ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಯ್ಯಾ, ಘನಗಂಭೀರವಪ್ಪ ಸಮುದ್ರದೊಳಗೊಂದು ರತ್ನ ಹುಟ್ಟಿದಡೆ, ಆ ಸಮುದ್ರದೊಳಗಡಗಿರ್ಪುದಲ್ಲದೆ ಘನವಾಗಿ ತೋರಬಲ್ಲುದೆ ? ನಿಮ್ಮ ಕರುಣಕಟಾಕ್ಷದಿಂದುದಯಿಸಿ, ಅನಂತ ಪುರಾಣವೆಲ್ಲವು ನಿಮ್ಮ ಕೃಪೆಯಿಂದ ಸಾಧ್ಯವಾಯಿತ್ತೆನಗೆ. ಆದಿಯನಾದಿ ಇಲ್ಲದಂದು ನೀನೊಬ್ಬನೆ ಪ್ರಸಾದಿ. ಉಮೆಯ ಕಲ್ಯಾಣವಿಲ್ಲದಂದು ನೀನೊಬ್ಬನೆ ಪ್ರಸಾದಿ. ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ ಬಸವಣ್ಣಾ, ನಿಮ್ಮ ತೊತ್ತಿನ ತೊತ್ತಿನ ಮರುದೊತ್ತಿನ ಮಗ ನಾನಯ್ಯಾ.
--------------
ಚನ್ನಬಸವಣ್ಣ
ಅಂಗದ ಮೇಲೆ ಲಿಂಗವಿಲ್ಲದನ್ನಕ್ಕರ, ಪ್ರಾಣದಲ್ಲಿ ಲಿಂಗಪರಿಣಾಮವನೆಯ್ದುವ ಪರಿಯೆಂತಯ್ಯಾ ? ಅಂಗತ್ರಯವುಳ್ಳವರು ಲಿಂಗತ್ರಯಸಂಪನ್ನರಾಗಬೇಕು, ಒಂದಂಗ ವಿರಹಿತರಾಗಿಪ್ಪವರುಂಟೆ ? ಕಂಗಳ ನೋಟಕ್ಕೆ ಇಂಬಾವುದು ಹೇಳಾ ಒಂದಂಗ ಬಿಟ್ಟು ಒಂದಂಗ ತೋರದಾಗಿ. ಸಂದುಭೇದವಿಲ್ಲದಿಪ್ಪ ಮಡಿವಾಳನ ನಿಲವು ಕೂಡಲಚೆನ್ನಸಂಗಯ್ಯನಲ್ಲಿ ನಿನಗೆಂತು ಸಾಧ್ಯವಾಯಿತ್ತು ಹೇಳಾ ಸಿದ್ಧರಾಮಯ್ಯ ?
--------------
ಚನ್ನಬಸವಣ್ಣ
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಲಾಗದು, ಮಾಡಿದರು ಮಾಡಿರಿ ಬೇಡಿ ಮಾಡಲಾಗದು. ಬೇಡಿ ಮಾಡಿದ ಭಕ್ತಿ ಈಡಾಗಲರಿಯದು ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಅಂಗಲಿಂಗಸಂಗವು ಲಿಂಗದಲ್ಲಿ ಆಯತವಯ್ಯಾ. ನಿಮಿಷ ಕರಸ್ಥಲವನಗಲಿದಡೆ ಭಂಗವಯ್ಯಾ. ಕಂಗಳೆ ಕರುವಾಗಿ, ಲಿಂಗವೆ ಗೂಡಾಗಿ, ಲಿಂಗನಿಷ್ಪತ್ತಿಯಲಿಪ್ಪ ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ಅಂಗದ ಮೇಲೆ ಲಿಂಗಸಾಹಿತ್ಯವನುಳ್ಳ ನಿಜವೀರಶೈವ ಸಂಪನ್ನರು ತಮ್ಮ ಸ್ವಯಾಂಗಲಿಂಗವನರ್ಚಿಸುವಲ್ಲಿ ಭವಿಶೈವ ಭಿನ್ನ ಕರ್ಮಿಗಳಂತೆ ಅಂಗನ್ಯಾಸ ಪಂಚಮಶುದ್ಧಿ ಮೊದಲಾದ ಅಶುದ್ಧಭಾವವಪ್ಪ ಕ್ಷುದ್ರ ಕರ್ಮಂಗಳ ಹೊದ್ದಲಾಗದು. ಅದೆಂತೆಂದೊಡೆ:``ನಕಾರಮಾತ್ಮಶುದ್ಧಿಶ್ಚ ಮಕಾರಂ ಸ್ನಾನಶೋಧನಂ ಶಿಕಾರಂ ಲಿಂಗಶುದ್ಧಿಶ್ಚ ವಾಕಾರಂ ದ್ರವ್ಯಶೋಧನಂ ಯಕಾರಂ ಮಂತ್ರಶುದ್ಧಿಶ್ಚ ಪಂಚಶುದ್ಧಿಃ ಪ್ರಕೀರ್ತಿತಾಃ ಕಾಯಶುದ್ಧಿಶ್ಚಾತ್ಮಶುದ್ಧಿಶ್ಚಾಂಗನ್ಯಾಸಕರಸ್ಯ ಚ ಸರ್ವಶುದ್ಧಿರ್ಭವೇ ನಿತ್ಯಂ ಲಿಂಗಧಾರಣಮೇವ ಚ'_ ಇಂತೆಂದುದಾಗಿ. ಅವಲ್ಲದೆ ಅಘ್ರ್ಯ ಪಾದ್ಯ ಆಚಮನಂಗಳು ಮೊದಲಾದ ಉಪಪಾತ್ರಗ?