ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗೋವಿನ ಹೊಟ್ಟೆಯಲ್ಲಿ ಘೃತವಿದ್ದಡೇನೊ ಆ ಗೋವು ದಿನದಿನಕ್ಕೆ ಪುಷ್ಟವಾಗಬಲ್ಲುದೆ ? ಅದು ಕಾರಣ_ ಆ ಗೋವ ಪೋಷಿಸಿ ಕರೆದು ಕಾಸಿ, ಘೃತವ ಮಾಡಿ ಆ ಗೋವಿಂಗೆ ಕುಡಿಯಲೆರೆದಡೆ ಆ ಗೋವು ದಿನದಿನಕ್ಕೆ ಪುಷ್ಟವಹುದು. ಹಾಂಗೆ, ತನ್ನಲ್ಲಿ ವಸ್ತುವಿದ್ದಡೇನೊ ? ವಸ್ತುವ ಗುರುಮುಖದಿಂದ ಕರಸ್ಥಲಕ್ಕೆ ಪಡೆದು, ಸತ್ಕ್ರಿಯೆಯಿಂದ ಪ್ರಾಣಕ್ಕೆ ವೇಧಿಸಿದಲ್ಲದೆ ಪ್ರಾಣಲಿಂಗವಾಗದು. ಕೂಡಲಚೆನ್ನಸಂಗಯ್ಯನಲ್ಲಿ, ಇಷ್ಟಲಿಂಗವ ಸತ್ಕ್ರಿಯೆಯಿಂದ ಪ್ರಾಣಕ್ಕೆ ವೇದ್ಥಿಸಿ, ತಾನೆಂಬ ಅನಿಷ್ಟವ ತೊಲಗಿಸಿದಲ್ಲದೆ ಪ್ರಾಣಲಿಂಗಸಂಬಂಧವಾಗಬಾರದು
--------------
ಚನ್ನಬಸವಣ್ಣ
ಗುರುವಿನಲ್ಲಿ ಗುಣವನರಸುವರೆ ? ಲಿಂಗದಲ್ಲಿ ಲಕ್ಷಣವನರಸುವರೆ ? ಜಂಗಮದಲ್ಲಿ ಜಾತಿಯನರಸುವರೆ ? ಅರಸಿದರೆ ನಾಯಕನರಕ ತಪ್ಪದು ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಗುದಸ್ಥಾನದಲ್ಲಿ ಆಧಾರಚಕ್ರ, ಅಲ್ಲಿಗೆ ಪೃಥ್ವಿಯೆಂಬ ಮಹಾಭೂತ, ಸದ್ಯೋಜಾತವಕ್ತ್ರ, ಬ್ರಹ್ಮ ಪೂಜಾರಿ, ಸುವರ್ಣದ ತೇಜ, ಬಾಲರವಿಕೋಟಿ ಪ್ರಕಾಶ, ನಾಲ್ಕೆಸಳಿನ ತಾವರೆಯ ಮಧ್ಯದಲ್ಲಿ ಸುವರ್ಣಮಯಲಿಂಗ - ಅದು ಆಚಾರಲಿಂಗ, ಅದಕ್ಕೆ ಬೀಜಾಕ್ಷಾರ ಓಂ ನಾಂ ನಾಂ ನಾಂ ಎಂಬ ನಾದಘೋಷ. ಎಸಳು ನಾಲ್ಕರಲ್ಲಿ ವ, ಶ, ಷ, ಸ ಎಂಬ ನಾಲ್ಕಕ್ಷರ. ಅದು ದೇವರಿಗೂ ತಮಗೂ ಪಶ್ಚಿಮಮುಖ- ಸದ್ಯೋಜಾತ ವಕ್ತ್ರ, ಆಧಾರಚಕ್ರ. ಲಿಂಗಸ್ಥಾನದಲ್ಲಿ ಸ್ವಾದಿಷ್ಠಾನಚಕ್ರ, ಅಲ್ಲಿಗೆ ಅಪ್ಪುವೆಂಬ ಮಹಾಭೂತ, ವಾಮದೇವವಕ್ತ್ರ, ವಿಷ್ಣು ಪೂಜಾರಿ, ನೀಲದ ತೇಜ, ಬಾಲದ್ವಿಕೋಟಿ ಸೂರ್ಯಪ್ರಕಾಶ, ಅರೆಸಳಿನ ತಾವರೆಯ ಮಧ್ಯದಲ್ಲಿ ಗೋಕ್ಷೀರದ ಹಾಗೆ ಧವಳ ವರ್ಣದ ಲಿಂಗ - ಅದು ಗುರುಲಿಂಗ; ಅದಕ್ಕೆ ಬೀಜಾಕ್ಷರ ಓಂ ಮಾಂ ಮಾಂ ಮಾಂ ಎಂಬ ನಾದಘೋಷ. ಎಸಳು ಆರರಲ್ಲಿ ಬ ಭ ಮ ಯ ರ ಲ ಎಂಬ ಷಡಕ್ಷರ ಅದು ದೇವರಿಗೂ ತಮಗೂ ಉತ್ತರಮುಖ-ವಾಮದೇವವಕ್ತ್ರ, ಸ್ವಾದಿಷ್ಠಾನಚಕ್ರ. ನಾಭಿಸ್ಥಾನದಲ್ಲಿ ಮಣಿಪೂರಕಚಕ್ರ, ಅಲ್ಲಿಗೆ ಅಗ್ನಿಯೆಂಬ ಮಹಾಭೂತ, ಅಘೋರವಕ್ತ್ರ ರುದ್ರ ಪೂಜಾರಿ, ಮಾಣಿಕ್ಯತೇಜ, ಬಾಲತ್ರಿಕೋಟಿಸೂರ್ಯಪ್ರಕಾಶ, ಹತ್ತೆಸಳಿನ ತಾವರೆಯ ಮಧ್ಯದಲ್ಲಿ ಮಾಣಿಕ್ಯವರ್ಣದ ಲಿಂಗ-ಅದು ಶಿವಲಿಂಗ, ಅದಕ್ಕೆ ಬೀಜಾಕ್ಷರ ಓಂ ಶಿಂ ಶಿಂ ಶಿಂ ಎಂಬ ನಾದಘೋಷ. ಎಸಳು ಹತ್ತರಲ್ಲಿ ಡ, ಢ, ಣ, ತ, ಥ, ದ, ಧ, ನ, ಪ, ಫ ಎಂಬ ದಶಾಕ್ಷರ. ಅದು ದೇವರಿಗೂ ತಮಗೂ ದಕ್ಷಿಣಮುಖ - ಅಘೋರವಕ್ತ್ರ, ಮಣಿಪೂರಕಚಕ್ರ. ಹೃದಯ ಸ್ಥಾನದಲ್ಲಿ ಅನಾಹತಚಕ್ರ, ಅಲ್ಲಿಗೆ ವಾಯುವೆಂಬ ಮಹಾಭೂತ, ತತ್ಪುರುಷವಕ್ತ್ರ, ಈಶ್ವರ ಪೂಜಾರಿ ಕಪೋತವರ್ಣದ ತೇಜ, ಬಾಲಚತುಷ್ಕೋಟಿ ಸೂರ್ಯಪ್ರಕಾಶ, ಹನ್ನೆರಡೆಸಳಿನ ತಾವರೆಯ ಮಧ್ಯದಲ್ಲಿ ಶುದ್ಧ ಪಚ್ಚವರ್ಣದಲಿಂಗ-ಅದು ಜಂಗಮಲಿಂಗ, ಅದಕ್ಕೆ ಬೀಜಾಕ್ಷರ ಓಂ ವಾಂ ವಾಂ ವಾಂ ಎಂಬ ನಾದಘೋಷ. ಎಸಳು ಹನ್ನೆರಡರಲ್ಲಿ ಕ ಖ ಗ ಘ ಙ ಚ ಛ ಜ ಝ ಞ ಟಂಠ ಎಂಬ ದ್ವಾದಶಾಕ್ಷರ ಅದು ದೇವರಿಗೂ ತಮಗೂ ಪೂರ್ವಮುಖ-ತತ್ಪುರುಷ ವಕ್ತ್ರ, ಅನಾಹತ ಚಕ್ರ. ಕÀಠಸ್ಥಾನದಲ್ಲಿ ವಿಶುದ್ಧಿಚಕ್ರ, ಅಲ್ಲಿಗೆ ಆಕಾಶವೆಂಬ ಮಹಾಭೂತ, ಈಶಾನವಕ್ತ್ರ, ಸದಾಶಿವ ಪೂಜಾರಿ, ವಿದ್ಯುಲ್ಲತೆಯ ತೇಜ, ಬಾಲಪಂಚಕೋಟಿ ಸೂರ್ಯಪ್ರಕಾಶ, ಹದಿನಾರೆಸಳಿನ ತಾವರೆಯ ಮಧ್ಯದಲ್ಲಿ ಅನಂತಕೋಟಿ ಮಿಂಚುಗಳ ವರ್ಣದ ಲಿಂಗ_ ಅದು ಪ್ರಸಾದಲಿಂಗ, [ಓಂ ಯಾಂ ಯಾಂ ಯಾಂ ಎಂಬ ನಾದಘೋಷ]. ಎಸಳು ಹದಿನಾರರಲ್ಲಿ ಅ ಆ ಇ ಈ ಉ ಊ ಋ Iೂ ಏ ಐ ಓ ಔ ಅಂ ಅಃ ಎಂಬ ಷೋಡಶಾಕ್ಷರ. ಅದು ದೇವರಿಗೂ ತಮಗೂ ಊಧ್ರ್ವಮುಖ_ ಈಶಾನವಕ್ತ್ರ, ವಿಶುದ್ಧಿಚಕ್ರ. ಭ್ರೂಮಧ್ಯದಲ್ಲಿ ಆಜ್ಞಾಚಕ್ರ, ಅಲ್ಲಿಗೆ ಮನವೆಂಬ ಮಹಾಭೂತ, ಶ್ರೀಗುರುವೆ ವಕ್ತ್ರ ಮಾಹೇಶ್ವರ ಪೂಜಾರಿ, ಜ್ಯೋತಿರ್ವರ್ಣದ ತೇಜ. ಬಾಲಷಟ್ಕೋಟಿ ಸೂರ್ಯಪ್ರಕಾಶ ಎರಡೆಸಳಿನ ತಾವರೆಯ ಮಧ್ಯದಲ್ಲಿ ಶ್ರೀಗುರುವಿನ ಶ್ರೀಪಾದದ ವರ್ಣದ ಲಿಂಗ ಎಡಗಡೆಯ ಪಾದ ಕೆಂಪು ವರ್ಣ, ಬಲಗಡೆಯ ಪಾದ ಶ್ವೇತವರ್ಣ-ಅದು