ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಕಲ-ನಿಷ್ಕಲ, ರೂಪು-ನಿರೂಪು ಮಾಯಾ-ನಿರ್ಮಾಯ, ಕಾರಣ-ಅಕಾರಣ, ದೇಹ-ನಿರ್ದೇಹದಲ್ಲಿ ಅವಧಾನಿಯಾಗಿ, ಸವಾಯ-ನಿರ್ವಾಯ. ಸಂಕಲ್ಪ-ವಿಕಲ್ಪ, ಸಂಯೋಗ-ವಿಯೋಗ, ಪುಣ್ಯ-ಪಾಪ, ಧರ್ಮ-ಅಧರ್ಮಂಗಳೆಂಬ ಕಾಲ-ವೇಳೆಯಿಂದ ನಿರತನಾಗಿ, ಇಂತೀ ದ್ವಯ ಸಂಪಾದನೆಗಳ ಸಂಪಾದಿಸದೆ ಕೂಡಲಚೆನ್ನಸಂಗಯ್ಯನ ಶರಣರ ಕಾರುಣ್ಯಮಂ ಪಡೆವುದು
--------------
ಚನ್ನಬಸವಣ್ಣ
ಸ್ಥಲವೆಂದೆನ್ನೆ, ನಿಃಸ್ಥಲವೆಂದೆನ್ನೆ, ತಾನು ಎನಗಾದ ಬಳಿಕ ನಿಃಪತಿಯೆನಗಾದ ಬಳಿಕ ಎತ್ತಲೆಂದರಿಯೆನು. ಇದು ಕಾರಣ ಕೂಡಲಚೆನ್ನಸಂಗಯ್ಯಾ, ಲಿಂಗೈಕ್ಯವೆಂದು ಎನ್ನೆನಾಗಿ.
--------------
ಚನ್ನಬಸವಣ್ಣ
ಸ್ತ್ರೀಲಿಂಗ ಪುಲ್ಲಿಂಗ ನಪುಂಸಕಲಿಂಗವೆಂದೆಂಬರು, ಆದಿ ಅನಾದಿ ಸಂದಣಿ ಸಯವಾಯಿತ್ತು. ಪ್ರಣಮಪ್ರಜ್ವಲಿತ ಕುಳವಳಿಯದ ಪ್ರಣಮಲಿಂಗ ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ.
--------------
ಚನ್ನಬಸವಣ್ಣ
ಸತಿಯ ಸಂಗವತಿಸುಖವೆಂದರಿದಡೇನು ? ಗಣಸಾಕ್ಷಿಯಾಗಿ ವಿವಾಹವಾಗದನ್ನಕ್ಕರ ? ಕಣ್ಣು ಕಾಂಬುದೆಂದಡೆ, ಕತ್ತಲೆಯಲ್ಲಿ ಕಾಂಬುದೆ ದೀಪವಿಲ್ಲದನ್ನಕ್ಕರ ? ಸೂರ್ಯನ ಪ್ರಕಾಶದಿಂದ ಕಂಡು ತಾನೆ, ಕಂಡೆನೆಂಬ ಜಗದ ನಾಣ್ಣುಡಿಯಂತಾಯಿತ್ತು. ಅಂಗವ ಬಿಟ್ಟು ಆತ್ಮನುಂಟೆ ? ಶಕ್ತಿಯ ಬಿಟ್ಟು ಶಿವನುಂಟೆ ? ಇದು ಕಾರಣ_ಸ್ಥೂಲ ಸೂಕ್ಷ್ಮಕಾರಣ ತನುತ್ರಯವಿರಲು, ಇಷ್ಟ ಪ್ರಾಣ ಭಾವವೆಂಬ ತ್ರಿವಿಧಲಿಂಗಸಂಬಂಧ ಬೇಡವೆಂದಡೆ ಅಸಂಖ್ಯಾತ ಪ್ರಮಥಗಣಂಗಳೊಪ್ಪುವರೆ ? ಕೂಡಲಚೆನ್ನಸಂಗಯ್ಯನಲ್ಲಿ ಇಷ್ಟಲಿಂಗಸಂಬಂಧವಿಲ್ಲದವರ ಮುಖವ ನೋಡಲಾಗದು ಪ್ರಭುವೆ.
--------------
ಚನ್ನಬಸವಣ್ಣ
ಸ್ವಯಂ ಪ್ರಸಾದವವ್ವಾ, ಸ್ವಯಂ ಲಿಂಗವವ್ವಾ; ಸ್ವಯಂ ದಾಸೋಹವವ್ವಾ, ಸ್ವಯಂ ಶರಣನವ್ವಾ ಸ್ವಯಂ ಕೂಡಲಚೆನ್ನಸಂಗನ ಪ್ರಸಾದವವ್ವಾ !
--------------
ಚನ್ನಬಸವಣ್ಣ
ಸಾಧಕದೆಸೆಯಲ್ಲಿ ಕುಲವನರಸಬಹುದಲ್ಲದೆ, ಸಿದ್ಧದೆಸೆಯಲ್ಲಿ ಅರಸಲಹುದೆ ? ಹಲವು ಜಾತಿಯ ಕಟ್ಟಿಗೆಯ ಸುಟ್ಟಲ್ಲಿ ಅಗ್ನಿಯೊಂದಲ್ಲದೆ ಅಲ್ಲಿ ಕಟ್ಟಿಗೆಗಳ ಕುರುಹು ಕಾಂಬುದೆ ? `ಶಿವಭಕ್ತಸಮಾವೇಶೇ ನ ಜಾತಿಪರಿಕಲ್ಪನಾ ಇಂಧನೇಷ್ವಗ್ನಿದಗ್ಧೇಷು ಕೋ ವಾ ಭೇದಃ ಪ್ರಕೀತ್ರ್ಯತೇ ' ಎಂದುದಾಗಿ, ಶಿವಜ್ಞಾನಸಿದ್ಧರಾದ ಶಿವಭಕ್ತರಲ್ಲಿ ಪೂರ್ವಜಾತಿಯನರಸುವ ಅರೆಮರುಳರನೇನೆಂಬೆ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಸಮಸುಖ (ಸಮ) ಸಂಧಾನವಿಲ್ಲದ ಸಂಗ ನೋಡಾ ! ತಾಗು ನಿರೋಧವಿಲ್ಲದ ಸಂಗ ನೋಡಾ ! ಆವಂಗೆ ಆವಂಗೆ ಅನುಭಾವವಿಲ್ಲದ ಸಂಗ ನೋಡಾ ! ಕೂಡಲಚೆನ್ನಸಂಗಮದೇವಾ ಲಿಂಗಲೀಯ ಸಂಗ ನೋಡಾ.
--------------
ಚನ್ನಬಸವಣ್ಣ
ಸಮಯದಲ್ಲಿ ಸಮ್ಮತನು ಆಚಾರದ ನೆಲೆಯನರಿದು, ಹೃದಯದ ಕತ್ತಲೆಯ ಉದಯದಲ್ಲಿಯೇ ಕಳೆದ. ಮುಟ್ಟುವುದ ಮುಟ್ಟದೆ ಕಳೆದ; ಮುಟ್ಟದುದ ಮುನ್ನವೆ ಕಳೆದ. ಅಯ್ಯಾ ಆಯ್ಯಾ ಎಂದಲ್ಲಿಯೆ ಕಲಿಯಾದ. ಕೇಸರಿಸಮ ಜೋಗ; ಐದರ ಮದಸೇನೆ ಮುರಿಯಿತ್ತು, ಎನ್ನೊಡೆಯ ಕೂಡಲಚೆನ್ನಸಂಗಯ್ಯ ಹಿಡಿವಡೆದ
--------------
ಚನ್ನಬಸವಣ್ಣ