ಲ್ಲಿ ಅಗಣಿತಂಗೆ ಅಳತೆಯ ನೀರನೆರೆದು ಸುಖಮುಖಾರ್ಪಿತಕ್ಕೆ ಸಲುವ ಸುರಸದ್ರವ್ಯಂಗಳಪ್ಪ ಪಂಚಾಮೃತಂಗಳ ನಿರ್ಮಲನಪ್ಪ ನಿಜಲಿಂಗದ ಮಸ್ತಕಕ್ಕೆರೆದು ಜಿಡ್ಡು ಮಾಡಿ ತೊಳೆವ ಅಜ್ಞಾನಿ ನರಕಜೀವಿಗಳ ಮುಖವ ನೋಡಲಾಗದು. ಅದೇನುಕಾರಣವೆಂದಡೆ: ``ಅಘ್ರ್ಯಂ ಪಾದ್ಯಂ ತಥಾಚಮ್ಯಂ ಸ್ನಾನಂ ಪಂಚಾಮೃತಂ ಯದಿ ಲಿಂಗದೇಹೀ ಸ್ವಲಿಂಗೇಷು ಕೃತ್ವಾಚ್ರ್ಯಂತೇ ಬಹಿರ್ನರಾಃ ತೇ ಪಾಷಂಡಾಃ ಕೃತಾಸ್ತೇನ ಕೃತಂಕರ್ಮನರಂ ನಾರಕಂ ಇಂತೆಂದುದಾಗಿ. ಇದು ಕಾರಣ ಸ್ವಯಾಂಗಲಿಂಗದೇಹಿಗಳು ತಮ್ಮ ಲಿಂಗಮಂತ್ರವಿಡಿದು ಬಂದು ಲಿಂಗೋದಕ ಪಾದೋದಕಂಗಳಲ್ಲಿ ತಮ್ಮ ಕರ ಮುಖ ಪದ ಪ್ರಕ್ಷಾಲನವ ಮಾಡಿಕೊಂಬುದೆ ? ಅಂಗಲಿಂಗಿಗಳಿಗೆ ಸ್ವರ್ಯಾಘ್ರ್ಯ ಪಾದ್ಯಾಚಮನವೆಂಬುದನರಿಯದೆ ಕೃತಕರ್ಮ ಭವಿಜೀವಿ ಶೈವಪಾಷಂಡರಂತೆ ಭಿನ್ನವಿಟ್ಟು ಮಾಡಿ ಫಲಪದಂಗಳನೈದಿಹೆನೆಂಬ ನರಕಜೀವಿಗಳನು ಕೂಡಲಚೆನ್ನಸಂಗಯ್ಯ ರವಿ ಸೋಮರುಳ್ಳನ್ನಕ್ಕ ನಾಯಕ ನರಕದಲ್ಲಿಕ್ಕುವ.
--------------
ಚನ್ನಬಸವಣ್ಣ
ಅನಂತ ವರುಷದವರ ಹಿರಿಯರೆಂಬೆನೆ ? ಎನ್ನೆನು_ ಅವರು ಭೂಭಾರಕರಾಗಿ. ಏಳು ವರುಷದ ಹಿರಿಯ ಚೀಲಾಳ; ಹನ್ನೆರಡು ವರುಷದ ಹಿರಿಯಳು ಮಹಾದೇವಿಯಕ್ಕ. ಅಂಡಜ ಪಿಂಡಜ ಮೀನಜರೆಂಬವರೆಲ್ಲಾ ಅಂದಂದಿನ ಬಾಲಕರು. ನಿಮಗೆ ಬುದ್ಧಿಯ ಹೇಳುವಡೆ ಎನಗೆ ಬುದ್ಧಿಯಿಲ್ಲ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅಕಾಯನೆಂಬ ಜಂಗಮ ಮತ್ರ್ಯಕ್ಕೆ ಬಂದು, ಎನ್ನ ಧನ್ಯನ ಮಾಡಲೆಂದು, ಸಕಲ ಧಾನ್ಯಗಳ ಪೂರ್ವಾಶ್ರಯವ ಕಳೆದು ಪ್ರಸಾದವೆಂದು ಹೆಸರಿಟ್ಟನು. ಆ ಜಂಗಮದ ಹಸ್ತದಲ್ಲಿ ಭಕ್ತಿ ಇಹುದು, ಆ ಜಂಗಮದ ಜಿಹ್ವೆಯಲ್ಲಿ ಪ್ರಸಾದ ಇಹುದು, ಆ ಜಂಗಮದ ದೇಹದಲ್ಲಿ ಜಂಗಮ ಇಹುದು. ಇಂತೀ ತ್ರಿವಿಧಪ್ರಸಾದವನಿಕ್ಕಿದ ಜಂಗಮಕ್ಕೆ ಶರಣೆಂದು ಶುದ್ಧನಾದೆನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅಂಗ ಲಿಂಗಕ್ಕೆ ಭಾಜನರೆಂಬರು, ಅಂಗ ಲಿಂಗಕ್ಕೆ ಭಾಜನವಲ್ಲ. ಕಾಯಗುಣಂಗಳ ಕಳೆದುಳಿದು ಮಾಯಾಮಲವ ಹಿಂಗಿಸಿ, ಮನವೆಂಬ ಘನಪರಿಯಾಣವ ಬೆಳಗಿ, ಸಕಲ ಇಂದ್ರಿಯಗಳೆಂಬ ಕೆಲವಟ್ಟಲವ£ಳವಡಿಸಿ, ಜ್ಞಾನಪ್ರಕಾಶವೆಂಬ ದೀಪಸ್ತಂಭ ಬೆಳಗಿ, ಷಡಾಧಾರಚಕ್ರವೆಂಬ ಅಡ್ಡಣಿಗೆಯನಿಟ್ಟು, ಸಕಲಕಾರಣಂಗಳೆಂಬ ಮೇಲುಸಾಧನಂಗ? ಹಿಡಿದು, ಸದ್ಭಕ್ತ್ಯಾನಂದವೆಂಬ ಬೋನವ ಬಡಿಸಿ, ವಿನಯ ವಿವೇಕವೆಂಬ ಅಭಿಘಾರವ ಗಡಣಿಸಿ ಪ್ರಸನ್ನ ಪರಿಣಾಮದ ಮಹಾರುಚಿಯೆಂಬ ಚಿಲುಪಾಲಘಟ್ಟಿಯ ತಂದಿಳುಹಿ, ಸುಚಿತ್ತ ಸುಯಿಧಾನದಿಂದ, ನಿಮ್ಮ ಹಸ್ತದ ಅವಧಾನವೆ ಅನುವಾಗಿ, ಬಸವಣ್ಣನೆ ಬೋನ ನಾನೆ ಪದಾರ್ಥವಾಗಿ ನಿಮ್ಮ ಪರಿಯಾಣಕ್ಕೆ ನಿವೇದಿಸಿದೆನು. ಆರೋಗಣೆಯ ಮಾಡಯ್ಯಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅರ್ಥದ ಭಕ್ತಿ ಉತ್ತರಿಸಿ ಹೋಯಿತ್ತು, ಅರಸು ಭಕ್ತಿ `ನಿಲ್ಲು, ಮಾಣು' ಎಂದಲ್ಲಿ ಹೋಯಿತ್ತು, ಆಚರಣೆಯ ಭಕ್ತಿ ಅಡಗಿ ಹೋಯಿತ್ತು, ಕೂಡಲಚೆನ್ನಸಂಗಮದೇವರಲ್ಲಿ ಕೀಟಕರು ಹೆಚ್ಚಿ, ಪುರಾತರು ಅಡಗಿಹೋದರು
--------------
ಚನ್ನಬಸವಣ್ಣ
ಅಂಗಭೋಗವನೆ ಕುಂದಿಸಿ ಪ್ರಸಾದವನು ರುಚಿಸುವೆವೆಂಬ ಲಿಂಗವಂತರೆಲ್ಲ ಅರಿವುಗೇಡಿಗಳಾಗಿ ಹೋದರು. ಅಂಗಭೋಗವೆ ಲಿಂಗಭೋಗ, ಅಂಗಭೋಗವು [ಲಿಂಗಕ್ಕೆ] ಅರ್ಪಿತವಾಗಿ. ಸ್ವಕೀಯ ಪಾಕಸಂಬಂಧಭೋಗೋ ಜಂಗಮವರ್ಜಿತಃ ನಾಸ್ತಿ ಲಿಂಗಾರ್ಚನಂ ಚೈವ ಪ್ರಸಾದೋ ನಿಷ್ಫಲೋ ಭವೇತ್ ಅಂಗಕ್ಕೆ ಬಂದ ರುಚಿ, ಲಿಂಗಕ್ಕೆ ಬಾರದೆ ? ಇದು ಕಾರಣ_ಕೂಡಲಚೆನ್ನಸಂಗಯ್ಯಾ ಪಾಕಸಂಬಂಧಿಗೆ ಪ್ರಸಾದ ದೂರ.
--------------
ಚನ್ನಬಸವಣ್ಣ
ಅಳಲದೆ ಸೈರಣೆ, ಬಳಲದೆ ಸಮತೆ, ಸೂರೆಯೆ ಸೂರೆಯೆ ? ಲಿಂಗಾರಾಧನೆ ಜಂಗಮಾರಾಧನೆ ಸೂರೆಯೆ ಸೂರೆಯೆ ? ಕೂಡಲಚೆನ್ನಸಂಗನ ಭಕ್ತಿ ಸೂರೆಯೆ ಸೂರೆಯೆ ?
--------------
ಚನ್ನಬಸವಣ್ಣ
ಅಂಗದ ಮೇಲೆ ಆಚಾರಲಿಂಗಸ್ವಾಯತವಾಯಿತ್ತು; ಪ್ರಾಣದ ಮೇಲೆ ಜಂಗಮಲಿಂಗಸ್ವಾಯತವಾಯಿತ್ತು; ಆತ್ಮನ ಮೇಲೆ ಸಮ್ಯಗ್‍ಜ್ಞಾನಲಿಂಗ ಸ್ವಾಯತವಾಯಿತ್ತು. ಇಂತೀ ತ್ರಿವಿಧಕ್ಕೆ ತ್ರಿವಿಧ ಸ್ವಾಯತವಾಗಿಪ್ಪ ನಮ್ಮ ಕೂಡಲಚೆನ್ನಸಂಗನ ಶರಣ ಬಸವಣ್ಣಂಗೆ ನಮೋ ನಮೋ ಎನುತಿರ್ದೆನು.