ಮಹಾಲಿಂಗ. ಅದಕ್ಕೆ ಬೀಜಾಕ್ಷರ `ಓಂಕಾರನಾದ ಘೋಷ. ಎಸಳೆರಡರಲ್ಲಿ ಅಕ್ಷರ ಹಂ ಸಂ ಎಂಬ [ಎರಡಕ್ಷರ] ಅದು ದೇವರಿಗೂ ತನಗೂ ಗಂಭೀರ ಮುಖ-ಶ್ರೀಗುರುವಕ್ತ್ರ, ಆಜ್ಞಾಚಕ್ರ. ಅಲ್ಲಿಂದತ್ತ ಬ್ರಹ್ಮರಂಧ್ರದಲ್ಲಿ ಬ್ರಹ್ಮಚಕ್ರ ಅಲ್ಲಿಗೆ ಚಂದ್ರನೆಂಬ ಮಹಾಭೂತ, ಲಿಂಗವಕ್ತ್ರ ಪರಮೇಶ್ವರ ಪೂಜಾರಿ, ಮಹಾಜ್ಯೋತಿರ್ವರ್ಣದ ತೇಜ, ಬಾಲ ಅನಂತಕೋಟಿಸೂರ್ಯಪ್ರಕಾಶ ಒಂದುನೂರ ಎಂಟು ಸಾವಿರೆಸಳಿನ ತಾವರೆಯ ಮಧ್ಯದಲ್ಲಿ ಮಹಾಜ್ಯೋತಿರ್ವರ್ಣದ ಲಿಂಗ. ಅದು ನಿರಾಮಯ ಲಿಂಗ, ಅದಕ್ಕೆ ಬೀಜಾಕ್ಷರ ಪ್ರಣವ ನಾದ ಘೋಷ, ಎಸಳೊಂದುನೂರ ಎಂಟು ಸಾವಿರದಲ್ಲಿ, ಒಂದನೂರ ಎಂಟು ಸಾವಿರ ಅಕ್ಷರ_ ಪ್ರೇತಾಸನ ವಿಶ್ವತೋಮುಖೋ ಬ್ರಹ್ಮಚಕ್ರ. ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ ವಿಶ್ವತೋ ಬಾಹುರುತ ವಿಶ್ವತಃ ಪಾತ್ ಸಂ ಬಾಹ್ಯಭ್ಯಾಂ ಧಮತಿ ಸಂಪತತ್ರೈ ದ್ರ್ಯಾವಾ ಭೂಮೀ ಜನಯನ್ ದೇವ ಏಕಃ ಇಂತೀ ಗುರುವಿನ ಬೆಳಗು ವಿಶ್ವವನ್ನಪಹರಿಸಿ, ತಾನು ತಾನೆ ಸೋಹಂ ಪ್ರಕಾಶ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಗುರುವಿಲ್ಲದ ಲಿಂಗ, ಲಿಂಗವಿಲ್ಲದ ಗುರು ಗುರು_ಲಿಂಗವಿಲ್ಲದ ಶಿಷ್ಯ. ಶಿಷ್ಯನಿಲ್ಲದ ಸೀಮೆ, ಸೀಮೆಯಿಲ್ಲದ ನಿಸ್ಸೀಮ ಕೂಡಲಚೆನ್ನಸಂಗಾ ನಿಮ್ಮ ಶರಣ
--------------
ಚನ್ನಬಸವಣ್ಣ
ಗುರುಜಂಗಮದ ಪಾದತೀರ್ಥವೆ ಪವಿತ್ರವೆಂದು ತಿಳಿದು ಲಿಂಗಾಭಿಷೇಕಂಗೆಯ್ವುದಯ್ಯಾ. ಆ ಗುರುಲಿಂಗ ಜಂಗಮದಲ್ಲಿ ಭೇದವ ಕಲ್ಪಿಸಿದಡೆ ಪಾಪವು ಸಂಘಟಿಸುವುದಯ್ಯಾ. ಮನುಷ್ಯನ ಕಾಲ್ದೊಳೆದ ನೀರು ಪರಮತೀರ್ಥವೆಂದು ಭಾವಿಸಿ ಲಿಂಗಕ್ಕೆರೆವುದು ಶಾಸ್ತ್ರಾಚಾರಕ್ಕೆ ವಿರೋಧ_ ಎಂಬ ಕುಹಕಿಗಳ ಕೀಳ್ನುಡಿಯ ಕೇಳಲಾಗದಯ್ಯಾ. ಗುರುರ್ಲಿಂಗಜಂಗಮಶ್ಚ ತ್ರಿತಯಂ ಚೈಕಮೇವ ಹಿ ಅತ ಏವ ಪದೋದಾಭಿಷೇಚನಂ ಶಿವಲಿಂಗಕೇ ಕುರ್ವಂತ್ಯಭೇದದೃಷ್ಟ್ಯಾ ಚ ಭೇದಕೃತ್ಪಾಪಮಶ್ನುತೇ ಎಂದುದಾಗಿ ಇಂತಿಪ್ಪುದನಾರಯ್ಯದೆ ಗಳಹುವ ಮಂದಮತಿಗಳ ಎನ್ನತ್ತ ತೋರದಿರಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಗುರುಕಾರುಣ್ಯವಂ ಪಡೆದು ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಭಕ್ತನಾಗಲಿ ಜಂಗಮನಾಗಲಿ ಭಕ್ತಿ ಭೃತ್ಯಾಚಾರ ಸಂಪನ್ನರಾಗಿ ಗುರುಲಿಂಗ ಜಂಗಮವನಾರಾಧಿಸಿ, ಪ್ರಸಾದವಕೊಂಡು ನಿಜಮುಕ್ತರಾಗಲರಿಯದೆ ಪರಮಪಾವನಪ್ಪ ಗುರುರೂಪ ಹೊತ್ತು ಮತ್ತೆ ತಾವು ಪರಸಮಯದಂತೆ ದೂಷಕ ನಿಂದಕ ಪರವಾದಿಗಳಾಗಿ ಭಕ್ತ ಜಂಗಮ ಪ್ರಸಾದವನೆಂಜಲೆಂದು ಅತಿಗಳೆದು ತೊತ್ತು ಸೂಳೆಯರೆಂಜಲ ತಿಂದು ಮತ್ತೆ ನಾ ಘನ ತಾ ಘನವೆಂದು ಸತ್ಯ ಸದ್ಭಕ್ತಯಕ್ತರಾದ ಭಕ್ತಜಂಗಮವ ಜರೆದು, ಅವರ ಕುಲವೆತ್ತಿ ಕೆಡೆನುಡಿದು ಹೊಲತಿ ಮಾದಿಗಿತ್ತಿಯರಿಗುರುಳಿ ಹಲವು ದೈವದೆಂಜಲತಿಂದು ಮತ್ತೆ ತಾವು ಕುಲಜರೆಂದು ಬಗುಳುವ ಹೊಲೆ ಜಂಗುಳಿಗಳೆಲ್ಲರು ಈ ಗುರು ಕೊಟ್ಟಲಿಂಗವಿರಲು ಅದನರಿಯದೆ ಶ್ರೀಶೈಲ, ಹಂಪಿ, ಕಾಶಿ, ಕೇತಾರ ಗಯಾ ಪ್ರಯಾಗ ರಾಮೇಶ್ವರ ಆದಿಯಾದ ಹೊಲೆಕ್ಷೇತ್ರಂಗಳಲ್ಲಿ ಆಸಕ್ತರಾಗಿ ಹೋಗಿ ಅಲ್ಲಲ್ಲಿಯ ಭವಿಶೈವದೈವಂಗಳ ದರ್ಶನ ಸ್ಪರುಶನ ಆರಾಧನೆಗಳ ಮಾಡಿ ಅವಕ್ಕೆ ಶರಣೆಂದು ಅವರೆಂಜಲ ತಿಂದು ಆ ಕ್ಷೇತ್ರಂಗಳಲ್ಲಿ ಆಶ್ರಮಸ್ಥರಾಗಿರ್ದು ಗತಿಪದ ಮುಕ್ತಿಯ ಪಡೆವೆನೆಂಬ ವೇಷಧಾರಿಗಳೆಲ್ಲರು ಶ್ವಪಚಗೃಹದ ಶ್ವಾನಯೋನಿಗಳಲ್ಲಿ ಶತಸಹಸ್ರವೇಳೆ ಬಪ್ಪುದು ತಪ್ಪುದು. ಅದೆಂತೆಂದೊಡೆ ; ಇದಂ ತೀರ್ಥಮಿದಂ ತೀರ್ಥಂ ಭ್ರಮಂತಿ ತಾಮಸಾ ನರಾಃ ಶಿವಜ್ಞಾನೇನ ಜಾನಂತಿ ಸರ್ವತೀರ್ಥನಿರರ್ಥಕಂ ಪ್ರಾಣಲಿಂಗಮವಿಶ್ವಾಸ್ಯ ತೀರ್ಥಲಿಂಗಂತು ವಿಶೇಷತಃ ಶ್ವಾನಯೋನಿಶತಂ ಗತ್ವಾಶ್ಚಾಂಡಾಲಂ ಗೃಹಮಾಚರೇತ್ ಚರಶೇಷ ಪರಿತ್ಯಾಗಾದ್ಯೋಜನಾದ್ಭಕ್ತ ನಿಂದಕಾಃ ಅನ್ಯಪಣ್ಯಾಂಗನೋಚ್ಚಿಷ್ಟಂ ಭುಂಜಯಂತಿರೌರವಂ-ಇಂತೆಂದುದಾಗಿ, ಇದು ಕಾರಣ, ಇಂತಪ್ಪ ಅನಾಚಾರಿಗಳು ಭಕ್ತ ಜಂಗಮ ಸ್ಥಲಕ್ಕೆ ಸಲ್ಲರು. ಅವರಿರ್ವನು ಕೂಡಲಚೆನ್ನಸಂಗಯ್ಯ ಸೂರ್ಯ-ಚಂದ್ರರುಳ್ಳನ್ನಕ್ಕ ನಾಯಕನರಕದಲ್ಲಿಕ್ಕುವ.