ಸ್ಥೂಲತನು ಸೂಕ್ಷ್ಮತನು ಕಾರಣತನು: ಸ್ಥೂಲತನುವಿನಲ್ಲಿ ಇಷ್ಟಲಿಂಗಪ್ರತಿಷ್ಠೆ, ಸೂಕ್ಷ್ಮತನುವಿನಲ್ಲಿ ಪ್ರಾಣಲಿಂಗಪ್ರತಿಷ್ಠೆ, ಕಾರಣತನುವಿನಲ್ಲಿ ತೃಪ್ತಿಲಿಂಗಪ್ರತಿಷ್ಠೆ. ಇಂತೀ ಸ್ಥೂಲ ಸೂಕ್ಷ್ಮ ಕಾರಣವು ಮಹವು ! ಮಹದುದಯ ಹೃದಯದಲ್ಲಿ ಕೊನೆದೋರುತ್ತಿಪ್ಪ ಪರಂಜ್ಯೋತಿ, ನಿಮ್ಮ ಶರಣನ ಸರ್ವಾಂಗದಲುಂಟು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಸ್ವಯಮಜ್ಜನ, ಸ್ವಯಪೂಜೆ, ಸ್ವಯಾರೋಗಣೆ_ ನಾ ನೀನೆಂಬ ಸಂಶಯ ನಿಂದ ನಿಲವೆಂತಿದ್ದಿತೆಂದರೆ: [ಪ್ರ]ಪಂಚ ಪರತಂತ್ರವ ಮೀರಿ, ಭಾವವ ಬಿಟ್ಟು, ಘನರವಿಲೋಚನನಾಗಿ, ಅರ್ಪಿತವೆ (ಭುಂಜಿತ), ಅನರ್ಪಿತವೆ ಅಭುಂಜಿತ, ಸ್ಥೂಲ ಸೂಕ್ಷ್ಮ ಘನನಿತ್ಯವೆಂದರಿಯರು, ಜಡವೇಷಲಾಂಛನಧಾರಿಗಳು. ಕಾಯ ಜೀವ ಪ್ರಸಾದವಂ ಬಿಟ್ಟು ಸರ್ವಭಾವ ರುಚಿ ಪ್ರಸಾದಿ, ಕೂಡಲಚೆನ್ನಸಂಗಯ್ಯಾ ಆತ ಸರ್ವಾಂಗಪ್ರಸಾದಿ.
--------------
ಚನ್ನಬಸವಣ್ಣ
ಸೋಮವಾರ ಮಂಗಳವಾರ ಹುಣ್ಣಿಮೆ ಸಂಕ್ರಾಂತಿ ಶಿವರಾತ್ರಿ_ ಮೊದಲಾದ ತಿಥಿವಾರಂಗಳಲ್ಲಿ ಏಕಭುಕ್ತೋಪವಾಸಿಯಾಗಿ ಆ ಕ್ಷುದ್ರ ತಿಥಿಗಳಲ್ಲಿ, ಮಾಡಿದ ನೀಚೋಚ್ಛಿಷ್ಟವಂ ತಂದು ತನ್ನ ಕರಸ್ಥಲದ ಇಷ್ಟಲಿಂಗಕ್ಕೆ ಕೊಟ್ಟು ಕೊಂಡು ಭಕ್ತನೆನಿಸಿಕೊಂಡೆನೆಂಬ ಅನಾಚಾರಿಯ ಮುಖವ ನೋಡಲಾಗದು ನೋಡಲಾಗದು. ಅದೇನು ಕಾರಣವೆಂದಡೆ: ದಿನ ಶ್ರೇಷ್ಠವೊ ? ಲಿಂಗ ಶ್ರೇಷ್ಠವೊ ? ದಿನ ಶ್ರೇಷ್ಠವೆಂದು ಮಾಡುವ ದುರಾಚಾರಿಯ ಮುಖವ ನೋಡಲಾಗದು, ನೋಡಲಾಗದು, ಅದೆಂತೆಂದಡೆ: ಆವ ದಿನ ಶ್ರೇಷ್ಠವೆಂದು