--------------
ಚನ್ನಬಸವಣ್ಣ
ಅಂಗಲಿಂಗ ಸಂಬಂಧವನುಳ್ಳ ನಿಜವೀರಶೈವ ದೀಕ್ಷೆಯನು ಗುರು ತನ್ನ ಶಿಷ್ಯಂಗೆ ಉಪದೇಶಿಸಿ ಮತ್ತೆ ಆ ಲಿಂಗದಲ್ಲಿ ಮಾಡುವ ಜಪ ಧ್ಯಾನ ಅರ್ಚನೆ ಉಪಚರಿಯ ಅರ್ಪಿತ ಪ್ರಸಾದಭೋಗವಾದಿಯಾದ ವೀರಶೈವರ ಸಾವಧಾನ ಸತ್ಕಿೃಯಾಚಾರಂಗಳ ಹೊಲಬನರಿಯದೆ ಭವಿಶೈವ ಭಿನ್ನಕರ್ಮಿಗಳಂತೆ ಆಂಗನ್ಯಾಸ ಕರನ್ಯಾಸ ಪಂಚಮಶುದ್ಧಿ ಪಂಚಾಮೃತಾಭಿಷೇಕ ಶ್ರೀರುದ್ರ ಪಂಚಬ್ರಹ್ಮಸ್ಥಲಾದಿ ಶೈವಪಂಚಪಂಚಾಕ್ಷರ ಭೂತಾದಿ ದೇವತಾದಿ ಗಣಿಕಾಜನನಿಕರ ಗಣನಾಕೃತ ಪರಿಪೂರಿತ ಅಕ್ಷಮಣಿ ಭವಮಾಲಿಕಾ ಜಪೋಪಚರಿಯಂಗಳಾದಿಯಾದ ಶೈವ ಪಾಷಂಡಕೃತ ಕರ್ಮಮಯವಪ್ಪ ಭವಿಮಾಟಕೂಟಂಗ?ನುಪದೇಶಿಸಿ ಭವಹರನಪ್ಪ ಘನವೀರಶೈವಲಿಂಗದಲ್ಲಿ ಮಾಡಿ ಕೂಡಿ ನಡೆಸಿಹನೆಂಬ ಕಡುಸ್ವಾಮಿದ್ರೋಹಿಗೆ ಆ ನಿಜದೀಕ್ಷೆಗೆಟ್ಟು ಗುರುಶಿಷ್ಯರಿರ್ವರು ನರಕಭಾಜನರಪ್ಪುದು ತಪ್ಪುದು ಅದೆಂತೆಂದೊಡೆ ``ನಾಮಧಾರಕಶಿಷ್ಯಾನಾಂ ನಾಮಧಾರೀ ಗುರುಸ್ತಥಾ ಅಂಧಕೋ[s]ಂಧಕರಾಬದ್ಧೋ ದ್ವಿವಿಧಂ ಪಾತಕಂ ಭವೇತ್' ಎಂದುದಾಗಿ ಇದು ಕಾರಣ ಗುರುಚರಪರಕರ್ತೃವಹ ಅರುಹು ಆಚಾರ ಶರಣಸದ್ಭಾವಸಂಪದವನುಳ್ಳು ಘನಗುರುರೂಪರಪ್ಪ ಪರಮಾರಾಧ್ಯರಲ್ಲಿ ಶರಣುವೊಕ್ಕು ಅಜಡಮತಿಗಳಪ್ಪ ಗುರುಶಿಷ್ಯರಿಬ್ಬರು ತಮ್ಮ ಹೊದ್ದಿದ ಅಬದ್ಧವಪ್ಪ ಭವಿಮಾಟಕೂಟಂಗಳ ಪರಿಹರಿಸಿಕೊಂಡು ನಿಜವಿಡಿದು ನಡೆದು ಕೃತಾರ್ಥರಾಗಲರಿಯದೆ ಅಜ್ಞಾನದಿಂದಲಹಂಕರಿಸಿ ಗುರುವಿಡಿದು ಬಂದುದ ಬಿಡಬಾರದೆಂದು ಕಡುಮೂರ್ಖತನದಿಂ ಗುರುವಚನವನುಲ್ಲಂಘಿಸಿ ಶರಣ ಸತ್ಕ್ರಿಯಾಚಾರಂಗಳನು ಕಡೆಮೆಟ್ಟಿಸಲವ ತನ್ನ ಕರಸ್ಥಲದ ನಿಜವೀರಶೈವಲಿಂಗದಲ್ಲಿ ಸಲ್ಲದ ಭವಿಶೈವ ಮಾಟಕೂಟಂಗ? ಮಾಡಿಕೊಂಡು ನಡೆವ ನರಕಜೀವಿಗಳು ಗುರುಮಾರ್ಗಕ್ಕೆ ಹೊರಗು. ಅವರು ಕೊಂಬುದು ಸುರೆ ಮಾಂಸವಲ್ಲದೆ ಅವರ್ಗೆ ಪ್ರಸಾದವಿಲ್ಲ. ಇದು ಕಾರಣ ಈ ಉಭಯರನ್ನು ಕೂಡಲಚೆನ್ನಸಂಗಯ್ಯ ಸೂರ್ಯಚಂದ್ರರುಳ್ಳನ್ನಕ್ಕ ನಾಯಕನರಕದಲ್ಲಿಕ್ಕುವ.
--------------
ಚನ್ನಬಸವಣ್ಣ
ಅಂಗವಿಲ್ಲೆಂಬಲ್ಲಿಯೆ ಅಂಗಶಂಕೆ ಬಿಡದು, ಲಿಂಗವುಂಟೆಬಲ್ಲಿಯೆ ಲಿಂಗಶಂಕೆ ಬಿಡದು. ಇಲ್ಲೆಂಬುದಕ್ಕೆ ಉಂಟೆಂಬುದೆ ಮರಹು, ಉಂಟೆಂಬುದಕ್ಕೆ ಇಲ್ಲೆಂಬುದೆ ಮರಹು. ಉಂಟಿಲ್ಲೆಂಬುದಳಿದಲ್ಲದೆ ಪ್ರಾಣಲಿಂಗಸಂಬಂಧ ಸ್ವಯವಾಗದು, ಕೂಡಲಚೆನ್ನಸಂಗಯ್ಯನಲ್ಲಿ ಪ್ರಾಣಲಿಂಗಸಂಬಂಧ ನಿನಗೆಲ್ಲಿಯದು ಹೇಳಾ ಸಿದ್ಧರಾಮಯ್ಯ ?
--------------
ಚನ್ನಬಸವಣ್ಣ
ಅಂಗ ಲಿಂಗವೆಂಬರು, ಲಿಂಗ ಅಂಗವೆಂಬರು, ಅದು ಹುಸಿ ಕಾಣಿರೊ, ಅಯ್ಯಾ ! ಅಂಗವೇ ಲಿಂಗವಾದರೆ ಕಾಯದಲ್ಲಿ ಕಳವಳವುಂಟೆ ? ಲಿಂಗವೆ ಅಂಗವಾದರೆ ಪ್ರಳಯಕ್ಕೊಳಗಹುದೆ ? ಅಂಗ ಲಿಂಗವಲ್ಲ, ಲಿಂಗ ಅಂಗವಲ್ಲ. ಅಂಗ-ಲಿಂಗ ಸಂಬಂಧವಳಿದಲ್ಲಿ ಪ್ರಾಣಲಿಂಗಸಂಬಂಧಿ, ಪ್ರಾಣ ನಿಃಪ್ರಾಣವಾದಲ್ಲಿ ಲಿಂಗರೂಪು, ರೂಪು ನಾಸ್ತಿಯಾದಂದು ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು.
