ ನೆನೆದು ಬದುಕಿದೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅನ್ನ ಉದಕವ ಕೊಂಡೆಹೆನೆಂದಡೆ ಭೂಮಿಯ ಹಂಗು, ಹೊನ್ನ ಹಿಡಿದೆಹೆನೆಂದಡೆ ಲಕ್ಷ್ಮಿಯ ಹಂಗು. ಹೆಣ್ಣ ಹಿಡಿದೆಹೆನೆಂದಡೆ ಕಾಮನ ಹಂಗು. ಹಾಲ ಕೊಂಡೆಹೆನೆಂದಡೆ ಹಸುವಿನ ಹಂಗು. ಹೂಫಲಾದಿಗಳ ಕೊಂಡೆಹೆನೆಂದಡೆ ತರುಮರದ ಹಂಗು. ತರಗೆಲೆಯ ಕೊಂಡೆಹೆನೆಂದಡೆ ವಾಯುವಿನ ಹಂಗು. ಬಯಲಾಪೇಕ್ಷೆಯ ಕೊಂಡೆಹೆನೆಂದಡೆ ಆಕಾಶದ ಹಂಗು. ಇದನರಿದು, ಇವೆಲ್ಲವನು ಕಳೆದು, ವಿಶ್ವಬ್ರಹ್ಮಾಂಡಕ್ಕೆ ನಡೆನುಡಿ ಚೈತನ್ಯವಾದ ಜಂಗಮಲಿಂಗದ ಪಾದವಿಡಿದು, ಅವರು ಬಿಟ್ಟ ಪ್ರಸಾದವ, ಉಟ್ಟ ಮೈಲಿಗೆಯ, ಉಗುಳ ತಾಂಬೂಲವ, ಈ ತ್ರಿವಿಧವ ಕೊಂಡೆನ್ನ ಭವಂ ನಾಸ್ತಿಯಾಯಿತ್ತು. ಮತ್ರ್ಯಲೋಕದ ಮಹಾಗಣಂಗಳು ಸಾಕ್ಷಿಯಾಗಿ, ದೇವಲೋಕದ ದೇವಗಣಂಗಳು ಸಾಕ್ಷಿಯಾಗಿ, ನಾ ನಿಜಮುಕ್ತನಾದೆನಯ್ಯಾ, ನೀವು ಸಾಕ್ಷಿಯಾಗಿ, ಬಸವಪ್ರಿಯ ಕೂಡಲಚೆನ್ನ ಸಂಗನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅಯ್ಯಾ, ಹುಟ್ಟಿದ ಮನುಜರೆಲ್ಲ ಹೊಟ್ಟೆ ಹೊಟ್ಟೆ ಎಂದು ಹೊಟ್ಟೆಗೆ ಹಸಿದು, ಹೊಟ್ಟೆಗೆ ಕುದಿದು, ಹೊಟ್ಟೆಗೆ ಹೊರೆದು, ಹೊಟ್ಟೆಗೆ ತುಂಬಿ, ತಾವು ಬಂದ ಬಟ್ಟೆಯನೆ ಅರಿಯದೆ ಕೆಟ್ಟಿತ್ತು ಜಗವೆಲ್ಲ. ಅದಂತಿರಲಿ. ಇನ್ನು ಆ ಶರಣರ ಮತವೆಂತೆಂದರೆ, ಹೊಟ್ಟೆ ಎಂಬುದನೆ ಮೆಟ್ಟಿಟ್ಟು ತೂರಿ, ಅಲ್ಲಿದ್ದ ಗಟ್ಟಿಯಾಗಿರ್ದ ಪ್ರಸಾದವನೆ ಊಟವೆಂದು ಹಿಡಿದು, ಮುಟ್ಟ ನಿಮ್ಮೊಳೊಡವೆರೆದು, ಬಟ್ಟಬಯಲಾದರು ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅನ್ನವನ್ನಿಕ್ಕಿದರೇನು ? ಹೊನ್ನ ಕೊಟ್ಟರೇನು ? ಹೆಣ್ಣು ಕೊಟ್ಟರೇನು ? ಮಣ್ಣು ಕೊಟ್ಟರೇನು ? ಪುಣ್ಯ ಉಂಟೆಂಬರು. ಅವರಿಂದಾದೊಡವೆ ಏನು ಅವರೀವುದಕ್ಕೆ ? ಇದಕ್ಕೆ ಪುಣ್ಯವಾವುದು, ಪಾಪವಾವುದು ? ನದಿಯ ಉದಕವ ನದಿಗೆ ಅರ್ಪಿಸಿ, ತನತನಗೆ ಪುಣ್ಯ ಉಂಟೆಂಬ ಬಡಹಾರುವರಂತೆ, ಸದಮಳ ಶಾಶ್ವತ ಮಹಾಘನಲಿಂಗವನರಿಯದೆ, ಇವೇನ ಮಾಡಿದರೂ ಕಡೆಗೆ ನಿಷ್ಪಲವೆಂದಾತ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