--------------
ಚನ್ನಬಸವಣ್ಣ
ಗುರು ತನ್ನ ವಿನೋದಕ್ಕೆ ಸ್ಥಾವರವಾದ: ಗುರುತನ್ನ ವಿನೋದಕ್ಕೆ ಜಂಗಮವಾದ; ಗುರು ತನ್ನ ವಿನೋದಕ್ಕೆ ಪ್ರಸಾದವಾದ; ಗುರು ತನ್ನ ವಿನೋದಕ್ಕೆ ಗುರುವಾದ; ಕೂಡಲಚೆನ್ನಸಂಗಯ್ಯನಲ್ಲಿ ಏಕಾರ್ಥವಾದ
--------------
ಚನ್ನಬಸವಣ್ಣ
ಗುರುಶಿಷ್ಯಸಂಬಂಧವನೇನೆಂದುಪಮಿಸುವೆ ? ಜ್ಯೋತಿಯಲೊದಗಿದ ಜ್ಯೋತಿಯಂತಿರಬೇಕು, ದರ್ಪಣದೊಳಡಗಿದ ಪ್ರತಿಬಿಂಬದಂತಿರಬೇಕು, ಸ್ಫಟಿಕದೊಳಗಿರಿಸಿದ ರತ್ನದಂತಿರಬೇಕು, ರೂಪಿನ ನೆಳಲಿನ ಅಂತರಂಗದಂತಿರಬೇಕು. ಇದು ಕಾರಣ, ಕೂಡಲಚೆನ್ನಸಂಗಯ್ಯಾ ದರ್ಪಣವ ದರ್ಪಣಕ್ಕೆ ತೋರಿದಂತಿರಬೇಕು
--------------
ಚನ್ನಬಸವಣ್ಣ
ಗುರುವೆಂಬ ಗೂಳಿ ಮುಟ್ಟಲು, ಶಿಷ್ಯನೆಂಬ ಮಣಿಕ ತೆನೆಯಾಯಿತ್ತು. ಲಿಂಗವೆಂಬ ಕಿಳುಗರು, ತನುವೆ ಕೆಚ್ಚಲು, ಮನವೆ ಮೊಲೆವಾಲು. ಅರಿದಲ್ಲಿ ಐಕ್ಯ, ಮರೆದಲ್ಲಿ ಸಾಹಿತ್ಯ. ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ಅನಾಚಾರಿಗಲ್ಲದೆ ಪ್ರಸಾದವಿಲ
--------------
ಚನ್ನಬಸವಣ್ಣ
ಗುರುವಿನ ಗುರುವಿನ ಕೈಯ ಶಿಷ್ಯರ ಶಿಷ್ಯ ಪಾದಾರ್ಚನೆಯ ಮಾಡಿಕೊಂಬುದ ಕಂಡು ಎನ್ನ ಮನ ಬೆರಗಾಯಿತ್ತು ! ಮುಂದು ಹಿಂದಾಯಿತ್ತು, ಹಿಂದು ಮುಂದಾಯಿತ್ತು ! ಕೂಡಲಚೆನ್ನಸಂಗಮದೇವಾ, ನಿಮ್ಮ ಗುರುಶಿಷ್ಯರ ಸಂಬಂಧ ಎನಗೆ ವಿಪರೀತವಾಯಿತ್ತು.
--------------
ಚನ್ನಬಸವಣ್ಣ
ಗಂಡಭೇರುಂಡನೆಂಬ ಪಕ್ಷಿಗೆ ತಲೆ ಎರಡು, ದೇಹವೊಂದು. ಒಂದು ತಲೆಯಲ್ಲಿ ಹಾಲನೆರೆದು, ಒಂದು ತಲೆಯಲ್ಲಿ ವಿಷವನೆರೆದಡೆ, ಆ ಪಕ್ಷಿಗೆ ಮರಣವಲ್ಲದೆ ಜಯವಪ್ಪುದೇ ಅಯ್ಯಾ ? ಲಿಂಗವ ಪೂಜಿಸಿ ಜಂಗಮವ ಮರೆದಡೆ ಕುಂಭಿನೀನರಕ ತಪ್ಪುದು ಕಾಣಾ ಕೂಡಲಚೆನ್ನಸಂಗಮದೇವಯ್ಯಾ
--------------
ಚನ್ನಬಸವಣ್ಣ
ಗುರುಹಸ್ತದಲ್ಲಿ ಉತ್ಪತ್ಯವಾಗಿ, ಜಂಗಮಾನುಭವ ಶರಣರ ಸಂಗದಲ್ಲಿ ಬೆಳೆದು, ನಿಜಲಿಂಗದಲ್ಲಿ ಲೀಯವಾದ ಗುರುಚರ ಭಕ್ತರು ತಮ್ಮ ಸ್ಥೂಲಕಾಯವೆಂಬ ನರಕಂಥೆಯ ಕಳೆದರೆ, ಭಕ್ತ ಬಂಧುಗಳಾದ ಆಪ್ತ ಗಣಂಗಳು ಬಂದು ಸಮಾಧಿಯಂ ತೆಗೆದು, ಆ ಕಾಯವೆಂಬ ಕಂಥೆಯ ನಿಕ್ಷೇಪವಂ ಮಾಡುವುದೆ ಸದಾಚಾರ. ಇಂತಲ್ಲದೆ ಮೃತವಾದನೆಂದು ಗೂಟವಂ ಬಲಿದು, ಗುಂಟಿಕೆಯನಿಕ್ಕಿ, ಶೋಕಂಗೆಯ್ದು, ಪ್ರೇತಸೂತಕ ಕರ್ಮವಿಡಿದು, ತದ್ದಿನವಂ ಮಾಡುವದನಾಚಾರ, ಪಂಚಮಹಾಪಾತಕ. ಅವಂಗೆ ಗುರು ಲಿಂಗ ಜಂಗಮ ಪ್ರಸಾದವಿಲ್ಲ ಅದೆಂತೆಂದೊಡೆ: ``ಯೋ ಗುರುಂ ಮೃತಭಾವೇನ ತದ್ದಿನಂ ಯಸ್ಯ ಶೋಚ್ಯತೇ ಗುರುಲಿಂಗಪ್ರಸಾದಂ ಚ ನಾಸ್ತಿ ನಾಸ್ತಿ ವರಾನನೇ ಎಂದುದಾಗಿ, ಪ್ರೇತಸೂತಕದ ಪಾತಕರಿಗೆ ಅಘೋರನರಕ ತಪ್ಪದು. ಇಂತಪ್ಪ ಅಘೋರನರಕಿಗಳ ಮುಖವ ನೋಡಲಾಗದು ಕಾಣಾ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಗುರುಲಿಂಗಮೋಹಿತನಾದಡೆ ಮಾತಾಪಿತರ ಮೋಹವ ಮರೆಯಬೇಕು. ಗುರುಲಿಂಗಭಕ್ತನಾದಡೆ ಪೂರ್ವಬಂಧುಪ್ರೇಮವ ಮಾಡಲಾಗದು. ಗುರುಲಿಂಗಪೂಜಕನಾದಡೆ ಅನ್ಯಪೂಜೆಯ ಮಾಡಲಾಗದು. ಗುರುಲಿಂಗವೀರನಾದಡೆ ಗುರುಲಿಂಗಾಚಾರದಲ್ಲಿ ನಡೆಯಬೇಕು. ಗುರುಲಿಂಗಪ್ರಸಾದಿಯಾದಡೆ ಗುರ್ವಾಜ್ಞೆಯ ಮೀರಲಾಗದು. ಗುರುಲಿಂಗಪ್ರಾಣಿಯಾದಡೆ ಮಾನವರ ಸೇವೆ ಮಾಡಲಾಗದು. ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ ಈ ಆರು ಸಹಿತ ಗುರುಲಿಂಗಭಕ್ತಿ.