--------------
ಚನ್ನಬಸವಣ್ಣ
ಅಂದೊಮ್ಮೆ ಧರೆಯ ಮೇಲೆ ಬೀಜವಿಲ್ಲದಂದು ಬಸವನೆಂಬ ಗಣೇಶ್ವರನು ಭೋಂಕರಿಸಿ ಕೆಲೆದಡೆ ಬೀಜ ಉತ್ಪತ್ತಿಯಾಯಿತ್ತು. ಅದೆನೆ ಬಿತ್ತಿ ಅದನೆ ಬೆಳೆದು ಅಟ್ಟಟ್ಟು ಲಿಂಗಕ್ಕೆ ಬೋನವ ಮಾಡಿ- ನಾಗಲೋಕದ ನಾಗಗಣಂಗಳಿಗೆಯೂ ಬಸವಣ್ಣನ ಪ್ರಸಾದ, ಮತ್ರ್ಯಲೋಕದ ಮಹಾಗಣಂಗಳಿಗೆಯೂ ಬಸವಣ್ಣನ ಪ್ರಸಾದ, ದೇವಲೋಕದ ದೇವಗಣಂಗಳಿಗೆಯೂ ಬಸವಣ್ಣನ ಪ್ರಸಾದ, ಎಲೆ ಕೂಡಲಚೆನ್ನಸಂಗಮದೇವಾ, ನಿಮ್ಮಾಣೆ, ನಿಮಗೂ ಎನಗೂ ಬಸವಣ್ಣನ ಪ್ರಸಾದ !
--------------
ಚನ್ನಬಸವಣ್ಣ
ಅಷ್ಟವಿಧಾರ್ಚನೆ ಷೋಡಶೋಪಚಾರವಲ್ಲದೆ ಮುಟ್ಟಲರಿಯದವರ ಕಂಡಡೆ ಆನವರನೇನೆಂಬೆನಯ್ಯಾ ? ಆವ ಭಾವದಲ್ಲಿ ಆವ ಮುಖದಲ್ಲಿ ಆವ ಜ್ಞಾನದಲ್ಲಿ ಅವರನು `ಅಯ್ಯಾ' ಎಂಬೆನು ? ನಿಮ್ಮಲ್ಲಿ ಸಮ್ಯಗೈಕ್ಯವಾದ ಸತ್ಯಶರಣನ `ಅಯ್ಯಾ' ಎಂಬೆನು ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಅಸ್ತಿ ಭಾತಿಯೆಂಬ ಎನ್ನ ಸತ್ಯದಲ್ಲಿ, ನಾಮ ರೂಪೆಂಬ ಹುಸಿಯೆಂತು ಜನಿಸಿತೆಂದರಿಯೆನಯ್ಯಾ! ಇಲ್ಲದ ಹೆಸರುಳ್ಳ ಚಿತ್ತಾರದಂತೆ, ದೇಹ ನಾಮವೀತೆರನೆಂದರಿಯದೆ ತೊಳಲಿ ಬಳಲುತ್ತಿದ್ದೆನಯ್ಯಾ, ಕೂಡಲಚೆನ್ನಸಂಗಯ್ಯಾ, ಸಂಸಾರಬಂಧನಯೆನಗಿದೇ ಕಂಡಯ್ಯಾ.
--------------
ಚನ್ನಬಸವಣ್ಣ
ಅಪ್ಪುವನಪ್ಪಿದ ಆಲಿಕಲ್ಲಿನಂತೆ, ವಾಯುವನಪ್ಪಿದ ಪರಿಮಳದಂತೆ, ಲಿಂಗವನಪ್ಪಿದ ಶರಣ. ಆತನ ದೇಹಿಯೆನಬಹುದೆ ? ಅನಲನನಪ್ಪಿದ ಕರ್ಪುರದಂತೆ_ ಈ ತ್ರಿವಿಧ ನಿರ್ಣಯ ಕೂಡಲಚೆನ್ನಸಂಗಾ ನಿಮ್ಮಲ್ಲಿ.
--------------
ಚನ್ನಬಸವಣ್ಣ
ಅತಿಮಥನವೆಂಬ ಶೂನ್ಯಸಿಂಹಾಸನವನೇರಿಕೊಂಡು ನಾವೆ ಹಿರಿಯರು ನಾವೆ ದೇವರೆಂಬರು, ತಮ್ಮ ತಾವರಿಯರು. ಅದ್ಭುತಮನಭುಂಜಕರ ಮೆಚ್ಚ ನಮ್ಮ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಅರ್ಪಿತ ಭುಂಜಕನ, ಪ್ರಸಾದ ಭುಂಜಕನ ಪರಿ ಬೇರೆ, ಅರ್ಪಿತವೆಂದು ಸ್ಥೂಲ ಸೂಕ್ಷ್ಮವೆಂದೆನ್ನದೆ ಘನಕ್ಕೆ ಘನ ಮಹಾಘನ ಕಾಯ ಜೀವವೊಂದಯ್ಯಾ. ಅರ್ಥ ಪ್ರಾಣ ಅಭಿಮಾನ ಸವೆದಡೆ ಸಮಭೋಗರುಚಿಪ್ರಸಾದಿ. ಈ ಉಭಯಲಿಂಗದ ಮಹಿಮೆಯನು ಇನ್ನುಪಮಿಸಬಾರದು. ರೂಹಿಸಿ ಭಾವಿಸಿ ಗುಣಪ್ರಪಂಚವನತಿಗಳೆದು ನಿರ್ವಿಕಲ್ಪಿತನಾದಾತ ಆನೆಂಬ ಶಬ್ದವಳಿದುಳಿದ ಪ್ರಸಾದಗ್ರಾಹಕ ನಿಂದ ನಿಲುವು, ಪರತಂತ್ರ ಪರಿಭಾವ ಪ್ರಪಂಚುವ ಬಿಟ್ಟು ಘನರವಿಲೋಚನನಾಗಿ, ಅರ್ಪಿತ ಭುಂಜಕನಲ್ಲ, ಆದಿವಿಡಿದಾಗಮನಲ್ಲ. ಅರ್ಪಿತ ಅನರ್ಪಿತರಹಿತ ಕೂಡಲಚೆನ್ನಸಂಗನಲ್ಲಿ ಆತ ದಿಟಪ್ರಸಾದಿ.