ದಿನವೆ ದೈವವೆಂದು ಮಾಡುವನಾಗಿ, ಅವನು ದಿನದ ಭಕ್ತನು. ಅವನಂತಲ್ಲ ಕೇಳಿರಣ್ಣ ಸದ್ಭಕ್ತನು_ಲಿಂಗವೆ ಘನವೆಂದು ಜಂಗಮವೆ ಶ್ರೇಷ್ಠವೆಂದು ಆ ಲಿಂಗಜಂಗಮವೆ ಶ್ರೇಷ್ಠವೆಂದು ಆ ಲಿಂಗಜಂಗಮವೆ ದೈವವೆಂದು ಮಾಡುವನಾಗಿ ಆತ ಲಿಂಗಭಕ್ತನು. ಈ ಲಿಂಗಭಕ್ತಂಗೆ ದಿನದ ಭಕ್ತನ ತಂದು ಸರಿಯೆಂದು ಹೋಲಿಸಿ ನುಡಿವಂಗೆ, ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ, ಅವ ಭಕ್ತನಲ್ಲ, ಅವಂಗೆ ಅಘೋರನರಕ. ಭವಿದಿನ_ತಿಥಿ_ವಾರಂಗಳಲ್ಲಿ ಕೂರ್ತುಮಾಡುವಾತ ಭಕ್ತನಲ್ಲ. ಅಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವಾತ ಜಂಗಮವಲ್ಲ. ಈ ಉಭಯರನು ಕೂಡಲಚೆನ್ನಸಂಗಯ್ಯ ಕುಂಭೀಪಾತಕ ನಾಯಕನರಕದಲ್ಲಿಕ್ಕುವನು
--------------
ಚನ್ನಬಸವಣ್ಣ
ಸತ್ಯವೆನ್ನದೆ ಸಹಜವೆನ್ನದೆ ಅಚಲವೆನ್ನದೆ ಅಖಂಡಿತವೆನ್ನದೆ, ಪರಿಪೂರ್ಣವೆನ್ನದೆ ಶೂನ್ಯವೆನ್ನದೆ ನಿಃಶೂನ್ಯವೆನ್ನದೆ ನಿಜವೆನ್ನದೆ_ ಏನೂ ಎನ್ನದೆ, ಕೂಡಲಚೆನ್ನಸಂಗಯ್ಯನೆಂಬ ನುಡಿಗೆಡೆಯಿಲ್ಲದುದ ನಾನೇನೆಂಬೆ ?
--------------
ಚನ್ನಬಸವಣ್ಣ
ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನವೆಂದು ಶಿವಲಿಂಗದ ಮೇಲೆ ಪಂಚವಕ್ತ್ರವ ಸ್ಥಾಪಿಸುವ ಅನಾಚಾರಿಯ ಮಾತ ಕೇಳಲಾಗದು. ಇಂತಪ್ಪ ಲಿಂಗದ್ರೋಹಿಯ ತೋರದಿರಯ್ಯಾ, ಸಕಲ ನಿಃಕಲದಂತಹನೆ ಲಿಂಗವು ? ಕೂಡಲಚೆನ್ನಸಂಗಯ್ಯನಲ್ಲಿ ಸರ್ವಾಂಗಲಿಂಗಿ ಬಸವಣ್ಣ ಬಲ್ಲ.