--------------
ಚನ್ನಬಸವಣ್ಣ
ಗುರುವೆಂಬ ಪ್ರತಿಭಾವವಿಲ್ಲದ ಶಿಷ್ಯ; ಶಿಷ್ಯನೆಂಬ ಪ್ರತಿಭಾವವಿಲ್ಲದ ಗುರು; ಏನೆಂಬೆನೇನೆಂಬೆ ಎರಡಿಲ್ಲದ ಘನವನೇನೆಂಬೆನೇನೆಂಬೆ ! ಉಭಯವಳಿದು ಒಂದಾದುದನೇನೆಂಬೆನೇನೆಂಬೆ: ಕೂಡಲಚೆನ್ನಸಂಗಯ್ಯನಲ್ಲಿ ಗುರುಶಿಷ್ಯಸಂಬಂಧವಪೂರ್ವ
--------------
ಚನ್ನಬಸವಣ್ಣ
ಗುರುಪ್ರಸಾದವೆಂಬಿರಿ, ಲಿಂಗಪ್ರಸಾದವೆಂಬಿರಿ, ಅಚ್ಚಪ್ರಸಾದವೆಂಬಿರಿ, ಭರಿತಬೋನವೆಂಬಿರಿ. ಗುರುಪ್ರಸಾದವೆಂಬುದನು ಲಿಂಗಪ್ರಸಾದವೆಂಬುದನು ಅಚ್ಚಪ್ರಸಾದವೆಂಬುದನು ಭರಿತಬೋನವೆಂಬುದನು ಅರಿವವರು ನೀವು ಕೇಳಿರೆ; ಶ್ರೀಗುರುಕಾರುಣ್ಯವುಳ್ಳ ಶಿವಭಕ್ತರು ಆ ಶ್ರೀಗುರುಲಿಂಗಕ್ಕೆ ತನುಕ್ರೀಯಿಂದ ಪಾದಾರ್ಚನೆಯ ಮಾಡಿ ಪಾದತೀರ್ಥಮಂ ಕೊಂಡು, ಷಡುಸಮ್ಮಾರ್ಜನೆಯ ಮಾಡಿ ರಂಗವಾಲಿಯನಿಕ್ಕಿ, ಶ್ರೀಗುರುವ ಲಿಂಗಾರ್ಚನೆಗೆ ಕುಳ್ಳಿರಿಸಿ ಅಷ್ಟವಿಧಾರ್ಚನೆ ಷೋಡಶೋಪಚಾರವಂ ಮಾಡಿ ಪುರುಷಾಹಾರ ಪ್ರಮಾಣಿನಿಂದ ನೀಡಿ, ತೆರಹು ಮರಹಿಲ್ಲದೆ ಆ ಶ್ರೀಗುರುವಾರೋಗಣೆಯಂ ಮಾಡಿದ ಬಳಿಕ ಹಸ್ತಮಜ್ಜನಕ್ಕೆರೆದು, ಒಕ್ಕುಮಿಕ್ಕುದ ಕೊಂಡುಂಬುದು ಗುರುಪ್ರಸಾದ. ಇಂತಲ್ಲದೆ ಕೈಯೊಡ್ಡಿ ಬೇಡುವಾತ ಗುರುದ್ರೋಹಿ, ಕೈ ನೀಡಿದಡೆ ಇಕ್ಕುವಾತ ಶಿವದ್ರೋಹಿ. ಇನ್ನು ಲಿಂಗಪ್ರಸಾದವನರಿವ ಪರಿ; ಹಿಂದಣ ಪರಿಯಲಿ ಪುರುಷಾಹಾರ[ವ] ಪ್ರಮಾಣಿನಿಂದ ತೆರಹು ಮರಹಿಲ್ಲದೆ ಭರಿತಬೋನವಾಗಿ ಗಡಣಿಸಿ, ತಟ್ಟುವ ಮುಟ್ಟುವ ಮರ್ಮವನರಿತು, ಸಂಕಲ್ಪ ವಿಕಲ್ಪವಿಲ್ಲದೆ ಭಾವಶುದ್ಧನಾಗಿ, ಏಕಚಿತ್ತದಿಂದ ಮನಮುಟ್ಟಿ ಲಿಂಗಕ್ಕೆ ನೈವೇದ್ಯಮಂ ತೋರಿ, ಸೀತಾ?ಮಂ ಕೊಟ್ಟು, ಸೆಜ್ಜೆಯರಮನೆಗೆ ಬಿಜಯಂಗೈಸಿಕೊಂಡು ಪಂಚೇಂದ್ರಿಯ ಸಪ್ತಧಾತು ತೃಪ್ತರಾಗಲ್ಕೆ, ಪ್ರಸಾದಭೋಗವಂ ಮಾಡುವುದು ಲಿಂಗಪ್ರಸಾದ. ಅಖಂಡಿತವಾದಡೆ ಇರಿಸಿ ಲಿಂಗಪ್ರಸಾದಿಗಳಿಗೆ ಕೊಡುವುದು. ಕೊಡದೆ ಛಲಗ್ರಾಹಕತನದಲ್ಲಿ ಕೊಂಡು ಒಡಲ ಕೆಡಿಸಿಕೊಂಡಡೆ ಪಂಚಮಹಾಪಾತಕ. ಅವನ ಮುಖವ ನೋಡಲಾಗದು ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗವೆಂಬ ಅಪಸ್ಮಾರಿಗಳ ಮಾತ ಕೇಳಾಗದು. ಅದೆಂತೆಂದಡೆ; ಅಂಗದ ಮೇಲೆ ಒಬ್ಬ ಗಂಡ, ಮನೆಯೊಳಗೆ ಒಬ್ಬ ಗಂಡ- ಹಿತ್ತಲೊ?ಗೊಬ್ಬ ಗಂಡ, ಮುಂಚೆಯಲೊಬ್ಬ ಗಂಡ- ಇಂತೀ ಚತುವಿರ್ಧ ಗಂಡರು ಎಂಬ ಸತಿಯರ ಲೋಕದವರು ಮೆಟ್ಟಿ ಮೂಗಕೊಯ್ಯದೆ ಮಾಬರೆ ? ಕೂಡಲಚೆನ್ನಸಂಗಮದೇವಾ ಪ್ರಾಣಲಿಂಗವಿರ್ದುದ ಎತ್ತಲೆಂದರಿಯರು
--------------
ಚನ್ನಬಸವಣ್ಣ
ಗುರು ಮುಟ್ಟಿ ಲಿಂಗವಾಯಿತ್ತೈಸೆ, ಅದು ಬಿದ್ದಿತ್ತು, ಹೋಯಿತ್ತೆಂಬ ಅಜ್ಞಾನವ ನೋಡಾ, ಕಟ್ಟುವಠಾವನು, ಮುಟ್ಟುವ ಭೇದವನು ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ
--------------
ಚನ್ನಬಸವಣ್ಣ
ಗುರುವಿಂಗೆ ಗುರುವಾಗಿ ಗುರುಪ್ರಸಾದವ ಕೊಂಬುದು, ಲಿಂಗಕ್ಕೆ ಲಿಂಗವಾಗಿ ಲಿಂಗಪ್ರಸಾದವ ಕೊಂಬುದು, ಜಂಗಮಕ್ಕೆ ಜಂಗಮವಾಗಿ ಜಂಗಮಪ್ರಸಾದವ ಕೊಂಬುದು, ಪ್ರಸಾದಕ್ಕೆ ಪ್ರಸಾದವಾಗಿ ಪ್ರಸಾದವನೆ ಕೊಂಬುದು. ಈ ಚತುರ್ವಿಧಸ್ಥಲಕ್ಕೆ ಚತುರ್ವಿಧವಾಗಬಲ್ಲಡೆ, ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು.
--------------
ಚನ್ನಬಸವಣ್ಣ
ಗುರುದ್ರೋಹಿಯಾದವನ ಮುಖವ ನೋಡಲಾಗದು, ಮತ್ತೆ ನೋಡಬಹುದು, ಏಕೆ? ಮುಂದೆ ಲಿಂಗವಿಪ್ಪುದಾಗಿ. ಲಿಂಗದ್ರೋಹಿಯಾದವನ ಮುಖವ ನೋಡಲಾಗದು, ಮತ್ತೆ ನೋಡಬಹುದು, ಏಕೆ? ಮುಂದೆ ಜಂಗಮವಿಪ್ಪುದಾಗಿ ಜಂಗಮದ್ರೋಹಿಯಾದವನ ಮುಖವ ನೋಡಲಾಗದು, ಮತ್ತೆ ನೊಡಬಹುದು ಏಕೆ ಮುಂದೆ ಪ್ರಸಾದವಿಪ್ಪುದಾಗಿ. ಪ್ರಸಾದದ್ರೋಹಿಯಾದವನ ಮುಖವ ನೋಡಲಾಗದು ಏಕೆ? ಕೂಡಲಚೆನ್ನಸಂಗಯ್ಯನ ಪ್ರಸಾದವಿರಹಿತವಾಗಿ ಪರವಿಲ್ಲದ ಕಾರಣ
--------------
ಚನ್ನಬಸವಣ್ಣ
ಗುರು ಗುರುವೆಂದೇನೊ, ಪರಕ್ಕೆ ಹೆಸರ ಹೇಳುವನ್ನಕ್ಕವೆ ? ಲಿಂಗ ಲಿಂಗವೆಂದೇನೊ, ಅಂಗ ಬೀಳುವನ್ನಕ್ಕವೆ ? ಜಂಗಮ ಜಂಗಮವೆಂದೇನೊ, ಧನವ ಸವೆವನ್ನಕ್ಕವೆ ? ಪ್ರಸಾದ ಪ್ರಸಾದವೆಂದೇನೊ, ಉಂಡು ಕಳಚಿ ಪ್ರಳಯಕ್ಕೊಳಗಾಗುವನ್ನಕ್ಕವೆ ? ಪಾದತೀರ್ಥ ಪಾದತೀರ್ಥವೆಂದೇನೊ, ಕೊಂಡು ಕೊಂಡು ಮುಂದೆ ಜಲವ ಮಾಡುವನ್ನಕ್ಕವೆ ? ಅಲ್ಲಿ ನಿಂದಿರದಿರಾ ಮನವೆ ! ನಿಂದಡೆ ನೀನು ಕೆಡುವೆ ಬಂದಡೆ ನಾನು ಕೆಡುವೆ. ಎನ್ನ ತಂದೆ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗೆ ಪ್ರಭುದೇವರು ತೋರಿದರೀಯನುವ !