--------------
ಚನ್ನಬಸವಣ್ಣ
ಅಂಗದ ಮೇಲಣ ಲಿಂಗವೆಲ್ಲಿಯಾದರೂ ಉಂಟು, ಪ್ರಾಣದ ಮೇಲಣ ಲಿಂಗವಪೂರ್ವ. ಅವರನೆ ಅರಸಿ ತೊಳಲಿ ಬಳಲುತ್ತಿದೇನಯ್ಯಾ. ಇದು ಕಾರಣ_ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣರು ಸಕೃತ್ ಕಾಣಲಾರರು.
--------------
ಚನ್ನಬಸವಣ್ಣ
ಅಯ್ಯಾ ನಿಮ್ಮ ನಿಜಾಚರಣೆಯ ನಿಲುಕಡೆಯ ಭವಪಾಶಪ್ರಾಣಿಗಳೆತ್ತ ಬಲ್ಲರಯ್ಯಾ ? ಅದೆಂತೆಂದಡೆ, ಲೋಕದಲ್ಲಿ ದೃಷ್ಟವುಂಟು. ಅಯ್ಯಾ ಕುರಿ ಬಲ್ಲುದೆ ರಸದಾಳಿ ಕಬ್ಬಿನ ಸ್ವಾದವ ? ಶುನಿ ಬಲ್ಲುದೆ ಕಲ್ಪವೃಕ್ಷವ ? ದಂಷ್ಟ್ರಿ ಬಲ್ಲುದೆ ಕಾಮಧೇನುವ ? ಗಾರ್ದಭ ಬಲ್ಲುದೆ ಚಿಂತಾಮಣಿಯ ? ನರಿ ಬಲ್ಲುದೆ ಗಜಭದ್ರವ ? ಕಾಗೆ ಬಲ್ಲುದೆ ಪರಮಾಮೃತವ ? ಅಂಧಕ ಬಲ್ಲನೆ ಕನ್ನಡಿ ಬಿಂಬ ಮೊದಲಾಗಿ ಅನಂತ ಚಿತ್ರವಿಚಿತ್ರಂಗಳ ? ಬಧಿರ ಬಲ್ಲನೆ ಪ್ರಣವೋಂ ನಾದ ಮೊದಲಾದ ದಶನಾದಗಳ ? ಷಂಡ ಬಲ್ಲನೆ ರತಿಸಂಯೋಗವ ? ತೊತ್ತು ಬಲ್ಲಳೆ ರಾಜಭೋಗವ ? ಹೇಡಿ ಬಲ್ಲನೆ ರಣಧೀರತ್ವವ ? ದರಿದ್ರ ಬಲ್ಲನೆ ನವರತ್ನಂಗಳ ? ಬೆಸ್ತ ಬಲ್ಲನೆ ಅಂದ? ಮೊದಲಾದ ಅಷ್ಟಭೋಗಂಗಳ ? ಮೂಢ ಬಲ್ಲನೆ ಶಿವಕವಿತ್ವವ ? ಕಾಮಿ ಬಲ್ಲನೆ ಶಿವಯೋಗದ ಸುಖವ ? ರೋಗಿ ಬಲ್ಲನೆ ರಂಭಾರಸವ ? ಗೂಗಿ ಬಲ್ಲುದೆ ಚಿತ್ಸೂರ್ಯನ ಬೆಳಗ ? ಇಂತೆಂದುದಾಗಿ, ಲೋಕದ ದೃಷ್ಟದಂತೆ, ಹೊನ್ನು ಹೆಣ್ಣು ಮಣ್ಣು ಅನ್ನ ನೀರು ವಸ್ತ್ರ ಆಭರಣ ವಾಹನವೆಂಬ ಅಷ್ಟಮಲಂಗಳಲ್ಲಿ, ಅಷ್ಟಕಾಮವಿಕಾರದಿಂದ, ಮಾಯಾಪಾಶಬದ್ಧಮಲದಲ್ಲಿ ಬಿದ್ದು ತೊಳಲುವ ಜಡಜೀವಿಗಳೆತ್ತ ಬಲ್ಲರಯ್ಯ ನಿಮ್ಮ ಸರ್ವಾಚಾರಸಂಪತ್ತಿನಾಚರಣೆಯ ? ನಿಜಸುಖದ ರಾಜಾಧಿರಾಜ ಶಿವಯೋಗದ ನಿಲುಕಡೆಯ ಕೂಡಲಚೆನ್ನಸಂಗಮದೇವಾ ?
--------------
ಚನ್ನಬಸವಣ್ಣ
ಅಯ್ಯಾ, ಶ್ರೀಗುರು ಕರುಣಿಸಿಕೊಟ್ಟ ಲಿಂಗ ಜಂಗಮವಲ್ಲದೆ, ಅನ್ಯದೈವಂಗಳ ತ್ರೈಕರಣದಲ್ಲಿ ಅರ್ಚಿಸದಿರ್ಪುದೆ ಲಿಂಗಾಚಾರವೆಂಬೆನಯ್ಯಾ. ಭಕ್ತನಾದಡೆ ಸತ್ಯಶುದ್ಧ ಕಾಯಕ [ವ ಮಾಡಿ], ಮಹೇಶನಾದಡೆ ಸತ್ಯಶುದ್ಧ ಭಿಕ್ಷವ ಬೇಡಿ ಸಮಸ್ತ ಪ್ರಾಣಿಗಳಲ್ಲಿ ಪಾತ್ರಾಪಾತ್ರವ ತಿಳಿದು ಹಸಿವು ತೃಷೆ ಶೀತಕ್ಕೆ ಪರಹಿತಾರ್ಥಿಯಾಗಿರ್ಪುದೆ ಸದಾಚಾರವೆಂಬೆನಯ್ಯಾ. ಗುರುಮಾರ್ಗಾಚಾರದಲ್ಲಿ ನಿಂದ ಶಿವಲಾಂಛನಧಾರಿಗಳೆಲ್ಲಾ ಪರಶಿವಲಿಂಗವೆಂದು ಭಾವಿಸಿ, ಅರ್ಥ ಪ್ರಾಣಾಭಿಮಾನವನರ್ಪಿಸುವುದೆ ಶಿವಾಚಾರವೆಂಬೆನಯ್ಯಾ. ಅಷ್ಟಾವರಂಣಗಳ ಮೇಲೆ ಅನ್ಯರಿಂದ ಕುಂದು ನಿಂದೆಗಳು ಬಂದು ತಟ್ಟಿದಲ್ಲಿ ಗಣಸಮೂಹವನೊಡಗೂಡಿ ಆ ಸ್ಥಲವ ತ್ಯಜಿಸುವುದೆ ಗಣಾಚಾರವೆಂಬೆನಯ್ಯಾ. ಜಾತ್ಯಾಶ್ರಮ ಕುಲಗೋತ್ರ ನಾಮರೂಪು ಕ್ರಿಯಾರಹಿತನಾಗಿ, ಗುರೂಪಾವಸ್ಥೆಯಿಂದ ಗುರುವ ಪ್ರತ್ಯಕ್ಷವ ಮಾಡಿ, ಆ ಗುರುವಿನಿಂದ ಚಿದ್ಘನ ಮಹಾಲಿಂಗವ ಪಡೆದು, ಆ ಲಿಂಗಸಹಿತವಾಗಿ ಭಕ್ತಿಜ್ಞಾನವೈರಾಗ್ಯ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರ ಮೊದಲಾದ ಷಟ್‍ಸ್ಥಲಮಾರ್ಗದಲ್ಲಿ ನಿಂದ ಭಕ್ತಗಣಂಗಳಲ್ಲಿ ಪಂಚಸೂತಕಂಗಳ ಕಲ್ಪಿಸದೆ ಅವರಿದ್ದ ಸ್ಥಳಕ್ಕೆ ಹೋಗಿ, ತನುಮನಧನಂಗಳ ಸಮರ್ಪಿಸಿ, ಅವರೊಕ್ಕುಮಿಕ್ಕುದ ಹಾರೈಸಿ ಹಸ್ತಾಂಜಲಿತರಾಗಿ ಪ್ರತ್ಯುತ್ತರವ ಕೊಡದಿರ್ಪುದೆ ಭೃತ್ಯಾಚಾರವೆಂಬೆನಯ್ಯಾ. ಮಲ ಮಾಯಾ ಪಾತಕ ಸೂತಕ ರಹಿತವಾದ ದೀಕ್ಷಾಗುರು, ಶಿಕ್ಷಾಗುರು, ಜ್ಞಾನಗುರುವಿನಿಂದ ವೇಧಾಮಂತ್ರ ಕ್ರಿಯಾದೀಕ್ಷೆಯ ಪಡೆದು ದ್ವಾದಶ ಮಲಪಾಶ ಕರ್ಮವ ತ್ಯಜಿಸಿ, ಮನ ಮಾರುತ ಮೊದಲಾದ ದ್ವಾದಶ ಇಂದ್ರಿಯಂಗಳ ಗುರುಪಾದಜಲದಿಂದ ಪ್ರಕ್ಷಾಲಿಸಿ ದಂತಪಙಫ್ತೆಕ್ರಿಯೆಗ? ಮಾಡಿ, ಕಟಿಸ್ನಾನ, ಕಂಠಸ್ನಾನ, ಮಂಡೆಸ್ನಾನ ಸರ್ವಾಂಗಸ್ನಾನವ ಮಾಡಿ ಕ್ರಿಯಾಭಸಿತದಿಂದ ಸ್ನಾನ ಧೂಲನ ಧಾರಣದ ಮರ್ಮವ ತಿಳಿದಾಚರಿಸಿ ಸಾಕಾರ ನಿರಾಕಾರ ಅಷ್ಟವಿಧಾರ್ಚನೆ ಷೋಡಷೋಪಚಾರದಿಂದ ಗುರು-ಲಿಂಗ-ಜಂಗಮವನರ್ಚಿಸಿ ನಿರ್ವಂಚಕತ್ವದಿಂದ ಘನಪಾದತೀರ್ಥಪ್ರಸಾದ ಮಂತ್ರದಲ್ಲಿ ನಿಂದ ನಿಜಾವಸ್ಥೆಯ ಕ್ರಿಯಾಚಾರವೆಂಬೆನಯ್ಯಾ ಅಂತರಂಗದಲ್ಲಿ ಕರಣವಿಷಯ ಕರ್ಕಶದಿಂದ ಅಹಂಕರಿಸಿ ಗುರುಹಿರಿಯರಲ್ಲಿ ಸಂಕಲ್ಪ ವಿಕಲ್ಪಗಳಿಂದ ಕುಂದು-ನಿಂದೆ ಹಾಸ್ಯ-ರೋಷಂಗಳೆಂಬ ಅಜ್ಞಾನವ ಬಳಸದೆ ಪರಮಪಾತಕರ ದರ್ಶನಸ್ಪರ್ಶನಸಂತರ್ಪಣೆ ಪಂಕ್ತಿಪಾಕವ ಕೊಳ್ಳದೆ ಸತ್ಯ ನಡೆನುಡಿಯುಳ್ಳ ಶಿವಶರಣಗಣಂಗಳಲ್ಲಿ ಷಡ್ವಿಧಭಕ್ತಿ ಮುಂದುಗೊಂಡು, ಎರಡೆಂಬತ್ತೆಂಟುಕೋಟಿ ವಚನಾನುಭವದಲ್ಲಿ ನಿಂದ ನಿಲುಕಡೆಯೆ ಜ್ಞಾನಾಚಾರವೆಂಬೆನಯ್ಯಾ. ತನುವಿಕಾರದಿಂದ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳ ಬಳಕೆ ಮಾಡದೆ ಲೋಕದಂತೆ ನಡೆನುಡಿಗಳ ಬಳಸದೆ, ತನ್ನ ಗುಣಾವಗುಣಂಗಳ ಸ್ವಾತ್ಮಾನುಭವದಿಂದರಿದು, ದುರ್ಗುಈವ ತ್ಯಜಿಸಿ, ಸದ್ಗುಣವ ಹಿಡಿದು ಬಿಡದಿಪ್ಪುದೆ ಭಾವಾಚಾರವೆಂಬೆನಯ್ಯಾ. ಕೊಡುವಲ್ಲಿ ಕೊಂಬಲ್ಲಿ ಅತಿಯಾಸೆಯಿಂದ ಹುಸಿಯ ನುಡಿಯದೆ, ಕೊಟ್ಟ ಭಾಷೆಗ? ಪ್ರಾಣಾಂತ್ಯ ಬಂದಡೆಯೂ ನುಡಿಯಂತೆ ನಡೆವುದೆ ಸತ್ಯಾಚಾರವೆಂಬೆನಯ್ಯಾ. ಕಾಲ ಕಾಮರ ಬಾಧೆಗೊ?ಗಾಗದ ಹಠಯೋಗ ಫಲಪದಂಗ? ತಟ್ಟುಮುಟ್ಟು ಸೋಂಕುಗಳಿಲ್ಲದೆ ಲಿಂಗಾಣತಿಯಿಂದ ಬಂದೊದಗಿದ ಪರಿಣಾಮಪ್ರಸಾದದಲ್ಲಿ ಲೋಲುಪ್ತನಾಗಿರ್ಪುದೆ ನಿತ್ಯಾಚಾರವೆಂಬೆನಯ್ಯಾ. ಸರ್ವಾವಸ್ಥೆಯಲ್ಲಿ ದಶವಿಧಪಾದೋದಕ ಏಕಾದಶಪ್ರಸಾದ ಛತ್ತೀಸ ಪ್ರಣವ ಮೊದಲಾದ ಮಹಾಮಂತ್ರಂಗಳಲ್ಲಿ ಎರಕವನುಳ್ಳುದೆ ಧರ್ಮಾಚಾರವೆಂಬೆನಯ್ಯಾ. ಇಂತೀ ಏಕಾದಶವರ್ಮವ ಗುರುಕೃಪಾಮುಖದಿಂದರಿದು, ಆಚಾರವೆ ಅಂಗ ಮನ ಪ್ರಾಣ ಭಾವಂಗಳಾಗಿ, ಇಹಪರವ ವಿೂರಿ, ಪಿಂಡಾದಿ ಜ್ಞಾನಶೂನ್ಯಾಂತವಾದ ಏಕೋತ್ತರಮಾರ್ಗದಲ್ಲಿ ನಿಂದು, ಬಯಲೊಳಗೆ ಬಚ್ಚಬರಿಯ ನಿರ್ವಯಲ ಸಾಧಿಸುವುದೆ ಸರ್ವಾಚಾರ ಸಂಪತ್ತಿನಾಚಾರದ ನಿಲುಕಡೆ ನೋಡಾ ಇಂತು ಆಚಾರದ ಕುರುಹ ತಿಳಿದು ಪಂಚಾಚಾರವ ಬಹಿಷ್ಕರಿಸಿ ಸಪ್ತಾಚಾರವ ಗೋಪ್ಯವ ಮಾಡಿ, ದರಿದ್ರನಿಗೆ ನಿಧಿನಿಧಾನ ದೊರೆತಂತೆ, ರೋಗಿಗೆ ವೈದ್ಯದ ಲತೆ ದೊರೆತಂತೆ, ಮೂಕ ಫಲರಸವ ಸವಿದಂತೆ, ಕಳ್ಳಗೆ ಚೇಳೂರಿದಂತೆ, ತಮ್ಮ ಚಿದಂಗಸ್ವರೂಪರಾದ ಶರಣಗಣಂಗಳಲ್ಲಿ ಉಸುರಿ, ದುರ್ಜನಾತ್ಮರಲ್ಲಿ ಬಳಸದೆ ನಿಂದ ಪರಮಸುಖಿ ನಿಮ್ಮ ಶರಣನಲ್ಲದೆ ಉಳಿದ ಕಣ್ಗೆಟ್ಟಣ್ಣಗಳೆತ್ತ ಬಲ್ಲರಯ್ಯಾ ಕೂಡಲಚೆನ್ನಸಂಗಮದೇವಾ ?
--------------
ಚನ್ನಬಸವಣ್ಣ
ಅಂಗವ ಬಿಟ್ಟು ಹೋಹ ಪ್ರಾಣಕ್ಕೆ ಲಿಂಗವಿಲ್ಲ ಎಂದೆಂಬರು, ಒಡಂಬಡಿಸಿಹೆನು ಕೇಳಿರಣ್ಣಾ. ಹಿಂಗಿದ ಪುಷ್ಪದ ಪರಿಮಳವನುಂಡೆಳ್ಳು ಅವು ತಮ್ಮಂಗವ ಬಿಟ್ಟು ಹೋಹಾಗ ಕಮ್ಮೆಣ್ಣೆಯಾಗದಿಪ್ಪುವೆ ? ಲಿಂಗೈಕ್ಯರು ಅಳಿದಡೆ, ಕೈಲಾಸದಲ್ಲಿ ತಮ್ಮ ಇಷ್ಟಲಿಂಗಸಹವಾಗಿಪ್ಪರು ನೋಡಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ

ಇನ್ನಷ್ಟು ...