--------------
ಚನ್ನಬಸವಣ್ಣ
ಸಗುಣಾನಂದಜೀವಚರ್ಯವಿಡಿದೆತ್ತಿ ಜೀವಾತ್ಮನ ಹೇಯವೆಂದು ಆತ್ಮನ ನಿಜವನರಿದು, ನಿರ್ಗುಣಾನಂದಲೀಲೆಯ ವಿರತಿಯೊಡನೆ ಪರಮಾತ್ಮ ತಾನೆಂದರಿದ ಶರಣಂಗೆ, ಎಂತಿರ್ದುದಂತೆ ಪೂಜೆ ನೋಡಾ. ಆ ಶರಣ ಭೋಗಿಸಿತೆಲ್ಲವು ಲಿಂಗಾರ್ಪಿತ, ರುಚಿಸಿತೆಲ್ಲವು ಪ್ರಸಾದ. ಆ ಶರಣನರಿದುದೆಲ್ಲವು ಪರಬ್ರಹ್ಮ, ನುಡಿದುದೆಲ್ಲವು ಶಿವತತ್ವ ಆ ಶರಣ ತಾನೆ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಸತ್ತ ಹೆಣನ ಹೊತ್ತವರೆಲ್ಲಾ ಅಚ್ಚುಗಗೊಂಡರಲ್ಲಾ. ಹೊತ್ತವರೆಲ್ಲಾ ಸತ್ತುದ ಕಂಡು ಮೂರ್ಛೆವೋದರಲ್ಲಾ. ಸುತ್ತಿಬಂದಿದ್ದವರೆಲ್ಲಾ ಹೋಗಿ ಅದ ಮುಟ್ಟಲಮ್ಮರು ನೋಡಾ ! ಮುಟ್ಟದ ಮುನ್ನ ಮೂವರ ಕೆಡಿಸಿತ್ತು. ಸತ್ತ ಪರಿಯ ನೋಡಾ ! ಅದು ಕಾಡಿನಲ್ಲಿ ಉರಿಯದು, ಕಿಚ್ಚಿನಲ್ಲಿ ಬೇಯದು. ಸತ್ತ ಪರಿಯ ನೋಡಾ ! ಕೂಡಲಚೆನ್ನಸಂಗನೆಂಬ ಚಿಂತೆ ಸತ್ತಿತಲ್ಲಾ.
--------------
ಚನ್ನಬಸವಣ್ಣ
ಸ್ಥಲದಿಂದ ನಡೆನುಡಿಯಾಯಿತ್ತು, ನಿಃಸ್ಥಲದಿಂದ ನುಡಿನಡೆಗೆಟ್ಟಿತ್ತು. ನೋಡಲೊಡನೆ ಸ್ಥಲವಾಗಿ ತೋರಿತ್ತು, (ಆರಯ್ಯಲೊಡನೆ ನಿಃಸ್ಥಲವಾಗಿ ತೋರಿತ್ತು.) ಸ್ಥಲವೂ ಅಲ್ಲ, ನಿಃಸ್ಥಲವೂ ಅಲ್ಲ, ನೋಟವೆ ಕೂಟ, ಕೂಡಲಚೆನ್ನಸಂಗಾ
--------------
ಚನ್ನಬಸವಣ್ಣ
ಸತ್ಕ್ರಿಯಾಸಮ್ಯಗ್‍ಜ್ಞಾನಸಂಪನ್ನರಪ್ಪ ಶಿವಯೋಗಿಗಳೆಡೆಯಾಡಿದ ನೆಲವೆ ಸುಕ್ಷೇತ್ರವಯ್ಯಾ ಅವರಡಿಯಿಟ್ಟ ಜಲವೆ ಶುಭತೀರ್ಥವಯ್ಯಾ. ಸಕಲತೀರ್ಥಕ್ಷೇತ್ರವೆಲ್ಲ ಶಿವಯೋಗಿಯ ಶ್ರೀಪಾದದಲ್ಲಿ ಅಡಗಿಪ್ಪವಯ್ಯಾ. ಜ್ಞಾನಯೋಗಪರಾಣಾಂ ತು ಪಾದಪ್ರಕ್ಷಾಲಿತಂ ಜಲಂ ಭಾವಶುದ್ಧ್ಯರ್ಥಮಜ್ಞಾನಾಂ ತತ್ತೀರ್ಥಂ ಮುನಿಪುಂಗವ ಎಂದುದಾಗಿ ಶಿವಯೋಗಿಯ ಪಾದೋದಕವ ಸೇವಿಸಿ ನಮ್ಮ ಶರಣರೆಲ್ಲ ಪರಮುಕ್ತರಾದರಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಸ್ಥಲಗೆಟ್ಟ ನಿಭ್ರಾಂತಂಗೆ, ಸಾಕಾರಗುಣವಡಗಿದ ಸನ್ಮಾರ್ಗಂಗೆ, ನಯನ [ತಾ]ಗಿದ ಸುಖವ ಮನಮುಟ್ಟಲೀಯದ ಪ್ರಸಾದಿ[ಗೆ], ಕರಣೇಂದ್ರಿಯಂಗಳಿದವು, ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿಗೆ.