--------------
ಚನ್ನಬಸವಣ್ಣ
ಗುರುಲಿಂಗದಲ್ಲಿ ಪೂಜೆಯ ಮಾಡಿ, ಜಂಗಮಲಿಂಗದಲ್ಲಿ ಉದಾಸೀನವ ಮಾಡಿದಡೆ ಗುರುಲಿಂಗದ ಪೂಜಕರಿಗೆ ಶಿವದೂತರ ದಂಡನೆ ಎಂಬುದ ಮಾಡಿದೆಯಯ್ಯಾ. ಲೋಕದ ಕರ್ಮಿಗಳಿಗೆ ಯಮದೂತರ ದಂಡನೆ ಎಂಬುದ ಮಾಡಿದೆಯಯ್ಯಾ. ಭಕ್ತಿಯನರಿಯರು, ಯುಕ್ತಿಯನರಿಯರು ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಗುರುವೆ ಹೆಂಡತಿಯಾಗಿ, ಹೆಂಡತಿಯೆ ತಾಯಾಗಿ; ತಾಯೆ ಹೆಂಡತಿಯಾಗಿ; ಶಿಷ್ಯನೆ ಗಂಡನಾಗಿ_ ಏನೆಂದು ಹೇಳುವೆ, ಏನೆಂದುಪಮಿಸುವೆ, ಕೂಡಲಚೆನ್ನಸಂಗಯ್ಯಾ ಇಹಪರವಿಲ್ಲವಾಗಿ.
--------------
ಚನ್ನಬಸವಣ್ಣ
ಗುರುವಿನಲ್ಲಿ ಭಕ್ತಿ, ಲಿಂಗದಲ್ಲಿ ನಿಷೆ*, ಜಂಗಮದಲ್ಲಿ ಸುಯಿಧಾನ, ಅರ್ಪಿತದಲ್ಲಿ ಅವಧಾನ, ಪ್ರಸಾದದಲ್ಲಿ ಪರಿಣಾಮ- ಇಂತೆಂದುದು ಕೂಡಲಚೆನ್ನಸಂಗನ ವಚನ.
--------------
ಚನ್ನಬಸವಣ್ಣ
ಗುರುವ ಭವಿಯೆಂಬೆ, ಲಿಂಗವ ಭವಿಯೆಂಬೆ, ಜಂಗಮವ ಭವಿಯೆಂಬೆ, ಪ್ರಸಾದವ ಭವಿಯೆಂಬೆ. ಅದೇನು ಕಾರಣವೆಂದರೆ; ಇವಕ್ಕೆ ಉಪದೇಶವ ಕೊಟ್ಟವರಿಲ್ಲವಾಗಿ, ಇವಕ್ಕೆ ಸಾಮಿಪ್ಯ ಸಂಬಂಧವಿಲ್ಲಾಗಿ. ಅದೆಂತೆಂದಡೆ; `ನಾಸ್ತಿ ತತ್ವಂ ಗುರೋಃ ಪರಂ ಎಂಬುದಾಗಿ. ಅದಕ್ಕೆ ಮತ್ತೆಯೂ; ತ್ವಂ ವಿಶ್ವಕರ್ತಾ ತವ ನಾಸ್ತಿ ಕರ್ತಾ ತ್ವಂ ವಿಶ್ವಭರ್ತಾ ತವ ನಾಸ್ತಿ ಭರ್ತಾ ತ್ವಂ ವಿಶ್ವಹರ್ತಾ ತವ ನಾಸ್ತಿ ಹರ್ತಾ ತ್ವಂ ವಿಶ್ವನಾಥಸ್ತವ ನಾಸ್ತಿ ನಾಥಃ ಎಂಬುದಾಗಿ. ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಭವಿಯಾಗಿ ಭವಿಯ ಬೆರಸಬೇಕು.
--------------
ಚನ್ನಬಸವಣ್ಣ
ಗುರುಲಿಂಗಜಂಗಮದ ಏಕಾರ್ಥವನೇನೆಂದುಪಮಿಸಬಹುದು ? ಗುರುಪ್ರಾಣ, ಲಿಂಗದೇಹ, ಜಂಗಮ ಆಪ್ಯಾಯನ ಎಂದುದಾಗಿ. ಪ್ರಾಣ ಮುಟ್ಟಿ ಬಂದಡೇನು ? ಕಾಯ ಮುಟ್ಟಿ ಬಂದಡೇನು ? ಜಿಹ್ವೆ ಮುಟ್ಟಿ ಬಂದಡೇನು ? ಜಂಗಮಮುಖ ಆಪ್ಯಾಯನ ! ಕೂಡಲಚೆನ್ನಸಂಗಮದೇವಾ, ಜಂಗಮಪ್ರಸಾದ ಸರ್ವಸಿದ್ಧಿ.
--------------
ಚನ್ನಬಸವಣ್ಣ

ಇನ್ನಷ್ಟು ...