--------------
ಚನ್ನಬಸವಣ್ಣ
ಸಮಯವಿರೋಧವಾದೀತೆಂದು ಪಾದಾರ್ಚನೆಯ ಮಾಡುವರಯ್ಯಾ. ಲಿಂಗಜಂಗಮಕ್ಕೆ ಪಾದವಾವುದು ? ಅರ್ಚನೆ ಯಾವುದು ? ಎಂಬ ತುದಿ ಮೊದಲನರಿಯರು. ಉದಾಸೀನದಿಂದ ಪಾದಾರ್ಚನೆಯ ಮಾಡಿ, ಪಾದೋದಕ ಧರಿಸಿದಡೆ ಅದೇ ಪ್ರಳಯಕಾಲಜಲ. ವರ್ಮವನರಿದು ಕೊಂಡಡೆ ತನ್ನ ಭವಕ್ಕೆ ಪ್ರಳಯಕಾಲಜಲ ! ಈ ಉಭಯವ ಭೇದಿಸಿ ಸಂಸಾರಮಲಿನವ ತೊಳೆವಡೆ ಕೂಡಲಚೆನ್ನಸಂಗಾ ಈ ಅನುವ ನಿಮ್ಮ ಶರಣ ಬಲ್ಲ.
--------------
ಚನ್ನಬಸವಣ್ಣ
ಸರ್ವತ್ರಯ ಸರ್ವಗುಣತ್ರಯ ಪ್ರಸಾದವವ್ವಾ, ಸರ್ವಭಾವ ಪ್ರಸಾದವವ್ವಾ, ಸರ್ವಪರಿಪೂರ್ಣ ಪ್ರಸಾದವವ್ವಾ, ಸ್ವಯವವ್ವಾ, ಶರಣನವ್ವಾ, ಸ್ವಯವವ್ವಾ ಕೂಡಲಚೆನ್ನಸಂಗ ಸರ್ವಪ್ರಸಾದವವ್ವಾ !
--------------
ಚನ್ನಬಸವಣ್ಣ
ಸರ್ವೇಂದ್ರಿಯ ಸಮ್ಮತವಾಗಿ ಸರ್ವಕರಣಂಗಳ ಸಮಾಧಾನವ ಮಾಡಿ, ಸಮಸ್ತ ಸುಖಭೋಗಾದಿಗಳ ಬಯಸದೆ, ತನ್ನ ಮರೆದು ಶಿವತತ್ವವನರಿದು, ಅಹಂಕಾರ ಮಮಕಾರವಿಲ್ಲದೆ, ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿಪುಟಿಯ ಮೀರಿ, ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಗಳನಳಿದು, ಸ್ತುತಿ_ನಿಂದಾದಿ, ಕಾಂಚನ ಲೋಷ*ಂಗಳ ಸಮಾನಂಗಂಡು, ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯಾದಿ ಪದಂಗಳ ಬಯಸದೆ, ವೇದ ವೇದಾಂತ ತರ್ಕ ವ್ಯಾಕರಣ ದರ್ಶನ ಸಂಪಾದನೆಗಳ ತೊಲಗಿಸಿ, ಖ್ಯಾತಿ ಲಾಭದ ಪೂಜೆಗಳ ಬಯಸದೆ ತತ್ವನಿರ್ಣಯವನರಿಯದವರೊಳು ತಾನೆಂಬುದನೆಲ್ಲಿಯೂ ತೋರದೆ; ಹೊನ್ನು ತನ್ನ ಲೇಸ ತಾನರಿಯದಂತೆ, ಬೆಲ್ಲ ತನ್ನ ಸಿಹಿಯ ತಾನರಿಯದಂತೆ, ವಾರಿಶಿಲೆ ಉದಕದೊಳಡಗಿದಂತೆ, ಪುಷ್ಪದೊಳಗೆ ಪರಿಮಳವಡಗಿದಂತೆ ಅಗ್ನಿಯೊಳಗೆ ಕರ್ಪೂರವಡಗಿದಂತೆ, ಮಹಾಲಿಂಗದಲ್ಲಿ ಲೀಯವಾದುದೆ ಲಿಂಗೈಕ್ಯ ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಸಂಗಸಹಿತ ಬಸವ ಲೇಸು, ಬಸವಸಹಿತ ಸಂಗ ಲೇಸು, `ಸಂಗಾ ಬಸವಾ' ಎನ್ನುತ್ತಿದ್ದಿತ್ತು ಎನ್ನ ಮನವು. ದೃಷ್ಟಿ ಮುಟ್ಟಿ ಶರಣನಾಗಿ, ಲಿಂಗಜಂಗಮಕ್ಕೆ ಯೋಗ್ಯನಾಗಿ ಕೂಡಲಚೆನ್ನಸಂಗಯ್ಯನಲ್ಲಿ ಪ್ರಸಾದಸಂತೋಷಿ ಬಸವಣ್ಣನು.
--------------
ಚನ್ನಬಸವಣ್ಣ
ಸುಖವಾವುದು? ಸುಖಿಯಾವುದು? ಸುಖದನುಭಾವವಾವುದು? ಸುಖಲಿಂಗ, ಸುಖಿ ಶರಣ, ಸುಖದನುಭಾವ ಸುಸಂಗ, ಕೊಡಲಚೆನ್ನಸಂಗಾ ಪರವಿಲ್ಲಾಗಿ.
--------------
ಚನ್ನಬಸವಣ್ಣ
ಸಾಯುವರ ಸತ್ತವರು ಹೊತ್ತರು, ತಲೆಯಿಲ್ಲದವರತ್ತರು, ಕೈಯಿಲ್ಲದವರು ಹಿಡಿದರು, ಕಾಲಿಲ್ಲದವರು ಕೊಂಡೊಯ್ದರು, ಕಣ್ಣಿಲ್ಲದವರು ಕಂಡರು, ಕಿವಿಯಿಲ್ಲದವರು ಕೇಳಿದರು. ಇದು ಕಾರಣ ಕೂಡಲಚೆನ್ನಸಂಗಾ ನಿಮ್ಮ ಶರಣರು ಸರ್ವಾಂಗಲಿಂಗಿಗಳು !
--------------
ಚನ್ನಬಸವಣ್ಣ
ಸತ್ಯಸದಾಚಾರವುಳ್ಳ ಶಿವಶರಣರವರಹುದೆಂದುದೆ ಶುಭಮುಹೂರ್ತ [ಶುಭಘಳಿಗೆ] ಸಕಲ ಬಲ, ಸಕಲ ಜಯ, ಅವರಲ್ಲವೆಂಬುದೇ ವಿಘ್ನ ವಿಷಗಳಿಗೆ ನಿರ್ಬಲ ಅಪಜಯ. ಅದೆಂತೆಂದಡೆ: ಅವರು ಮಾಡುವ ಕಾರ್ಯವೆಲ್ಲಾ ಕೂಡಲಚೆನ್ನಸಂಗಮಾಧೀನವಾಗಿ. ನೀನೆ ಮೃತ್ಯುಂಜಯನು, ವಿಶ್ವಾಧಿಪತಿಯಾದ ಕಾರಣ ಜಯವಪ್ಪುದಯ್ಯಾ.
--------------
ಚನ್ನಬಸವಣ್ಣ

ಇನ್ನಷ್ಟು ...